Tag: ಶಾಸಕರು

  • ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಿದ್ದರಾಮಯ್ಯ ತವರೂರಿನಲ್ಲಿ ಕೈ-ತೆನೆ ಬೆಂಬಲಿಗರ ನಡುವೆ ಜಟಾಪಟಿ

    ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಿದ್ದರಾಮಯ್ಯ ತವರೂರಿನಲ್ಲಿ ಕೈ-ತೆನೆ ಬೆಂಬಲಿಗರ ನಡುವೆ ಜಟಾಪಟಿ

    ಮೈಸೂರು: ಜೆಡಿಎಸ್ – ಕಾಂಗ್ರೆಸ್ ನಡುವೆ ದೋಸ್ತಿ ಮೂಡಿ ಸರಕಾರವೇನೋ ರಚನೆ ಆಗಿದೆ. ಆದರೆ ತಳ ಮಟ್ಟದ ಸಂಘಟನೆಯಲ್ಲಿ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ದೋಸ್ತಿಯ ಮಾತಿರಲಿ ಕನಿಷ್ಟ ಪಕ್ಷದ ಸೌಹಾರ್ದತೆಯೂ ಮೂಡಿಲ್ಲ ಎಂಬುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಸಾಕ್ಷಿ ಸಿಕ್ಕಿದೆ.

    ಪಿರಿಯಾಪಟ್ಟಣದ ಬೆಳ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಮಹದೇವು ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ಕೆ. ವೆಂಕಟೇಶ್ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ರಸ್ತೆಯ ಶಂಕು ಸ್ಥಾಪನೆ ವಿಚಾರವಾಗಿ ಈ ಜಟಾಜಟಿ ನಡೆದಿದೆ.

    ಶಂಕುಸ್ಥಾಪನೆಯಾಗಿದ್ದ ಕಾಮಗಾರಿಗೆ ಶಾಸಕ ಮಹದೇವು ಮತ್ತೆ ಚಾಲನೆ ಮಾಡಲು ಮುಂದಾಗಿದ್ದಾರೆ ಎಂದು ಸಮಾರಂಭಕ್ಕೆ ಮಾಜಿ ಶಾಸಕ ವೆಂಕಟೇಶ್ ಬೆಂಬಲಿಗರು ಅಡ್ಡಿ ಪಡಿಸಿದರು. ಮಾಜಿ ಶಾಸಕರ ಬೆಂಬಲಿಗರು ಶಾಸಕ ಮಹದೇವ್ ಗೆ ತೀವ್ರವಾಗಿ ತರಾಟೆ ತೆಗೆದು ಕೊಂಡು ಗದ್ದಲ ನಡೆಸಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ಕೂಡ ನಡೆದಿದ್ದು, ಮಾಜಿ ಶಾಸಕರ ಬೆಂಬಲಿಗರ ಮನವೊಲಿಸಲು ಶಾಸಕರ ಕೈಯಲ್ಲಿ ಆಗದೆ ಕೆಲ ಕಾಲ ಮೌನವಾಗಿಯೇ ಕುಳಿತು ಬಿಟ್ಟದ್ದಾರೆ.

    ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=lNxXuLGhwcU

  • ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಶಾಸಕರಿಗೆ ಪರಂ ಬೇಡವಾದ್ರಾ?

    ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಶಾಸಕರಿಗೆ ಪರಂ ಬೇಡವಾದ್ರಾ?

    ಬೆಂಗಳೂರು: ಉಪಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ 15 ದಿನದಲ್ಲೇ ಪಕ್ಷದ ಶಾಸಕರಿಗೆ ಡಾ. ಜಿ ಪರಮೇಶ್ವರ್ ಬೇಡವಾದ್ರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಶಾಸಕರಿರುವುದು ಕಾಂಗ್ರೆಸ್ ನವರೆ. ಆದರೆ ಆ ಶಾಸಕರಿಗೆ ಪರಮೇಶ್ವರ್ ಸ್ಪಂದಿಸುತ್ತಿಲ್ಲ ಎಂಬ ಆರೋಪವೊಂದು ಇದೀಗ ಕೇಳಿಬರುತ್ತಿದೆ.

    ಸಿಟಿ ರೌಂಡ್ಸ್ ಮಾಡಿ ಅಂದ್ರೆ ತಮಗೆ ಇಷ್ಟ ಬಂದ ಎರಡು ಕ್ಷೇತ್ರಕ್ಕೆ ಭೇಟಿ ಕೊಟ್ಟು, ಹೀಗೆ ಬಂದು ಹಾಗೆ ಹೋದ್ರಂತೆ. ಇವರು ಹೀಗೆ ಮಾಡಿದ್ರೆ ನಮಗೆ ಕ್ಷೇತ್ರದಲ್ಲಿ ಕಷ್ಟ ಆಗುತ್ತೆ ಸಾರ್ ಅಂತ ನಗರದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ಗೋಳು ತೋಡಿಕೊಂಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಸಿಎಂ ಆಗಿದ್ದ ಸಿದ್ದರಾಮಯ್ಯ ಮಾದರಿಯಲ್ಲಿ ನಗರದ ಶಾಸಕರನ್ನ ಜೊತೆಯಲ್ಲಿಟ್ಟುಕೊಂಡು ಸಿಟಿ ರೌಂಡ್ಸ್ ಮಾಡಿ ಸಮಸ್ಯೆ ಆಲಿಸುವಂತೆ ಕಾಂಗ್ರೆಸ್ ಶಾಸಕರು ಪರಮೇಶ್ವರ್ ಗೆ ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ಶಾಸಕರಿರುವ ಸಿ.ವಿ ರಾಮನ್ ನಗರ ವ್ಯಾಪ್ತಿಯಲ್ಲಿ ಪರಮೇಶ್ವರ್ ಎರಡು ಕೆರೆ ವೀಕ್ಷಿಸಿದ್ದಾರೆ. ಎರಡು ದಿನದ ಹಿಂದೆ ಕಾಂಗ್ರೆಸ್ ಶಾಸಕರಿರುವ ಯಶವಂತಪುರದಲ್ಲಿ ಎರಡು ಗಾರ್ಬೆಜ್ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ್ದಾರೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಟಿ ರೌಂಡ್ಸ್ ಮಾಡಿ ಸಾರ್ ಅಂದ್ರೆ ಬರೋಣ ಬಿಡ್ರಿ ಎಂದು ಶಾಸಕರಿಗೆ ಪರಮೇಶ್ವರ್ ಉಡಾಫೆಯಿಂದ ಉತ್ತರಿಸಿದ್ದಾರಂತೆ.

    ಹೊರಗಿನವರಿಗೆ ಬೆಂಗಳೂರಿನ ಅಭಿವೃದ್ಧಿ ಖಾತೆ ಕೊಟ್ರೆ ನೋಡಿ ಹೀಗೆ ಆಗೋದು ಅಂತ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ. ಇದರ ಹಿಂದೆ ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವ ಪಕ್ಷದ ಹಿರಿಯ ಶಾಸಕರ ಲಾಬಿಯು ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಕೆಲಸದ ಮೂಲಕವೇ ಉತ್ತರ ಕೊಡಬೇಕಿದ್ದ ಪರಮೇಶ್ವರ್, ಬರೋಣ ಬಿಡ್ರಿ ಅಂತಾರೆ ಅನ್ನೋದು ಶಾಸಕರ ಅಳಲಾಗಿದೆ.

    ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟ ಶಾಸಕರುಗಳು ಆರೋಪ ಮಾಡಿದಾಗ ಸಿದ್ದರಾಮಯ್ಯ ಮಾತ್ರ ಎಲ್ಲಾ ಸರಿ ಆಗುತ್ತೆ ಸ್ವಲ್ಪ ಟೈಮ್ ಕಾಯ್ರಪ್ಪ ಅಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಮಂತ್ರಿ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡ ಎಚ್.ಕೆ.ಪಾಟೀಲ್: ಮನವೊಲಿಕೆಗೆ ಡಿಕೆಶಿ, ರೋಷನ್ ಬೇಗ್ ಸಾಹಸ

    ಮಂತ್ರಿ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡ ಎಚ್.ಕೆ.ಪಾಟೀಲ್: ಮನವೊಲಿಕೆಗೆ ಡಿಕೆಶಿ, ರೋಷನ್ ಬೇಗ್ ಸಾಹಸ

    ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪುತ್ತಿದ್ದಂತೆಯೇ ಕಾಂಗ್ರೆಸ್ಸಿನ ಕೆಲವು ಮಾಜಿ ಸಚಿವರು ಅಸಮಾಧಾನ ಹೊರ ಹಾಕಿದ್ದು, ಹೈಕಮಾಂಡ್ ಜೊತೆಗೆ ಮುನಿಸಿಕೊಂಡಿದ್ದಾರೆ.

    ಶಾಸಕ ಎಂ.ಬಿ ಪಾಟೀಲ್ ಬೆನ್ನಲ್ಲೇ ಮಾಜಿ ಸಚಿವ ಎಚ್.ಕೆ ಪಾಟೀಲ್ ಕೂಡ ಮುನಿಸಿಕೊಂಡಿದ್ದು, ಕೈ ಮುಖಂಡರ ಮನವೊಲಿಕೆಗೂ ಜಗ್ಗುತ್ತಿಲ್ಲ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಎಚ್.ಕೆ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಮನವೊಲಿಕೆ ಯತ್ನ ಮಾಡಿದ್ದರು. ಚರ್ಚೆ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮದೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದು. ಡಿಕೆಶಿ ನಂತರ ಶಿವಾಜಿನಗರ ಶಾಸಕ ರೋಷನ್ ಬೇಗ್, ಹಿರಿಯ ಮುಖಂಡ ಜಾಫರ್ ಶರೀಷ್ ಆಗಮಿಸಿ ಮನವೊಲಿಕೆಗೆ ಮುಂದಾಗಿದ್ದರು.

    ಇದೆಲ್ಲ ಬೆಳವಣಿಗೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಡಿ.ಕೆ ಶಿವಕುಮಾರ್ ಹಾಗೂ ರೋಷನ್ ಬೇಗ್ ಜೊತೆಗೆ ಪಕ್ಷದ ವಿಚಾರ ಚರ್ಚೆ ಮಾಡಿದ್ದೇನೆ. ನನ್ನ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಅತಿ ಸೂಕ್ಷ್ಮವಾದ ವಿಚಾರ. ನನ್ನ ನಿಲುವನ್ನು ಮಂಗಳವಾರ ತಿಳಿಸುತ್ತೇನೆ ಎಂದರು.

    ದೆಹಲಿಯಿಂದ ಕೆಲವು ಮುಖಂಡರು ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಒಂದು ಮೊಬೈಲ್ ಕರೆ ಕೂಡಾ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ನಾನು ಏಕಾಂಗಿ ಅಲ್ಲ, ನನ್ನ ಜೊತೆ 20 ಮಂದಿ ಶಾಸಕರಿದ್ದಾರೆ: ಎಂ.ಬಿ.ಪಾಟೀಲ್

    ನಾನು ಏಕಾಂಗಿ ಅಲ್ಲ, ನನ್ನ ಜೊತೆ 20 ಮಂದಿ ಶಾಸಕರಿದ್ದಾರೆ: ಎಂ.ಬಿ.ಪಾಟೀಲ್

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಭಿನ್ನಮತ ತೀವ್ರಗೊಂಡಿದ್ದು, ನಾನು ಏಕಾಂಗಿ ಅಲ್ಲ. ನನ್ನ ಜೊತೆ 20 ಮಂದಿ ಶಾಸಕರು ಇದ್ದಾರೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಆಕ್ರೋಶದಿಂದ ಹೇಳಿದ್ದಾರೆ.

    ನಾಯಕರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಕುಮಾರಸ್ವಾಮಿ ಸಂಮ್ಮಿಶ್ರ ಸರ್ಕಾರದ ನೇತೃತ್ವವನ್ನು ವಹಿಸಿಕೊಂಡು ಮುಖ್ಯಮಂತ್ರಿ ಆದವರು. ಅವರಿಗೂ ನಮ್ಮ ಪಕ್ಷದಲ್ಲಿ ಆಗಿರುವ ಬೆಳವಣಿಗೆಗೆ ಸಂಬಂಧ ಇಲ್ಲ. ನಮ್ಮದೇನಿದ್ದರೂ ಪಕ್ಷದ ಒಳಗಡೆ ಇರುತ್ತದೆ. ನಾನು ಇವತ್ತು ಏಕಾಂಗಿ ಅಲ್ಲ, ನನ್ನ ಜೊತೆಗೆ ಅನೇಕ ಸ್ನೇಹಿತರಿದ್ದಾರೆ ಎಂದು ತಿಳಿಸಿದರು.

    ಸತೀಶ್ ಜಾರಕಿಹೊಳಿ, ನಾಗರಾಜ್ ಸೇರಿದಂತೆ ನಾವು 15-20 ಮಂದಿ ಶಾಸಕರಿದ್ದೇವೆ. ನಾವು ಪಕ್ಷವನ್ನು ಹೇಗೆ ಬಲಿಷ್ಠ ಮಾಡಬೇಕು. ಹೇಗೆ ಮುಂದುವರಿಸಬೇಕು ಎಂದು ಸಭೆ ಮಾಡುತ್ತಿದ್ದೇವೆ. ಅದು ಬಿಟ್ಟು ಇಲ್ಲಿ ಯಾರು ಪಕ್ಷ ಬಿಡಬೇಕು ಎಂದು ಚರ್ಚೆ ಮಾಡುತ್ತಿಲ್ಲ ಎಂದರು.

    ಶೀಘ್ರವಾಗಿ ನಾವೆಲ್ಲರೂ ಕೂಡಿ ಚರ್ಚೆ ಮಾಡುತ್ತೇವೆ. ಆಗ ಎಲ್ಲರ ಭಾವನೆ, ಅಭಿಪ್ರಾಯವನ್ನು ಪಡೆಯುತ್ತೇವೆ. ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತೇವೆ. ಆದರೆ ನಮ್ಮ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇವೆ. ನಾವು ಕಾಂಗ್ರೆಸ್ಸಿಗೆ ದ್ರೋಹ ಮಾಡುವುದಿಲ್ಲ ಎಂದು ಪಾಟೀಲ್ ತಿಳಿಸಿದರು.

  • ಕೈ ಬಂಡಾಯ ಶಾಸಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ

    ಕೈ ಬಂಡಾಯ ಶಾಸಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ

    ಬೆಂಗಳೂರು: ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಶಮನ ಮಾಡಲು ಹೈಕಮಾಂಡ್ ಮುಂದಾಗಿದ್ದು ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದೆ.

    ಈಗ 15 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಏಳು ಮಂದಿಗೆ ಸಚಿವರಾಗಲು ಅವಕಾಶವಿದೆ. ಇದೇ ರೀತಿಯಾಗಿ ಅಸಮಾಧಾನವನ್ನು ಹೊರಹಾಕಿದರೆ ಖಾಲಿ ಇರುವ ಏಳು ಸಚಿವ ಸ್ಥಾನದಿಂದ ಹಾಗೂ ನಿಗಮ ಮಂಡಳಿ ಸ್ಥಾನ ಹಂಚಿಕೆಯಲ್ಲಿ ಅವಕಾಶ ವಂಚಿತರಾಗುತ್ತಾರೆ. ಇದನ್ನು ಬಂಡಾಯ ಶಾಸಕರಿಗೆ ಗಮನಕ್ಕೆ ತರುವಂತೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸೂಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ತಿಳಿಸಿವೆ.

    ಸಚಿವ ಸ್ಥಾನದಿಂದ ವಂಚಿತರಾಗಿರುವ ಅನೇಕ ಹಿರಿಯ ಶಾಸಕರು ಹೋಟೆಲ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು. ಅಲ್ಲದೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳು ಸಭೆಯಲ್ಲಿ ಭಾಗವಹಿಸಬಹುದೆಂದು ಆಹ್ವಾನ ನೀಡಿದ್ದರು. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರಕ್ಕೆ ಕುತ್ತು ಬರಬಹುದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ಶಾಸಕರಿಗೆ ಎಚ್ಚರಿಕೆ ನೀಡಿದೆ.

    ಹೈಕಂಮಾಡ್ ವಿವಿಧ ಮೂಲಗಳಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು, ಪ್ರತ್ಯೇಕ ಸಭೆ ನಡೆಸುವುದು, ಹಾಗೂ ಹೈ ಕಮಾಂಡ್ ವಿರುದ್ಧ ಮಾತನಾಡುವ ಶಾಸಕರ ಮಾಹಿತಿ ಕಲೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾ ಶಾಸಕರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

    ಲಿಂಗಪ್ಪಗೆ ಶೋಕಾಸ್ ನೋಟಿಸ್:
    ರಾಮನಗರದಲ್ಲಿ ಮಂಗಳವಾರ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು, ರಾಮನಗರ ಕ್ಷೇತ್ರವನ್ನು ಪರಮೇಶ್ವರ್ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

    ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಲಿಂಗಣ್ಣ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಬುಧವಾರ ಶೋಕಾಸ್ ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾಧ್ಯಮಗಳ ಮುಂದೆ ಲಘುವಾಗಿ ಮಾತನಾಡಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದೀರಿ. ರಾಮನಗರ ಉಪ ಚುನಾವಣೆಯ ಕುರಿತು ಪಕ್ಷ ಸಭೆಯಲ್ಲಿ ಚರ್ಚಿಸಬಹುದಿತ್ತು. ಆದರೆ ನೀವು ಹಾಗೇ ಮಾಡಲಿಲ್ಲ. ನಿಮ್ಮ ತಪ್ಪಿಗೆ ಏಳು ದಿನಗಳಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ.

  • ಸಮ್ಮಿಶ್ರ ಸರ್ಕಾರದ ಭಿನ್ನಮತದ ಲಾಭ ಪಡೆಯಲು ತೆರೆಮರೆಯಲಿ ಬಿಜೆಪಿ ತಂತ್ರ !

    ಸಮ್ಮಿಶ್ರ ಸರ್ಕಾರದ ಭಿನ್ನಮತದ ಲಾಭ ಪಡೆಯಲು ತೆರೆಮರೆಯಲಿ ಬಿಜೆಪಿ ತಂತ್ರ !

    ಬೆಂಗಳೂರು: ಸಚಿವ ಸಂಪುಟ ರಚನೆಯಾದ ಬೆನ್ನಲ್ಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಡುವ ಅಸಮಾಧಾನದ ಸ್ಫೋಟ ಭುಗಿಲೆದ್ದಿದೆ. ಆದರೆ ಇತ್ತ ಸಮ್ಮಿಶ್ರ ಸರ್ಕಾರದ ಭಿನ್ನಮತದ ಲಾಭ ಪಡೆಯಲು ಬಿಜೆಪಿ ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದೆ.

    ಸಚಿವ ಸ್ಥಾನ ಸಿಗದಿರುವ ಅತೃಪ್ತರನ್ನು ಸೆಳೆಯುವ ಬದಲು, ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮೊರೆ ಹೋದಂತೆ ಕಾಣುತ್ತಿದೆ. ಒಮ್ಮೆ ಆದ ತಪ್ಪಿನಿಂದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಹಂತದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ಜನರ ಬಳಿ ಅಪಕೀರ್ತಿಗೆ ಒಳಗಾಗಬೇಕಾಗುತ್ತೆ. ಹೀಗಾಗಿ ನೀವಾಗಿಯೇ ಯಾವುದೇ ಯತ್ನ ನಡೆಸುವುದು ಬೇಡ ಎಂದು ಬಿಜೆಪಿ ವರಿಷ್ಠರು, ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

    ಒಂದು ವೇಳೆ 10ಕ್ಕಿಂತ ಹೆಚ್ಚು ಸಚಿವ ಸ್ಥಾನ ಸಿಗದ ಅತೃಪ್ತರು ರಾಜೀನಾಮೆ ಕೊಟ್ಟು ಹೊರ ಬಂದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು. ಸರ್ಕಾರ ಅಲ್ಪಮತಕ್ಕೆ ಸಿಲುಕಿದೆ. ನೈತಿಕ ಹೊಣೆ ಹೊತ್ತು ಸರ್ಕಾರ ವಿಸರ್ಜಿಸಬೇಕು ಎಂಬ ಜನಾಂದೋಲನ ನಡೆಸುವುದು ಬಿಜೆಪಿಯ ಪ್ಲಾನ್ ಆಗಿದೆ ಅಂತಾ ಹೇಳಲಾಗುತ್ತಿದೆ.

  • ಸಂಪುಟ ರಚನೆ ಬೆನ್ನಲ್ಲೆ ಭಿನ್ನಮತ ಸ್ಫೋಟ – ರಾಜೀನಾಮೆ ಎಚ್ಚರಿಕೆ, 3 ದಿನ ಹೈಕಮಾಂಡ್ ಗೆ ಕಾಲಾವಕಾಶ

    ಸಂಪುಟ ರಚನೆ ಬೆನ್ನಲ್ಲೆ ಭಿನ್ನಮತ ಸ್ಫೋಟ – ರಾಜೀನಾಮೆ ಎಚ್ಚರಿಕೆ, 3 ದಿನ ಹೈಕಮಾಂಡ್ ಗೆ ಕಾಲಾವಕಾಶ

    ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟಗೊಂಡಿದೆ.

    ಸಚಿವ ಸ್ಥಾನ ಕೈತಪ್ಪಿದ ಉಭಯ ಪಕ್ಷಗಳಲ್ಲಿನ ಆಕಾಂಕ್ಷಿಗಳು ರೊಚ್ಚಿಗೆದ್ದಿದ್ದು, ಕೆಲವರು ಪಕ್ಷ ಬಿಡುವ ಮಾತುಗಳನ್ನಾಡಿದ್ದಾರೆ. ತಮ್ಮ ಬೆಂಬಲಿಗರ ಜೊತೆ ಪ್ರತ್ಯೇಕ ಸಭೆ ನಡೆಸಿದ ಎಂ.ಬಿ ಪಾಟೀಲ್, ಎಚ್.ಕೆ ಪಾಟೀಲ್, ಕಾಂಗ್ರೆಸ್ ಹೈಕಮಾಂಡ್ ಗೆ 3 ದಿನಗಳ ಕಾಲಾವಕಾಶ ನೀಡಿದ್ದಾರಂತೆ. ಅಷ್ಟರಲ್ಲಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಬೆಂಬಲಿಗರ ಜೊತೆ ಮಾತನಾಡಿ, ಪಕ್ಷಕ್ಕೆ ರಾಜೀನಾಮೆ ಕೊಡಬೇಕಾ ಅಥವಾ ಬೇರೆ ಪಕ್ಷಕ್ಕೆ ಹೋಗಬೇಕಾ ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಅಂತ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

    ಕುಂದಗೋಳ ಶಾಶಕ ಶಿವಳ್ಳಿ, ಪಕ್ಷದಲ್ಲಿ ನನಗೆ ನ್ಯಾಯ ಸಿಗೋವರೆಗೂ ಬಿಡಲ್ಲ ಎಂದಿದ್ದಾರೆ. ಈ ಮಧ್ಯೆ ಸತೀಶ ಜಾರಕಿಹೊಳಿ, ಹ್ಯಾರಿಸ್, ಬಿ.ಸಿ. ಪಾಟೀಲ, ಬಿ. ನಾಗೇಂದ್ರ ಸೇರಿದಂತೆ ಅತೃಪ್ತ ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಸಭೆ ನಡೆಸಿ, ಮುಂದಿನ ನಡೆಯ ಕುರಿತು ಚರ್ಚಿಸಿದ್ದಾರೆ.

    ಸಭೆ ಬಳಿಕ ಮಾತನಾಡಿದ ನಾಯಕರು ಇದು ಅತೃಪ್ತರ ಸಭೆಯಲ್ಲ. ಸ್ನೇಹಿತರ ಸಭೆ ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ರಾಜೀನಾಮೆ ನೀಡುತ್ತೇವೆ ಅಂತಾ ಎಚ್ಚರಿಸಿದ್ದಾರೆ.

  • ಮೈತ್ರಿ ಸರ್ಕಾರದ ಕೈ-ತೆನೆ ಸಚಿವರ ಪಟ್ಟಿ ಇಲ್ಲಿದೆ – ಜಾತೀವಾರು ಪ್ರಾತಿನಿಧ್ಯ ಹೇಗೆ?

    ಮೈತ್ರಿ ಸರ್ಕಾರದ ಕೈ-ತೆನೆ ಸಚಿವರ ಪಟ್ಟಿ ಇಲ್ಲಿದೆ – ಜಾತೀವಾರು ಪ್ರಾತಿನಿಧ್ಯ ಹೇಗೆ?

    ಪಬ್ಲಿಕ್ ಟಿವಿ
    ಬೆಂಗಳೂರು: ಕೊನೆ ಕ್ಷಣದಲ್ಲಿ ಕೈ ಮತ್ತು ತೆನೆಯ ಪಟ್ಟಿ ಅಂತಿಮಗೊಂಡಿದ್ದು, 15 ಮಂದಿ ಕೈ ಶಾಸಕರು ಮತ್ತು ತೆನೆಯ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಪ್ರದೇಶವಾರು, ಜಾತಿವಾರು ಲೆಕ್ಕಾಚಾರಗಳನ್ನು ಮಾನದಂಡವಾಗಿಸಿ ಹೊಸ ಮುಖಗಳಿಗೆ ಅವಕಾಶ ನೀಡದಿರಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರ ಮಾಡಿದೆ. ದೋಸ್ತಿ ಸರ್ಕಾರದಲ್ಲಿ ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ಸಿಕ್ಕಿದ್ದು, ಹಿರಿತನ, ಅನುಭವ, ಸಮುದಾಯದ ಆಧಾರದಲ್ಲಿ ಕೆಜೆ ಜಾರ್ಜ್,ಆರ್ ವಿ ದೇಶಪಾಂಡೆ ಅವರಿಗೆ ಮಂತ್ರಿಗಿರಿ ಸಿಕ್ಕಿದೆ.

    ಯಾವ ಜಾತಿಯರು ಎಷ್ಟಿದ್ದಾರೆ?
    8 ಒಕ್ಕಲಿಗ, 4 ಲಿಂಗಾಯತ, 2 ಕುರುಬ, 2 ಮುಸ್ಲಿಮ್, 3 ಎಸ್‍ಸಿ ಸಮುದಾಯದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಅದೇ ರೀತಿಯಾಗಿ ಕ್ರೈಸ್ತ, ರೆಡ್ಡಿ, ಎಸ್‍ಟಿ, ಉಪ್ಪಾರ, ಈಡಿಗ, ಬ್ರಾಹ್ಮಣ ಸಮುದಾಯದ ಒಬ್ಬೊಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

    ಮೈತ್ರಿ ಸರ್ಕಾರದ ಕಾಂಗ್ರೆಸ್ ಸಚಿವರುಗಳು

    1. ಡಿ.ಕೆ.ಶಿವಕುಮಾರ್ – ಕನಕಪುರ – ಒಕ್ಕಲಿಗ
    2. ಆರ್ .ವಿ.ದೇಶಪಾಂಡೆ – ಹಳಿಯಾಳ – ಬ್ರಾಹ್ಮಣ
    3. ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ – ಒಕ್ಕಲಿಗ
    4. ರಾಜಶೇಖರ್ ಪಾಟೀಲ್ – ಹುಮ್ನಾಬಾದ್ – ಲಿಂಗಾಯತ
    5. ಶಿವಾನಂದ ಪಾಟೀಲ್ – ಬಸವನ ಬಾಗೇವಾಡಿ – ಲಿಂಗಾಯತ
    6. ಜಮೀರ್ ಅಹ್ಮದ್ – ಚಾಮರಾಜಪೇಟೆ – ಅಲ್ಪಸಂಖ್ಯಾತ
    7. ಯು.ಟಿ.ಖಾದರ್ – ಮಂಗಳೂರು ಉತ್ತರ – ಅಲ್ಪಸಂಖ್ಯಾತ
    8. ಶಂಕರ್ – ರಾಣೆಬೆನ್ನೂರು – ಕುರುಬ
    9. ಕೆ.ಜೆ. ಜಾರ್ಜ್ – ಸರ್ವಜ್ಞ ನಗರ – ಕ್ರೈಸ್ತ
    10. ಪುಟ್ಟರಂಗಶೆಟ್ಟಿ – ಚಾಮರಾಜನಗರ – ಉಪ್ಪಾರ
    11. ಜಯಮಾಲ – ವಿಧಾನ ಪರಿಷತ್ ಸದಸ್ಯೆ – ಈಡಿಗ
    12. ಪ್ರಿಯಾಂಕ್ ಖರ್ಗೆ – ಚಿತ್ತಾಪುರ – ಎಸ್‍ಸಿ
    13. ವೆಂಕಟರಮಣಪ್ಪ – ಪಾವಗಡ – ಬೋವಿ
    14. ರಮೇಶ್ ಜಾರಕಿಹೊಳಿ – ಗೋಕಾಕ್ – ಎಸ್‍ಟಿ
    15. ಶಿವಶಂಕರ ರೆಡ್ಡಿ – ಗೌರಿಬಿದನೂರು – ರೆಡ್ಡಿ

    ಮೈತ್ರಿ ಸರ್ಕಾರದ ಜೆಡಿಎಸ್ ಸಚಿವರುಗಳು

    1. ಎಸ್.ಆರ್. ಗುಬ್ಬಿ ಶ್ರೀನಿವಾಸ್ -ಗುಬ್ಬಿ- ಒಕ್ಕಲಿಗ
    2. ಎಚ್.ಡಿ. ರೇವಣ್ಣ – ಹೊಳೆನರಸಿಪುರ- ಒಕ್ಕಲಿಗ
    3. ಬಂಡೆಪ್ಪ ಕಾಶೆಂಪುರ – ಬೀದರ್ ದಕ್ಷಿಣ – ಕುರುಬ
    4. ಜಿಟಿ ದೇವೇಗೌಡ – ಚಾಮುಂಡೇಶ್ವರಿ- ಒಕ್ಕಲಿಗ
    5. ಎಂ.ಸಿ. ಮನಗೂಳಿ – ಸಿಂಧಗಿ – ಲಿಂಗಾಯತ
    6. ವೆಂಕಟರಾವ್ ನಾಡಗೌಡ – ಸಿಂಧನೂರು- ಲಿಂಗಾಯತ
    7. ಸಿ.ಎಸ್. ಪುಟ್ಟರಾಜು – ಮೇಲುಕೋಟೆ – ಒಕ್ಕಲಿಗ
    8. ಸಾ.ರಾ.ಮಹೇಶ್ – ಕೆ.ಆರ್ ನಗರ – ಒಕ್ಕಲಿಗ
    9. ಎನ್. ಮಹೇಶ್ – ಕೊಳ್ಳೇಗಾಲ – ದಲಿತ
    10. ಡಿ.ಸಿ. ತಮ್ಮಣ್ಣ – ಮದ್ದೂರು – ಒಕ್ಕಲಿಗ

  • ನೂತನ ಶಾಸಕರು ದಬ್ಬಾಳಿಕೆ ನಡೆಸಿದ್ರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ- ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

    ನೂತನ ಶಾಸಕರು ದಬ್ಬಾಳಿಕೆ ನಡೆಸಿದ್ರೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ- ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

    ಮೈಸೂರು: ನೂತನ ಶಾಸಕರು ದಬ್ಬಾಳಿಕೆ ನಡೆಸಿದರೆ ಹುಚ್ಚು ನಾಯಿಗೆ ಹೊಡೆಯುವಂತೆ ಹೊಡೆಯಿರಿ ಅಂತ ಪಿರಿಯಾಪಟ್ಟಣದ ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಕೆ. ವೆಂಕಟೇಶ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ನಗರದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೆಂಕಟೇಶ್, ನೂತನ ಶಾಸಕರು ದಬ್ಬಾಳಿಕೆ ನಡೆಸಲು ಬಿಡಬೇಡಿ. ಒಂದು ವೇಳೆ ದಬ್ಬಾಳಿಕೆ ನಡೆಸಿದ್ರೆ ಅವರಿಗೆ ಹುಚ್ಚು ನಾಯಿಗೆ ಹೊಡೆಯುವಂತೆ ಹೊಡೆಯಿರಿ. ನಾನು ನಿಮಗೆ ಸಹಕಾರ ನೀಡುತ್ತೇನೆಂದು ಹೇಳಿದ್ದಾರೆ. ಜೆಡಿಎಸ್ ಪಕ್ಷದ ನೂತನ ಶಾಸಕರಾಗಿ ಆಯ್ಕೆಗೊಂಡಿರುವ ಕೆ. ಮಹದೇವು ಅವರ ವಿರುದ್ಧ ವೆಂಕಟೇಶ್ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

    ನನ್ನ ಜೊತೆಯಲ್ಲಿ ಇದ್ದವರೇ ನನಗೆ ವಿಶ್ವಾಸಘಾತುಕರಾಗಿ ಬೆನ್ನಿಗೆ ಚೂರಿ ಹಾಕಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬೇಗನೆ ಮಂಧ್ಯತರ ಚುನಾವಣೆ ನಡೆಯುತ್ತದೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ನನಗೆ ಸದ್ಯದ ಚುನಾವಣೆ ಎದುರಿಸುವ ಶಕ್ತಿಯಿಲ್ಲವೆಂದು ಹೇಳಿದ್ದಾರೆ.

    ಕೆ. ವೆಂಕಟೇಶ್‍ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಾಗಿದ್ದರು. ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವು ಅವರ ವಿರುದ್ಧ ಪರಾಜಿತಗೊಂಡಿದ್ದರು.

  • ರೆಸಾರ್ಟ್, ಹೋಟೆಲ್ ವಾಸ್ತವ್ಯದಿಂದ ಇಂದು ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮುಕ್ತಿ!

    ರೆಸಾರ್ಟ್, ಹೋಟೆಲ್ ವಾಸ್ತವ್ಯದಿಂದ ಇಂದು ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮುಕ್ತಿ!

    ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್, ಹೋಟೆಲ್‍ಗಳಲ್ಲೇ ಕಳೆದ 10 ದಿನದಿಂದ ಬೀಡುಬಿಟ್ಟಿರೋ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಇವತ್ತು ಮುಕ್ತಿ ಸಿಗಲಿದೆ.

    ವಿಶ್ವಾಸಮತ ಸಾಬೀತು ಬಳಿಕ 117 ಶಾಸಕರು ತಮ್ಮ ಸ್ವಕ್ಷೇತ್ರಗಳಿಗೆ ಹಿಂದಿರುಗಬಹುದಾಗಿದೆ. ರಾಹುಕಾಲ ಶುರುವಾಗುವ ಮುನ್ನ, ರೆಸಾರ್ಟ್‍ನಲ್ಲಿರೋ ಜೆಡಿಎಸ್ ಶಾಸಕರು, ಹೋಟೆಲ್‍ನಲ್ಲಿರೋ ಕಾಂಗ್ರೆಸ್ ಶಾಸಕರು ಬಸ್‍ಗಳಲ್ಲಿ ವಿಧಾನಸೌಧದ ಕಡೆ ಹೊರಟಿದ್ದಾರೆ.

    ಶಾಸಕರ ಬಸ್‍ಗಳು ಬರೋ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಗೆದ್ದ ದಿನದಿಂದ ಕ್ಷೇತ್ರಗಳಿಂದ ಮಾಯವಾಗಿದ್ದವರು ಈ ದಿನ ಸಂಜೆ ನಾಳೆ ಮತ್ತೆ ತಮ್ಮೂರುಗಳತ್ತ ಮುಖ ಮಾಡಲಿದ್ದಾರೆ.

    ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ನಡೆದು ಹೋಗಿತ್ತು. ಇತ್ತ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಬಂದಿತ್ತು. ಆದ್ರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡುತ್ತೇವೆಂದು ಹೇಳಿದಾಗ, ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡೂ ಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಬಿಎಸ್‍ವೈ ಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತ್ತು.

    ಇದರಿಂದ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿತ್ತು. ಹೀಗಾಗಿ ಈ ಭೀತಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರುಗಳು ರೆಸಾರ್ಟ್, ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದ್ದರು. ಇಂದು ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಮಾಡಿದ ಬಳಿಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲು ಅನುಮತಿ ನೀಡಲಾಗುತ್ತಿದೆ.