Tag: ಶಾಸಕ ಆನಂದ್ ಸಿಂಗ್

  • ಸರ್ಕಾರ ಹೋದ್ರೆ ಬೇರೆ ಸರ್ಕಾರ ಬರುತ್ತೆ, ನನ್ನ ಪತಿ ಹೋದ್ರೆ – ಕೈ ನಾಯಕರಿಗೆ ಆನಂದ್ ಸಿಂಗ್ ಪತ್ನಿ ಕ್ಲಾಸ್

    ಸರ್ಕಾರ ಹೋದ್ರೆ ಬೇರೆ ಸರ್ಕಾರ ಬರುತ್ತೆ, ನನ್ನ ಪತಿ ಹೋದ್ರೆ – ಕೈ ನಾಯಕರಿಗೆ ಆನಂದ್ ಸಿಂಗ್ ಪತ್ನಿ ಕ್ಲಾಸ್

    ಬೆಂಗಳೂರು: ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆಯಲು ಪಕ್ಷದ ಶಾಸಕರನ್ನು ಬಿಡದಿಯ ಈಗಲ್ಟನ್ ರೆಸಾರ್ಟಿಗೆ ಕರೆದೊಯ್ದ ಕಾಂಗ್ರೆಸ್ ನಾಯಕರಿಗೆ ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ತೀವ್ರ ತಲೆನೋವಾಗಿ ಪರಿಣಮಿಸಿದೆ.

    ವಿಧಾನಸಭಾ ಅಧಿವೇಶನಕ್ಕೆ ಗೈರು ಹಾಜರಿ ಆಗಿದ್ದ ಬಂಡಾಯ ಶಾಸಕರ ಮನವೊಲಿಕೆ ಕಾರ್ಯ ಒಂದೆಡೆಯಾದರೆ, ಶಾಸಕ ಗಣೇಶ್ ಹಲ್ಲೆ ಪ್ರಕರಣದಲ್ಲಿ ಆನಂದ್ ಸಿಂಗ್ ಅವರ ಮನವೊಲಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಆದರೆ ಕಾಂಗ್ರೆಸ್ ನಾಯಕರ ಸಂಧಾನ ಪ್ರಕ್ರಿಯೆಗೆ ಶಾಸಕ ಆನಂದ್ ಸಿಂಗ್ ಕುಟುಂಬ ಒಪ್ಪಿಗೆ ನೀಡದೇ ಗಣೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

    ಘಟನೆ ಸಂಬಂಧ ಶಾಸಕ ಆನಂದ್ ಸಿಂಗ್ ಅವರ ಪತ್ನಿಯನ್ನು ಕಾಂಗ್ರೆಸ್ ನಾಯಕರು ಮನವೊಲಿಸಲು ಪ್ರಯತ್ನ ನಡೆಸಿದ್ದು, ಪ್ರಕರಣ ನಡೆದ ದಿನದಿಂದಲೂ ಕೂಡ ಸಚಿವ ಜಮೀರ್ ಅಹ್ಮದ್ ಅವರು ಈ ಕಾರ್ಯದಲ್ಲೇ ತೊಡಗಿದ್ದರು. ಆದರೆ ಈ ವೇಳೆ ಆನಂದ್ ಸಿಂಗ್ ಅವರ ಪತ್ನಿ ಲಕ್ಷ್ಮಿ ಸಿಂಗ್ ಅವರ ರೌದ್ರಾವತಾರಕ್ಕೆ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೊಂದು ಸರಿ ಕ್ಷಮಿಸಿ ಬಿಡಿ. ಇದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಕೇಳಿಕೊಂಡರೂ ಕೇರ್ ಮಾಡದ ಪತ್ನಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ರೀತಿಯಲ್ಲಿ ಈ ಘಟನೆಯನ್ನು ತೆಗೆದುಕೊಂಡಿದ್ದಾರೆ.

    ಇದು ನನ್ನ ಗಂಡನ ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಸರ್ಕಾರ ಹೋದರೆ ಬೇರೆ ಸರ್ಕಾರ ಬರುತ್ತೆ. ಆದರೆ ನನ್ನ ಗಂಡ ಹೋದರೆ ಬೇರೆ ಗಂಡನನ್ನು ತರಲು ಆಗುತ್ತಾ ಎಂದು ಕೈ ನಾಯಕರ ಮುಖಕ್ಕೆ ಹೊಡೆದಂತೆ ಪ್ರಶ್ನಿಸಿದ್ದಾರೆ. ಅಲ್ಲದೇ ರಾಜಕೀಯವೇ ಬೇರೆ ಈ ಘಟನೆಯೇ ಬೇರೆ. ಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆ ಗಣೇಶ್‍ನನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದ್ದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಶಾಸಕ ಆನಂದ್ ಸಿಂಗ್ ಅವರು ಕಾಂಗ್ರೆಸ್ ನಾಯಕರ ಮಾತಿಗೆ ಒಪ್ಪಿಗೆ ನೀಡಿದ್ದರೂ ಲಕ್ಷ್ಮಿ ಸಿಂಗ್ ಮತ್ತು ಅವರ ಕುಟುಂಬ ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ. ಪ್ರಕರಣದಲ್ಲಿ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಸಂಧಾನ ಮಾಡಿ ಗಣೇಶ್‍ರನ್ನು ಪಕ್ಷಕ್ಕೆ ಮತ್ತೆ ಕರೆತರುವ ಉದ್ದೇಶ ಕಾಂಗ್ರೆಸ್ ನಾಯಕರಿಗೆ ಇತ್ತು. ಅಲ್ಲದೇ ಶಾಸಕ ಗಣೇಶ್ ಕೂಡ ಸಂಧಾನ ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಲಕ್ಷ್ಮಿ ಸಿಂಗ್ ಅವರ ಖಡಕ್ ಮಾತಿಗೆ ಕೈ ನಾಯಕರು ಏನು ಮಾತನಾಡದೇ ಈಗ ಮೌನಕ್ಕೆ ಜಾರಿದ್ದು ಮುಂದೆ ಏನು ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಳ್ಳಾರಿ ಕೈ ನಾಯಕರ ಕಿತ್ತಾಟಕ್ಕೆ ಬ್ರೇಕ್ – ಕೆಪಿಸಿಸಿ ಮೊದಲ ಹಂತದ ಸಂಧಾನ ಸಕ್ಸಸ್

    ಬಳ್ಳಾರಿ ಕೈ ನಾಯಕರ ಕಿತ್ತಾಟಕ್ಕೆ ಬ್ರೇಕ್ – ಕೆಪಿಸಿಸಿ ಮೊದಲ ಹಂತದ ಸಂಧಾನ ಸಕ್ಸಸ್

    ಬಳ್ಳಾರಿ: ಬಳ್ಳಾರಿ ಕಾಂಗ್ರೆಸ್ ನಾಯಕರ ನಡುವೆ ಆರಂಭವಾಗಿದ್ದ ಕಿತ್ತಾಟಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಬ್ರೇಕ್ ಹಾಕಲು ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು, ಶಾಸಕ ಆನಂದ್ ಸಿಂಗ್ ಹಾಗೂ ಭೀಮಾನಾಯ್ಕ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಯಶಸ್ವಿಯಾಗಿದ್ದಾರೆ.

    ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಜಗಳ ನಡೆಯಲು ಪ್ರಮುಖ ಕಾರಣವೇ ಭೀಮಾನಾಯ್ಕ್ ನಡುವಿನ ಅಸಮಾಧಾನ. ಸದ್ಯ ಇಬ್ಬರ ನಡುವಿನ ಗುದ್ದಾಟಕ್ಕೆ ಬ್ರೇಕ್ ಹಾಕಿರುವ ಕೆಪಿಸಿಸಿ ಮೊದಲ ಹಂತವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಆನಂದ್ ಸಿಂಗ್ ಅಭಿಮಾನಿ ಬಳಗ ತೆರೆದಿದ್ದ ಕಚೇರಿಯನ್ನು ತೆರವುಗೊಳಿಸಲು ಯಶಸ್ವಿಯಾಗಿದ್ದಾರೆ.

    ಕಳೆದ ಮೂರು ತಿಂಗಳ ಹಿಂದೆ ಶಾಸಕ ಭೀಮಾನಾಯ್ಕ್ ಕ್ಷೇತ್ರದಲ್ಲಿ ಆನಂದ್ ಸಿಂಗ್ ಅಭಿಮಾನಿಗಳು ಕಚೇರಿ ತೆರೆದು ಸಾಮಾಜಿಕ ಕಾರ್ಯಗಳನ್ನು ನಡೆಸಲು ಆರಂಭಿಸಿದ್ದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಸಂಧಾನ ಸಫಲವಾದ ಕಾರಣ ಇಂದು ಬೆಳಗ್ಗೆ ಕಚೇರಿಯನ್ನು ತೆರವುಗೊಳಿಸಲಾಗಿದೆ.

    ಇತ್ತ ಆನಂದ್ ಸಿಂಗ್ ಹಾಗು ಭೀಮಾನಾಯ್ಕ್ ನಡುವೆ ಸಂಧಾನ ಯಶಸ್ವಿಯಾಗುತ್ತಿದಂತೆ ಕೆಪಿಸಿಸಿ ನಾಯಕರು ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಸಕರ ಬಡಿದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಗಲಾಟೆ ನಡೆದ ಬಳಿಕ ಡಿಕೆಶಿ ಸ್ಥಳಕ್ಕೆ ಬಂದಿದ್ರು : ಸಚಿವ ತುಕರಾಂ

    ಶಾಸಕರ ಬಡಿದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಗಲಾಟೆ ನಡೆದ ಬಳಿಕ ಡಿಕೆಶಿ ಸ್ಥಳಕ್ಕೆ ಬಂದಿದ್ರು : ಸಚಿವ ತುಕರಾಂ

    – ಎರಡು ಕುಟುಂಬಗಳ ನಡುವೆ ರಾಜಿ ಮಾಡಿಸಲು ಯತ್ನ!

    ಬಳ್ಳಾರಿ: ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ ಮಾರಾಮಾರಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಗಲಾಟೆ ನಡೆದ ದಿನದಂದು ಸಚಿವ ಡಿಕೆ ಶಿವಕುಮಾರ್ ಗಲಾಟೆ ನಡದೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಗಲಾಟೆ ನಡೆದ ಬಳಿಕ ಡಿಕೆ ಶಿವಕುಮಾರ್ ಅವರು ರೆಸಾರ್ಟಿಗೆ ಆಗಮಿಸಿದ್ದರು ಎಂದು ಸಚಿವ ತುಕಾರಾಂ ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಘಟನೆ ನಡೆದ ದಿನ ನಾನು ರಾತ್ರಿ 10 ಗಂಟೆ ವೇಳೆಗೆ ಮಲಗಿದ್ದೆ. ಆದರೆ 4.45ರ ವೇಳೆಗೆ ಗಲಾಟೆ ನಡೆದ ಸದ್ದು ಕೇಳಿ ಹೊರಗೆ ಬಂದೆ. ಆಗ ತನ್ವೀರ್ ಸೇಠ್, ರಾಮಪ್ಪ, ರಘುಮೂರ್ತಿ ಅವರು ನಿಂತಿದ್ದರೆ ಗಣೇಶ್ ಮತ್ತೊಂದು ಕಡೆ ನಿಂತಿದ್ದರು. ಗಲಾಟೆಯ ಬಗ್ಗೆ ತಿಳಿದು ಈ ರೀತಿ ಮಾಡಬಾರದು ಎಂದು ನಾನು ಗಣೇಶ್‍ಗೆ ಹೇಳಿದೆ. ಆದರೆ ಆತ ಸಿಟ್ಟಿನಿಂದಿದ್ದ ಕಾರಣ ಹೆಚ್ಚು ಮಾತನಾಡದೇ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದೆವು. ಆ ಬಳಿಕ ಸಚಿವ ಡಿಕೆ ಶಿವಕುಮಾರ್ ಅವರು ಗಣೇಶ್‍ರನ್ನು ರೂಮ್‍ಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿದರು ಎಂದು ತಿಳಿಸಿದ್ದಾರೆ.

    ನಾನು ಹೋಟೆಲಿನ ಗ್ಯಾಲರಿಗೆ ಬರುವ ವೇಳೆಗೆ ಗಲಾಟೆ ನಡೆದಿತ್ತು. ಆದ್ದರಿಂದ ಏಕೆ ಘಟನೆ ನಡೆಯಿತು ಎಂದು ನನಗೆ ತಿಳಿದಿಲ್ಲ. ಸದ್ಯ ಪಕ್ಷದ ವಿಚಾರಣೆಗೆ ಸಮಿತಿ ನೇಮಿಸಿದೆ. ಅಲ್ಲಿ ಕೂಡ ವಿವರಣೆ ನೀಡಿದ್ದೇನೆ. ಸತ್ಯ ಏನಿದೆ ಎಂದು ಹೇಳಿದ್ದೇನೆ. ಮುಂದೆ ಏನು ಮಾಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಪಕ್ಷ ಈಗಾಗಲೇ ಗಣೇಶ್ ಅವರನ್ನು ಅಮಾನತು ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಫೇಸ್‍ಬುಕ್ ಪೋಸ್ಟ್ ಮಾಹಿತಿಯಂತೆ ನಿಮ್ಮ ಸಚಿವ ಸ್ಥಾನ ಕಾರಣಕ್ಕೂ ಜಗಳ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಯಾವುದೇ ಜಾತಿ ಪ್ರಶ್ನೆ ಬರುವುದಿಲ್ಲ. ಪಕ್ಷ ಹೈಕಮಾಂಡ್ ಜವಾಬ್ದಾರಿಯನ್ನು ನೀಡಿದೆ. ಉಳಿದದ್ದು ಅವರ ವೈಯಕ್ತಿಕ ವಿಚಾರ. ಎರಡು ಕುಟುಂಬಗಳ ಜೊತೆ ಕುಳಿತು ಮಾತನಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಘಟನೆ ಬಗ್ಗೆ ಏನೂ ಮಾಡಲು ಸಾಧ್ಯವೋ ಮಾಡೋಣ. ಸಮಾಜವನ್ನ ಒಂದುಗೂಡಿಸಿಕೊಂಡು ಹೋಗಬೇಕಾಗಿದೆ ಎಂದರು.

    ಇತ್ತ ಘಟನೆ ನಡೆದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಡಿಕೆ ಶಿವಕುಮಾರ್, ಯಾವ ಶಾಸಕರು ಮಾರಾಮಾರಿ ಮಾಡಿಕೊಂಡಿಲ್ಲ. ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನಾವೆಲ್ಲರು ನಿನ್ನೆ ಬಳ್ಳಾರಿಯಲ್ಲಿ ನಡೆದ ಸಭೆ ಮುಗಿಸಿಕೊಂಡು, ಅಮಿತ್ ಪಾಳ್ಯ ಅವರ ಮದುವೆ ಆರತಕ್ಷತೆಗೆ ಹೋಗಿ ವಾಪಾಸ್ಸಾಗಿದ್ದೇವೆ. ಬಳಿಕ ಎಲ್ಲಾ ಊಟ ಮಾಡಿ ಮಲಗಿದ್ದಾರೆ. ಆನಂದ್ ಸಿಂಗ್ ಅವರು ಮದುವೆಗೆ ಹೋಗಿದ್ದಾರೆ. ಸುಮ್ಮನೆ ಗಲಾಟೆಯಾಯ್ತು, ಮಾರಮಾರಿಯಾಯ್ತು ಅಂತ ಮಾಧ್ಯಮದವರೇ ಸುದ್ದಿ ಮಾಡಿಕೊಂಡಿದ್ದೀರಿ. ನಿಮಗೆ ಯಾರೋ ಮಿಸ್‍ಲೀಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ನಡೆದ ಜಗಳಕ್ಕೆ ಬಿಜೆಪಿ ‘ಆಪರೇಷನ್ ಕಮಲ’ ಕಾರಣ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ಸಭೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿ ಮಾತನಾಡಿದ ಡಿಕೆ ಸುರೇಶ್ ಅವರು, ಬಿಜೆಪಿಯ ಆಪರೇಷನ್ ಕಮಲದಲ್ಲಿ ಹಣದ ವ್ಯವಹಾರವೂ ನಡೆದಿದ್ದು, ರೆಸಾರ್ಟಿನಲ್ಲಿ ಶಾಸಕರ ನಡುವೆ ಗಲಾಟೆಗೆ ಬಿಜೆಪಿಯೇ ಕಾರಣ. ಅವರು ಕೈಗೊಂಡಿದ್ದ ಆಪರೇಷನ್ ಕಮಲದಿಂದಲೇ ನಾವು ರೆಸಾರ್ಟಿಗೆ ಹೋಗಿದ್ದು, ಇಲ್ಲವಾದರೆ ರೆಸಾರ್ಟಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮಗಳ ವರದಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾಧ್ಯಮದವರು ಕೆಲವು ವಿಷಯ ಮುಚ್ಚಿಟ್ಟಿದ್ದಾರೆ. ಆಪರೇಷನ್ ಕಮಲ ಯಾವ ಹಂತದಲ್ಲಿ ನಡೆಯುತ್ತಿದೆ. ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇದೆ. ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಶಾಸಕರ ನಡುವಿನ ಗಲಾಟೆಯ ಬಗ್ಗೆ ಸಮರ್ಥನೆ ನೀಡಲು ಯತ್ನಿಸಿ ಗೊಂದಲ ವಾತಾವರಣ ನಿರ್ಮಾಣ ಮಾಡುವಂತೆ ಹೇಳಿಕೆ ನೀಡಿದರು.

    ಇದೇ ವೇಳೆ ಆಪರೇಷನ್ ಕಮಲದಲ್ಲಿ ನಡೆದಿದೆ ಎಂದು ಹೇಳುತ್ತಿರುವ ಹಣಕಾಸಿನ ವ್ಯವಹಾರದ ಬಗ್ಗೆ ನಿಮಗೆ ಇರುವ ಮಾಹಿತಿ ನೀಡಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಎಲ್ಲವೂ ಮಾಧ್ಯಮಗಳಿಗೆ ತಿಳಿದಿದೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಉಲ್ಟಾ ಹೊಡೆದ ಡಿಕೆ ಸುರೇಶ್: ಶಾಸಕ ಆನಂದ್ ಸಿಂಗ್ ಅವರು ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ್ದಾರೆ ಎಂದು ಅಂದು ಮಾಹಿತಿ ನೀಡಿದ್ದ ಡಿಕೆ ಸುರೇಶ್ ಅವರು, ಇಂದು ಕಾಂಗ್ರೆಸ್ ಶಾಸಕ ಶಾಸಕರ ನಡುವಿನ ಗಲಾಟೆಗೆ ಆಪರೇಷನ್ ಕಮಲವೇ ಕಾರಣ ಎಂದು ಹೇಳಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಯಾವುದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನ ಪ್ರಕಾರ ಪೊಲೀಸರು ಕ್ರಮ ತೆಗದುಕೊಳ್ಳುತ್ತಾರೆ. ಆನಂದ್ ಸಿಂಗ್ ಬಹುಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

    ಆಪರೇಷನ್ ಕಮಲದ ಬಗ್ಗೆ ಪದೇ ಪದೇ ದಾಖಲೆ ಬಿಡುಗಡೆ ಮಾಡುತ್ತೇವೆ. ಈ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಸೂಕ್ತ ಸಮಯ ಬಂದರೆ ಬಿಡುಗಡೆ ಮಾಡುತ್ತೇವೆ ಎಂದು ಜಾರಿಕೊಂಡಿದ್ದರು. ಆದರೆ ಇದುವರೆಗೂ ದೋಸ್ತಿ ಸರ್ಕಾರದ ಯಾವುದೇ ನಾಯಕರು ಕೂಡ ಅಧಿಕೃತವಾಗಿ ಹಣಕಾಸಿನ ವ್ಯವಹಾದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.

    https://www.youtube.com/watch?v=yHwEYzuJJPM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ, ಯಾವುದೇ ಒತ್ತಡವಿಲ್ಲ: ರಾಮನಗರ ಎಸ್‍ಪಿ

    ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ, ಯಾವುದೇ ಒತ್ತಡವಿಲ್ಲ: ರಾಮನಗರ ಎಸ್‍ಪಿ

    ರಾಮನಗರ: ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ ಮಾಡುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಭಾನೋತ್ ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದು, ನಾಲ್ಕು ತಂಡಗಳು ಪ್ರತ್ಯೇಕವಾಗಿ ಶಾಸಕರ ಹುಡುಕಾಟದಲ್ಲಿ ನಿರತವಾಗಿವೆ. ಪ್ರಕರಣ ನಡೆದ ಬಳಿಕ ನಮಗೆ ಯಾವುದೇ ದೂರು ಹಾಗೂ ಎಂಎಲ್‍ಸಿ ಬಂದಿರಲಿಲ್ಲ. ಎಂಎಲ್‍ಸಿ ಬಂದ ಬಳಿಕ ಸ್ಥಳೀಯ ಪೊಲೀಸರನ್ನ ಕಳುಹಿಸಿ ಶಾಸಕ ಆನಂದ್ ಸಿಂಗ್ ಹೇಳಿಕೆ ಪಡೆದು ಎಫ್‍ಐಆರ್ ದಾಖಲಿಸಲಾಗಿತ್ತು. ಶಾಸಕ ಆನಂದ್ ಸಿಂಗ್ ನೀಡಿರುವ ಹೇಳಿಕೆಯಲ್ಲಿ ಸಚಿವ ತುಕಾರಾಂ, ಶಾಸಕರಾದ ತನ್ವೀರ್ ಸೇಠ್, ರಘುಮೂರ್ತಿ, ರಾಮಪ್ಪರ ಹೆಸರನ್ನ ಎಫ್‍ಐಆರ್‍ನಲ್ಲಿ ನಮೂದಿಸಲಾಗಿದ್ದು ಘಟನೆಯಲ್ಲಿ ಪ್ರತ್ಯಕ್ಷವಾಗಿ ನೋಡಿದ್ದನ್ನ ಹೇಳಿಕೆ ಪಡೆಯಲಿದ್ದೇವೆ. ಜೊತೆಗೆ ಘಟನೆ ನಡೆದ ವೇಳೆ ಇದ್ದವರು, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆದು ಕ್ರಮ ಜರುಗಿಸುವುದಾಗಿ ವಿವರಿಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಉಳಿದಂತೆ ಪ್ರಕರಣ ಸಂಬಂಧ ಈಗಾಗಲೇ ರೆಸಾರ್ಟಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಗೆ ಯಾವುದೇ ರಾಜಕೀಯ ಒತ್ತಡ ಹೇರಿಲ್ಲ, ಸಂಪೂರ್ಣವಾಗಿ ತನಿಖೆ ನಡೆಸುತ್ತೇವೆ. ಅಲ್ಲದೇ ಶಾಸಕ ಗಣೇಶ್ ಮೇಲೆ ರೌಡಿಶೀಟರ್ ತೆರೆಯುವ ಸಂಬಂಧ ಯಾವ ಕ್ರಮ ಜರುಗಿಸಬೇಕು ಎಂಬುವುದನ್ನು ನೋಡುತ್ತೇವೆ. ಈ ಬಗ್ಗೆ ಬಳ್ಳಾರಿ ಎಸ್‍ಪಿ ಅವರೊಂದಿಗೆ ಮಾಹಿತಿ ಪಡೆಯುತ್ತಿದ್ದು ಮಾಹಿತಿ ಬಂದ ಬಳಿಕ ರೌಡಿ ಶೀಟರ್ ತೆರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    ಜನವರಿ 19 ರ ರಾತ್ರಿ ಈಗಲ್ಟನ್ ರೆಸಾರ್ಟಿನಲ್ಲಿ ಗಲಾಟೆ ಮಾಡಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಇತ್ತ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು ಕೂಡ ಶಾಸಕ ಗಣೇಶ್ ಘಟನೆ ಬಗ್ಗೆ ಮಾಹಿತಿ ನೀಡಿ ಫೇಸ್‍ಬುಕ್ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಶಾಸಕ ಆನಂದ್ ಸಿಂಗ್ ತಮ್ಮ ಮೇಲೆ ಮೊದಲು ಹಲ್ಲೆ ಮಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಗಣೇಶ್ ಮೇಲಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಘಟನೆ ವೇಳೆ ಸ್ಥಳದಲ್ಲಿದ್ದ ಖಾಸಗಿ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಬಳಿಕ ಅವರನ್ನು ಬಚ್ಚಿಡಲಾಗಿದೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. 

    ಕಂಪ್ಲಿ ಶಾಸಕ ಗಣೇಶ್ ಹಾಗು ಆನಂದ್ ಸಿಂಗ್ ನಡುವಿನ ಬಡಿದಾಟದ ವೇಳೆ ಗಣೇಶ್ ನಿಯೋಜಿಸಿದ್ದ ಖಾಸಗಿ ಗನ್‍ಮ್ಯಾನ್ ಶರಣಪ್ಪ ಕೂಡ ಇದ್ದರು. ಈ ನಡುವೆ ಗಣೇಶ್ ಕೋಪದಲ್ಲಿ ಗನ್‍ಮ್ಯಾನ್ ಬಳಿ ಇದ್ದ ಗನ್ ಕೇಳಿದ್ದಾರೆ. ಗನ್ ನೀಡಿದ್ರೆ ಅನಾಹುತ ಸಂಭವಿಸಬಹುದು ಎಂದು ತಿಳಿದು ಸಮಾಧಾನ ಮಾಡಲು ಶರಣಪ್ಪ ಯತ್ನಿಸಿದ್ದಾರೆ. ಗನ್ ನೀಡದ್ದಕ್ಕೆ ಮತ್ತಷ್ಟು ಕೋಪಗೊಂಡಿದ್ದ ಗಣೇಶ್, ಶರಣಪ್ಪ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಗಣೇಶ್ ರೌದ್ರಾವತಾರವನ್ನು ಕಂಡ ಕಾಂಗ್ರೆಸ್ ಶಾಸಕರು ಕ್ಷಣ ಕಾಲ ಶಾಕ್‍ಗೆ ಒಳಗಾಗಿದ್ದು, ಆ ಬಳಿಕ ಗಲಾಟೆಯನ್ನು ಬಿಡಿಸಿ ಗಣೇಶ್ ಅವರನ್ನು ರೂಮಿಗೆ ಕಳುಹಿಸಿದ್ದಾರೆ. ಆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಕೊಂಡ್ಯೊಯಲು ಹೋಟೆಲ್ ಸಿಬ್ಬಂದಿ ಕಾರ್ಯ ಪ್ರವೃತ್ತರಾದರೆ, ಇತ್ತ ಘಟನೆಯಲ್ಲಿ ಗಾಯಗೊಂಡಿದ್ದ ಗನ್ ಮ್ಯಾನ್‍ರನ್ನು ಕೂಡ ಹೋಟೆಲ್ ನಿಂದ ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಶಾಸಕ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಶರಣಪ್ಪ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಆಗಿರುವ ಹಾಗೂ ಶರಣಪ್ಪ ಮೇಲೆ ಹಲ್ಲೆ ಮಾಡಿದ್ದಕ್ಕೆ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗುತ್ತದೆ ಎನ್ನುವ ಭಯದಿಂದ ಗಣೇಶ್ ಅವರನ್ನು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ.

    ಘಟನೆ ನಡೆದ ಬಳಿಕ ರೆಸಾರ್ಟ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಗಣೇಶ್, ಸರ್ಕಾರಿ ಗನ್‍ಮ್ಯಾನ್‍ನನ್ನು ತೋರಿಸಿ, ಹಲ್ಲೆ ಮಾಡಿರುವ ಘಟನೆ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿರುವ ವರದಿ ಸುಳ್ಳು. ಯಾವುದೇ ಗನ್‍ಮ್ಯಾನ್ ಮೇಲೆ ಹಲ್ಲೆ ನಡೆದಿಲ್ಲ. ಸಣ್ಣ ವೈಯಕ್ತಿಕ ವಿಚಾರಕ್ಕೆ ಚರ್ಚೆ ನಡೆದಿದ್ದು, ಯಾವುದೇ ಕಾರಣಕ್ಕೂ ಹಲ್ಲೆ ನಡೆದಿಲ್ಲ ಎಂದು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

    https://www.youtube.com/watch?v=pgwGXV3NmMA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಬಂಧನ ಭಯದಿಂದ ಕಂಪ್ಲಿ ಶಾಸಕ ಗನೇಶ್ ನಾಪತ್ತೆಯಾಗಿದ್ದಾರೆ. ಆದರೆ ಅಂದು ಈಗಲ್ಟನ್ ರೆಸಾರ್ಟಿನಲ್ಲಿ ಏನೆಲ್ಲ ಘಟನೆ ನಡೆಯಿತು? ನಾನು ಹೊಡೆಯಲು ಪ್ರೇರಣೆಯಾದ ಘಟನೆ ಏನು ಎನ್ನುವುದನ್ನು ಗಣೇಶ್ ಅವರು ಎಳೆ ಎಳೆಯಾಗಿ ವಿವರಿಸಿ ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಈಗಲ್ಟನ್ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಅವರೊಂದಿಗೆ ಪಾರ್ಟಿ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಪಾರ್ಟಿ ನಡೆದ ಬಳಿಕ ಏನೆಲ್ಲಾ ಆಯ್ತು ಎನ್ನುವುದರ ಬಗ್ಗೆ ಕಂಪ್ಲಿ ಕಾಂಗ್ರೆಸ್ ಫೇಸ್ ಬುಕ್ ಪೇಜ್ ನಲ್ಲಿ ವಿವರಿಸಿ ಮಾಹಿತಿ ನೀಡಿದ್ದಾರೆ.

    ಫೇಸ್‍ಬುಕ್ ಪೋಸ್ಟ್ ನಲ್ಲೇನಿದೆ?
    ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನತೆಗೆ ನನ್ನ ನಮಸ್ಕಾರಗಳು. ಅಂದು ಏನು ಘಟನೆಗಳು ನಡೆದಿದ್ದವು ಅವು ಎಲ್ಲ ಸುಳ್ಳು. ಈಗಲ್ಟನ್ ರೆಸಾರ್ಟ್ ನಲ್ಲಿ ನಾನು ಹಾಗೂ ಆನಂದ್ ಸಿಂಗ್ ಪಾರ್ಟಿ ಮಾಡಿದ್ದು ನಿಜ. ಪಾರ್ಟಿ ಮಾಡಿದ ನಂತರ ಆನಂದ್ ಸಿಂಗ್ ಅವರೇ ರೂಮ್ ಗೆ ಕರೆದುಕೊಂಡು ಹೋಗಿ ರಾತ್ರಿ 11.00 ಗಂಟೆ ಇಂದ 2.30 ಗಂಟೆವರೆಗೆ ಕೂರಿಸಿಕೊಂಡು ಮಾತನಾಡಿದರು.

    “ಸಾಮಾನ್ಯ ವ್ಯಕ್ತಿಯಾದ ನೀನು ಎಂಎಲ್‍ಎ ಆಗಿದ್ದು ನಾನು ಸಹಿಸುವುದಿಲ್ಲ. ನನ್ನ ಎದುರು ಕುಳಿತು ಕೊಳ್ಳುವ ಶಕ್ತಿ ನಿನಗೆ ಬಂತ ಮಗನೇ, ಕೆಳಗೆ ಕುಳಿತು ಕೊಳ್ಳುವ ಮಗನೇ” ಅಂತ ನನಗೆ ನಿಂದನೆ ಮಾಡುತ್ತಲೇ ಮಾತನಾಡಿದ್ದರು. “ಕಳೆದ ಚುನಾವಣೆಯಲ್ಲಿ ನೀನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ಹಾಗೂ ಸೋಲಲು ನಾನೇ ಕಾರಣ. 81 ರೆಹಮಾನ್ ಸಾಬ್‍ನಿಗೆ ನಿನ್ನ ಅಪ್ಪನ ಹತ್ತಿರ ಕಳುಹಿಸಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ನಾನೇ ಕಾರಣ. ಈ ರೀತಿ ನೀನು ಆರ್ಥಿಕವಾಗಿ ಕುಗ್ಗಿ ಭಿಕ್ಷೆ ಬೇಡುವ ಹಾಗೆ ಮಾಡಿದೆ. ತುಕರಾಂಗೆ ಮಿನಿಸ್ಟರ್ ಮಾಡಲು ದೆಹಲಿಗೆ ಹೋಗುತ್ತೀಯಾ ಸೂ…! ಮಗನೇ” ಎಂದು ಹೇಳಿದರು.

    “ಎಂ.ಪಿ ರವೀಂದ್ರ ರವರ ಜಾಗ 2 ಕೋಟಿ ರೂ.ಗೆ ತೆಗೆದುಕೊಂಡು ಹಗರಿಬೊಮ್ಮನಹಳ್ಳಿಯಲ್ಲಿ ಆಫೀಸ್ ಮಾಡಿ ಭೀಮಾಗೆ ಸೋಲಿಸಲು ಪಣ ತೊಟ್ಟಿದೆ, ಆದರೆ ಅದು ಆಗಲಿಲ್ಲ. ಈಗ ಕಂಪ್ಲಿಯಲ್ಲಿ ಆಫೀಸ್ ತೆಗೆದು ನಿನ್ನನ್ನು ಮುಗಿಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ಇದ್ದರೂ, ನನ್ನ ಒಂದು ಕೂದಲು ಕೀಳಲು ಅವರಿಂದ ಆಗಲಿಲ್ಲ. ಆದರು ನಾನು ಗೆದ್ದು ಬಂದೆ, ಕೀಳು ಜಾತಿ ನೀನು ಅದಕ್ಕೆ ಸೇರಿದವನು” ಎಂದು ಕೆಳಗೆ ಕೂತಿದ್ದ ನನ್ನ ಎದೆಗೆ ಜೋರಾಗಿ ಕಾಲಿನಿಂದ ಹೊಡೆದರು. ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎದೆಗೆ ನೋವು ಆಗಿದ್ದರಿಂದ ನಾನು ನಿಧಾನವಾಗಿ ರೂಮ್ ಗೆ ಹೋದೆ.

    ಆನಂದ್ ಸಿಂಗ್ ಮತ್ತೆ ರೂಮಿನವರೆಗೂ ಬಂದು ಮಡಿಕೆ ಎತ್ತಿ ಹೊಡೆದು,”ನನ್ನ ರೂಮಿನ ಬಾಗಿಲು ತಟ್ಟಿ ಬಾಲೆ ಸೂ.. ಮಗನೇ ಭೀಮಾನ ರೂಂ ತೋರಿಸ ಬಾ. ಎಲ್ಲರ ಮುಂದೆ ಸೂ.. ಮಗ ಎಂದಿದ್ದಾನೆ ಅವನನ್ನು ಬಿಡಲ್ಲ” ಎಂದರು. ನನ್ನನ್ನು ಬಲವಂತವಾಗಿ ಭೀಮಾ ನಾಯ್ಕ್ ರೂಂ ಗೆ ಕರೆದುಕೊಂಡು ಹೋದರು. ಅಲ್ಲಿ,”ಲೇ ಭೀಮಾ ನೀನು ಲೇ ಸೂ… ಮಗ ಸಿಪಿಎಲ್ ಮೀಟಿಂಗ್‍ನಲ್ಲಿ ಎಲ್ಲರ ಮುಂದೆ ನನಗೆ ಸೂ.. ಮಗ ಅಂತ ಹೇಳಿದಿ, ಎಲ್ಲರ ಮುಂದೆ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳು ಮಗನೇ” ಅಂತ ಭೀಮಾ ನಾಯ್ಕ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಗ ನಾನು ಮಧ್ಯೆ ಪ್ರವೇಶಿಸಿ ಇಬ್ಬರ ನಡುವೆ ಸಾಂತ್ವನ ಮಾಡಿದೆ. ನಂತರ ಭೀಮಾನ ಕಥೆ ಮುಗಿಯಿತು. ಈಗ “ನೀನು ಲೇ ಸೂ….! ಮಗ ಗಣೇಶ” ಎಂದರು.

    ನನ್ನ ಪರಿವಾರ ನನ್ನ ಹೆಂಡತಿ, ತಾಯಿ ಅಕ್ಕನ ಮೇಲೆ ಕೆಟ್ಟದಾಗಿ ಮಾತನಾಡಿದರು. ಅವಾಚ್ಯ ಶಬ್ದಗಳಿಂದ ಬೈದರು. ಜಾತಿ ನಿಂದನೆ ಮಾಡಿದರು ನನ್ನ ಶರ್ಟ್ ಹರಿದು ನನ್ನ ಬಲಗೈ ಹೆಬ್ಬೆರಳನ್ನು ತಿರುಗಿಸಿ ಫ್ಯಾಕ್ಚರ್ ಮಾಡಿ ಬೆಡ್ ಲೈಟ್ ತೆಗದು ಕೊಂಡು ನನ್ನ ಬೆನ್ನಿಗೆ ಹೊಡೆದು ಹಲ್ಲೆ ಮಾಡಿದರು. ಅವರು ನನ್ನ ಮೇಲೆ ಮೊದಲು ಕೈ ಎತ್ತಿದಕ್ಕೆ ನಾನು ಅವರ ಮೇಲೆ ಕೈ ಎತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಭೀಮಾ ನಾಯ್ಕ, ವಿಶ್ವ ಹಾಗೂ ಶರಣಪ್ಪ. ಈ ಎಲ್ಲಾ ವಿಷಯ ಎಲ್ಲಾ ಮುಖಂಡರಿಗೂ ತಿಳಿದಿದೆ. ಮುಖಂಡರು ಇಬ್ಬರ ತಪ್ಪಿದೆ. ಇಬ್ಬರೂ ಪಕ್ಷದ ಮುಜುಗರಕ್ಕೆ ಕಾರಣ ಆಗಿದ್ದೀರಿ ಎಂದು ಹೇಳಿ ಈಗಲ್ಟನ್ ರೆಸಾರ್ಟ್ ನಲ್ಲಿ ವೈದ್ಯರನ್ನು ಕರಿಸಿ ನನಗೆ ಪ್ರಥಮ ಚಿಕಿತ್ಸೆ ಮಾಡಿದರು.

    ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರೆ ಆನಂದ ಸಿಂಗ್‍ಗೆ ಹೊಡೆಯ ಬೇಕು ಎಂಬ ಉದ್ದೇಶ ನನ್ನಲ್ಲಿ ಇಲ್ಲ. ಹಾಗಾದರೆ ನಾನು ಅವರ ಹತ್ತಿರ ರೂಂ ನಲ್ಲಿ 2 ರಿಂದ 3 ತಾಸು ಇದ್ದಾಗ ಮಾಡಬಹುದಾಗಿತ್ತು. ಯಾವುದೇ ಉದ್ದೇಶ ನನ್ನಲ್ಲಿ ಇಲ್ಲ. ರಾಜಕೀಯವಾಗಿ ಮುಗಿಸಲು ಆನಂದ್ ಸಿಂಗ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದವರಿಗೆ ಆನಂದ್ ಸಿಂಗ್ ಹಾಗೂ ಸಂದೀಪ್ ಸಿಂಗ್ ರಿಂದ ಜೀವ ಬೆದರಿಕೆ ಇದೆ. ಕಂಪ್ಲಿ ಕ್ಷೇತ್ರದ ಜನರಿಗೆ ನನ್ನ ಮನವಿ. ಕಂಪ್ಲಿ ಕ್ಷೇತ್ರದ ಜನ ಸುಳ್ಳು ಸುದ್ದಿಗಳನ್ನು ನಂಬಬಾರದು. ನಾನು ಕಂಪ್ಲಿ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ ಕಂಪ್ಲಿ ಕಲ್ಯಾಣವೇ ನನ್ನ ಗುರಿ ಎಂದು ಪೇಜ್ ನಲ್ಲಿ ಬರೆಯಲಾಗಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    – ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಶಾಸಕ ಸಿಟಿ ರವಿ, ಮಾಜಿ ಸಚಿವ ಜನಾರ್ದನ ರೆಡ್ಡಿ
    – ಕಾಂಗ್ರೆಸ್ ಪಕ್ಷದಲ್ಲಿ ಡಿವೈಡ್ ಅಂಡ್ ರೂಲ್ ಪಾಲಿಸಿ: ಜರ್ನಾದನ ರೆಡ್ಡಿ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ಸೇರಿರುವ ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿ ಶಾಸಕ ಸಿಟಿ ರವಿ, ರಾಜೂಗೌಡ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜೂಗೌಡ, ಮೊದಲ ದಿನ ಅವರ ಭೇಟಿಗೆ ಬಂದ ವೇಳೆ ಏಕೆ ಅವಕಾಶ ನೀಡಿಲ್ಲ ಎನ್ನುವುದು ಇಂದು ಆನಂದ್ ಸಿಂಗ್ ಅವರನ್ನು ನೋಡಿದ ಬಳಿಕ ತಿಳಿಯಿತು. ಅವರ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು. ಆ ಮಟ್ಟದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇಂತಹ ಕೃತ್ಯವನ್ನು ಮನುಷ್ಯರು ಮಾಡುವ ಕೆಲಸ ಅಲ್ಲ, ಇದು ರಾಕ್ಷಸರು ಮಾಡುವ ಕೆಲಸ. ನಮ್ಮ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರುವುದು ಬೇಡ. ಈಗಲೂ ಆನಂದ್ ಸಿಂಗ್ ಆತಂಕದಲ್ಲೇ ಇದ್ದಾರೆ ಎಂದು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷವರು ಅವರ ಶಾಸಕರನ್ನೇ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾನ್ಯ ಜನರಿಗೆ ರಕ್ಷಣೆ ಕೊಡುವುದು ಸರ್ಕಾರದಿಂದ ಸಾಧ್ಯವೇ? ಉದ್ದೇಶ ಪೂರ್ವಕವಾಗಿಯೇ ಶಾಸಕ ಗಣೇಶರನ್ನು ರಕ್ಷಣೆ ಮಾಡಲಾಗುತ್ತಿದ್ದು, ನಾವೇನಾದ್ರೂ ಈ ವಿಚಾರದಲ್ಲಿ ಒತ್ತಾಯ ಮಾಡಿದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಪೊಲೀಸರು ಶಾಸಕ ಗಣೇಶರನ್ನು ಬಂಧನ ಮಾಡೋದಕ್ಕೆ ಅಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದೆನಿಸುತ್ತದೆ. ಆದ್ದರಿಂದ ಆನಂದ್ ಸಿಂಗ್ ಅವರ ಸ್ನೇಹಿತನಾಗಿ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ. ಇತರೇ ಶಾಸಕರು ಮಾನವೀಯ ದೃಷ್ಟಿಯಿಂದ ಆದ್ರು ಈ ಬಗ್ಗೆ ಸಾಕ್ಷಿ ಹೇಳಬೇಕು ಎಂದರು.

    ಇದಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಸಿ.ಟಿ ರವಿ, ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು. ನಾನು ಆನಂದ್ ಸಿಂಗ್ ಹತ್ತು ವರ್ಷದಿಂದ ಸ್ನೇಹಿತರು. ಅವರ ಆರೋಗ್ಯ ವಿಚಾರಣೆ ಮಾಡಿದ ವೇಳೆ ಬೇಡಿಕೊಂಡರೂ ಬಿಡದೇ ಹಲ್ಲೆ ಮಾಡಿದ್ದಾಗಿ ಆನಂದ್ ಅವರು ಹೇಳಿದ್ದು. ಇಂತಹ ಘಟನೆಗಳು ಶಾಸಕಾಂಗಕ್ಕೆ ಆಗಿರುವ ಅವಮಾನ ಎಂದರು.

    ಇದೇ ವೇಳೆ ಗಣೇಶ್ ಬಗ್ಗೆ ಬಿಜೆಪಿ ಸಾಫ್ಟ್ ಕರ್ನರ್ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೇ ಬಿಜೆಪಿ ಯಾರನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಈ ಪ್ರಕರಣ ಯಾರು? ಮುಚ್ಚಿ ಹಾಕಲು ಯಾರು ಪ್ರಯತ್ನಿಸಿದ್ದರೋ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿ ಎಂದು ಗರಂ ಆದರು. ಆನಂದ್ ಸಿಂಗ್ ಆರೋಗ್ಯ ವಿಚಾರಣೆಗೆ ಬಂದಿದ್ದು, ಇದು ಅದನ್ನೆಲ್ಲ ಮಾತನಾಡುವ ವೇದಿಕೆ ಅಲ್ಲ ಎಂದು ತೆರಳಿದರು.

    ಡಿವೈಡ್ ಅಂಡ್ ರೂಲ್ ಪಾಲಿಸಿ : ಬಳಿಕ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ತುಕಾರಾಂ ಅವರು ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರು. ಶಾಸಕ ಎಂಬುವುದನ್ನು ನೋಡದೇ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದ ಶಾಸಕ ನಾಪತ್ತೆ ಎಂದು ಹೇಳುತ್ತಿರುವುದು ನಾಚಿಕೆ ವಿಚಾರ. ಶಾಸಕರನ್ನು ಬಂಧಿಸಿದರೆ ಸರ್ಕಾರ ತೊಂದರೆ ಎಂಬ ಕಾರಣದಿಂದ ಬಂಧನಕ್ಕೆ ಹಿಂದೇಟು ಹಾಕಲಾಗುತ್ತದೆ. ಘಟನೆಯಿಂದ ಇಡೀ ದೇಶದಲ್ಲೇ ರಾಜ್ಯದ ಮುಖ್ಯಮಂತ್ರಿಗಳು ತಲೆ ತಗ್ಗಿಸುವಂತೆ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೇ ಪೈಪೋಟಿ ನಡೆದಿದೆ. ಆದ್ದರಿಂದಲೇ ಬಳ್ಳಾರಿ ಶಾಸಕರಲ್ಲಿ ಭಿನ್ನಭಿಪ್ರಾಯ ಉಂಟಾಗಿದೆ. ಕಾಂಗ್ರೆಸ್ ನಾಯಕರು ಶಾಸಕರನ್ನು ವಿಭಜನೆ ಮಾಡಿ ಆಳ್ವಿಕೆ ಮಾಡಲು ತೆರಳಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಗಲ್ಟನ್ ರೆಸಾರ್ಟಿನಲ್ಲಿ ಸಣ್ಣ ಅಚಾತುರ್ಯವಾಗಿರೋದು ನಿಜ: ಸಿಎಂ ಎಚ್‍ಡಿಕೆ

    ಈಗಲ್ಟನ್ ರೆಸಾರ್ಟಿನಲ್ಲಿ ಸಣ್ಣ ಅಚಾತುರ್ಯವಾಗಿರೋದು ನಿಜ: ಸಿಎಂ ಎಚ್‍ಡಿಕೆ

    ಬೆಂಗಳೂರು: ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರ ಕಿತ್ತಾಟ ಪ್ರಕರಣದಲ್ಲಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಸಭೆಯಲ್ಲಿ ಸಣ್ಣ ಅಚಾತುರ್ಯವಾಗಿರುವದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಎರಡು ದಿನಗಳಿಂದ ಸಿದ್ದಗಂಗಾ ಮಠದಲ್ಲಿ ಇದ್ದೆ. ಆದ್ದರಿಂದ ನನ್ನ ಗಮನ ಮಠದ ಕಡೆ ಇತ್ತು. ಇಂದು ಆನಂದ್ ಸಿಂಗ್ ಅವರನ್ನು ಭೇಟಿ ಮಾಡುತ್ತೇನೆ ಎಂದರು.

    ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಪ್ರಕರಣದಲ್ಲಿ ಸರ್ಕಾರವನ್ನ ದುರುಪಯೋಗ ಪಡಿಸಿಕೊಳ್ಳೋದಿಲ್ಲ ಎಂದು ವೇಳೆ ಸ್ಪಷ್ಟಪಡಿಸಿದರು. ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಕಡಿಮೆ ಮಾಡುತ್ತದೆ. ಇಂತಹ ವಾತಾವರಣ ನಿರ್ಮಾಣ ಆಗದಂತೆ ಕ್ರಮಕೈಗೊಳ್ಳಲಾಗುವುದು.

    ಈ ಸಮಸ್ಯೆ ತಿಳಿಗೊಳಿಸಲು ನನ್ನದೇ ಆದ ವೈಯಕ್ತಿವಾಗಿ ರೀತಿಯಲ್ಲಿ ಪ್ರಯತ್ನ ಮಾಡುತ್ತೇನೆ. ಒಂದು ಕುಟುಂಬ ಅಂದ ಮೇಲೆ ಜಗಳ ಇರುತ್ತದೆ. ಅಣ್ಣ-ತಮ್ಮಂದಿರು ಗಲಾಟೆ ಮಾಡಿಕೊಳ್ಳೋದಿಲ್ಲವಾ? ಇದನ್ನ ಬಗೆಹರಿಸಲು, ತಿಳಿಗೊಳಿಸಲು ಕ್ರಮವಹಿಸುತ್ತೇನೆ. ಘಟನೆ ಬಗ್ಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಲು ನನ್ನದೇ ರೀತಿಯಲ್ಲಿ ವೈಯಕ್ತಿಕವಾಗಿ ತಿಳಿಗೊಳಿಸುತ್ತೇನೆ ಎಂದರು.

    ಟಿ.ನರಸೀಪುರ ತಾಲೂಕಿನಲ್ಲಿ 11ನೇ ಕುಂಭಮೇಳ ಹಿನ್ನಲೆ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು. ಸಿಎಂ ಕುಮಾರಸ್ವಾಮಿ, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಸಚಿವರಾದ ಜಿಟಿ ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್, ಮೈಸೂರು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿಶಾಮಕ ದಳ ಮುಖ್ಯಸ್ಥರು, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಫೆಬ್ರವರಿ 17 ರಿಂದ 19 ವರೆಗೆ ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನಂದ್ ಸಿಂಗ್-ಗಣೇಶ್ ನಡುವಿನ ‘ಬಾಟಲ್’ ಬ್ಯಾಟಲ್ – ರಾತ್ರಿ ನಿಜವಾಗಿ ಏನಾಯ್ತು? ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಆನಂದ್ ಸಿಂಗ್-ಗಣೇಶ್ ನಡುವಿನ ‘ಬಾಟಲ್’ ಬ್ಯಾಟಲ್ – ರಾತ್ರಿ ನಿಜವಾಗಿ ಏನಾಯ್ತು? ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಬಾಟಲ್ ಗಲಾಟೆಗೆ ಕಾಂಗ್ರೆಸ್ ಶಾಸಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಪಾರ್ಟಿ ಆರಂಭಗೊಂಡಾಗ ಎಲ್ಲರೊಂದಿಗೆ ಸರಿಯಾಗಿದ್ದ ಶಾಸಕರು ಮದ್ಯದ ಅಮಲು ಏರುತ್ತಿದಂತೆ ಪರಸ್ಪರ ಕಿತ್ತಾಟ ನಡೆಸಿದ್ದಾರೆ.

    ಗಲಾಟೆಯಲ್ಲಿ ಶಾಸಕ ಆನಂದ್‍ಸಿಂಗ್ ಕಣ್ಣು, ಎದೆ, ತಲೆಗೆ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಇತ್ತ ಆನಂದ್ ಅಣ್ಣನಿಗೆ ಏನಾದ್ರೂ ಆದರೆ ಸುಮ್ಮನೆ ಇರುವುದಿಲ್ಲ, ಬಳ್ಳಾರಿಯಲ್ಲಿ ರೌದ್ರಾವಾತರ ನೋಡುತ್ತೀರಿ ಎಂದು ಶಾಸಕ ಆನಂದ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಮದ್ಯದ ಅಮಲಿನಲ್ಲಿದ್ದಾಗ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಹೊಡೆದಾಟ ಆರಂಭವಾಗಿ ಬಳಿಕ ಏನಾಯ್ತು ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದ್ದು ಅದನ್ನು ಇಲ್ಲಿ ನೀಡಲಾಗಿದೆ.

    ರಾತ್ರಿ ನಡೆದಿದ್ದೇನು?
    ಪಕ್ಷದ ಸಭೆಯ ಬಳಿಕ ರೆಸಾರ್ಟಿನಲ್ಲಿಯೇ ತಂಗಿದ್ದ ಶಾಸಕರು ಮಧ್ಯರಾತ್ರಿ 2 ಗಂಟೆಯವರೆಗೂ ಗಾರ್ಡನ್ ನಲ್ಲಿ ಪಾರ್ಟಿ ಮಾಡುತ್ತ ಕುಳಿತಿದ್ದರು. ಈ ವೇಳೆ ಶಾಸಕ ಆನಂದ್‍ಸಿಂಗ್ ಹಾಗೂ ಗಣೇಶ ಒಟ್ಟಿಗೆ ಕುಳಿತ್ತಿದ್ದರು. ಇತ್ತ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಾನಾಯ್ಕ್ ಬರುತ್ತಿದಂತೆ ಆನಂದ್ ಸಿಂಗ್, “ಈ ಬಾರಿ ನಿನ್ನನ್ನು ಸೋಲಿಸುತ್ತೇನೆ” ಎಂದಾಗ “ಆಯ್ತು ಬಿಡು ಅಣ್ಣ” ಎಂದು ಭೀಮಾ ನಾಯ್ಕ್ ಉತ್ತರಿಸಿದ್ದಾರೆ.

    ಈ ವೇಳೆ ಮಧ್ಯಪ್ರವೇಶಿಸಿದ ಗಣೇಶ್,”ಆನಂದ್ ಅಣ್ಣಾ, ನೀವೂ ಭೀಮಾನಾಯ್ಕ್ ಅವರನ್ನು ಸೋಲಿಸುತ್ತೇನೆ ಎಂದು ಹೇಳ್ತೀರಿ, ಸಂದೀಪ್ ಸಿಂಗ್ ಕಂಪ್ಲಿಯಲ್ಲಿ ನನ್ನ ಸೋಲಿಸುತ್ತೇನೆ ಎನ್ನುತ್ತಾನೆ” ಎಂದು ಹೇಳಿದ್ದಾರೆ. ಇದಕ್ಕೆ,”ಹೌದು, ನಾನು ನಿಮ್ಮ ಇಬ್ಬರನ್ನು ಸೋಲಿಸುತ್ತೇನೆ” ಎಂದು ಆನಂದ್ ಸಿಂಗ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನು ಕೇಳುತ್ತಿದಂತೆ ಶಾಸಕ ಗಣೇಶ್,”ಅಣ್ಣಾ ನೀನು ನನ್ನನ್ನು ಸೋಲಿಸು ನಾನು ಬೇಡ ಎನ್ನುವುದಿಲ್ಲ. ಆದರೆ ಸಂದೀಪ್ ಸಿಂಗ್ ನನ್ನ ಕ್ಷೇತ್ರಕ್ಕೆ ಬಂದರೆ ನಾನು ನಿಮ್ಮನ್ನ ಹೊಸಪೇಟೆಯಲ್ಲಿ ಸೋಲಿಸುತ್ತೇನೆ” ಎಂದು ಕೌಂಟರ್ ಕೊಟ್ಟಿದ್ದಾರೆ. ಈ ಕೌಂಟರ್ ಗೆ ಕೋಪಗೊಂಡ ಆನಂದ್ ಸಿಂಗ್,”ನನ್ನನ್ನೇ ಸೋಲಿಸುತ್ತೇನೆ ಎನ್ನುತ್ತಿಯಾ” ಎಂದು ಹೇಳಿ ಗಣೇಶ್ ಮೇಲೆ ಮುಗಿಬಿದ್ದಾಗ ಇಬ್ಬರೂ ಪರಸ್ಪರ ಕಿತ್ತಾಡಿದ್ದಾರೆ. ಇಬ್ಬರ ಗುದ್ದಾಟ ಕಂಡ ಉಳಿದ ಶಾಸಕರು ಏನು ಮಾಡಲಾಗದೇ ನೋಡುತ್ತಾ ನಿಂತಿದ್ದರು ಎಂದು ಮೂಲಗಳು ತಿಳಿಸಿವೆ.

    ಇಬ್ಬರ ಗುದ್ದಾಟದ ಮಧ್ಯೆ ಬಾಟಲ್ ಕೈಗೆ ತೆಗೆದುಕೊಂಡ ಗಣೇಶ್ ಎಣ್ಣೆ ಮತ್ತಿನಲ್ಲಿ ಅಕ್ಷರಶಃ ಮೃಗದಂತೆ ವರ್ತಿಸುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಆನಂದ್ ಸಿಂಗ್ ಗ್ಯಾಲರಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆಗೆ ಆನಂದ್ ಸಿಂಗ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆನಂದ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಎಡಭಾಗದ ಎದೆಯ ಮೇಲೆ ಹತ್ತಿ ನಿಂತು ಗಣೇಶ್ ತುಳಿದಿದ್ದಾರೆ. ಪರಿಸ್ಥಿತಿ ಮಿತಿಮಿರುತ್ತಿದಂತೆ ಮಧ್ಯಪ್ರವೇಶಿಸಿದ ಭೀಮಾನಾಯ್ಕ್, ಗಣೇಶ್ ಅವರನ್ನು ಕೊಠಡಿಗೆ ಕಳುಹಿಸಿದರೆ, ಹೋಟೆಲ್ ಸಿಬ್ಬಂದಿ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಇತ್ತ ಕೊಠಡಿಗೆ ತೆರಳಿದರೂ ಸುಮ್ಮನಾಗದ ಗಣೇಶ್ ಮತ್ತೆ ಚೀರಾಟ ನಡೆಸಿ ಗದ್ದಲ ಮುಂದುವರಿಸಿದ್ದರು ಎನ್ನಲಾಗಿದೆ.

    ಇಬ್ಬರ ನಡುವಿನ ಗಲಾಟೆಯಲ್ಲಿ ಆನಂದ್ ಸಿಂಗ್ ಅವರ ಬಲಬಾಗದ ಹಣೆ, ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದಿದೆ. ಬಲವಾದ ಏಟಿಗೆ ಪ್ರಜ್ಞೆ ತಪ್ಪಿ ಬಿದ್ದ ಆನಂದ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಎಡಭಾಗದ ಎದೆಯ ಮೇಲೆ ಹತ್ತಿ ನಿಂತು ಗಣೇಶ್ ತುಳಿದ ಪರಿಣಾಮ ಎಡ ಭಾಗದ ಪಕ್ಕೆಲುಬಿಗೆ ಏಟಾಗಿದೆ. ಆನಂದ್ ಸಿಂಗ್ ಬಲ ಕಣ್ಣು ಊದಿ ಕೊಂಡಿದ್ದು ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎನ್ನುವ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv