Tag: ಶಾಸಕ ನಾಗೇಶ್

  • ನಾಗೇಶ್ ಫೋಟೋ ಮೇಲೆ ಹಣ ಚೆಲ್ಲಿ, ಚಪ್ಪಲಿಯಿಂದ ಹೊಡೆದ ರೈತರು

    ನಾಗೇಶ್ ಫೋಟೋ ಮೇಲೆ ಹಣ ಚೆಲ್ಲಿ, ಚಪ್ಪಲಿಯಿಂದ ಹೊಡೆದ ರೈತರು

    ಕೋಲಾರ: ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ವಿರುದ್ಧ ಕ್ಷೇತ್ರದ ಜನರು ರೊಚ್ಚಿಗೆದ್ದಿದ್ದು, ಶಾಸಕರ ಫೋಟೋಗೆ ಚಪ್ಪಲಿಯಿಂದ ಹೊಡೆದು ಹಣವನ್ನು ಚೆಲ್ಲಿ ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಾರೆ.

    ಅಧಿಕಾರದ ಆಸೆಗೆ ಹಣ ಪಡೆದು ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಎಂದು ಶಾಸಕ ನಾಗೇಶ್ ವಿರುದ್ಧ ಆರೋಪಿಸಿ, ಶಾಸಕರ ಪ್ರತಿಕೃತಿ ಮಾಡಿ ಅದನ್ನು ಚಟ್ಟದ ಮೇಲೆ ಮಲಗಿಸಿ ಕ್ಷೇತ್ರದಲ್ಲಿ ಮೆರವಣಿಗೆ ಮಾಡಿ ಯುವಕರು, ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಶಾಸಕರ ಫೋಟೋಗಳಿಗೆ ಚಪ್ಪಲಿಗಳಿಂದ ಹೊಡೆದು, ರಸ್ತೆ ಮಧ್ಯೆ ಫೋಟೋಗಳ ಮೇಲೆ ಹಣ ಚೆಲ್ಲಿ, ಶಾಸಕರ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ನಾವು ಕೆಲಸ ಮಾಡಲಿ ಎಂದು ವೋಟ್ ಹಾಕಿ ನಾಗೇಶ್ ಅವರನ್ನು ಶಾಸಕರಾಗಿ ಮಾಡಿದ್ದೇವೆ. ಆದರೆ ಅವರು ತಮ್ಮ ಸ್ವಾರ್ಥಕ್ಕೆ ನಮ್ಮ ನಂಬಿಕೆ ಬಳಿಸಿಕೊಂಡಿದ್ದಾರೆ. ಹಣಕ್ಕಾಗಿ ಜನ ನೀಡಿದ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

  • ನಿಗಮ-ಮಂಡಳಿ ಬೇಡ, ಸಚಿವ ಸ್ಥಾನವೇ ಬೇಕು: ಶಾಸಕ ನಾಗೇಶ್ ಪಟ್ಟು

    ನಿಗಮ-ಮಂಡಳಿ ಬೇಡ, ಸಚಿವ ಸ್ಥಾನವೇ ಬೇಕು: ಶಾಸಕ ನಾಗೇಶ್ ಪಟ್ಟು

    ಬೆಂಗಳೂರು: ನನಗೆ ನಿಗಮ-ಮಂಡಳಿ ಬೇಡ, ಸಚಿವ ಸ್ಥಾನವೇ ಬೇಕು ಎಂದು ಮುಳುಬಾಗಿಲು ಪಕ್ಷೇತರ ಶಾಸಕ ನಾಗೇಶ್ ಸಿಎಂ ಕುಮಾರಸ್ವಾಮಿ ಅವರಲ್ಲಿ ಒತ್ತಾಯಿಸಿದ್ದಾರೆ.

    ಆಪರೇಷನ್ ಕಮಲದ ಆತಂಕದಲ್ಲಿ ಇರುವ ಸಿಎಂ ಕುಮಾರಸ್ವಾಮಿ ಅವರು ಇಂದು ಒಬ್ಬಬ್ಬರೇ ಅತೃಪ್ತ ಶಾಸಕರನ್ನು ಕರೆದು ಮಾತನಾಡಿಸಿದರು. ಸಚಿವ ಡಿ.ಕೆ.ಶಿವಕುಮಾರ್ ಜೊತೆ ಆಗಮಿಸಿದ ಶಾಸಕ ನಾಗೇಶ್ ಅವರ ಜೊತೆಗೆ ಸಿಎಂ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು.

    ಸಿಎಂ ಕುಮಾರಸ್ವಾಮಿಯವರ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಶ್ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ. ನನಗೆ ನಿಗಮ ಮಂಡಳಿ ಸ್ಥಾನ ಬೇಕಾಗಿಲ್ಲ. ಇದನ್ನು ಸಿಎಂ ಗಮನಕ್ಕೂ ತಂದಿದ್ದೇನೆ. ಅವರು ಕೂಡ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಎರಡು ಬಾರಿ ನನಗೆ ಸಚಿವ ಸ್ಥಾನ ತಪ್ಪಿತ್ತು. ಈ ಬಾರಿ ಮಂತ್ರಿಗಿರಿ ನೀಡುವ ಭರವಸೆ ಇದೆ ಎಂದು ತಿಳಿಸಿದರು.

    ಬಿಜೆಪಿಗೆ ನಾನು ಬೆಂಬಲ ನೀಡಿರಲಿಲ್ಲ. ಅಸಮಾಧಾನ ಆಗಿದ್ದಕ್ಕೆ ಹೋಗಿದ್ದೆ ಅಷ್ಟೇ. ಈಗಲೂ ನನ್ನ ಬೆಂಬಲ ಸಮ್ಮಿಶ್ರ ಸರ್ಕಾರಕ್ಕಿದೆ. ಕುಮಾರಸ್ವಾಮಿ ಅವರು ವಿಶ್ವಾಸ ನೀಡಿದ್ದು, ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

    ಬಿಜೆಪಿಯವರು ನನ್ನನ್ನು ಈಗ ಕರೆದಿಲ್ಲ. ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅವರಿಗೆ ತಿಳಿಯುತ್ತಿದೆ. ಹೀಗಾಗಿ ಮತ್ತೆ ಸಂಪರ್ಕ ಮಾಡಿಲ್ಲ. ಎರಡು ದೋಣಿ ಮೇಲೆ ನಾನು ಕಾಲು ಇಡುವುದಿಲ್ಲ. ನನ್ನ ಜೊತೆ ಶಾಸಕ ಶಂಕರ್ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

    ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಿಡ್ಲಘಟ್ಟ ಶಾಸಕ ಮುನಿಯಪ್ಪ ಬಹಿರಂಗವಾಗಿ ಹೇಳಿದ್ದಾರೆ. ಸಚಿವ ಸ್ಥಾನಕ್ಕಾಗಿ ಇಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು. ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಾನು ಪಕ್ಷದಲ್ಲಿ ಹಿರಿಯನಿದ್ದೇನೆ. ಹಿರಿತನ ಆಧಾರಿಸಿ ನನಗೂ ಕೂಡ ಸಚಿವ ಸ್ಥಾನ ಕೊಡಬೇಕು. ಮಂತ್ರಿಗಿರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಬಳಿ ಚರ್ಚೆ ಮಾಡಿದ್ದೇನೆ. ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.