Tag: ಶಾಲಾ ಬ್ಯಾಗ್

  • ಶಾಲಾ ಮಕ್ಕಳಿಂದಲೇ ನೂತನ ಕಟ್ಟಡ ಉದ್ಘಾಟನೆ- ಶಿಕ್ಷಣ ಸಚಿವರ ಕ್ರಮಕ್ಕೆ ಮೆಚ್ಚುಗೆ

    ಶಾಲಾ ಮಕ್ಕಳಿಂದಲೇ ನೂತನ ಕಟ್ಟಡ ಉದ್ಘಾಟನೆ- ಶಿಕ್ಷಣ ಸಚಿವರ ಕ್ರಮಕ್ಕೆ ಮೆಚ್ಚುಗೆ

    – ಮುಂದಿನ ಶೈಕ್ಷಣಿಕ ವರ್ಷದಿಂದ ಬ್ಯಾಗ್ ಲೆಸ್ ಡೇ

    ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಮಣೂರು ಸರಕಾರಿ ಶಾಲೆಯ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿಂದ ಬಂದಿದ್ದರು. ರಾಜಧಾನಿಯಿಂದ ಬಂದರೂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಮಾತ್ರ ಸರಕಾರಿ ಶಾಲೆಯ ಮಕ್ಕಳು.

    ಸಚಿವರು ಸರಕಾರಿ ಶಾಲೆಯ ಮಕ್ಕಳ ಕೈಯಲ್ಲೇ ಪ್ರಮುಖ ಕಾರ್ಯಕ್ರಮ, ಕೊಠಡಿಗಳು, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು. ಮಕ್ಕಳಿಗಾಗಿರುವ ಶಾಲೆಯನ್ನು ಮಕ್ಕಳೇ ಉದ್ಘಾಟಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು. ಸಚಿವರ ಕ್ರಮಕ್ಕೆ ಪೋಷಕರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ಮೂಲಕ ಶಾಲೆಗಳಿಗೆ ಸಂಬಂಧಿಸಿದಂತೆ ನಾಲ್ಕು ನಿರ್ಣಯ ತೆಗೆದುಕೊಂಡಿದ್ದೇವೆ. ವಾರಕ್ಕೊಂದು ದಿನ ಪಠ್ಯೇತರ ಚಟುವಟಿಕೆಗಳು ಕಡ್ಡಾಯ ಮಾಡುತ್ತೇವೆ. ಪಠ್ಯಪುಸ್ತಕ ಬಿಟ್ಟು ಏನಾದರೂ ಮಾಹಿತಿ, ಚಟುವಟಿಕೆ ಮಕ್ಕಳಿಗೆ ಶಿಕ್ಷಕರು, ಶಿಕ್ಷಕೇತರರಿಂದ ಸಿಗುವಂತಾಗಲಿದೆ. ಇದಕ್ಕೆ ಈಗಾಗಲೇ ರೂಪುರೇಷೆ ನಿರ್ಮಾಣ ಮಾಡಿದ್ದೇವೆ ಎಂದರು.

    2020 ಶೈಕ್ಷಣಿಕ ವರ್ಷದಿಂದ ಸ್ಕೂಲ್ ಬ್ಯಾಗ್ ಹೊರೆ ಕಡಿಮೆಯಾಗಲಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳಿಗೂ ವಿಸ್ತರಣೆ ಮಾಡುತ್ತೇವೆ. ಮಕ್ಕಳ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಅವರ ಆರೋಗ್ಯವೂ ಮುಖ್ಯ. ಖಂಡಿತಾ ಮುಂದಿನ ವರ್ಷಕ್ಕೆ ಪುಸ್ತಕಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.

    ಶಿಕ್ಷಕರಲ್ಲದ ವಿಷಯ ತಜ್ಞರು ಮಕ್ಕಳಿಗೆ ಪಾಠ ಮಾಡುವ ಅವಕಾಶ ಕಲ್ಪಿಸಲು ಆ್ಯಪ್ ಮಾಡಿರುವುದಾಗಿ ಸುರೇಶ್ ಕುಮಾರ್ ಹೇಳಿದರು. ರಜೆಯ ದಿನ ಹತ್ತಿರದ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿ ಇಂಗ್ಲೀಷ್, ಹಿಂದಿ ಮತ್ತಿತರ ಯಾವುದಾದರೂ ಸಾಮಾನ್ಯ ಜ್ಞಾನದ ವಿಚಾರದಲ್ಲಿ ಪಾಠ ಮಾಡುವ ಅವಕಾಶ ಜನಸಾಮಾನ್ಯರಿಗೆ ಕಲ್ಪಿಸಲಾಗುವುದು. ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಉಪಯೋಗಕ್ಕೆ ಮಾರ್ಚ್ ತಿಂಗಳಿನಲ್ಲಿ ಸಹಾಯವಾಣಿ ತೆರೆಯುತ್ತೇವೆ. ಅವರ ಸಮಸ್ಯೆ ಹಾಗೂ ಗೊಂದಲಗಳನ್ನು ವಿಚಾರಣೆ ಮಾಡೋದು ನಮ್ಮ ಉದ್ದೇಶ ಎಂದರು.

  • ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಒಂದಾದ ಗೆಳೆಯರ ತಂಡವೊAದು ಸಮಾಜಕ್ಕೆ ಹೇಗೆ ಸ್ಪಂದಿಸಬಹುದು ಎಂದು ನಿರೂಪಿಸಿದೆ. ಹೊಳೆನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ.

    ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದ್ದಾರೆ.

    ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್ ಸೇಲ್ ದರದಲ್ಲಿ ವಿತರಣಾ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಒಂದು ತಂಡ ನೆರೆಪೀಡಿತ ಜಿಲ್ಲೆಗೆ ತಲುಪಿದ್ದಾರೆ. ಮೊದಲಿಗೆ ಹಾವೇರಿಯ ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದ್ದು, ಸೋಮುವಾರ ಬೆಳಗಾವಿ ಜಿಲ್ಲೆಯಲ್ಲಿ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಒಂದು ವಿದ್ಯಾರ್ಥಿಗೆ ಒಂದು ಬ್ಯಾಗ್, ನೀರಿನ ಬಾಟೆಲ್ ಮತ್ತು ಜಾಮೆಟ್ರಿ ಬಾಕ್ಸ್ ಸೇರಿ ತಲಾ ಎಂಟುನೂರು ರೂಪಾಯಿಯಂತೆ ಒಟ್ಟು ಮುನ್ನೂರು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ.

    ಪ್ರೈಂ ಕ್ಲಬ್ ಮತ್ತು ಗೆಳೆಯರ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಕೆಲಸಕ್ಕೆ ಶಾಲಾ ಮುಖ್ಯಶಿಕ್ಷಕ ಶಿವಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದು, ಯುವಕರ ತಂಡದ ಸಮಾಜಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಪ್ಪ, ಪ್ರೈಂ ಕ್ಲಬ್ ಸದಸ್ಯರಾದ ಅಶೋಕ್ ಗೌಡ, ಜಾಯ್ ಬ್ರಿಗಾಂಝ, ಮೋಹನ್ ಮತ್ತು ಮಹಮದ್ ಶಫಿ ಸೇರಿದಂತೆ ಇತರರು ಹಾಜರಿದ್ದರು.