Tag: ಶರಾವತಿ

  • 2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

    2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

    ಶಿವಮೊಗ್ಗ: ಶರಾವತಿ (Sharavathi) ಹಿನ್ನೀರು ಭಾಗದ ಜನರ 60 ವರ್ಷದ ಕನಸು ನನಸಾಗಿದೆ. ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರು ಬ್ರಿಡ್ಜ್‌ (Sigandur Bridge) ಕಾಮಗಾರಿ ಪೂರ್ಣವಾಗಿದ್ದು ಇಂದು ಲೋಕಾರ್ಪಣೆಯಾಗಲಿದೆ. 2019ರಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

    ನಾಗ್ಪುರದಿಂದ ವಿಶೇಷ ವಿಮಾನದ ಮೂಲಕ ಬೆಳಗ್ಗೆ 10:45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga) ಗಡ್ಕರಿ ಬರಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ನಲ್ಲಿ ಸಾಗರದ ಮಂಕಳಲೆ ಹೆಲಿಪ್ಯಾಡಿಗೆ ಬಂಧು ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಿಗಂದೂರು ಸೇತುವೆ ಬಳಿ ಬರಲಿದ್ದಾರೆ.

     

    ಮಧ್ಯಾಹ್ನ 12 ಗಂಟೆಗೆ ಐತಿಹಾಸಿಕ ಸೇತುವೆ ಉದ್ಘಾಟನೆಯಾಗಲಿದ್ದು ಬಳಿಕ 12:40ಕ್ಕೆ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮದಲ್ಲಿ ಗಡ್ಕರಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ಸೇತುವೆ ಲೋಕಾರ್ಪಣೆ ಜೊತೆಗೆ ರಾಜ್ಯದ 2,056 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ನಿತಿನ್‌ ಗಡ್ಕರಿ ಚಾಲನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

    ಸಭಾ ಕಾರ್ಯಕ್ರಮದ ಬಳಿಕ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಗಡ್ಕರಿ ಪ್ರಯಾಣ ಬೆಳೆಸಲಿದ್ದಾರೆ.

    ಸೇತುವೆಯ ವಿಶೇಷತೆ ಏನು?
    470 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು 2.25 ಕಿ.ಮೀ. ಉದ್ದವಿದೆ. 16 ಮೀಟರ್ ಅಗಲ ಹೊಂದಿದ್ದು ಸೇತುವೆಯ ಎರಡು ಬದಿ ಫುಟ್‌ಪಾತ್‌ ನಿರ್ಮಾಣವಾಗಿದೆ. ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಸಿಗಲಿದೆ. ಸಿಗಂದೂರು, ಕೊಲ್ಲೂರು ಕ್ಷೇತ್ರಗಳಿಗೆ ಅನುಕೂಲವಾಗಲಿದೆ.

  • ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

    ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

    ಶಿವಮೊಗ್ಗ: ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗ (Shivamogga) ನ್ಯಾಯಾಲಯ (Court) ತೀರ್ಪು ನೀಡಿದೆ.

    ಶಿವಮೊಗ್ಗದ ಶರಾವತಿ ನಗರದಲ್ಲಿ 2018ರಲ್ಲಿ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ರೇವಣ್ಣಪ್ಪ (51) ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲೂರಿನ ನಿವಾಸಿ ಪ್ರಕಾಶ್ (45) ಎಂಬವನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿ ಪ್ರಕಾಶ್‌ಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಮೊತ್ತ ಕಟ್ಟಲು ವಿಫಲವಾದರೆ ಎರಡು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಕೋರ್ಟ್ ತೀರ್ಪು ನೀಡಿದೆ. ಇದನ್ನೂ ಓದಿ: ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

  • ಬಿರುಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿ ಜಲಧಾರೆ

    ಬಿರುಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿ ಜಲಧಾರೆ

    ಶಿವಮೊಗ್ಗ: ಬಿರುಬೇಸಿಗೆಯಲ್ಲೂ ಮಳೆಗಾಲದಂತೆ ಧುಮ್ಮಿಕ್ಕಿ ಹರಿಯುತ್ತಿರುವ ಶರಾವತಿ ಜಲಧಾರೆಯನ್ನು ಕಂಡು ಪ್ರವಾಸಿಗರು ಇದೀಗ ಫುಲ್ ಶಾಕ್ ಆಗಿದ್ದಾರೆ.

    ಕೇವಲ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಧುಮ್ಮಿಕ್ಕಿ ಭೋರ್ಗರೆಯುತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ಇದೀಗ ಬೇಸಿಗೆಯಲ್ಲೂ ನಳನಳಿಸುತ್ತಿದೆ. ಆಶ್ಚರ್ಯವಾದರೂ ಇದು ಸತ್ಯ. ಕಡಿದಾದ ಬಂಡೆಗಳ ನಡುವೆ ಶರಾವತಿಯ ನರ್ತನ ಬಿರುಬೇಸಿಗೆಯಲ್ಲೂ ಕಾಣಸಿಗುತ್ತಿದೆ.

    ಜೋಗವು ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತೀ ಎತ್ತರದ ಜಲಪಾತವಾಗಿದ್ದು, ಸುಮಾರು 900 ಅಡಿ ಎತ್ತರದಿಂದ ಈ ಜಲಪಾತದ ಕಣಿವೆಗಳಲ್ಲಿ ಹಾಲ್ನೊರೆಯಂತೆ ಶರಾವತಿ ಭೋರ್ಗರೆಯುತ್ತಾಳೆ. ಕೇವಲ ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಕಣ್ಮನ ಸೆಳೆಯುವ ಜೋಗ ಜಲಪಾತದಲ್ಲಿ ಇದೀಗ ಬೇಸಿಗೆ ಸಮಯದಲ್ಲೂ ನಯನ ಮನೋಹರವಾಗಿ ಜಲಧಾರೆ ಧುಮ್ಮಿಕ್ಕಿ ಹರಿಯತ್ತಿದೆ.

    ಈ ಸುಂದರ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಸ್ಥಳೀಯರು ಸೇರಿದಂತೆ, ರಾಜ್ಯ, ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತಿದ್ದಾರೆ. ಕಡಿದಾದ ಬಂಡೆ ಕಣಿವೆಗಳ ಮೂಲಕ ಶರಾವತಿ ಹರಿಯುವುದನ್ನ ನೋಡುವುದೇ ಒಂದು ಸೊಬಗು. ಅದರಲ್ಲೂ ನಿಸರ್ಗಕ್ಕೆ ಅತ್ಯಂತ ಆಪ್ತ ಸ್ಥಳವಾಗಿರುವ ಜೋಗದಲ್ಲಿ, ಇದೀಗ ಬಿರು ಬಿಸಿಲ ಝಳದ ನಡುವೆ ರಾಜ, ರಾಣಿ, ರೋರರ್, ರಾಕೆಟ್ ಕಣಿವೆಗಳಲ್ಲಿ ಜಲಧಾರೆ ಹರಿಯುತ್ತಿದ್ದು, ಎಲ್ಲರೂ ಆಶ್ಚರ್ಯಗೊಳ್ಳುವಂತಾಗಿದೆ. ಇದನ್ನೂ ಓದಿ: ಕುಂಕುಮ ಎಂದರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ

    ಇಲ್ಲಿನ ಮಹಾತ್ಮ ಗಾಂಧಿ ಪವರ್ ಸ್ಟೇಷನ್ ಗೆ ನೀರು ಹರಿಸುವ ಚೈನಾ ಗೇಟ್ ನಲ್ಲಿ ಸಾಕಷ್ಟು ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಈ ನೀರು ನೇರವಾಗಿ ನದಿ ಮೂಲಕ ಜಲಪಾತಕ್ಕೆ ಹರಿದು ಬರುತ್ತಿದೆ. ಪವರ್ ಚಾನಲ್‍ಗಳಲ್ಲೂ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು, ಅದು ಕೂಡ ಜಲಪಾತಕ್ಕೆ ನೀರು ಹರಿಯಲು ಕಾರಣವಾಗಿದ್ದು ಇದರಿಂದ ಜಲಪಾತದಲ್ಲಿ ನಿರಂತರವಾಗಿ ಜಲಧಾರೆ ಸೃಷ್ಟಿಯಾಗಲು ಕಾರಣವಾಗಿದೆ.

    ಹಾಲ್ನೊರೆಯಂತೆ ಉಕ್ಕಿ ಹರಿಯುವ ನೀರು ನೋಡುವುದೇ ಒಂದು ದೃಶ್ಯ ಕಾವ್ಯ. ಅದರಲ್ಲೂ ಬಿರು ಬೇಸಿಗೆಯಲ್ಲಿ ಕೂಡ ಅಚಾನಕ್ಕಾಗಿ ಹರಿದು ಬಂದ ನೀರು ಜಲಪಾತದ ವರ್ಣನೆಗೆ ಪದಗಳೇ ಸಾಲದು. ಅಚಾನಕ್ಕಾಗಿ ಜೋಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಸ್ಥಳಿಯರು ಇದೀಗ ಮನಮೋಹಕ ದೃಶ್ಯವನ್ನು ಕಂಡು ಸಂಭ್ರಮಿಸುವಂತಾಗಿದೆ.

  • ಮಲೆನಾಡಿನಲ್ಲಿ ಧಾರಾಕಾರ ಮಳೆ- ಮೈದುಂಬಿಕೊಂಡ ಜೋಗ ಜಲಪಾತ

    ಮಲೆನಾಡಿನಲ್ಲಿ ಧಾರಾಕಾರ ಮಳೆ- ಮೈದುಂಬಿಕೊಂಡ ಜೋಗ ಜಲಪಾತ

    – ಜಲಪಾತದಲ್ಲಿ ಮಂಜಿನೊಂದಿಗೆ ಶರಾವತಿ ಕಣ್ಣ ಮುಚ್ಚಾಲೆ

    ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಜೋಗ ಜಲಪಾತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿದ್ದು, ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದಾಳೆ.

    ಮಲೆನಾಡಿನ ಬೆಟ್ಟ, ಗುಡ್ಡ ಹಸಿರು ಕಾನನದ ನಡುವೆ ಬಳುಕುತ್ತಾ ಹರಿಯುವ ಶರಾವತಿ ನದಿ ಜೋಗದಲ್ಲಿ ಸುಮಾರು 950 ಅಡಿಗಳಿಂದ ಭೋರ್ಗರೆಯುತ್ತಾ ಧುಮ್ಮುಕುವ ದೃಶ್ಯ ರುದ್ರ ರಮಣೀಯ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಜನಿಸುವ ಶರಾವತಿ ನದಿ, ನಂತರ ಹೊಸನಗರ ತಾಲೂಕಿನ ಮೂಲಕ ಹರಿದು ಸಾಗರ ತಾಲೂಕಿನ ಜೋಗದಲ್ಲಿ ಧುಮ್ಮಿಕ್ಕುವ ಮೂಲಕ ಜಲಪಾತ ಸೃಷ್ಠಿಯಾಗಿದೆ. ಮಳೆಗಾಲದಲ್ಲಿ ಜೋಗ ಜಲಪಾತ ತನ್ನ ನಿಜ ಸೌಂದರ್ಯವನ್ನು ಜಗತ್ತಿಗೆ ಉಣ ಬಡಿಸುತ್ತಾಳೆ. ಸಾಗರ ತಾಲೂಕಿನಲ್ಲಿ ಮಳೆ ಜೋರಾದರೆ ಸಾಕು ಜೋಗ ಜಲಪಾತ ಕಳೆ ಕಟ್ಟುತ್ತದೆ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಲಾಗಿದೆ. ಅಣೆಕಟ್ಟು ಭರ್ತಿಯಾಗುವವರೆಗೂ ಜೋಗ ಜಲಪಾತಕ್ಕೆ ಹೆಚ್ಚಿನ ನೀರು ಹರಿದು ಬರುವುದಿಲ್ಲ. ಅದರೆ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಸಮಯದಲ್ಲಿ ಸುತ್ತಮುತ್ತಲ ನೀರು ಹರಿದು ಶರಾವತಿ ನದಿ ಸೇರುವುದರಿಂದ ಜೋಗ ಜಲಪಾತ ಧುಮ್ಮಿಕ್ಕುತ್ತಿದೆ.

    ಮಂಜಿನೊಂದಿಗೆ ಕೆಲ ಕಾಲ ಮರೆಯಾಗುವ ಜಲಪಾತ, ಮಂಜು ಮರೆಯಾದ ತಕ್ಷಣ ಮತ್ತೆ ಗೋಚರಿಸುವ ಜಲಪಾತದ ಕಣ್ಣಮುಚ್ಚಾಲೆ ಆಟ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ರಾಜ, ರಾಣಿ, ರೋರರ್ ರಾಕೇಟ್ ಕವಲುಗಳಾಗಿ ಧುಮ್ಮಿಕ್ಕುವ ವೈಭವ ಮನ ಮೋಹಕವಾಗಿದೆ. ಸುರಿಯುತ್ತಿರುವ ಮಳೆ, ಜಲಪಾತವನ್ನು ಆವರಿಸಿದ ಮಂಜು, ಆಗಾಗೆ ತೆರೆ ಸರಿಸಿ ಮಂಜು ಮರೆಯಾಗುವ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂಗಾರು ಮಳೆಯ ನಡುವೆ ಜಲಪಾತವನ್ನು ನೋಡುವುದೇ ಒಂದು ವೈಭವ. ಹಾಲಿನ ನೊರೆಯಂತೆ ಜೋಗ ಜಲಪಾತ ಕಣ್ಮನ ಸೆಳೆಯುತ್ತಿದೆ. ‘ಸಾಯೋದ್ರೋಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಎಂಬ ಕವಿವಾಣಿಯಂತೆ ಜೀವನದಲ್ಲಿ ಒಮ್ಮೆಯಾದರೂ ಜೋಗ ಜಲಪಾತದ ಮೆರುಗನ್ನು ಮಳೆಗಾಲದಲ್ಲಿ ನೋಡಲೇ ಬೇಕು.

    ಶರಾವತಿ ನದಿ ಸುಂದರವಾದ ಒಂದು ದೃಶ್ಯ ಕಾವ್ಯ. ಮಲೆನಾಡಿನ ಸುಂದರ ಸೊಬಗಿನಲ್ಲಿ ಬಳಕುತ್ತಾ ಹರಿದು, ಜೋಗದಲ್ಲಿ ತನ್ನ ವೈಭವವನ್ನು ಮೆರೆದಿದ್ದಾಳೆ. ಅವಳ ರುದ್ರ ರಮಣೀಯಾ ದೃಶ್ಯ ನೋಡುವುದೇ ಒಂದು ಸೊಬಗು. ಜೋಗ ಜಲಪಾತಕ್ಕೆ ಇಂದು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಕೊರೋನಾ ಭೀತಿ ನಡುವೆ ಮನೆಯಲ್ಲೇ ಲಾಕ್ ಆಗಿದ್ದ ಜನರು ಮಳೆಯ ನಡುವೆಯೇ ಜೋಗ ಜಲಪಾತದ ಸೌಂದರ್ಯ ಸವಿದರು.

  • ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಜಂಟಿ ಸರ್ವೆ: ಸಚಿವ ಕೆ.ಎಸ್.ಈಶ್ವರಪ್ಪ

    ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಜಂಟಿ ಸರ್ವೆ: ಸಚಿವ ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ ಡಿನೋಟಿಫೈ ಆದ ಪ್ರದೇಶಗಳ ವಿವರ ಹಾಗೂ ಸಂತ್ರಸ್ತರ ಸಮಗ್ರ ಮಾಹಿತಿ ಸಂಗ್ರಹಣೆಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.

    ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ನಡೆಸಿದರು. ಹಲವು ದಶಕಗಳಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಬಗೆಹರಿಸಲು ಜಂಟಿ ಸರ್ವೆ ನಡೆಸಿ 20 ದಿನಗಳ ಒಳಗಾಗಿ ಒಂದು ಹಂತಕ್ಕೆ ತರುವಂತೆ ಅವರು ತಿಳಿಸಿದರು.

    ಮುಳುಗಡೆ ಸಂತ್ರಸ್ತರಿಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಂತೆ ಅರಣ್ಯ ಪ್ರದೇಶದಲ್ಲಿ 8,285 ಎಕರೆ ಕಂದಾಯ ಭೂಮಿಯಲ್ಲಿ 1,100 ಎಕರೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯೇತರ ಜಿಲ್ಲೆಗಳಲ್ಲಿ 387 ಎಕರೆ ಸೇರಿದಂತೆ ಒಟ್ಟು 9,773 ಎಕರೆ ಜಮೀನು ಮೀಸಲಿರಿಸಲಾಗಿದೆ. ಇದರಲ್ಲಿ 6,303 ಎಕರೆ ಡಿನೋಟಿಫೈ ಮಾಡಲಾಗಿದೆ. ಸಂತ್ರಸ್ತರಿಗಾಗಿ ಮೀಸಲಾಗಿರಿಸಿರುವ ಪ್ರದೇಶದಲ್ಲಿ ಇನ್ನೂ 1,982 ಎಕರೆ ಡಿನೋಟಿಫೈಮಾಡಲು ಬಾಕಿ ಇದೆ. ಜಂಟಿ ಸಮೀಕ್ಷೆ ನಂತರ ಫಲಾನುಭವಿವಾರು ಡಿನೋಟಿಫಿಕೇಶನ್ ವಿಸ್ತೀರ್ಣಕ್ಕೆ ಆರ್‍ವಿಸಿಯಲ್ಲಿ 3,565 ಎಕರೆ ತಾಳೆಯಾಗಿದೆ. 2,737 ಎಕರೆ ಇನ್ನೂ ತಾಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.

    ಇದು ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು, ಜಂಟಿ ಸರ್ವೆ ಮಾಡಿ ಪ್ರಕರಣವಾರು ಸಮಸ್ಯೆ ಬಗೆಹರಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದರೆ ಪ್ರಕ್ರಿಯೆ ತ್ವರಿತಗೊಳಿಸಬಹುದಾಗಿದೆ ಎಂದು ಅವರು ಹೇಳಿದರು.

    ಚಕ್ರಾ, ಸಾವೆಹಕ್ಲು ಯೋಜನೆಯಡಿ ಭೂಮಿ ಕಳೆದುಕೊಂಡಿರುವವರಿಗೆ ಸಮಗ್ರ ಪರಿಹಾರ ಒದಗಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ಕಂದಾಯ ಜಮೀನನ್ನು ಪ್ರಸ್ತಾವಿತ ಅರಣ್ಯ ಎಂದು ಆರ್‍ವಿಸಿಯಲ್ಲಿ ನಮೂದು ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಒತ್ತಾಯಿಸಿದರು.

    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್ ಚನ್ನಬಸಪ್ಪ, ಸಿಸಿಎಫ್ ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ಅನುರಾಧ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.