Tag: ಶಾಸಕ ಎನ್. ಮಹೇಶ್

  • ಸಿಎಂ ಬಿಎಸ್‍ವೈ ಬದಲಾವಣೆ ಸೂಕ್ತ ತೀರ್ಮಾನವಲ್ಲ: ಶಾಸಕ ಎನ್.ಮಹೇಶ್

    ಸಿಎಂ ಬಿಎಸ್‍ವೈ ಬದಲಾವಣೆ ಸೂಕ್ತ ತೀರ್ಮಾನವಲ್ಲ: ಶಾಸಕ ಎನ್.ಮಹೇಶ್

    ಚಾಮರಾಜನಗರ: ಸಿಎಂ ಯಡಿಯೂರಪ್ಪ ಬದಲಾವಣೆ ಸೂಕ್ತ ತೀರ್ಮಾನವಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿದರೆ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಬೇಕು, ಅವರ ಬದಲಾವಣೆ ಸರಿಯಲ್ಲ. ಅನುಭವಿ ರಾಜಕಾರಣಿಯಾಗಿರುವ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೆಯವರನ್ನು ತಂದು ಕೂರಿಸಿದರೆ ಆಡಳಿತದ, ಕ್ಷೇತ್ರಗಳ ಪರಿಚಯ ಪಡೆದುಕೊಳ್ಳಲು 6-7 ತಿಂಗಳು ಬೇಕಾಗಲಿದೆ. ಉಳಿದ ಕೇವಲ ಎರಡು ವರ್ಷದಲ್ಲಿ ಈ 6-7 ತಿಂಗಳು ವೇಸ್ಟ್ ಆಗಲಿದೆ. ಅನುಭವಿ ಯಡಿಯೂರಪ್ಪ ಅವರೇ ಮುಂದುವರಿದರೆ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದಿದ್ದಾರೆ.

    ಕೊರೊನಾ, ಪ್ರವಾಹವನ್ನು ಸಮರ್ಥವಾಗಿ ಎದುರಿಸಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು. ಒಂದು ವೇಳೆ ಬದಲಾವಣೆಯಾದರೆ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ:‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

  • ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಣೆ

    ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಣೆ

    ಚಾಮರಾಜನಗರ: ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನದಲ್ಲಿ ನೂತನವಾಗಿ ಮನೆ ನಿರ್ಮಿಸಿಕೊಳ್ಳುವ ಸಲುವಾಗಿ ಕಾರ್ಯಾದೇಶ ಪತ್ರವನ್ನು ಮಾಜಿ ಸಚಿವ, ಶಾಸಕ ಎನ್.ಮಹೇಶ್ ವಿತರಣೆ ಮಾಡಿದರು.

    ಕೊಳ್ಳೇಗಾಲ ತಾಲೂಕಿನ ಐದು ಗ್ರಾಮಗಳಲ್ಲಿ ಒಟ್ಟು 27 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಾದೇಶ ಪತ್ರ ವಿತರಿಸಿದ ಶಾಸಕರು ಉತ್ತಮವಾದ ಮನೆ ನಿರ್ಮಿಸಿಕೊಳ್ಳುವಂತೆ ಸಂತ್ರಸ್ತರಿಗೆ ಸಲಹೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಮನೆ ಹಾಗೂ ಬೆಳೆಗಳನ್ನು ಕಳೆದುಕೊಂಡಿದ್ದ ಪ್ರವಾಹ ಸಂತ್ರಸ್ತರಿಗೆ ನೂತನ ಮನೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ. ಮನೆ ನಿರ್ಮಾಣಕ್ಕೆ ಕಳೆದ ಬಾರಿಗಿಂತ ಈ ಬಾರಿ ಐದು ಪಟ್ಟು ಹೆಚ್ಚು ಹಣವನ್ನು ನೀಡಲಾಗುತ್ತಿದ್ದು, ಯಡಿಯೂರಪ್ಪನವರ ಸರ್ಕಾರ ವಿಶೇಷ ಕಾಳಜಿ ವಹಿಸಿದೆ ಎಂದರು.

    ಕಳೆದ ಬಾರಿ ಪ್ರವಾಹ ಬಂದು ಮನೆ ಕಳೆದುಕೊಂಡವರಿಗೆ 98 ಸಾವಿರ ರೂ. ನೀಡಲಾಗಿತ್ತು. ಆದರೆ ಈ ಬಾರಿ 5 ಲಕ್ಷ ರೂ. ನೀಡಲಾಗಿದೆ. ದಾಸನಪುರ ಗ್ರಾಮದಲ್ಲಿ 15, ಹಳೇಅಣಗಳ್ಳಿ 3, ಹಳೇ ಹಂಪಾಪುರ 4 ಹಾಗೂ ಮುಳ್ಳೂರು ಗ್ರಾಮದಲ್ಲಿ 5 ಫಲಾನುಭವಿಗಳು ಸೇರಿ ಒಟ್ಟು 27 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.

    ಒಟ್ಟು ಹಣದಲ್ಲಿ ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿ 1 ಲಕ್ಷ ರೂ. ಕಳುಹಿಸಲಾಗಿದ್ದು ಮನೆಗಳ ನಿರ್ಮಾಣವಾಗುತ್ತಿದ್ದಂತೆ ಹಂತ ಹಂತವಾಗಿ 4 ಬಾರಿ ಹಣ ಬಿಡುಗಡೆಗೊಳಿಸಿ ಪೂರ್ಣಗೊಳಿಸಲಾಗುವುದು. ಇದರೊಂದಿಗೆ ಪ್ರವಾಹದಿಂದ ಭಾಗಶಃ ಹಾನಿಯಾದ ಒಟ್ಟು 15 ಮನೆಗಳಿಗೆ ತಲಾ 50 ಸಾವಿರ, ಅಲ್ಪ ಹಾನಿಯಾದ ಒಟ್ಟು 522 ಮನೆಗಳಿಗೆ ತಲಾ 10 ಸಾವಿರ, ದನದ ಕೊಟ್ಟಿಗೆಗಳಿಗೆ ತಲಾ 2,100 ರೂ. ಹಾಗೂ ಗುಡಿಸಲುಗಳ ಹಾನಿಗೆ ತಲಾ 4,100 ರೂ. ನಂತೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಮುಂದೆ ಪ್ರವಾಹ ಬಂದಂತಹ ಪರಿಸ್ಥಿತಿಯಲ್ಲಿ ಯಾವುದೇ ಹಾನಿಯಾಗದಂತೆ ನದಿ ತೀರದ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಮಾತುಕತೆ ನಡೆಸಲಾಗುತ್ತಿದ್ದು, ಅನುದಾನ ಬಿಡುಗಡೆಗೊಳಿಸುವ ಭರವಸೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಎಲ್.ನಾಗರಾಜು (ಕಮಲ್), ತಾ.ಪಂ ಅಧ್ಯಕ್ಷ ರಾಜೇಂದ್ರ, ತಹಶೀಲ್ದಾರ್ ಕೆ.ಕುನಾಲ್, ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ್ ಹಾಗೂ ಸೋಮಣ್ಣ ಉಪ್ಪಾರ್ ಹಾಜರಿದ್ದರು.

  • ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡಿ- ಎನ್.ಮಹೇಶ್‍ಗೆ ಮಾಯಾವತಿ ಸೂಚನೆ

    ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡಿ- ಎನ್.ಮಹೇಶ್‍ಗೆ ಮಾಯಾವತಿ ಸೂಚನೆ

    ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯವತಿ ಅವರು, ಪಕ್ಷದ ಏಕೈಕ ಶಾಸಕ ಎನ್.ಮಹೇಶ್ ಅವರಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಅವರು, ಸೋಮವಾರ ನಡೆಯಲಿರುವ ವಿಶ್ವಾಸ ಮತಯಾಚನೆ ವೇಳೆ ಮೈತ್ರಿ ಸರ್ಕಾರದ ಪರವಾಗಿ ಮತ ಹಾಕಿ ಎಂದು ನಿರ್ದೇಶನ ನೀಡಿದ್ದಾರೆ.

    ಮಾಯಾವತಿ ಅವರ ಈ ನಿರ್ಧಾರದಿಂದ ದೋಸ್ತಿ ನಾಯಕರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಇನ್ನು ಉಳಿದ ಅತೃಪ್ತ ಶಾಸಕರ ಮನವೊಲಿಸಲು ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಮುಂದಾಗಿದ್ದಾರೆ.

    ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಶಾಸಕ ಎನ್.ಮಹೇಶ್ ಅವರು, ಮೈತ್ರಿ ಸರ್ಕಾರವು ಸೋಮವಾರ ವಿಶ್ವಾಸ ಮತಯಾಚಿಸುತ್ತಿದೆ. ಈ ಕುರಿತು ಚರ್ಚೆಗಳೆಲ್ಲ ಮುಗಿದ ನಂತರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಮತ ವಿಭಜನೆಗೆ ಹಾಕಿದಾಗ ನಾನು ಕಲಾಪಕ್ಕೆ ಗೈರು ಹಾಜರಾಗುತ್ತೇನೆ ಎಂದು ಹೇಳಿದ್ದರು.

    ದೋಸ್ತಿ ಸರ್ಕಾರವನ್ನು ಬೆಂಬಲಿಸಬೇಕೆ, ಬೇಡವೇ ಎಂಬ ವಿಚಾರವಾಗಿ ಪಕ್ಷದ ಮುಖಂಡರಿಂದ ತಮಗೆ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬಂದಿರುವೆ ಎಂದು ಹೇಳಿದ್ದರು. ಶಾಸಕರ ಹೇಳಿಕೆಯಿಂದ ಮೈತ್ರಿ ನಾಯಕರಲ್ಲಿ ಮತ್ತಷ್ಟು ಆತಂಕ ಮೂಡಿತ್ತು. ಈಗ ಹೈಕಮಾಂಡ್‍ನಿಂದ ಬೆಂಬಲ ನೀಡುವಂತೆ ಆದೇಶ ಬಂದಿದ್ದರಿಂದ ದೋಸ್ತಿ ನಾಯಕರು ಸ್ವಲ್ಪ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

  • ಬಿಎಸ್‍ಪಿ ಶಾಸಕ ಮಹೇಶ್‍ಗೆ ಗಾಳ ಹಾಕಿದ ಬಿಜೆಪಿ

    ಬಿಎಸ್‍ಪಿ ಶಾಸಕ ಮಹೇಶ್‍ಗೆ ಗಾಳ ಹಾಕಿದ ಬಿಜೆಪಿ

    ಬೆಂಗಳೂರು: ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಬಿಜೆಪಿಗೆ ಬೆಂಬಲ ನೀಡಲು ಕೇಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಎನ್ ಮಹೇಶ್ ಅವರು ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅವರನ್ನು ಕರೆದು ವೈಯಕ್ತಿಕವಾಗಿ ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದರು.

    ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಬಗ್ಗೆ ಮಾತನಾಡಿದ ಬಿಎಸ್‍ವೈ, ನಾಳೆ ನಮ್ಮ ಕೆಲ ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡುತ್ತಾರೆ. ರಾಜಕೀಯ ಅಸ್ಥಿರತೆ ಉಂಟಾಗುವುದರಿಂದ ಬಹುಬೇಗ ನಿರ್ಧಾರ ಕೈಗೊಳ್ಳಲು ಮನವಿ ಮಾಡುತ್ತಾರೆ ಎಂದರು. ಅಲ್ಲದೇ ನಾಳೆ ಬೆಳಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಬಹುಮತ ಇಲ್ಲದ ಸಿಎಂ ಎಚ್‍ಡಿಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದ ಶಾಸಕ ಎನ್. ಮಹೇಶ್ ಅವರು, ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಬೆಂಬಲ ನೀಡಲ್ಲ. ಹಾಗಾಗಿ ಬಿಜೆಪಿ ಸೇರುವ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಭಾನುವಾರ ರಾತ್ರಿ ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆಯಲ್ಲಿ ಎನ್.ಮಹೇಶ್ ಭಾಗಿಯಾಗಿದ್ದರು. ಆದರೆ ಸಭೆಯಿಂದ ಅರ್ಧದಿಂದಲೇ ಎನ್.ಮಹೇಶ್ ಹೊರ ಬಂದಿದ್ದರು. ಈ ಸಂದರ್ಭದಲ್ಲಿಯೇ ಅವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಸದ್ಯ ಬಿಎಸ್‍ವೈ ಅವರು ನಾನು ಇದುವರೆಗೂ ಅವರ ಬಳಿ ಮಾತನಾಡಿಲ್ಲ. ಶೀಘ್ರವೇ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.