Tag: ಶಾಸಕ ಪ್ರೀತಂಗೌಡ

  • ನನಗೆ ಅವಮಾನ ಮಾಡಿದ್ದಾರೆ, ಈಗ ಅನುಭವಿಸಲಿ – ಬಿಜಿಪಿ ನಾಯಕರ ವಿರುದ್ಧವೇ ಎ.ಮಂಜು ಕಿಡಿ

    ನನಗೆ ಅವಮಾನ ಮಾಡಿದ್ದಾರೆ, ಈಗ ಅನುಭವಿಸಲಿ – ಬಿಜಿಪಿ ನಾಯಕರ ವಿರುದ್ಧವೇ ಎ.ಮಂಜು ಕಿಡಿ

    ಹಾಸನ: ನನ್ನ ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಹೋಗಿ ಎನ್ನುವರೋ ಅಲ್ಲಿಗೆ ಹೋಗುತ್ತೇನೆ. ನನಗೆ ಬಿಜೆಪಿ ಅವರು ಅವಮಾನ ಮಾಡಿದ್ದಾರೆ ಅದಕ್ಕೆ ಅನುಭವಿಸಿದ್ದಾರೆ ಎ.ಮಂಜು ನಾಯಕರ ವಿರುದ್ಧವೇ ಮಾಜಿ ಸಚಿವ ಎ.ಮಂಜು ಕಿಡಿ ಕಾರಿದ್ದಾರೆ.

    ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಾಸನದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ನಾವು ಕೇಳಿರಲಿಲ್ಲ. ಆದರೆ ಬಿಜೆಪಿ ಅವರೇ ಬಂದು ಮಂಥರ್ ಗೌಡಗೆ ಟಿಕೆಟ್ ನೀಡುವ ವಿಚಾರ ಮಾತನಾಡಿದ್ದರು. ಜೊತೆಗೆ ನಾನು ಐದು ಕೋಟಿ ರೂ. ಬಂಡವಾಳ ಹಾಕುತ್ತೇನೆ ಎಂದು ಹಾಸನದ ಶಾಸಕರು ಪಾರ್ಟಿ ಮೀಟಿಂಗ್‌ನಲ್ಲಿ ಹೇಳಿದ್ದರು ಎಂದರು.

    ಈ ಮಾತುಕತೆಯ ಬಳಿಕ ಶಾಸಕ ಪ್ರೀತಂ ಗೌಡ ಹಾಗೂ ಅವರ ಬೆಂಬಲಿಗರು ನಂತರದಲ್ಲಿ ಕ್ವಾಲಿಟಿ ಬಾರ್ ಶರತ್ ಅವರನ್ನು ಮಂಥರ್ ಬಳಿ ಕಳುಹಿಸಿ, ಚುನಾವಣೆಗೆ ನಿಲ್ಲಬಾರದು ಎಂದು ಹೇಳಿಸಿದ್ದಾರೆ. ನಂತರ ಕಾಂಗ್ರೆಸ್ ನಾಯಕರು ಮಂಥರ್ ಗೌಡನನ್ನು ಗುರುತಿಸಿ ಕೊಡಗಿನಲ್ಲಿ ಟಿಕೆಟ್ ನೀಡಿದ್ದಾರೆ ಎಂದು ತಿಳಿಸಿದರು.

    ಒಳ ಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ಹಾಸನದ ಕೆಲವು ನಾಯಕರಲ್ಲಿ ಇದೆ. ಮತದಾರರ ಮನವೊಲಿಸುವಲ್ಲಿ ಮುಖಂಡರು ವಿಫಲರಾಗಿದ್ದಾರೆ. ಅವರವರ ಸ್ವಾರ್ಥಕ್ಕೆ, ಸ್ವಹಿತಾಸಕ್ತಿಗೆ ಪಕ್ಷ ಬಲಿ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಶಾಸಕರ ವಿರುದ್ಧ ಹರಿಹಾಯದ್ದರು.

    ಮತದಾರರು ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಸರ್ಕಾರದ ಪರ ಮತ ಹಾಕಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪೈಪೋಟಿ ಕೊಟ್ಟಿದೆ. ಕೇವಲ ಹದಿನೈದು ದಿನದಲ್ಲಿ ಅಷ್ಟು ಮತ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದನ್ನು ಕೊಡಗು ವಿಧಾನ ಪರಿಷತ್ ಚುನಾವಣೆಯಿಂದ ಸಾಬೀತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

    ಇದೇ ವೇಳೆ ಕಾಂಗ್ರೆಸ್ ಬೆಂಬಲ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಮಗನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇನೆ ಹೊರತು ಬಿಜೆಪಿ ವಿರುದ್ಧ ಹೇಳಿಕೆ ನೀಡಿಲ್ಲ. ಹಾಸನದ ಎಂಎಲ್‌ಸಿ ಚುನಾವಣೆಯಲ್ಲಿ ನಾಯಕರ ಕೊರತೆಯೇ ಎರಡು ಪಕ್ಷಗಳು ಹೀನಾಯವಾಗಿ ಸೋಲಲು ಕಾರಣವಾಗಿದೆ ಎಂದರು. ಇದನ್ನೂ ಓದಿ: ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ

    ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೆ, ಯಾರನ್ನೂ ಬೆಂಬಲಿಸಿಲ್ಲ. ನಾನು ಬಿಜೆಪಿಯಲ್ಲಿದ್ದೇನೆ ಅಂಥಾ ನನಗೆ ಅನ್ನಿಸುತ್ತದೆ. ಆದರೆ ಪಕ್ಷ ಏನು ಹೇಳುತ್ತದೆ ಎನ್ನುವುದು ಗೊತ್ತಿಲ್ಲ. ಅಧಿಕೃತವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೇಡೌನ್‌ ಮೇಲೆ ಅಧಿಕಾರಿಗಳ ದಾಳಿ

  • ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ: ಎಚ್.ಕೆ.ಕುಮಾರಸ್ವಾಮಿ

    – ಸಿಎಂ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ

    ಹಾಸನ: ಬಿಜೆಪಿ ಸರ್ಕಾರವು ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ.

    ಮಂತ್ರಿಮಂಡಲ ರಚನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿಮಂಡಲವು ಅತ್ಯಂತ ಅಸಮತೋಲನದಿಂದ ಕೂಡಿದೆ. 30 ಜನ ಮಂತ್ರಿಗಳಿದ್ದರೂ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದು ಅಲ್ಲದೇ ಆರೋಪ ಇರೋರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇವರು ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಸರ್ಕಾರವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.

    ಸರ್ಕಾರವು ಹೆಚ್ಚು ಸಂಖ್ಯೆಯಿರುವ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಹಿಳೆಯರಿಗೂ ಸಹ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಗೊಲ್ಲ ಸಮಾಜದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಚುನಾವಣೆ ವೇಳೆ ಶಿರಾದ ಗೊಲ್ಲ ಸಮುದಾಯಕ್ಕೆ ನಿಗಮ ಸ್ಥಾಪಿಸುತ್ತೇವೆ ಎಂದಿದ್ದರು. ಆದರೆ ಆ ಕಡೆ ಗಮನವೇ ಕೊಟ್ಟಿಲ್ಲ. ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಏನಾದ್ರು ಆಶ್ವಾಸನೆ ಕೊಡುತ್ತೇವೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ಟೀಕಿಸಿದ್ದಾರೆ.

    ಹಾಸನದಲ್ಲಿನ ಪ್ರವಾಹ ಕುರಿತು ಮಾತನಾಡಿದ ಅವರು, ಇಲ್ಲಿ 4 ವರ್ಷಗಳಿಂದ ಮಳೆಯಾಗುತ್ತಿದೆ. ಸಚಿವರು, ಅಧಿಕಾರಿಗಳು ಮಳೆ ಬಂದಾಗ ಬಂದು ಸಮೀಕ್ಷೆ ಮಾಡುತ್ತಿದ್ದಾರೆ. ಆ ಸಮೀಕ್ಷೆಗೆ ತಕ್ಕಂತೆ ಹಣವನ್ನು ಸಹ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. 2017 ರಲ್ಲಿ 321 ಕೋಟಿ ರೂ. 2018 ರಲ್ಲಿ 178 ಕೋಟಿ ರೂ. 2019 ರಲ್ಲಿ 160 ಕೋಟಿ ರೂ. 2021 ರಲ್ಲಿ 78 ಕೋಟಿ ರೂ ನಷ್ಟ ಎಂದು ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರವಾರಕ್ಕೆ ಪ್ರವಾಹ ವಿಚಾರವಾಗಿ ಹೋಗಿ ಬಂದಿದ್ದಾರೆ. ಅದೇ ರೀತಿ ಎಲ್ಲ ಜಿಲ್ಲೆಗೂ ಸಿಎಂ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸಕಲೇಶಪುರಕ್ಕೂ ಬರಬೇಕು ನಾವು ಸ್ವಾಗತ ಮಾಡುತ್ತೇವೆ. ಅವರು ಇಲ್ಲಿಗೆ ಬಂದಾಗ ಅನುಕೂಲ ಹೆಚ್ಚಾಗುತ್ತೆ. ಮಳೆಯಿಂದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 225 ಕಿಲೋಮೀಟರ್ ರಸ್ತೆ ಹಾಳಾಗಿದೆ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ನೂರು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಕೆ.ಜಿ.ಬೋಪಯ್ಯ ಅವರು ಆರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ನಮಗೂ ಬೇಜಾರಾಗಿದೆ, ಹಾಸನ ಜಿಲ್ಲೆಗೆ, ಕೊಡಗಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಸಿಎಂ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ. ಅದನ್ನು ಸ್ವಾಗತ ಮಾಡುತ್ತೇನೆ. ಅದು ಅಲ್ಲದೇ ದೇವೇಗೌಡರು ಅತ್ಯಂತ ಹಿರಿಯ ರಾಜಕಾರಣಿ, ಮಾಜಿಪ್ರಧಾನಮಂತ್ರಿಯಾಗಿದ್ದವರು. ರಾಜ್ಯದ ಹಿತದೃಷ್ಟಿಯಿಂದ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಸಲಹೆ ಎಲ್ಲರಿಗೂ ಅಗತ್ಯವಿದೆ. ಅದನ್ನು ಪ್ರಶ್ನೆ ಮಾಡುವುದು ಸಣ್ಣತನ, ಅಲ್ಪತನ, ಅನುಭವದ ಕೊರತೆ ಇರುವವರು ಮಾತ್ರ ಆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು

  • ಹಾಸನ ನಗರದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್‍ಡೌನ್

    ಹಾಸನ ನಗರದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್‍ಡೌನ್

    ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ಹೊಸ ಲಾಕ್‍ಡೌನ್ ನಿಯಮ ಜಾರಿಯಾಗಲಿದೆ.

    ಇಂದು ನಗರಸಭೆಯಲ್ಲಿ ನಡೆದ ವರ್ತಕರು, ಸಾರ್ವಜನಿಕರ ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ. ಅದರಂತೆಯೇ ಮಂಗಳವಾರದಿಂದ ಒಂದು ವಾರ ಹೊಸ ಲಾಕ್‍ಡೌನ್ ನಿಯಮ ಜಾರಿಯಾಗಲಿದೆ.

    ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಅಲ್ಲದೇ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್‍ಗೆ ನಿರ್ಧಾರ ಮಾಡಲಾಗಿದೆ. ಅಗತ್ಯ ವಸ್ತು ಬಿಟ್ಟು ಬೇರೆ ವಹಿವಾಟು ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಅವರು ಮಾಹಿತಿ ನೀಡಿದ್ದಾರೆ.

    ಈ ಮಹಾಮಾರಿ ಕೊರೊನಾದಿಂದ ಜೀವ, ಜೀವನ ಎರಡೂ ಉಳಿಯಬೇಕು. ಹೀಗಾಗಿ ಎಲ್ಲರೂ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್‍ಗೆ ಸ್ಪಂದಿಸುವಂತೆ ಶಾಸಕ ಪ್ರೀತಂಗೌಡ ಮನವಿ ಮಾಡಿಕೊಂಡಿದ್ದಾರೆ.

  • ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು, ಮಾಧ್ಯಮಗಳ ಮುಂದೆಯಲ್ಲ: ಪ್ರಜ್ವಲ್‍ಗೆ ಪ್ರೀತಂಗೌಡ ಟಾಂಗ್

    ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು, ಮಾಧ್ಯಮಗಳ ಮುಂದೆಯಲ್ಲ: ಪ್ರಜ್ವಲ್‍ಗೆ ಪ್ರೀತಂಗೌಡ ಟಾಂಗ್

    – ದೇವೇಗೌಡರನ್ನು ಹಾಡಿ ಹೊಗಳಿದ ಶಾಸಕರು

    ಹಾಸನ: ನೂತನ ಸಂಸದರು ರಾಜೀನಾಮೆಗೂ ಮುನ್ನ ಪ್ರಮಾಣ ವಚನ ಸ್ವೀಕರಿಸಬೇಕು. ಅಷ್ಟೇ ಅಲ್ಲ ರಾಜೀನಾಮೆಯನ್ನು ಸ್ಪೀಕರ್‍ಗೆ ರಾಜೀನಾಮೆ ನೀಡಬೇಕೆ ಹೊರತು ಮಾದ್ಯಮಗಳ ಮುಂದಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿಗೆ ಐದು ಲಕ್ಷಕ್ಕೂ ಹೆಚ್ಚು ಮತಗಳು ಬಂದಿದೆ. ಇದು ಪಕ್ಷದ ಸಾಧನೆ. ಈ ಬಾರಿಯ ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕಿದೆ ಎಂದು ಹೇಳಿದರು.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿತ್ತು. ಆದರೆ ಕುಟುಂಬ ರಾಜಕಾರಣ ಅವರನ್ನು ತುಮಕೂರಿಗೆ ಹೋಗುವಂತೆ ಮಾಡಿತು. ಅವರು ಇಡೀ ದೇಶದ ಮುತ್ಸದಿರಾಜಕಾರಣಿ, ರಾಜ್ಯ ಹಾಗೂ ದೇಶದ ಆಸ್ತಿ. ಅವರನ್ನು ತುಮಕೂರಿನಲ್ಲಿ ಸೋಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಾವು ಸೋತರೂ ವ್ಯವಸ್ಥಿತವಾಗಿ ಚುನಾವಣೆಯನ್ನ ಎದುರಿಸಿದ್ದೇವೆ. ಇನ್ನಷ್ಟು ತಂತ್ರಗಳನ್ನ ಮಾಡಿದ್ದರೆ ಗೆಲುವನ್ನು ಕಾಣಬಹುದಿತ್ತು. ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಪಕ್ಷ ಸುಭದ್ರವಾಗಿದೆ. ಕಾಶ್ಮೀರದಿಂದ ಕರ್ನಾಟಕದ ಚಾಮರಾಜನಗರದವರೆಗೂ ಪಕ್ಷದ ಬೆಳವಣಿಗೆ ಆಗಿದೆ. ರಾಜ್ಯ ಸರ್ಕಾರದ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀನಾಯವಾಗಿ ಹೀಯಾಳಿಸಿದವರು ಹೀನಾಯವಾಗಿ ಸೋತಿದ್ದಾರೆ. ಈ ಪಟ್ಟಿಯಲ್ಲಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ಕೂಡ ಇದ್ದಾರೆ. ಎಚ್.ಡಿ.ರೇವಣ್ಣ ಅಭಿವೃದ್ಧಿ ಬಗ್ಗೆ ಮಾತಾಡಿದರೆ ಅವರ ಪರ ಇರುತ್ತೇನೆ. ರಾಜಕೀಯ ಮಾತನಾಡಿದರೆ ನಾನು ಅವರ ವಿರುದ್ಧವಾಗಿರುತ್ತೇನೆ. ನಾನು ಎನ್ನುವುದನ್ನು ಬಿಡದಿದ್ದರೆ ಜನ ಮನೆಗೆ ಕಳುಹಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಮಂಡ್ಯ ಕ್ಷೇತ್ರ ಎಂದು ಸಿಎಂ ಕುಮಾರಸ್ವಾಮಿಯವರ ವಿರುದ್ಧ ಗುಡುಗಿದರು.

    ನರೇಂದ್ರ ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದರು. ಸಚಿವರು ತಮ್ಮ ಮಾತಿಗೆ ಬದ್ಧರಾಗಿರಬೇಕು ಎಂದರು.

    ಆಪರೇಷನ್ ಕಮಲದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಯಾರಾದರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ಆಪರೇಷನ್ ಮಾಡಲು ನಾನು ಡಾಕ್ಟರ್ ಅಲ್ಲ ಎಂದು ನಗೆ ಬೀರಿದರು.

    ಹಾಸನ ಜಿಲ್ಲೆಗೆ ಐಐಟಿ ಬೇಡ. ಮೊದಲು ರೈತರಿಂದ ವಶಪಡಿಸಿಕೊಂಡಿರುವ ಭೂಮಿ ವಾಪಾಸ್ ನೀಡಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಐಐಟಿಗೆ ವಶಪಡಿಸಿಕೊಂಡಿರುವು ಭೂಮಿಯನ್ನು ರೈತರಿಗೆ ವಾಪಾಸ್ ಕೊಡಿಸುತ್ತೇನೆ. ಇದೇ ನನ್ನ ಮೊದಲ ಕಮಿಟ್ ಮೆಂಟ್. ಜಾಗ ಪಡೆದು ಮನೆ ರೈತರ ಹಾಳುಮಾಡುವುದು ಬೇಡ. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲೇ ವಿಮಾನ ನಿಲ್ದಾಣ ಮಾಡಲಿ. ಹೆಚ್ಚುವರಿ ಭೂಮಿ ಸ್ವಾಧೀನ ಅವಶ್ಯಕತೆ ಇಲ್ಲ ಎಂದು ಹೇಳಿದರು.

  • ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಹಾಸನ: ಮಳೆ ಬಂದರು ನಾವೇ ಮಳೆ ಬರುವಂತೆ ಮಾಡಿದ್ದು ಎಂದು ಹೇಳುತ್ತಾರೆ. ಕ್ಷೇತ್ರದಲ್ಲಿ ರಸ್ತೆ ಕೆಲಸ ಮಾಡಿಸಿದರು ನಮ್ಮದೇ ಎಂದು ಹೇಳುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದು, ಆದರೆ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಸಮಸ್ಯೆ ಪರಿಹರಿಸಲು ಮಾತ್ರ ವಿಫಲರಾಗಿದ್ದಾರೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಮಾಜಿ ಪ್ರಧಾನಿಗಳ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆನೆ ದಾಳಿ ನಿಯಂತ್ರಣ ಹಾಗೂ ಪರಿಹಾರ ಕೋರಿ ಸಕಲೇಶಪುರದ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ನಾಲ್ಕು ದಶಕದಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿದ್ದು, ದೇವರ ಆಶೀರ್ವಾದದಿಂದ ಅವರು ಪಧಾನಿಯೂ ಆಗಿದ್ದಾರೆ. ಆದರೆ ಕ್ಷೇತ್ರದ ಸಂಸದರು ಮಾತ್ರ ಕಾಡಾನೆ ಹಾವಳಿ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಈ ಹೋರಾಟ ಕಳೆದ 3 ವರ್ಷಗಳಿಂದ ನಡೆಯುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಬೇಕಿರುವುದು ಇಚ್ಛಾಶಕ್ತಿ ಎಂದು ಹೇಳಿದ್ದಾರೆ.

    ಆನೆ ಹಾವಳಿಯಲ್ಲಿ ರಾಜಕೀಯ ಮಾಡಲ್ಲ ಎನ್ನುತ್ತಲೇ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ, ಹಾಸನ ಸಂಸದರೂ ಕಾಡಾನೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಹೆದ್ದಾರಿಗೆ ನಿತಿನ್ ಗಡ್ಕರಿ ಭೇಟಿ ಮಾಡಿದಂತೆ ಕೇಂದ್ರ ಅರಣ್ಯ ಸಚಿವರನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸಬಹುದಿತ್ತು. ಅವರದ್ದೇ ಶಾಸಕರೂ, ಸಚಿವರು, ಸಂಸದರು ಹಾಗೂ ಸಿಎಂ ಆಗಿದ್ದರು ಏನು ಮಾಡುತ್ತಾರೋ ಮಾಡಲಿ. ಆನೆ ಹಾವಳಿ ಎಂದಾಕ್ಷಣ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾರೆ. ಈ ರೀತಿ ಬುದ್ಧಿವಂತಿಕೆ ಮಾತುಗಳನ್ನ ಬಿಟ್ಟು ಕ್ಷೇತ್ರದ ಕಡೆ ಗಮನಹರಿಸಿ ಎಂದು ವ್ಯಂಗ್ಯ ಮಾಡಿದರು. ಇದನ್ನು ಓದಿ : 4 ದಿನದಿಂದ ಪ್ರತಿಭಟನೆ ನಡೆಸಿದ್ರು ಕೇರ್ ಮಾಡ್ತಿಲ್ಲ : ಸಿಎಂಗೆ ಹಾಸನ ಮಹಿಳೆ ಅವಾಜ್

    ರೈತರ ಸಮಸ್ಯೆ ಬಗೆ ಹರಿದರೆ ನಾವೇ ಬೇಕಿದ್ದರೆ ಗಂಧದ ಹಾರ ಹಾಕಿ, ಜೇನು ತುಪ್ಪದ ಅಭಿಷೇಕ ಮಾಡಿ ದೆಹಲಿವರೆಗೂ ಕರೆದುಕೊಂಡು ಹೋಗುತ್ತೇವೆ. ಹೆಸರಿಗೆ ಮಾತ್ರ ರೈತರ ಮಗ, ಮೊದಲು ರೈತರ ಹೆಸರಿನಲ್ಲಿ ಪ್ರಮಾಣ ಮಾಡುವುದನ್ನ ಬಿಡಿ. ನಿಜವಾದ ರೈತರ ಸಮಸ್ಯೆ, ನಿಮ್ಮನ್ನ ಆಯ್ಕೆ ಮಾಡಿದವರ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯ ಮಾಡಿದರು.

    ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಕೈಯಲ್ಲಿ ವಿಷದ ಬಾಟಲ್ ಹಿಡಿದ ರೈತರು ನಾಳೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರುವಂತೆ ಒತ್ತಾಯ ಮಾಡಿದ್ದಾರೆ. ಸಮಸ್ಯೆ ಬಗೆಹರಿಸಲು ವಿಫಲವಾದರೆ ಸಾಮೂಹಿಕವಾಗಿ ವಿಷ ಸೇವನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv