Tag: ಶಾಸಕರು ರಾಜೀನಾಮೆ

  • ರಾಜಸ್ಥಾನದಲ್ಲಿ ಮಾಯಾವತಿಗೆ ಶಾಕ್ – ಬಿಎಸ್‍ಪಿಯ ಎಲ್ಲ 6 ಶಾಸಕರು ಕಾಂಗ್ರೆಸ್ ಸೇರ್ಪಡೆ

    ರಾಜಸ್ಥಾನದಲ್ಲಿ ಮಾಯಾವತಿಗೆ ಶಾಕ್ – ಬಿಎಸ್‍ಪಿಯ ಎಲ್ಲ 6 ಶಾಸಕರು ಕಾಂಗ್ರೆಸ್ ಸೇರ್ಪಡೆ

    ಜೈಪುರ: ರಾಜಸ್ಥಾನದ ಎಲ್ಲ 6 ಶಾಸಕರು ಸೋಮವಾರ ತಡರಾತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ತೊರೆದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

    ಬಿಎಸ್‍ಪಿಯ ರಾಜೇಂದ್ರ ಗುಡಾ, ಜೋಗೇಂದ್ರ ಸಿಂಗ್ ಅವನಾ, ವಾಜೀಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪ್‍ಚಂದ್ ಖೇರಿಯಾ ಅವರು ಕಾಂಗ್ರೆಸ್ ಸೇರಿದ್ದಾರೆ. ಈ ಮೂಲಕ 200 ಸ್ಥಾನಗಳ ಪೈಕಿ ಕಾಂಗ್ರೆಸ್ 106 ಸ್ಥಾನವನ್ನು ಪಡೆದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎರಡೇ ತಿಂಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.

    ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಮಾಯಾವತಿ, ಕಾಂಗ್ರೆಸ್ ಯಾವಾಗಲೂ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿಯೇ ಅಂಬೇಡ್ಕರ್ ಅವರು ದೇಶದ ಮೊದಲ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅಲ್ಲದೆ, ಕಾಂಗ್ರೆಸ್‍ನವರು ಎಂದಿಗೂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಿಲ್ಲ. ಇದು ತೀವ್ರ ದುಃಖದ ಹಾಗೂ ಅವಮಾನಕರ ವಿಷಯವಾಗಿದೆ ಎಂದು ಕಿಡಿಕಾರಿದ್ದಾರೆ.

    ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಎಸ್‍ಪಿ ಶಾಸಕರ ನಡುವೆ ಒಡಕು ಮೂಡಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಲ್ಲದ, ಮೋಸಗಾರ ಪಕ್ಷ ಎಂದು ಸಾಬೀತುಪಡಿಸಿದೆ. ಕಾಂಗ್ರೆಸ್ ಕಠಿಣ ಪ್ರತಿಸ್ಪರ್ಧಿಗಳೊಂದಿಗೆ ಹೋರಾಡುವ ಬದಲು ಕಾಂಗ್ರೆಸ್‍ಗೆ ಬೆಂಬಲ ನೀಡುವ ಪಕ್ಷಗಳಿಗೆ ಯಾವಾಗಲೂ ಹಾನಿಯುಂಟು ಮಾಡುತ್ತಿದೆ ಎಂದು ಟ್ವೀಟ್‍ನಲ್ಲಿ ಗುಡುಗಿದ್ದಾರೆ.

    ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಸಂಪರ್ಕದಲ್ಲಿದ್ದ ಶಾಸಕರು ವಿಧಾನಸಭೆ ಸ್ಪೀಕರ್ ಸಿ.ಪಿ.ಜೋಶಿಯವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಕುರಿತ ನಿರ್ಧಾರದ ಬಗ್ಗೆ ಪತ್ರದ ಮೂಲಕ ತಿಳಿಸಿದ್ದಾರೆ.

    ಕೋಮು ಶಕ್ತಿಗಳ ವಿರುದ್ಧ ಹೋರಾಡಲು, ರಾಜ್ಯದ ಅಭಿವೃದ್ಧಿ ಹಾಗೂ ಸರ್ಕಾರದ ಸ್ಥಿರತೆಗಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಅಶೋಕ್ ಗೆಹ್ಲೋಟ್ ಅವರು ಅತ್ಯುತ್ತಮ ಮುಖ್ಯಮಂತ್ರಿಯಾಗಿದ್ದು, ರಾಜಸ್ಥಾನದಲ್ಲಿ ಅವರಿಗಿಂತ ಉತ್ತಮರು ಯಾರೂ ಇಲ್ಲ. ಹೀಗಾಗಿ ಅವರ ಬಗ್ಗೆ ಪ್ರಭಾವಿತನಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಶಾಸಕ ರಾಜೇಂದ್ರ ಗುಡಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಶಾಸಕ ಜೋಗೇಂದ್ರ ಸಿಂಗ್ ಅವನಾ ಈ ಕುರಿತು ಪ್ರತಿಕ್ರಿಯಿಸಿ, ನಾವು ನಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದೇವೆ. ಇಂದು ಸಿ.ಪಿ.ಜೋಶಿ ಹಾಗೂ ಅಶೋಕ್ ಅವರನ್ನು ಭೇಟಿಯಾಗಿದ್ದೇವೆ. ನಮ್ಮ ಮುಂದೆ ಹಲವು ಸವಾಲುಗಳಿದ್ದವು. ಒಂದೆಡೆ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುತ್ತಿದ್ದೆವು. ಇನ್ನೊಂದೆಡೆ ಚುನಾವಣೆಯಲ್ಲಿ ಅವರ ವಿರುದ್ಧ ಹೋರಾಡುತ್ತಿದ್ದೆವು. ಹೀಗಾಗಿ ಯೋಚಿಸಿಯೇ ರಾಜ್ಯದ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ನಡೆದ ರಾಜಸ್ಥಾನ ಚುನಾವಣೆಯಲ್ಲಿ ಒಟ್ಟು 200 ಕ್ಷೇತ್ರಗಳ ಪೈಕಿ 100ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ ಬಿಜೆಪಿ 72 ಸ್ಥಾನಗಳನ್ನು ಗೆದ್ದುಕೊಂಡಿತ್ತು. 12 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದರೆ 6 ಕ್ಷೇತ್ರಗಳಲ್ಲಿ ಬಿಎಸ್‍ಪಿ ಜಯಗಳಿಸಿತ್ತು. 2019ರ ಮಾರ್ಚ್ ನಲ್ಲಿ 12 ಮಂದಿ ಇತರ ಶಾಸಕರು ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲ ಕಾಂಗ್ರೆಸ್ ಸಂಖ್ಯೆ 112ಕ್ಕೆ ಏರಿಕೆ ಆಗಿತ್ತು. ಈಗ ಬಿಎಸ್‍ಪಿ ಶಾಸಕರ ಸೇರ್ಪಡೆಯಿಂದ ಸಂಖ್ಯೆ 118ಕ್ಕೆ ಏರಿಕೆಯಾಗಿದೆ.

  • ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

    ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

    ಚಿಕ್ಕಮಗಳೂರು: ಅತೃಪ್ತ ಶಾಸಕರೆಲ್ಲಾ ಅನರ್ಹವಾಗಿರೋದು ಬಿಜೆಪಿಗೆ ವರವಾಗಿದ್ದು, ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವ ವೇಳೆ ಯಾವುದೇ ಪಕ್ಷದವರು ಶೇ.51ರಷ್ಟು ಮತ ಹೊಂದಿರಬೇಕು. ಅದನ್ನು ಪಟ್ಟಿ ಸಮೇತ ರಾಜ್ಯಪಾಲರಿಗೆ ತೋರಿಸಬೇಕು. ಅದು ಸಂವಿಧಾನದ ನಿಯಮ ಎಂದು ತಿಳಿಸಿದ್ದಾರೆ.

    ಸದನ ಪ್ರಾರಂಭವಾದ ಮೇಲೆ ಯಾರು ಹೆಚ್ಚು ಮತ ಗಳಿಸುತ್ತಾರೋ ಅವರು ವಿಶ್ವಾಸ ಮತ ಗಳಿಸುತ್ತಾರೆ, ಮುಖ್ಯಮಂತ್ರಿಯಾಗುತ್ತಾರೆ. ಆದರೆ, ರಾಜ್ಯಪಾಲರು ಯಡ್ಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವಾಗ ಇವರಿಗೆ ಶೇ.51ರಷ್ಟು ಮತ ಇದೆಯಾ ಎಂದು ಯೋಚಿಸಬೇಕಿತ್ತು. ಆದರೆ, ಅವರು ಕೇಳಿದ ತಕ್ಷಣ ಅವಕಾಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅದೃಷ್ಟ ಎಂಬಂತೆ ಅತೃಪ್ತರು ಅನರ್ಹವಾಗಿದ್ದಾರೆ. ಈಗ ಅವರಿಗೆ ಅವಕಾಶ ಇದೆ. ಇದನ್ನು ನಾವು ಒಪ್ಪುತ್ತೇವೆ. ಆದರೆ, ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಆಗುವುದಕ್ಕಿಂತ ಮೊದಲೇ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿರೋದು ಸಂವಿಧಾನ ವಿರೋಧ. ರಾಜ್ಯಪಾಲರ ನಡೆ ನಮಗೆ ನೋವು ತಂದಿದೆ. ಸಂವಿಧಾನ ಕಾಪಾಡಬೇಕಾದವರೆ ಅದರ ವಿರುದ್ಧ ನಡೆದುಕೊಂಡಾಗ ಏನಾಗುತ್ತದೆ ಎಂದು ರಾಜ್ಯಪಾಲರ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

  • ಶಾಸಕರು ಅನರ್ಹಗೊಂಡಿದ್ದು ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದೆ: ಹೊರಟ್ಟಿ

    ಶಾಸಕರು ಅನರ್ಹಗೊಂಡಿದ್ದು ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದೆ: ಹೊರಟ್ಟಿ

    ಧಾರವಾಡ: ಅತೃಪ್ತ ಶಾಸಕರ ಅನರ್ಹತೆ ನಿರ್ಧಾರ ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದ್ದು, ಅತೃಪ್ತರ ಕಾಟ ಬಿಜೆಪಿಗೆ ತಪ್ಪಿದಂತಾಗಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಧಾರವಾಡದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ತಮ್ಮ ಇತಿ ಮಿತಿಯಲ್ಲಿ ಕಾಯಿದೆ, ಕಾನೂನು ನೋಡಿಕೊಂಡು ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಅವರು ಸುಪ್ರಿಂಕೋರ್ಟ್‍ಗೆ ಹೋದರೆ ಯಾವುದು ಸರಿ? ತಪ್ಪು ಎನ್ನುವುದು ತಿಳಿಯುತ್ತದೆ. ಒಂದು ಪಕ್ಷದಿಂದ ಸ್ಪರ್ಧಿಸಿ ತಮಗೆ ಬೇಕಾದಾಗ ರಾಜೀನಾಮೆ ನೀಡುವುದು ಸರಿಯಲ್ಲ. ಈ ವಿಚಾರವಾಗಿ ಸ್ಪೀಕರ್ ಒಳ್ಳೆ ನಿರ್ಣಯ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಒಂದು ಪಕ್ಷದಿಂದ ಗೆದ್ದು ನಂತರ ರಾಜೀನಾಮೆ ನೀಡಿದರೆ ಮುಂದಿನ ಐದು ವರ್ಷದ ಅವಧಿಯೊಳಗೆ ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದು ಅಂತಹ ಕಾನೂನು ಜಾರಿಯಾಗಬೇಕು. ಈ ಮೂಲಕ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನು ಬರಬೇಕು. ಇಂತಹ ಒಂದು ಕಾನೂನನ್ನು ಮೋದಿಯವರೇ ತರಬೇಕು. ಮೋದಿಯವರು ದೇಶದ ಬಗ್ಗೆ ಬಹಳ ಮಾತನಾಡುತ್ತಾರೆ ಹೀಗಾಗಿ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನನ್ನು ಅವರೇ ತರಬೇಕು ಎಂದು ಆಗ್ರಹಿಸಿದರು.

    ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ
    ಶಾಸಕರ ಕುದುರೆ ವ್ಯಾಪಾರ ವಿಚಾರವಾಗಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಸ್ಪೀಕರ್ ನಡೆ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಕಾಯ್ದೆ ಕಾನೂನು ನೋಡಿ ಅವರು ಅನರ್ಹ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ಕೊಟ್ಟ ಬಳಿಕ ಅವರು ಸದನದಲ್ಲಿ ಇರಬೇಕಿತ್ತು. ಹೀಗಾಗಿ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಲಾಗಿದೆ. ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತಿದ್ದರೆ ಅಂಗೀಕಾರ ಆಗುತಿತ್ತು. ಆದರೆ, ಅವರು ನಿಯಮ ಪಾಲಿಸಿಲ್ಲ. ಎಲ್ಲರೂ ಒಟ್ಟಾಗಿ ಮುಂಬೈ ಹೋಟೆಲ್‍ಗೆ ತೆರಳಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ಬದಲಿಗೆ ಅನರ್ಹ ಮಾಡಿದ್ದಾರೆ ಎಂದು ತಿಳಿಸಿದರು.

    ಬಿಜೆಪಿಗೆ ಜೆಡಿಎಸ್ ನೈತಿಕ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಬಿಜೆಪಿ ಬಳಿ ಕಡಿಮೆ ಬಹುಮತ ಇದೆ. ಹೊತ್ತು ಬಂದಂತೆ ಕೊಡೆ ಹಿಡಿಯೋದು ಸರಿಯಲ್ಲ. ಜಿ.ಟಿ. ದೇವೇಗೌಡರು ಬಿಜೆಪಿ ನೈತಿಕ ಬೆಂಬಲ ಕೊಡೋ ವಿಚಾರ ಹೇಳಿದ್ದು ಸರಿಯಲ್ಲ ಎಂದರು.

  • ಕಾಂಗ್ರೆಸ್ಸಿಗೆ ಸಿಎಂ ಸ್ಥಾನದ ಆಫರ್ ನೀಡಿದ್ದು ನಿಜ: ಡಿ.ಕೆ.ಶಿವಕುಮಾರ್

    ಕಾಂಗ್ರೆಸ್ಸಿಗೆ ಸಿಎಂ ಸ್ಥಾನದ ಆಫರ್ ನೀಡಿದ್ದು ನಿಜ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾರಾದರೂ ಸಿಎಂ ಆಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕು ಎಂದು ಜೆಡಿಎಸ್‍ನವರು ನಮ್ಮ ಬಳಿ ಕೇಳಿಕೊಂಡಿರುವುದು ನಿಜ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಯಾರಾದರೂ ಮುಖ್ಯಮಂತ್ರಿಯಾಗಿ ಎಂದು ಜೆಡಿಎಸ್‍ನವರು ಮುಕ್ತ ಕಂಠದಿಂದ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್‍ಗೂ ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದರು.

    ನಾನಾಗಲಿ(ಡಿ.ಕೆ.ಶಿವಕುಮಾರ್), ಡಾ.ಜಿ.ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯನವರು ಯಾರಾದರೂ ಸರಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕೆಂದು ಕೇಳಿಕೊಂಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.

    ನಾಳೆ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಶಾಸಕರನ್ನು ನಾವು ಮನವೊಲಿಸುತ್ತೇವೆ. ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

    ನಾನು ಸ್ಟಂಟ್ ಮಾಡುತ್ತಿದ್ದೇನೆ. ತೋರಿಕೆಗೆ ಓಡಾಡುತ್ತಿದ್ದೇನೆ. ಏನೂ ಕೆಲಸ ಮಾಡುತ್ತಿಲ್ಲ ಎಂದು ನನ್ನ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ನನಗೆ ಅಭ್ಯಂತರವಿಲ್ಲ. ಎಲ್ಲರೂ ಟೀಕಿಸಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸರ್ಕಾರ ಉಳಿಸಿಕೊಳ್ಳುವಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

    ಸಿಎಂ ಕೊನೆಯ ದಾಳ
    ಅತೃಪ್ತ ಶಾಸಕರ ಮನವೊಲಿಕೆಗೆ ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದೇ ಇದ್ದಾಗ ಈಗ ಹೇಗಾದರೂ ಮಾಡಿ ಸರ್ಕಾರ ಉಳಿಸಲು ಸಿಎಂ ಈ ಕೊನೆಯ ದಾಳವನ್ನು ಪ್ರಯೋಗಿಸಿದ್ದಾರೆ. ದೋಸ್ತಿ ಸರ್ಕಾರದ 17 ಶಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಪಡಿಸುವುದು ಕಷ್ಟ ಎನ್ನುವುವುದು ಸಿಎಂಗೆ ಗೊತ್ತಾಗಿದೆ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕಾಂಗ್ರೆಸ್ ನಾಯಕರಿಗೆ ಸಿಎಂ ಪಟ್ಟ ನೀಡುವುದಾಗಿ ಹೇಳಿದ್ದಾರೆ.

    2018ರಲ್ಲಿ ಚುನಾವಣೆಯ ಬಳಿಕ 5 ವರ್ಷಗಳ ಕಾಲ ಸಿಎಂ ದಳಕ್ಕೆ ಎನ್ನುವ ನಿರ್ಧಾರಕ್ಕೆ ಎರಡು ಪಕ್ಷಗಳು ಒಪ್ಪಿಕೊಂಡಿತ್ತು. ಆದರೆ ಈಗ ಕಾಂಗ್ರೆಸ್ಸಿನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಪಟ್ಟ ನೀಡಲು ಮುಂದಾಗಿದ್ದಾರೆ. ನಮ್ಮ ಪ್ರಯತ್ನಗಳು ಮುಗಿದಿವೆ. ಇನ್ನು ನಮ್ಮಿಂದ ಆಗುವುದಿಲ್ಲ. ನಿಮ್ಮ ಶಾಸಕರನ್ನ ಕರೆತಂದು ನೀವೇ ಸಿಎಂ ಆಗಿ ಸರ್ಕಾರವನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.

    ನಮಗೆ ಸರ್ಕಾರ ಉಳಿಯಬೇಕು, ನಾನು ಸಿಎಂ ತ್ಯಾಗ ಮಾಡಲು ಸಿದ್ಧ. ನಾವು ಬಾಹ್ಯ ಬೆಂಬಲವನ್ನು ನೀಡುತ್ತೇವೆ. ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ, ಡಿಕೆ ಶಿವಕುಮಾರ್ ಯಾರಾದ್ರೂ ಸಿಎಂ ಆಗಲಿ. ಈ ನಿರ್ಧಾರಕ್ಕೆ ದೇವೇಗೌಡರು ಕೂಡ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

  • ಸಜ್ಜನ ರಾಜಕಾರಣಿ ರಾಮಲಿಂಗಾರೆಡ್ಡಿಗೆ ದೇವ್ರು ಒಳ್ಳೆ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡ್ಲಿ- ಉಗ್ರಪ್ಪ

    ಸಜ್ಜನ ರಾಜಕಾರಣಿ ರಾಮಲಿಂಗಾರೆಡ್ಡಿಗೆ ದೇವ್ರು ಒಳ್ಳೆ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡ್ಲಿ- ಉಗ್ರಪ್ಪ

    ಬೆಂಗಳೂರು: ಅತೃಪ್ತ ಶಾಸಕರಲ್ಲೊಬ್ಬರು ಒಬ್ಬರಾದ ರಾಮಲಿಂಗಾ ರೆಡ್ಡಿಯವರು ಒಳ್ಳೆಯ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ರಾಜೀನಾಮೆ ವಾಪಸ್ ಪಡೆದುಕೊಳ್ತಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವಂತಾಗಲಿ ಎಂದು ಆಶೀಸುವುದಾಗಿ ಅವರು ತಿಳಿಸಿದರು.

    ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಗಿಸಲು ಏನೆಲ್ಲ ಸಂಚು ಮಾಡಬೇಕೋ ಅದನ್ನೆಲ್ಲ ಬಿಜೆಪಿ ಮಾಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಮೌಲ್ಯಗಳು, ಜನಾದೇಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋದು ಇದೆ. ಹಾಗೆ ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಗರಂ ಆದರು.

    ಬಿಜೆಪಿಗೆ ಯಾವುದೇ ಪಕ್ಷ ಬೆಂಬಲ ನೀಡಲು ಬಂದಿರಲಿಲ್ಲ. ಹಾಗಾಗಿ ನಾವು ಸರ್ಕಾರ ರಚನೆ ಮಾಡಿದೆವು. ಹೀಗಾಗಿ ಬಿಜೆಪಿಯವರು ಅನ್ಯ, ವಾಮಮಾರ್ಗಗಳನ್ನು ಹಿಡಿದಿದ್ದಾರೆ ಎಂದು ಅವರು ಕಿಡಿಕಾರಿದರು.

    ಕೇಂದ್ರ ಬಜೆಟ್ ನ ಮರುದಿನ ಅಂದರೆ ಶನಿವಾರ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಆ ಬಳಿಕ ರಾಮಲಿಂಗಾ ರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಹೊರತು ಪಡಿಸಿ ಉಳಿದೆಲ್ಲ ಶಾಸಕರು ಅಂದೇ ಮುಂಬೈಗೆ ಹಾರಿದ್ದಾರೆ. ಅಲ್ಲದೆ ಸ್ಪೀಕರ್ ಅವರು ನಮ್ಮ ರಾಜೀನಾಮೆ ಅಂಗೀಕರಿಸದೇ ನಾವು ಬೆಂಗಳೂರಿಗೆ ವಾಪಸ್ ಆಗುವ ಮಾತೇ ಇಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತ ಅಸಮಾಧಾನಿತರನ್ನು ಮನವೊಲಿಸುವ ಪ್ರಯತ್ನ ಕೈ-ತೆನೆಯಿಂದ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್ಸಿನ ಎಲ್ಲರು ತಮ್ಮ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆ.

  • ಹೆಚ್‍ಎಎಲ್ ನಲ್ಲಿ ಬಿಎಸ್‍ವೈ, ಪರಂ ಬೆಂಬಲಿಗರ ಜಟಾಪಟಿ

    ಹೆಚ್‍ಎಎಲ್ ನಲ್ಲಿ ಬಿಎಸ್‍ವೈ, ಪರಂ ಬೆಂಬಲಿಗರ ಜಟಾಪಟಿ

    ಬೆಂಗಳೂರು: ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಜಿ.ಪರಮೇಶ್ವರ್ ಬೆಂಬಲಿಗರು ನಡುವೆ ಗಲಾಟೆ ನಡೆದಿದೆ.

    ಪಕ್ಷೇತರ ಶಾಸಕ ಹೆಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಂಡರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಮುಂಬೈನತ್ತ ಹೊರಡಲು ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

    ಇತ್ತ ನಾಗೇಶ್ ಅವರಿಗಾಗಿ ವಿಶೇಷ ವಿಮಾನ ಸಿದ್ಧಪಡಿಸಿಕೊಂಡಿದ್ದ ಯಡಿತಯೂರಪ್ಪನವರ ಆಪ್ತ ಸಂತೋಷ್ ನಿಂತಿದ್ದರು. ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದ ವೇಳೆ ಯಡಿಯೂರಪ್ಪ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಈ ವೇಳೆ ಇಬ್ಬರು ನಾಯಕರ ಆಪ್ತರ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದರು.

    ಪೊಲೀಸರ ಮೂಲಕ ಎಚ್‍ಎಎಲ್‍ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವ ಶಾಸಕರನ್ನೂ ವಿಶೇಷ ವಿಮಾನ ಹತ್ತಲು ಬಿಡದಂತೆ ಸೂಚಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿ.ಎಸ್.ಯಡಿಯೂರಪ್ಪ, ಶಾಸಕರನ್ನು ತಡೆಯಲು ನೀವ್ಯಾರು ಎಂದು ದಭಾಯಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದೂರವಾಣಿ ಮೂಲಕ ಎಚ್‍ಎಎಲ್‍ನ ಹಿರಿಯ ಪೊಲೀಸ್ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಮುಳುಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರಿಗೆ ಬಳಿಕ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅತೃಪ್ತರ ಗುಂಪು ಸೇರಲು ಮುಂದಾಗಿದ್ದಾರೆ.