Tag: ಶಾಜಾ ಮೊರಾನಿ

  • ‘ಚೆನ್ನೈ ಎಕ್ಸ್‌ಪ್ರೆಸ್‌’ ನಿರ್ಮಾಪಕನ ಮಗಳಿಗೆ ಕೊರೊನಾ

    ‘ಚೆನ್ನೈ ಎಕ್ಸ್‌ಪ್ರೆಸ್‌’ ನಿರ್ಮಾಪಕನ ಮಗಳಿಗೆ ಕೊರೊನಾ

    ಮುಂಬೈ: ‘ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾ ನಿರ್ಮಾಪಕ ಕರೀಮ್ ಮೊರಾನಿ ಅವರ ಪುತ್ರಿ ಶಾಜಾ ಮೊರಾನಿಗೂ ಕೊರೊನಾ ಪಾಸಿಟಿವ್ ಬಂದಿದೆ.

    ಸದ್ಯಕ್ಕೆ ಶಾಜಾ ಮೊರಾನಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾದಿಂದ ಇಡೀ ದೇಶವನ್ನು ಲಾಕ್‍ಡೌನ್ ಮಾಡುವ ಮುನ್ನ ಶಾಜಾ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬಂದಿದ್ದರು. ಹೀಗಾಗಿ ಕೊರೊನಾ ಸೋಂಕು ಹರಡಿದೆ ಎಂದು ವರದಿಯಾಗಿದೆ. ಅವರ ಕುಟುಂಬದ ಇತರ ಸದಸ್ಯರೂ ಕೂಡ ಕ್ವಾರಂಟೈನ್‍ನಲ್ಲಿದ್ದು, ಶೀಘ್ರದಲ್ಲೇ ಅವರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ.ಶಾಜಾ ಮೊರಾನಿಗೆ ಏಪ್ರಿಲ್ 5 ರಂದು ಸಂಜೆ ವೇಳೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

    ಶಾಜಾ ತನ್ನ ಪೋಷಕರು ಮತ್ತು ಸಹೋದರಿ ಜೊಯಾ ಮೊರಾನಿ ಜೊತೆಯಲ್ಲಿ ಜುಹು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಜುಹುನಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ. ಇದೇ ಪ್ರದೇಶದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ಶತ್ರುಘ್ನ ಸಿನ್ಹಾ, ಹೃತಿಕ್ ರೋಶನ್ ಮತ್ತು ಜೀತೇಂದ್ರ ಸೇರಿದಂತೆ ಇತರರು ವಾಸಿಸುತ್ತಿದ್ದಾರೆ.

    ಈಗಾಗಲೇ ಮೊರಾನಿ ವಾಸಿಸುತ್ತಿದ್ದ ಏರಿಯಾ ಸಂಪೂರ್ಣ ಲಾಕ್‍ಡೌನ್ ಆಗಿದೆ. ಶಾಜಾ ಮೊರಾನಿ ಅವರ ಕುಟುಂಬದಲ್ಲಿ 9 ಜನರಿದ್ದಾರೆ. ಎಲ್ಲಾ ಸದಸ್ಯರನ್ನು ಏಪ್ರಿಲ್ 6 ರಂದು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಿನಿಮಾ ಇಂಡಸ್ಟ್ರಿಯ ಕುಟುಂಬದಿಂದ ಬಂದಿರುವ ಶಾಜಾಗೆ ಬಾಲಿವುಡ್‍ನಲ್ಲಿ ಅನೇಕ ಸ್ನೇಹಿತರಿದ್ದಾರೆ. ಆಕೆಯ ತಂದೆ ಕರೀಮ್ ಮೊರಾನಿ ಮತ್ತು ಶಾರುಖ್ ಖಾನ್ ಅವರು ಆಪ್ತ ಸ್ನೇಹಿತರಾಗಿದ್ದು, ದೀಪಿಕಾ ಪಡುಕೋಣೆ ಅಭಿನಯದ ‘ಚೆನ್ನೈ ಎಕ್ಸ್‌ಪ್ರೆಸ್’ ಸೇರಿದಂತೆ ಅವರ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

    ಶಾಜಾ ಮೊರಾನಿ ಕೂಡ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಬಾಲಿವುಡ್ ಗಾಯಕಿ ಕನಿಕಾ ಕಪೂರ್ ನಂತರ ಶಾಜಾ ಮೊರಾನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕನಿಕಾಗೆ ಕೊರೊನಾ ಸೋಂಕು ತಗುಲಿರೋದು ಮಾರ್ಚ್ 20ರಂದು ದೃಢಪಟ್ಟಿತ್ತು. ಅಂದಿನಿಂದಲೇ ಐಸೋಲೇಷನ್ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಮಾರ್ಚ್ 30ರ ನಂತರ ಕನಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಇದೀಗ 16 ದಿನಗಳ ಬಳಿಕ ಆಸ್ಪತ್ರೆಯಿಂದ ಕನಿಕಾ ಕಪೂರ್ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಗಾಯಕಿಗೆ ಲಕ್ನೋನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.