Tag: ಶಾರ್ಜಾ

  • ಇಬ್ಬರು ಡಕ್ ಔಟ್, ಗಿಲ್ ಅರ್ಧಶತಕ – ಕೋಲ್ಕತ್ತಾಗೆ ಮೊದಲ ಸುಲಭ ಜಯ

    ಇಬ್ಬರು ಡಕ್ ಔಟ್, ಗಿಲ್ ಅರ್ಧಶತಕ – ಕೋಲ್ಕತ್ತಾಗೆ ಮೊದಲ ಸುಲಭ ಜಯ

    – ಶುಭಮನ್, ಮೋರ್ಗಾನ್ ಆಟಕ್ಕೆ ತಲೆಬಾಗಿದ ರೈಸರ್ಸ್

    ಶಾರ್ಜಾ: ಯುವ ಆಟಗಾರ ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಫಲದಿಂದ ಕೋಲ್ಕತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಕೋಲ್ಕತ್ತಾ ತಂಡ ಐಪಿಎಲ್-2020ಯಲ್ಲಿ ಮೊದಲ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಕೊನೆಗೆ ಕನ್ನಡಿಗ ಮನೀಶ್ ಪಾಂಡೆಯವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 143 ರನ್ ಸೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಶುಭಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರ ಅದ್ಭುತ ಜೊತೆಯಾಟದಿಂದ ಇನ್ನೂ ಎರಡು ಓವರ್ ಬಾಕಿ ಇರುವಾಗಲೇ 145 ರನ್ ಚಚ್ಚಿದ ಕೋಲ್ಕತ್ತಾ 7 ವಿಕೆಟ್ ಗಳಿಂದ ಜಯ ಸಾಧಿಸಿತು.

    ಇದೇ ವೇಳೆ ಶುಭಮನ್ ಮತ್ತು ಮೋರ್ಗಾನ್, 70 ಬಾಲಿಗೆ 92 ರನ್‍ಗಳ ಉತ್ತಮ ಜೊತೆಯಾಟವಾಡಿದರು. ಇದರಲ್ಲಿ ಮೋರ್ಗಾನ್ ಅವರು 29 ಬಾಲಿಗೆ ಮೂರು ಫೋರ್ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿ ಮಿಂಚಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಗಿಲ್, 62 ಎಸೆತದಲ್ಲಿ 70 ರನ್ ಸಿಡಿಸಿದರು. ಗಿಲ್ ಈ ಇನ್ನಿಂಗ್ಸ್ ನಲ್ಲಿ 5 ಫೋರ್ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಕೋಲ್ಕತ್ತಾ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಕೋಲ್ಕತ್ತಾಗೆ ಆರಂಭಿಕ ಆಘಾತ ನೀಡಿದ ಹೈದರಾಬಾದ್ ವೇಗಿ ಖಲೀಲ್ ಅಹ್ಮದ್, ಸೊನ್ನೆ ಸುತ್ತಿ ಸುನಿಲ್ ನರೈನ್ ಪೆವಲಿಯನ್ ಸೇರಿದರು. ನಂತರ ಜೊತೆಯಾದ ಗಿಲ್ ಮತ್ತು ನಿತೀಶ್ ರಾಣಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆದರೆ 4 ಓವರಿನ ನಾಲ್ಕನೇ ಬಾಲಿನಲ್ಲಿ ನಟರಾಜ್ ಅವರಿಗೆ ಔಟ್ ಆಗಿ 13 ಬಾಲಿಗೆ 26 ರನ್ ಗಳಿಸಿದ್ದ ನಿತೀಶ್ ರಾಣಾ ಔಟ್ ಆದರು. ಈ ಮೂಲಕ ಕೋಲ್ಕತ್ತಾ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತ್ತು.

    ನಂತರ ಬಂದ ನಾಯಕ ದಿನೇಶ್ ಕಾರ್ತಿಕ್‍ಗೆ ರಶೀದ್ ಖಾನ್ ಅವರು ಮೂರನೇ ಬಾಲಿನಲ್ಲೇ ಶಾಕ್ ನೀಡಿದರು. ಮೂರು ಬಾಲುಗಳನ್ನು ಎದುರಿಸಿದ ಕಾರ್ತಿಕ್ ಡಾಕ್ ಔಟ್ ಆಗಿ ಹೊರನಡೆದರು. ಈ ಮೂಲಕ ಕೋಲ್ಕತ್ತಾದ ಇಬ್ಬರು ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳು ಡಾಕ್ ಔಟ್ ಆದರು. ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಶುಭಮನ್ ಗಿಲ್ 42 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.

  • ಅರ್ಧಶತಕ ಸಿಡಿಸಿದ ಕನ್ನಡಿಗ ಮನೀಶ್ ಪಾಂಡೆ – ಕೋಲ್ಕತ್ತಾಗೆ 143 ರನ್‍ಗಳ ಗುರಿ

    ಅರ್ಧಶತಕ ಸಿಡಿಸಿದ ಕನ್ನಡಿಗ ಮನೀಶ್ ಪಾಂಡೆ – ಕೋಲ್ಕತ್ತಾಗೆ 143 ರನ್‍ಗಳ ಗುರಿ

    ಶಾರ್ಜಾ: ಕನ್ನಡಿಗ ಮನೀಶ್ ಪಾಂಡೆ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 143 ರನ್‍ಗಳ ಟಾರ್ಗೆಟ್ ನೀಡಿದೆ.

    ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮನೀಶ್ ಪಾಂಡೆ ಅರ್ಧಶತಕ ಸಿಡಿಸಿ ಮಿಂಚಿದರು. ವಿಕೆಟ್ ಕಳೆದುಕೊಳ್ಳುತ್ತಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾಗಿ ನಿಂತ ಮನೀಶ್, 38 ಎಸೆತದಲ್ಲಿ 51 ರನ್ ಸಿಡಿಸಿ ತಂಡದ ಚೇತರಿಕೆಗೆ ಕಾರಣವಾದರು. ಮನೀಶ್ ಈ ಇನ್ನಿಂಗ್ಸ್ ನಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ ಅವರು 31 ಎಸೆತಕ್ಕೆ 30 ರನ್ ಪೇರಿಸಿದರು.

    ಆರಂಭದಿಂದಲೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳು ಶಿಶ್ತು ಬದ್ಧದಾಳಿಯನ್ನು ಮಾಡಿದರು. ಹೀಗಾಗಿ ಉತ್ತಮ ಲಯದಲ್ಲಿದ್ದ ಜಾನಿ ಬೈರ್‍ಸ್ಟೋವ್ ಅವರನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ಅವರು 3ನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಮಾಡಿದರು. ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ನಾಯಕ ಡೇವಿಡ್ ವಾರ್ನರ್ ಅವರು ತಾಳ್ಮೆಯಿಂದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ಒಂದು ವಿಕೆಟ್ ಕಳೆದುಕೊಂಡು 40 ರನ್ ಸೇರಿಸಿತು.

    ನಂತರ ವಾರ್ನರ್ ಮತ್ತು ಪಾಂಡೆ ಮಂದಗತಿಯ ಆಟವಾಡಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ 30 ಎಸೆತಗಳಲ್ಲಿ 36 ರನ್ ಗಳಿಸಿದ್ದ ವಾರ್ನರ್ ಅವರು ಸಿಂಪಲ್ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ವೃದ್ಧಿಮಾನ್ ಸಹಾ ಕಣ್ಣಕ್ಕಿಳಿದರು, ಸಹಾ ಮತ್ತು ಪಾಂಡೆ ಸೇರಿಕೊಂಡು 12 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 76ಕ್ಕೆ ಏರಿಸಿದರು.

    ಇದೇ ವೇಳೆ ಸಹಾ ಮತ್ತು ಪಾಂಡೆ ಅರ್ಧಶತಕದ ಜೊತೆಯಾಟವಾಡಿದರು. ಈ ಜೋಡಿ 41 ಬಾಲಿಗೆ 51 ರನ್ ಸಿಡಿಸಿತು. ಹೀಗಾಗಿ 16 ಓವರ್ ಮುಕ್ತಾಯದ ವೇಳೆಗೆ ಹೈದರಾಬಾದ್ ತಂಡ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಜೊತೆಗೆ 35 ಎಸೆತಗಳಲ್ಲಿ ಮನಿಷ್ ಪಾಂಡೆಯವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ಆಂಡ್ರೆ ರಸ್ಸೆಲ್ ಅವರ ಬೌಲಿಂಗ್‍ಗೆ ಸುಲಭ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಸಹಾ ರನ್ ಔಟ್ ಆದರು.

  • ಸ್ಟೇಡಿಯಂ ಹೊರಕ್ಕೆ ಧೋನಿ ಸಿಕ್ಸರ್- ಚೆಂಡನ್ನು ಮನೆಗೆ ಕೊಂಡೊಯ್ದ ಲಕ್ಕಿ ಮ್ಯಾನ್

    ಸ್ಟೇಡಿಯಂ ಹೊರಕ್ಕೆ ಧೋನಿ ಸಿಕ್ಸರ್- ಚೆಂಡನ್ನು ಮನೆಗೆ ಕೊಂಡೊಯ್ದ ಲಕ್ಕಿ ಮ್ಯಾನ್

    ಶಾರ್ಜಾ: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲುಂಡರೂ, ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಬೇಸರವನ್ನು ದೂರ ಮಾಡಲು ಧೋನಿ ಯಶಸ್ವಿಯಾಗಿದ್ದಾರೆ.

    ರಾಯಲ್ಸ್ ವಿರುದ್ಧ ಟಾಮ್ ಕರ್ರನ್ ಎಸೆದ ಅಂತಿಮ ಓವರಿನಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಓವರಿನ 3ನೇ ಎಸೆತದಲ್ಲಿ ಮಿಡ್ ವಿಕೆಟ್‍ನತ್ತ ಸಿಕ್ಸರ್ ಬಾರಿಸಿದರೆ, 4ನೇ ಎಸೆತದಲ್ಲಿ ಬರೋಬ್ಬರಿ 92 ಮೀಟರ್ ದೂರಕ್ಕೆ ಸಿಕ್ಸರ್ ಸಿಡಿದ್ದರು.

    ಧೋನಿ ಸಿಡಿಸಿದ ಸಿಕ್ಸರ್‌ಗೆ ಚೆಂಡು ಕ್ರೀಡಾಂಗಣದ ಹೊರಕ್ಕೆ ಬಿದ್ದಿತ್ತು. ಕೂಡಲೇ ವ್ಯಕ್ತಿಯೊಬ್ಬ ಚೆಂಡನ್ನು ಮನೆಗೆ ಕೊಂಡೊಯ್ದಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವೀಕ್ಷಕ ವಿವರಣೆಕಾರರು, ಈ ಚೆಂಡನ್ನು ಅಭಿಮಾನಿ ಖಂಡಿತ ಕೊಡುವುದಿಲ್ಲ. ಜೀವಮಾನದಲ್ಲಿ ಆತನಿಗೆ ಸಿಕ್ಕ ಅತ್ಯಮೂಲ್ಯ ಬಹುಮಾನವಿದು ಎಂದು ಹೇಳಿದ್ದಾರೆ.

    https://www.instagram.com/p/CFcvaJpFsD2/?utm_source=ig_web_copy_link

    ಪಂದ್ಯದಲ್ಲಿ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 29 ರನ್ ಗಳಿಸಿದ್ದರು. ಅಂತಿ ಓವರ್ ವೇಳೆಗೆ ಚೆನ್ನೈ ಗೆಲುವಿಗೆ 6 ಎಸೆತಗಳಲ್ಲಿ 38 ರನ್ ಬೇಕಾಗಿತ್ತು. ಸೋಲು ಖಚಿತವಾದರೂ ತಂಡದ ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡ ಧೋನಿ, ಹ್ಯಾಟಿಕ್ ಸಿಕ್ಸರ್ ಸಿಡಿಸಿದ್ದರು. ಧೋನಿಯ ಸಿಕ್ಸರ್ ಗಳು ಚೆನ್ನೈ ಅಭಿಮಾನಿಗಳ ಸೋಲಿನ ಬೇಸರವನ್ನು ಸ್ವಲ್ಪ ಕಡಿಮೆ ಮಾಡಿದೆ.

    ಉಳಿಂತೆ ಚೆನ್ನೈ, ರಾಜಸ್ಥಾನ ನಡುವಿನ ಪಂದ್ಯದಲ್ಲಿ ಬರೋಬ್ಬರಿ 33 ಸಿಕ್ಸರ್ ಗಳನ್ನು ಇತ್ತಂಡಗಳ ಬ್ಯಾಟ್ಸ್ ಮನ್ಸ್ ಸಿಡಿಸಿದ್ದು ಹೊಸ ದಾಖಲೆಯಾಗಿದೆ. ಆರ್‍ಆರ್ ತಂಡ 17 ಸಿಕ್ಸರ್ ಸಿಡಿಸಿದರೇ, ಸಿಎಸ್‍ಕೆ ತಂಡ 16 ಸಿಕ್ಸರ್ ಬಂದಿದ್ದವು. ಈ ಹಿಂದೆ 2018ದಲ್ಲಿ ಚೆನ್ನೈ ಹಾಗೂ ಆರ್.ಸಿ.ಬಿ ನಡುವಿನ ಪಂದ್ಯದಲ್ಲಿ 33 ಸಿಕ್ಸರ್ ಗಳನ್ನು ಸಿಡಿಸಲಾಗಿದ್ದು, ಇದೇ ಆವೃತ್ತಿಯ ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ 31 ಸಿಕ್ಸರ್ ಸಿಡಿಸಲಾಗಿತ್ತು.

  • ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

    ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

    – ರಕ್ಷಣೆ ಕೋರಿದ ವಿಡಿಯೋ ವೈರಲ್
    – ಭಾರತದ ರಾಯಭಾರಿಯಿಂದ ಮಹಿಳೆಯ ರಕ್ಷಣೆ

    ದುಬೈ: ಯುಎಇಯ ಶಾರ್ಜಾದಲ್ಲಿ ಪತಿ ಕಿರುಕುಳ ಕೊಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ರಕ್ಷಣೆ ಕೋರಿ ವಿಡಿಯೋ ಟ್ವೀಟ್ ಮಾಡಿದ್ದರು. ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

    ಬೆಂಗಳೂರು ಮೂಲದ ಜಸ್ಮಿನ್ ಸುಲ್ತಾನಾ ಅವರನ್ನು ಮೊಹಮದ್ ಕಿಝಾರುಲ್ಲಾ ಮದುವೆಯಾಗಿದ್ದನು. ಬಳಿಕ ಪತ್ನಿಯನ್ನು ಯುಎಇಯ ಶಾರ್ಜಾಗೆ ಮೊಹಮದ್ ಕರೆದೊಯ್ದಿದ್ದನು. ಅಲ್ಲಿ ಮಹಿಳೆಗೆ ಪತಿ ನಿರಂತರ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮಾನಸಿಕ ಹಾಗೂ ದೈಹಿಕವಾಗಿ ತನಗೆ ಕೊಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ಮಹಿಳೆ ರಕ್ಷಣೆ ಕೋರಿ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದರು. ವಿಡಿಯೋದಲ್ಲಿ ನನಗೆ ಪತಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಹಾಗೂ ಮಕ್ಕಳನ್ನು ರಕ್ಷಿಸಿ. ಭಾರತಕ್ಕೆ ನಾನು ವಾಪಸ್ ಹೋಗಲು ಸಹಾಯ ಮಾಡಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದರು.

    ಈ ವಿಡಿಯೋ ಟ್ವೀಟ್‍ಗೆ ಪ್ರಧಾನಿ ನರೇಂದ್ರ ಮೋದಿ, ದುಬೈ ಪೊಲೀಸ್ ಹಾಗೂ ಭಾರತೀಯ ರಾಯಭಾರಿಯ ಹ್ಯಾಶ್ ಟ್ಯಾಗ್ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.

    ಈ ಬಗ್ಗೆ ಶಾರ್ಜಾ ಪೊಲೀಸರು ಟ್ವೀಟ್ ಮಾಡಿ, ಭಾರತೀಯ ಮಹಿಳೆಯೊಬ್ಬರಿಗೆ ಆಕೆಯ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಈಗಾಗಲೇ ಈ ಸಂಬಂಧ ಮಹಿಳೆಯ ದೂರು ಪಡೆದು ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಮಹಿಳೆಯನ್ನು ನಾವು ಭೇಟಿ ಮಾಡಿದ್ದೇವೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಸ್ಥಳೀಯ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಾವು ಕೂಡ ಆರೋಪಿಯನ್ನು ವಿಚಾರಣೆ ನಡೆಸಲಿದ್ದೇವೆ. ಮಹಿಳೆಗೆ ತಮ್ಮಿಂದ ಆಗುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದೆ.

    ಅಧಿಕಾರಿಗಳು ರಕ್ಷಿಸಿದ ಬಳಿಕ ಮಹಿಳೆ ಪ್ರತಿಕ್ರಿಯಿಸಿ, ಟ್ವಿಟ್ಟರ್ ಹಾಗೂ ನನ್ನ ಸಹಾಯಕ್ಕೆ ಬಂದ ಎಲ್ಲರಿಗೂ ಧನ್ಯವಾದ. ನನಗೆ ಮೆಸೇಜ್ ಮಾಡಿ ಬೆಂಬಲಕ್ಕೆ ನಿಂತು, ನನ್ನ ನೋವಿಗೆ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈಗ ಪತಿಯ ಕಿರುಕುಳದಿಂದ ಮುಕ್ತಿ ಪಡೆದಿದ್ದೇನೆ. ಈಗಾಗಲೇ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ವರ್ಷ ನಾನು ದಾಂಪತ್ಯ ಜೀವನದಲ್ಲಿ ಅನುಭವಿಸಿದ ನೋವು, ಕಿರುಕುಳಕ್ಕೆ ಮುಕ್ತಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಮಹಿಳೆಯ ಟ್ವೀಟ್‍ಗೆ ಬೆಂಗಳೂರು ಪೊಲೀಸರು ರೀ-ಟ್ವೀಟ್ ಮಾಡಿ, ದಯವಿಟ್ಟು ಬೆಂಗಳೂರಿನ ನಿಮ್ಮ ವಿಳಾಸವನ್ನು ನಮಗೆ ಮೆಸೇಜ್ ಮಾಡಿ ಎಂದು ಹೇಳಿದ್ದಾರೆ.

  • 16 ಎಸೆತಗಳಿಗೆ 74 ರನ್ ಚಚ್ಚಿ ದಾಖಲೆ ಬರೆದ ಅಫ್ಘಾನ್ ಆಟಗಾರ

    16 ಎಸೆತಗಳಿಗೆ 74 ರನ್ ಚಚ್ಚಿ ದಾಖಲೆ ಬರೆದ ಅಫ್ಘಾನ್ ಆಟಗಾರ

    ಶಾರ್ಜಾ: ಅಫ್ಘಾನಿಸ್ತಾನ ತಂಡದ ಸ್ಫೋಟಕ ಆರಂಭಿಕ ಆಟಗಾರ ಮೊಹಮ್ಮದ್ ಶಹಜಾದ್ ಟಿ10 ಲೀಗ್ ಆರಂಭದ ಪಂದ್ಯದಲ್ಲೇ ಅಬ್ಬರಿಸಿದ್ದು, ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.

    2018ರ ಪ್ರಥಮ ಟಿ10 ಲೀಗ್ ಆರಂಭದ ಪಂದ್ಯದಲ್ಲಿ ರಜಪೂತ್ ತಂಡದ ಪರ ಆಡುತ್ತಿರುವ ಮೊಹಮ್ಮದ್ ಶಹಜಾದ್ 16 ಎಸೆತಗಳಲ್ಲಿ 74 ರನ್ ಸಿಡಿಸಿ ಮಿಂಚಿದರು. ಇದರಲ್ಲಿ ಅಮೋಘ 8 ಸಿಕ್ಸರ್, 6 ಬೌಂಡರಿಗಳು ಸೇರಿದೆ. ಉಳಿದ ಎರಡು ಎಸೆತಗಳಲ್ಲಿ ಸಿಂಗಲ್ ರನ್ ತೆಗೆದಿದ್ದರು. ಈ ಮೂಲಕ ಯಾವುದೇ ಎಸೆತವನ್ನು ವ್ಯರ್ಥ ಮಾಡದೇ ರನ್ ಗಳಿಸಿದ್ದರು.

    ಕೇವಲ 17 ನಿಮಿಷದಲ್ಲಿ 4 ಓವರ್ ಗಳ ಮೂಲಕ 94 ರನ್ ಗಳ ಗುರಿಯನ್ನು ತಲುಪಿದ ರಜಪೂತ್ ತಂಡ ಗೆಲುವಿನ ನಗೆ ಬೀರಿತು. ಇದರೊಂದಿಗೆ ಟಿ10 ಲೀಗ್‍ನಲ್ಲಿ 74 ರನ್ ಸಿಡಿಸಿದ 30 ವರ್ಷದ ಶಹಜಾದ್ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಶಹಜಾದ್‍ಗೆ ಸಾಥ್ ನೀಡಿದ ಬ್ರೆಂಡನ್ ಮೆಕಲಮ್ 8 ಎಸೆತಗಳಲ್ಲಿ 21 ರನ್ ಸಿಡಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಸಿಂಧಿಸ್ ತಂಡ ನಿಗದಿತ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತ್ತು. ಸಿಂಧಿಸ್ ಪರ ವ್ಯಾಟ್ಸನ್ ಮಾತ್ರ ಎರಡಂಕಿ ದಾಟಿದ್ದರು. ರಜಪೂತ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮುನಾಫ್ ಪಟೇಲ್ 20 ರನ್ ನೀಡಿ 3 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv