Tag: ಶಾಸಕ ಗೌರಿಶಂಕರ್

  • ವಿದ್ಯಾರ್ಥಿನಿಯರಿಗೆ ಬುಲ್ ಬುಲ್ ಎನ್ನುತ್ತಾನಂತೆ ಪಂಚಾಯತಿ ಅಧ್ಯಕ್ಷೆಯ ಪತಿ

    ವಿದ್ಯಾರ್ಥಿನಿಯರಿಗೆ ಬುಲ್ ಬುಲ್ ಎನ್ನುತ್ತಾನಂತೆ ಪಂಚಾಯತಿ ಅಧ್ಯಕ್ಷೆಯ ಪತಿ

    ತುಮಕೂರು: ತಾಲೂಕಿನ ಪಾಲಸಂದ್ರ ಪಂಚಾಯತಿ ಅಧ್ಯಕ್ಷೆಯ ರುಕ್ಮಿಣಿ ಅವರ ಪತಿರಾಯ ವೆಂಕಟೇಶ್ ವಿದ್ಯಾರ್ಥಿನಿಯರನ್ನು ಅಶ್ಲೀಲವಾಗಿ ಚುಡಾಯಿಸುತ್ತಾನೆ ಎನ್ನುವ ಆರೋಪ ಕೇಳಿ ಬಂದಿದೆ.

    ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು, ಮಹಿಳೆಯರು ತನ್ನ ಮುಂದೆ ಹೋಗುತ್ತಿದ್ದರೆ ‘ಹೇ ಬುಲ್ ಬುಲ್’ ಮಾತಾಡಕ್ಕಿಲ್ವಾ ಎಂದು ವೆಂಕೆಟೇಶ್ ಚುಡಾಯಿಸುತ್ತಾನೆ. ಆತನ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ ಎಂದು ಹೊನ್ನೆನಳ್ಳಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

    ಸುಂದರ ಹುಡಿಗಿಯರನ್ನು ಕಂಡರೆ ಜೊಲ್ಲು ಸುರಿಸುವ ವೆಂಕಟೇಶ್ “ಕೆಳಗಿಂದ ಮೇಲ್ ತನಕ ನೋಡಪ್ಪಾ… ಒಂದೇ ಸೈಜ್‍ನಲ್ಲಿ ಇದ್ದಾಳೆ” ಎಂದು ಅಶ್ಲೀಲವಾಗಿ ಮಾತನಾಡುತ್ತಾನೆ. ಅಸಭ್ಯವಾಗಿ ಮಾತನಾಡು ವೆಂಕಟೇಶ್ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ಹೊನ್ನೆನಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ದೂರಿದ್ದಾರೆ. ಈ ಸಂಬಂಧ ವೆಂಕಟೇಶ್ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮತ್ತಷ್ಟು ನೊಂದ ಮಹಿಳೆಯರು ಶಾಸಕ ಗೌರಿಶಂಕರ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮಾಜಿ ಶಾಸಕ ಸುರೇಶ್ ಗೌಡ ಅವರ ಬೆಂಬಲಿಗರಾಗಿರುವ ವೆಂಕಟೇಶ್‍ಗೆ ಸರ್ಕಾರದ ಬೆಂಬಲ ಇದೆ. ಹಾಗಾಗಿ ಅವನು ಆಡಿದ್ದೇ ಆಡವಾಗಿದೆ. ಪೊಲೀಸರು ಅವರನ್ನು ಬಂಧಿಸುತ್ತಿಲ್ಲ ಎಂದು ಶಾಸಕ ಗೌರಿಶಂಕರ್ ಆರೋಪಿಸಿದ್ದಾರೆ. ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಪೊಲೀಸರ ವಿರುದ್ಧ ಎಸ್‍ಪಿ ಕಚೇರಿ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

  • ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದ ಶಾಸಕ – ಪಾದ ಪೂಜೆಗೆ ಸಿದ್ದಲಿಂಗ ಶ್ರೀಗಳು ಸಾನಿದ್ಯ

    ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದ ಶಾಸಕ – ಪಾದ ಪೂಜೆಗೆ ಸಿದ್ದಲಿಂಗ ಶ್ರೀಗಳು ಸಾನಿದ್ಯ

    ತುಮಕೂರು: ಕೊರೊನಾ ಸೋಂಕಿಗೆ ಸಿಲುಕಿ ದೇಶವೇ ನಲುಗಿ ಹೋಗಿದೆ. ಇಂಥಾ ಸಮಯದಲ್ಲಿ ಗಂಡ, ಮನೆ, ಮಕ್ಕಳನ್ನ ಬಿಟ್ಟು ಮನೆ ಮನೆಗೆ ತೆರಳಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ಶ್ರಮಿಸುತ್ತಿದ್ದಾರೆ. ಈ ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ದಿವ್ಯ ಸಾನ್ನಿದ್ಯದೊಂದಿಗೆ ನೂರಾರು ಕೊರೊನಾ ವಾರಿಯರ್ಸ್‍ಗಳಿಗೆ ತುಮಕೂರಿನ ಕೈದಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾದ ಪೂಜೆ ನೆರವೇರಿಸಿ ಶಾಸಕ ಗೌರಿಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಶಾಸಕ ಗೌರಿಶಂಕರ್ ಅವರೇ ಅಂಗನವಾಡಿ ಕಾರ್ಯಕರ್ತೆಯರ ಕಾಲು ತೊಳೆದು, ಅರಿಶಿನ-ಕುಂಕುಮ, ಹೂಗಳನ್ನ ಹಾಕಿ ಸತ್ಕರಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ನನ್ನ ಜೀವನ ಇರೋವರೆಗೂ ನಿಮ್ಮ ಸೇವೆಗೆ ಸಿದ್ಧ. ಯಾರಿಗೆ ಏನೇ ಸಮಸ್ಯೆಯಿದ್ದರೂ ನನ್ನ ಬಳಿ ಹೇಳಿಕೊಳ್ಳಿ. ಕೊರೊನಾದಿಂದ ಯಾರಿಗೂ ಸಾವು ಬರದಿರಲಿ ಎಂದು ಆಶಿಸಿದರು.

    ಈ ಅಪರೂಪದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ಸಿದ್ಧಲಿಂಗ ಸ್ವಾಮೀಜಿಗೆ ಪಾದ ಪೂಜೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಗಳು ಹಾಗೂ ಶಾಸಕರು ಜೊತೆಯಾಗಿ ಅಂಗನಾವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೊಲೀಸರು, ವೈದ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗೌರಿಶಂಕರ್ ಕುಟುಂಬ ಜನರ ಸೇವೆಗಾಗಿಯೇ ಹುಟ್ಟಿದೆ. ಅವರ ಸೇವೆಯಲ್ಲಿ ಎಲ್ಲೂ ಯಾವ ಸ್ವಾರ್ಥವಿಲ್ಲ. ಇವರ ತಂದೆ ಚೆನ್ನಿಗಪ್ಪ ಅವರು ಶ್ರೀ ಮಠಕ್ಕೆ ಮೊದಲಿನಿಂದಲೂ ಭಕ್ತರು, ಅವರ ಪುತ್ರನಾಗಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಹಾಲಿ, ಮಾಜಿ ಶಾಸಕರ ಹೈ ಡ್ರಾಮಾಕ್ಕೆ ಹೈರಾಣಾದ ಅಧಿಕಾರಿಗಳು

    ಹಾಲಿ, ಮಾಜಿ ಶಾಸಕರ ಹೈ ಡ್ರಾಮಾಕ್ಕೆ ಹೈರಾಣಾದ ಅಧಿಕಾರಿಗಳು

    ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರ ಹೈಡ್ರಾಮಾಕ್ಕೆ ಅಧಿಕಾರಿಗಳು ಇಂದು ಹೈರಾಣಾಗಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗೌರಿಶಂಕರ್ ಹಾಗೂ ಸುರೇಶ್ ಗೌಡ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳ ವಿರುದ್ಧವು ಗುಡುಗಿ, ದೂರು ನೀಡಿದ್ದಾರೆ.

    ಬೆಳಗುಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್‍ಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಕಡಿಮೆ ಮತ ಬಂದಿವೆ. ಹೀಗಾಗಿ ಶಾಸಕ ಗೌರಿಶಂಕರ್ ಅವರು ಬೆಳಗುಂಬ ಬೂತ್ ವ್ಯಾಪ್ತಿಯ ಜನರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಗರ್ ಹುಕುಂನಲ್ಲಿ ಕೆಲವರಿಗೆ ಮಂಜೂರಾದ ಜಮೀನನ್ನು ಶಾಸಕರು ರದ್ದುಪಡಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.

    ಈ ಸಂಬಂಧ ನೂರಾರು ಸಂಖ್ಯೆಯಲ್ಲಿ ಬಗರ್ ಹುಕುಂ ಫಲಾನುಭವಿಗಳ ಜೊತೆಗೆ ಮಾಜಿ ಶಾಸಕ ಸುರೇಶ್ ಗೌಡ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಬಳಿಕ ಶಾಸಕ ಗೌರಿಶಂಕರ್ ವಿರುದ್ಧ ದೂರು ನೀಡಿದರು.

    ಸುರೇಶ್ ಗೌಡ ಅವರ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಕಚೇರಿಗೆ ನೂರಾರು ಜನ ಬೆಂಬಲಿಗರೊಂದಿಗೆ ಶಾಸಕ ಗೌರಿಶಂಕರ್ ಆಗಮಿಸಿದರು. ಈ ವೇಳೆ ಶಾಸಕರು, ಸುರೇಶ್ ಗೌಡರ ಅಧಿಕಾರ ಅವಧಿಯಲ್ಲಿ ಬಗರ್ ಹುಕುಂ ಜಮೀನು ಮಂಜೂರು ಮಾಡುವಲ್ಲಿ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಅವರ ಮಧ್ಯೆ ಕಳೆದ ಒಂದು ವರ್ಷದಿಂದಲೂ ಸಣ್ಣಪುಟ್ಟ ವಿಚಾರಕ್ಕೂ ಫೈಟ್ ನಡೆಯುತ್ತಿದೆ. ಇದು ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದೆ. ಆದರೆ ಹಾಲಿ, ಮಾಜಿಗಳ ಕಿತ್ತಾಟದಿಂದ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ರೆ ಯುದ್ಧಕ್ಕೆ ಬಾ : ಶಾಸಕ ಗೌರಿಶಂಕರ್ ಕಿಡಿ

    ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ರೆ ಯುದ್ಧಕ್ಕೆ ಬಾ : ಶಾಸಕ ಗೌರಿಶಂಕರ್ ಕಿಡಿ

    – ಕಾಂಗ್ರೆಸ್ ಜೊತೆಗೆ ಮೈತ್ರಿಯೇ ಬೇಡ

    ತುಮಕೂರು: ರಾಜಣ್ಣ ನೀನೊಬ್ಬನೇ ಗಂಡಸಲ್ಲ, ತಾಕತ್ತಿದ್ದರೆ ಬಹಿರಂಗವಾಗಿ ಯುದ್ಧ ಮಾಡೋಣ ಬಾ ಎಂದು ಜೆಡಿಎಸ್ ಶಾಸಕ ಗೌರಿಶಂಕರ್, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.

    ನಗರದಲ್ಲಿ ಇಂದು ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ ಶಾಸಕರು, ರಾಜಕಾರಣದಲ್ಲಿ ಕೆ.ಎನ್.ರಾಜಣ್ಣ ಅವರು ಜಾತಿಯನ್ನು ಪ್ರಸ್ತಾಪಿಸುತ್ತಾರೆ. 2008ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನನ್ನನ್ನು ಗೋಲಿ ಆಡುವ ಹುಡುಗ ಎಂದು ಗೇಲಿ ಮಾಡಿದ್ದರು. ಆದರೆ ನಾನು ನಿಮ್ಮನ್ನು ಸೋಲಿಸಿ ಮನೆಗೆ ಕಳುಹಿಸಿದೆ. ಮಾತನಾಡುವಾಗ ಯೋಚನೆ ಮಾಡಿ ರಾಜಣ್ಣ ಅವರೇ ಎಂದು ಗುಡುಗಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇಲ್ಲದೇ ಇದ್ದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತಿದ್ದರು. ಸಿಎಂ ಕುಮಾರಸ್ವಾಮಿ, ದೇವೇಗೌಡರು ನನ್ನ ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ. ಈ ಮೈತ್ರಿ ಸಹವಾಸ ನಮಗೆ ಬೇಡ ಎಂದು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

    ಅಲ್ಲಿ ಆಪರೇಷನ್, ಅವರು ಗೋವಾಗೆ ಹೋದರು, ದೆಹಲಿಗೆ ಹೋದರು, ಸರ್ಕಾರ ಬಿದ್ದೊಯ್ತು ಎಂದು ಕೇಳುವುದೇ ಆಗಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಎಚ್.ಡಿ.ದೇವೇಗೌಡ ಅವರು ತುಮಕೂರಿನಲ್ಲಿ ಸೋತರು ಎಂದು ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದರು.