Tag: ಶಸ್ತ್ರಚಿಕಿತ್ಸೆ

  • ವೈದ್ಯರಿಂದ ದರ್ಶನ್, ದೇವರಾಜ್ X-RAY ಬಿಡುಗಡೆ: ಎಲ್ಲೆಲ್ಲಿ ಗಾಯವಾಗಿದೆ?

    ವೈದ್ಯರಿಂದ ದರ್ಶನ್, ದೇವರಾಜ್ X-RAY ಬಿಡುಗಡೆ: ಎಲ್ಲೆಲ್ಲಿ ಗಾಯವಾಗಿದೆ?

    ಮೈಸೂರು: ಕಾರ್ ಅಪಘಾತದಿಂದಾಗಿ ಗಾಯಗೊಂಡಿರುವ ದರ್ಶನ್ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ವೈದ್ಯರು ದರ್ಶನ್ ಮತ್ತು ದೇವರಾಜ್ ಅವರ ಎಕ್ಸ್ ರೇ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.

    ಕಾರ್ ಅಪಘಾತ ಸಂಭವಿಸಿದಾಗ ದರ್ಶನ್ ಅವರು ತಮ್ಮ ಬಲಗೈಯನ್ನು ಕಾರಿನ ಮುಂಭಾಗಕ್ಕೆ ಕೊಟ್ಟಿದ್ದಾರೆ. ಆಗ ಕೈಯಲ್ಲಿ ಹಾಕಿದ್ದ ಕಡಗ ಚುಚ್ಚಿ ಮೂಳೆ ಮುರಿದಿತ್ತು. ನಂತರ ಅವರನ್ನು ಮೈಸೂರಿನ ಹೊರವಲಯದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಡಾ. ಅಜಯ್ ಹೆಗ್ಡೆ ಮತ್ತು ಡಾ, ಶಣೈ ಅವರು ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ದರ್ಶನ್ ಕೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ. ಈಗ ವೈದ್ಯರು ದರ್ಶನ್ ಮತ್ತು ದೇವರಾಜ್ ಅವರಿಗೆ ಪೆಟ್ಟಾಗಿದ್ದ ಕೈಗಳ ಎಕ್ಸ್ ರೇಯನ್ನು ಬಿಡುಗಡೆ ಮಾಡಿದ್ದಾರೆ. ಎಕ್ಸ್ ರೇಯಲ್ಲಿ ದರ್ಶನ್ ಅವರ ಬಲಗೈಯಲ್ಲಿ ಕಡಗ ಚುಚ್ಚಿ ಮೂಳೆ ಮುರಿದಿರುವುದನ್ನು ಕಾಣಬಹುದಾಗಿದೆ. ದೇವರಾಜ್ ಅವರ ಎಕ್ಸ್ ರೇಯಲ್ಲಿ ಎಡಗೈಯ ಎರಡು ಬೆರಳುಗಳ ಮುಂದೆ ಗಾಯವಾಗಿರುವುದನ್ನು ಕಾಣಬಹುದಾಗಿದೆ.

    ಈ ಕುರಿತು ವೈದ್ಯ ಡಾ. ಉಪೇಂದ್ರ ಶಣೈ ಪ್ರತಿಕ್ರಿಯಿಸಿ, ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲ. ಶೀಘ್ರವೇ ಅವರನ್ನು ಶಸ್ತ್ರಚಿಕಿತ್ಸೆಯ ಬಳಿಕ ಐಸಿಯಗೆ ಸ್ಥಳಾಂತರಿಸಲಾಗುತ್ತದೆ. ಒಂದು ದಿನ ಆಸ್ಪತ್ರೆಯಲ್ಲೇ ಅವರು ವಿಶ್ರಾಂತಿ ಪಡೆಯಲಿದ್ದು, ಆರೋಗ್ಯ ಸುಧಾರಿಸಿದ ಮೇಲೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬಲಗೈಗೆ ರಾಡ್ ಅಳವಡಿಸಿ 24 ಹೊಲಿಗೆ- ಯಜಮಾನನ ಶಸ್ತ್ರಚಿಕಿತ್ಸೆ ಯಶಸ್ವಿ

    ಬಲಗೈಗೆ ರಾಡ್ ಅಳವಡಿಸಿ 24 ಹೊಲಿಗೆ- ಯಜಮಾನನ ಶಸ್ತ್ರಚಿಕಿತ್ಸೆ ಯಶಸ್ವಿ

    ಮೈಸೂರು: ಅಪಘಾತದಿಂದಾಗಿ ಬಲಗೈ ಮೂಳೆ ಮುರಿದುಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಅಂತ ಆಸ್ಪತ್ರೆಯವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಕೊಲಂಬಿಯಾ ಏಷಿಯಾ ಆಸ್ಪತ್ರೆಯು ನಟ ದರ್ಶನ್ ಹಾಗೂ ಇತರರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಶಸ್ತ್ರಚಿಕಿತ್ಸೆ ನಡೆಸಿ ದರ್ಶನ್ ಕೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ. ಅಲ್ಲದೇ ಅವರನ್ನು ಶೀಘ್ರವೇ ವಾರ್ಡ್ ಗೆ ಸ್ಥಳಾಂತರಿಸುತ್ತಿರುವುದಾಗಿ ಆಸ್ಪತ್ರೆ ತಿಳಿಸಿದೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತ

    ಸೋಮವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಥೋನಿ ಎಂಬವರು ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇವರಾಜ್ ಅವರಿಗೆ ಎಡ ಬೆರಳುಗಳ ಮೂಳೆ ಮುರಿದಿದ್ದು, ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದೆ. ಅಲ್ಲದೇ ಪ್ರಜ್ವಲ್ ದೇವರಾಜ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಹಾಗೂ ರಾಯ್ ಆಂಥೋನಿ ಎಂಬವರಿಗೆ ಬಲಗೈ ಮೂಳೆ ಮುರಿದಿದ್ದು, ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ. ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಕಾರ್ ಅಪಘಾತದ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಹೀಗಂದ್ರು

    ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ. ಉಪೇಂದ್ರ ಶಣೈ, ದರ್ಶನ್‍ರವರ ಬಲಗೈ ಮೂಳೆ ಮುರಿದಿದ್ದು, ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲ. ಶೀಘ್ರವೇ ಅವರನ್ನು ಶಸ್ತ್ರಚಿಕಿತ್ಸೆಯ ಬಳಿಕ ಐಸಿಯಗೆ ಸ್ಥಳಾಂತರಿಸಲಾಗುತ್ತದೆ. ಒಂದು ದಿನ ಆಸ್ಪತ್ರೆಯಲ್ಲೇ ಅವರು ವಿಶ್ರಾಂತಿ ಪಡೆಯಲಿದ್ದು, ಆರೋಗ್ಯ ಸುಧಾರಿಸಿದ ಮೇಲೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪಘಾತದ ಬಳಿಕ ನಾಪತ್ತೆಯಾಗಿದ್ದ ದರ್ಶನ್ ಕಾರ್ ಪತ್ತೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಿಂದ ಬೆಂಗಳೂರಿಗೆ ರಸ್ತೆಯ ಮೂಲಕ ಸಾಗಿತು ಜೀವಂತ ಹೃದಯ

    ಮೈಸೂರಿನಿಂದ ಬೆಂಗಳೂರಿಗೆ ರಸ್ತೆಯ ಮೂಲಕ ಸಾಗಿತು ಜೀವಂತ ಹೃದಯ

    ಬೆಂಗಳೂರು: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಿಂದ ನಗರದ ರಾಮಯ್ಯ ಆಸ್ಪತ್ರೆಗೆ ರಸ್ತೆಯ ಮೂಲಕವೇ ಜೀವಂತ ಹೃದಯ ಸಾಗಿಸಲಾಗಿದೆ.

    ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕಾರ್ಡಿಯೋ ಮೈಯೋಪತಿ ಖಾಯಿಲೆಯಿಂದ 19 ವರ್ಷದ ಯುವಕನ ಬಳಲುತ್ತಿದ್ದ. ಹೀಗಾಗಿ ಪ್ರಪ್ರಥಮ ಬಾರಿಗೆ ರಸ್ತೆಯ ಮೂಲಕ ಮೈಸೂರಿನಿಂದ ನಗರದ ರಾಮಯ್ಯ ಆಸ್ಪತ್ರೆಗೆ ಹೃದಯವನ್ನು ರವಾನಿಸಲಾಗಿದೆ.

    ರಾಮಯ್ಯ ಆಸ್ಪತ್ರೆಯ ಇತಿಹಾಸದಲ್ಲಿ ಇದು 20ನೇ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಈ ಕುರಿತು ರಾಮಯ್ಯ ಆಸ್ಪತ್ರೆಯ ಹೃದಯಕಸಿ ತಜ್ಞರಾದ ಡಾ.ನಾಗಮಲ್ಲೇಶ್ ಮಾತನಾಡಿ, ಮೈಸೂರಿನಲ್ಲಿ ಬ್ರೈನ್‍ಡೆಡ್ ಆದ ರೋಗಿಯ ಹೃದಯವನ್ನು ಇಂದು ನಮ್ಮ ಆಸ್ಪತ್ರೆಯ ರೋಗಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

    ಇದೇ ಮೊದಲ ಬಾರಿಗೆ ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯವನ್ನ ರಸ್ತೆ ಮಾರ್ಗವಾಗಿ ತಂದು ಕಸಿ ಮಾಡಿದ್ದು, ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಪೊಲೀಸರು ಗ್ರೀನ್ ಕಾರಿಡಾರ್ ಮಾಡುವ ಮೂಲಕ ಜೀವಂತ ಹೃದಯವೂ ಮೈಸೂರಿನಿಂದ ಬೆಂಗಳೂರಿಗೆ ತಲುಪಲು ಸಹಕರಿಸಿದ್ದಾರೆ.

  • 9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

    ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.

  • ಉಪ್ಪಿಟ್ಟು ತಿನ್ನುತ್ತ 3 ಸೆಂಮೀ ಸೂಜಿಯನ್ನೇ ನುಂಗಿದ್ದ ಅಜ್ಜಿ!

    ಉಪ್ಪಿಟ್ಟು ತಿನ್ನುತ್ತ 3 ಸೆಂಮೀ ಸೂಜಿಯನ್ನೇ ನುಂಗಿದ್ದ ಅಜ್ಜಿ!

    ಹಾವೇರಿ: ಉಪ್ಪಿಟ್ಟು ತಿನ್ನುವಾಗ ಅಜ್ಜಿಯೊಬ್ಬರು 3 ಸೆಂಮೀ ಸೂಜಿಯನ್ನೇ ನುಂಗಿದ್ದು, ವೈದ್ಯರು ಒಂದು ತಿಂಗಳ ನಂತರ ಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ಬಳಿಯ ಬಸಾಪುರ ಗ್ರಾಮದ ಅಜ್ಜಿ ಪಾರವ್ವ ಬಾವಿಕಟ್ಟಿ (70) ಉಪ್ಪಿಟ್ಟು ತಿನ್ನುವಾಗ 3 ಸೆಂಮೀ. ಉದ್ದದ ಸೂಜಿ ಗಂಟಲಿನಲ್ಲಿ ಸಿಕ್ಕಾಕೊಂಡು ತೊಂದರೆ ಅನುಭವಿಸಿದ್ದಾಳೆ. ಕಳೆದ ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಏನೋ ಚುಚ್ಚಿರಬೇಕೆಂದು ಪಾರವ್ವ ಅದನ್ನು ನಿರ್ಲಕ್ಷ ಮಾಡಿದ್ದಾಳೆ.

    ಸ್ವಲ್ಪ ದಿನಗಳ ನಂತರ ಅಜ್ಜಿ ಪಾರವ್ವಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹಾಗಾಗಿ ಹಾವೇರಿಯ ಮಲ್ಲಾಡದ ರುದ್ರಮ್ಮ ಮೆಮೋರಿಯಲ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯ ವೈದ್ಯ ಡಾ.ಗಿರೀಶ್ ಮಲ್ಲಾಡದ್ ಎಂಡೋಸ್ಕೋಪಿ ಚಿಕಿತ್ಸೆ ಮಾಡಿ 3 ಸೆಂಮೀ ಉದ್ದದ ಸೂಜಿಯನ್ನ ಪತ್ತೆಹಚ್ಚಿದ್ದಾರೆ. ಅಲ್ಲದೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಯಶಸ್ವಿಯಾಗಿ ಸೂಜಿಯನ್ನು ಹೊರತೆಗೆದಿದ್ದಾರೆ.

    ಒಂದು ತಿಂಗಳ ಹಿಂದೆ ಮೂರು ಸೆಂ.ಮೀ. ಉದ್ದದ ಸೂಜಿ ಗಂಟಲಿನಲ್ಲಿ ಸಿಕ್ಕಿಕೊಂಡು ಅಜ್ಜಿ ಪಡಬಾರದ ಪಾಡು ಪಟ್ಟಿದ್ದರು. ಆದರೆ ವೈದ್ಯರು ಮಾಡಿದ ಚಮತ್ಕಾರಿ ಚಿಕಿತ್ಸೆಯಿಂದ ಪಾರವ್ವ ಗುಣಮುಖರಾಗಿ ತಮ್ಮ ಸ್ವಗ್ರಾಮಕ್ಕೆ ತೆರಳಿದಳು.

  • ಮದುವೆಯಾಗಲು ಮಾಂತ್ರಿಕನ ಮಾತು ಕೇಳಿ ಮೊಬೈಲ್ ಕೀ, ವೈರ್ ನುಂಗಿದ!

    ಮದುವೆಯಾಗಲು ಮಾಂತ್ರಿಕನ ಮಾತು ಕೇಳಿ ಮೊಬೈಲ್ ಕೀ, ವೈರ್ ನುಂಗಿದ!

    ಲಕ್ನೋ: ಮದುವೆಯಾಗಬೇಕೆಂದು ವ್ಯಕ್ತಿಯೊಬ್ಬ ಮಾಂತ್ರಿಕನ ಮಾತು ಕೇಳಿ ಮೊಬೈಲ್ ಕೀ, ವೈರ್ ಹಾಗೂ ಇನ್ನಿತರೆ ವಸ್ತುಗಳನ್ನು ನುಂಗಿದ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

    ಅಜಯ್ ದ್ವಿವೇದಿ(42) ಮೊಬೈಲ್ ನುಂಗಿದ ವ್ಯಕ್ತಿ. ಅನಾರೋಗ್ಯ ಸಮಸ್ಯೆ ಆತನ ಮದುವೆಗೆ ಅಡ್ಡಿಯಾಗಿತ್ತು. ನನಗೆ ಅನಾರೋಗ್ಯ ಉಂಟಾಗಲು ಯಾರೋ ಮಾಟಮಂತ್ರ ಮಾಡಿಸಿದ್ದಾರೆಂದು ಮಾಂತ್ರಿಕನ ಹತ್ತಿರ ಸಲಹೆ ಪಡೆಯಲು ಹೋಗಿದ್ದಾನೆ.

    ಅಜಯ್ ಮಾಂತ್ರಿಕನ ಹತ್ತಿರ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ. ಆಗ ಮಾಂತ್ರಿಕ ಆತನಿಗೆ ಕೀ, ಬ್ಯಾಟರಿ, ಚೂಪಾದ ವೈರ್, ಗ್ಲಾಸ್ ಹಾಗೂ ಇತರೆ ವಸ್ತುಗಳನ್ನು ನುಂಗಲು ಹೇಳಿದ್ದಾನೆ. ಮಾಂತ್ರಿಕನ ಸಲಹೆಯನ್ನು ಅಜಯ್ ಒಪ್ಪಿಕೊಂಡಿದ್ದಾನೆ.

    ಅಜಯ್ ಮಾಂತ್ರಿಕ ಹೇಳಿದ್ದ ಆ ವಸ್ತುಗಳನ್ನು ನುಂಗಿದ್ದಾನೆ. ಇದಾದ ಬಳಿಕ ಹೊಟ್ಟೆ ನೋವು ಉಂಟಾಗಿ ಆತ ಖಾಸಗಿ ಆಸ್ಪತ್ರೆಗೆ ಹೋಗಿದ್ದಾನೆ. ವೈದ್ಯರು ಆತನಿಗೆ ಎಕ್ಸ್-ರೇ ತೆಗೆಸಲು ಹೇಳಿದ್ದಾರೆ. ಅಜಯ್ ಎಕ್ಸ್-ರೇ ರಿಪೋರ್ಟ್ ನೋಡಿ ವೈದ್ಯರು ದಂಗಾಗಿ ಹೋಗಿದ್ದಾರೆ.

    ಲೋಹದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು. ಶಸ್ತ್ರಚಿಕಿತ್ಸೆ ಮಾಡಿ ಅಜಯ್ ದೇಹದಲ್ಲಿದ್ದ ಲೋಹದ ವಸ್ತುಗಳನ್ನು ವೈದ್ಯರು ಈಗ ಹೊರತೆಗೆದಿದ್ದಾರೆ.

  • ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

    ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

    ತುಮಕೂರು: ಮಹಿಳೆಯೊರ್ವಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಬರೋಬ್ಬರಿ 99 ಕಲ್ಲುಗಳನ್ನು ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ.

    ಸಲ್ಮಾ ಭಾನು (45) ಎಂಬುವರ ದೇಹದಲ್ಲಿ ಪತ್ತೆಯಾದ ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ನಗರದ ಶಾಂತಿನಗರದ ನಿವಾಸಿಯಾದ ಸಲ್ಮಾ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂದಿದೆ.

    ತಕ್ಷಣ ಡಾ. ವಾಸಿಂ ಹಾಗೂ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಪಿತ್ತಕೋಶದಲ್ಲಿದ್ದ 99 ಕಲ್ಲುಗಳನ್ನು ಹೊರಕ್ಕೆ ತೆಗೆದಿದ್ದಾರೆ. ಹೊಟ್ಟೆಯಲಿ 8 ಮಿಲಿ ಮೀಟರ್ ನಿಂದ 20 ಮಿಲಿ ಮೀಟರ್ ವರೆಗಿನ ಕಲ್ಲುಗಳು ಪತ್ತೆಯಾಗಿತ್ತು.

    ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡದೇ ಇದ್ದರೆ ಸಲ್ಮಾ ಅವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಕ್ಕೆ ಸಾರ್ವಜನಿಕರು ವೈದ್ಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

  • ಬಾರ್ಬಿಯಂತೆ ಕಾಣಲು ತಿಂಗಳಿಗೆ ಭಾರೀ ಹಣ ಖರ್ಚು ಮಾಡ್ತಾಳೆ ಈ ಯುವತಿ!- ವಿಡಿಯೋ

    ಬಾರ್ಬಿಯಂತೆ ಕಾಣಲು ತಿಂಗಳಿಗೆ ಭಾರೀ ಹಣ ಖರ್ಚು ಮಾಡ್ತಾಳೆ ಈ ಯುವತಿ!- ವಿಡಿಯೋ

    ಪ್ರೇಗ್: ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.

    ಗೇಬ್ರಿಯೆಲಾ ಜಿರಾಕೊವಾ (18) ಬಾರ್ಬಿಯಂತೆ ಕಾಣಲು ಶಸ್ತ್ರಚಿಕಿತ್ಸೆ ಮಾಡಿಕೊಂಡ ಯುವತಿ. ಗೇಬ್ರಿಯೆಲಾ 16 ವರ್ಷದಿಂದ ಇರುವಾಗಲೇ ಬಾರ್ಬಿಯ ಹುಚ್ಚು ಜಾಸ್ತಿಯಿತ್ತು. ಬಾರ್ಬಿಯಂತೆಯೇ ಉದ್ದನೆಯ ಕೂದಲು, ಕಣ್ಣು ರೆಪ್ಪೆ, ಹಾಗೂ ತುಟ್ಟಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾಳೆ.

    ಗೇಬ್ರಿಯೆಲಾಗೆ ಈಗ 18 ವರ್ಷವಾಗಿದ್ದು ಆಕೆಯ ಹತ್ತಿರ 300 ಬಾರ್ಬಿಗಳಿವೆ. ಅಷ್ಟೇ ಅಲ್ಲದೇ ಬಾರ್ಬಿಯಂತೆ ಕಾಣಲು ತನ್ನ ಸ್ತನವನ್ನು ಕೂಡ ಹೆಚ್ಚಿಸಿಕೊಂಡಿದ್ದಾಳೆ. ಬಾರ್ಬಿಯಂತೆ ಸೌಂದರ್ಯ ಪಡೆಯಲು ಆಕೆ ಮತ್ತಷ್ಟು ಸೌಂದರ್ಯವರ್ಧಕ ಶಸ್ತಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾಳೆ. ಈ ಶಸ್ತ್ರಚಿಕಿತ್ಸೆಯಲ್ಲಿ ಆಕೆಗೆ ಬಟ್ ಇಂಪ್ಲಾಂಟ್ಸ್, ರಿಬ್ ರಿಮೂವಲ್ಸ್ ಹಾಗೂ ಸ್ತನ ಹೆಚ್ಚಿಸಿಕೊಳ್ಳುವಂತೆ ಮಾಡಲಾಗುತ್ತದೆ. ಈ ಎಲ್ಲ ಶಸ್ತ್ರಚಿಕಿತ್ಸೆಯಿಂದ ಜೀವಂತವಾದ ಬಾರ್ಬಿ ಡಾಲ್ ನಂತೆ ಗೇಬ್ರಿಯೆಲಾ ಆಗಲಿದ್ದಾಳೆ.

    ಬೇರೆ ಜೀವಂತ ಬಾರ್ಬಿ ಡಾಲ್ ಹಾಗೂ ನನ್ನ ಹತ್ತಿರ ಇರುವ ಬಾರ್ಬಿ ಡಾಲ್ ನೋಡಿ ಈ ರೀತಿ ಶಸ್ತ್ರಚಿಕಿತ್ಸೆ ಮಾಡಕೊಳ್ಳಲು ನನಗೆ ಸ್ಪೂರ್ತಿ ಆಯ್ತು. ನಾನು ಚಿಕ್ಕವಳು ಆಗಿದ್ದಾಗಿನಿಂದ ನನ್ನ ಹತ್ತಿರ ಸಾಕಷ್ಟು ಬಾರ್ಬಿ ಡಾಲ್‍ಗಳಿವೆ. ನಂತರ ನಾನು ನಿಜವಾದ ಬಾರ್ಬಿ ಡಾಲ್ ನನ್ನು ನೋಡಿದೆ. ಆಗ ಇದು ನನಗಾಗಿಯೇ ಇದೆ ಎಂದುಕೊಂಡೆ. ನನಗೆ ನೈಸರ್ಗಿಕ ಲುಕ್‍ನಲ್ಲಿ ಯಾವುದೇ ನಂಬಿಕೆ ಇಲ್ಲ. ನೈಸರ್ಗಿಕ ಸೌಂದರ್ಯ ಈಗ ಇರುವುದಿಲ್ಲ ಎಂದು ಹೇಳಿದ್ದಾಳೆ.

    ಬಾರ್ಬಿಯಂತೆ ಮೇಕಪ್ ಮಾಡಿಕೊಳ್ಳಲು ನನಗೆ ಪ್ರತಿದಿನ 3 ಗಂಟೆಗಳು ಬೇಕಾಗುತ್ತದೆ. ಬಾರ್ಬಿಯಂತೆ ಕಾಣಲು ನಾನು ಸಂಪೂರ್ಣವಾಗಿ ಮೇಕಪ್ ಮಾಡಿಕೊಳ್ಳಲೇಬೇಕು. ತುಂಬಾ ಜನ ನನ್ನ ಈ ರೀತಿ ನೋಡಿ ಎನೇನೋ ಹೇಳಿದ್ದರು. ಆದರೆ ನಾನು ನನ್ನ ಮನಸ್ಸಿನ ಮಾತು ಕೇಳಿದೆ. ನನ್ನ ತಾಯಿ ಕೂಡ ನನ್ನ ನಿರ್ಧಾರಕ್ಕೆ ಜೊತೆಯಿದ್ದಾರೆ. ಆದರೆ ಅವರಿಗೆ ನನ್ನ ಆರೋಗ್ಯದ ಬಗ್ಗೆ ಸ್ವಲ್ಪ ಭಯವಿದೆ ಎಂದು ಗೇಬ್ರಿಯೆಲಾ ತಿಳಿಸಿದ್ದಾಳೆ.

     

  • ವ್ಯಕ್ತಿಯ ತಲೆಯಿಂದ 1.8 ಕೆಜಿ ತೂಕದ ಗೆಡ್ಡೆ ತೆಗೆದ ವೈದ್ಯರು!

    ವ್ಯಕ್ತಿಯ ತಲೆಯಿಂದ 1.8 ಕೆಜಿ ತೂಕದ ಗೆಡ್ಡೆ ತೆಗೆದ ವೈದ್ಯರು!

    ಮುಂಬೈ: ವ್ಯಕ್ತಿಯ ತಲೆಯಲ್ಲಿ ಬೆಳೆದಿದ್ದ 1.8 ಕೆಜಿ ತೂಕದ ಗೆಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಮುಂಬೈನ ನಾಯರ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    31 ವರ್ಷದ ಬಟ್ಟೆ ವ್ಯಾಪಾರಿ ಸಂತಲಾಲ್ ಪಾಲ್ ಅವರ ತಲೆಯ ಮೇಲೆ ದೈತ್ಯ ಗೆಡ್ಡೆ ಬೆಳೆದು, ಅವರಿಗೆ ಎರಡು ತಲೆಗಳಿದ್ದಂತೆ ಕಾಣುತ್ತಿತ್ತು. ವೈದ್ಯರು 7 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ 7.873 ಕೆಜಿ ತೂಕದ ಆ ಗೆಡ್ಡೆಯನ್ನ ತೆಗೆದಿದ್ದಾರೆ.

    ಇಷ್ಟು ದೈತ್ಯ ತಲೆಯ ಗೆಡ್ಡೆಯನ್ನ ಹೊರತೆಗೆದಿರುವುದು ವಿಶ್ವದಲ್ಲೇ ಮೊದಲಿರಬಹುದು ಎಂದು ಕೂಡ ಹೇಳಲಾಗಿದೆ. ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಗೆಡ್ಡೆಯ ತೂಕ 1.4 ಕೆಜಿ ಇತ್ತು.

    ಸಂತಲಾಲ್ ಉತ್ತರಪ್ರದೇಶ ನಿವಾಸಿಯಾಗಿದ್ದು, ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿತ್ತು. ಫೆಬ್ರವರಿ ಆರಂಭದಲ್ಲಿ ಅವರು ನಾಯರ್ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಅವರ ತಲೆಯ ಮೇಲೆ ಊತ, ಭಾರ ಹಾಗೂ ತಲೆ ನೋವು ಇತ್ತು. ಪರಿಶೀಲನೆಯ ಬಳಿಕ 30*30*20 ಸೆ.ಮೀ ನ ಗೆಡ್ಡೆ ಬೆಳೆದಿರುವುದು ಗೊತ್ತಾಗಿ ವೈದ್ಯರೇ ಅಚ್ಚರಿಪಟ್ಟಿದ್ದರು. ಇಷ್ಟು ದೊಡ್ಡ ಗೆಡ್ಡೆಯನ್ನ ವೈದ್ಯರು ಕೂಡ ಈ ಹಿಂದೆ ನೋಡಿರಲಿಲ್ಲ ಎನ್ನಲಾಗಿದೆ.

    ಸಂತಲಾಲ್ ಅವರನ್ನ ಮೆದುಳಿನ ಸಿಟಿ ಹಾಗೂ ಎಮ್‍ಆರ್ ಸ್ಕ್ಯಾನ್‍ಗೆ ಒಳಪಡಿಸಲಾಗಿತ್ತು. ಗೆಡ್ಡೆಯ ರಕ್ತಚಲನೆಯ ಬಗ್ಗೆ ಅಧ್ಯಯನ ಮಾಡಲು ವಿಶೇಷ ಸಿಟಿ ಆಂಜಿಯೋಗ್ರಾಫಿ ಮಾಡಲಾಗಿತ್ತು. ತನಿಖೆಯ ಬಳಿಕ ನಾವು ಫೆಬ್ರವರಿ 14ರಂದು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಇದು ಅತ್ಯಂತ ಅಪಾಯಕರ ಶಸ್ತ್ರಚಿಕಿತ್ಸೆಯಾಗಿತ್ತು. ಇಷ್ಟು ದೊಡ್ಡ ಗೆಡ್ಡೆ ಬೆಳೆಯುವುದು ತುಂಬಾ ವಿರಳ ಹಾಗೂ ವೈದ್ಯಕೀಯ ಸವಾಲು ಎಂದು ಪ್ರಾಧ್ಯಾಪಕ ಹಾಗೂ ನರಶಸ್ತ್ರಚಿಕಿತ್ಸೆ ಮುಖ್ಯಸ್ಥರಾದ ಡಾ ತತ್ರಿಮೂರ್ತಿ ನಾಡಕರ್ಣಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ 11 ಬಾಟಲಿ ರಕ್ತ ನೀಡಲಾಗಿದ್ದು, 7 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆದಿದೆ.

  • ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

    ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

    ಉಡುಪಿ: ರಾಜ್ಯದ ಅತೀದೊಡ್ಡ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಆರನೇ ತರಗತಿ ವಿದ್ಯಾರ್ಥಿನಿಯನ್ನು ಉಡುಪಿಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

    ಉಡುಪಿಯ ಬೈಂದೂರಿನ ಗ್ರಾಮದ ಆರನೇ ತರಗತಿ ವಿದ್ಯಾರ್ಥಿನಿ ಅನುಶಾ. ಈಕೆ ಗಂಭೀರವಾದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಹೀಗಾಗಿ ಗುರುವಾರ ಅನುಶಾಳನ್ನು ಬೈಂದೂರು ತಾಲೂಕಿನ ಅರೆಶೀರೂರಿನಿಂದ ಉಡುಪಿ-ಮಂಗಳೂರು ಮಾರ್ಗವಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಉಡುಪಿ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಅನಾರೋಗ್ಯ ಪೀಡಿತೆಯನ್ನು ಬೆಂಗಳೂರಿಗೆ ರವಾನೆ ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಸುಮಾರು 140 ಕಿಲೋ ಮೀಟರ್ ದೂರದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ರಸ್ತೆಯನ್ನು ನಿರ್ಮಾಣ ಮಾಡಿದ್ದರು.

    ಒಂದು ಪೊಲೀಸ್ ವಾಹನ ಮತ್ತು ಆಂಬುಲೆನ್ಸ್ ಅತೀ ವೇಗದಲ್ಲಿ ಮಂಗಳೂರಿನ ಬಜ್ಪೆ ನಿಲ್ದಾಣಕ್ಕೆ ತಲುಪಿ ಅಲ್ಲಿಂದ 1 ಗಂಟೆಯ ಜೆಟ್ ಏರ್ ವೇಸ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಅನುಶಾಳನ್ನು ರವಾನೆ ಮಾಡಲಾಯಿತು. ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್ ನಲ್ಲಿ ಆಪರೇಷನ್ ನಡೆಸಲಾಗುವುದು. ಬೆಂಗಳೂರು ವೈದ್ಯರು ಉಡುಪಿಗೆ ಬಂದು ಶಸ್ತ್ರಚಿಕಿತ್ಸೆ ಕೊಡಲು 48 ಗಂಟೆ ತಗಲುವುದರಿಂದ ವೈದ್ಯರು ಅನುಶಾಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

    ಮಧ್ಯಾಹ್ನ ಸುಮಾರು 2 ಗಂಟೆಗೆ ಬಂದ ಅನುಶಾಗೆ ಬೆಂಗಳೂರಿನಲ್ಲಿ ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಅನುಶಾಳಿಗೆ ಚಿಕಿತ್ಸೆ ಶುರುಮಾಡಲಾಗಿದೆ. ಅರೆಶೀರೂರು ಹೈಸ್ಕೂಲಿನ ಮುಖ್ಯ ಶಿಕ್ಷಕರ ಮಗಳು ಅನುಶಾ ಕಡು ಬಡತನದಿಂದ ಬಂದವಳು. ಆಕೆಯ ಶಸ್ತ್ರಚಿಕಿತ್ಸೆಗೆ ಹಣಕಾಸಿನ ಅವಶ್ಯಕತೆಯಿದೆ ಎಂದು ಕುಟುಂಬ ಮನವಿ ಮಾಡಿಕೊಂಡಿದೆ.

    ಬೈಂದೂರಿನಿಂದ ಕುಂದಾಪುರ- ಉಡುಪಿ, ಪಡುಬಿದ್ರೆ ಮಾರ್ಗವಾಗಿ ಮೂಲ್ಕಿವರೆಗೆ ಉಡುಪಿ ಜಿಲ್ಲಾ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಉಡುಪಿಯ ಗಡಿ ದಾಟಿ ಮಂಗಳೂರಿಗೆ ಬಂದ ಕೂಡಲೇ ಪೊಲೀಸರು ಅಸಹಾಕಾರ ತೋರಿದ್ದಾರೆ. ಮಾಮೂಲಿಯಂತೆ ಟ್ರಾಫಿಕ್ ರಸ್ತೆಯಲ್ಲಿ ಆಂಬುಲೆನ್ಸ್ ಗೆ ಕಿರಿಕಿರಿ ಮಾಡಿದೆ. ವೇಗವಾಗಿ ಮಂಗಳೂರು ವಿಮಾನ ನಿಲ್ದಾಣ ರೀಚ್ ಆಗಬೇಕಿದ್ದ  ಆಂಬುಲೆನ್ಸ್ ತಡವಾಗಿ ತಲುಪಿತು.

    ಮಂಗಳೂರು ಜಿಲ್ಲಾ ಪೊಲೀಸರು ಅನುಶಾ ಇದ್ದ ಆಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ. ವಾಹನ ದಟ್ಟಣೆಯ ನಡುವೆ ನಡುವೆ ಆಂಬುಲೆನ್ಸ್ ನಿಧಾನಗತಿಯಲ್ಲಿ ವಿಮಾನ ನಿಲ್ದಾಣ ತಲುಪದ್ದು, ಸುಮಾರು 15 ನಿಮಿಷಗಳ ಕಾಲ ನಾವು ವಿಳಂಬವಾಗಿ ವಿಮಾನ ನಿಲ್ದಾಣ ತಲುಪಬೇಕಾಯಿತು. ಏರ್ ಪೋರ್ಟ್ ನಿಂದ ಹತ್ತಾರು ಫೋನ್ ಕರೆಗಳು ಬಂದವು ಎಂದು ಆಂಬುಲೆನ್ಸ್ ಜೊತೆಗಿದ್ದ ರವಿಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.