Tag: ಶಾಸಕಿಯರು

  • ಅವರೆ ಬೇರೆ ನಾವೇ ಬೇರೆ ಅಂತ ಹೊಸ ವರಸೆ ತಗೆದ ಶಾಸಕಿಯರು

    ಅವರೆ ಬೇರೆ ನಾವೇ ಬೇರೆ ಅಂತ ಹೊಸ ವರಸೆ ತಗೆದ ಶಾಸಕಿಯರು

    ಬೆಂಗಳೂರು: ಅವರೆಲ್ಲಾ ಸದನದ ಒಳಗೆ ಬೇರೆ ಬೇರೆ ಆದರೆ ಸದನದ ಹೊರಗೆ ಒಟ್ಟೊಟ್ಟಿಗೆ ಇದ್ದವರು. ಆದರೆ ಈಗ ಆ ಶಾಸಕರ ಮನಸ್ಸು ಮುರಿದು ಪರಸ್ಪರ ಒಬ್ಬರನೊಬ್ಬರು ನೋಡದಷ್ಟು ಅಸಮಾಧಾನ ಶುರುವಾದಂತಿದೆ.

    ಇದು ಮಹಿಳಾ ಶಾಸಕಿಯರ ಅಸಮಾಧಾನದ ಸ್ಟೋರಿ. ವಿಪಕ್ಷದಲ್ಲಿ ಕೂರುವ ಮಹಿಳಾ ಶಾಸಕಿಯರೇ ಬೇರೆ, ಆಡಳಿತ ಪಕ್ಷದಲ್ಲಿ ಕೂರುವ ಮಹಿಳಾ ಶಾಸಕಿಯರೇ ಬೇರೆ. ಆದ್ದರಿಂದ ಬೇರೆ ಬೇರೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಿ ಎಂದು ಕಾಂಗ್ರೆಸ್ ಮಹಿಳಾ ಶಾಸಕಿಯರು ವಿಧಾನಸಭಾ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

    ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡು ಕಡೆಯಲ್ಲಿ ಶಾಸಕರ ವಿಶ್ರಾಂತಿಗೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಲಾಂಜ್ ಪ್ರತ್ಯೇಕವಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡು ಕಡೆ ಮಹಿಳಾ ಶಾಸಕಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯೂ ಇದೆ. ಆದರೆ ವಿಧಾನಸಭೆಯ ಮಹಿಳಾ ಶಾಸಕಿಯರ ವಿಶ್ರಾಂತಿ ಕೊಠಡಿ ಆಡಳಿತ ಪಕ್ಷದ ಲಾಂಜ್ ಕಡೆಗಿದೆ. ಆದರೆ ಕಾಂಗ್ರೆಸ್‍ನಲ್ಲಿ ಆಂಗ್ಲೋ ಇಂಡಿಯನ್ ಶಾಸಕಿಯೂ ಸೇರಿ ಒಟ್ಟು 7 ಜನ ಮಹಿಳಾ ಶಾಸಕಿಯರಿದ್ದಾರೆ. ಬಿಜೆಪಿಯಲ್ಲಿ 3 ಜನ ಮಹಿಳಾ ಶಾಸಕಿಯರಿದ್ದಾರೆ. ಜೆಡಿಎಸ್‍ನ ಅನಿತಾ ಕುಮಾರಸ್ವಾಮಿ ಸೇರಿ ಒಟ್ಟು 11 ಜನ ಮಹಿಳಾ ಶಾಸಕಿಯರಿದ್ದಾರೆ.

    ಕಾರ್ಯದರ್ಶಿಗೆ ಮನವಿ ಮಾಡಿರುವ ಶಾಸಕಿಯರಾದ ಕನಿ ಫಾತೀಮ, ಅಂಜಲಿ ನಿಂಬಾಳ್ಕರ್ ಹಾಗೂ ಕುಸುಮ ಶಿವಳ್ಳಿ ಆಡಳಿತ ಪಕ್ಷದ ಮಹಿಳಾ ಶಾಸಕಿಯರೇ ಬೇರೆ, ವಿಪಕ್ಷದ ಮಹಿಳಾ ಶಾಸಕಿಯರೇ ಬೇರೆ ನಮಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಕೊಡಿ ಎಂದಿದ್ದಾರೆ. ವಿಪಕ್ಷದ ಲಾಂಜ್ ಬಳಿಯೇ ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಿ, ಅವರು ಆಡಳಿತ ಪಕ್ಷದ ಕಡೆ ಇರಲಿ, ನಾವು ವಿಪಕ್ಷದ ಕಡೆ ಇರುತ್ತೇವೆ. ಆದಷ್ಟು ಬೇಗ ಬೇರೆ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.

    ವಿಧಾನಸೌಧ ನಿರ್ಮಾಣವಾದಾಗಿನಿಂದ ಒಟ್ಟೊಟ್ಟಿಗೆ ಇರುತ್ತಿದ್ದ ಮಹಿಳಾ ಶಾಸಕಿಯರಿಗೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಒಟ್ಟೊಟ್ಟಿಗೆ ವಿಶ್ರಾಂತಿ ಕೊಠಡಿಯಲ್ಲಿ ಕೂರಲಾರದಷ್ಟು ಮನಸ್ಸು ಕೆಟ್ಟಿದೆಯ ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ.

  • ಸಚಿವ ಸ್ಥಾನ ಕೊಟ್ರೆ ಮಹಿಳೆಯರೇ ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡ್ತಾರೆ- ಪುಷ್ಪಾ ಅಮರನಾಥ್

    ಸಚಿವ ಸ್ಥಾನ ಕೊಟ್ರೆ ಮಹಿಳೆಯರೇ ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡ್ತಾರೆ- ಪುಷ್ಪಾ ಅಮರನಾಥ್

    ಕೊಪ್ಪಳ: ಸಚಿವ ಸಂಪುಟದಲ್ಲಿ ಮಹಿಳಾ ಶಾಸಕಿಯರಿಗೆ ಸ್ಥಾನ ಕೊಟ್ರೆ ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡ್ತಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.

    ಕಾಂಗ್ರೆಸ್‍ನಲ್ಲಿ ಐದು ಜನ ಮಹಿಳಾ ಶಾಸಕಿಯರಿದ್ದಾರೆ. ಡಿಸೆಂಬರ್ 22 ರಂದು ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳಾ ಶಾಸಕಿಯರಿಗೆ ಅವಕಾಶ ನೀಡಬೇಕು. ಪುರುಷರಿಗಿಂತ ಮಹಿಳೆಯರು ಜಾಸ್ತಿ ಕೆಲಸ ಮಾಡ್ತಾರೆ. ಐದು ಜನರಿಗೆ ಸಚಿವ ಸ್ಥಾನ ಕೊಟ್ರೂ ನಾನು ಖುಷಿ ಪಡ್ತೀನಿ, ಎಲ್ಲರು ಯಶಸ್ವಿಯಾಗಿ ಕೆಲಸ ಮಾಡ್ತಾರೆ ಅಂತ ನಂಬಿಕೆ ಇದೆ ಎಂದು ಪುಷ್ಪಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪುರುಷರಿಗಿಂತ ಚೆನ್ನಾಗಿ ಮಹಿಳೆಯರೇ ಕೆಲಸ ಮಾಡ್ತಾರೆ ಎಂದು ನಾನು ಸಾರಿ ಸಾರಿ ಹೇಳ್ತೀನಿ. ಐದು ಜನರಿಗೆ ಸಚಿವ ಸ್ಥಾನ ಕೊಟ್ರೆ ನಾವು ಹಬ್ಬ ಮಾಡ್ತೀವಿ. ಆದ್ರೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಸ್ಥಾನ ಕೊಡಬೇಕು ಎಂದು ಹಿರಿಯ ನಾಯಕರು ನಿರ್ಧರಿಸಿದ್ದಾರೆ. ಹಾಗಾಗಿ ಮಹಿಳಾ ಶಾಸಕಿಯರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯ ರೀತಿ ಕೆಲಸ ಮಾಡ್ತೀವಿ ಅಂತ ಭರವಸೆ ನೀಡಿದ್ದಾರೆ.

    ಸಚಿವ ಸಂಪುಟದಿಂದ ಜಯಮಾಲಾ ಅವರನ್ನು ಕೈಬಿಡೋ ವಿಚಾರ ನನಗೆ ಗೊತ್ತಿಲ್ಲ, ಯಾವುದೇ ಮಾಹಿತಿ ಇಲ್ಲ. ನಾನು ಮಹಿಳೆಯರಿಗೆ ಅವಕಾಶ ಮಾಡಿಕೊಡಿ ಎಂದು ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದೇನೆ ಎಂದ ಪುಷ್ಪಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv