Tag: ಶಾಸಕ ಅರುಣ್ ನಾರಂಗ್

  • ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಚಂಡೀಗಢ: ಮುಕ್ತಸರ್ ಜಿಲ್ಲೆಯ ಮಾಲೌಟ್‍ನಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಪಂಜಾಬ್‍ನ ಬಿಜೆಪಿ ಶಾಸಕ ಅರುಣ್ ನಾರಂಗ್ ಬಟ್ಟೆ ಹರಿದು ಹೋಗುವಂತೆ ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ನಾಯಕರೊಂದಿಗೆ ಸುದ್ದಿಗೋಷ್ಠಿಗೆಂದು ಅಬೋಹರ್ ಶಾಸಕ ಅರುಣ್ ನಾರಂಗ್ ಮಾಲೌಟ್‍ಗೆ ಆಗಮಿಸಿದ್ದ ವೇಳೆ, ರೈತರು ಶಾಸಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಬಳಿಕ ಪೊಲೀಸರು ಅರುಣ್ ನಾರಂಗ್‍ರನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್, ರೈತರು ಬಿಜೆಪಿ ಶಾಸಕ ಅರುಣ್ ನಾರಂಗ್‍ರವರಿಗೆ ಸುದ್ದಿಗೋಷ್ಠಿ ನಡೆಸಲು ಬಿಡಲಿಲ್ಲ ಎಂದು ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಬಟ್ಟೆ ಹರಿದು ಹೋಗಿದ್ದ ಶಾಸಕರನ್ನು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದಯ್ಯುತ್ತಿವುದನ್ನು ಕಾಣಬಹುದಾಗಿದೆ. ಸದ್ಯ ಘಟನೆ ಕುರಿತಂತೆ 7 ಮಂದಿ ಹೆಸರಿನಲ್ಲಿ ಹಾಗೂ 200-250 ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ಸೇವೆಗೆ ಅಡ್ಡಿ, ಕೊಲೆ, ಹಲ್ಲೆ, ಜೀವ ಬೆದರಿಕೆ ಮತ್ತು ಗಲಭೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಘಟನೆ ಕುರಿತಂತೆ ಮಾತನಾಡಿದ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಠಿಗೆಂದು ನಾನು ಮಾಲೌಟ್‍ಗೆ ಹೋಗಿದ್ದೆ. ಈ ವೇಳೆ ಪ್ರತಿಭಟನಕಾರರು ನನಗೆ ಮಾತನಾಡಲು ಅವಕಾಶ ಮಾಡಿಕೊಡಲಿಲ್ಲ. ನನ್ನನ್ನು ಸುತ್ತುವರೆದರು. ನನ್ನ ಮೇಲೆ ಕೆಲವರು ಹಲ್ಲೆ ಮಾಡಿ ಹಿಂಸಾಕೃತ್ಯವನ್ನು ಎಸಗಿದರು ಎಂದು ಹೆಳಿದರು.

    ಈ ವಿಚಾರವಾಗಿ ಯಾರ ಮೇಲೆ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಈ ಬಗ್ಗೆ ನಾನು ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ ಎಂದರು.

    ಸದ್ಯ ಶಾಸಕರ ಮೇಲಿನ ಹಲ್ಲೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದು, ಶಾಂತಿಯತೆಯನ್ನು ಹಾಳು ಮಾಡಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ನಿರತ ರೈತರು ಹಿಂಸೆ ಮಾರ್ಗದತ್ತ ತೆರಳಬಾರದು ಹಾಗೂ ನೂತನ ಕೃಷಿ ಕಾಯಿದೆ ವಿಚಾರವಾಗಿ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.