Tag: ಶಸ್ತ್ರಚಿಕಿತ್ಸೆ

  • ವೈದ್ಯರ  ಎಡವಟ್ಟಿನಿಂದ ಬಾಲಕಿ ಸಾವು

    ವೈದ್ಯರ ಎಡವಟ್ಟಿನಿಂದ ಬಾಲಕಿ ಸಾವು

    ಬೆಳಗಾವಿ: ಜಿಲ್ಲಾ ಆಸ್ಪತ್ರೆಯ ವೈದ್ಯರ ಹಾಗೂ ಬಿಮ್ಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಬಿಮ್ಸ್ ಡೈರೆಕ್ಟರ್ ಕಿರಣ್‍ಕುಮಾರ್ ಪಾಟೀಲ್ ಆರೋಪಿಸಿದರು.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ ತಾಲೂಕಿನ ಡೋರಗಲ್ಲಿಯ ಶ್ರದ್ಧಾ ಗಂಟಲು ನೋವಿನಿಂದ ಬಳಲುತ್ತಿದ್ದಳು. ಡಿಸೆಂಬರ್ 21 ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಡಿಸೆಂಬರ್ 23 ರಂದು ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದರು.

    ಗಂಟಲಿನ ಟಾನ್ಸಿಲ್ಸ್ ಶಸ್ತ್ರಚಿಕಿತ್ಸೆಗೆ ಡಿಸೆಂಬರ್ 21ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗಂಟಲು, ಮೂಗು ವಿಭಾಗದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುತ್ತಾರೆ. ಆದರೆ ಅರವಳಿಕೆ ಮದ್ದು ನೀಡಿದ ತಕ್ಷಣ ಬಾಲಕಿ ಮೃತಪಟ್ಟಿದ್ದಾಳೆ ಎಂದು ಉಡಾಫೆ ಉತ್ತರ ಹೇಳುತ್ತಾರೆ. ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕು. ಪೋಷಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

  • ರಾಜ್ಯದಲ್ಲಿ ಮೊದಲ ಪ್ರಕರಣ – ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿದ ಕೊಪ್ಪಳದ ಸರ್ಕಾರಿ ವೈದರು

    ರಾಜ್ಯದಲ್ಲಿ ಮೊದಲ ಪ್ರಕರಣ – ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿದ ಕೊಪ್ಪಳದ ಸರ್ಕಾರಿ ವೈದರು

    ಕೊಪ್ಪಳ: ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

    ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ ಬದಲಾವಣೆ(ಟೋಟಲ್ ನೀ ರಿಪ್ಲೇಸ್‍ಮೆಂಟ್) ಶಸ್ತ್ರಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಡಿ ಹೊಸಪೇಟೆ ತಾಲೂಕಿನ ಗ್ರಾಮೀಣ ಭಾಗದ ಹಿರಿಯರಾದ ಶಾರದಮ್ಮ ಹಾಗೂ ಗಂಗಾವತಿಯ ಸಿದ್ದಪ್ಪ ಪೂಜಾರಿ ಅವರಿಗೆ ಈ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವಡಿ ತಿಳಿಸಿದ್ದಾರೆ.

    ಸುಮಾರು ಐದು ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರಾದ ಸಲಾವುದ್ದೀನ್, ರೇಣುಕಾರಾಧ್ಯ, ಸುಜಾತ, ಶಿವರಾಜ ಪಾಟೀಲ್ ಅವರು ಭಾಗಿಯಾಗಿದ್ದರು. ಈಗಾಗಲೇ ಹತ್ತಾರು ಅಧುನಿಕ ವೈದ್ಯ ಸೌಲಭ್ಯ, ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆ ಎಂಬ ಖ್ಯಾತಿ ಗಳಿಸಿರುವ ಆಸ್ಪತ್ರೆ ಈಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

    ಈ ಸರ್ಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದಿದ್ದು, ಈ ಹಿಂದೆ ಪಬ್ಲಿಕ್ ಹೀರೋಗಳಾಗಿದ್ದ ಇಲ್ಲಿನ ಮುಖ್ಯ ವೈದ್ಯಧಿಕಾರಿ ಈಶ್ವರ ಸವಡಿ ಮತ್ತು ಅವರ ಸಿಬ್ಬಂದಿಯ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಎದೆಯೊಳಗೆ ಕಬ್ಬಿಣದ ಸರಳು ಹೊಕ್ಕಿದ್ರೂ ಸಾವು ಗೆದ್ದ ಲಾರಿ ಚಾಲಕ

    ಎದೆಯೊಳಗೆ ಕಬ್ಬಿಣದ ಸರಳು ಹೊಕ್ಕಿದ್ರೂ ಸಾವು ಗೆದ್ದ ಲಾರಿ ಚಾಲಕ

    – ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ರಾಯಚೂರು: ಲಾರಿ ಅಪಘಾತದಲ್ಲಿ ಕಬ್ಬಿಣದ ಸರಳು ಎದೆಯೊಳಗೆ ಹೊಕ್ಕಿ ಹೊರಬಂದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರ ತಂಡದ ಸತತ ಒಂದೂವರೆ ಗಂಟೆಯ ಶಸ್ತ್ರಚಿಕಿತ್ಸೆಯಿಂದ ಚಾಲಕ ಕೋಟೇಶ್ವರ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯವಾಡ ಮೂಲದ ಕೋಟೇಶ್ವರ ರಾವ್ ಚಲಾಯಿಸುತ್ತಿದ್ದ ಲಾರಿ ಗುರುಮಿಠಕಲ್ ಬಳಿ ರಾತ್ರಿ ವೇಳೆ ಅಪಘಾತಕ್ಕೀಡಾಗಿತ್ತು. ಈ ವೇಳೆ ಕಬ್ಬಿಣದ ಹಾರೆ ರೀತಿಯ ಸರಳು ಕೋಟೇಶ್ವರ ಅವರ ದೇಹದೊಳಗೆ ಹೊಕ್ಕಿತ್ತು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಮಾಡಲು ವೈದ್ಯರಿಂದ ಸಾಧ್ಯವಾಗಿಲ್ಲ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕೂಡಲೇ ಸ್ಪಂದಿಸಿದ ಜನರಲ್ ಸರ್ಜನ್ ಡಾ. ವಿಜಯ್ ರಾಥೋಡ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಕೋಟೇಶ್ವರ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ವೈದ್ಯರ ತಂಡ ಸಂತಸ ವ್ಯಕ್ತಪಡಿಸಿದೆ. ರಿಮ್ಸ್ ಆಸ್ಪತ್ರೆ ಅಂದರೆ ಮೂಗುಮುರಿಯುತ್ತಿದ್ದ ಸಾರ್ವಜನಿಕರು ಸಹ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಡಾ.ವಿಜಯ್ ರಾಥೋಡ್ ನೇತೃತ್ವದ ತಂಡ ಮೂರು ವರ್ಷದ ಕೆಳಗೆ ಇದೇ ರೀತಿಯ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು. ಗ್ರಾನೈಟ್ ಸ್ಫೋಟದ ವೇಳೆ ವ್ಯಕ್ತಿಯೋರ್ವನ ದೇಹದೊಳಗೆ ಹೊಕ್ಕಿದ್ದ ಒಂದು ಕೆ.ಜಿ ತೂಕದ ಕಲ್ಲನ್ನ ಯಶಸ್ವಿಯಾಗಿ ಹೊರತೆಗೆದಿದ್ದರು. ಅದಾದ ಬಳಿಕ ಕೋಟೇಶ್ವರ ಅವರ ಪ್ರಕರಣವೇ ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ಡಾ. ವಿಜಯ್ ರಾಥೋಡ್ ಹೇಳಿದ್ದಾರೆ.

  • ಮೊಬೈಲ್ ಟಾರ್ಚಿನಲ್ಲಿ ಇಂಜೆಕ್ಷನ್ ಚುಚ್ಚಿ ವೈದ್ಯರಿಂದ ಶಸ್ತ್ರಚಿಕಿತ್ಸೆ

    ಮೊಬೈಲ್ ಟಾರ್ಚಿನಲ್ಲಿ ಇಂಜೆಕ್ಷನ್ ಚುಚ್ಚಿ ವೈದ್ಯರಿಂದ ಶಸ್ತ್ರಚಿಕಿತ್ಸೆ

    ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ವೈದ್ಯರು ಟಾರ್ಚ್ ಬೆಳಕಿನಲ್ಲಿ ಮಹಿಳೆಗೆ ಆಪರೇಷನ್ ಮಾಡಿರುವ ಆಘಾತಕಾರಿ ಘಟನೆ ಇಂದು ನಡೆದಿದೆ.

    ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ನಾಗ್ಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮಹಿಳೆಯರಿಗೆ ಟ್ಯೂಬೆಕ್ಟಮಿ (ಸಂತಾನ ತಡೆ ಚಿಕಿತ್ಸೆ) ಆಪರೇಷನ್ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ವಿದ್ಯುತ್ ಇಲ್ಲದ ಕಾರಣ ಮಹಿಳೆಯೊಬ್ಬರಿಗೆ ಟರ್ಚ್ ಬೆಳಕಿನ ಮೂಲಕ ವೈದ್ಯರು ಆಪರೇಷನ್ ಮಾಡಿದ್ದಾರೆ.

    ವರದಿಯ ಪ್ರಕಾರ ಮಹಿಳೆಯನ್ನು ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗುವ ಮುನ್ನ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಇಂಜೆಕ್ಷನ್ ನೀಡಲಾಗಿದೆ. ನಂತರ ಆಕೆಯನ್ನು ಆಪರೇಷನ್ ಥಿಯೇಟರ್ ಒಳಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಇದ್ದ ಬ್ಯಾಟರಿಯನ್ನು ಬಳಸಿ ಆಪರೇಷನ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶದ ಆರೋಗ್ಯ ಸಚಿವ ತುಳಸಿ ಸಿಲವತ್, ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ಸೌಲಭ್ಯಗಳ ಕೊರತೆ ಇದೆ. ಆದರೆ ನಮ್ಮ ಆಡಳಿತದಲ್ಲಿ ಅದನ್ನು ನಿವಾರಿಸಲು ಪ್ರಯತ್ನ ಮಾಡುತ್ತಿದ್ದೆವೆ. ಇದು ಒಂದು ಗಂಭೀರವಾದ ಘಟನೆ ನಾವು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಎರಡು ತಿಂಗಳ ಮಗುವಿನ ಬೆನ್ನಿನ ಮೇಲೆ ಬೆಳೆದ ಬೆರಳು

    ಎರಡು ತಿಂಗಳ ಮಗುವಿನ ಬೆನ್ನಿನ ಮೇಲೆ ಬೆಳೆದ ಬೆರಳು

    – ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ ವೈದ್ಯರು

    ಭೋಪಾಲ್: ಎರಡು ತಿಂಗಳ ಬಾಲಕಿಯ ಬೆನ್ನಿನ ಮೇಲೆ ಬೆರಳು ಕಾಣಿಸಿಕೊಂಡ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

    ಖಾರ್ಗೋನ್ ಜಿಲ್ಲೆಯ ಬಾರ್ವಾ ಸಮೀಪ ಹಳ್ಳಿಯ ಎರಡು ತಿಂಗಳ ಹೆಣ್ಣು ಮಗವಿಗೆ ಇಂತಹ ಅಪರೂಪ ಕಾಯಿಲೆ ಕಾಣಿಸಿಕೊಂಡಿದೆ. ಹುಟ್ಟಿನಿಂದಲೇ ಮಗುವಿನ ಹಿಂಭಾಗದಲ್ಲಿ ಬೆರಳಿನಂತೆ ಕಾಣುವ ಉಂಡೆ ಇತ್ತು. ಆದರೆ ಪೋಷಕರು ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ. ಇದನ್ನೂ ಓದಿ: 19 ಕಾಲ್ಬೆರಳು, 12 ಕೈಬೆರಳಿರುವ ಅಜ್ಜಿಯನ್ನ ಮಾಟಗಾತಿ ಎಂದು ನಿಂದಿಸಿದ ಜನ

    ಮಗು ಜನಿಸಿದ ಎರಡು ತಿಂಗಳಿಗೆ ಹಿಂಭಾಗದಲ್ಲಿದ್ದ ಗಂಟು ಬೆರಳಿನ ಆಕಾರದಲ್ಲಿ ಬೆಳೆಯಲು ಆರಂಭಿಸಿತ್ತು. ಇದರಿಂದ ಗಾಬರಿಗೊಂದ ಪೋಷಕರು ಹೆಣ್ಣು ಮಗುವಿನೊಂದಿಗೆ ಎಂವೈ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ವಿಭಾಗವನ್ನು ತಲುಪಿದರು. ಆಗ ವೈದ್ಯರು ಎಂಆರ್‌ಐ ಟೆಸ್ಟ್ ಮಾಡಿದಾಗ, ಟೆಥರ್ಡ್ ಕಾರ್ಡ್ ಎಂಬ ಆಂತರಿಕ ಕಾಯಿಲೆ ಇರುವುದು ಕಂಡುಬಂದಿದೆ. ಇದರಲ್ಲಿ, ಒಂದು ದೊಡ್ಡ ರಕ್ತನಾಳ (ಬೆನ್ನುಹುರಿ) ಅದರ ಗೊತ್ತುಪಡಿಸಿದ ಸ್ಥಳಕ್ಕಿಂತ ಕೆಳಗೆ ಅಂಟಿಕೊಂಡಿದೆ ಎನ್ನುವುದನ್ನು ವೈದ್ಯರು ಗುರುತಿಸಿದ್ದರು. ಇದನ್ನೂ ಓದಿ: ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ಒಂದು ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಈ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಕಾಲುಗಳಲ್ಲಿ ದೌರ್ಬಲ್ಯ, ವಕ್ರತೆ ಮತ್ತು ಅಡಚಣೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ಅಪರೂಪದ ರೋಗ ಎಂದು ಎಂವೈ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ನರಶಸ್ತ್ರಚಿಕಿತ್ಸೆ ವೈದ್ಯರಾದ ರಾಕೇಶ್ ಗುಪ್ತಾ ಮತ್ತು ಡಾ. ಜಾಫರ್ ಶೇಖ್ ಅವರ ನೇತೃತ್ವದ ತಂಡವು ಹೆಣ್ಣು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸೊಂಟದಿಂದ ಬೆರಳು-ಕೊಂಡಿಯನ್ನು ಬೇರ್ಪಡಿಸುವ ಮೂಲಕ ಬೆನ್ನುಹುರಿಯನ್ನು ಸರಿಪಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ ನಾಲ್ಕು ದಿನಗಳ ನಂತರ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಿದ್ದಾರೆ. ಇದನ್ನೂ ಓದಿ: 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

  • ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ನವದೆಹಲಿ: ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ವ್ಯಕ್ತಿಯೊಬ್ಬರ ದೇಹದಿಂದ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

    56 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡ ಇತ್ತು. ಇದು ರೋಗಿಯ ಇಡೀ ಹೊಟ್ಟೆ ಭಾಗವನ್ನು ಆಕ್ರಮಿಸಿಕೊಂಡಿದ್ದು, ತೀವ್ರ ನೋವು ಅನುಭವಿಸುತ್ತಿದ್ದ ರೋಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮೂತ್ರಪಿಂಡದ ಸಮಸ್ಯೆ ಬಗ್ಗೆ ತಿಳಿದು ಬಂದಿದೆ. ರೋಗಿಯ ದೇಹದಲ್ಲಿ 2 ನವಜಾತ ಶಿಶುಗಳ ತೂಕದ ಮೂತ್ರಪಿಂಡ ಇರುವುದು ಪತ್ತೆಯಾಗಿದೆ. ಹೀಗಾಗಿ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಕೊನೆಗೂ ಈ ರೋಗಪೀಡಿತ ಮೂತ್ರಪಿಂಡವನ್ನು ರೋಗಿ ದೇಹದಿಂದ ಹೊರತೆಗೆದಿದ್ದಾರೆ.

    ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿರುವ ಮೂತ್ರಪಿಂಡ ಸಾಮಾನ್ಯವಾಗಿ 120 ರಿಂದ 150 ಗ್ರಾಂ ಇರುತ್ತದೆ. ಆದರೆ ಈ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮೂತ್ರಪಿಂಡ ಮಾತ್ರ ಬರೋಬ್ಬರಿ 7.4 ಕೆಜಿಯಷ್ಟು ತೂಕ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ವೈದ್ಯರಾದ ಡಾ.ಸಚಿನ್ ಕಥುರಿಯಾ ಮಾತನಾಡಿ, ಭಾರತದಲ್ಲಿ ಈವರೆಗೆ ಇಂತಹ ದೊಡ್ಡ ಪ್ರಮಾಣದ ರೋಗಪೀಡಿತ ಮೂತ್ರಪಿಂಡ ಹೊರತೆಗೆದ ನಿದರ್ಶನ ಇಲ್ಲ. ಇಷ್ಟು ತೂಕದ ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿರುವುದು ಪ್ರಪಂಚದಲ್ಲೇ ಇದು ಮೂರನೇ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.

    ರೋಗಿಯು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ಈ ಹಿಂದೆ 2006ರಲ್ಲಿ ಅವರಿಗೆ ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ಬಂದರೆ ಮೂತ್ರಪಿಂಡದ ತುಂಬ ದ್ರವ ತುಂಬಿ, ಅದು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ಅವುಗಳು ಊದಿಕೊಳ್ಳುತ್ತವೆ. ಬಳಿಕ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಿಗೆ 40 ವಯಸ್ಸಿಗೆ ಮೂತ್ರಪಿಂಡ ವೈಫಲ್ಯವಾಗುತ್ತದೆ.

    ಸದ್ಯ ನಾವು ರೋಗಿಯ ಎಡ ಭಾಗದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದೇವೆ. ಬಲಗಡೆಯ ಮೂತ್ರಪಿಂಡದಲ್ಲೂ ಸಮಸ್ಯೆ ಇದೆ, ಆದರೆ ಸದ್ಯ ರೋಗಿಗೆ ಅದರಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಒಂದು ವೇಳೆ ಬಲ ಭಾಗದ ಮೂತ್ರಪಿಂಡದಲ್ಲೂ ಸಮಸ್ಯೆ ಹೆಚ್ಚಾದರೆ ಅದನ್ನು ಕೂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಬೇಕಾಗುತ್ತದೆ. ಆಗ ರೋಗಿಗೆ ಮೂತ್ರಪಿಂಡ ಕಸಿ ಮಾಡುವವರೆಗೂ ಅವರು ಸಂಪೂರ್ಣ ಡಯಾಲಿಸಿಸ್ ಮೇಲೆಯೇ ಅವಲಂಬಿಸಿರಬೇಕು ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ.

    ಈ ಹಿಂದೆ ವೈದ್ಯರ ತಂಡ ಬಾರೀ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಎರಡು ಪ್ರಕರಣ ನಡೆದಿತ್ತು. ಅಮೆರಿಕದಲ್ಲಿ ಓರ್ವ ರೋಗಿಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿತ್ತು. ಬಳಿಕ ನೆದರ್‌ಲ್ಯಾಂಡ್ಸ್‌ನಲ್ಲಿ ರೋಗಿಯೋರ್ವನ ದೇಹದಲ್ಲಿದ್ದ 8.7 ಕೆಜಿ ತೂಕದ ಮೂತ್ರಪಿಂಡ ಹೊರತೆಗೆಯಲಾಗಿತ್ತು.

  • ಸಾವು ಬದುಕಿನ ಮಧ್ಯೆ ಹೋರಾಟ – ತಂದೆಗೆ ಲಿವರ್ ನೀಡಿ ಮರುಜನ್ಮ ನೀಡಿದ ಮಗಳು

    ಸಾವು ಬದುಕಿನ ಮಧ್ಯೆ ಹೋರಾಟ – ತಂದೆಗೆ ಲಿವರ್ ನೀಡಿ ಮರುಜನ್ಮ ನೀಡಿದ ಮಗಳು

    ಚೆನ್ನೈ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ.

    ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಲಿವರ್ ಡ್ಯಾಮೇಜ್ ಆಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಂದೆಗೆ ಮಗಳ ಲಿವರ್ ನ ಒಂದು ಭಾಗವನ್ನು ಕಸಿ ಮಾಡುವಲ್ಲಿ ಚೆನ್ನೈನ ಜಿಇಎಂ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಕೇವಲ ಪಿತ್ತಜನಕಾಂಗದ ಒಂದು ಭಾಗವನ್ನು ಮಾತ್ರ ಕಸಿ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಇಎಂ ಆಸ್ಪತ್ರೆಯ ವೈದ್ಯರು, ರೋಗಿಗೆ ಲಿವರ್ ನ ಒಂದು ಭಾಗ ಮಾತ್ರ ಡ್ಯಾಮೇಜ್ ಆಗಿ ಕೊನೆಯ ಹಂತ ತಲುಪಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಲಿವರ್ ಸಿಗುತ್ತಾ ಅಂತ ದಾನಿಗಳಿಗೆ ಕಾಯುತ್ತಿದ್ದೆವು. ಆದರೆ ದಾನಿಗಳು ಸಿಗದ ಕಾರಣ ಮಗಳು ಹತಾಶೆಗೊಂಡು ತಂದೆಯ ಸ್ಥಿತಿಯನ್ನು ನೋಡಿ ನಾನೇ ನನ್ನ ಅಂಗವನ್ನು ದಾನ ಮಾಡುತ್ತೇನೆ ಎಂದು ಮಗಳು ಮುಂದೆ ಬಂದಳು ಎಂದು ಹೇಳಿದ್ದಾರೆ.

    ಮಗಳು ಈ ನಿರ್ಧಾರಕ್ಕೆ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಆಕೆ ಇನ್ನೂ ಮದುವೆಯಾಗಿಲ್ಲ. ಶಸ್ತ್ರಚಿಕಿತ್ಸೆ ಮಾಡಿದರೆ ಹೊಟ್ಟೆ ಭಾಗದಲ್ಲಿ ಮಾರ್ಕ್ ಆಗುತ್ತದೆ. ಈ ರೀತಿ ಆದರೆ ಮುಂದೆ ಈಕೆಯನ್ನು ಯಾರು ವಿವಾಹ ಆಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಆದರೆ ನಾವು ಆಕೆ ಕುಟುಂಬದವರಿಗೆ ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದ್ದೇವೆ. ಮತ್ತು ಆದರ ಕಾರ್ಯ ವಿಧಾನದ ಬಗ್ಗೆಯೂ ಅರ್ಥವಾಗುವಂತೆ ವಿವರಿಸಿ ಹೇಳಿದಾಗ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು ಎಂದು ವೈದ್ಯರು ಹೇಳಿದ್ದಾರೆ.

    ಇದೇ ಮೊದಲ ಬಾರಿಗೆ ಭಾರತದಲ್ಲಿ ಡಾ. ಸಿ ಪಳನಿವೆಲು ಮತ್ತು ಅವರ ತಂಡವು ಲ್ಯಾಪರೊಸ್ಕೋಪಿಕ್ ಪಿತ್ತಜನಕಾಂಗದ ಕಸಿ ಮಾಡಿದೆ. ಲಿವರಿನ ಬಲ ಅರ್ಧವನ್ನು ಮೂರೂವರೆ ಗಂಟೆಗಳಲ್ಲಿ ಯಶಸ್ವಿಯಾಗಿ ಬೇರ್ಪಡಿಸಿ ನಂತರ ತಂದೆಗೆ ಮಗಳ ಪಿತ್ತಜನಕಾಂಗದ ಅರ್ಧ ಭಾಗವನ್ನು ಜೋಡಣೆ ಮಾಡಲಾಗಿದೆ ಎಂದು ವೈದ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ವೈದ್ಯರ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಈ ಕೆಲಸದ ಬಗ್ಗೆ ವಿವರಿಸಿದ್ದಾರೆ. ವೈದ್ಯರ ಈ ಸಾಧನೆಯನ್ನು ಮೆಚ್ಚಿರುವ ಪಳನಿಸ್ವಾಮಿ ಅವರು ವೈದ್ಯರ ಜೊತೆ ತಂದೆಗೆ ಅಂಗವನ್ನು ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

  • 1 ಗ್ರಾಂ ತೂಕದ ಮೀನಿನ ಆಪರೇಷನ್‍ಗೆ 9 ಸಾವಿರ ಖರ್ಚು

    1 ಗ್ರಾಂ ತೂಕದ ಮೀನಿನ ಆಪರೇಷನ್‍ಗೆ 9 ಸಾವಿರ ಖರ್ಚು

    ಇಂಗ್ಲೆಂಡ್: ಬರೀ ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಜಲಚರಗಳಿಗೂ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡುವಷ್ಟರ ಮಟ್ಟಿಗೆ ವೈದ್ಯ ಲೋಕ ಬೆಳೆದು ನಿಂತಿದೆ. ಯುಕೆಯಲ್ಲಿ ಕೇವಲ 1 ಗ್ರಾಂ ತೂಕದ ಮೀನಿಗೆ ವೈದ್ಯರು ಆಪರೇಷನ್ ಮಾಡಿ ಯಶಸ್ವಿಯಾಗಿರೋದು ಅದಕ್ಕೆ ಒಂದೊಳ್ಳೆ ಉದಾಹರಣೆಯಾಗಿದೆ.

    ಹೌದು. ಇಂಗ್ಲೆಂಡಿನ ಬ್ರಿಸ್ಟಸ್‍ನ ವೈದ್ಯೆ ಸೋನ್ಯಾ ಮೈಲ್ಸ್ ಇಂತಹದೊಂದು ಅಚ್ಚರಿಯ ಕೆಲಸ ಮಾಡಿದ್ದಾರೆ. ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್‍ಗೆ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ಯುಕೆ ಮಹಿಳೆಯೊಬ್ಬರಿಗೆ ಈ 1 ಗ್ರಾಂ ತೂಕದ ಗೋಲ್ಡ್ ಫಿಶ್ ಅನ್ನು ಯಾರೋ ಗಿಫ್ಟ್ ಮಾಡಿದ್ದರು. ಆದ್ದರಿಂದ ಮೀನಿನ ಒಡತಿ ಅದನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಮೀನು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಒಡತಿ, ಅದನ್ನು ವೈದ್ಯರ ಬಳಿ ಕರೆತಂದಿದ್ದರು.

    ಆಗ ಅದರ ಹೊಟ್ಟೆಯಲ್ಲಿ ಟ್ಯೂಮರ್ ಆಗಿರುವುದು ಬೆಳಕಿಗೆ ಬಂದು, ಮೀನಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಒಡತಿ ಒಪ್ಪಿಗೆ ನೀಡಿದಾಗ, ವೈದ್ಯೆ ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ಮೀನಿನ ಹೊಟ್ಟೆಯಲ್ಲಿದ್ದ ಟ್ಯೂಮರ್ ಹೊರತೆಗೆದು ದಾಖಲೆ ಮಾಡಿದ್ದಾರೆ. ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಹೊಗ್ಗಳಿಕೆ ಪಡೆದುಕೊಂಡಿದೆ.

    ಒಂದು ಸಣ್ಣ ಪೈಪ್ ಮೂಲಕ ಮೀನಿನಲ್ಲಿದ್ದ ಟ್ಯೂಮರ್‌ನ್ನು ವೈದ್ಯೆ ಹೊರ ತೆಗೆದಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಲು ಬರೋಬ್ಬರಿ 40 ನಿಮಿಷಗಳ ಕಾಲ ವೈದ್ಯರು ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಗೋಲ್ಡನ್ ಫಿಶ್‍ಗೆ ಮಾರುಕಟ್ಟೆಯಲ್ಲಿ 89 ರೂ. ಬೆಲೆ ಇದೆ. ಆದರೆ ಇದರ ಶಸ್ತ್ರಚಿಕಿತ್ಸೆಗೆ ಮೀನಿನ ಒಡತಿ ಬರೋಬ್ಬರಿ 9 ಸಾವಿರ ರೂ. ಖರ್ಚು ಮಾಡಿದ್ದಾರೆ. ಸದ್ಯ ಈ ಮೀನು ಆರೋಗ್ಯವಾಗಿದೆ ಎಂದು ಒಡತಿ ತಿಳಿಸಿದ್ದಾರೆ.

  • 4 ವರ್ಷದ ಬಾಲಕನಿಗೆ ಎಸ್‍ಡಿಎಂ ನಾರಾಯಣ ಹೃದಯಾಲಯದಿಂದ ಉಚಿತ ಶಸ್ತ್ರ ಚಿಕಿತ್ಸೆ

    4 ವರ್ಷದ ಬಾಲಕನಿಗೆ ಎಸ್‍ಡಿಎಂ ನಾರಾಯಣ ಹೃದಯಾಲಯದಿಂದ ಉಚಿತ ಶಸ್ತ್ರ ಚಿಕಿತ್ಸೆ

    ಧಾರವಾಡ: ಹೃದಯದ ಬಡಿತದಲ್ಲಿ ವಿಪರೀತ ಏರುಪೇರಾಗಿ ಸಾವು ಬದುಕಿನ ಮಧ್ಯೆ ಬಾಲಕ ಹೋರಾಡುತ್ತಿದ್ದ ಬಾಲಕನಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನಾರಾಯಣ ಹೃದಯಾಲಯ ಮೆಚ್ಚುಗೆಗೆ ಪಾತ್ರವಾಗಿದೆ.

    ಸಾಮಾನ್ಯವಾಗಿ 4 ರಿಂದ 5 ವರ್ಷದ ಮಕ್ಕಳ ಹೃದಯ ಬಡಿತ ನಿಮಿಷಕ್ಕೆ 100 ಮೇಲೆ ಇರುತ್ತೆ. ಆದರೆ ದಾಂಡೇಲಿಯ 4 ವರ್ಷದ ಬಾಲಕನ ಹೃದಯ ನಿಮಿಷಕ್ಕೆ 35 ರಿಂದ 40 ಬಾರಿ ಮಾತ್ರ ಬಡಿದುಕೊಳ್ಳುತಿತ್ತು. ಇಂಥ ಬಾಲಕನ ಹೃದಯ ಶಸ್ತ್ರ ಚಿಕಿತ್ಸೆಯನ್ನ ಉಚಿತವಾಗಿ ಮಾಡುವ ಮೂಲಕ ಧಾರವಾಡದ ಎಸ್‍ಡಿಎಂ ನಾರಾಯಣ ಹೃದಯಾಲಯ ಬಾಲಕನಿಗೆ ಮತ್ತೆ ಜೀವದಾನ ಕೊಟ್ಟಿದೆ.

    ಕಳೆದ ಕೆಲ ದಿನಗಳ ಹಿಂದೆ ದಾಂಡೇಲಿಯ ಪ್ರಕಾಶ ಮತ್ತು ಅಶ್ವಿನಿ ದಂಪತಿಯ ನಾಲ್ಕು ವರ್ಷದ ಪುತ್ರ ಅಮೋಘನಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು. ಇದರಿಂದ ಅವನಿಗೆ ಕ್ರಮೇಣ ತೂಕ ಕಡಿಮೆಯಾಗಿ ಊಟ ಮಾಡಲಾಗದೇ ಬಳಲುತಿದ್ದ.

    ನಂತರ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿದ್ದು, ಶಸ್ತ್ರ ಚಿಕಿತ್ಸೆ ಮಾಡಿ, ಫೇಸ್ ಮೇಕರ್ ಕಸಿ ಮಾಡಿದ್ದಾರೆ. ಸದ್ಯ ಮಗು ಎಲ್ಲ ಮಕ್ಕಳಂತೆ ಆಟವಾಡುತ್ತಿದ್ದು, ಮೊದಲಿನಂತೆ ಊಟ ಮಾಡುತ್ತಿದ್ದಾನೆ. ಇದೇ ಶಸ್ತ್ರ ಚಿಕಿತ್ಸೆಯನ್ನು ಬೇರೆ ಆಸ್ಪತ್ರೆಗಳಲ್ಲಿ ಮಾಡಿಸಿದ್ದರೆ ನಮಗೆ 2 ಲಕ್ಷ ರೂ. ಖರ್ಚು ಬರುತಿತ್ತು. ಆದರೆ ಇಲ್ಲಿ ಬಿಪಿಎಲ್ ಕಾರ್ಡ್ ಇರುವುದರಿಂದ ಉಚಿತವಾಗಿ ಆಪರೇಷನ್ ಆಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

  • ಕುತ್ತಿಗೆಯ ಶಸ್ತ್ರಚಿಕಿತ್ಸೆ ನಂತ್ರ ಆಸ್ಪತ್ರೆಯಿಂದ ಅಮಿತ್ ಶಾ ಡಿಸ್ಚಾರ್ಜ್

    ಕುತ್ತಿಗೆಯ ಶಸ್ತ್ರಚಿಕಿತ್ಸೆ ನಂತ್ರ ಆಸ್ಪತ್ರೆಯಿಂದ ಅಮಿತ್ ಶಾ ಡಿಸ್ಚಾರ್ಜ್

    ಅಹಮದಾಬಾದ್: ಇಂದು ಆರೋಗ್ಯ ತಪಾಸಣೆಗಾಗಿ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸ್ಚಾರ್ಜ್ ಆಗಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್‍ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದ ಅಮಿತ್ ಶಾ ಸಣ್ಣ ಪ್ರಮಾಣದಲ್ಲಿ ಕುತ್ತಿಗೆ ಭಾಗದಲ್ಲಿದ್ದ ಗುಳ್ಳೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿ ಸಂಜೆಯ ವೇಳೆಗೆ ಮನೆಗೆ ಮರಳಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಬಿಜೆಪಿ ಪಕ್ಷದ ಮಾಧ್ಯಮ ಇಲಾಖೆ, ಅಮಿತ್ ಶಾ ಅವರು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದರು. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಯ ನಂತರ ಸುಮಾರು ಮಧ್ಯಾಹ್ನ 12:30 ರ ವೇಳೆಗೆ ಅವರನ್ನು ಡಿಸ್ಚಾಜ್ ಮಾಡಲಾಗಿದೆ. ಈಗ ಅವರು ನಗರದ ಎಸ್‍ಜಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದಾರೆ ಎಂದು ತಿಳಿಸಿದೆ.

    ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಅಹಮದಾಬಾದ್‍ಗೆ ಬಂದಿರುವ ಅಮಿತ್ ಶಾ, ನಾಳೆ ದೆಹಲಿಗೆ ಮರಳಿ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.