Tag: ಶಾಸಕ ನಾರಾಯಣಗೌಡ

  • ಮೊದಲ ಪೂಜೆ ವಿಚಾರಕ್ಕೆ ಬಿಜೆಪಿ – ಜೆಡಿಎಸ್ ನಡುವೆ ಗಲಾಟೆ

    ಮೊದಲ ಪೂಜೆ ವಿಚಾರಕ್ಕೆ ಬಿಜೆಪಿ – ಜೆಡಿಎಸ್ ನಡುವೆ ಗಲಾಟೆ

    ಮಂಡ್ಯ: ದೇವರಿಗೆ ಮೊದಲ ಪೂಜೆ ಸಲ್ಲಿಸುವ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜಗಳವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯಲ್ಲಿ ಜರುಗಿದೆ.

    ಗುರುವಾರ ಬಿಲ್ಲೇನಹಳ್ಳಿಯ ಗವಿರಂಗನಾಥ ಸ್ವಾಮಿಯ ರಥೋತ್ಸವ ಜರುಗಿತು. ಈ ವೇಳೆ ದೇವರಿಗೆ ಮೊದಲ ಪೂಜೆ ನಾನು ಮಾಡಬೇಕೆಂದು ಜೆಡಿಎಸ್ ತಾಲೂಕು ಪಂಚಾಯತಿ ಸದಸ್ಯ ರಾಜಹುಲಿ ದಿನೇಶ್ ಬರುತ್ತಾರೆ. ಇದೇ ವೇಳೆ ಬಿಜೆಪಿ ಮುಖಂಡರು ಮೊದಲ ಪೂಜೆ ಕ್ಷೇತ್ರದ ಶಾಸಕರು ಮಾಡಬೇಕು. ಹಿಂದಿನಿಂದಲೂ ಹಾಗೆ ನಡೆದುಕೊಂಡು ಬಂದಿದೆ ಎಂದು ಮಾತಿಗೆ ಮಾತು ಬೆಳೆಯುತ್ತದೆ.

    ಶಾಸಕ ನಾರಾಯಣಗೌಡ ಕೂಡ ಪೂಜೆ ವಿಚಾರದ ಬಗ್ಗೆ ಮಾತನಾಡುತ್ತಾರೆ. ಎರಡು ಬಣದ ಮುಖಂಡರು ಈ ವಿಚಾರವಾಗಿ ಮಾತಿಗೆ ಮಾತು ಬೆಳೆಸುತ್ತಾರೆ. ಮಾತುಕತೆ ವಿಕೋಪಕ್ಕೆ ಹೋಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ.

    ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನ ಮಾಡಲು ಮುಂದಾಗುತ್ತಾರೆ. ನಂತರ ಪೊಲೀಸರು ರಾಜಹುಲಿ ದಿನೇಶ್‍ರನ್ನು ಕರೆದೊಯ್ಯುತ್ತಾರೆ. ಬಳಿಕ ಗಲಾಟೆ ತಣ್ಣಗಾದಗ ಶಾಸಕ ನಾರಾಯಣಗೌಡ ಗವಿರಂಗನಾಥಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ.

  • ನಾರಾಯಣಗೌಡ ರಾಜೀನಾಮೆಗೆ ಕಾರ್ಯಕರ್ತರ ಆಕ್ರೋಶ – ಕಚೇರಿ ಮುಂದಿದ್ದ ಬೋರ್ಡ್ ಧ್ವಂಸ

    ನಾರಾಯಣಗೌಡ ರಾಜೀನಾಮೆಗೆ ಕಾರ್ಯಕರ್ತರ ಆಕ್ರೋಶ – ಕಚೇರಿ ಮುಂದಿದ್ದ ಬೋರ್ಡ್ ಧ್ವಂಸ

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಕಾರ್ಯಕರ್ತರು ಅಣಕು ಶವಯಾತ್ರೆ ನಡೆಸಿದ್ದಾರೆ.

    ಇಂದು ಶಾಸಕರ ರಾಜೀನಾಮೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಯಾತ್ರೆಯನ್ನ ನಡೆಸಿದ್ದರು. ಈ ಸಂದರ್ಭದಲ್ಲಿ ಶಾಸಕ ನಿವಾಸದ ಬಳಿ ಆಗಮಿಸಿದ ಕಾರ್ಯಕರ್ತರು ಕಚೇರಿ ಮುಂದೆ ಹಾಕಿದ್ದ ಬೋರ್ಡ್ ಧ್ವಂಸಗೊಳಿಸಿದರು. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಟಿ.ಮಂಜು, ದೇವರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಾರಾಯಣಗೌಡ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಕಚೇರಿಗೆ ನುಗ್ಗಲು ಯತ್ನಿಸಿದರು. ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಕರ್ತರನ್ನು ತಡೆದರು. ಇದಕ್ಕೂ ನಗರದ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ನಾರಾಯಣಗೌಡ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕರ ಕಚೇರಿ ಎದುರು ದಾಂಧಲೆ ನಡೆಸಿದ ಕಾರಣ ಕೆಆರ್ ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಲದ ಹಣದಿಂದ ಸೀರೆ ಕೊಂಡು ಹಬ್ಬ ಮಾಡ್ತಾರೆ ಎಂದ ಮೇಲ್ವಿಚಾರಕನಿಗೆ ಶಾಸಕರಿಂದ ಕ್ಲಾಸ್

    ಸಾಲದ ಹಣದಿಂದ ಸೀರೆ ಕೊಂಡು ಹಬ್ಬ ಮಾಡ್ತಾರೆ ಎಂದ ಮೇಲ್ವಿಚಾರಕನಿಗೆ ಶಾಸಕರಿಂದ ಕ್ಲಾಸ್

    ಮಂಡ್ಯ: ಸರ್ಕಾರ ನೀಡುವ ಎಮ್ಮೆ ಸಾಲ ಪಡೆದ ಮಹಿಳೆಯರು ಸೀರೆ ಉಟ್ಟು, ಮಾರ್ನಾಮಿ ಹಬ್ಬ ಮಾಡಿ ಸಾಲ ತೀರಿಸುತ್ತಿಲ್ಲ ಎಂದು ಮಾತಾಡಿದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೇಲ್ವಿಚಾರಕನಿಗೆ ಬಹಿರಂಗ ಸಭೆಯಲ್ಲೇ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

    ಕೃಷ್ಣರಾಜಪೇಟೆ ತಾಲ್ಲೂಕಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ, ಸಂಜೀವಿನಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಹಾಯ ಧನದ ಚೆಕ್ ವಿತರಣಾ ಸಮಾರಂಭವನ್ನು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ತಾಲೂಕು ಮೇಲ್ವಿಚಾರಕ ನಂಜುಂಡಯ್ಯ ಎಂಬುವವರು, ಸರ್ಕಾರ ನೀಡುವ ಸಾಲ ಸೌಲಭ್ಯದ ಸಹಾಯ ಧನ ಯೋಜನೆ ದುರ್ಬಳಕೆಯಾಗುತ್ತಿದೆ. ಈ ಹಣವನ್ನು ಹಬ್ಬ ಹುಣ್ಣಿಮೆ ಮಾಡಲು, ಸೀರೆಕೊಳ್ಳಲು ಹೆಣ್ಣು ಮಕ್ಕಳು ಬಳಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು.

    ಮೇಲ್ವಿಚಾರಕರ ಆರೋಪಕ್ಕೆ ಗರಂ ವೇದಿಕೆ ಮೇಲಿದ್ದ ಶಾಸಕ ನಾರಾಯಣಗೌಡ, ನನ್ನ ಸಹೋದರಿಯರನ್ನು ಅಪಮಾನ ಮಾಡುತ್ತೀದ್ದಿಯಾ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇನೆ ಲೋ…..ಎಂದು ಅವಾಚ್ಯ ಶಬ್ದ ಪ್ರಯೋಗಿಸಿದರು. ಅಲ್ಲದೇ ನಮ್ಮ ತಾಲ್ಲೂಕಿನ ಹೆಸರು ಹಾಳು ಮಾಡಲು ನೀನು ಬಂದಿದ್ದೀಯಾ. ನಮ್ಮಹೆಣ್ಣು ಮಕ್ಕಳು ನಿನ್ನ ದುಡ್ಡಲ್ಲಿ ಸೀರೆ ಉಡುತ್ತಿದ್ದಾರಾ? ನಿನ್ನ ನಂಬಿಕೊಂಡು ಹೆಣ್ಣು ಮಕ್ಕಳು ಜೀವನ ನಡೆಸುತ್ತಿಲ್ಲ. ಅವರನ್ನು ಕ್ಷಮೆ ಕೇಳು ಎಂದು ಆಕ್ರೋಶ ಹೊರಹಾಕಿದರು. ಶಾಸಕರ ಮಾತಿಗೆ ಮಣಿದು ನಂಜುಂಡಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಫಲಾನುಭವಿ ಮಹಿಳೆಯರ ಬಳಿ ಕ್ಷಮೆಯಾಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv