Tag: ಶಾಸಕ ಭೀಮಾನಾಯ್ಕ್

  • ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

    ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

    – ಸಿದ್ದು ಪರ 50ಕ್ಕೂ ಹೆಚ್ಚು ಶಾಸಕರ ಬೆಂಬಲ

    ಬಳ್ಳಾರಿ: ವಿಪಕ್ಷ ಸ್ಥಾನ ಆಯ್ಕೆ ಸಂಬಂಧ ಭಾನುವಾರ ಕೆಪಿಸಿಸಿಯಲ್ಲಿ ಎಐಸಿಸಿ ವೀಕ್ಷಕರ ಸಭೆ ನಡೆಯಲಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಬೇಕು ಎಂದು  ಒತ್ತಾಯ ಮಾಡಿದ್ದಾರೆ.

    ವಿಧಾನಸಭೆ, ವಿಧಾನ ಪರಿಷತ್, ಸಚೇತಕ ಸ್ಥಾನ ಆಯ್ಕೆ ಬಗ್ಗೆ ಭಾನುವಾರ ಮಧುಸೂದನ್ ಮಿಸ್ತ್ರಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ 3-4 ಹೆಸರು ಸಿದ್ಧಪಡಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರ ಪರ ಒತ್ತಾಯ ಮಾಡಿದ್ದು, 50-60 ಜನ ಶಾಸಕರು ಸಿದ್ದರಾಮಯ್ಯ ಬೆಂಬಲಕ್ಕೆ ಇದ್ದಾರೆ ಎಂದು ಹೇಳಿದ್ದಾರೆ.

    ಇತ್ತ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಜೋರಾಗಿದ್ದು, ಸಿದ್ದರಾಮಯ್ಯ ಬೆಂಬಲಿತ ಸುಮಾರು 20ಕ್ಕೂ ಹೆಚ್ಚು ಶಾಸಕರು ನಾಳೆ ಮಿಸ್ತ್ರಿ ಅವರನ್ನು ಭೇಟಿಯಾಗಿ, ಬ್ಯಾಟಿಂಗ್ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೇಲ್ಮನೆ ಸದಸ್ಯ ಸಿ.ಎಂ ಇಬ್ರಾಹಿಂ ಕೂಡ ಸಿದ್ದರಾಮಯ್ಯರೇ ಪ್ರತಿಪಕ್ಷ ನಾಯಕರಾಗಬೇಕು ಎಂದಿದ್ದು, ಸೋನಿಯಾ ಜೊತೆಗೆ ಈಗಲೂ ಸಿದ್ದರಾಮಯ್ಯ ಚೆನ್ನಾಗೇ ಇದ್ದಾರೆ ಎಂದಿದ್ದಾರೆ.

    ಇದೇ ವೇಳೆ ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ಮಾತನಾಡಿರುವ ಶಾಸಕ ಭೀಮಾನಾಯ್ಕ್ ಅವರು, ನಂಜುಡಪ್ಪ ವರದಿ ಪ್ರಕಾರ ಹಗರಿಬೊಮ್ಮನಹಳ್ಳಿ ತಾಲೂಕು ಹಿಂದುಳಿದ ತಾಲೂಕು ಆಗಿದೆ. ಹೊಸ ಜಿಲ್ಲೆ ಮಾಡುವುದಾದರೆ ಹಗರಿಬೊಮ್ಮನಹಳ್ಳಿ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಬೇಕು. ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಜಿಲ್ಲೆಯ ಮಧ್ಯಭಾಗದಲ್ಲಿದೆ. ಇನ್ನೊಂದು ಜಿಲ್ಲೆ ಸ್ಥಾಪನೆ ವಿಚಾರ ಸರ್ಕಾರದ ಮುಂದೆ ಇಲ್ಲವಾದರೆ ಅಖಂಡ ಬಳ್ಳಾರಿ ಜಿಲ್ಲೆಗೆ ನನ್ನ ಬೆಂಬಲವಿದೆ. ಹೊಸ ಜಿಲ್ಲೆ ಮಾಡುವುದಾದರೆ ಸಮಿತಿ ರಚನೆ ಮಾಡಿ. ಅದರ ಅನ್ವಯ ಜಿಲ್ಲೆಯ ಸ್ಥಾಪನೆಯಾಗಲಿ ಎಂದು ಸ್ಪಷ್ಟಪಡಿಸಿದರು.

  • ಕಾರ್, ಟಂಟಂ ಮುಖಾಮಖಿ ಡಿಕ್ಕಿ-ಶಾಸಕ ಭೀಮಾನಾಯ್ಕ್ ಪುತ್ರನಿಗೆ ಗಂಭೀರ ಗಾಯ

    ಕಾರ್, ಟಂಟಂ ಮುಖಾಮಖಿ ಡಿಕ್ಕಿ-ಶಾಸಕ ಭೀಮಾನಾಯ್ಕ್ ಪುತ್ರನಿಗೆ ಗಂಭೀರ ಗಾಯ

    ಬಳ್ಳಾರಿ: ಕಾರ್ ಮತ್ತು ಟಂಟಂ ವಾಹನದ ಮಧ್ಯೆ ಭೀಕರ ಅಪಘಾತವಾಗಿ, ಕಾರಿನಲ್ಲಿದ್ದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆಯಲ್ಲಿ ಅಶೋಕ್ ಸೇರಿದಂತೆ ಇಬ್ಬರು ಚಾಲಕರಿಗೂ ಗಂಭೀರ ಗಾಯಗೊಂಡಿದ್ದಾರೆ. ಶಾಸಕರ ಪುತ್ರ ಅಶೋಕ್ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಹೊಸಪೇಟೆಯ ಮರಿಯಮ್ಮನಹಳ್ಳಿಯ ಬಳಿಯ ಸ್ಮಯೋರ್ ಫ್ಯಾಕ್ಟರಿ ಬಳಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಏರ್‍ ಬಲೂನ್ ಓಪನ್ ಆದ ಕಾರಣ ಶಾಸಕರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಒಂದೇ ಕಡೆ ಎಲ್ಲ ವಾಹನಗಳು ಸಂಚರಿಸುತ್ತಿದ್ದವು. ಈ ವೇಳೆ ಕಾರು ಮತ್ತು ಟಂಟಂ ವಾಹನ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಸದ್ಯ ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಶಾಸಕರ ಪುತ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 1 ಲೀಟರ್ ಹಾಲು ಹಾಕಿಲ್ಲ, ಭೀಮಾನಾಯ್ಕ್ ಅಧ್ಯಕ್ಷರಾಗ್ತಾರೆ ಅಂತಾ ನಾ ಹೇಳಿದ್ನಾ – ರೇವಣ್ಣ ಗುಡುಗು

    1 ಲೀಟರ್ ಹಾಲು ಹಾಕಿಲ್ಲ, ಭೀಮಾನಾಯ್ಕ್ ಅಧ್ಯಕ್ಷರಾಗ್ತಾರೆ ಅಂತಾ ನಾ ಹೇಳಿದ್ನಾ – ರೇವಣ್ಣ ಗುಡುಗು

    ಬೆಂಗಳೂರು: ಕೆಎಂಎಫ್‍ಗೂ ಮೈತ್ರಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕುಮಾರಸ್ವಾಮಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ರೇವಣ್ಣ ಗುಡುಗಿದ್ದಾರೆ.

    ಕೆಎಂಎಫ್ ಚುನಾವಣೆಯನ್ನು ದಿಢೀರ್ ಮುಂದೂಡಿಕೆ ಮಾಡಿದ ಹಿನ್ನೆಲೆಯಲ್ಲಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಭೀಮಾನಾಯ್ಕ್ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೊಟ್ಟಿದ್ದಾರೆ ಎನ್ನುವ ಪ್ರಶ್ನೆಗೆ, ಆತ ಸೊಸೈಟಿಗೆ 1 ಲೀಟರ್ ಹಾಲನ್ನೇ ಹಾಕಿಲ್ಲ. ಆತನಿಗೆ ಯಾರು ಅಧ್ಯಕ್ಷರಾಗಿ ಮಾಡುತ್ತಾರೆ ಎಂದು ಮಾತುಕೊಟ್ಟಿದ್ದಾರೆ? ಭೀಮಾನಾಯ್ಕ್ ಯಾವ ಪಕ್ಷದವರು, ಆದ್ರೆ ಅವರು ಯಡಿಯೂರಪ್ಪ ಅವರ ಮನೆ ಮುಂದೇ ಹೋಗಿ ನಿಂತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಆರ್ಥೈಸಿಕೊಳ್ಳಬೇಕಿದೆ ಎಂದರು.

    ಕಳೆದ 3 ತಿಂಗಳಿಂದ ಚುನಾವಣೆ ಪ್ರಕ್ರಿಯೆ ನಡೆಯುತಿತ್ತು, ಜು.15 ರಿಂದ 30ರ ಒಳಗೆ ಎಲ್ಲಾ ಒಕ್ಕೂಟದ ಚುನಾವಣೆ ಆಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಇಂದು ನಡೆಯಬೇಕಾಗಿದ್ದ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಯಾವ ಕಾರಣಕ್ಕೆ ಮುಂದೂಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಯಾವ ಸದಸ್ಯರನ್ನು ಹೈಜಾಕ್ ಮಾಡಿಲ್ಲ. ಎಲ್ಲ ಸದಸ್ಯರು ಇಲ್ಲೇ ಇದ್ದು, ಅವರನ್ನೇ ಕೇಳಿ ಎಂದರು.

    ಮೈತ್ರಿ ಸರ್ಕಾರ ಹಂತದಲ್ಲಿ ಈ ಸ್ಥಾನ ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿತಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರ ಕ್ಷೇತ್ರದಲ್ಲಿ ಯಾವ ಪಕ್ಷವೂ ಬರುವುದಿಲ್ಲ. ಇದರಲ್ಲಿ ಕುಮಾರಸ್ವಾಮಿ ಅವರಿಗೂ ಸಂಬಂಧವಿಲ್ಲ. ನಾನು ಯಾವತ್ತಾದ್ರೂ ಮಾತು ಕೊಟ್ಟಿದ್ದೀನಾ ಎಂದರು. ಅಲ್ಲದೇ ರಾಜ್ಯದಲ್ಲಿ ಒಟ್ಟು 14 ಒಕ್ಕೂಟಗಳು ಇದ್ದು, ಮಂಡ್ಯ ಒಕ್ಕೂಟ ಸೂಪರ್ ಸೀಡ್ ಆಗಿದೆ. 4 ಬಾರಿ ಬೋರ್ಡ್ ಮೀಟಿಂಗ್ ಆಗಿದ್ದು ಎಲ್ಲವೂ ಸರಿ ಆಗಿಲ್ಲ. ಇನ್ನೊಂದು ತುಮಕೂರು ಒಕ್ಕೂಟ ಎರಡು ನಾಮಿನೇಷನ್ ಅನರ್ಹ ಮಾಡಲಾಗಿದೆ. ಈಗಲೂ ನಮ್ಮ ಹತ್ತಿರ 8 ನಿರ್ದೇಶಕರ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

    ಈ ನಡುವೆ ಆನಂದ್ ಕುಮಾರ್ ಎಂಬ ಡೈರಕ್ಟರ್ ಅವರನ್ನು ಅಮಾನತು ಮಾಡಿದ್ದಾರೆ. ಸಿಎಂ ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಾರೆ. ಆದರೆ ಈಗ ಮಾಡಿರುವುದು ಏನು? ಇವತ್ತು ಎಲೆಕ್ಷನ್ ನಡೆದಿದ್ದರೆ ನಾವು ಗೆಲುವು ಸಿಗುತಿತ್ತು ಎನ್ನುವ ಒಂದೇ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಾನು ಅಧ್ಯಕ್ಷ ಎಂದು ಇಲ್ಲಿ ಬಂದು ಕುಳಿತಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ಮೀಟಿಂಗ್ ಇತ್ತು ಆದ್ದರಿಂದ ಬಂದೆ ಅಷ್ಟೇ. ಆದರೆ ಇಲ್ಲಿ ಚುನಾವಣೆಯನ್ನೇ ಮುಂದೂಡಲಾಗಿದೆ ಎಂದರು.

    ಇದೇ ವೇಳೆ ಮಾತನಾಡಿದ ಧಾರವಾಡ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಹೀರೇಗೌಡ ಅವರು, ರೇವಣ್ಣ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಹೈಜಾಕ್ ಆರೋಪವನ್ನು ನಿರಾಕರಿಸಿದರು.

  • ಬಳ್ಳಾರಿ ಕೈ ನಾಯಕರ ಕಿತ್ತಾಟಕ್ಕೆ ಬ್ರೇಕ್ – ಕೆಪಿಸಿಸಿ ಮೊದಲ ಹಂತದ ಸಂಧಾನ ಸಕ್ಸಸ್

    ಬಳ್ಳಾರಿ ಕೈ ನಾಯಕರ ಕಿತ್ತಾಟಕ್ಕೆ ಬ್ರೇಕ್ – ಕೆಪಿಸಿಸಿ ಮೊದಲ ಹಂತದ ಸಂಧಾನ ಸಕ್ಸಸ್

    ಬಳ್ಳಾರಿ: ಬಳ್ಳಾರಿ ಕಾಂಗ್ರೆಸ್ ನಾಯಕರ ನಡುವೆ ಆರಂಭವಾಗಿದ್ದ ಕಿತ್ತಾಟಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಬ್ರೇಕ್ ಹಾಕಲು ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು, ಶಾಸಕ ಆನಂದ್ ಸಿಂಗ್ ಹಾಗೂ ಭೀಮಾನಾಯ್ಕ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಯಶಸ್ವಿಯಾಗಿದ್ದಾರೆ.

    ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಜಗಳ ನಡೆಯಲು ಪ್ರಮುಖ ಕಾರಣವೇ ಭೀಮಾನಾಯ್ಕ್ ನಡುವಿನ ಅಸಮಾಧಾನ. ಸದ್ಯ ಇಬ್ಬರ ನಡುವಿನ ಗುದ್ದಾಟಕ್ಕೆ ಬ್ರೇಕ್ ಹಾಕಿರುವ ಕೆಪಿಸಿಸಿ ಮೊದಲ ಹಂತವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಆನಂದ್ ಸಿಂಗ್ ಅಭಿಮಾನಿ ಬಳಗ ತೆರೆದಿದ್ದ ಕಚೇರಿಯನ್ನು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ.

    ಕಳೆದ ಮೂರು ತಿಂಗಳ ಹಿಂದೆ ಶಾಸಕ ಭೀಮಾನಾಯ್ಕ್ ಕ್ಷೇತ್ರದಲ್ಲಿ ಆನಂದ್ ಸಿಂಗ್ ಅಭಿಮಾನಿಗಳು ಕಚೇರಿ ತೆರೆದು ಸಾಮಾಜಿಕ ಕಾರ್ಯಗಳನ್ನು ನಡೆಸಲು ಆರಂಭಿಸಿದ್ದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಸಂಧಾನ ಸಫಲವಾದ ಕಾರಣ ಇಂದು ಬೆಳಗ್ಗೆ ಕಚೇರಿಯನ್ನು ತೆರವುಗೊಳಿಸಲಾಗಿದೆ.

    ಇತ್ತ ಆನಂದ್ ಸಿಂಗ್ ಹಾಗು ಭೀಮಾನಾಯ್ಕ್ ನಡುವೆ ಸಂಧಾನ ಯಶಸ್ವಿಯಾಗುತ್ತಿದಂತೆ ಕೆಪಿಸಿಸಿ ನಾಯಕರು ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv