ಬೆಂಗಳೂರು: ಚಿತ್ರದ ಟೈಟಲ್ ಕುರಿತು ಸದ್ದು ಮಾಡಿದ್ದ ಸಿನಿಮಾದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರ ನಡೆದಿದ್ದು, ಅವರ ಜಾಗಕ್ಕೆ ಶಾನ್ವಿಯವರನ್ನು ನಿರ್ದೇಶಕ ದಿನೇಶ್ ಬಾಬು ಆಯ್ಕೆ ಮಾಡಿದ್ದಾರೆ.

ಆರಂಭದಲ್ಲಿ ದಿನೇಶ್ ಬಾಬು ಅವರು ಈ ಚಿತ್ರದ ಹೆಸರನ್ನು ಕಸ್ತೂರಿ ನಿವಾಸ ಎಂದು ಘೋಷಿಸಿದ್ದರು. ಆದರೆ ಡಾ.ರಾಜ್‍ಕುಮಾರ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಸ್ತೂರಿ ಮಹಲ್ ಎಂದು ಬದಲಾಯಿಸಿದ್ದಾರೆ. ಅಲ್ಲದೆ ಚಿತ್ರಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದಿಂದ ಅವರು ಹೊರ ನಡೆದಿದ್ದು, ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಶಾನ್ವಿ ಶ್ರೀವಾಸ್ತವ ನಟಿಸುತ್ತಿದ್ದಾರೆ. ಸ್ಕಂದ ಅಶೋಕ್ ಅವರು ಮುಖ್ಯಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಚಿತಾ ರಾಮ್ ಅವರು ಚಿತ್ರದಿಂದ ಹೊರ ನಡೆದ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ದಿನೇಶ್ ಬಾಬು, ರಚಿತಾ ರಾಮ್ ಅವರು ಚಿತ್ರದಿಂದ ಹೊರ ನಡೆದಿರುವ ಕುರಿತು ನಿರ್ದಿಷ್ಟ ಕಾರಣ ತಿಳಿದಿಲ್ಲ. ಆದರೆ ಶಾನ್ವಿ ಅವರು ತಂಡ ಸೇರಿರುವುದಕ್ಕೆ ಸಂತೋಷವಾಗಿದೆ. ಅಕ್ಟೋಬರ್ ವೇಳೆಗೆ ಕೊಟ್ಟಿಗೆಹಾರದಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ಮಾಹಿತಿ ನಿಡಿದರು. ಇನ್ನೂ ವಿಶೇಷವೆಂಬಂತೆ ಕಸ್ತೂರಿ ಮಹಲ್ ದಿನೇಶ್ ಬಾಬು ಅವರ 50ನೇ ಸಿನಿಮಾ ಆಗಿದೆ. ಹೀಗಾಗಿ ನಿರೀಕ್ಷೆ ಹೆಚ್ಚಿಸಿದೆ.

ಅವನೇ ಶ್ರೀಮನ್ನಾರಾಯಣ ಸಕ್ಸಸ್ ಬಳಿಕ ಲಾಕ್‍ಡೌನ್ ದಿನಗಳನ್ನು ಎಂಜಾಯ್ ಮಾಡಿದ್ದ ನಟಿ ಶಾನ್ವಿ ಶ್ರೀವಾಸ್ತವ, ಇದೀಗ ಶೂಟಿಂಗ್ ಆರಂಭವಾಗುತ್ತಿದ್ದಂತೆ ತಮ್ಮ ಹೊಸ ಚಿತ್ರದ ಕುರಿತು ಘೋಷಿಸಿದ್ದಾರೆ. ಈ ಬಾರಿ ಅವರು ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಲಕ್ಷ್ಮೀ ಅವತಾರ ತಾಳಿದ್ದ ಶಾನ್ವಿ, ತಮ್ಮ ವಿಶಿಷ್ಟ ನಟನೆ ಮೂಲಕವೇ ಪ್ರೇಕ್ಷಕರನ್ನು ಸೆಳೆದಿದ್ದರು. ಇದೀಗ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ತಮ್ಮ ಹೊಸ ಸಿನಿಮಾ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದು, ಹೆಚ್ಚು ಜನ ಲೈಕ್ ಮಾಡಿದ್ದಾರೆ.

ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿರುವ ಶಾನ್ವಿ, ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ ಕಸ್ತೂರಿಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ. ನನ್ನ ಕನ್ನಡದ ಮೊದಲ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರ ಮಾಡುತ್ತಿದ್ದು, ಇನ್ನೂ ಅನೇಕ ಒಳ್ಳೆಯ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಚಂದ್ರಲೇಖ ಬಳಿಕ ಅವರು ನಟಿಸುತ್ತಿರುವ ಎರಡನೇ ಹಾರರ್ ಚಿತ್ರ ಇದಾಗಿದೆ. ಅಲ್ಲದೆ ಇನ್ನೂ ಹೆಚ್ಚಿನ ಅವಕಾಶಗಳ ನಿರೀಕ್ಷೆಯಲ್ಲಿರುವುದಾಗಿ ಸಹ ಅವರು ಹೇಳಿಕೊಂಡಿದ್ದಾರೆ. ಹೊಸ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ಸಿನಿ ಜರ್ನಿಯನ್ನು ಮುಂದುವರಿಸಿದ್ದಾರೆ.