Tag: ಶಾಖೋತ್ಪನ್ನ ವಿದ್ಯುತ್ ಕೇಂದ್ರ

  • ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನೀರಿನ ಕೊರತೆ – ಲೋಡ್ ಶೆ‌ಡ್ಡಿಂಗ್ ಭೀತಿ

    ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನೀರಿನ ಕೊರತೆ – ಲೋಡ್ ಶೆ‌ಡ್ಡಿಂಗ್ ಭೀತಿ

    ರಾಯಚೂರು: ಈ ಬಾರಿ ಬೇಸಿಗೆ ಆರಂಭದಲ್ಲೇ ವಿದ್ಯುತ್‌ನ ತೀವ್ರ ಅಭಾವ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿದೆ. ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ (Thermal power Station) ನೀರಿನ ಕೊರತೆ ಉಂಟಾಗುವ ಸಾಧ್ಯತೆಗಳಿದ್ದು, ಕೇವಲ ಒಂದು ವಾರಕ್ಕಾಗುವಷ್ಟು ನೀರಿನ ಸಂಗ್ರಹ ಮಾತ್ರ ಇದೆ. ಈಗಿರುವ ತಾಂತ್ರಿಕ ಸಮಸ್ಯೆಗಳ ನಡುವೆ ನೀರಿನ ಅಭಾವ ಲೋಡ್ ಶೆಡ್ಡಿಂಗ್ (Load Shedding) ಭೀತಿ ಹೆಚ್ಚಿಸಿದೆ.

    ರಾಜ್ಯದ ಬಹುಪಾಲು ವಿದ್ಯುತ್ ಬೇಡಿಕೆಯನ್ನ ಪೂರೈಸುವ ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ RTPS ಹಾಗೂ YTPS ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ. ಸದಾ ತಾಂತ್ರಿಕ ಸಮಸ್ಯೆಗಳಿಂದಾಗಿ ವಿದ್ಯುತ್ ಘಟಕಗಳು ಆಗಾಗ್ಗೆ ಬಂದ್‌ ಆಗುತ್ತಲೇ ಇದ್ದು, ಈಗ ನೀರಿನ ಸಮಸ್ಯೆಯೂ (Water Shortage) ಶುರುವಾಗಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆಯಾಗುವ ಆತಂಕ ಎದುರಾಗಿದೆ.

    ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಕೃಷ್ಣಾ ನದಿ ಸಂಪೂರ್ಣ ಬತ್ತಿಹೋಗಿದೆ. ವಿದ್ಯುತ್ ಕೇಂದ್ರಗಳಿಗಾಗಿಯೇ ನಿರ್ಮಿಸಲಾದ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲೂ ಡೆಡ್ ಸ್ಟೋರೇಜ್ ಮಾತ್ರಯಿದ್ದು, ವಿದ್ಯುತ್ ಕೇಂದ್ರಗಳಿಗೆ ಕೇವಲ ಒಂದು ವಾರಕ್ಕಾಗುವಷ್ಟು ನೀರಿನ ಸಂಗ್ರಹವಿದೆ. ನೀರಿನ ಸಮಸ್ಯೆ ನೀಗದಿದ್ದರೆ ವಿದ್ಯುತ್ ಪೂರೈಕೆಯಲ್ಲೂ ಅಭಾವ ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ

    1,720 ಮೆಗಾವ್ಯಾಟ್ ಸಾಮರ್ಥ್ಯದ ಆರ್‌ಟಿಪಿಎಸ್‌ನಲ್ಲಿ ಈಗಾಗಲೇ 8 ಘಟಕಗಳ ಪೈಕಿ ತಾಂತ್ರಿಕ ಸಮಸ್ಯೆ ಹಾಗೂ ವಾರ್ಷಿಕ ನಿರ್ವಹಣೆ ಹಿನ್ನೆಲೆ 2 ಘಟಕಗಳು ಬಂದ್‌ ಆಗಿವೆ. ಹಾಗಾಗಿ ಕೇವಲ 844 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. 1,600 ಮೆಗಾ ವ್ಯಾಟ್ ಸಾಮರ್ಥ್ಯದ ವೈಟಿಪಿಎಸ್‌ನಲ್ಲಿ 1080 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ನೀರಿನ ಸಮಸ್ಯೆ ಮುಂದುವರಿದರೆ, ಇನ್ನಷ್ಟು ಘಟಕಗಳು ಬಂದ್‌ ಆಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಬೇಡಿಕೆಯ ಮೇರೆಗೆ ನಾರಾಯಣಪುರ ಜಲಾಶಯದಿಂದ 6,000 ಕ್ಯೂಸೆಕ್ ನಂತೆ ಎರಡು ದಿನಕಾಲ 1 ಟಿಎಂಸಿ ನೀರನ್ನ ಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ನದಿಯಲ್ಲಿ ಸಾಕಷ್ಟು ತಗ್ಗು ಗುಂಡಿಗಳು ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ರೈತರು ನೀರು ಬಳಸುತ್ತಿರುವುದರಿಂದ ಬ್ಯಾರೇಜ್‌ಗೆ ನೀರು ತಲುಪುವುದೇ ಅನುಮಾನ ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ – 100+ ಯೂನಿಟ್‌ ಬಳಸುವ ಬಳಕೆದಾರರಿಗೆ ಗುಡ್‌ನ್ಯೂಸ್

    ಮಳೆ ಕೊರತೆಯಿಂದ ಈಗಾಗಲೇ ಜಲವಿದ್ಯುತ್ ಕೇಂದ್ರಗಳ ವಿದ್ಯುತ್ ಉತ್ಪಾದನೆ ಗಣನೀಯ ಕುಸಿತವಾಗಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ತಾಂತ್ರಿಕ ಸಮಸ್ಯೆಯೊಂದಿಗೆ ಮತ್ತು ನೀರಿನ ಸಮಸ್ಯೆಯೂ ಎದುರಾಗುತ್ತಿದ್ದು, ಸರ್ಕಾರ ಇದರತ್ತ ಗಮನ ಹರಿಸಬೇಕಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮನವಿ ಮಾಡಿದ್ದಾರೆ.

  • ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ

    ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ

    ರಾಯಚೂರು: ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆಗಳಿವೆ.

    ರಾಜ್ಯಕ್ಕೆ ಶೇ.45 ರಷ್ಟು ವಿದ್ಯುತ್ ನೀಡುವ ರಾಯಚೂರಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್.ಟಿ.ಪಿ.ಎಸ್ ನ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಕಲ್ಲಿದ್ದಲು ಕೊರತೆಯಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಆರ್.ಟಿ.ಪಿ.ಎಸ್ ಈಗ ಕೇವಲ ಸುಮಾರು 500 ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ

    ಆರ್.ಟಿ.ಪಿ.ಎಸ್ ನಲ್ಲಿ ಸದ್ಯ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸಂಗ್ರಹವಿದೆ. ನಾಲ್ಕು ಘಟಕಗಳಿಗೆ ಒಂದು ದಿನಕ್ಕೆ ಮಾತ್ರ ಇಷ್ಟು ಕಲ್ಲಿದ್ದಲು ಸಾಕಾಗುತ್ತದೆ. ಎಂಟು ಘಟಕಗಳಿಗೆ ಒಂದು ದಿನಕ್ಕೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕು ಕಲ್ಲಿದ್ದಲು ಬರುತ್ತಿತ್ತು. ಈಗ ಕೇವಲ 3 ರಿಂದ 4 ರೇಕು ಕಲ್ಲಿದ್ದಲು ಬರುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಲ್ಲಿದ್ದಲು ಹಂಚಿಕೆ, ಮಳೆಯ ಪರಿಣಾಮ ಸೇರಿದಂತೆ ನಾನಾ ತಾಂತ್ರಿಕ ಕಾರಣದಿಂದಾಗಿ ಕಲ್ಲಿದ್ದಲು ಕೊರತೆ ಎದುರಾಗಿದೆ.

    ಕಲ್ಲಿದ್ದಲು ಕೊರತೆಯಿಂದಾಗಿ ಆರ್.ಟಿ.ಪಿ.ಎಸ್ ನ ಉಳಿದ 4 ಘಟಕಗಳು ಸಹ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನೂ ಜಿಲ್ಲೆಯ ಯರಮರಸ್ ನಲ್ಲಿರುವ ಒಟ್ಟು 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯದ ವೈಟಿಪಿಎಸ್ ನ ಎರಡು ಘಟಕಗಳಲ್ಲಿ ಒಂದು ಘಟಕ ಮಾತ್ರ 648 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ವೈಟಿಪಿಎಸ್ ನಲ್ಲಿ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ಎರಡುದಿನಕ್ಕೆ ಮಾತ್ರ ಸಾಕಾಗಲಿದೆ. ಇದನ್ನೂ ಓದಿ: ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ಇನ್ನೂ ರಾಜ್ಯದ ಎಲ್ಲ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಪರಸ್ಥಿತಿಯೂ ಹೀಗೆ ಇದೆ. ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬನೆ ಹೆಚ್ಚಾಗಿದೆ.