Tag: ಶಾಸಕ ಎಸ್.ಆರ್ ವಿಶ್ವನಾಥ್

  • ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಬೆಂಗಳೂರು: ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತೇವೆ. ಈ ಮೂಲಕ ಕೊಲೆ ಸಂಚಿನ ಹಿಂದೆ ಇರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆಯನ್ನು ಕೈಗೊಂಡಿದ್ದು, ಎಲ್ಲರಿಗೂ ನೋಟಿಸ್ ನೀಡುತ್ತಾರೆ. ನನಗೆ ನೋಟಿಸ್ ಬಂದಾಗ ನಾನು ತನಿಖೆಗೆ ಸಹಕರಿಸುವೆ ಎಂದರು.

    ಆಡಳಿತ ಪಕ್ಷದ ಶಾಸಕನ ವಿರುದ್ಧವೇ ಕೊಲೆ ಸಂಚು ನಡೆಸಿದ್ದರಿಂದ ಮುಖ್ಯಮಂತ್ರಿಗಳು ಕಠಿಣ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ. ವಿರೋಧ ಪಕ್ಷಗಳಿಂದಲೂ ಸಾಕಷ್ಟು ಬೆಂಬಲದ ಕರೆಗಳು ಬಂದಿವೆ. ಪಕ್ಷಭೇದ ಮರೆತು ತನಿಖೆ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್

    ದೂರಿನಲ್ಲಿ ಗೋಪಾಲಕೃಷ್ಣ ಹೆಸರನ್ನೊಂದೇ ಉಲ್ಲೇಖಿಸಿದ ಕುರಿತು ಮಾತನಾಡಿದ ಅವರು, ಕುಳ್ಳ ದೇವರಾಜು ಆಗಲಿ, ಗೋಪಾಲಕೃಷ್ಣ ಆಗಲಿ ಯಾರನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೆ ಮಾಡುತ್ತೇನೆ. ಈ ಪ್ರಕರಣದಲ್ಲಿ ಇನ್ನು ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ. ತನಿಖೆಯಿಂದಾಗಿ ಸಂಪೂರ್ಣ ಮಾಹಿತಿಯೂ ಬಹಿರಂಗವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಇಂದು ಚರ್ಚೆ ನಡೆಸಲಿದ್ದೇನೆ ಎಂದರು.

    ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಬುಧವಾರ ಎಫ್‍ಐಆರ್ ದಾಖಲಾಗಿದೆ. ಕೊಲೆಗೆ ಸ್ಕೆಚ್ ಸಂಬಂಧ ಕುಳ್ಳ ದೇವರಾಜ್, ಧರ್ಮ, ಮಂಜು ಎಂಬ ಮೂವರನ್ನು ವಶಕ್ಕೆ ಪಡೆದು ಪೊಲೀಸರು ಬಿಟ್ಟುಕಳಿಸಿದ್ದಾರೆ. ಇದನ್ನೂ ಓದಿ:ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

  • ಖಾಸಗಿ ಕಾಲೇಜಿನಲ್ಲಿ ಸಿಎಎ ವಿರೋಧಿಸಿ ಗೋಡೆ ಬರಹ

    ಖಾಸಗಿ ಕಾಲೇಜಿನಲ್ಲಿ ಸಿಎಎ ವಿರೋಧಿಸಿ ಗೋಡೆ ಬರಹ

    ಬೆಂಗಳೂರು: ಯಲಹಂಕದ ಖಾಸಗಿ ಕಾಲೇಜಿನಲ್ಲಿ ಸಿಎಎ ವಿರೋಧಿಸಿ ಗೋಡೆ ಬರಹಗಳನ್ನು ಬರೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಯಲಹಂಕದ 5ನೇ ಹಂತದಲ್ಲಿರುವ ಸೃಷ್ಟಿ ಇನ್ಸ್ ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಎದುರಿನ ಪಾರ್ಕ್ ಹಾಗೂ ಮೈದಾನದ ಗೋಡೆಗಳ ಮೇಲೆ ಸಿಎಎ ಹಾಗೂ ಪ್ರಧಾನಿ ಮೋದಿ ಕುರಿತ ವ್ಯಂಗ್ಯ ಚಿತ್ರಗಳು ಬಿಡಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದ್ದು, ಬುಧವಾರ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು, ಆ ಚಿತ್ರ ಹಾಗೂ ಬರಹಗಳನ್ನು ತೆರೆವುಗೊಳಿಸಿದ್ದಾರೆ.

    ಈ ಘಟನೆ ಹಿನ್ನೆಲೆ ಬುಧವಾರ ಸ್ಥಳಕ್ಕೆ ಆಗಮಿಸಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಪಕ್ಷದ ಕಾರ್ಯಕರ್ತರು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಕಾಲೇಜಿಗೆ ಭೇಟಿ ನೀಡಿದರು. ವಿಶ್ವನಾಥ್ ಭೇಟಿಗೆ ಕೆಲವು ವಿದ್ಯಾರ್ಥಿಗಳು ಹಾಗೂ ಸಿಎಎ ವಿರೋಧಿ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಡ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

    ಈ ಘಟನೆ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್, ಕಾಲೇಜಿನ ಸುತ್ತಲೂ ರಸ್ತೆಗಳಿವೆ. ಆದರೆ ವಿದ್ಯಾರ್ಥಿಗಳು ಕಾಲೇಜಿನೊಳಗೆ ಪಾರ್ಕಿಂಗ್ ಮಾಡುವ ಬದಲು ಫುಟ್‍ಪಾತ್ ಮತ್ತು ರಸ್ತೆ ಮೇಲೆ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಭೇಟಿ ನೀಡಿ ವಾಹನಗಳನ್ನು ಆವರಣದಲ್ಲಿ ನಿಲ್ಲಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು.

    ಅಲ್ಲದೆ ಮೋದಿ ಬಗ್ಗೆ ಆಕ್ಷೇಪಾರ್ಹ ಬರಹ ಮತ್ತು ಚಿತ್ರಗಳನ್ನು ಬರೆದಿದ್ದು, ಅವುಗಳನ್ನು ಅಳಿಸಿ ಹಾಕಲಾಗಿದೆ. ಯಾರು ಆ ಚಿತ್ರಗಳನ್ನು ಬಿಡಿಸಿದ್ದರು ಎನ್ನುವ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ತೆಗೆಸಲಾಗುತ್ತೆ. ವಿದ್ಯಾರ್ಥಿಗಳ ಡ್ರೆಸ್ ವಿಚಾರವಾಗಿ ನಾನ್ಯಾಕೆ ಮಾತಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಸೃಷ್ಟಿ ಕಾಲೇಜಿನ ವಿದ್ಯಾರ್ಥಿಗಳು ಸಿಎಎ ವಿರೋಧಿಸಿ ಪ್ರತಿಭಟಿಸಿದ್ದರು. ಆಗ ಪೊಲೀಸರು ಅಕ್ರಮವಾಗಿ ವಿದ್ಯಾರ್ಥಿಗಳನ್ನು ಬಂಧಿಸಿ ಇಟ್ಟಿದ್ದರು. ಪೊಲೀಸರ ಕ್ರಮದ ಬಗ್ಗೆ ಸೃಷ್ಟಿ ಕಾಲೇಜು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

  • ‘ಸುಳ್ಳು’ಗಳೇ ಮೊಯ್ಲಿಯ ಮನೆ ದೇವರು: ಶಾಸಕ ವಿಶ್ವನಾಥ್ ಲೇವಡಿ

    ‘ಸುಳ್ಳು’ಗಳೇ ಮೊಯ್ಲಿಯ ಮನೆ ದೇವರು: ಶಾಸಕ ವಿಶ್ವನಾಥ್ ಲೇವಡಿ

    ಚಿಕ್ಕಬಳ್ಳಾಪುರ: ಮಹಾನ್ ಸುಳ್ಳಿನ ಸರದಾರರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಎಂ.ವೀರಪ್ಪ ಮೊಯ್ಲಿ ಈ ಬಾರಿಯೂ ನಮ್ಮ ಕೆಲಸಗಳನ್ನ ಹೈಜಾಕ್ ಮಾಡಿಕೊಂಡಿದ್ದು, ಸುಳ್ಳುಗಳನ್ನೇ ತಮ್ಮ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ಮನೆ ದೇವರು ಅವರಿಗೆ ಕೈ ಕೊಡಲಿದ್ದಾರೆಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕೊತ್ತಕೋಟೆ ಗ್ರಾಮದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡು ಎಸ್.ಆರ್.ವಿಶ್ವನಾಥ್ ಮಾತನಾಡಿದರು. ನಮಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ಆದರೂ ಕೆಲ ವೇಳೆ ಸಣ್ಣ ಪುಟ್ಟ ಸುಳ್ಳು ಹೇಳುತ್ತೇವೆ. ಆದರೆ ಯಲಹಂಕ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ಮಾಡಿದ ಕೆಲಸಗಳನ್ನು ಸಂಸದ ವೀರಪ್ಪ ಮೊಯ್ಲಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಕಾಮಗಾರಿಗಳಿಗೂ ಅವರದ್ದೇ ಫೋಟೋ ಹಾಕಿಕೊಂಡಿದ್ದಾರೆ. ಇದನ್ನು ನಂಬಲು ಜನ ಏನು ಗುಗ್ಗು ಅಂದುಕೊಂಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

    ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿರುವ ಸಾಧನೆಗಳ ಪುಸ್ತಕವೇ ಅವರಿಗೆ ಮಾರಕವಾಗಲಿದೆ. ಸದಾ ಸುಳ್ಳನ್ನೇ ಹೇಳುತ್ತಿರುವ ಮೊಯ್ಲಿ ಇನ್ನು 10 ವರ್ಷವಾದರೂ ಎತ್ತಿನಹೊಳೆ ನೀರು ತರಲ್ಲ. ಅವರ ವಿರುದ್ಧ ಕ್ಷೇತ್ರದ ಜನ ಬಹಳಷ್ಟು ಬೇಸತ್ತು ಹೋಗಿದ್ದಾರೆ. ಸೀಟು ಹಂಚಿಕೆ ಬಗ್ಗೆ ದೋಸ್ತಿ ಪಕ್ಷಗಳು ಗುದ್ದಾಡುತ್ತಿರುವುದರಿಂದ ಮೊಯ್ಲಿ ಅವರಿಗೆ ಅವರಿಗೆ ಟಿಕೆಟ್ ಸಿಗುವುದೇ ಅನುಮಾನವಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಚುನಾವಣಾ ಉತ್ಸಾಹವೇ ಇಲ್ಲ. ಈ ಬಾರಿ ಬಿಜೆಪಿಗೆ ಒಳ್ಳೆಯ ವಾತಾವರಣವಿದ್ದು, ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರು ಅವರು ಈ ಬಾರಿ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಭರವಸೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv