Tag: ಶಾಸಕ ಭೈತರಿ ಸುರೇಶ್

  • ಸಿದ್ದರಾಮಯ್ಯಗೆ ಕಾರ್ ಗಿಫ್ಟ್ ಕೊಟ್ಟ ‘ಶಿಷ್ಯ’ ಭೈರತಿ ಸುರೇಶ್ – ಸಿದ್ದು ಉತ್ತರಾಧಿಕಾರಿ ಆಗ್ತಾರಾ?

    ಸಿದ್ದರಾಮಯ್ಯಗೆ ಕಾರ್ ಗಿಫ್ಟ್ ಕೊಟ್ಟ ‘ಶಿಷ್ಯ’ ಭೈರತಿ ಸುರೇಶ್ – ಸಿದ್ದು ಉತ್ತರಾಧಿಕಾರಿ ಆಗ್ತಾರಾ?

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೆಜೆ ಜಾರ್ಜ್ ಅವರಿಂದ ಭರ್ಜರಿ ಗಿಫ್ಟ್ ಲಭಿಸಿತ್ತು. ಆದಾದ ಬಳಿಕ ಸದ್ಯ ಸಿದ್ದರಾಮಯ್ಯ ಅವರ ರಾಜಕೀಯ ಶಿಷ್ಯರೆಂದೇ ಗುರುತಿಸಿಕೊಂಡಿರುವ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರು ಕೋಟಿ ರೂ. ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದ್ದಾರೆ.

    ರಾಜಕೀಯದಲ್ಲಿ ತಮ್ಮ ಮಗನನ್ನು ಬೆಳೆಸುವ ಬದಲು ತಮ್ಮ ಶಿಷ್ಯಂದಿರಗೆ ಉತ್ತಮ ರಾಜಕೀಯ ಜೀವನ ರೂಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಅವರ ಶಿಷ್ಯರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಭೈರತಿ ಸುರೇಶ್ ಅವರು ಹೊಸ ಕಾರು ನೀಡಿದ್ದಾರೆ.

    ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಭೈರತಿ ಸುರೇಶ್ ಅವರು ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸ್ವತಂತ್ರ್ಯವಾಗಿ ಸ್ಪಧಿಸಿದ್ರು. ಬಳಿಕ ಹೆಬ್ಬಾಳ ಕ್ಷೇತ್ರದಲ್ಲಿ ಗೆದ್ದು ಶಾಸಕ ಸ್ಥಾನ ಪಡೆದಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಮನೆಗೆ ಬಂತು ಕೋಟಿ ಮೌಲ್ಯದ ಬೆಂಜ್ ಕಾರ್! –  ವಿಶೇಷತೆ ಏನು?

    ಮಾಜಿ ಸಿಎಂ ಸಿದ್ದರಾಮಯ್ಯ ನಂತರ ಕಾಂಗ್ರೆಸ್ ನಲ್ಲಿ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಈ ಹಿಂದೆಯೇ ಸಂದೇಶ ನೀಡಿದ್ದರು. ಸಾಮಾನ್ಯವಾಗಿ ತಂದೆ ಸಕ್ರಿಯ ರಾಜಕಾರಣದಲ್ಲಿದ್ದರೆ ಅವರ ಮಗ ಉತ್ತರಾಧಿಕಾರಿ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಸಿಎಂ ತಮ್ಮ ಮಗನ ಬಗ್ಗೆ ಹೆಚ್ಚು ಒಲವು ತೋರಿಸದೇ ತಮ್ಮದೇ ಸಮುದಾಯ ಶಾಸಕರದ ಭೈರತಿ ಸುರೇಶ್ ಅವರನ್ನು ಸದ್ದಿಲ್ಲದೇ ಪ್ರಚಾರಕ್ಕೆ ತರಲು ಮುಂದಾಗಿದ್ದರು. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ತಮ್ಮ ಮಗನಿಗೆ ಮಂತ್ರಿಗಿರಿ ಕೊಡಿಸುವಂತೆ ಒತ್ತಡ ಹೇರದೆ ಭೈರತಿ ಸುರೇಶ್ ಅವರ ಪರವಾಗಿ ಸಿದ್ದರಾಮಯ್ಯ ಹೆಚ್ಚಿನ ಒಲವು ತೋರಿದ್ದರು.

    ಪಕ್ಷದ ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದ ಭೈರತಿ ಸುರೇಶ್ ರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಆಸಕ್ತಿ ಹೊಂದಿದ್ದರು. ಆದ್ದರಿಂದ ಅವರನ್ನೇ ಸಿದ್ದರಾಮಯ್ಯ ನಂತರದ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಇನ್ನುಳಿದ ಕುರುಬ ಸಮುದಾಯದ ನಾಯಕ ಅಸಮಾಧಾನಕ್ಕೂ ಕಾರಣವಾಗಿತ್ತು. ಪ್ರಮುಖವಾಗಿ ಹೆಚ್.ಎಂ.ರೇವಣ್ಣ, ಶಾಸಕರಾದ ಶಿವಳ್ಳಿ, ಎಂ.ಟಿ.ಬಿ.ನಾಗರಾಜ್ ಪಕ್ಷದಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಭಯ ಪಡುವಂತಾಗಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯನವರೇ ನಮ್ಮ ಪಾಲಿಗೆ ವಿಲನ್ ಆಗಿದ್ದು, ಮಂತ್ರಿ ಸ್ಥಾನಕ್ಕೆ ಸಿಎಂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಕುರುಬ ಸಮಾಜದ ಶಾಸಕರು ತಮ್ಮ ಆಪ್ತರ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!

    ಯಾಕೆ ನೀವು ಭೈರತಿ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯನವರನ್ನು ಕೇಳಿದ್ದಕ್ಕೆ ತಮ್ಮ ಆಪ್ತರ ಬಳಿ, ಭೈರತಿ ಸುರೇಶ್ ತಮ್ಮ ಸಾಮಥ್ರ್ಯದಿಂದಲೇ ಪರಿಷತ್ ಸದಸ್ಯರಾಗಿದ್ದಾರೆ. ಹೆಬ್ಬಾಳ ಉಪ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ನಿಷ್ಟೆಯಿಂದಲೇ ಪಕ್ಷಕ್ಕಾಗಿ ದುಡಿದಿದ್ದಾರೆ. ಯಾವುದೇ ಅಪಸ್ವರ ಎತ್ತದೇ ಶಿಸ್ತಿನಿಂದ ಪಕ್ಷ ಕಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಕ್ಕಾಗ ಅವರಿಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಸಮುದಾಯದ ಉಳಿದ ಶಾಸಕರುಗಳು ಅವರವರ ಗೆಲುವಿಗಷ್ಟೆ ಸೀಮಿತರಾದರು. ಕಷ್ಟದಲ್ಲಿದ್ದಾಗ ಯಾರೂ ನೆರವಿಗೂ ಬರಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನುವ ವಿಚಾರ ತಿಳಿದುಬಂದಿತ್ತು.

    ಇದೇ ಕಾರಣಕ್ಕೆ ಭೈರತಿ ಸುರೇಶ್ ಗೆ ಮಂತ್ರಿ ಸ್ಥಾನ ನೀಡಬೇಕು ಅಂತಾ ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಕೂಡಾ ಮಾಡಿದ್ದರು ಎನ್ನಲಾಗಿತ್ತು. ತಮ್ಮ ಪುತ್ರನಿಗಿಂತ ಹೆಚ್ಚು ಪ್ರೀತಿ ತೋರಿಸಿ ಭವಿಷ್ಯದ ಸಮುದಾಯದ ನಾಯಕನನ್ನಾಗಿಸುವ ಯತ್ನದಲ್ಲಿದ್ದಾರೆ ಎನ್ನುವ ಮಾತುಗಳು ಸಿದ್ದರಾಮಯ್ಯ ಆಪ್ತ ವಲಯದಲ್ಲೇ ಈಗ ಕೇಳಿ ಬಂದಿತ್ತು. ಸದ್ಯ ಬೈರತಿ ಸುರೇಶ್ ಅವರು ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣರಾದ ಸಿದ್ದರಾಮಯ್ಯ ಅವರಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv