Tag: ಶಾಸಕ ಎಂಪಿ ಅಪ್ಪಚ್ಚು ರಂಜನ್

  • ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    – ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದಂತೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನ ಎರಡು ಗಂಟೆ ಬಳಿಕ ಸಂಪೂರ್ಣ ಬಂದ್‍ಗೆ ಮುಂದಾಗಿದೆ.

    ಕಳೆದ ಒಂದು ತಿಂಗಳಿಂದ ಕೊಡಗಿನಲ್ಲಿ ಸ್ವಲ್ಪ ನಿಯಂತ್ರಣದಲ್ಲಿದ್ದ ಕೊರೊನಾ ಮಹಾಮಾರಿ ಮೂರು ದಿನಗಳಲ್ಲಿ ಎರಡಕಿಯನ್ನು ದಾಟಿದೆ. ಇದೀಗ ಬರೋಬ್ಬರಿ 30 ಪ್ರಕರಣಗಳು ಜಿಲ್ಲೆಯಲ್ಲಿದ್ದು, ಆ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಜಿಲ್ಲಾಸ್ಪತ್ರೆ ಜನರಲ್ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಮತ್ತು ಖಾಸಗಿ ಕ್ಲಿನಿಕ್‍ಗಳ ಸಿಬ್ಬಂದಿಗೂ ಕೊರೊನಾ ಸೋಂಕು ಹರಡುತ್ತಿರುವುದು ಜನರನ್ನು ಮತ್ತಷ್ಟು ನಿದ್ದೆಗೆಡಿಸಿದೆ.

    ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದ ನೂರಾರು ಜನರು ಜಿಲ್ಲೆಯ ಹಲವೆಡೆ ಓಡಾಡಿದ್ದಾರೆ. ಹೀಗಾಗಿ ಇನ್ನೆಷ್ಟು ಜನರಿಗೆ ಈ ಮಹಾಮಾರಿ ವಕ್ಕರಿಸಿದೆಯೋ ಗೊತ್ತಿಲ್ಲ. ಮತ್ತೊಂದೆಡೆ ಜಿಲ್ಲೆಯ ಎರಡು ಸೋಂಕಿತರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ದರೂ ಮಹಾಮಾರಿ ಹೆಗಲೇರಿದ್ದು ಹೇಗೆ ಎಂಬುವುದು ಆಶ್ಚರ್ಯವಾಗಿದೆ. ವ್ಯಾಪಾರ ವಹಿವಾಟುಗಳು ಮುಂದುವರಿದರೆ ಇನ್ನಷ್ಟು ಸಮಸ್ಯೆ ಎದುರಾಗಬಹುದು ಎಂಬ ಉದ್ದೇಶದಿಂದ ಇಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮತ್ತು ಸುನಿಲ್ ಸುಬ್ರಹ್ಮಣಿ ನೇತೃತ್ವದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಮಿತಿ ಸಭೆ ನಡೆಸಿ, ಜಿಲ್ಲೆಯಲ್ಲಿ ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರವೇ ವ್ಯಾಪಾರ ವಹಿವಾಟು ನಡೆಸಿ ಬಳಿಕ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.

    ಇತ್ತ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತ್ರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಬೇಕಾದರೆ ಸಂಪೂರ್ಣ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ. ಈಗಾಗಲೇ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

  • ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಮಹಾಮಳೆಗೆ ಕೊಡಗಿನ ಕಾವೇರಿ ನದಿ ತೀರದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನದಿ ತಟದ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

    ಕೊಪ್ಪದ ಕಾವೇರಿ ಸೇತುವೆ ಕೆಳ ಭಾಗದಲ್ಲಿ ಗಣಪತಿ ಪೂಜೆ ಸಲ್ಲಿಸಿದ ಬಳಿಕ ಜೆಸಿಬಿಯಲ್ಲಿ ಕುಳಿತ ಶಾಸಕ ರಂಜನ್ ಹೂಳೆತ್ತುವ ಕೆಲಸಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾತಾನಾಡಿದ ಅವರು, 85 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ದಂಡೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಣ್ಣ ಮಟ್ಟದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಹೂಳೆತ್ತಲು ಅವಕಾಶ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದಲೂ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಕೆಲಸಕ್ಕೆ ಕಳೆದ ಸಿಎಂ ಕುಮಾರಸ್ವಾಮಿ ಅವಧಿಯಲ್ಲೇ 75 ಕೋಟಿ ಮೀಸಲಿಡಲಾಗಿತ್ತು. ಅಂದಾಜು ಪಟ್ಟಿ ತಯಾರಿಸಿದಾಗ 130 ಕೋಟಿಯಷ್ಟು ಅಗತ್ಯವಿತ್ತು ಎಂದರು.

    ಕೇವಲ ಕುಶಾಲನಗರ ಮಾತ್ರವಷ್ಟೇ ಅಲ್ಲ, ಹಟ್ಟಿ ಹೊಳೆ, ಮುಕ್ಕೋಡ್ಲು, ಮಾದಾಪುರ, ಹಮ್ಮಿಯಾಲ ಭಾಗದಲ್ಲಿ ಹೊಳೆಯಲ್ಲಿ ಹೂಳು ತುಂಬಿದೆ. ಪರಿಣಾಮ ಹೊಳೆ ನೀರು ದಿಕ್ಕು ಬದಲಿಸಿ ಹರಿಯುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರವಾಹದಲ್ಲಿ ಜಿಲ್ಲೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯಿತು. ಪ್ರವಾಹದಿಂದ ಕುಶಾಲನಗರ ಮುಳುಗಬೇಕಾದ ಪರಿಸ್ಥಿತಿಯನ್ನು ನೋಡಬೇಕಾಯಿತು. ಪ್ರವಾಹ ತಡೆಗಟ್ಟುವ ಉದ್ದೇಶದ ಸೇವಾ ಭಾವನೆಯಿಂದ ಹೂಳು ತೆಗೆಯುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಅದರಲ್ಲಿ ಯಾವುದೇ ಲೋಪಗಳು ಆಗದಂತೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.