Tag: ಶಸ್ತ್ರಚಿಕಿತ್ಸೆ

  • ಮುಸ್ಲಿಂ ಮಹಿಳೆ ಬಾಯಿಂದ ಕೃಷ್ಣ ಕೃಷ್ಣ ಅಂತ ಹೇಳಿಸಿ ಆಪರೇಷನ್- ವೈದ್ಯರ ವಿರುದ್ಧ ಮಹಿಳೆ ದೂರು

    ಮುಸ್ಲಿಂ ಮಹಿಳೆ ಬಾಯಿಂದ ಕೃಷ್ಣ ಕೃಷ್ಣ ಅಂತ ಹೇಳಿಸಿ ಆಪರೇಷನ್- ವೈದ್ಯರ ವಿರುದ್ಧ ಮಹಿಳೆ ದೂರು

    ಚಿಕ್ಕಬಳ್ಳಾಪುರ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ವೇಳೆ ವೈದ್ಯರೊಬ್ಬರು ಮುಸ್ಲಿಂ ಮಹಿಳೆಯಿಂದ ಕೃಷ್ಣ ಕೃಷ್ಣ ಅಂತ ಹೇಳಿಸಿ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ನಾಸೀಮಾ ಬಾನು ಸೊಣ್ಣಶೆಟ್ಟಿಹಳ್ಳಿಯಲ್ಲಿರುವ ತಮ್ಮ ಅಜ್ಜಿ ಮನೆಗೆ ಹೋಗಿದ್ದರು. ಪ್ರತಿ ತಿಂಗಳು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ  ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಆದ್ದರಿಂದ ನಾಸೀಮಾ ಬಾನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದಾಖಲಾಗಿದ್ದು, ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲು ಬೆಂಗಳೂರಿನಿಂದ ಡಾ. ರಾಮಕೃಷ್ಣಪ್ಪ ಬಂದಿದ್ದರು.

    ವೈದ್ಯರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಅಲ್ಲಾ ಅಲ್ಲಾ ಅಂತ ನೆನೆಯುತ್ತಿದ್ದ ನಸೀಮಾ ಬಾನುಗೆ ಅಲ್ಲಾ ಅಲ್ಲಾ ಅನ್ನಬೇಡ. ಕೃಷ್ಣ ಕೃಷ್ಣ ಅಂತಾ ಹೇಳು ಎಂದು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ನಸೀಮಾ ಬಾನು ನಿರಾಕರಿಸದ್ದಕ್ಕೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ ಎಂದು ವೈದ್ಯರು ಹೇಳಿದ್ದು, ಒತ್ತಡಕ್ಕೆ ಮಣಿದ ನಸೀಮಾಬಾನು ಕಷ್ಣ ಕೃಷ್ಣ ಎಂದು ಹೇಳಿದ್ದಾರೆ. ನಂತರ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎನ್ನಲಾಗಿದೆ.

    ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಆಸ್ಪತ್ರೆಯಿಂದ ಬಂದ ಬಳಿಕ ನಸೀಮಾ ಬಾನು ವೈದ್ಯ ರಾಮಕೃಷ್ಣ ವಿರುದ್ಧ ದೂರು ದಾಖಲಿಸಿದ್ದರೆ. ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಚಿಂತಾಮಣಿ ನಗರ ಪೊಲೀಸರಿಗೆ ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ನಾಸೀಮಾ ಸಹೋದರಿ ಆಸ್ಪತ್ರೆಯ ಹಿರಿಯ ವೈದ್ಯರ ಬಳಿ ನಡೆದ ಘಟನೆಯ ಬಗ್ಗೆ ದೂರನ್ನ ಹೇಳಿದ್ದಾರೆ.

  • 65ರ ವ್ಯಕ್ತಿಯ ಹೃದಯ-ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆ ಹೊರತೆಗೆದ ವೈದ್ಯರು

    65ರ ವ್ಯಕ್ತಿಯ ಹೃದಯ-ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆ ಹೊರತೆಗೆದ ವೈದ್ಯರು

    ಆಲಿಘರ್: 65 ವರ್ಷದ ವ್ಯಕ್ತಿಯ ದೇಹದಲ್ಲಿ ಹೃದಯ ಹಾಗೂ ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಆಲಿಘರ್ ನಿವಾಸಿಯಾದ ಹೇಮಂದ್ರ ಗುಪ್ತಾ ಶಸ್ತ್ರಚಿಕಿತ್ಸೆಗೆ ಒಳಗದ ವ್ಯಕ್ತಿ. ಇಲ್ಲಿನ ಎಎಮ್‍ಯು ಮೆಡಿಕಲ್ ಕಾಲೇಜಿನಲ್ಲಿ ಗುರುವಾರದಂದು ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣ. ವ್ಯಕ್ತಿಗೆ ಹುಟ್ಟಿನಿಂದಲೂ ದೇಹದೊಳಗೆ ಗೆಡ್ಡೆ ಇದ್ದು, ಬೆಳೆಯುತ್ತಲಿತ್ತು ಎಂದು ಪ್ರೊಫೆಸರ್ ಎಮ್‍ಹೆಚ್ ಬೇಗ್ ಹೇಳಿದ್ದಾರೆ.

    ಬೇಗ್ ಅವರ ನೇತೃತ್ವದಲ್ಲಿ ವೈದ್ಯರ ತಂಡ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹೇಮೇಂದ್ರ ಅವರು ತನ್ನ ದೇಹದಲ್ಲಿ ಗೆಡ್ಡೆ ಇಟ್ಟುಕೊಂಡೇ ಇಷ್ಟು ದಿನ ಬದುಕಿದ್ದರು. ಆದ್ರೆ ಇತ್ತೀಚೆಗೆ ತೀವ್ರ ನೋವು ಕಾಣಿಸಿಕೊಂಡಾಗ ಗೆಡ್ಡೆ ಇರುವ ಬಗ್ಗೆ ಗೊತ್ತಾಗಿದೆ ಎಂದು ಬೇಗ್ ಹೇಳಿದ್ದಾರೆ.

    ಹೇಮೇಂದ್ರ ಅವರ ವಯಸ್ಸು ಶಸ್ತ್ರಚಿಕಿತ್ಸೆಗೆ ಸವಾಲಾಗಿತ್ತು ಎಂದು ವೈದ್ಯರ ತಂಡದಲ್ಲಿದ್ದ ಮೊಹಮ್ಮದ್ ಅಜಾಮ್ ಹಸೀನ್ ಹೇಳಿದ್ದಾರೆ.

  • 20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

    20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

    ಮುಂಬೈ: ಒಂದು ವರ್ಷಗಳ ಕಾಲ ಅಂಟಿಕೊಂಟಿದ್ದ ಸಯಾಮಿ ಮಕ್ಕಳನ್ನು 20 ವೈದ್ಯರು 12 ಗಂಟೆಗಳ ಕಾಲ ನಿರಂತರವಾಗಿ ಸರ್ಜರಿ ಮಾಡಿ ಬೇರೆ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರೀತಿ ಮತ್ತು ರಾಣಿ ಅಂಟಿಕೊಂಡಿದ್ದ ಅವಳಿ ಮಕ್ಕಳು. ವಾಡಿಯಾ ಆಸ್ಪತ್ರೆಯ 20 ವೈದ್ಯರು ಸೇರಿ ಮಂಗಳವಾರ ಆಪರೇಷನ್ ಮಾಡಿ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಆಸ್ಪತ್ರೆ ಎರಡನೇ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸು ಕಂಡಿರುವುದು ವಿಶೇಷ.

    ಗರ್ಭಿಣಿಯಾಗಿ 5 ತಿಂಗಳಾದ ಮೇಲೆ ಭ್ರೂಣದಲ್ಲಿ ಅವಳಿ ಮಕ್ಕಳು ಇರುವುದು ನನಗೆ ಗೊತ್ತಾಯಿತು. ಅಷ್ಟೇ ಅಲ್ಲದೇ ಇಬ್ಬರ ದೇಹ ಅಂಟಿಕೊಂಡಿರುವ ವಿಚಾರವೂ ತಿಳಿಯಿತು. 2016 ಸೆಪ್ಟಂಬರ್ 19 ರಂದು ನಾನು ಇಬ್ಬರು ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದೆ. ಈ ಸಂದರ್ಭದಲ್ಲಿ ಯಕೃತ್, ಕರಳು ಮತ್ತು ಮೂತ್ರಕೋಶವನ್ನ ಮಕ್ಕಳು ಹಂಚಿಕೊಂಡಿರುವುದು ತಿಳಿಯಿತು. ಹೀಗಾಗಿ ಅವರ ಆರೋಗ್ಯದ ಬಗ್ಗೆ ನಾನು ಭಯಪಟ್ಟಿದ್ದೆ. ಆದರೆ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಮಾಡುವ ಮೊದಲು ವಿಶೇಷ ಪರೀಕ್ಷೆ ನಡೆಸಲಾಗಿತ್ತು ಎಂದು ತಾಯಿ ಶೀತಲ್ ಜಾಲ್ಟೆ ತಿಳಿಸಿದರು.

    1 ವರ್ಷ 3 ತಿಂಗಳ ಪ್ರೀತಿ ಮತ್ತು ರಾಣಿ ಅವಳಿ ಮಕ್ಕಳು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯಕ್ಕೆ ಈ ಮಕ್ಕಳು ಐಸಿಯುನಲ್ಲಿ ಇದ್ದು, ಕೆಲ ಕೆಲವು ದಿನಗಳವರೆಗೆ ಇಲ್ಲೇ ಇರಬೇಕಾಗುತ್ತದೆ. ನಂತರ ಅವರ ಆರೋಗ್ಯ ಸ್ಥಿತಿಯನ್ನ ತಿಳಿದುಕೊಳ್ಳಲು ಅನೇಕ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮಕ್ಕಳನ್ನು ಚರ್ಮದ ಮೂಲಕ ಕವರ್ ಮಾಡುವುದು ನಮಗೆ ಸವಾಲಿನ ಕೆಲಸವಾಗಿತ್ತು. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಾದ ಬಳಿಕ ಘಾಟ್ಕೋಪಾರ್‍ದಲ್ಲಿರುವ ಜಾಲ್ಟೆ ಕುಟುಂಬ ಇಬ್ಬರು ಮಕ್ಕಳನ್ನು ನೋಡಿ ತುಂಬಾ ಸಂತೋಷಗೊಂಡಿದ್ದಾರೆ ಎಂದು ವಾಡಿಯಾ ಆಸ್ಪತ್ರೆಯ ಸಿಇಓ ಡಾ. ಮಿನ್ನೆ ಬೊಧಾನ್ವಾಲಾ ಹೇಳಿದರು.

  • ಜ್ವರ ಅಂತ ಹೋದ್ರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆಶಾ ಕಾರ್ಯಕರ್ತೆ!

    ಜ್ವರ ಅಂತ ಹೋದ್ರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆಶಾ ಕಾರ್ಯಕರ್ತೆ!

    ಚಿಕ್ಕಬಳ್ಳಾಪುರ: ಆಶಾಕಾರ್ಯಕರ್ತೆಯೊಬ್ಬಳು ಜ್ವರದಿಂದ ಬಳಲುತ್ತಿದ್ದವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪವೊಂದು ಶಿಡ್ಲಘಟ್ಟ ತಾಲೂಕಿನಲ್ಲಿ ಕೇಳಿಬಂದಿದೆ

    ತಾಲೂಕಿನ ಮಾರಪ್ಪನಹಳ್ಳಿ ನಿವಾಸಿಗಳಾದ ನರಸಿಂಹಮೂರ್ತಿ ಹಾಗೂ ಬ್ಯಾಟಪ್ಪ ಎಂಬವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎನ್ನಲಾಗಿದೆ.

    ಏನಿದು ಘಟನೆ?: ಗ್ರಾಮದ ಆಶಾ ಕಾರ್ಯಕರ್ತೆ ಪದ್ಮಾವತಿ, ಜ್ವರ ಹಾಗೂ ಬಾಯಿ ಹುಣ್ಣಿನಿಂದ ಬಳಲುತ್ತಿದ್ದ 30 ವರ್ಷದ ನರಸಿಂಹಮೂರ್ತಿ ಹಾಗೂ 70 ವರ್ಷದ ಬ್ಯಾಟಪ್ಪ ಎಂಬವರನ್ನು ಕಳೆದ ಶುಕ್ರವಾರ ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಂತಾನಹರಣ ಚಿಕಿತ್ಸೆ ಮಾಡಿಸಿದ್ದಾಳೆ. ಇದೀಗ ಶಸ್ತ್ರ ಚಿಕಿತ್ಸೆ ನಂತರ ನರಸಿಂಹಮೂರ್ತಿ ಪತ್ನಿ ಛಾಯಾ ಆಶಾಕಾರ್ಯಕರ್ತೆ ಪದ್ಮಾವತಿ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಆದ್ರೆ ಇದನ್ನ ನಿರಾಕರಿಸಿರುವ ಆಶಾಕಾರ್ಯಕರ್ತೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್, ಶುಕ್ರವಾರದ ಕ್ಯಾಂಪಿನಲ್ಲಿ 20 ಮಂದಿಗೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಎಲ್ಲರ ಒಪ್ಪಿಗೆಯನ್ನ ಪಡೆದೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಲವಂತವಾಗಿ ಯಾರಿಗೂ ಮಾಡಲು ಆಗುವುದಿಲ್ಲ ಅಂತ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ವ್ಯಾಸೆಕ್ಟೆಮಿ ಶಸ್ತ್ರಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರಿಗೂ ಸರ್ಕಾರದಿಂದ 1200 ರೂಪಾಯಿ ಹಾಗೂ ಆಶಾ ಕಾರ್ಯಕರ್ತೆಗೆ 200 ರೂಪಾಯಿ ಗೌರವಧನ ನೀಡಲಾಗುತ್ತದೆ. ಹೀಗಾಗಿ ಹಣದ ಆಸೆಗೆ ಆಶಾಕಾರ್ಯಕರ್ತೆ ಹೀಗೆ ಮಾಡಿದ್ದಾಳೆ ಅಂತ ನರಸಿಂಹಮೂರ್ತಿ ಸಂಬಂಧಿಕರು ದೂರಿದ್ದಾರೆ. ಈ ಕುರಿತು ಆಶಾಕಾರ್ಯಕರ್ತೆ ಮೇಲೆ ದೂರು ದಾಖಲಾಗುತ್ತಿದ್ದಂತೆ ಆಶಾ ಕಾರ್ಯಕರ್ತೆ ನರಸಿಂಹಮೂರ್ತಿಯವರ ಕಡೆಯ ಮಹಿಳೆಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಲು ಮುಂದಾಗಿದ್ದಾರೆ.

    ಸದ್ಯ ಈ ಘಟನೆ ಮಾರಪ್ಪನಹಳ್ಳಿ ಗ್ರಾಮದಲ್ಲಿ ರಾಜಕೀಯ ಬಣ್ಣ ಸಹ ಪಡೆದುಕೊಂಡಿದೆ. ಪರ ವಿರೋಧದ ನಡುವೆ ವಾದ-ವಿವಾದ ವಾಗ್ವಾದಗಳು ಜೋರಾಗಿ ನಡೆದಿದ್ದು, ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.

  • ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ಭೋಪಾಲ್: ಮಧ್ಯಪ್ರದೇಶ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆವೊಂದನ್ನ ಮಾಡಿದ್ದು, ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಒಂದು ಚೈನ್, 263 ನಾಣ್ಯಗಳು ಹಾಗೂ ಶೇವಿಂಗ್ ಬ್ಲೇಡ್‍ಗಳು ಸೇರಿ ಒಟ್ಟು 5 ಕೆಜಿಯಷ್ಟು ಕಬ್ಬಿಣವನ್ನ ಹೊರತೆಗೆದಿದ್ದಾರೆ.

    ಇಲ್ಲಿನ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿನ ಸಾತ್ನಾ ಜಿಲ್ಲೆಯ ಸೋಹಾವಲ್ ನಿವಾಸಿಯಾದ 32 ವರ್ಷದ ಮೊಹಮ್ಮದ್ ಮಕ್ಸೂದ್‍ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ನವೆಂಬರ್ 18ರಂದು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಎಕ್ಸ್-ರೇ ಹಾಗೂ ಇನ್ನಿತರೆ ಪರೀಕ್ಷೆಗಳನ್ನ ಮಾಡಿದ ನಂತರ ಮಕ್ಸೂದ್ ಅವರ ಹೊಟ್ಟೆನೋವಿಗೆ ಕಾರಣ ಪತ್ತೆ ಮಾಡಿದೆವು. 6 ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ 10-12 ಶೇವಿಂಗ್ ಬ್ಲೇಡ್‍ಗಳು, 4 ದೊಡ್ಡ ಸೂಜಿಗಳು, ಒಂದು ಚೈನ್ ಹಾಗೂ 263 ನಾಣ್ಯಗಳನ್ನ ಹೊರತೆಗೆದರು. ಜೊತೆಗೆ ಗ್ಲಾಸ್ ಪೀಸ್‍ಗಳು ಇದ್ದವು. ಒಟ್ಟು 5 ಕೆಜಿ ತೂಕದ ವಸ್ತುಗಳನ್ನ ಮಕ್ಸೂದ್ ಅವರ ಹೊಟ್ಟೆಯಿಂದ ಶುಕ್ರವಾರದಂದು ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ ಪ್ರಿಯಾಂಕ್ ಶರ್ಮಾ ಹೇಳಿದ್ದಾರೆ.

    ರೇವಾ ಗೆ ಕರೆತರುವ ಮುನ್ನ ಮಕ್ಸೂದ್ ಅವರು ಸಾತ್ನಾದಲ್ಲಿ 6 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅವರ ಮನಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತಿಲ್ಲದಂತೆ ಈ ವಸ್ತುಗಳನ್ನ ನುಂಗಿರಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.

    ಸದ್ಯ ಮಕ್ಸೂದ್ ಚೇತರಿಸಿಕೊಳ್ಳುತ್ತಿದ್ದು, ತಜ್ಞ ವೈದ್ಯರ ತಂಡ ಅವರನ್ನ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

  • ವ್ಯಕ್ತಿಯ ಹೊಟ್ಟೆಯಿಂದ 600ಕ್ಕೂ ಹೆಚ್ಚು ಮೊಳೆ ಹೊರತೆಗೆದ ವೈದ್ಯರು!

    ವ್ಯಕ್ತಿಯ ಹೊಟ್ಟೆಯಿಂದ 600ಕ್ಕೂ ಹೆಚ್ಚು ಮೊಳೆ ಹೊರತೆಗೆದ ವೈದ್ಯರು!

    ಕೊಲ್ಕತ್ತಾ: ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ವೈದ್ಯರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಹೊಟ್ಟೆಯಿಂದ 600 ಕ್ಕೂ ಹೆಚ್ಚು ಕಬ್ಬಿಣದ ಮೊಳೆಗಳನ್ನ ಹೊರತೆಗೆದಿರೋ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

    ರಾಜ್ಯದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಈ ಶಸ್ತ್ರಚಿಕ್ತೆಯನ್ನು ಮಾಡಿ ಯಶಸ್ವಿಯಾಗಿದ್ದು, ಈಗ ರೋಗಿಗೆ ಯಾವುದೇ ತೊಂದರೆ ಇಲ್ಲ, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ರೋಗಿಯ ಕುಟುಂಬಸ್ಥರು ಕಳೆದ ತಿಂಗಳು ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರೋಗಿಗೆ ಯುಎಸ್‍ಜಿ ಟೆಸ್ಟ್ ಮಾಡಿಸಿದ ನಂತರ ರೋಗಿಯ ಹೊಟ್ಟೆಯಲ್ಲಿ ಬಹಳಷ್ಟು ಮೊಳೆಗಳು ಇರುವುದು ಕಂಡುಬಂದಿತ್ತು.

    ರೋಗಿ ಒಬ್ಬ ಮಾನಸಿಕ ಅಸ್ವಸ್ಥರಾಗಿದ್ದು, ಅನ್ಯ ವಸ್ತುಗಳನ್ನು ನುಂಗುವ ಅಭ್ಯಾಸವನ್ನು ಹೊಂದಿದ್ದರು. ಆದರೆ ಅವರ ಹೊಟ್ಟೆಯಲ್ಲಿ ಬಹಳಷ್ಟು ಮೊಳೆಗಳು ಇರಬಹುದು ಎಂದು ಕಲ್ಪನೆಯನ್ನು ಸಹ ಮಾಡಿರಲಿಲ್ಲ ಎಂದು ರೋಗಿಯ ಸಂಬಂಧಿ ತಿಳಿಸಿದ್ದಾರೆ.

    ಈ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಅಪಾಯಕಾರಿಯಾಗಿತ್ತು. ಆದರೂ ನಾವು ರಿಸ್ಕ್ ತೆಗೆದುಕೊಂಡು ಯಶಸ್ವಿಯಾಗಿ ಆಪರೇಷನ್ ಮಾಡಿದ್ದೇವೆ. ಈಗ ರೋಗಿ ಆರೋಗ್ಯವಾಗಿದ್ದಾರೆ. ಆದರೆ ಅಚ್ಚರಿ ಎಂದರೆ ತುಂಬಾ ದಿನಗಳ ಕಾಲ ಮೊಳೆಗಳು ಹೊಟ್ಟೆಯಲ್ಲಿದ್ದರೂ ಇದರಿಂದ ರೋಗಿಗೆ ಒಂದು ಸಣ್ಣ ಗಾಯವೂ ಆಗಿಲ್ಲ. ಜೊತೆಗೆ ಮೊಳೆಗಳು ಚುಚ್ಚಿಕೊಂಡಿಲ್ಲ ಎಂದು ವೈದ್ಯಕೀಯ ತಂಡದ ನೇತೃತ್ವ ವಹಿಸಿದ ಶಸ್ತ್ರಚಿಕಿತ್ಸಕ ಸಿದ್ಧಾರ್ಥ ಬಿಸ್ವಾಸ್ ಅವರು ಹೇಳಿದ್ದಾರೆ.

    ರೋಗಿಯ ಹೊಟ್ಟೆ ಸಾಮಾನ್ಯಕ್ಕಿಂತ ದೊಡ್ಡದಾಗಿತ್ತು. ಅದರ ತುಂಬಾ ಬರಿ ಮೊಳೆಗಳೇ ತುಂಬಿದ್ದವು. ನಾವು ಆಪರೇಷನ್ ಮಾಡುವಾಗ ಅವರ ಹೊಟ್ಟೆಯ ಒಂದು ಭಾಗದಲ್ಲಿ ಕುಯ್ದು ಒಂದು ಮ್ಯಾಗ್ನೆಟ್ ಬಳಸಿಕೊಂಡು ಒಂದೊಂದೇ ಮೊಳೆಗಳನ್ನು ಹೊರತೆಗೆದೆವು. ಒಟ್ಟಾರೆ 600 ಮೊಳೆಗಳಿದ್ದವು. ರೋಗಿ ನುಂಗಿದ್ದ ಎಲ್ಲಾ ಮೊಳೆಗಳನ್ನು ಹೊರತೆಗೆದಿದ್ದೇವೆ ಎಂದು ಡಾ.ಸಿದ್ಧಾರ್ಥ ಅವರು ಖಚಿತಪಡಿಸಿದ್ದಾರೆ.

     

     

  • ದೇಹದ ಹೊರಭಾಗದಲ್ಲಿ ಕರುಳು ಹೊಂದಿದ್ದ ಮಗು- ಫೋಟೋ ಹಾಕಿ ಜಾಗೃತಿ ಮೂಡಿಸ್ತಿರೋ ತಾಯಿ

    ದೇಹದ ಹೊರಭಾಗದಲ್ಲಿ ಕರುಳು ಹೊಂದಿದ್ದ ಮಗು- ಫೋಟೋ ಹಾಕಿ ಜಾಗೃತಿ ಮೂಡಿಸ್ತಿರೋ ತಾಯಿ

    ಕಾರ್ಡಿಫ್: ಬ್ರಿಟನ್‍ನ ವೇಲ್ಸ್‍ನಲ್ಲಿ ಗ್ಯಾಸ್ಟ್ರೋಚೈಸಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಮಗುವೊಂದು ದೇಹದ ಹೊರಭಾಗದಲ್ಲಿ ಕರುಳು ಹೊಂದಿತ್ತು. ಇದೀಗ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

    ಮಗುವಿನ ಶಸ್ತ್ರಚಿಕಿತ್ಸೆ ಮೇ ನಲ್ಲಿ ನಡೆದಿದ್ದರೂ, ಈಗ 21 ವರ್ಷದ ತಾಯಿ ಕೋಲ್ ವಾಲ್ಟರ್ಸ್ ಮಗುವಿನ ಫೋಟೋವನ್ನ ಹಂಚಿಕೊಂಡು ಈ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಅವಾ-ರೋಸ್ ನೈಟಿಂಗೇಲ್ ಹೆಸರಿನ ಮಗುವಿಗೆ ಜನನಕ್ಕೂ ಮುನ್ನ ಹೊಟ್ಟೆಯ ಭಾಗ ಸರಿಯಾಗಿ ಬೆಳವಣಿಗೆಯಾಗದ ಕಾರಣ ಅದರ ಕರುಳು ದೇಹದಿಂದ ಹೊರಗಡೆ ಇತ್ತು. ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕರುಳನ್ನ ಅದರ ಸ್ಥಾನಕ್ಕೆ ಸೇರಿಸಿದ್ದಾರೆ.

    ಮಗು ಹುಟ್ಟಿದ ಕೆಲವು ಗಂಟೆಗಳಲ್ಲಿ ಈ ಫೋಟೋ ತೆಗೆಯಲಾಗಿದೆ. 3 ಸಾವಿರದಲ್ಲಿ ಒಂದು ಮಗುವಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಗುವಿಗೆ ಇನ್ಫೆಕ್ಷನ್ ಆಗಬಾರದೆಂದು ಅವರ ಮೈ ಮೇಲೆ ತೆಳುವಾಗ ಪ್ಲಾಸ್ಟಿಕ್ ಪದರ ಸುತ್ತಿರೋದನ್ನ ಫೋಟೋದಲ್ಲಿ ಕಾಣಬಹುದು. ಮಗು ಹುಟ್ಟಿದ ಕೆಲವು ಗಂಟೆಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಮಗುವಿನ ತಾಯಿಗೆ ಮೊದಲೇ ಶಸ್ತ್ರಚಿಕಿತ್ಸೆಯ ಪರಿಣಾಮಗಳ ಬಗ್ಗೆ ತಿಳಿಸಿದ್ದರು.

    ವೈದ್ಯರು ಹೇಳಿದ್ದನ್ನು ಕೇಳಿದ ನಂತರ ಶಸ್ತ್ರಚಿಕಿತ್ಸೆಗೆ ನನ್ನ ಮಗುವನ್ನು ಕಳುಹಿಸಲು ನಾನು ತುಂಬಾ ಭಯಪಟ್ಟಿದ್ದೆ ಎಂದು ವಾಲ್ಟರ್ಸ್ ಹೇಳಿದ್ದಾರೆ. ಕಾರ್ಡಿಫ್ ಹೀತ್ ಆಸ್ಪತ್ರೆಯಲ್ಲಿ ಸುಮಾರು 3 ಗಂಟೆಗಳ ಕಾಲ ಮಗುವಿಗೆ ಆಪರೇಷನ್ ಮಾಡಿದ್ದು, ಯಶಸ್ವಿಯಾಗಿ ಮಗುವಿನ ಕರಳನ್ನು ದೇಹದೊಳಗೆ ಸೇರಿಸಿದ್ದಾರೆ.

    ಶಸ್ತ್ರಚಿಕಿತ್ಸೆಯ ನಂತರ ಮಗುವಿಗೆ 7 ದಿನಗಳ ಕಾಲ ಆಕ್ಷಿಜನ್ ಹಾಕಲಾಗಿತ್ತು. ಈ ವೇಳೆ ಮಗುವಿಗೆ ಆಂತರಿಕವಾಗಿ ಆಹಾರ ನೀಡಲಾಗಿತ್ತು ಎಂದು ವರದಿಯಾಗಿದೆ.

  • ತೂಕ ಕಡಿಮೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ಳು!

    ತೂಕ ಕಡಿಮೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ಳು!

    ಚೆನ್ನೈ: ತೂಕ ಕಡಿಮೆ ಆಗಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಮಹಿಳೆಯೊಬ್ಬರು ಈಗ ಪ್ರಾಣವನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿ ನಡೆದಿದೆ.

    160 ಕೆಜಿ ತೂಗುತ್ತಿದ್ದ 46 ವರ್ಷದ ವಲರ್‍ಮತಿ ತೂಕ ಜಾಸ್ತಿ ಇದೆ ಎಂದು ಬರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಳು. ಆದರೆ ಈ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು ಚೆನ್ನೈ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಸ್ಥೂಲಕಾಯ ಚಿಕಿತ್ಸೆಯಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರಗೆ ದಾಖಲಿಸಿದ್ದೆ. ಆದರೆ ವೈದ್ಯರು ನಮ್ಮ ಮನೆಯಲ್ಲಿರುವ ನಾಲ್ಕು ಮಂದಿಗೂ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ನಮಗೆ ದುಡ್ಡು ಬೇಕಾಗಿಲ್ಲ, ನೀವು ನಮಗೆ ಶಸ್ತ್ರಚಿಕಿತ್ಸೆ ಆಗುವ ಮೊದಲು ಮತ್ತು ನಂತರದ ಫೋಟೋ ಕೊಡಬೇಕು ಅಂತ ವೈದ್ಯರು ಹೇಳಿದ್ದರು ಎಂದು ವಲರಾಮತಿಯ ಪತಿ ಅಲಗೆಸಾನ್ ಹೇಳಿದ್ದಾರೆ.

    ನಾವೂ ಚಿಕಿತ್ಸೆಗಾಗಿ ಮತ್ತು ಔಷಧಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಮೊದಲ ಶಸ್ತ್ರಚಿಕಿತ್ಸೆ ನಡೆದ ನಂತರ ವಲರಾಮತಿ ಒಂದು ತಿಂಗಳು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಅಷ್ಟೇ ಅಲ್ಲದೇ ಆರೋಗ್ಯದಲ್ಲಿ ತೊಡಕುಗಳಿರುವ ಕಾರಣ ವೈದ್ಯರು ಒಂಬತ್ತು ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು.

    ವೈದ್ಯರ ನಿರ್ಲಕ್ಷ್ಯ ಎಂದು ಮಹಿಳೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಸೆಕ್ಷನ್ 174 ಅಡಿಯಲ್ಲಿ ಕೇಸನ್ನು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಗೆಗಾಗಿ ವಲರ್‍ಮತಿ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

  • ವಿಡಿಯೋ: ಗಿಟಾರ್ ಬಾರಿಸುತ್ತಲೇ ಮೆದುಳು ಸರ್ಜರಿ ಮಾಡಿಸಿಕೊಂಡ ಬೆಂಗ್ಳೂರು ವ್ಯಕ್ತಿ

    ವಿಡಿಯೋ: ಗಿಟಾರ್ ಬಾರಿಸುತ್ತಲೇ ಮೆದುಳು ಸರ್ಜರಿ ಮಾಡಿಸಿಕೊಂಡ ಬೆಂಗ್ಳೂರು ವ್ಯಕ್ತಿ

    ಬೆಂಗಳೂರು: ವ್ಯಕ್ತಿಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೆದುಳು ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಅವರು ಗಿಟಾರ್ ಬಾರಿಸಿದ್ದಾರೆ.

    ಜುಲೈ 11 ರಂದು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ 37 ವರ್ಷದ ಅಭಿಷೇಕ್ ಪ್ರಸಾದ್ ಅವರಿಗೆ ಬ್ರೇನ್ ಸಕ್ರ್ಯೂಟ್ ಸರ್ಜರಿ ಮಾಡಲಾಗಿದೆ. ಈ ರೀತಿ ಸರ್ಜರಿ ನಡೆದಿರುವುದು ದೇಶದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ. ಅಭಿಷೇಕ್ ಅವರಿಗೆ ಗಿಟಾರ್ ಬಾರಿಸುವುದೆಂದರೆ ಅಚ್ಚುಮೆಚ್ಚು. ಆದ್ರೆ ಗಿಟಾರಿಸ್ಟ್ ಡಿಸ್ಟೋನಿಯಾ ಎಂಬ ನರಸಂಬಂಧಿ ಕಾಯಿಲೆಯಿಂದಾಗಿ ಇವರ ಬೆರಳುಗಳನ್ನು ಆಡಿಸಲು ಆಗುತ್ತಿರಲಿಲ್ಲ.

    ಅಭಿಷೇಕ್ ಅವರಿಗೆ ಆಪರೇಷನ್ ನಡೆದ ಅಷ್ಟೂ ಹೊತ್ತು ಎಚ್ಚರವಾಗಿಯೇ ಇದ್ದರು. ಗಿಟಾರ್ ಬಾರಿಸಲು ಪ್ರಯತ್ನಿಸಿದಾಗಲೇ ಈ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಯ ವೇಳೆಯೂ ಗಿಟಾರ್ ಬಾರಿಸಿದರು. ಯಾಕಂದ್ರೆ ರೋಗಿಯ ಪ್ರತಿಕ್ರಿಯೆಯಿಂದ ಎಲ್ಲಿ ಸರ್ಜರಿ ಮಾಡಬೇಕೋ ಆ ಗುರಿಯ ನಿರ್ದಿಷ್ಟ ಜಾಗ ತಿಳಿಯುವುದು ಮುಖ್ಯ ಎಂದು ವೈದ್ಯರು ವರದಿಗಾರರಿಗೆ ಹೇಳಿದ್ದಾರೆ.

    ಅಭಿಷೇಕ್ ಪ್ರಸಾದ್ ಬಿಹಾರ ಮೂಲದವರಾಗಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ಸಂತಸಗೊಂಡಿದ್ದಾರೆ. ವೈದ್ಯರು ಕೂಡ 100% ರಿಸಲ್ಟ್ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ. ನನಗೆ ಹಾಗೂ ವೈದ್ಯರಿಗಿಬ್ಬರಿಗೂ ಇದೊಂದು ಅದ್ಭುತ ಅನುಭವ. ನಾನೀಗ ತುಂಬಾ ಉತ್ಸುಕನಾಗಿದ್ದೇನೆ. ಕೊನೆಗೂ ನನ್ನ ಕನಸನ್ನ ಈಡೇರಿಸಿಕೊಳ್ಳಬಹುದು. ಒಂದು ತಿಂಗಳ ನಂತರ ನಾನು ಗುಣಮುಖವಾದ ಬಳಿಕ ನಾನು ಗಿಟಾರ್ ನುಡಿಸಬಹುದು ಎಂದು ಹೇಳಿದ್ದಾರೆ.

    ಮೊದಲಿಗೆ ನನ್ನ ಬೆರಳುಗಳು ಗಟ್ಟಿಯಾಗಿರುತ್ತಿದ್ದವು. ಒಂದು ತಂತಿಯಿಂದ ಮತ್ತೊಂದಕ್ಕೆ ಬದಲಿಸಬೇಕಾದ್ರೆ ಕಷ್ಟವಾಗ್ತಿತ್ತು. ಈಗ ನನ್ನ ಬೆರಳುಗಳು ಸಂಪೂರ್ಣವಾಗಿ ಹೇಳಿದಂತೆ ಕೇಳುತ್ತಿವೆ ಎಂದಿದ್ದಾರೆ. ಅಭಿಷೇಕ್ ಅವರ ಆಸ್ಪತ್ರೆ ಬಿಲ್ ಸುಮಾರು 2 ಲಕ್ಷ ರೂ. ಆಗಿದೆ.

  • ಮಹಿಳೆಯ ಹರಿದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯರು

    ಮಹಿಳೆಯ ಹರಿದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯರು

    ಬೆಂಗಳೂರು: ಮನುಷ್ಯನ ಹೃದಯ ಹರಿದು ಹೋದ್ರೆ ಆ ಮನುಷ್ಯ ಬದುಕೋದೇ ಕಷ್ಟ. ಆದರೆ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಈಗ ಅತೀ ಅಪರೂಪದ ಸಾಧನೆ ಮಾಡಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅವರ ಬದುಕಿನಲ್ಲಿ ನಗು ಮೂಡಿಸಿದ್ದಾರೆ.

    ಅಂದು ರಂಜಾನ್ ಹಬ್ಬ, ಮುಸ್ಲಿಮರ ಮನೆಯಲ್ಲೆಲ್ಲಾ ಸಂಭ್ರಮದ ವಾತಾವರಣ. 55 ವರ್ಷ ವಯಸ್ಸಿನ ಸಫೀನಾ ಬಾಯಿ ಅವರ ಮನೆಯಲ್ಲೂ ಹಬ್ಬದ ರಂಗು ಮೂಡಿತ್ತು. ಆದರೆ ಅವರ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ. ಅವರಿಗೆ ಅಂದು ಹೃದಯಾಘಾತ ಆಯಿತು. ಮನೆಯವರು ತಕ್ಷಣವೇ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದರು.

    ಸಫೀನಾ ಅವರನ್ನು ಪರೀಕ್ಷಿಸಿ ನೋಡಿದಾಗ ಅವರ ಹೃದಯ ಹರಿದು ಹೋಗಿರುವುದು ತಿಳಿದು ಬಂದಿತ್ತು. ತಕ್ಷಣವೇ ಡಾ. ತಮೀಮ್ ಮತ್ತು ಅವರ ತಂಡ ಸಫೀನಾಗೆ ಸರ್ಜರಿ ಮಾಡುವ ವ್ಯವಸ್ಥೆ ಮಾಡಿದರು.

    ಹೃದಯ ಹರಿದು ಹೋದ ರೋಗಿಗಳನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಸಾವನ್ನಪ್ಪುತ್ತಾರೆ ಅಥವಾ ಆಸ್ಪತ್ರೆಗೆ ಬಂದರೂ ಕೂಡ ಅಪರೇಷನ್ ಥಿಯೇಟರ್‍ಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆಯುತ್ತಾರೆ. ಆದರೆ ಅದೃಷ್ಟವೆಂಬಂತೆ ಸಫೀನಾ ಸರ್ಜರಿಯಿಂದ ಚೇತರಿಸಿಕೊಂಡು ಈಗ ಅವರು ಗುಣಮುಖರಾಗಿದ್ದಾರೆ ಅಂತಾರೆ ಇಲ್ಲಿನ ವೈದ್ಯರು.

    ಮತ್ತೊಂದು ಶಸ್ತ್ರ ಚಿಕಿತ್ಸೆ ಪಶ್ಚಿಮ ಬಂಗಾಳ ಮೂಲದ ಬರ್ಮನ್‍ಗೆ ಮಾಡಲಾಗಿದೆ. ಈಗ ಅವರಿಗೆ 21 ವರ್ಷ ವಯಸ್ಸು. ಅವರ ಹೃದಯದಲ್ಲಿನ ಒಂದು ಚೇಂಬರ್ ಹುಟ್ಟಿದಾಗಿನಿಂದಲೂ ಕೆಲಸ ಮಾಡುತ್ತಿರಲಿಲ್ಲ. ಆದರೆ ಈಗ ಬರ್ಮನ್‍ಗೆ ನಾಲ್ಕು ಚೇಂಬರ್‍ಗಳೂ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಸರ್ಜರಿ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಇಂತಹ ಸಮಸ್ಯೆ ಲಕ್ಷಕ್ಕೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಒಟ್ಟಾರೆ ಯಶಸ್ವಿ ಚಿಕಿತ್ಸೆಯಿಂದ ರೋಗಿಯ ಸಂಬಂಧಿಗಳು ವೈದ್ಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.