Tag: ಶಾರುಕ್ ಖಾನ್

  • ದೀಪಿಕಾಗೆ ಬೈಕಾಟ್ ಬಿಸಿ: ತುಕ್ಡೆ ಗ್ಯಾಂಗ್ ಜೊತೆ ಕಾಣಿಸಿಕೊಂಡಿದ್ದ ನಟಿ ಎಂಬ ಆರೋಪ

    ದೀಪಿಕಾಗೆ ಬೈಕಾಟ್ ಬಿಸಿ: ತುಕ್ಡೆ ಗ್ಯಾಂಗ್ ಜೊತೆ ಕಾಣಿಸಿಕೊಂಡಿದ್ದ ನಟಿ ಎಂಬ ಆರೋಪ

    ಠಾಣ್ ಸಿನಿಮಾ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡ ಪರಿ ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಕೇಸರಿ ಬಿಕಿನಿಯಲ್ಲಿ ದೀಪಿಕಾ ಕುಣಿದಿದ್ದಾರೆ ಎನ್ನುವುದು ಮತ್ತು ಅದು ಶಾರುಖ್ ಖಾನ್ ನಟನೆಯ ಚಿತ್ರ ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿದೆ. ಇದರ ಬೆನ್ನಲ್ಲೆ ಪಠಾಣ್ ಸಿನಿಮಾವನ್ನು ಬೈಕಾಟ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಒತ್ತಾಯ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ದೀಪಿಕಾರ ಹಳೆ ಫೋಟೋವೊಂದನ್ನು ವೈರಲ್ ಮಾಡುತ್ತಿದ್ದು ಅದನ್ನೂ ಸೇರಿಸಿ ಸಿನಿಮಾ ಬೈಕಾಟ್ ಮಾಡಿ ಎಂದು ಹೇಳಲಾಗುತ್ತಿದೆ.

    ಈ ಹಿಂದೆ 2020ರಲ್ಲಿ ಜೆಎನ್ ಯೂ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ತುಕ್ಡೆ ಗ್ಯಾಂಗ್ ಜೊತೆ ದೀಪಿಕಾ ಸೇರಿದ್ದಾರೆ ಎಂದು ಕಾರಣವನ್ನಿಟ್ಟುಕೊಂಡು ಪ್ರತಿಭಟನೆ ಮಾಡಲಾಯಿತು. ಆ ಫೋಟೋವನ್ನು ಪಠಾಣ್ ಜೊತೆ ಸೇರಿಸಿ ಈ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಹೊಸ ಹೋರಾಟ ಶುರು ಮಾಡಿದ್ದಾರೆ.

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡು ಮೂರು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಈ ಹಾಡನ್ನು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ, ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಡ್ರೆಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಸರಿಯ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಈ ಹಾಡಿನ ಸಾಲಿಗೆ ಹಾಕಿರುವ ಡ್ರೆಸ್ ಗೂ ಹೊಂದಾಣಿಕೆ ಮಾಡಿಕೊಂಡು ನೆಟ್ಟಿಗರು ಗರಂ ಆಗಿದ್ದಾರೆ. ಈ ಕಾರಣದಿಂದಾಗಿ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.

    ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟಿದ್ದಾರೆ. ‘ಬೇಷರಂ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಅಂತಾನೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಬೈಕಾಟ್ ಪಠಾಣ್ ಟ್ರೆಂಡ್ ಹೆಚ್ಚಿದೆ. ಇದನ್ನೂ ಓದಿ: ದೀಪಿಕಾ ದಾಸ್ ವರ್ತನೆಗೆ ಕಿಡಿಕಾರಿದ ರೂಪೇಶ್ ರಾಜಣ್ಣ

    ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ. ಶಾರುಖ್ ಈ ಸಿನಿಮಾದಲ್ಲಿ ಮತ್ತೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಬಾದ್‍ಶಾ ಶಾರುಖ್ ಮನೆಯ ಬಳಿ ಅಗ್ನಿ ಅವಘಡ

    ಬಾಲಿವುಡ್ ಬಾದ್‍ಶಾ ಶಾರುಖ್ ಮನೆಯ ಬಳಿ ಅಗ್ನಿ ಅವಘಡ

    ಮುಂಬೈನಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಅವರ ಬಂಗಲೆ ಮನ್ನತ್ ಬಳಿಯ ಕಟ್ಟಡದ ಮಹಡಿಯೊಂದರಲ್ಲಿ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ.

    ಐಷಾರಾಮಿ ಬಾಂದ್ರಾ ಬ್ಯಾಂಡ್‍ಸ್ಟ್ಯಾಂಡ್ ಪ್ರದೇಶದಲ್ಲಿ 21 ಅಂತಸ್ತಿನ ಅಪಾರ್ಟ್‍ಮೆಂಟ್‍ನ ಜೀವೇಶ್ ಬಿಲ್ಡಿಂಗ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು 8 ಅಗ್ನಿಶಾಮಕ ವಾಹನಗಳು ಮತ್ತು ನೀರಿನ ಟ್ಯಾಂಕರ್‌ಗಳು ಧಾವಿಸಿವೆ. 14 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳ ಮತ್ತು ಪೊಲೀಸರು ಖಚಿತಪಡಿಸಿದ್ದಾರೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

    ಮುಂಬೈ ಉಪನಗರ ಅಭಿವೃದ್ಧಿ ಸಚಿವ ಆದಿತ್ಯ ಠಾಕ್ರೆ ಮಾತನಾಡಿ, ಬಾಂದ್ರಾ ಪಶ್ಚಿಮದಲ್ಲಿ 21 ಅಂತಸ್ತಿನ ಕಟ್ಟಡದ 14ನೇ ಮಹಡಿಯಲ್ಲಿ ಅಗ್ನಿ ಅವಘಡ ನಡೆದಿರುವುದು ವರದಿಯಾಗಿದೆ. ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆವರಣದಲ್ಲಿರುವ ಎಲ್ಲಾ ನಿವಾಸಿಗಳ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಬಾಲಿವುಡ್ ಬಾದ್‍ಶಾ ಪಾರ್ಟಿಗೆ ಟಿಫಿನ್ ಒಯ್ದ ಆಮೀರ್

    ಬಾಲಿವುಡ್ ಬಾದ್‍ಶಾ ಪಾರ್ಟಿಗೆ ಟಿಫಿನ್ ಒಯ್ದ ಆಮೀರ್

    ಮುಂಬೈ: ಬಿಟೌನ್ ಸ್ಟಾರ್ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ ನಟ ಆಮೀರ್ ಖಾನ್ ಟಿಫನ್ ಒಯ್ದಿದ್ದ ಕಥೆಯನ್ನು ಸ್ವತಃ ತಾವೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ಹೌದು, ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ ಬರೀ ಸಿನಿಮಾರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಎಷ್ಟು ಪರ್ಫೆಕ್ಟ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಾಲಿವುಡ್ ಅಂಗಳದಲ್ಲಿ ತನ್ನದೆಯಾದಂತಹ ಚಾಪು ಮೂಡಿಸಿದ್ದ ಆಮೀರ್ ಖಾನ್ ಪೋಷಕ ಪಾತ್ರದಲ್ಲಿ ನಟಿಸಿದ್ದ ಸಿನಿಮಾ `ದಂಗಲ್’, ಈ ಚಿತ್ರಕ್ಕಾಗಿ ಬರೋಬ್ಬರಿ 30 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡು, ತಮ್ಮ ದೇಹವನ್ನು ತಾವು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಒಪ್ಪುವಂತೆ ಮಾಡಿಕೊಂಡಿದ್ದರು. ಬಳಿಕ ಈ ತೂಕವನ್ನು ಇಳಿಸಲು ಸಾಕಷ್ಟು ವ್ಯಾಯಾಮ, ಡಯೆಟ್ ಅಂತ ಶುರು ಮಾಡಿದ್ದರು.

    ಇದೇ ವೇಳೆ ಒಮ್ಮೆ ಶಾರುಕ್ ಖಾನ್ ಅವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ಆಮೀರ್ ಹಾಗೂ ಇತರೇ ಬಿಟೌನ್ ಗಣ್ಯರನ್ನು ಆಮಂತ್ರಿಸಿದ್ದರು. ಆಗ ಪಾರ್ಟಿಗೆ ಆಮೀರ್ ಟಿಫಿನ್ ಬಾಕ್ಸ್ ಒಯ್ದಿದ್ದರಂತೆ. ಹೌದು, ಯಾವುದೇ ಕೆಲಸವಾಗಲಿ ಆಮೀರ್ ಸಂಪೂರ್ಣ ಪರಿಶ್ರಮ ಪಡುತ್ತಾರೆ. ತಾವು ಮಾಡುವ ಕೆಲಸಕ್ಕೆ ಯಾರು ಬೆರಳು ಮಾಡಬಾರದು ಅಂತ ಎಚ್ಚರಿಕೆಯಿಂದ ಮನಸ್ಸಿಟ್ಟು ಕೆಲಸ ಮಾಡುತ್ತಾರೆ. ಈ ಪಾರ್ಟಿ ವೇಳೆ ಡಯೆಟ್‍ನಲ್ಲಿದ್ದ ಅಮೀರ್ “ನಾನು ನನ್ನ ಡಯೆಟ್‍ಗೆ ಮೋಸ ಮಾಡಲ್ಲ. ಅದಕ್ಕೆ ಮನೆಯಿಂದ ಟಿಫನ್ ತಂದಿದ್ದೆ ಎಂದು ಪಾರ್ಟಿಯಲ್ಲಿ ಹೇಳಿದ್ದೆ” ಎಂದು ಟಿಫನ್ ಬಾಕ್ಸ್ ಕಥೆಯನ್ನ ಹಂಚಿಕೊಂಡಿದ್ದಾರೆ.

    ಸದ್ಯ ಈ ಟಿಫಿನ್ ಬಾಕ್ಸ್ ಕಥೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಆಮೀರ್ ಅವರ ಬದ್ಧತೆಯನ್ನು ಮೆಚ್ಚಿದ್ದಾರೆ.

    https://www.instagram.com/p/Bvhq-rshISS/?utm_source=ig_embed

  • ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಸಿನಿಮಾ ‘ಝೀರೋ’ ಸಿನಿಮಾವನ್ನು ಕೆಜಿಎಫ್ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗಿಂತಲೂ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಲೈಕ್ಸ್ ಬಂದಿದೆ. ಬುಕ್ ಮೈ ಶೋದಲ್ಲಿ ‘ಕೆಜಿಎಫ್’ ಸಿನಿಮಾ 3 ಲಕ್ಷದ 57 ಸಾವಿರ ಲೈಕ್ಸ್ ಪಡೆದಿದೆ. ಇನ್ನು ಶಾರೂಕ್ ಖಾನ್ ನಟನೆಯ ‘ಝೀರೋ’ ಸಿನಿಮಾ 2 ಲಕ್ಷದ 59 ಸಾವಿರ ಲೈಕ್ಸ್ ಪಡೆದಿದೆ.

    ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

    ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರೀ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ್ತ್‌ ಡೇಯಂದು ಕಿಂಗ್‍ಖಾನ್‍ಗಾಗಿ ಕತ್ತು ಕುಯ್ದುಕೊಂಡ ಹುಚ್ಚು ಅಭಿಮಾನಿ!

    ಬರ್ತ್‌ ಡೇಯಂದು ಕಿಂಗ್‍ಖಾನ್‍ಗಾಗಿ ಕತ್ತು ಕುಯ್ದುಕೊಂಡ ಹುಚ್ಚು ಅಭಿಮಾನಿ!

    ಮುಂಬೈ: ಹುಚ್ಚು ಅಭಿಮಾನಿಯೊಬ್ಬ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಸಾಧ್ಯವಾಗದ್ದಕ್ಕೆ ಬೇಸರಗೊಂಡು ತನ್ನ ಕತ್ತನ್ನು ಕುಯ್ದುಕೊಂಡಿದ್ದಾನೆ.

    ಈ ಘಟನೆ ಶುಕ್ರವಾರ ಬಾಂದ್ರಾದಲ್ಲಿ ನಡೆದಿದ್ದು, ಮೊಹಮ್ಮದ್ ಸಲೀಂ ಎಂಬ ಹುಚ್ಚು ಅಭಿಮಾನಿಯೇ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಕತ್ತನ್ನೇ ಸೀಳಿಕೊಂಡಿದ್ದಾನೆ. ಶುಕ್ರವಾರ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ಶಾರೂಕ್ ಅವರ ಮನ್ನತ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದರು.

    ಶಾರೂಖ್ ಮನೆಯ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಸಂಪೂರ್ಣ ಭದ್ರತಾ ವ್ಯವಸ್ಥೆ ಹಾಕಿ ಅಭಿಮಾನಿಗಳನ್ನು ಮನೆ ಒಳಗಡೆ ತೆರಳಲು ಬಿಡಲಿಲ್ಲ. ಇದರಿಂದಾಗಿ ಅಭಿಮಾನಿ ಮೊಹಮ್ಮದ್ ಸಲೀಂ ಮನನೊಂದು ಶುಕ್ರವಾರ ಬೆಳಗಿನ ಜಾವ 3.05 ಕ್ಕೆ ತನ್ನ ಗಂಟಲನ್ನು ಚಾಕುವಿನಿಂದ ಸೀಳಿಕೊಂಡಿದ್ದಾನೆ. ತಕ್ಷಣ ಅಲ್ಲೇ ಇದ್ದ ಪೊಲೀಸರು ಆತನನ್ನು ಬಾಬಾ ಆಸ್ಪತ್ರೆಗೆ ಕರೆದುಕೊಂಡು ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.

    ಚಿಕಿತ್ಸೆಯ ಬಳಿಕ ಸಲೀಂ ಅವರ ಪತ್ನಿಯನ್ನು ಕರೆಸಿ ಆತನನ್ನು ಮನೆಗೆ ಕಳುಹಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಬಂಧಪಟ್ಟಂತೆ ಡೈರಿಯಲ್ಲಿ ನಮೂದಿಸಲಾಗಿದ್ದು, ಸಲೀಂ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಅಧಿಕಾರಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರ್ತ್‌ಡೇಯಂದೇ ಬಾದ್‍ಶಾನ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್!

    ಬರ್ತ್‌ಡೇಯಂದೇ ಬಾದ್‍ಶಾನ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್!

    ನವದೆಹಲಿ: ಬಾಲಿವುಡ್ ನಟ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರು ಇಂದು 53 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ತಾವೇ ಅಭಿನಯಿಸಿರುವ ಝೀರೋ ಸಿನಿಮಾದ ನ್ಯೂ ಲುಕ್ ರಿವೀಲ್ ಮಾಡಿದ್ದಾರೆ.

    ಈ ಸಿನಿಮಾದಲ್ಲಿ ಶಾರುಕ್ ಅವರು ಮೊದಲ ಬಾರಿಗೆ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇಂದು ಸಂಜೆ ಟ್ರೇಲರ್ ಬಿಡುಗಡೆಯಾಗಲಿದೆ.

    ಝೀರೋ ಚಿತ್ರವನ್ನು ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಖ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದಾರೆ. ಗುರುವಾರ ಚಿತ್ರತಂಡ ಎರಡು ಫೋಟೋ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿತ್ತು.

    ಈ ಹಿಂದೆ 2012 ರಲ್ಲಿ ‘ಜಬ್ ತಕ್ ಹೈ ಜಾನ್’ ಸಿನಿಮಾದಲ್ಲಿ ಶಾರೂಖ್ ಖಾನ್, ಅನುಷ್ಕಾ ಮತ್ತು ಕತ್ರಿನಾ ಕೈಫ್ ತೆರೆಯನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ ಝೀರೋ ಸಿನಿಮಾದ ಮೂಲಕ ಮೂವರು ಸಿನಿ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. 21 ಡಿಸೆಂಬರ್ 2018 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!

    ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‍ನ ಮೂರು ಮಾದರಿಯ ನಾಯಕರಾದ ಬಳಿಕ ಅವರ ಬ್ರಾಂಡ್ ವಾಲ್ಯೂ ದಿನಕ್ಕೆ 4.5-5 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

    ಪ್ರಸ್ತುತ ಕೊಹ್ಲಿ 16 ಕಂಪೆನಿಗಳ ರಾಯಭಾರಿ ಆಗಿದ್ದು, ಇತ್ತೀಚೆಗೆ ಭಾರತದಲ್ಲಿ ಉಬರ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಇದರೊಂದಿಗೆ ಕೊಹ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಈ ಹಿಂದೆ ಪ್ರತಿದಿನ ಕೊಹ್ಲಿಯ ಬ್ರಾಂಡ್ ವಾಲ್ಯೂ ದಿನಕ್ಕೆ ನಾಲ್ಕು ಕೋಟಿ ರೂ. ಇದ್ದರೆ ಉಬರ್ ಜೊತೆಗಿನ ಒಪ್ಪಂದ ಬಳಿಕ ಈ ಮೊತ್ತ 4.5 -5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ವರ್ಷದ ಆಕ್ಟೋಬರ್ ನಲ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 7 ನೇ ಸ್ಥಾನ ಪಡೆದಿದ್ದರು. ಪ್ರಸ್ತುತ ಕೊಹ್ಲಿ ಭಾರತದ ಟಾಪ್ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದು, ಈಗ ಅವರ ವೇತನ, ಬೋನಸ್, ವಿವಿಧ ಮೂಲಗಳಿಂದ ಬರುತ್ತಿರುವ ಆದಾಯವನ್ನು ಲೆಕ್ಕ ಹಾಕಿದರೆ ಸುಮಾರು 144 ದಶಲಕ್ಷ ಅಮೆರಿಕನ್ ಡಾಲರ್(ಅಂದಾಜು 936 ಕೋಟಿ ರೂ.) ಬ್ರಾಂಡ್ ವಾಲ್ಯೂ ಹೊಂದಿದ್ದಾರೆ.

    2017ರ ಭಾರತದ ಸ್ಟಾರ್ ಸೆಲೆಬ್ರಿಟಿ ಪಟ್ಟಿಯಲ್ಲಿ ವಿರಾಟ್ (936 ಕೋಟಿ ರೂ.) ಮೊದಲ ಸ್ಥಾನವನ್ನು ಪಡೆದಿದ್ದಾರೆ. ನಂತರದಲ್ಲಿ ಶಾರೂಖ್ ಖಾನ್ (689 ಕೋಟಿ ರೂ.), ದೀಪಿಕಾ ಪಡುಕೋಣೆ (604 ಕೋಟಿ ರೂ.), ಅಕ್ಷಯ್ ಕುಮಾರ್ (305 ಕೋಟಿ ರೂ.), ರಣವೀರ್ ಸಿಂಗ್ (273 ಕೋಟಿ ರೂ.) ಕಾಣಿಸಿಕೊಂಡಿದ್ದಾರೆ.

    ಭಾರತವು ಉಬರ್ ಸಂಸ್ಥೆಯ ಅತ್ಯಂತ ಪ್ರಮುಖ ಮಾರುಕಟ್ಟೆ ಕ್ಷೇತ್ರವಾಗಿದ್ದು, ಕೊಹ್ಲಿ ಅವರನ್ನು ತಮ್ಮ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಮತ್ತಷ್ಟು ವ್ಯಾಪಾರವನ್ನು ವೃದ್ಧಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

  • ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ನವದೆಹಲಿ: ಫೋರ್ಬ್ಸ್ ಇಂಡಿಯಾ 2017ರ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬಾಲಿವುಡ್‍ನ ಸಲ್ಮಾನ್ ಖಾನ್ ಸತತ ಎರಡನೇ ಬಾರಿಗೆ 232.83 ಕೋಟಿ ರೂ. ಆದಾಯ ಹೊಂದುವ ಮೂಲಕ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

    ಸತತ ಎರಡು ವರ್ಷಗಳಿಂದ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನ ಪಡೆದಿದ್ದು, ನಂತರದ ಸ್ಥಾನದಲ್ಲಿ ಶಾರೂಖ್ ಖಾನ್ 170.50 ಕೋಟಿ ರೂ. ಆದಾಯ ಗಳಿಸುವುದರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

    ಭಾರತದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್, ಶಾರೂಖ್ ನಂತರದ ಸ್ಥಾನವನ್ನು 100.72 ಕೋಟಿ ರೂ. ಆದಾಯದೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಟಾಪ್ ಮೂರು ಸ್ಥಾನಗಳನ್ನು ಪಡೆದಿರುವ ಮೂವರ ಒಟ್ಟು ಆದಾಯ ಕಳೆದ ವರ್ಷದ ಆದಾಯಕ್ಕಿಂತ ಶೇ.20 ರಷ್ಟು ಕಡಿಮೆಯಾಗಿದೆ ಎಂಬುವುದು ಗಮನಾರ್ಹ ವಿಷಯವಾಗಿದ್ದು, ಕಳೆದ ವರ್ಷದಲ್ಲಿ ಟಾಪ್ ಮೂವರು ಸೆಲೆಬ್ರಿಟಿಗಳ ಒಟ್ಟು ಆದಾಯ 626.52 ಕೋಟಿ ರೂ. ಇತ್ತು, ಆದರೆ ಈ ಬಾರಿ 504.05 ಕೋಟಿ ರೂ. ಒಟ್ಟು ಆದಾಯಕ್ಕೆ ಇಳಿಕೆಯಾಗಿದೆ.

    ನಂತರದ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಅಕ್ಷಯ್ ಕುಮಾರ್ 98.25 ಕೋಟಿ ರೂ. ಹಾಗೂ ಭಾರತ ರತ್ನ ಸಚಿನ್ ತೆಂಡೂಲ್ಕರ್ 82.50 ಕೋಟಿ ರೂ. ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಬಾಲಿವುಡ್ ಮಿಸ್ಟರ್ ಫರ್ಪೆಕ್ಟ್ ಅಮಿರ್ ಖಾನ್ 68.75 ಕೋಟಿ ರೂ. ಗಳಿಸಿ ಆರನೇ ಸ್ಥಾನದಲ್ಲಿದ್ದರೆ ಹಾಗೂ ತಮ್ಮ ನಟನೆಯ ಮೂಲಕ ಹಾಲಿವುಡ್ ನಲ್ಲಿ ಮಿಂಚು ಹರಿಸಿರುವ ಬೆಡಗಿ ಪ್ರಿಯಾಂಕ ಚೋಪ್ರಾ 68 ಕೋಟಿ ರೂ. ಗಳಿಸುವ ಮೂಲಕ ಏಳನೇ ಸ್ಥಾನ ಪಡೆದಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 63.77 ಕೋಟಿ ರೂ. ಗಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ. ಹೃತಿಕ್ ರೋಷನ್ 63.12 ಕೋಟಿ ರೂ. ಗಳಿಸಿ 9ನೇ ಸ್ಥಾನ ಹಾಗೂ ರಣವೀರ್ ಸಿಂಗ್ ಗೆ 62.63 ಕೋಟಿ ರೂ. ಆದಾಯದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

    ಈ ವರ್ಷ ಶೇಕಡಾವಾರು ಆದಾಯ ಪ್ರಮಾಣ ಏರಿಕೆಯಾದ ಸೆಲೆಬ್ರಿಟಿಗಳ ಪೈಕಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮೊದಲ ಸ್ಥಾನ ಸಿಕ್ಕಿದ್ದು, 57.25 ಕೋಟಿ. ರೂ ಆದಾಯ ಹೊಂದುವ ಮೂಲಕ ಪಟ್ಟಿಯಲ್ಲಿ 13 ಸ್ಥಾನ ಪಡೆದಿದ್ದಾರೆ. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ನಂತರ ಹಲವು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ಸಿಂಧು ಆದಾಯ ಈ ವರ್ಷ 17 ಪಟ್ಟು ಏರಿಕೆಯಾಗಿದೆ.

    ಟಾಪ್ ಟೆನ್ ಸೆಲೆಬ್ರಿಟಿಗಳು
    ಸಲ್ಮಾನ್ ಖಾನ್ – 232.83 ಕೋಟಿ. ರೂ., ವಯಸ್ಸು 51

    ಶಾರುಕ್ ಖಾನ್ – 170.50 ಕೋಟಿ. ರೂ., ವಯಸ್ಸು 52

    ವಿರಾಟ್ ಕೊಹ್ಲಿ _ 100.72 ಕೋಟಿ. ರೂ., ವಯಸ್ಸು 29

    ಅಕ್ಷಯ್ ಕುಮಾರ್ – 98.25 ಕೋಟಿ. ರೂ., ವಯಸ್ಸು 50

    ಸಚಿನ್ ತೆಂಡೂಲ್ಕರ್ – 82.50 ಕೋಟಿ. ರೂ., ವಯಸ್ಸು 44

    ಅಮೀರ್ ಖಾನ್ – 68.75 ಕೋಟಿ. ರೂ., ವಯಸ್ಸು 52

    ಪ್ರಿಯಾಂಕ ಚೋಪ್ರಾ – 68 ಕೋಟಿ. ರೂ., ವಯಸ್ಸು 35

    ಎಂ.ಎಸ್. ಧೋನಿ – 63.77 ಕೋಟಿ. ರೂ., ವಯಸ್ಸು 36

    ಹೃತಿಕ್ ರೋಷನ್ – 63.12 ಕೋಟಿ. ರೂ., ವಯಸ್ಸು 43

    ರಣವೀರ್ ಸಿಂಗ್ – 62.63 ಕೋಟಿ. ರೂ., ವಯಸ್ಸು 32