Tag: ಶಾಸಕರು

  • ಮಂಗಳವಾರ ರಾತ್ರಿಯಿಂದ ಹೋಟೆಲ್ ಕಡೆ ತಲೆ ಹಾಕದ ಡಿಕೆ ಬ್ರದರ್ಸ್!

    ಮಂಗಳವಾರ ರಾತ್ರಿಯಿಂದ ಹೋಟೆಲ್ ಕಡೆ ತಲೆ ಹಾಕದ ಡಿಕೆ ಬ್ರದರ್ಸ್!

    ಬೆಂಗಳೂರು: ಹೊಸ ಸರ್ಕಾರದ ರಚನೆ ಮುನ್ನವೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರದ ಡಿಸಿಎಂ ಹುದ್ದೆ ಸಿಗದ ಕಾರಣ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೈಕಮಾಂಡ್ ವಿರುದ್ಧ ಸಮಾಧಾನಗೊಂಡಿದ್ದಾರೆ.

    ಆಪರೇಷನ್ ಕಮಲ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿಟ್ಟು ರಕ್ಷಿಸಿದ್ದ ಡಿಕೆ ಶಿವಕುಮಾರ್, ಪಕ್ಷ ಸಂಕಷ್ಟದಲ್ಲಿದ್ದ ಹಲವು ಸಂದರ್ಭದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು. ಇಷ್ಟು ದಿನ ಜವಾಬ್ದಾರಿ ಹೊತ್ತಿದ್ದ ಡಿಕೆ ಬ್ರದರ್ಸ್ ಸದ್ಯ ಶಾಸಕರು ತಂಗಿದ್ದ ಹೋಟೆಲ್ ಕಡೆ ಮುಖ ಮಾಡದೇ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

    ನಿನ್ನೆ ರಾತ್ರಿಯಿಂದ ಡಿಕೆ ಬ್ರದರ್ಸ್ ಹೋಟೆಲ್ ನತ್ತ ಮುಖ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿ ಎಚ್‍ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಗಮಿಸುತ್ತಿದ್ದರೂ ಶಾಸಕರು ತಂಗಿರುವ ಹಿಲ್ಟನ್ ಹೊಟೇಲ್ ನಲ್ಲಿ ಇಬ್ಬರು ಕಾಣಿಸಿಕೊಂಡಿಲ್ಲ.

    ಸರ್ಕಾರ ರಚನೆ ವೇಳೆ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಡಿಸಿಎಂ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಕ ಮಾಡಿ ಅಂತಿಮಗೊಳಿಸಿದ್ದರಿಂದ ಯಾವ ಜವಾಬ್ದಾರಿ ಸಹ ಬೇಡ ಎಂದು ಶಾಸಕರೊಂದಿಗೆ ಹಾಗೂ ಹಿರಿಯ ಮುಖಂಡರೊಂದಿಗೆ ರೇಗಾಡಿ ಹೊಟೇಲ್ ನಿಂದ ತೆರಳಿದ್ದರು ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಅರಂಭದಿಂದಲೂ ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದರು. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.

    ಈ ನಡುವೆ ಕರ್ನಾಟಕ ರಾಜಕೀಯದಲ್ಲಿ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಅಲ್ಲದೇ ಬಿಎಸ್‍ವೈ ಪ್ರಮಾಣ ಸ್ವೀಕರ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಅಂದು ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು.

    ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಹೈ ಕಮಾಂಡ್ ಗೆ ಮೆಚ್ಚುಗೆ ಆಗಿತ್ತು. ಹೀಗಾಗಿ ಡಿಕೆಶಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಿಂದ ಕೇಳಿಬಂದಿತ್ತು.

  • ಆಪರೇಶನ್ ಕಮಲದ ಭೀತಿಯಿಂದ ಮತ್ತೊಂದು ಹೋಟೆಲ್‍ಗೆ ಜೆಡಿಎಸ್ ಶಾಸಕರು ಶಿಫ್ಟ್!

    ಆಪರೇಶನ್ ಕಮಲದ ಭೀತಿಯಿಂದ ಮತ್ತೊಂದು ಹೋಟೆಲ್‍ಗೆ ಜೆಡಿಎಸ್ ಶಾಸಕರು ಶಿಫ್ಟ್!

    ಚಿಕ್ಕಬಳ್ಳಾಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್‍ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗೋಲ್ಡನ್ ಶೈರ್ ವಿಲ್ಲಾಸ್‍ಗೆ ಶಿಫ್ಟ್ ಆಗಿದ್ದಾರೆ.

    ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ಜೆಡಿಎಸ್ ಶಾಸಕರನ್ನು ಕ್ಷೇತ್ರಗಳಿಗೆ ಕಳಿಸದೇ ಶಾಸಕರು ಒಟ್ಟಾಗಿ ಇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ದೇವನಹಳ್ಳಿ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟಿಜ್ ಗಾಲ್ಫ್ ರೆಸಾರ್ಟ್‍ನಲ್ಲಿ 38 ರೂಂಗಳನ್ನ ಬುಕ್ ಮಾಡಲಾಗಿದೆ. ಈ ಹಿನ್ನಲೆ ಕಳೆದ ರಾತ್ರಿ 35 ಜೆಡಿಎಸ್ ಶಾಸಕರು ರೆಸಾರ್ಟ್‍ಗೆ ಆಗಮಿಸಿದ್ದು, ಕೆಲ ಶಾಸಕರು ತಮ್ಮ ಕುಟುಂಬಸ್ಥರ ಜೊತೆ ವಿಲ್ಲಾಗಳಲ್ಲಿ ತಂಗಿದ್ದಾರೆ.

    ಇನ್ನೂ ಎರಡು ಮೂರು ದಿನಗಳ ಕಾಲ ಜೆಡಿಎಸ್ ಶಾಸಕರು ವಿಲ್ಲಾಗಳಲ್ಲೇ ಉಳಿಯಲಿದ್ದು, ಜೆಡಿಎಸ್ ಶಾಸಕರು ತಮ್ಮ ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ. ವಿಶ್ವಾಸ ಮತಯಾಚನೆಗೂ ಮುನ್ನ ಆಪರೇಶನ್ ಕಮಲದ ಭೀತಿಯಿಂದ ಪಾರಾಗಲು ಕುಮಾರಸ್ವಾಮಿಯವರು ಈ ರೀತಿಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಇನ್ನೂ ಇಂದು ಬೆಳಗ್ಗೆಯಿಂದಲೂ ರೆಸಾರ್ಟ್‍ಗೆ ತೆರಳುವ ಸಿಬ್ಬಂದಿಯನ್ನು ತಪಾಸಣೆ ಮಾಡುತ್ತಿರುವ ಪೊಲೀಸರು ಹಾಗೂ ವಿಲ್ಲಾಸ್ ಭದ್ರತಾ ಸಿಬ್ಬಂದಿ ಯಾರಿಗೂ ಒಳಗೆ ಪ್ರವೇಶವನ್ನು ಕಲ್ಪಿಸಿಕೊಟ್ಟಿಲ್ಲ. ಜೊತೆಗೆ ಇಂದು ಬೆಳಗ್ಗೆ 11 ಗಂಟೆ ನಂತರ ಹಾಸನದಿಂದ ಕುಮಾರಸ್ವಾಮಿಯವರು ರೆಸಾರ್ಟ್‍ಗೆ ಆಗಮಿಸುವ ನಿರೀಕ್ಷೆಯಿದ್ದು, ಶಾಸಕರ ಜೊತೆ ಉಭಯ ಕುಶಲೋಪರಿ ನಡೆಸಿ ನಂತರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಹೆಚ್‍ಡಿಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

  • ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ

    ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ

    ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ನಲ್ಲಿ ಕುದುರೆ ವ್ಯಾಪಾರ ಜೋರಾಗಿದ್ದು, ಬಿಜೆಪಿ ಪರವಾಗಿ ಸ್ವತಃ ಜನಾರ್ದನ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.

    ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಮತ್ತು ಪ್ರೊ ರಾಜೀವ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಜನಾರ್ದನ ರೆಡ್ಡಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಅವರಿಗೆ ಕರೆ ಮಾಡಿ ಆಫರ್ ನೀಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ನೂರು, ನೂರೈವತ್ತು ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ. ಅಮಿತ್ ಶಾ ಕೂಡ ಆಮಿಷವೊಡ್ಡಿದ್ದಾರೆ. ನೂರು ಕೋಟಿ ರೂ. ಜೊತೆಗೆ ಕ್ಯಾಬಿನೆಟ್ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಮ್ಮ ಶಾಸಕರ ಕುಟುಂಬದವರನ್ನ ಸಂಪರ್ಕಿಸಿ ಹಣ ನೀಡುವ ಕೆಲಸ ಮಾಡಿ, ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

    ಮಾತುಕತೆಯ ವೇಳೆ ಜನಾರ್ದನ ರೆಡ್ಡಿ ನೇರವಾಗಿ ಅಮಿತ್ ಶಾ ಅವರೊಂದಿಗೆ ಕೂತು ಮಾತನಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು, ಒನ್ ಟು ಓನ್ ನಾನೇ ಅಮಿತ್ ಶಾ ಬಳಿ ಮಾತನಾಡಿಸುತ್ತೇನೆ. ಈಗಿರುವ ಆಸ್ತಿಯ ನೂರರಷ್ಟು ಆಸ್ತಿಯನ್ನು ಮಾಡಿಕೊಳ್ಳಬಹುದು. ನಿನಗೆ ಒಳ್ಳೆಯ ಸಮಯ ಬಂದಿದೆ ಎಂದು ಆಫರ್ ನೀಡಿದ್ದಾರೆ.

    ರೆಡ್ಡಿ ಅಮಿಷಕ್ಕೆ ಒಳಗಾಗದ ಬಸನಗೌಡ ಅವರು, ಕಾಂಗ್ರೆಸ್ ಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದಿದೆ. ಆದರೆ ನಿಮ್ಮ ಮೇಲೆ ಗೌರವವಿದೆ. ಆದರೆ ತಾನು ಪಕ್ಷಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.

    ಕಾಂಗ್ರೆಸ್ ಸುದ್ದಿಗೋಷ್ಠಿ ವೇಳೆ ಅಮಿತ್ ಶಾ ಅವರು ಸಹ ನಮ್ಮ ಶಾಸಕರಿಗೆ ಆಮಿಷ ನೀಡಿದ್ದಾರೆ. ಈ ವಿಡಿಯೋ ಸಹ ನಮ್ಮ ಬಳಿ ಇದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಮಾತುಕತೆಯಲ್ಲಿ ಏನಿತ್ತು?

    ಜನಾರ್ದನ ರೆಡ್ಡಿ ಪಿಎ – ಹಲೋ
    ಬಸವನಗೌಡ – ಹಲೋ..
    ಜನಾರ್ದನ ರೆಡ್ಡಿ ಪಿಎ – ಹಲೋ, ಫ್ರೀ ಆದ್ರೆ ಸರ್, ಜನಾರ್ದನ್ ರೆಡ್ಡಿ ಸರ್ ಹತ್ತಿರ ಮಾತನಾಡಬೇಕು ಅಂದ್ರು?
    ಬಸವನಗೌಡ – ಕೊಡಿ ಕೊಡಿ..

    ಜನಾರ್ದನ್ ರೆಡ್ಡಿ – ಬಸವನಗೌಡ,
    ಬಸವನಗೌಡ -ಸರ್ ಹೇಳಿ ಸರ್ ಹೇಳಿ, ನಮಸ್ಕಾರ
    ಜನಾರ್ದನ ರೆಡ್ಡಿ – ಫ್ರೀ ಇದಿಯಾ..?

    ಬಸವನಗೌಡ – ಹೇಳಿ ಸರ್ ನಮಸ್ಕಾರ, ಫ್ರೀ ಇದ್ದೇನೆ.. ಹೇಳಿ
    ಜನಾರ್ದನ ರೆಡ್ಡಿ – ಏನೇ ಇದ್ರು, ಕೆಟ್ಟ ಘಳಿಗೆಯನ್ನ ಮರೆತು ಹೋಗಿಬಿಡಿ. ನಾನ್ ನಿನಗೆ ಅರ್ಧ ರಾತ್ರಿಯಲ್ಲಿ ಹೇಳ್ತಾ ಇದ್ದೇನೆ. ನಿನ್ನ ಟೈಂ ಚೆನ್ನಾಗಿ ಶುರುವಾಗಿದೆ. ಮತ್ತೆ ನಿನ್ನ ಹತ್ತಿರ ನೇರವಾಗಿ ದೊಡ್ಡವ್ರು, ರಾಷ್ಟ್ರೀಯ ಅಧ್ಯಕ್ಷರು ಮಾತನಾಡುತ್ತಾರೆ. ನಿಮಗೆ ಏನ್ ಪದವಿ ಬೇಕು, ಏನ್ ಬೇಕು, ಒನ್ ಟು ಒನ್ ಕುತುಕೊಂಡು ಮಾತನಾಡಿ ಮುಂದಿನ ಹೆಜ್ಜೆ ಇಡೋಣ.

    ಬಸವನಗೌಡ – ಇಲ್ಲ ಸರ್ ಇಲ್ಲ. ಯಾಕಂದ್ರೆ ಪರಿಸ್ಥಿತಿ ಚೆನ್ನಾಗಿಲ್ಲದಾಗ ಅವರು ನನ್ ಕೈ ಹಿಡಿದು ಮಾಡಿದ್ದಾರೆ.

    ಜನಾರ್ದನ ರೆಡ್ಡಿ – ನಾನ್ ನಿನಗೆ ಒಂದೇ ಪಾಯಿಂಟ್ ಹೇಳ್ತೇನೆ, ಬಿಎಸ್‍ಆರ್ ಕಾಂಗ್ರೆಸ್ ಪಕ್ಷ ಮಾಡೋವಾಗ ತುಂಬ ಕೆಟ್ಟ ಸಂದರ್ಭದಲ್ಲಿ ಶ್ರೀರಾಮುಲು ಪಾರ್ಟಿ ಮಾಡಿದ್ದು, ತುಂಬ ವಿರೋಧದ ನಡುವೆ ಮಾಡಿದ್ದು, ನೀವೆಲ್ಲ ನಂಬಿಕೊಂಡು ಆಸ್ತಿ ಕಳೆದುಕೊಂಡಿದ್ದೀರಿ ಅನ್ನೋದ್ರಲ್ಲ ಎರಡನೇ ಮಾತೇ ಇಲ್ಲ.

    ಜನಾರ್ದನ ರೆಡ್ಡಿ – ನಾನ್ ಹೇಳ್ತೇನೆ, ನೀನು ಅದಕ್ಕಿಂತ ನೂರಷ್ಟು ಬೆಳೆಯಬೇಕು. ಶಿವನಗೌಡ ನಾಯ್ಕ್ ಅವತ್ತು ನಾನ್ ಮಾತ್ ಕೇಳಿ ಬಂದು ಮಂತ್ರಿ ಆಗಿ ಉದ್ದಾರ ಆಗಿದ್ದು, ಇವತ್ತು ಎಂಎಲ್‍ಎಗೆ ಉಳಿದುಕೊಂಡು ತನ್ನಷ್ಟಕ್ಕೆ ತಾನು ಎಂಎಲ್‍ಎಗೆ ದುಡಿದುಕೊಂಡು ಶಕ್ತಿವಂತನಾಗಿದ್ದಾನಾ ಇಲ್ವಾ?

    ಜನಾರ್ದನ ರೆಡ್ಡಿ – ನನ್ನಿಂದನೇ ಆಗಿದ್ದಲ್ವಾ? ರಾಜುಗೌಡ ನನ್ನಿಂದನೇ ಅಲ್ವಾ ಆಗಿದ್ದು?

    ಬಸವನಗೌಡ – ಹು.. ಹೌದು..

    ಜನಾರ್ದನ ರೆಡ್ಡಿ – ನಿನಗೆ ತಿಳಿಸುವುದು ಇಷ್ಟೇ. ನಮ್ಮ ಬ್ಯಾಡ್ ಟೈಂನಲ್ಲಿ ನಿಂದು ಮ್ಯಾಚ್ ಆಗಿಲ್ಲ. ನನಗೆ ನಿಂಗೆ. ಇವತ್ತು ಶಿವನಗೌಡ ನಾಯ್ಕ್ ಗೆದ್ದು ಪ್ರಯೋಜನವಿಲ್ಲ. ಇವತ್ತು ನೀನ್ ಮಂತ್ರಿ ಆಗ್ತಿಯಾ.

    ಜನಾರ್ದನ ರೆಡ್ಡಿ – ನಾನು ಹೇಳೋದು ಇನ್ನೊಂದಲ್ಲ.ನೇರವಾಗಿ ದೊಡ್ಡವರ ಹತ್ತಿರನೇ ಒನ್ ಟು ಒನ್ ಕುರಿಸಿ ಮಾತನಾಡಿಸುತ್ತೇನೆ. ನಾನೇ ಸ್ವತಃ ಮಾತನಾಡಿಸುತ್ತೇನೆ. ಏನ್ ದೇಶದಲ್ಲಿ ಅವರು ಆಡಳಿತ ಮಾಡುತ್ತಿದ್ದಾರೆ. ಆ ಮಾತು ಉಳಿಸಿಕೊಳ್ಳದಕ್ಕೆ ಆಗುತ್ತಾ ಇರೋದು. ನಾನು ಹೇಳುತ್ತೇನೆ. ನಿನ್ನ ಆಸ್ತಿ ಮಾಡಿಕೊಳ್ತಿಯಲ್ಲ. ಅದಕ್ಕಿಂತ ನೂರರಷ್ಟು ಮಾಡಿಕೊಳ್ತಿಯ ಬಸವನಗೌಡ.

    ಬಸವನಗೌಡ – ಇಲ್ಲ ಸರ್ ಸಾರಿ. ಏಕೆಂದರೆ ಲಾಸ್ಟ್ ಪರಿಸ್ಥಿತಿಯಲ್ಲಿ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿ, ಎಲೆಕ್ಷನ್ ಅವರೇ ಮಾಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ದ್ರೋಹ ಮಾಡುವುದು ಅರ್ಥವಿಲ್ಲ. ನಿಮ್ಮ ಮೇಲೆ ಗೌರವವಿದೆ. ಕ್ಷಮಿಸಿ.

  • ನಮ್ಮವರು 14 ಜನ ಅವರ ಜತೆ ಇದ್ರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ: ಎಚ್‍ಡಿಕೆಯಿಂದ ಹೊಸ ಬಾಂಬ್

    ನಮ್ಮವರು 14 ಜನ ಅವರ ಜತೆ ಇದ್ರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ: ಎಚ್‍ಡಿಕೆಯಿಂದ ಹೊಸ ಬಾಂಬ್

    ಬೆಂಗಳೂರು: ನಮ್ಮವರು 14 ಜನ ಅವರ ಜತೆ ಇದ್ದರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ. ಇದನ್ನು ಶೋಭಾ ಕರಂದ್ಲಾಜೆ ಅವರಿಗೆ ತಿಳಿಸಿಬಿಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‍ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಯಡಿಯೂರಪ್ಪ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಸೋಲುತ್ತಾರೆ. ನಾವು ಸರ್ಕಾರ ರಚನೆ ಮಾಡುತ್ತೇವೆ ಇದು ಪಕ್ಕಾ. ಆದರೆ ಯಾರೂ ಯಾರನ್ನು ಭೇಟಿ ಮಾಡದೇ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರು ನಮ್ಮ ಜೊತೆ ಜೆಡಿಎಸ್ ಶಾಸಕರು 14 ಮಂದಿ ಇದ್ದಾರೆ ಎಂದು ಹೇಳಿದ್ದರು. ಈ ಮಾತಿಗೆ ಕುಮಾರಸ್ವಾಮಿಯವರು ನಮ್ಮವರು 14 ಜನ ಅವರ ಜತೆ ಇದ್ರೆ, ನನ್ನ ಜೊತೆ 28 ಜನ ಬಿಜೆಪಿ ಶಾಸಕರಿದ್ದಾರೆ. ಇದನ್ನು ಶೋಭಾಗೆ ತಿಳಿಸಿಬಿಡಿ ಎಂದು ತಿರುಗೇಟು ನೀಡಿದ್ದಾರೆ.

  • ಜೆಡಿಎಸ್, ಕಾಂಗ್ರೆಸ್ ಶಾಸಕರು ಹೊರ ರಾಜ್ಯಕ್ಕೆ ತೆರಳಲು 10 ಕಾರಣಗಳು ಇಲ್ಲಿವೆ

    ಜೆಡಿಎಸ್, ಕಾಂಗ್ರೆಸ್ ಶಾಸಕರು ಹೊರ ರಾಜ್ಯಕ್ಕೆ ತೆರಳಲು 10 ಕಾರಣಗಳು ಇಲ್ಲಿವೆ

    ಬೆಂಗಳೂರು: ಇತ್ತ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿ ಸಿಎಂ ಖುರ್ಚಿಯನ್ನು ಅಲಂಕರಿಸಿದ್ರೆ, ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಹೈಡ್ರಾಮಾ ನಡೆಯುತ್ತಿದೆ. ತಮ್ಮ ಶಾಸಕರ ಜೊತೆ ಎರಡೂ ಪಕ್ಷಗಳು ದಿಢೀರ್ ಆಗಿ ಹೊರ ರಾಜ್ಯಕ್ಕೆ ಶಿಫ್ಟ್ ಆಗಿವೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಹೊರರಾಜ್ಯಕ್ಕೆ ದಿಢೀರ್ ಶಿಫ್ಟ್ ಆಗಲು ಹತ್ತು ಕಾರಣಗಳೇನು ನೋಡೋದಾದ್ರೆ
    * ಈಗಲ್‍ಟನ್ ರೆಸಾರ್ಟ್‍ಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ಹಿಂಪಡೆದಿದ್ದು..!
    * ಕಟ್ಟಾ ಸುಬ್ರಹ್ಮಣ್ಯನಾಯ್ಡು ಪುತ್ರ ಕಟ್ಟಾ ಜಗದೀಶ್ ರೆಸಾರ್ಟ್ ಬಳಿ ಕಾಣಿಸಿಕೊಂಡಿದ್ದು
    * ಮೇಲಿಂದ ಮೇಲೆ ಬಿಜೆಪಿ ಕಡೆಯವರಿಂದ ಬರುತ್ತಿರುವ ಫೋನ್ ಕರೆಗಳು
    * ರಾಜ್ಯದಲ್ಲಿ ಎಲ್ಲೇ ಇದ್ದರೂ ನಮ್ಮ ಶಾಸಕರು ಸೇಫ್ ಅಲ್ಲ..!

    * ರಾಜ್ಯದಲ್ಲಿದ್ದರೇ ಗುಪ್ತಚರ ಮೂಲಗಳಿಂದ ರಹಸ್ಯ ಸೋರಿಕೆ ಆತಂಕ
    * ಚುನಾವಣೆಗೆ ಮುನ್ನ ನಡೆದ `ಜಿಗಿತ’ ಈಗಲೂ ರಿಪೀಟ್ ಆಗಬಹುದು
    * ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯವನ್ನು ಕಂಗಾಲಾಗಿಸಿದ ಬಿಎಸ್‍ವೈ ಆತ್ಮವಿಶ್ವಾಸ

    * ಸುಮಾರು 15 ದಿನ ಹೊರ ರಾಜ್ಯದಲ್ಲೇ ಉಳಿದು ಬಿಜೆಪಿಗೆ ಮುಖಭಂಗ ಮಾಡುವುದು
    * ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಲ್ಲಿನ ಒತ್ತಡ ಕಡಿಮೆ ಮಾಡುವುದು
    * ತಮ್ಮ ಶಾಸಕರನ್ನ ರಕ್ಷಿಸಿಕೊಳ್ಳುವ ಮೂಲಕ ಬಿಎಸ್‍ವೈ ಸರ್ಕಾರ ಉರುಳಿಸುವುದು

    ಹಿಂದೊಮ್ಮೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿಎಸ್‍ವೈ ವಿರುದ್ಧ ಬಂಡೆದ್ದು ಸುಮಾರು 40 ಶಾಸಕರನ್ನ ಹೈದರಾಬಾದ್‍ಗೆ ಕರೆದೊಯ್ದು, ರಾಜ್ಯ ರಾಜಕಾರಣದ ಕೇಂದ್ರವನ್ನಾಗಿಸಿದ್ರು. ಇದೀಗ ರಾಜ್ಯ ರಾಜಕಾರಣದ ಚಿತ್ತ ಮತ್ತೆ ಭಾಗ್ಯ ನಗರಿಯತ್ತ ನೆಟ್ಟಿದೆ.

    ಯಾಕಂದ್ರೆ, ಕಳೆದ ರಾತ್ರಿ ಭಾರೀ ಹೈಡ್ರಾಮಾಗಳ ನಡುವೆ ಬಿಜೆಪಿ ಗಾಳಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಮೂರು ಸ್ಲೀಪರ್ ಕೋಚ್ ಬಸ್‍ಗಳಲ್ಲಿ ಹೈದರಾಬಾದ್ ದಾರಿ ಹಿಡಿದಿದ್ದಾರೆ. ಮೊದಲು ಕೊಚ್ಚಿ ಅಂದ್ರು. ಆಮೇಲೆ ಪುದುಚ್ಚೇರಿ ಅಂದ್ರು. ಏರ್ ಪೋರ್ಟ್ ನಲ್ಲಿ ಚಾರ್ಟಡ್ ವಿಮಾನ ಟೇಕ್ ಆಫ್‍ಗೆ ಡಿಜಿಸಿಎ ಅನುಮತಿ ನೀಡಲಿಲ್ಲ. ಹೀಗಾಗಿ ಮಧ್ಯರಾತ್ರಿ 12.30ರ ನಂತರ ರಸ್ತೆ ಮೂಲಕ ಹೈದ್ರಾಬಾದ್ ಕಡೆ ಪ್ರಯಾಣ ಶುರು ಮಾಡಿದ್ರು.

    ಸದ್ಯ ಹೈದರಾಬಾದ್ ನತ್ತ 115 ಶಾಸಕರನ್ನು ಹೊತ್ತು ಬಸ್‍ಗಳು ಸಾಗುತ್ತಿವೆ. ಬಸ್‍ಗಳ ಹಿಂದೆ ಮುಂದೆ ಮಾಜಿ ಸಚಿವ ಡಿಕೆ ಶಿವಕುಮಾರ್ ನೇಮಿಸಿರುವ ಖಾಸಗಿ ಅಂಗರಕ್ಷಕರ ವಾಹನಗಳು ಸಾಗುತ್ತಿವೆ. ಇನ್ನು ಸ್ವಯತ್ತ ಸಂಸ್ಥೆ ಡಿಜಿಸಿಎಯನ್ನು ಕೇಂದ್ರ ದುರುಪಯೋಗ ಮಾಡಿಕೊಂಡಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ. ಆದ್ರೆ ಡಿಜಿಸಿಎ ಮಾತ್ರ ರಾಜ್ಯದಿಂದ ರಾಜ್ಯಕ್ಕೆ ಚಾರ್ಟರ್ಡ್ ವಿಮಾನ ಹಾರಲು ನಮ್ಮ ಪರ್ಮೀಷನ್ ಅಗತ್ಯವೇ ಇಲ್ಲ ಎಂದಿದೆ. ಈ ಮೂಲಕ ವಿವಾದದಿಂದ ದೂರ ಸರಿದಿದೆ.

  • ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ತಿರುವನಂತಪುರಂ: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಶಾಸಕರಿಗೆ ಸುಂದರ, ಸುರಕ್ಷಿತ ಸ್ಥಳಗಳ ನೀಡುವುದಾಗಿ ಆಫರ್ ನೀಡಿದೆ.

    ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಕೇರಳ ಪ್ರವಾಸೋದ್ಯಮ, ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಬಳಿಕ ನಾವು ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ, ಸುರಕ್ಷಿತ ಹಾಗೂ ಸುಂದರ ರೆಸಾರ್ಟ್ ಗೆ ಬನ್ನಿ ಎಂದು ಟ್ವೀಟ್ ಮಾಡಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ನಡೆಯಬಹುದು ಎನ್ನುವ ಊಹೆಯ ಮೇರೆಗೆ ಕೇರಳ ಪ್ರವಾಸೋದ್ಯಮ ಇಲಾಖೆ ಫಲಿತಾಂಶ ಪ್ರಕಟವಾದ ಮೇ 15 ರ ಸಂಜೆ 5.48ಕ್ಕೆ ಟ್ವೀಟ್ ಮಾಡಿತ್ತು. ಕೇರಳ ಪ್ರವಾಸೋದ್ಯಮದ ಪೋಸ್ಟ್ ಅನ್ನು ಸಚಿವ ಸುರೇಂದ್ರನ್ ಶೇರ್ ಮಾಡಿದ್ದರು ಆದ್ರೆ  ಬಳಿಕ ಇಲಾಖೆ ಆಫರ್ ನೀಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

    ಈ ಟ್ವೀಟ್‍ಗೆ ಹಲವಾರು ಕಮೆಂಟ್ ಗಳು ಬಂದಿತ್ತು. ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದು ಹೇಗೆ ಎನ್ನುವುದು ಕೇರಳವನ್ನು ನೋಡಿ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಬೆಸ್ಟ್ ಎಡ್ಮಿನ್ ಈ ರೀತಿ ಟ್ರೋಲ್ ಮಾಡಿದ್ದನ್ನು ಇದೂವರೆಗೂ ನಾವು ನೋಡಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಕರ್ನಾಟಕ ರಾಜ್ಯಪಾಲ ವಜುಬಾಯಿವಾಲ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿ 15 ದಿನಗಳ ಕಾಲಾವಕಾಶ ನೀಡಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕ ರಕ್ಷಣೆಗೆ ರೆಸಾರ್ಟ್ ಗಳ ಮೇರೆ ಹೋಗಲು ನಿರ್ಧರಿಸಿದ್ದಾರೆ. ಕೇರಳ ಅಲೆಪ್ಪಿಯಲ್ಲಿರುವ ರೆಸಾರ್ಟ್ ಒಂದರಲ್ಲಿ ಕರ್ನಾಟಕದ ಶಾಸಕರಿಗಾಗಿ 120 ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • MP, MLA ಗಳು ಬಂದಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿಯಬೇಕು- ಯೋಗಿ ಸರ್ಕಾರದ ಹೊಸ ಆದೇಶ

    MP, MLA ಗಳು ಬಂದಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿಯಬೇಕು- ಯೋಗಿ ಸರ್ಕಾರದ ಹೊಸ ಆದೇಶ

    ಲಕ್ನೋ: ಶಾಸಕರು, ಸಂಸದರು ಬಂದಾಗ ಅಧಿಕಾರಿಗಳು ಎದ್ದು ನಿಂತು ಕೈ ಮುಗಿಯಬೇಕು ಅಂತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ಆದೇಶ ಹೊರಡಿಸಿದೆ.

    ಸಂಸದರು ಹಾಗೂ ಶಾಸಕರನ್ನು ಭೇಟಿಯಾಗುವಾಗ ಅಥವಾ ಸ್ವಾಗತಿಸುವಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿದು ನಮಸ್ಕರಿಸಬೇಕು. ಅವರು ಹೊರಡುವಾಗಲೂ ಮತ್ತೊಮ್ಮೆ ಕೈ ಮುಗಿಯಬೇಕು ಎಂಬ ಆದೇಶ ಹೊರಡಿಸಲಾಗಿದೆ. ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಈ ನಿರ್ದೇಶನವನ್ನು ನೀಡಿದ್ದು, ಯಾರಾದ್ರೂ ಈ ನಿಯಮವನ್ನ ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

    ಸ್ಥಳೀಯ ಮುಖಂಡರು, ಜಿಲ್ಲಾಧಿಕಾರಿಗಳು, ಪೊಲೀಸರು ಸೇರಿದಂತೆ ಉತ್ತರಪ್ರದೇಶದ ಎಲ್ಲಾ ಅಧಿಕಾರಿಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಅಧಿಕಾರಿಗಳು ನಮ್ಮ ಮಾತನ್ನು ಆಲಿಸದೆ, ನೀಡಿದ ಆದೇಶಗಳನ್ನು ಕೆಲವೊಮ್ಮೆ ವಜಾ ಮಾಡುತ್ತಾರೆ ಎಂದು ಸಂಸದರು ಮತ್ತು ಶಾಸಕರು ಹೇಳಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಸರ್ಕಾರ ಈ ನಿಮಯವನ್ನ ಜಾರಿಗೆ ತಂದಿದೆ.

    ಅಲ್ಲದೆ ಸಂಸದರು ಮತ್ತು ಶಾಸಕರು ಹೇಳಿದಂತೆ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಅಧಿಕಾರಿಗಳು ನಯವಾಗಿ ತಮ್ಮ ಸಮಸ್ಯೆಗಳ ಬಗ್ಗೆ ಹೇಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಸರ್ಕಾರಿ ಅನುದಾನಿತ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಹೋಗುವುದನ್ನು ಕೂಡ ನಿಷೇಧಿಸಲಾಗಿದೆ.

    ಈ ಹೊಸ ಆದೇಶಕ್ಕೆ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

  • ರೆಸಾರ್ಟ್ ಪಾಲಿಟಿಕ್ಸ್ ಗೆ ಬಿಗ್ ಟ್ವಿಸ್ಟ್ – ಕೆಲವೇ ಕ್ಷಣದಲ್ಲಿ ಬೇರೆಡೆಗೆ ಶಾಸಕರು ಶಿಫ್ಟ್?

    ರೆಸಾರ್ಟ್ ಪಾಲಿಟಿಕ್ಸ್ ಗೆ ಬಿಗ್ ಟ್ವಿಸ್ಟ್ – ಕೆಲವೇ ಕ್ಷಣದಲ್ಲಿ ಬೇರೆಡೆಗೆ ಶಾಸಕರು ಶಿಫ್ಟ್?

    ಬೆಂಗಳೂರು: ಡಿಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ರೆಸಾರ್ಟ್ ಪಾಲಿಟಿಕ್ಸ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

    ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಕಮಲದ ಭೀತಿಯಲ್ಲಿ ಗುಜರಾತ್ ಶಾಸಕರು ಬೆಂಗಳೂರಿನ ಈಗಲ್‍ಟನ್ ರೆಸಾರ್ಟ್‍ನಲ್ಲಿ ತಂಗಿದ್ದರು. ಆದ್ರೆ ಶಾಸಕರನ್ನ ನೋಡಿಕೊಳ್ತಿದ್ದ ಸಚಿವ ಡಿಕೆಶಿಗೆ ಐಟಿ ಶಾಕ್ ನೀಡಿರೋ ಹಿನ್ನೆಲೆಯಲ್ಲಿ ಈಗಲ್‍ಟನ್ ರೆಸಾರ್ಟ್‍ನಲಿಯೂ ಇರೋದು ಸೇಫಲ್ಲ ಎಂದು ಭಾವಿಸಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.

    ಹೈಕಮಾಂಡ್ ಸೂಚನೆ ಪಡೆದು ಬೇರೆಡೆಗೆ ಶಿಫ್ಟ್ ಆಗಲು ತಯಾರಿ ನಡೆಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈಗಲ್‍ಟನ್ ರೆಸಾರ್ಟ್‍ನಿಂದ ಗುಜರಾತ್ ಶಾಸಕರು ಬೇರೆಡೆ ಶಿಫ್ಟ್ ಆಗುವ ಸಾಧ್ಯತೆಯಿದೆ.

    ಡಿಕೆಶಿ ಮೇಲಿನ ಐಟಿ ದಾಳಿಗೆ ಹೆದರಿದ ರೆಸಾರ್ಟ್ ಮಾಲೀಕರು ಗುಜರಾತ್ ಕಾಂಗ್ರೆಸ್ ಶಾಸಕರು ರೆಸಾರ್ಟ್ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಗುಜರಾತ್ ಶಾಸಕರ ಮೇಲ್ವಿಚಾರಣೆಯಲ್ಲಿ ತೊಡಗಿರುವ ಡಿ.ಕೆ.ಸುರೇಶ್ ಗೂ ಕೂಡ ಈ ಬಗ್ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೆಸಾರ್ಟ್‍ನಿಂದ ಗುಜರಾತ್ ಶಾಸಕರು ಬೇರೆಡೆಗೆ ಶಿಫ್ಟ್ ಆಗುವ ಸಾಧ್ಯತೆ ದಟ್ಟವಾಗಿದೆ.

    ಮೊದಲಿಗೆ ವಿಶೇಷ ಬಸ್ ವೊಂದು ರೆಸಾರ್ಟ್‍ನೊಳಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿ ಗುಜರಾತ್ ಶಾಸಕರು ರೆಸಾರ್ಟ್‍ನಿಂದ ಶಿಫ್ಟ್ ಆಗಲು ಬಂದಿರುವ ಬಸ್ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ಬಸ್ ನಟ ಕಿಚ್ಚ ಸುದೀಪ್ ಅವರ ಸಿನಿಮಾ ಚಿತ್ರೀಕರಣಕ್ಕಾಗಿ ಬಂದಿರುವುದು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿತು 7.5 ಕೋಟಿ ರೂ. ಹಣ: ಮುಂದೆ ಈ ನಾಯಕರ ಮನೆ ಮೇಲೆ ದಾಳಿ?

    ಅತ್ತ ಡಿಕೆ ಶಿವಕುಮಾರ್ ಮನೆಯಲ್ಲಿ ಸತತ ಎರಡನೇ ದಿನವೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

  • ಹಗರಣ, ಲೈಂಗಿಕ ಪ್ರಕರಣದಲ್ಲಿ ಸಿಲುಕಬೇಡಿ- ಸಚಿವರು, ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಹಗರಣ, ಲೈಂಗಿಕ ಪ್ರಕರಣದಲ್ಲಿ ಸಿಲುಕಬೇಡಿ- ಸಚಿವರು, ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಬೆಂಗಳೂರು: ಸಾಲಮನ್ನಾ ಹೆಸರಿನಲ್ಲಿ ಖುಷಿ ಖುಷಿಯಾಗಿರೋ ಕಾಂಗ್ರೆಸ್ ಶಾಸಕರು ಮತ್ತು ಮಿನಿಸ್ಟರ್‍ಗಳಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಯಾವುದೇ ಮಂತ್ರಿ ಅಥವಾ ಶಾಸಕರು ಹಗರಣ ಅಥವಾ ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿಕೊಳ್ಳದಂತೆ ವೇಣುಗೋಪಾಲ್ ವಾರ್ನಿಂಗ್ ಕೊಟ್ಟಿದ್ದಾರೆ. ನಮ್ಮ ಮುಂದಿರೋದು ಚುನಾವಣಾ ವರ್ಷ. ಹಾಗಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಭ್ರಷ್ಟಾಚಾರ ಅಥವಾ ಲೈಂಗಿಕ ಪ್ರಕರಣಗಳಲ್ಲಿ ಭಾಗಿಯಾಗದಂತೆ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಒಂದೊಮ್ಮೆ ಸಿಲುಕಿದ್ದೇ ಆದಲ್ಲಿ ಮುಂದಿನ ಎಲೆಕ್ಷನ್‍ನಲ್ಲಿ ಟಿಕೆಟ್ ನೀಡುವುದಿಲ್ಲ. ಇದು ಹಾಲಿ ಶಾಸಕರಿಗೂ ಅನ್ವಯಿಸುತ್ತೆ ಮತ್ತು ಚುನಾವಣಾ ಆಕಾಂಕ್ಷಿಗಳಿಗೂ ಅನ್ವಯಿಸುತ್ತದೆ ಅಂತ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.