Tag: ಶಾಲೆ-ಕಾಲೇಜು

  • ಮಹಾ ಮಳೆಗೆ ಅವಾಂತರ – ಸೋಮವಾರ ಬೀದರ್‌ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

    ಮಹಾ ಮಳೆಗೆ ಅವಾಂತರ – ಸೋಮವಾರ ಬೀದರ್‌ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

    – ಕಲಬುರಗಿ, ಬೀದರ್, ಯಾದಗಿರಿಯಲ್ಲೂ ಮಳೆ

    ಬೀದರ್‌: ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೀದರ್ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶದನ್ವಯ ಡಿಡಿಪಿಐ ಸಲೀಂ ಪಾಷಾ ಅವರು, ಸೋಮವಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸೋಮವಾರವೂ ಧಾರಾಕಾರ‌ ‌ಮಳೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಈಗಾಗಲೇ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

    ರಾಜ್ಯದಲ್ಲೂ ಹಲವೆಡೆ ಮಳೆಯ ಅವಾಂತರ:
    ಆಂಧ್ರ-ತೆಲಂಗಾಣಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲೂ ಭಾರೀ ಮಳೆಯಾಗ್ತಿದೆ. ಕಲಬುರಗಿ, ಯಾದಗಿರಿ, ಬೀದರ್ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರಗಳಾಗಿವೆ. ಕಲಬುರಗಿಯ ಪಿಡಿಎ ಕಾಲೇಜ್ ಮುಂಭಾಗದ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಕಾಗಿಣಾ ನದಿ ಉಕ್ಕೇರಿದ ಪರಿಣಾಮ ತಟದಲ್ಲಿನ ಉತ್ತರಾಧಿ ಮಠಕ್ಕೆ ನೀರು ನುಗ್ಗಿದೆ.

    ಜಯತೀರ್ಥರ ಮೂಲ ಬೃಂದಾವನ ಜಲಾವೃತವಾಗಿದೆ. ನೀರು ತುಂಬಿದ ಮಠ ಅವರಣದಲ್ಲೇ ಅರ್ಚಕರು ಪೂಜೆ ಮಾಡಿದ್ದಾರೆ. ಯಾದಗಿರಿಯ ದೋರನಹಳ್ಳಿ, ವಂಕಸಂಬ್ರ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ರು. ಬೀದರ್‌ನಲ್ಲಿ ಭಾರೀ ಮಳೆಗೆ ರಸ್ತೆಗಳು, ಸ್ಕೂಲ್ ಮೈದಾನಗಳು ಕೆರೆಯಂತಾಗಿವೆ. ಖಾಸಗಿ ಕಾಲೇಜೊಂದು ಮಳೆಯಲ್ಲೇ ಕ್ರೀಡಾಕೂಟ ಆಯೋಜಿಸಿ ಅಮಾನವೀಯತೆ ಮೆರೆದಿದೆ. ಮಳೆ-ಕೆಸರಿನಲ್ಲಿ ಬಿದ್ದು ಹಲವರು ಗಾಯಗೊಂಡಿದ್ದಾರೆ. ಇತ್ತ ಉಡುಪಿಯಲ್ಲಿ ಆಕಸ್ಮಿಕವಾಗಿ ಸಮುದ್ರದ ಪಾಲಾಗ್ತಿದ್ದ ಮೀನುಗಾರರೊಬ್ಬರನ್ನು ಸ್ಥಳೀಯರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.

  • ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ

    ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ

    ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನಾಳೆ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಶಾಲಾ-ಕಾಲೇಜಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.

    ಕೊಡಗು: ಜಿಲ್ಲೆಯ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗೆ ಮಳೆ ಮುಂದುವರಿದರೆ ಮಡಿಕೇರಿ- ತಲಕಾವೇರಿ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾವೇರಿ, ಕನ್ನಿಕೆ ಹಾಗೂ ಸುಜೋತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 375 ರಲ್ಲಿ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

    ದಕ್ಷಿಣ ಕನ್ನಡ/ ಉತ್ತರ ಕನ್ನಡ: ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ. ಮಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ವಾಹನ ಸಂಚಾರ ಸ್ತಬ್ಧಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ 1ರಿಂದ 10ನೇ ತರಗತಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿದ್ದು. ಉಳಿದ ತಾಲೂಕಿನಲ್ಲಿ ಮಳೆಯ ಆಧಾರದಲ್ಲಿ ರಜೆ ನೀಡುವುದು ಆಯಾ ತಾಲೂಕಿನ ತಹಶೀಲ್ದಾರ್ ವಿವೇಚನೆಗೆ ಬಿಟ್ಟಿದ್ದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಲ್ಪ ಮಳೆ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಿದೆ. ಸಮುದ್ರದಲ್ಲಿ 10 ರಿಂದ 12 ಅಡಿ ಎತ್ತರದ ಅಲೆಗಳು ಏಳುತ್ತಿವೆ. ಎರಡು ದಿನಗಳಿಂದ ಮೀನುಗಾರಿಕೆಗೆ ತೆರಳದಂತೆ ಬಂದರಿನಲ್ಲಿ ಬೋಟ್‍ಗಳಿಗೆ ತಡೆ ಹಾಕಿದ್ದಾರೆ.

    ಮಲೆನಾಡಿನಲ್ಲಿ ಹಲವೆಡೆ ಹೆಚ್ಚಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ಹಾಗೂ ಉಡುಪಿಯಲ್ಲಿ ಶಾಲಾ-ಕಾಲೇಜುಗಳು ರಜೆ ಘೋಷಣೆ ಮಾಡಲಾಗಿದೆ. ಧಾರವಾಡದಲ್ಲಿಯೂ ಆಗಾಗ ಜಿಟಿಜಿಟಿ ಮಳೆ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿಯೇ ಸ್ವಲ್ಪ ಮಟ್ಟಿಗೆ ಜಿಟಿಜಿಟಿಯಾಗಿ ಆರಂಭವಾಗಿದ್ದ ಮಳೆ, ಬೆಳಗ್ಗೆಯಿಂದ ಆಗಾಗ ಬರುತ್ತಲೇ ಇತ್ತು. ಜಿಲ್ಲೆಯಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಇದ್ದು, ಸ್ವಲ್ಪ ಚಳಿ ಜಾಸ್ತಿಯಾಗಿದೆ.