Tag: ಶಸ್ತ್ರಚಿಕಿತ್ಸೆ

  • ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

    ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

    ಚಿಕ್ಕಮಗಳೂರು: ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಭಾರೀ ಗಾತ್ರದ ನಾಗರಹಾವಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಗೋಪಾಲಾಚಾರ್ ಅವರು ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಭೂಮಿಯೊಳಗಿದ್ದ ಬೃಹತ್ ಗಾತ್ರದ ನಾಗರಹಾವು ಸಿಲುಕಿಕೊಂಡಿದೆ. ನೇಗಿಲಿಗೆ ಸಿಕ್ಕ ನಾಗರಹಾವು ಬಿಡಿಸಿಕೊಳ್ಳಲಾಗದೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಹಾವಿನ ಸ್ಥಿತಿ ಕಂಡ ಜಮೀನಿನ ಮಾಲೀಕ ಗೋಪಾಲಾಚಾರ್, ಕೂಡಲೇ ಕುದುರೆಗುಂಡಿಯ ಉರಗತಜ್ಞ ಹರೀಂದ್ರಾಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಹರೀಂದ್ರ, ನೇಗಿಲಿಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ಬಿಡಿಸಿ ಸ್ಥಳೀಯರಾದ ಅರುಣ್ ಹಾಗೂ ಸಾಜು ಅವರ ಸಹಾಯದಿಂದ ಎನ್.ಆರ್.ಪುರದ ಪಶು ಆಸ್ಪತ್ರೆಗೆ ತಂದಿದ್ದಾರೆ. ಪಶು ಆಸ್ಪತ್ರೆ ವೈದ್ಯ ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಹಾವು ಸುಮಾರು 11 ವರ್ಷದ್ದು. ಈ ಬೃಹತ್ ನಾಗರಹಾವು ಹಾವು ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ್ದರಿಂದ ಹಾವಿನ ತಲೆ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹಾವಿನ ಹೊಟ್ಟೆ ಭಾಗದಲ್ಲಿ ಸುಮಾರು ಒಂದು ಇಂಚಿನಷ್ಟು ಹೊಲಿಗೆ ಹಾಕಿದ್ದಾರೆ.

    ಬೆನ್ನಿನ ಒಂದು ಎಲುಬು ಮುರಿದಿದ್ದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಹಾವಿಗೆ ಸುಮಾರು ಮೂರ್ನಾಲ್ಕು ದಿನಗಳ ಚಿಕಿತ್ಸೆಯ ಅಗತ್ಯವಿದ್ದು, ಪಶು ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಹಾವನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇಡಬೇಕು, ಹಾವಿಗೆ ಮೂರು ಆ್ಯಂಟಿಬಯೋಟಿಕ್ ಹಾಕಬೇಕೆಂದು ಎಂದು ವೈದ್ಯರು ಹರೀಂದ್ರಾ ಅವರಿಗೆ ತಿಳಿಸಿದ್ದಾರೆ.

  • ಶಸ್ತ್ರಚಿಕಿತ್ಸೆಗೆ ಬಂದವನಿಗೆ ಕೊರೊನಾ- ವೈದರೂ ಸೇರಿ 22 ಮಂದಿ ಕಿಮ್ಸ್ ಸಿಬ್ಬಂದಿ ಕ್ವಾರಂಟೈನ್

    ಶಸ್ತ್ರಚಿಕಿತ್ಸೆಗೆ ಬಂದವನಿಗೆ ಕೊರೊನಾ- ವೈದರೂ ಸೇರಿ 22 ಮಂದಿ ಕಿಮ್ಸ್ ಸಿಬ್ಬಂದಿ ಕ್ವಾರಂಟೈನ್

    ಹುಬ್ಬಳ್ಳಿ: ಧಾರವಾಡದ ಹೊಸಯಲ್ಲಾಪೂರ ಕೋಳಿಕೆರೆಯ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಪ್ರಕರಣ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಕಿಮ್ಸ್ ಸಿಬ್ಬಂದಿಗೂ ಆತಂಕವನ್ನು ತಂದೊಡ್ಡಿದೆ.

    ಒಂದೆಡೆ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಈ ಸೋಂಕು ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ. ಕಳೆದ ಏಪ್ರಿಲ್ 30ರಂದು ಬೇರೆ ರೋಗ ಲಕ್ಷಣಗಳುಳ್ಳ ಈ ವ್ಯಕ್ತಿ ಸಿವಿಲ್ ಆಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪಡೆದಿದ್ದಾನೆ. ಅಲ್ಲದೆ ಹೊಟ್ಟೆ ಹಾಗೂ ಲಿವರ್ ಸಂಬಂಧಿಸಿದ ಕಾಯಿಲೆ ಹಿನ್ನೆಲೆಯಲ್ಲಿ ಮೇ 01ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ಮೇ 07ರಂದು ಸೋಂಕು ದೃಢಪಟ್ಟಿದ್ದು, ಕಿಮ್ಸ್ ಸಿಬ್ಬಂದಿಗೆ ಆತಂಕವನ್ನುಂಟು ಮಾಡಿದೆ.

    ಸೋಂಕಿತನಿಗೆ ಪಿರಿನೋನೈಟಸ್ (ಹೊಟ್ಟೆ ಹಾಗೂ ಲಿವರ್ ಸಂಬಂಧಿತ ಕಾಯಿಲೆ) ಆಪರೇಷನ್ ಮಾಡಿದ ವೈದ್ಯರಲ್ಲಿ ಆತಂಕ ಹೆಚ್ಚಾಗಿದ್ದು, ಸೋಂಕಿತನಿಗೆ ಆಪರೇಷನ್ ಮಾಡಿದ 12 ಡಾಕ್ಟರ್ ಹಾಗೂ 6 ಪಿಜಿ ವಿದ್ಯಾರ್ಥಿಗಳು ಹಾಗೂ ನಾಲ್ಕು ನರ್ಸ್ ಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಿದ ಶಸ್ತ್ರಚಿಕಿತ್ಸೆ ವಿಭಾಗವನ್ನು ಕೂಡ ಸಿಲ್‍ಡೌನ್ ಮಾಡಲಾಗಿದೆ. ಧಾರವಾಡದ ಹೊಸ ಯಲ್ಲಾಪೂರದ 35 ವರ್ಷದ ವ್ಯಾಪಾರಿಯಿಂದ ಕಿಮ್ಸ್ ಸಿಬ್ಬಂದಿಗೆ ಆತಂಕ ಸೃಷ್ಟಿಯಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತನಿಗೆ ಆಪರೇಷನ್ ನಂತರ ಕೊರೊನಾ ಸೋಂಕು ದೃಢಪಟ್ಟಿದ್ದು, ಈಗ ಕಿಮ್ಸ್ ಸಿಬ್ಬಂದಿಗೆ ಕೊರೊನಾ ಭಯ ನಿರ್ಮಾಣವಾಗಿದೆ.

  • ಸಾವಿನ ಅಂಚಲ್ಲಿದ್ದ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ ಪಶುವೈದ್ಯರು

    ಸಾವಿನ ಅಂಚಲ್ಲಿದ್ದ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ ಪಶುವೈದ್ಯರು

    ಹುಬ್ಬಳ್ಳಿ: ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ವಿಶ್ವದ ವೈದ್ಯರು ಮನುಕುಲದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಶುವೈದ್ಯರ ತಂಡ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ ಹೃದಯಸ್ಪರ್ಶಿ ಪ್ರಸಂಗ ಹುಬ್ಬಳ್ಳಿಯ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ಜರುಗಿದೆ.

    ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ದನಗಳು ತುಂಬುಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿ ದಾಳಿ ನಡೆಸಿದ್ದವು. ಈ ವೇಳೆ ಹಸುವಿನ ಹೊಟ್ಟೆಗೆ ಇರಿದು ಗಾಯಗೊಳಿಸಿದ್ದವು. ಹಲ್ಲೆಯಿಂದ ಪ್ರಜ್ಞೆ ತಪ್ಪಿ ಬಯಲಿನಲ್ಲಿ ನರಳುತ್ತ ಬಿದ್ದಿದ್ದ ಹಸುವಿನ ಉಪಚಾರಕ್ಕೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ಹಾಗೂ ಸಂಗಡಿಗರು ಮುಂದಾದರು.

    ತಕ್ಷಣ ಉಣಕಲ್ ಪಶುವೈದ್ಯರನ್ನು ಕರೆದು ಪರಿಸ್ಥಿತಿ ವಿವರಿಸಿದಾಗ, ಗರ್ಭದಲ್ಲಿರುವ ಕರು ಸಾವನ್ನಪ್ಪಿದ್ದರೂ ಹಸುವನ್ನು ಉಳಿಸುವ ಪ್ರಯತ್ನಕ್ಕೆ ಮುಂದಾದರು. ವೈದ್ಯರ ಸಲಹೆಯ ಅನ್ವಯ ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದಾಗ ಹಸುವನ್ನು ಟಂಟಂ ವಾಹನದ ಮೂಲಕ ಸಿದ್ದಪ್ಪಜ್ಜನ ಹೊಸಮಠದ ಆವರಣಕ್ಕೆ ಸ್ಥಳಾಂತರಿಸಿ, ಮಧ್ಯಾಹ್ನದಿಂದ ಸಂಜೆವರೆಗೆ ಉಣಕಲ್ ಹಾಗೂ ಹುಬ್ಬಳ್ಳಿ ಪಶುವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿ ಮುಗಿಸಿದರು.

    ಡಾ. ಈರಣ್ಣ ಸುಂಕದ, ಡಾ. ಶರಣು ಬದಾಮಿ, ಡಾ. ಹೊನ್ನಿನಾಯ್ಕರ ಹಾಗೂ ಸಿಬ್ಬಂದಿ ಕೆ.ಬಿ ಹುಬ್ಬಳ್ಳಿ, ಮೌನೇಶ ಹಾಗೂ ಎಸ್.ಕೆ ಗೌಡರ ಅವರು ಹಸುವಿನ ಹೊಟ್ಟೆಯಲ್ಲಿ ಸಾವನ್ನಪ್ಪಿದ್ದ ಕರುವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತಗೆದು ಚಿಕಿತ್ಸೆ ನೀಡಿದರು. ಸದ್ಯ ಪಶುವೈದ್ಯರ ತಂಡದ ಶ್ರಮ ಹಾಗೂ ಉಣಕಲ್ ಗ್ರಾಮಸ್ಥರ ಸಹಕಾರ ಆರೈಕೆಯಿಂದ ಹಸು ಚೇತರಿಕೊಂಡಿದೆ.

  • ಸಾವಿನ ದವಡೆಯಿಂದ ಕ್ಯಾನ್ಸರ್ ರೋಗಿ ಪಾರು – 3 ಕೆ.ಜಿ ಗಡ್ಡೆಯನ್ನ ಹೊರ ತೆಗೆದ ವೈದ್ಯರು

    ಸಾವಿನ ದವಡೆಯಿಂದ ಕ್ಯಾನ್ಸರ್ ರೋಗಿ ಪಾರು – 3 ಕೆ.ಜಿ ಗಡ್ಡೆಯನ್ನ ಹೊರ ತೆಗೆದ ವೈದ್ಯರು

    ರಾಯಚೂರು: ಸುಮಾರು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧೆಯ ಹೊಟ್ಟೆಯಿಂದ ಮೂರು ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನ ರಾಯಚೂರಿನ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದ್ದು ರಾಯಚೂರಿನಲ್ಲಿ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಬಳಗಾನೂರು ಗ್ರಾಮದ 60 ವರ್ಷದ ವೃದ್ಧೆ ಬೇಗಂ ಬೀ ಸುಮಾರು 8 ತಿಂಗಳುಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಹೊಟ್ಟೆಯಲ್ಲಿದ್ದ ಗಡ್ಡೆಯ ಗಾತ್ರ ನೋಡಿ ಸುಮಾರು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಹುಬ್ಬಳ್ಳಿ, ಬಾಗಲಕೋಟೆ ಸೇರಿ ವಿವಿಧೆಡೆ ತೋರಿಸಿದರು ಪ್ರಯೋಜನವಾಗಿರಲಿಲ್ಲ. ಕುಟುಂಬದವರಿಗೆ ಬೇಗಂ ಬೀಯನ್ನು ಉಳಿಸಿಕೊಳ್ಳುವ ಭರವಸೆಯೇ ಹೊರಟುಹೋಗಿತ್ತು. ವೈದ್ಯರು ಸಹ ಕೈ ಚೆಲ್ಲಿದ್ದರು. ಆದರೆ ಈಗ ರಾಯಚೂರಿನ ಭಂಡಾರಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಮೂರು ಕೆ.ಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ.

    ಇದಕ್ಕಿಂತಲೂ ದೊಡ್ಡ ಗಾತ್ರದ ಗಡ್ಡೆಗಳನ್ನು ಗರ್ಭಕೋಶ ಸೇರಿ ದೇಹದ ಇತರ ಭಾಗದಿಂದ ಯಶಸ್ವಿಯಾಗಿ ಹೊರ ತೆಗೆದ ಉದಾಹರಣೆಗಳಿವೆ. ಆದರೆ ಜಠರ, ಸಣ್ಣಕರಳು ಸೇರಿದಂತೆ ದೇಹದ ಬಹು ಅಂಗಗಳ ರಕ್ತನಾಳಗಳಿಗೆ ತೊಂದರೆಯಾಗದಂತೆ ದೊಡ್ಡದಾಗಿ ಬೆಳೆದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ತಜ್ಞ ವೈದ್ಯ ಡಾ.ರಮೇಶ್ ಸಿ ಸಾಗರ್ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.

    ಶಸ್ತ್ರಚಿಕಿತ್ಸೆ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಪ್ರಾಣಾಪಾಯ ಎದುರಿಸಬೇಕಿದ್ದ ವೃದ್ಧೆ ಈಗ ಗುಣಮುಖಳಾಗುತ್ತಿದ್ದಾರೆ. ರಾಯಚೂರಿನಲ್ಲಿ ಈ ಮೊದಲು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೌಲಭ್ಯ ಇರಲಿಲ್ಲ. ಬೆಂಗಳೂರು, ಹೈದ್ರಾಬಾದ್‍ಗೆ ಹೋಗಬೇಕಿದ್ದ ರೋಗಿಗಳಿಗೆ ಈಗ ಜಿಲ್ಲೆಯಲ್ಲೇ ಚಿಕಿತ್ಸೆ ಸಿಗುವಂತಾಗಿದೆ.

  • ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಡಿಸ್ಚಾರ್ಜ್

    ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಡಿಸ್ಚಾರ್ಜ್

    ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದೆ.

    ಮಗು ಸೈಫುಲ್ ಅಝ್ಮಾನ್‍ನ ಓಪನ್ ಹಾರ್ಟ್ ಸರ್ಜರಿ ಮಾಡುವಲ್ಲಿ ಯಶಸ್ವಿಯಾಗಿರುವ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಇಂದು ಮಗು ಹಾಗೂ ಪೋಷಕರನ್ನು ಇಂದು ಆತ್ಮೀಯವಾಗಿ ಆಸ್ಪತ್ರೆಯಿಂದ ಕಳುಹಿಸಿದರು. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

    ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಫೆಬ್ರವರಿ 6ರಂದು 40 ದಿನದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. 7ರಂದು 12 ಜನರ ವೈದ್ಯರ ತಂಡದಿಂದ ಆಪರೇಷನ್ ಮಾಡಲಾಯಿತು. ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಆಪರೇಷನ್ ಮಾಡಲಾಗಿತ್ತು. ಮಗುವಿನ ಹೃದಯದ ಎಡಭಾಗಕ್ಕೆ 4 ರಕ್ತನಾಳಗಳು ಕನೆಕ್ಟ್ ಆಗಬೇಕಿತ್ತು. ಆದರೆ ಬಲಭಾಗಕ್ಕೆ ಕನೆಕ್ಟ್ ಆಗಿತ್ತು. ಹೀಗಾಗಿ ಈ ಚಿಕಿತ್ಸೆ ಸವಾಲಾಗಿತ್ತು. ಆದರೆ ನಮ್ಮ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ. ಮಗು ಕೂಡ ಆರೋಗ್ಯವಾಗಿದೆ ಎಂದರು.

    ಮಗುವಿನ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಖರ್ಚಾಗಿದೆ. ಇದರಲ್ಲಿ ಬಿಪಿಎಲ್ ಕ್ಯಾಟಗರಿಯಿಂದ 1,20,000 ಬಿಪಿಎಲ್ ಕ್ಯಾಟಗರಿಯಿಂದ ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಯ ಖರ್ಚು ಸಂಪೂರ್ಣವಾಗಿ ಉಚಿತವಾಗಿದ್ದು, ಪೋಷಕರು ಈ ಚಿಕಿತ್ಸೆಯಿಂದ ಖುಷಿಯಾಗಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಮಗುವಿನ ಪೋಷಕರು, ಮಂಗಳೂರಿಂದ ಬೆಂಗಳೂರಿಗೆ ಕರೆದುಕೊಂಡು ಬರುವಾಗ ಮಗುವಿನ ಜೀವದ ಮೇಲೆ ಆಸೆ ಕೈ ಬಿಟ್ಟಿದ್ದೇವು. ಆದರೆ ವೈದ್ಯರು ನಮ್ಮ ಮಗುವನ್ನು ಉಳಿಸಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ವೈದ್ಯರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯೇ ಎಂದು ವೈದ್ಯರ ಕಾರ್ಯವನ್ನ ಶ್ಲಾಘಿಸಿದರು.

  • ಅಪರೂಪದ ಕಾಯಿಲೆಗೆ ಬೆಂಗ್ಳೂರಿನಲ್ಲಿ ಚಿಕಿತ್ಸೆ- ಓಮನ್ ದೇಶದ ಪುಟಾಣಿಗೆ 7 ಗಂಟೆ ಶಸ್ತ್ರಚಿಕಿತ್ಸೆ

    ಅಪರೂಪದ ಕಾಯಿಲೆಗೆ ಬೆಂಗ್ಳೂರಿನಲ್ಲಿ ಚಿಕಿತ್ಸೆ- ಓಮನ್ ದೇಶದ ಪುಟಾಣಿಗೆ 7 ಗಂಟೆ ಶಸ್ತ್ರಚಿಕಿತ್ಸೆ

    ಬೆಂಗಳೂರು: ಓಮನ್ ದೇಶದ 5 ವರ್ಷದ ಬಾಲಕಿಗೆ ಡಿ.ವೈ.ಟಿ-16 (ಡಿಸ್ಟೋನಿಯಾ) ಎಂಬ ಅಪರೂಪದ ಕಾಯಿಲೆ ಇತ್ತು. ಈ ಬಾಲಕಿಗೆ 7 ಗಂಟೆಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೆಂಗಳೂರಿನ ವಿಕ್ರಂ ಆಸ್ಪತ್ರೆ ವೈದ್ಯರು ಪುನರ್ ಜನ್ಮ ನೀಡಿದ್ದಾರೆ.

    ಇನ್ನೊಂದು ವಿಷೇಶವೆಂದರೆ ಭಾರತದಲ್ಲಿ ಅತಿ ಚಿಕ್ಕ ವಯಸ್ಸಿನ ರೋಗಿಯೊಬ್ಬರಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿ.ವೈ.ಟಿ-16 ಅನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡಿಸ್ಟೋನಿಯಾ ಎಂದು ಕರೆಯಲಾಗುತ್ತದೆ. ಇದು ಮೆದುಳು ಸಂಬಂಧಿ ಕಾಯಿಲೆಯಾಗಿದ್ದು, ಓಮನ್ ದೇಶದ ಪುಟಾಣಿ ಮಲಗಿದ್ದಲ್ಲೇ ಮಲಗಿದ್ದಳು. ಯಾವುದೇ ಚಲನೆಯಿಲ್ಲದೇ ಬದುಕುತ್ತಿದ್ದ ಈಕೆಗೆ ಈಗ ಪುನರ್ ಜನ್ಮ ಬಂದಂತಾಗಿದೆ.

    ಈ ಕಾಯಿಲೆ ಪ್ರಪಂಚದಲ್ಲೇ ಕೇವಲ 10 ರಿಂದ 15 ಪ್ರಕರಣಗಳು ಮಾತ್ರ ಕಂಡುಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿ.ವೈ.ಟಿ-16 ಕಾಯಿಲೆಗೆ ಚಿಕಿತ್ಸೆಯನ್ನು ನೀಡಲಾಗಿದೆ. ಅಲ್ಲದೇ ಅತ್ಯಂತ ಚಿಕ್ಕ ವಯಸ್ಸಿನ ಬಾಲಕಿಗೆ ಈ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಯಶಸ್ವಿಯಾಗಿ ಮಾಡಿದ್ದೇವೆ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಹೆಮ್ಮೆಪಟ್ಟರು.

  • ಎರಡೂಕಾಲು ಗಂಟೆಯಲ್ಲಿ ಮೈಸೂರಿನಿಂದ ಬೆಂಗ್ಳೂರು ತಲುಪಿತು ಹೃದಯ

    ಎರಡೂಕಾಲು ಗಂಟೆಯಲ್ಲಿ ಮೈಸೂರಿನಿಂದ ಬೆಂಗ್ಳೂರು ತಲುಪಿತು ಹೃದಯ

    – ತುಮಕೂರಿನ ವ್ಯಕ್ತಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಯಶಸ್ವಿಯಾಗಿ ಗ್ರೀನ್ ಕಾರಿಡಾರ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಜೀವಂತ ಹೃದಯನ್ನು ಯಶಸ್ವಿಯಾಗಿ ರವಾನೆ ಮಾಡಲಾಗಿದೆ.

    ಕಳೆದ ತಿಂಗಳು 9ರಂದು ಪಿರಿಯಾಪಟ್ಟಣದ ಕೊಪ್ಪ ಬಳಿ ಯುವಕ ಮದನ್ ರಾಜ್ (22)ಗೆ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿತ್ತು. ಬಳಿಕ ಯುವಕನ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು.

    ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದಲ್ಲಿ ತುಮಕೂರು ಮೂಲದ ನವೀನ್ (39) ಎಂಬವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಹೊರಟು 2 ಗಂಟೆ 18 ನಿಮಿಷದಲ್ಲಿ ನಾರಾಯಣ ಹೃದಯಾಲಯಕ್ಕೆ ಯಶಸ್ವಿಯಾಗಿ ಗ್ರೀನ್ ಕಾರಿಡಾರ್ ಮೂಲಕ ಜೀವಂತ ಹೃದಯ ರವಾನೆಯಾಗಿದೆ.

    ಸದ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನವೀನ್ ಅವರಿಗೆ ವೈದ್ಯರು ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಗ್ರೀನ್ ಕಾರಿಡಾರ್ ಮಾಡಲಾಗಿತ್ತು. ಪೊಲೀಸ್ ಭದ್ರತೆಯೊಂದಿಗೆ ಝೀರೋ ಟ್ರಾಫಿಕ್ ಮೂಲಕ ಜೀವಂತ ಹೃದಯವನ್ನು ರವಾನಿಸಲಾಗಿತ್ತು.

  • 15ನೇ ವಯಸ್ಸಿಗೆ ವೃದ್ಧೆಯಂತಾಗಿದ್ದ ಬಾಲಕಿ- ಸಹಪಾಠಿಗಳ ಕಿರುಕುಳದಿಂದ ಶಸ್ತ್ರಚಿಕಿತ್ಸೆ

    15ನೇ ವಯಸ್ಸಿಗೆ ವೃದ್ಧೆಯಂತಾಗಿದ್ದ ಬಾಲಕಿ- ಸಹಪಾಠಿಗಳ ಕಿರುಕುಳದಿಂದ ಶಸ್ತ್ರಚಿಕಿತ್ಸೆ

    ಬೀಜಿಂಗ್: ಮಹಿಳೆಯರು ಸುಂದರವಾಗಿ ಹಾಗೂ ಯುವತಿಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸುವುದು ಸಾಮಾನ್ಯ. ಆದರೆ ಚೀನಾದ ಬಾಲಕಿಯೊಬ್ಬಳು ಜನರು ಹಾಗೂ ಸಹಪಾಠಿಗಳು ಕೆಣಕಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.

    ವಾಸ್ತವವಾಗಿ 15 ವರ್ಷದ ಜಿಯಾಫೆಂಗ್ ಪ್ರೊಜೇರಿಯಾದ ಕಾಯಿಲೆಗೆ ತುತ್ತಾಗಿದ್ದಳು. ಹೀಗಾಗಿ ಆಕೆ ಉಳಿದ ಎಲ್ಲಾ ಸಹಪಾಠಿಗಳಿಂತ ವಯಸ್ಕಳಂತೆ ಕಾಣುತ್ತಿದ್ದಳು. ಹೀಗಾಗಿ ಶಾಲೆಯಲ್ಲಿ ಮಕ್ಕಳು ಆಕೆಯನ್ನು ಕೀಟಲೆ ಮಾಡುತ್ತಿದ್ದರು.

    ಪ್ರೊಜೇರಿಯಾ ಎಂಬುದು ಅಪರೂಪದ ಆನುವಂಶಿಕ ಕಾಯಿಲೆಯಾಗಿದ್ದು, ಇಂತಹ ಕಾಯಿಲೆ ಇರುವ ಮಗು ವಯಸ್ಸಾದವರಂತೆ ಕಾಣಲು ಆರಂಭಿಸುತ್ತದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ‘ಪಾ’ ಸಿನಿಮಾ ಪ್ರೊಜೇರಿಯಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಆಧರಿಸಿದೆ.

    ಪ್ರೊಜೇರಿಯಾ ಕಾಯಿಲೆಗೆ ತುತ್ತಾದ ಮಕ್ಕಳು 12 ವರ್ಷ ಬದುಕಿರುತ್ತಾರೆ. ಆದರೆ ಕೆಲವೊಮ್ಮೆ ಕೆಲವು ಮಕ್ಕಳು 20 ವರ್ಷದವರೆಗೆ ಬದುಕುಳಿಯುವ ಸಾಧ್ಯತೆ ಇದೆ. ಜಿಯಾಫೆಂಗ್‍ಗೆ ಪ್ರೊಜೇರಿಯಾ ಕಾಯಿಲೆಯು ಮುಖದ ಚರ್ಮದ ಮೇಲೆ ಮಾತ್ರ ಪರಿಣಾಮ ಬೀರಿತು. ಇದರಿಂದಾಗಿ ಆಕೆಯ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲಾರಂಭಿಸಿದವು. ಈ ಕಾರಣಕ್ಕಾಗಿ ಜಿಯಾಫೆಂಗ್‍, ತನ್ನ ಮುಖದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.

    ಒಂದು ವರ್ಷದ ನಂತರ ಪ್ರೊಜೇರಿಯಾದ ಪರಿಣಾಮವು ಜಿಯಾಫೆಂಗ್ ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ವಯಸ್ಸಾದಂತೆ ಅವಳ ಮುಖದ ಸುಕ್ಕುಗಳಿಂದಾಗಿ ಅಜ್ಜಿಯಂತಾದಳು. ಅವಳನ್ನು ಶಾಲೆಯಲ್ಲಿ ಕಳುಹಿಸಲಾಯಿತು. ಆದರೆ ಅವಳೊಂದಿಗೆ ಕುಳಿತುಕೊಳ್ಳಲು ಯಾರೂ ಇಷ್ಟಪಡಲಿಲ್ಲ. ಅಂತಿಮವಾಗಿ ಮಗಳು ಶಾಲೆಯನ್ನು ಬಿಡಲು ನಿರ್ಧರಿಸಿದರು. ಈ ವಿಚಾರ ಅನೇಕ ಸಂಸ್ಥೆಗಳಿಗೆ ತಲುಪಿತು, ಅವರು ಮಗಳ ಶಸ್ತ್ರಚಿಕಿತ್ಸೆಗೆ ಹಣವನ್ನು ಸಂಗ್ರಹಿಸಿದರು ಎಂದು ಜಿಯಾಫೆಂಗ್ ತಂದೆ ತಿಳಿಸಿದ್ದಾರೆ.

    ಜಿಯಾಫೆಂಗ್ ಕಳೆದ ತಿಂಗಳ ಕೊನೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕ್ಸಿಯಾಫೆಂಗ್‍ನ ವೈದ್ಯ ಕ್ಸಿ ಲಿಂಗ್‍ಜಿ ಅವರು ಶಸ್ತ್ರಚಿಕಿತ್ಸೆ ಮೂಲಕ ಜಿಯಾಫೆಂಗ್‍ಳ ಮುಖದಿಂದ ಏಳು ಸೆಂ.ಮೀ ಚರ್ಮವನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಅವಳ ಮೂಗು ಮತ್ತು ಬಾಯಿಯ ಸುತ್ತಲಿನ ಚರ್ಮವನ್ನು ಸಹ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಲಾಗಿದೆ ಎಂದು ಜಿಯಾಫೆಂಗ್ ತಂದೆ ಹೇಳಿದ್ದಾರೆ.

    ಶಸ್ತ್ರಚಿಕಿತ್ಸೆಗೂ ಮುನ್ನ ಜನರು ಹಾಗೂ ಸಹಪಾಠಿಗಳು ನನ್ನನ್ನು ಚಿಕ್ಕಮ್ಮ ಮತ್ತು ಅಜ್ಜಿ ಎಂದು ಕರೆಯುತ್ತಿದ್ದರು. ನಾನು ಈ ಬಗ್ಗೆ ಮೌನವಾಗಿರುತ್ತಿದ್ದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ನಾನು ಶಾಲೆಗೆ ಹೋದರೆ, ಜನರು ನನ್ನನ್ನು ಸುಂದರಿ ಎಂದು ಕರೆಯುವುದನ್ನು ನಾನು ಬಯಸುವುದಿಲ್ಲ. ಆದರೆ ಉಳಿದ ಹದಿಹರೆಯದವರಂತೆ ನನ್ನೊಂದಿಗೆ ನಡೆದುಕೊಂಡರೆ ಸಾಕು ಎಂದು ಬಾಲಕಿ ಜಿಯಾಫೆಂಗ್ ತಿಳಿಸಿದ್ದಾಳೆ.

  • ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಿಂದ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

    ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಿಂದ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

    ಮಂಡ್ಯ: ಸೀಳು ತುಟಿಯಿಂದ ಬಳಲುತ್ತಿರುವ ಮಕ್ಕಳು, ಪುರುಷರು ಮತ್ತು ಮಹಿಳೆಯರಿಗೆ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಆಯೋಜಿಸಲಾಗಿದೆ.

    ಇಂದಿನಿಂದ 12 ದಿನಗಳ ಕಾಲ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಉಚಿತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಇಂದು ಈ ಶಿಬಿರಕ್ಕೆ ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಈ ಶಿಬಿರಕ್ಕೆ ಸೀಳು ತುಟಿ, ಅಂಗುಳ ಹಾಗೂ ಸುಟ್ಟ ಗಾಯಗಳಿಂದ ಉಂಟಾದವರು 144 ಮಂದಿ ಭಾಗಿಯಾಗಿದ್ದಾರೆ. ಇವರಿಗೆ ಅಮೆರಿಕಾದ ರೋಟೋ ಪ್ಲಾಸ್ಟ್ ಇಂಟರ್ ನ್ಯಾಷನಲ್‍ನ 30 ಮಂದಿ ತಜ್ಞ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮಾಡಲಿದೆ.

    ಈ ಶಿಬಿರದಲ್ಲಿ ಭಾಗಿಯಾದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಜೊತೆಗೆ ಉಚಿತವಾಗಿ ಇವರಿಗೆ ಔಷಧಿಗಳನ್ನು ಸಹ ನೀಡಲಾಗುತ್ತದೆ. ದೇಶದಲ್ಲಿ ಸೀಳು ತುಟಿಗಳ ಮಕ್ಕಳ ಸಂಖ್ಯೆಯನ್ನು ತಡೆಯಬೇಕು ಎಂಬ ಉದ್ದೇಶದಿಂದ ಆದಿಚುಂಚನಗಿರಿ ಮಠ ಈ ಶಿಬಿರವನ್ನು ನಡೆಸುತ್ತಿದೆ. ಸೀಳು ತುಟಿಯ ಮಕ್ಕಳಿಗೆ ಹೊಸ ಜೀವನ ನೀಡಬೇಕು ಎಂದು ಆದಿಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಅವರ ಆಸೆಯಾಗಿತ್ತು. ಹೀಗಾಗಿ ಪ್ರತಿ ವರ್ಷ ಈ ಶಿಬಿರವನ್ನು ಮಾಡಲಾಗುತ್ತಿದೆ.

  • ‘ಸರಿಲೇರು ನೀಕೆವ್ವರು’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಪ್ರಿನ್ಸ್ ಮಹೇಶ್ ಬಾಬುಗೆ ನೋವು

    ‘ಸರಿಲೇರು ನೀಕೆವ್ವರು’ ಸಿನಿಮಾ ಸಕ್ಸಸ್ ಬೆನ್ನಲ್ಲೇ ಪ್ರಿನ್ಸ್ ಮಹೇಶ್ ಬಾಬುಗೆ ನೋವು

    ಹೈದರಾಬಾದ್: ಅತ್ತ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಇತ್ತ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದ ಮಹೇಶ್ ಬಾಬುಗೆ ನೋವೊಂದು ಕಾಡುತ್ತಿದೆ.

    ಸದ್ಯ ಮಹೇಶ್ ಬಾಬು ಅವರು ಕುಟುಂಬದ ಜೊತೆ ಯುಎಸ್‍ಎ ತೆರಳಿದ್ದಾರೆ. ಆದರೆ ಅವರು ಜಾಲಿ ಟ್ರಿಪ್‍ಗೆ ಯುಎಸ್‍ಎಗೆ ಹೋಗಿಲ್ಲ, ಬದಲಾಗಿ ಯುಎಸ್‍ಎಯಲ್ಲಿ ಮೊಣಕಾಲಿನ ಸರ್ಜರಿಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.

    ಕಳೆದ 7 ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿರುವ ಪ್ರಿನ್ಸ್ ಮಹೇಶ್ ಬಾಬುಗೆ ಯುಎಸ್‍ಎಯಲ್ಲಿ ಮೊಣಕಾಲಿನ ಸರ್ಜರಿ ನಡೆಯಲಿದೆ. ಆದರೆ ‘ಸರಿಲೇರು ನೀಕೆವ್ವರು’ ಸಿನಿಮಾ ಸಕ್ಸಸ್‍ನ ಖುಷಿಯಲ್ಲಿದ್ದ ಮಹೇಶ್ ಬಾಬು ದಿಢೀರನೆ ಸರ್ಜರಿಗೆ ಒಳಗಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

    2014ರಲ್ಲಿ ‘ಆಗಡು’ ಸಿನಿಮಾ ಶೂಟಿಂಗ್ ವೇಳೆ ಮಹೇಶ್ ಬಾಬು ಕಾಲಿಗೆ ಪೆಟ್ಟಾಗಿತ್ತು. ಇದರಿಂದ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕರ್ನಾಟಕದ ಬಳ್ಳಾರಿಯಲ್ಲಿ ಆಗಡು ಚಿತ್ರದ ಟೈಟಲ್ ಟ್ರ್ಯಾಕ್ ಶೂಟಿಂಗ್ ನಡೆಯುತ್ತಿದ್ದಾಗ ಮಹೇಶ್ ಬಾಬು ಮೊಣಕಾಲಿಗೆ ತೀವ್ರ ಪೆಟ್ಟಾಗಿತ್ತು. ಅಂದಿನಿಂದ ನೋವಿನಲ್ಲಿ ಬಳಲುತ್ತಿದ್ದ ಮಹೇಶ್ ಈಗ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಂದರ ಹಿಂದೆ ಒಂದು ಸಾಲಾಗಿ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದ ಮಹೇಶ್ ಅವರು ಚಿಕಿತ್ಸೆಯನ್ನು ಮುಂದೂಡುತ್ತಲೆ ಬಂದಿದ್ದರು. ಆದರೆ ಈಗ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದು ಮಹೇಶ್ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯಲು ಯುಎಸ್‍ಎಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ಸ್ಪೈಡರ್’ ಸಿನಿಮಾದ ಬಳಿಕ ಪ್ರಿನ್ಸ್ ಚಿಕಿತ್ಸೆಗೆ ಒಳಗಾಗಬೇಕಿತ್ತು. ಚಿಕಿತ್ಸೆಗಾಗಿ ದೀರ್ಘಕಾಲ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಎಂದು ಚಿಕಿತ್ಸೆಯನ್ನು ಮುಂದೂಡಿದ್ದರು. ಆದರೇ ಇತ್ತೀಚಿಗೆ ಅವರಿಗೆ ಮೊಣಕಾಲು ನೋವು ಹೆಚ್ಚಾಗಿದ್ದು, ‘ಸರಿಲೇರು ನೀಕೆವ್ವರು’ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿ ಮಹೇಶ್ ಯುಎಸ್ ಎಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.

    ಈ ತಿಂಗಳ ಕೊನೆಯಲ್ಲಿ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಆಸ್ಪತ್ರೆ? ಯಾವ ದಿನ ಎನ್ನುವ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಶಸ್ತ್ರಚಿಕಿತ್ಸೆ ನಂತರ ಮಹೇಶ್ ಮೂರರಿಂದ ಐದು ತಿಂಗಳು ಸಂಪೂರ್ಣ ರೆಸ್ಟ್ ನಲ್ಲಿ ಇರಲಿದ್ದಾರೆ. ಆ ನಂತರ ‘ಮಹರ್ಶಿ’ ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಮತ್ತೆ ಸಿನಿಮಾ ಮಾಡಲಿದ್ದಾರೆ.