Tag: ಶಾಸಕ ಆನಂದ್ ಸಿಂಗ್

  • ‘ಹಂಪಿ ಬೈ ಸ್ಕೈ’ಗೆ ಶಾಸಕ ಆನಂದ್ ಸಿಂಗ್ ಚಾಲನೆ

    ‘ಹಂಪಿ ಬೈ ಸ್ಕೈ’ಗೆ ಶಾಸಕ ಆನಂದ್ ಸಿಂಗ್ ಚಾಲನೆ

    -ಇಂದಿನಿಂದ ಜ.12 ರವರೆಗೆ ಆಗಸದಿಂದ ಹಂಪಿ ಸೌಂದರ್ಯ ಕಣ್ತುಂಬಿಕೊಳ್ಳಿ

    ಬಳ್ಳಾರಿ: ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟಲ್ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್‍ನಲ್ಲಿ ಶಾಸಕ ಆನಂದಸಿಂಗ್ ಅವರು ಪೂಜೆ ಸಲ್ಲಿಸುವುದರ ಮೂಲಕ ಹಂಪಿ ಬೈ ಸ್ಕೈಗೆ ಚಾಲನೆ ನೀಡಿದ್ದಾರೆ.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಆನಂದ್ ಸಿಂಗ್, ಬಳಿಕ ತಮ್ಮ ಕುಟುಂಬದ 6 ಜನರೊಂದಿಗೆ ಮೊದಲಿಗೆ ಹಣ ಪಾವತಿಸಿ ಹೆಲಿಕಾಪ್ಟರ್ ಹತ್ತಿ ಹಂಪಿಯ ವಿಹಂಗಮ ನೋಟವನ್ನು ಸವಿದರು. ಶಾಸಕ ಆನಂದಸಿಂಗ್ ಅವರು ಇದೇ ಮೊದಲ ಬಾರಿಗೆ ನಮ್ಮ ಕುಟುಂಬದೊಂದಿಗೆ ಆಗಸದಿಂದ ಹಂಪಿಯನ್ನು ವೀಕ್ಷಿಸಿದರು. ಆನಂದ್ ಸಿಂಗ್ ಅವರ ಸೊಸೆಯೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಸಿಂಗ್ ಅವರು, ಆಗಸದಿಂದ ಹಂಪಿ ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ಸ್ವಲ್ಪ ದರ ಜಾಸ್ತಿಯಾಗಿದೆ. ಹಂಪಿ ಉತ್ಸವಕ್ಕೆ ಆಗಮಿಸುವ ಜನರು ಆಗಸದ ಮೂಲಕ ಹಂಪಿಯನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿದರು.

    ಹಂಪಿಯ ವಿಹಂಗಮ ನೋಟ, ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ಟೆಂಪಲ್, ಲೋಟಸ್ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳು, ಹರಿಯುವ ನದಿ, ತುಂಗಾಭದ್ರಾ ನದಿ, ಬೆಟ್ಟ-ಗುಡ್ಡಗಳು, ನೈಸರ್ಗಿಕ ಸೌಂದರ್ಯವನ್ನು ಆಗಸದಿಂದ ನೋಡುವುದರ ಮೂಲಕ ಕಣ್ತುಂಬಿಕೊಂಡವ ಅವಕಾಶ ಪ್ರವಾಸಿಗರಿಗೆ ಲಭಿಸಿದೆ.

    ಮಯೂರ ಭುವನೇಶ್ವವರಿ ಹೋಟಲ್ ಆವರಣದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಪಕ್ಕದಲ್ಲಿಯೇ ಎರಡು ಟಿಕೆಟ್ ಕೌಂಟರ್ ಗಳನ್ನು ತೆರೆಯಲಾಗಿದೆ. ಟಿಕೆಟ್ ಪಡೆದು ಪ್ರವಾಸಿಗರು ಹೆಲಿಕಾಪ್ಟರಿನಲ್ಲಿ ಹಂಪಿ ವೀಕ್ಷಿಸಬಹುದಾಗಿದೆ. ಜ.8ರಿಂದ 12ರವರೆಗೆ ಚಿಪ್ಸಾನ್ ಏವಿಯೇಶನ್ ಮತ್ತು ತುಂಬೆ ಏವಿಯೇಶನ್‍ಗಳ ಹೆಲಿಕಾಪ್ಟರ್ ಗಳು ಪ್ರವಾಸಿಗರಿಗೆ ಲಭ್ಯವಾಗಲಿದೆ. ಸುಮಾರು 7 ನಿಮಿಷಗಳ ಹಾರಾಟಕ್ಕೆ ಒಬ್ಬರಿಗೆ 3ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಕಳೆದ ಬಾರಿಯ ಹಂಪಿ ಉತ್ಸವದಲ್ಲಿ 1,600ಕ್ಕೂ ಹೆಚ್ಚು ಜನರು ಹಂಪಿಯ ಸೌಂದರ್ಯವನ್ನು ಬಾನಾಂಗಳದ ಮೂಲಕ ಸವಿದಿದ್ದರು. ಈ ಬಾರಿಯೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಒಬ್ಬರಿಗೆ 2,500 ರೂ.ಗಳನ್ನು ನಿಗದಿ ಮಾಡಲಾಗಿತ್ತು. ಈ ಬಾರಿ 500 ರೂ.ಗಳನ್ನು ಹೆಚ್ಚಿಸಲಾಗಿದೆ.

  • ದೂರು ನೀಡಿದವರ ವಿರುದ್ಧವೇ ದೂರು ನೀಡಿದ ಶಾಸಕ ಆನಂದ್ ಸಿಂಗ್

    ದೂರು ನೀಡಿದವರ ವಿರುದ್ಧವೇ ದೂರು ನೀಡಿದ ಶಾಸಕ ಆನಂದ್ ಸಿಂಗ್

    ಬಳ್ಳಾರಿ: ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ನಾಯಕರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆದರೆ ನಾನು ಕಾಣೆಯಾಗಿಲ್ಲ. ಎಲ್ಲೂ ಹೋಗಿಲ್ಲವೆಂದು ಶಾಸಕ ಆನಂದ್ ಸಿಂಗ್ ಠಾಣೆಗೆ ಹಾಜರಾದ ಬೆನ್ನಲ್ಲೇ ತಮ್ಮ ವಿರುದ್ಧ ದೂರು ನೀಡಿದ ಸ್ವ-ಪಕ್ಷದ ನಾಯಕರ ವಿರುದ್ಧ ಆನಂದ್ ಸಿಂಗ್ ಪ್ರತಿದೂರು ದಾಖಲಿಸಿದ್ದಾರೆ.

    ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆಂದು ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಜುಲೈ 17 ರಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆದರೆ ಎರಡು ದಿನಗಳ ಹಿಂದೆ ಪೊಲೀಸ್ ಠಾಣೆಗೆ ಹಾಜರಾಗಿದ್ದ ಆನಂದ್ ಸಿಂಗ್ ನಾನು ಕಾಣೆಯಾಗಿಲ್ಲ. ತಂದೆಯವರ ಆರೋಗ್ಯ ಹದಗೆಟ್ಟು ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ನನ್ನ ಗೌರವ ಘನತೆ ಹಾಳು ಮಾಡುವ ಉದ್ದೇಶದಿಂದ ದೂರು ನೀಡಿದ್ದಾರೆ.

    ನನ್ನ ಗೌರವಕ್ಕೆ ಹಾನಿಯುಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕ ಆನಂದ್ ಸಿಂಗ್ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿ ದೂರು ದಾಖಲಿಸಿರುವುದು ವಿಶೇಷವಾಗಿದೆ.

  • ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದಿಢೀರ್ ಪ್ರತ್ಯಕ್ಷರಾದ ಶಾಸಕ ಆನಂದ್ ಸಿಂಗ್

    ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದಿಢೀರ್ ಪ್ರತ್ಯಕ್ಷರಾದ ಶಾಸಕ ಆನಂದ್ ಸಿಂಗ್

    ಬಳ್ಳಾರಿ: ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿದ್ದ ಆನಂದ್ ಸಿಂಗ್ ತಾವು ಕಾಣೆಯಾಗಿಲ್ಲ ಎಂದು ವಿವರಣೆ ನೀಡಿದ್ದಾರೆ.

    ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ನಾಯಕರ ಸಂಪರ್ಕದಿಂದ ದೂರ ಇದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಹೊಸಪೇಟೆ ಕಾಂಗ್ರೆಸ್ ಪದಾಧಿಕಾರಿಗಳು ಆನಂದ್ ಸಿಂಗ್ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 9 ಗಂಟೆ ವೇಳೆಗೆ ಹೊಸಪೇಟೆ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು.

    ನಾನು ಎಲ್ಲಿಯೂ ಹೋಗಿಲ್ಲ. ತಂದೆಯವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದೆ. ನಾನು ಜುಲೈ 13ರ ವರೆಗೂ ಹೊಸಪೇಟೆಯಲ್ಲಿ ಇದ್ದೇ, ಅಂದು ಸಂಜೆ ನನ್ನ ತಂದೆ ಅವರು ಮಳೆಯ ತೇವದಲ್ಲಿ ಜಾರಿ ಬಿದ್ದ ಕಾರಣ ಅವರಿಗೆ ಹೊಸಪೇಟೆಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದೆವು. ಬಳಿಕ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿದ್ದೆವು. ಜುಲೈ 17 ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬಳಿಕ ಎರಡು ದಿನ ಆಸ್ಪತ್ರೆಗೆ ಭೇಟಿ ನೀಡಿದ್ದೆವು. ಆದರೆ ಮಾಧ್ಯಮಗಳಲ್ಲಿ ಪುನಃ ಕಾಣೆಯಾಗಿದ್ದಾರೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ತಮ್ಮ ಠಾಣೆಗೆ ಹಾಜರಾಗಿ ದಾಖಲಾತಿ ಸಲ್ಲಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರಣೆ ನೀಡಿದ್ದ ಶಾಸಕ ಆನಂದ್ ಸಿಂಗ್, ನನ್ನನ್ನು ಹುಡುಕುವ ಅಗತ್ಯವಿಲ್ಲ. ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ನನ್ನ ಬಗ್ಗೆ ಆಲೋಚನೆ ಮಾಡಬೇಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದರು.

  • ಗೋವಾಗೆ ತೆರಳಿದ ಆನಂದ್ ಸಿಂಗ್

    ಗೋವಾಗೆ ತೆರಳಿದ ಆನಂದ್ ಸಿಂಗ್

    ಬೆಂಗಳೂರು: ಕಾಂಗ್ರೆಸ್‍ನ ರೆಬೆಲ್ ಶಾಸಕ ಆನಂದ್ ಸಿಂಗ್ ಅವರು ಗೋವಾಗೆ ತೆರಳಿದ್ದಾರೆ

    ಆನಂದ್ ಸಿಂಗ್ ಅವರು ಕಾರಿನಲ್ಲಿ ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಮಾಡಿದವು. ಆದರೆ ಆನಂದ್ ಸಿಂಗ್ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಅಲ್ಲಿಂದ ವಿಮಾನ ನಿಲ್ದಾಣದ ಒಳಗೆ ನಡೆದರು.

    ಶಾಸಕ ಆನಂದ್ ಸಿಂಗ್ ಅವರು ಕೆಐಎಎಲ್‍ನಿಂದ 6ಇ992 ಇಂಡಿಗೋ ವಿಮಾನದ ಮೂಲಕ ಗೋವಾಗೆ ಪ್ರಯಾಣ ಬೆಳೆಸಿದ್ದಾರೆ. ಅತೃಪ್ತ ಶಾಸಕರ ಜೊತೆಗೆ ಮುಂಬೈ ರೆಸಾರ್ಟಿಗೆ ಹೋಗದೆ ರಾಜ್ಯದಲ್ಲಿಯೇ ಉಳಿದಿದ್ದ ಅವರು ಇಂದು ದಿಢೀರ್ ಪ್ರಯಾಣ ಕೈಗೊಂಡಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

  • ಬ್ಲಾಕ್‍ಮೇಲ್ ಮಾಡೋದು ಬಹಳ ದಿನ ನಡೆಯಲ್ಲ: ಆನಂದ್ ಸಿಂಗ್ ವಿರುದ್ಧ ಶಿವಶಂಕರರೆಡ್ಡಿ ಕಿಡಿ

    ಬ್ಲಾಕ್‍ಮೇಲ್ ಮಾಡೋದು ಬಹಳ ದಿನ ನಡೆಯಲ್ಲ: ಆನಂದ್ ಸಿಂಗ್ ವಿರುದ್ಧ ಶಿವಶಂಕರರೆಡ್ಡಿ ಕಿಡಿ

    ಚಿಕ್ಕಬಳ್ಳಾಪುರ: ಬ್ಲಾಕ್‍ಮೇಲ್ ಮಾಡುವುದು ಬಹಳ ದಿನ ನಡೆಯುವುದಿಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ, ಶಾಸಕ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.

    ಗೌರಿಬಿದನೂರು ನಗರದಲ್ಲಿ ಮಾತನಾಡಿದ ಸಚಿವರು, ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳಿರಬೇಕು. ಪಕ್ಷದ ಬಗ್ಗೆ ಬದ್ಧತೆ ಇರಬೇಕು. ವೈಯುಕ್ತಿಕ ಹಾಗೂ ಸ್ವಾರ್ಥಕ್ಕಾಗಿ ಪಕ್ಷವನ್ನು ಬ್ಲಾಕ್ ಮೇಲ್ ಮಾಡಬಾರದು. ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದೀರಿ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು ಎಂದು ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ವಿಚಾರವಾಗಿ ವಾಗ್ದಾಳಿ ನಡೆಸಿದರು.

    ಯಾರೇ ಆದರೂ ಕಾಂಗ್ರೆಸ್‍ನಿಂದ ಗೆದ್ದು ಪಕ್ಷದ ಜೊತೆ ಇರಬೇಕು. ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಕೊಳ್ಳಬೇಕು. ಯಾರೇ ಬ್ಲಾಕ್‍ಮೇಲ್ ಮಾಡಿದರೂ ಬಹಳ ದಿನ ನಡೆಯಲ್ಲ ಎಂದು ಹೇಳಿದರು.

  • ಅಖಾಡಕ್ಕಿಳಿದ ಡಿಕೆಶಿ: ಆನಂದ್ ಸಿಂಗ್ ಮನವೊಲಿಸಲು ಯತ್ನ

    ಅಖಾಡಕ್ಕಿಳಿದ ಡಿಕೆಶಿ: ಆನಂದ್ ಸಿಂಗ್ ಮನವೊಲಿಸಲು ಯತ್ನ

    ಬೆಂಗಳೂರು: ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೆ ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ಅಖಾಡಕ್ಕಿಳಿದಿದ್ದು, ಆನಂದ್ ಸಿಂಗ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಆದರೆ, ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಸಹ ಟಿವಿಯಲ್ಲಿ ನೋಡಿದೆ. ಸುದ್ದಿ ನೋಡಿ ಆಘಾತವಾಯಿತು. ಆನಂದ್ ಸಿಂಗ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇನೆ. ಮೊಬೈಲ್ ಸ್ವಿಚ್ ಆಫ್ ಆಗಿದೆ, ಸಂಪರ್ಕಕ್ಕೆ ಸಿಗುತ್ತಿಲ್ಲ. ನಿನ್ನೆ ಆನಂದ್ ಸಿಂಗ್ ನನ್ನ ಭೇಟಿಗೆ ಪ್ರಯತ್ನಿಸಿರಬಹುದು. ಆದರೆ ನನಗೆ ಹೊಟ್ಟೆ ನೋವಿದ್ದ ಕಾರಣ ಆಸ್ಪತ್ರೆಯಲ್ಲಿದ್ದೆ ಹೀಗಾಗಿ ನನಗೆ ಮಾಹಿತಿ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಇತ್ತೀಚೆಗೆ ಆನಂದ್ ಸಿಂಗ್, ಡಿ.ಕೆ.ಶಿವಕುಮಾರ್ ಅವರಿಂದಲೂ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ವಿಶ್ವಾಸಮತಯಾಚನೆಯ ಸಮಯದಲ್ಲಿ ಡಿಕೆ ಶಿವಕುಮಾರ್ ಅವರೇ ಆನಂದ್ ಸಿಂಗ್ ಅವರನ್ನು ಹೋಟೆಲಿನಿಂದ ಕರೆ ತಂದು ಮನವೊಲಿಸಿದ್ದರು. ಈಗಲೂ ಸಹ ಆನಂದ್ ಸಿಂಗ್ ಮನವೊಲಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.

    ರಾಜೀನಾಮೆಗೂ ಮುನ್ನ ನಿನ್ನೆ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಆನಂದ್ ಸಿಂಗ್ ತಮ್ಮ ನೋವು ತೋಡಿಕೊಂಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ, ಐಟಿ, ಇಡಿ ತನಿಖೆಯ ಪ್ರಕರಣಗಳ ತನಿಖೆ ಕುರಿತು ಬಗ್ಗೆ ಚರ್ಚಿಸಿದ್ದರು. ಕೇಸ್‍ಗಳ ವಿಚಾರಣೆ ಕುರಿತು ತಮಗಿರುವ ಆತಂಕದ ಬಗ್ಗೆ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ದರು. ಅನಿವಾರ್ಯವಾದರೆ ರಾಜೀನಾಮೆ ಕೊಡುತ್ತೇನೆ ಎಂದು ಸಹ ಹೇಳಿದ್ದರು. ಈ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಆನಂದ್ ಸಿಂಗ್‍ಗೆ ಧೈರ್ಯತುಂಬಿ ಮನವೊಲಿಕೆಗೆ ಯತ್ನಿಸಿದ್ದರು. ಏನಾಗುತ್ತೋ ನೋಡಿ ಮುಂದಿನ ನಿರ್ಧಾರ ಕೈಗಳ್ಳುತ್ತೇನೆ ಎಂದು ಹೇಳಿ ಆನಂದ್ ಸಿಂಗ್ ಬೇಸರದಿಂದ ಡಿಕೆಶಿ ನಿವಾಸದಿಂದ ಹೊರ ಬಂದಿದ್ದರು ಎಂದು ತಿಳಿದು ಬಂದಿದೆ.

    ಈ ಕುರಿತು ಅಮೆರಿಕದಿಂದಲೇ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ ಸಿಎಂ, ಆನಂದ್ ಸಿಂಗ್ ರಾಜೀನಾಮೆಯಿಂದ ವಿಚಲಿತರಾಗಿದ್ದಾರೆ. ಹೀಗಾಗಿ ಹೇಗಾದರೂ ಆನಂದ್ ಸಿಂಗ್ ಮನವೊಲಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆನಂದ್ ಸಿಂಗ್ ಜೊತೆ ಮಾತನಾಡಿ, ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡುತ್ತೇನೆ. ನೀವು ಚಿಂತಿಸಬೇಡಿ ಎಂದು ಸಿಎಂ ಅವರಿಗೆ ಸಚಿವ ಡಿ.ಕೆ.ಶಿವಕುಮಾರ್ ಧೈರ್ಯ ತುಂಬಿದ್ದಾರೆ. ಆನಂದ್ ಸಿಂಗ್ ಮನವೊಲಿಕೆ ಹೊಣೆಯನ್ನು ಸಿಎಂ ಡಿಕೆಶಿ ಮೇಲೆ ಹೊರಿಸಿದ್ದಾರೆ.

  • ಇದುವರೆಗೆ ಯಾರೂ ನನಗೆ ರಾಜೀನಾಮೆ ಕೊಟ್ಟಿಲ್ಲ- ಸ್ಪೀಕರ್ ಸ್ಪಷ್ಟನೆ

    ಇದುವರೆಗೆ ಯಾರೂ ನನಗೆ ರಾಜೀನಾಮೆ ಕೊಟ್ಟಿಲ್ಲ- ಸ್ಪೀಕರ್ ಸ್ಪಷ್ಟನೆ

    ಕೋಲಾರ: ನನಗೆ ಯಾರೂ ರಾಜೀನಾಮೆ ಕೊಟ್ಟಿಲ್ಲ. ರಾತ್ರಿಯಿಂದ ನಾನು ಮನೆಯಲ್ಲೇ ಇದ್ದೇನೆ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

    ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೂವರೆಗೂ ನನ್ನನ್ನು ಯಾರೂ ಸಂಪರ್ಕಿಸಿಲ್ಲ. 20 ಶಾಸಕರು ರಾಜೀನಾಮೆ ಬೇಕಾದ್ರೆ ಕೊಡಲಿ. ತಮ್ಮ ಪಿಎ ವಿಶಾಲಾಕ್ಷಿಗೆ ರಾಜೀನಾಮೆ ಕೊಟ್ಟಿರುವುದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಾದ್ರೂ ರಾಜೀನಾಮೆ ಕೊಡಲಿ, ಬಿಜೆಪಿ ಪಕ್ಷದಿಂದ ಆದ್ರೂ ರಾಜೀನಾಮೆ ಕೊಡಲಿ. ನನಗೂ ಅದಕ್ಕೂ ಸಂಬಂಧವಿಲ್ಲ. 20 ಜನ ರಾಜೀನಾಮೆ ಕೊಟ್ಟರೂ ಪಡೆಯುವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಒಟ್ಟಿನಲ್ಲಿ ಸಿಎಂ ಅಮೆರಿಕ ಪ್ರವಾಸಕ್ಕೆ ತೆರಳಿದ್ದು ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆಷಾಢದ ಮೊದಲ ದಿನವೇ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ. ಹೊಸಪೇಟೆ ಶಾಸಕ ಆನಂದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಒಟ್ಟು 10 ಶಾಸಕರು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

    ಜಿಂದಾಲ್‍ಗೆ ಭೂಮಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಕುಸಿದಿದೆ. ಇತ್ತ ಮೂರು ದಿನಗಳಿಂದ ರಮೇಶ್ ಜಾರಕಿಹೊಳಿಯವರು ಎಲ್ಲೂ ಕಾಣಿಸುತ್ತಿಲ್ಲ. ಗೋಕಾಕ್ ನಲ್ಲೂ ಇಲ್ಲ. ಬೆಂಗಳೂರಿನಲ್ಲೂ ಇಲ್ಲ. ಈ ಮೂಲಕ ಆಪರೇಷನ್ ಕಮಲಕ್ಕೆ ಮಹೂರ್ತ ಫಿಕ್ಸ್ ಮಾಡಿ ಗೌಪ್ಯ ಜಾಗಕ್ಕೆ ಹೋದ್ರಾ ಎಂಬ ಪ್ರಶ್ನೆ ಎದ್ದಿದೆ.

  • ಶಾಸಕ ಗಣೇಶ್ ಅಮಾನತು ವಾಪಸ್ – ಪಕ್ಷದಲ್ಲೇ ಉಳಿಸಿಕೊಳ್ಳಲು ಕೈ ನಾಯಕರ ಹೊಸತಂತ್ರ

    ಶಾಸಕ ಗಣೇಶ್ ಅಮಾನತು ವಾಪಸ್ – ಪಕ್ಷದಲ್ಲೇ ಉಳಿಸಿಕೊಳ್ಳಲು ಕೈ ನಾಯಕರ ಹೊಸತಂತ್ರ

    ಬಳ್ಳಾರಿ: ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಮೇಲಿನ ಅಮಾನತನ್ನು ಕಾಂಗ್ರೆಸ್ ಹಿಂಪಡೆದಿದೆ.

    ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಗಣೇಶ್ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ವೇಳೆ ಪಕ್ಷದ ಮೇಲಿನ ಒತ್ತಡ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಉಂಟಾಗಬಹುದಾದ ಡ್ಯಾಮೆಜ್ ಕಂಟ್ರೋಲ್ ಮಾಡಲು ಜನವರಿ 1 ರಂದು ಕೆಪಿಸಿಸಿ ಶಾಸಕ ಜೆ ಎನ್ ಗಣೇಶರನ್ನ ಪಕ್ಷದಿಂದ ಅಮಾನತು ಮಾಡಿತ್ತು.

    ಇತ್ತ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಶಾಸಕ ಗಣೇಶ್ ಮತ್ತೆ ಪಕ್ಷದ ಪರ ಬ್ಯಾಟ್ ಬೀಸಿ ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಆಂತರಿಕವಾಗಿ ಪ್ರಕರಣನ್ನು ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಸದ್ಯ ಇದರ ಬೆನ್ನಲ್ಲೇ ಶಾಸಕರ ಅಮಾನತನ್ನು ವಾಪಸ್ ಪಡೆಯಲಾಗಿದೆ.

    ಗಲಾಟೆ ಪ್ರಕರಣದ ಬಗ್ಗೆ ಡಿಸಿಎಂ ಪರಮೇಶ್ವರ್, ಸಚಿವರಾದ ಕೃಷ್ಣಬೈರೇಗೌಡ ಹಾಗೂ ಕೆಜೆ ಜಾರ್ಜ್ ಅವರ ಸಮಿತಿ ನೀಡಿದ ವರದಿ ಆಧರಿಸಿ ಕಂಪ್ಲಿ ಶಾಸಕ ಗಣೇಶರ ಅಮಾನತು ವಾಪಸ್ ಪಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಅಮಾನತು ವಾಪಸು ಪಡೆದಿರುವ ಬಗ್ಗೆ ಕೆಪಿಸಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

    ಕೆಲ ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ಗಣೇಶ್, ನಾನು ಬಿಜೆಪಿಗೆ ಹೋಗಲ್ಲ. ಯಾವ ಶಾಸಕರು ಸಹ ಪದೇ ಪದೇ ಚುನಾವಣೆಗೆ ಹೋಗಲು ಸಿದ್ಧರಿಲ್ಲ. ರಾಜ್ಯದಲ್ಲಿ ಸಮಿಶ್ರ ಸರ್ಕಾರ ಸುಭದ್ರವಾಗಿದೆ. ರಮೇಶ್ ಜಾರಕಿಹೊಳಿ ನಮ್ಮ ಸಮಾಜದ ನಾಯಕರು. ಅವರನ್ನ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಮೇಶ್ ಜಾರಕಿಹೊಳಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡಬೇಕು ಎಂದಿದ್ದರು.

    ಪಕ್ಷ ಅಮಾನತು ಆದೇಶ ವಾಪಸ್ ಪಡೆಯುತ್ತಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ನಾನು ಆನಂದ್ ಸಿಂಗ್ ಒಳ್ಳೆಯ ಸ್ನೇಹಿತರು. ನನ್ನ ಅಮಾನತನ್ನು ಪಕ್ಷ ವಾಪಸ್ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

    ಇತ್ತ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಮೈತ್ರಿ ಪಕ್ಷಗಳ ನಾಯಕರು ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಬಂಡಾಯ ಶಾಸಕರನ್ನು ಮನವೊಲಿಸುವ ಕಾರ್ಯದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕ ಗಣೇಶ ಅಮಾನತನ್ನು ವಾಪಸ್ ಪಡೆಯಲಾಗಿದೆ.

  • ಶಾಸಕರ ಹೊಡೆದಾಟದ ವಿಡಿಯೋ ಬಹಿರಂಗ – ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ

    ಶಾಸಕರ ಹೊಡೆದಾಟದ ವಿಡಿಯೋ ಬಹಿರಂಗ – ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ

    ಬೆಂಗಳೂರು: ಈಗಾಲ್ಟನ್ ರೆಸಾರ್ಟ್ ನಲ್ಲಿ ಮಾರಾಮಾರಿ ನಡೆಸಿರುವವರು ಸಾಮಾನ್ಯ ವ್ಯಕ್ತಿಗಳಲ್ಲ. ಅವರಿಬ್ಬರೂ ಸಹ ಶಾಸಕರಾಗಿದ್ದು, ಆ ಸ್ಥಾನದ ಗೌರವವನ್ನು ಉಳಿಸಿಕೊಂಡು ಬೆಳೆಸಿಕೊಳ್ಳಬೇಕಿತ್ತು ಎಂದು ಸಂಸದ ಸುರೇಶ್ ಹೇಳಿದ್ದಾರೆ.

    ಶಾಸಕರ ಹೊಡೆದಾಟದ ವಿಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸುರೇಶ್ ಮಾತನಾಡಿದ್ದಾರೆ. ಜವಾಬ್ದಾರಿಯುತ ಶಾಸಕರ ಸ್ಥಾನದಲ್ಲಿದ್ದು ಈ ರೀತಿ ಕುಡಿದು ಗಲಾಟೆ ಮಾಡಿಕೊಂಡಿರುವುದು ಸರಿಯಲ್ಲ. ಆದರೆ ಪ್ರಕರಣ ನ್ಯಾಯಾಲಯಲ್ಲಿ ಇರುವ ಕಾರಣ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಉತ್ತಮವಲ್ಲ ಎಂದರು.

    ಇಬ್ಬರು ಶಾಸಕರ ನಡುವಿನ ಹೊಡೆತ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂಧರ್ಭದಲ್ಲಿಯೇ, ಇಬ್ಬರು ಶಾಸಕರು ಹೊಡೆದಾಡುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಈ ವರದಿಯನ್ನು ನಾನು ನೋಡಿದ್ದು, ವಿಡಿಯೋ ತುಣುಕು ಯಾರು ಕೊಟ್ಟಿದ್ದಾರೆ ಅವರೇ ಸಂಪೂರ್ಣ ವಿಡಿಯೋವನ್ನು ಕೊಟ್ಟರೆ ಪೊಲೀಸರಿಗೆ ಹಾಗು ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ ಎಂದರು. ಇದನ್ನು ಓದಿ: ರೆಸಾರ್ಟ್ ನಲ್ಲಿ ಶಾಸಕರಿಬ್ಬರ ಡಿಶುಂ ಡಿಶುಂ – ಫಸ್ಟ್ ಪಂಚ್ ಮಾಡಿದ್ಯಾರು?

    ಇಬ್ಬರು ಶಾಸಕರಾಗಿರುವ ಕಾರಣ ಅವರ ಗೌರವವನ್ನು ಉಳಿಸಿ ಕಾಪಾಡಿಕೊಂಡು ಹೋಗಬೇಕು. ಕುಡಿದು ಈ ರೀತಿ ಮಾರಾಮಾರಿ ನಡೆದಿರುವುದು ಸರಿಯಲ್ಲ. ಗಲಾಟೆ ಎಷ್ಟು ನಿಮಿಷ, ಎಷ್ಟು ಗಂಟೆಗಳ ಕಾಲ ಗಲಾಟೆ ನಡೆದಿದೆ ಎಂದು ವಿಡಿಯೋ ಮಾಡಿದವರೆ ಹೇಳಬೇಕು. ಹುಡುಗಿ ವಿಷಯಕ್ಕೆ ಗಲಾಟೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಆ ಬಗ್ಗೆ ನಮಗೇನು ಗೊತ್ತಿಲ್ಲ ಎಂದರು.

    2019ರ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯ ಭಾಗವಾಗಿ ಇಂದು ಬೆಂಗಳೂರು ಹೊರವಲಯ ಮಳೆನಲ್ಲಸಂದ್ರ ಗ್ರಾಮದ ಕಾರ್ಯಕ್ರಮದಲ್ಲಿ ಸಂಸದರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

    ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಬರೋಬ್ಬರಿ ಒಂದು ತಿಂಗಳು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಶಾಸಕ ಗಣೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ನಾಪತ್ತೆಯಾಗಿ ವಿವಿಧ ಪ್ರದೇಶಗಳಿಗೆ ತೆರಳಿದ್ದ ಶಾಸಕ ಗಣೇಶ್ ಸದ್ಯ ಗುಜರಾತ್ ಸೋಮನಾಥ ದೇವಾಲಯದ ಬಳಿ ಬಂಧನವಾಗಿದ್ದಾರೆ.

    ಗಣೇಶ್ ಅವರ ಬಂಧನದ ಹಿಂದೆ ಹಲವು ಅನುಮಾನಗಳು ಮೂಡಿದ್ದು, ಇಷ್ಟು ದಿನ ಪೊಲೀಸರ ಕೈಗೆ ಸಿಗದೇ ಇದ್ದ ಗಣೇಶ್ ಬಂಧನ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಎದ್ದಿದೆ. ಬಿಡದಿ ಪೊಲೀಸರು 3 ತಂಡ ಮುಂಬೈ, ಅಂಡಮಾನ್, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣೇಶ್ ಅವರಿಗಾಗಿ ಹುಡುಕಾಟ ನಡೆಸಿತ್ತು.

    ಎಷ್ಟೇ ಹುಡುಕಾಟ ನಡೆಸಿದರೂ ಒಂದು ತಿಂಗಳಿನಿಂದ ಶಾಸಕ ಗಣೇಶ್ ಅವರು ಪತ್ತೆಯಾಗಿರಲಿಲ್ಲ. ಆದರೆ ಕಳೆದ ವಾರದ ಹಿಂದೆ ಗಣೇಶ್ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. ಈ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸ್ ತಂಡ ಬುಧವಾರ ಬೆಳಗ್ಗೆ 11.30ರ ವೇಳೆಗೆ ಶಾಸಕರನ್ನು ಬಂಧಿಸಿದೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಚ್ಚರಿ ಹೇಳಿಕೆ ಬಳಿಕ ಗಣೇಶ್ ಅವರ ಬಂಧನ ಆಗಿರುವುದು ಕೂಡ ಕುತೂಹಲ ಮೂಡಿಸಿದೆ. ರಮೇಶ್ ಅವರ ಬಳಗದಲ್ಲಿ ಗಣೇಶ್ ಅವರು ಕಾಣಿಸಿಕೊಂಡ ಕಾರಣದಿಂದ ಶಾಸಕ ಬಂಧನಕ್ಕೆ ಸರ್ಕಾರ ಮುಂದಾಯಿತೇ ಎಂಬ ಪ್ರಶ್ನೆಯೂ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿರುವ ಆನಂದ್ ಸಿಂಗ್ ಅವರು ಶಾಸಕ ಗಣೇಶ್ ಬಂಧನಕ್ಕೆ ಒತ್ತಡ ಹೇರಿದ್ದರು ಎನ್ನಲಾಗಿದೆ.

    ಗಣೇಶ್ ಬಂಧನ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಆನಂದ್ ಸಿಂಗ್ ಅವರ ಸಹೋದರ ಪ್ರವೀಣ್ ಸಿಂಗ್, ನಮಗೆ ಆಗಿರುವ ಅನ್ಯಾಯಕ್ಕೆ ಶಿಕ್ಷೆ ಆಗಬೇಕಿದೆ. ನ್ಯಾಯಾಂಗ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು. ಅಲ್ಲದೇ ಇದೇ ವೇಳೆ ಸಂಧಾನ ಕುರಿತ ಪ್ರಶ್ನೆಗೆ ಉತ್ತರಿಸಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಸಂಧಾನದ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv