Tag: ಶಾಸಕರ ಮನೆ

  • ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ

    ಅಖಂಡ ಶ್ರೀನಿವಾಸ ಮೂರ್ತಿ ಬದುಕು ಅಕ್ಷರಶಃ ಬೀದಿಗೆ

    – ಬೆಳಗ್ಗೆ 2 ಪ್ಯಾಂಟ್ ಹಾಗೂ 2 ಶರ್ಟ್ ಖರೀದಿ
    – ತಾತ್ಕಾಲಿಕವಾಗಿ ಹೋಟೆಲ್‍ನಲ್ಲಿ ಉಳಿದುಕೊಂಡ ಕುಟುಂಬ

    ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದೂ ವಸ್ತು ಉಳಿದಿಲ್ಲ. ಬಟ್ಟೆ ಸೇರಿ ಎಲ್ಲವೂ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆ ಶಾಸಕರು ಇಂದು ಬೆಳಗ್ಗೆ ಬಟ್ಟೆ ಖರೀದಿಸಿದ್ದಾರೆ.

    ಇಂದು ಬೆಳಗ್ಗೆ ಅವರ ಸ್ನೇಹಿತರು ಪ್ಯಾಂಟ್, ಶರ್ಟ್ ತಂದು ಕೊಟ್ಟಿದ್ದಾರೆ. ನಿನ್ನೆ ಮನೆಯಿಂದ ಹೊರಹೋಗುವಾಗ ಹಾಕಿದ್ದ ಪ್ಯಾಂಟ್ ಶರ್ಟ್ ಬಿಟ್ಟರೆ ಮನೆಯಲ್ಲಿದ್ದ ಬೇರೆ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅವರ ಪತ್ನಿ, ಮಕ್ಕಳು ಸಹ ಇಂದು ಹೊಸದಾಗಿ ಬಟ್ಟೆ ಖರೀದಿಸಿ ಧರಿಸಿದ್ದಾರೆ. ಅಲ್ಲದೆ ತಾತ್ಕಾಲಿಕವಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಮೂರು ಅಂತಸ್ಥಿನ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಶಾಸಕರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಸೋಫಾ, ಟೇಬಲ್, ಖುರ್ಚಿ ಸೇರಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಪೆಟ್ರೋಲ್ ಬಾಂಬ್ ಮೂಲಕ ಇಡೀ ರಾತ್ರಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದು ಶಾಸಕರು ಇಷ್ಟು ದಿನ ವಾಸವಿದ್ದ ಮನೆಯೇ ಎಂಬ ಅನುಮಾನ ಮೂಡುತ್ತದೆ. ಅಷ್ಟರಮಟ್ಟಿಗೆ ಎಲ್ಲವೂ ಸುಟ್ಟು ಹೋಗಿದೆ.

    ಕೇವಲ ಶಾಸಕರ ಮನೆ, ವಾಹನಗಳು ಮಾತ್ರವಲ್ಲ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಹ ಸುಟ್ಟು ಕರಕಲಾಗಿದೆ. ಅಲ್ಲದೆ ಸ್ಥಳೀಯರ ವಾಹನಗಳಿಗೂ ಸಹ ಬೆಂಕಿ ಹಚ್ಚಿದ್ದು, ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆಯೊಳಗೆ ನುಗ್ಗಿ ವಸ್ತುಗಳನ್ನು ನಾಶ ಮಾಡಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಡಿಸಿಪಿ ವಾಹನವನ್ನು ಸಹ ಬಿಡದೆ ಬೆಂಕಿ ಹಚ್ಚಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

  • ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    ಕಾರ್ ಜಖಂಗೊಳಿಸಿ ಪುಂಡಾಟ, ಇಡೀ ಮನೆ ಧ್ವಂಸಗೈದ್ರು

    – ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆ ಮೇಲೆ ದಾಳಿ
    – ಕಾರ್ ಕೀ ಕಿತ್ತುಕೊಂಡು ಡಿಕ್ಕಿ ಹೊಡೆಸಿದರು
    – ಪಬ್ಲಿಕ್‌ ಟಿವಿಗೆ ಘಟನೆ ವಿವರಿಸಿದ ಪ್ರತ್ಯಕ್ಷದರ್ಶಿಗಳು

    ಬೆಂಗಳೂರು: ಮನೆ ಪ್ರವೇಶಿಸಿ ನಿಲ್ಲಿಸಿದ್ದ ವಾಹನವನ್ನು ಧ್ವಂಸ. ಬಳಿಕ ಮನೆಯ ಒಳಗಡೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳು ಚೆಲ್ಲಾಪಿಲ್ಲಿ – ಇದು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಗಲಾಟೆಯ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದು ಹೀಗೆ.

    ಘಟನೆ ಕುರಿತು ಆಂಜನೇಯ ದೇವಸ್ಥಾನದ ಮ್ಯಾನೇಜರ್ ಪುತ್ರ ಪಬ್ಲಿಕ್ ಟಿವಿಗೆ ವಿವರಿಸಿದ್ದು, ಯಾವುದೇ ಕಾರಣ ಹೇಳದೇ ಏಕಾಏಕಿ 30-35ಜನ ಮನೆಗೆ ನುಗ್ಗಿದರು. ನಂತರ ಒಡೆಯಲು ಶುರು ಮಾಡಿದರು, ಒಡೆಯಲು ಶುರು ಮಾಡುತ್ತಿದ್ದಂತೆ ನಾವು ಪಕ್ಕದ ಮನೆಗೆ ಹೋದೆವು. ಲಾಂಗ್ ಮಚ್ಚುಗಳನ್ನು ಎತ್ತಿ ತೋರಿಸಿಕೊಂಡು, ಬಂದು ಗಲಾಟೆ ಎಬ್ಬಿಸಿದರು ಎಂದು ತಿಳಿಸಿದ್ದಾರೆ.

    ಮೊದಲು ನಾಲ್ಕು ಜನ ದ್ವಿಚಕ್ರ ವಾಹನಗಳಲ್ಲಿ ಬಂದು ಅವರೇ ಇತರರಿಗೆ ಹೇಳಿಕೊಟ್ಟರು. ಇದನ್ನು ಒಡೆಯಿರಿ, ಹೀಗೆ ಒಡೆಯಿರಿ ಎಂದು ಹೇಳಿದರು. ಕಾರ್‌ಗಳನ್ನು ಹೊರಗಡೆ ತೆಗೆದುಕೊಂಡು ಹೋಗಿ ಗುದ್ದಿಸಿ ಜಖಂ ಮಾಡಿದರು. ಮೊದಲು ನಾಲ್ಕು ಜನ ಬಂದಾಗ ಅಖಂಡ ಶ್ರೀನಿವಾಸಮೂರ್ತಿ ಮನೆಯಾವುದು ಎಂದು ಕೇಳಿದರು. ಆ ಕಡೆ ಇದೆ ಎಂದು ಹೇಳಿದೆವು. ಆದರೂ ಎಲ್ಲವನ್ನು ಒಡೆದುಕೊಂಡು ಹೋದರು. ಅದನ್ನು ಹೇಳಿಕೊಂಡೇ ಒಡೆದು ಎಲ್ಲ ಚಿಂದಿ ಮಾಡಿದರು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

    ಮೊದಲು 10-15 ಜನ ಲಾಂಗ್ ಜಳಪಿಸುತ್ತ ಬಂದರು. ಬರುತ್ತಿದ್ದಂತೆ ಧ್ವಂಸ ಮಾಡಲು ಮುಂದಾದರು. ನಾವು ಹೆದರಿಕೊಂಡು ಪಕ್ಕದ ಮನೆಗೆ ಹೋದೆವು. ನಂತರ 30-40 ಜನ ಬಂದು ಕೃತ್ಯ ಎಸಗಿದರು. ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಯಾವುದು ಎಂದು ಹೇಳಿಕೊಂಡೇ ಎಲ್ಲವನ್ನೂ ಒಡೆದು ಹಾಕಿದರು ಎಂದು ಅವರು ದುಃಖವನ್ನು ತೋಡಿಕೊಂಡರು.

    ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐ ಬೆಂಗಳೂರು ಕಾರ್ಯದರ್ಶಿ ಎ1 ಆರೋಪಿ ಮುಜಾಮಿಲ್ ಪಾಶಾ ಸೇರಿದಂತೆ ಈ ವೆರೆಗೆ 110 ಜನರನ್ನು ಬಂಧಿಸಲಾಗಿದೆ. ಅಲ್ಲದೆ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಈ ಕುರಿತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಹೈದರಾಬಾದ್ ಹಾಗೂ ಚೆನ್ನೈನಿಂದ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಕರೆಸಲಾಗುತ್ತಿದೆ.

    ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಶಾಸಕರ ಸಂಬಂಧಿ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದೆ.

    100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

    ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು.