Tag: ಶರತ್ ಮಡಿವಾಳ

  • ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    ಮಂಗಳೂರು: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಭೇಟಿ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿದ ಡಿವಿಎಸ್ ಶರತ್ ತಂದೆ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಗನ ಸಾವನ್ನು ನೆನೆದು ಡಿವಿಎಸ್ ಮುಂದೆ ಶರತ್ ತಂದೆ ತನಿಯಪ್ಪ ಕಣ್ಣೀರು ಹಾಕಿದ್ರು. ಡಿವಿಎಸ್‍ಗೆ ಶಾಸಕ ಸುನೀಲ್ ಕುಮಾರ್, ಎಂಎಲ್‍ಸಿ ಗಣೇಶ್ ಕಾರ್ಣಿಕ್ ಸಾಥ್ ನೀಡಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಶರತ್ ಒಬ್ಬ ಅಮಾಯಕ ಯುವಕ. ಒಂದು ಕಪ್ಪುಚುಕ್ಕೆ ಇಲ್ಲದವನ ಕೊಲೆಯಾಯ್ತು. ಇಂತಹ ನೂರು ಶರತ್ ಹುಟ್ಟಿ ಬರ್ತಾರೆ. ಆಡಳಿತ ಸೂತ್ರ ಹಿಡಿದವರೇ ಇದರ ಹಿಂದೆಯಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.

    ಇದೇ ವೇಳೆ ಡಿವಿಎಸ್ ತುಪ್ಪ ಸುರಿಯುತ್ತಾರೆಂಬ ರಮಾನಾಥ ರೈ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾರಿಗೆ ತುಪ್ಪ ಸುರಿಯುತ್ತಾರೆ ನೋಡೋಣ. ತುಪ್ಪ ಯಾರಿಗೆ ಸುರಿಯುತ್ತಾರೆ ಅಂತ ಗೊತ್ತಾಗುತ್ತದೆ ಎಂದು ರೈ ವಿರುದ್ಧ ಕಿಡಿಕಾರಿದ್ರು.

  • ಶರತ್ ಸಾವಿನ ಬಳಿಕ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ!

    ಶರತ್ ಸಾವಿನ ಬಳಿಕ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ!

    ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಬಳಿಕ ಉದ್ವಿಗ್ನಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮತ್ತೊಂದು ಹಲ್ಲೆ ನಡೆದಿದೆ.

    ಮಂಗಳೂರು ಎಡಪದವು ಬಳಿ ಅಬೂಬಕರ್ ಸಿದ್ದಿಕ್(35) ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಸೋಮವಾರ ರಾತ್ರಿ ಕ್ವಾರಿ ಕೆಲಸ ಮುಗಿಸಿ ಅಬೂಬಕರ್ ಸಿದ್ದಿಕ್ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಎಡಪದವು ವಿವೇಕಾನಂದ ಶಾಲೆ ಬಳಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಸಿದ್ದಿಕ್ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಗಳೂರಿನಲ್ಲಿ ನಡೆದ ಕೋಮುಗಲಭೆಯ ನಿಯಂತ್ರಣಕ್ಕೆ ಬಾರದಿದ್ದಕ್ಕೆ ಸೋಮವಾರ ಮಧ್ಯಾಹ್ನವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೇ ಶಾಂತಿ ಕದಡುವ ಕೆಲಸ ಮಾಡಿದ್ರೂ ಯಾವುದೇ ಮುಲಾಜಿಲ್ಲದೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಅಂತ ಹೇಳಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ ನಡೆದಿದೆ.

    ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಬಟ್ಟೆ ಒಗೆದವ ನಾನು. ಅವರ ಅಂಗಿ ಪ್ಯಾಂಟ್ 20 ವರ್ಷ ಒಗೆದಿದ್ದೇನೆ. ದಿನಂಪ್ರತಿ ಇಸ್ತ್ರಿ ಮಾಡಿಕೊಟ್ಟಿದ್ದೇನೆ. ಆದ್ರೆ ಇದೀಗ ಘಟನೆಯಾಗಿ 8 ದಿನ ಆಗ್ತಾ ಬಂದಿದೆ. ಆದ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಸಜಿಪದಲ್ಲಿ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಶರತ್ ತಂದೆ ತನಿಯಪ್ಪ, ರೈ ಚಿಕ್ಕಂದಿನಿಂದ ನಮ್ಮ ಅಂಗಡಿ ಬಳಿ ಓಡಾಡುತ್ತಿದ್ದರು. ಅಂದು ಸೇವಾ ಮನೋಭಾವನೆ ನನ್ನಲ್ಲಿತ್ತು. ಹೀಗಾಗಿ ಅವರ ಬಟ್ಟೆ ಒಗೆದು, ಇಸ್ತ್ರೀ ಮಾಡಿ ಕೊಟ್ಟಿದ್ದೆ. ಆದ್ರೆ ಇವತ್ತಿಗೆ ಇದನ್ನೆಲ್ಲಾ ಮರೆತ್ರು. ನಾನು ಕಾಂಗ್ರೆಸ್-ಬಿಜೆಪಿ, ಹಿಂದೂ-ಮುಸ್ಲಿಮರೆಂದು ಭೇದ-ಭಾವ ಮಾಡಿಲ್ಲ. ನನ್ನ ಕುಟುಂಬದ ಮೇಲೆ ಅವರಿಗೆ ಯಾಕೆ ಕೋಪ ತಾತ್ಸಾರ ಅಂತ ಶರತ್ ತಂದೆ ಕಣ್ಣೀರು ಹಾಕಿದ್ರು.

    ನನ್ನ ಚಿತೆಗೆ ಶರತ್ ಬೆಂಕಿಯಿಡಬೇಕಿತ್ತು. ಕೊಂದ ದುಷ್ಕರ್ಮಿಗಳು ಭೂಮಿ ಮೇಲೆ ಶಾಶ್ವತವಲ್ಲ. ದೇವರೇ ಅವರನ್ನ ನೋಡಿಕೊಳ್ಳಲಿ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಕುಟುಂಬಕ್ಕೆ ಗತಿಯಿಲ್ಲದಂತಾಗಿದೆ. ದೇವರೇ ನಮ್ಮ ಸಂಸಾರ ನೋಡಿಕೊಳ್ಳಲಿ ಅಂತ ಶರತ್ ತಂದೆ ತನಿಯಪ್ಪ ಹೇಳಿದರು.

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮನೆಯಲ್ಲಿ ಸದ್ಗತಿಯ ಕಾರ್ಯ ನಡೆಯಲಿದ್ದು, ಜುಲೈ 20ಕ್ಕೆ ವೈಕುಂಠ ಸಮಾರಾಧನೆ ನಡೆಯಲಿದೆ. ಬಂಟ್ವಾಳ ನಂದಾವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

  • ಸಿದ್ದರಾಮಯ್ಯಗೆ ಡಿವಿಎಸ್ ಪುತ್ರ ಶೋಕದ ಪ್ರಶ್ನೆ

    ಸಿದ್ದರಾಮಯ್ಯಗೆ ಡಿವಿಎಸ್ ಪುತ್ರ ಶೋಕದ ಪ್ರಶ್ನೆ

    – ಇಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

    ಬೆಂಗಳೂರು: ಕರಾವಳಿಯಲ್ಲಿ ನಡೆದಿರೋ ಕೋಮು ಗಲಭೆ ಸಂಬಂಧ ರಾಜಕೀಯ ಪಕ್ಷಗಳ ನಡುವೆ ಕಚ್ಚಾಟ ನಿಂತಿಲ್ಲ. ಈಗ ತಮ್ಮ ಮತ್ತು ಸಿದ್ದರಾಮಯ್ಯರ ಪುತ್ರ ಶೋಕವನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ

    ಬಂಟ್ವಾಳದಲ್ಲಿ ನಡೆದಿರೋ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಡಿವಿಎಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

    ನಾವು-ನೀವು ಸಮಾನ ದುಃಖಿಗಳೆಂದು ಒಂದು ಸಂದರ್ಭದಲ್ಲಿ ಹೇಳಿದ್ದೆ. ಮೃತಪಟ್ಟ ಶರತ್ ತಂದೆ ಸ್ಥಾನದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ಶರತ್‍ಗೆ ನ್ಯಾಯ ದೊರಕಿಸಿ. ಶರತ್ ತಂದೆಯ ಮುಖವನ್ನು ನೆನೆಸಿಕೊಂಡರೆ ಸಂಕಟವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಏನೂ ಅನ್ನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ ಎಂದು ಪ್ರಶ್ನೆ ಹಾಕಿದ್ದಾರೆ.

    ಈ ನಡುವೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಗಳ ಜೊತೆ ಇಂದು ಸಭೆ ನಡೆಸಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದಲೂ ಮಂಗಳೂರು, ಉಡುಪಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಅನ್ಯಧರ್ಮಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ. ನಿಷೇಧಾಜ್ಞೆ ಜಾರಿ ಮಾಡಿದ್ರೂ ಕೂಡ ಮೊನ್ನೆ ಮೊನ್ನೆಯಷ್ಟೇ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಕೊಲೆ ನಡೆಯಿತು. ಬಳಿಕ ಶವಯಾತ್ರೆಯಲ್ಲಿ ಕಲ್ಲು ತೂರಾಟ, ಮತ್ತದೇ ಚಾಕು ಇರಿತ ನಡೆಯುತ್ತಲೇ ಇದೆ. ಇದ್ರಿಂದ ಬೇಸತ್ತಿರೋ ಸಿಎಂ ಖಡಕ್ ಚರ್ಚೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ರಿಂದ 12:30ರ ವರೆಗೂ ಸಭೆ ನಡೆಸಿ ಬಳಿಕ 12:30 ಕ್ಕೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ.

  • ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

    ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

    ಶಿವಮೊಗ್ಗ: ಮಂಗಳೂರು ಕೋಮು ಗಲಭೆ ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ದೂರಿದ್ದಾರೆ.

    ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮುಗಲಭೆ ನಡೆಯಲಿ ಎಂಬ ಹಿತಾಸಕ್ತಿ ಸರ್ಕಾರಕ್ಕೆ ಇದೆ ಎಂಬ ಅನುಮಾನ ಮೂಡಿದೆ. ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಇದರಿಂದಾಗಿ ಕೋಮುಗಲಭೆ ಮಾಡುವವರಿಗೆ ಕುಮ್ಮಕ್ಕು ಕೊಟ್ಟಂತಾಗಿದೆ ಎಂದರು.

    ರಾಜ್ಯದಲ್ಲಿ ಕೋಮುಗಲಭೆ, ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳಾಗುತ್ತಿವೆ. ರಾಷ್ಟ್ರ ಭಕ್ತರಿಗೆ ಬೆದರಿಕೆಗಳು ಬರುತ್ತಿವೆ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬೆದರಿಕೆ ಹಾಕಿರೋದು ಯಾರು ಎಂಬುದನ್ನು ಸರ್ಕಾರ ಪತ್ತೆ ಹಚ್ಚಲಿ. ಇಂಥ ವಿಷಯಗಳ ಬಗ್ಗೆ ಸಿಎಂಗೆ ಗಂಭೀರತೆ ಇಲ್ಲ. ಉಡಾಫೆಯಾಗಿ ಮಾತಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.

    ಮಂಗಳೂರಿನ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಫರಂಗಿ ಪೇಟೆಯಲ್ಲಿ 300 ಪೊಲೀಸರ ನಿಯೋಜನೆ ಮಾಡಲಾಗಿದೆ. ಲಾರಿಗಳಲ್ಲಿ ಪೊಲೀಸರನ್ನ ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಚಿಕ್ಕಮಗಳೂರು, ಹಾಸನ, ಕಾರವಾರ, ಶಿವಮೊಗ್ಗದ 1000ಕ್ಕೂ ಹೆಚ್ಚು ಪೊಲೀಸರ ರವಾನೆ ಮಾಡಲಾಗಿದೆ. ಮಸೀದಿಗಳಿಗೆ ಸಿಆರ್‍ಫಿಎಫ್ ಪೊಲೀಸರ ಭದ್ರತೆ ಹಾಗೂ ದೇವಸ್ಥಾನಗಳ ಮುಂಭಾಗದಲ್ಲೂ ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಅಂತಾ ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಶವಯಾತ್ರೆಗೆ ಬಿಜೆಪಿ ಸಿದ್ಧತೆ- ಮೆರವಣಿಗೆಗೆ ಖಾಕಿ ಸರ್ಪಗಾವಲು

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಶವಯಾತ್ರೆಗೆ ಬಿಜೆಪಿ ಸಿದ್ಧತೆ- ಮೆರವಣಿಗೆಗೆ ಖಾಕಿ ಸರ್ಪಗಾವಲು

    ಮಂಗಳೂರು: 4 ದಿನಗಳ ಹಿಂದೆ ಹಲ್ಲೆಗೆ ಒಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಪಾರ್ಥಿವ ಶರೀರದ ಮೆರವಣಿಗೆ ಬಳಿಕ ಇಂದು ಅಂತ್ಯಕ್ರಿಯೆ ನಡೆಯಲಿದೆ.

    ಮಳೆ ನಡುವೆಯೂ ಶವಯಾತ್ರೆಗೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಸಿದ್ಧತೆ ನಡೆಸಿದೆ. ಬಿಜೆಪಿ ಹಿರಿಯ ನಾಯಕರು ಹಾಗೂ ಆರ್‍ಎಸ್‍ಎಸ್ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮಂಗಳೂರಿನಿಂದ ಶರತ್ ಮನೆಯಿರುವ ಬಂಟ್ವಾಳದ ಸಜಿಪ ಗ್ರಾಮದವರೆಗೂ ಅಂತಿಮ ಶವಯಾತ್ರೆ ನಡೆಯಲಿದೆ. 9.30ರ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಮೆರವಣಿಗೆ ಆರಂಭವಾಗಲಿದೆ. ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ

    ಮಂಗಳೂರು ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಪಾರ್ಥಿವ ಶರೀರದ ಮೆರವಣಿಗೆ ಹಿನ್ನೆಲೆಯಲ್ಲಿ ಮಂಗಳೂರು ತುಂಬೆಲ್ಲಾ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಕ್ಷಣಗಳಲ್ಲಿ ಗಲಾಟೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

    ಜಿಲ್ಲೆಯಾದ್ಯಂತ ಒಟ್ಟು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿ.ಸಿ ರೋಡಿನಲ್ಲಿ ಸಿಆರ್‍ಪಿಎಫ್ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಆರ್‍ಎಎಫ್ ಪಡೆ ನಿಯೋಜನೆ, 4 ಕೆಎಸ್‍ಆರ್‍ಪಿ, 2 ಸಿಆರ್‍ಪಿಎಫ್, 2 ಆರ್‍ಎಎಫ್ ತಂಡ ನಿಯೋಜನೆ ಮಾಡಲಾಗಿದೆ. ಉಡುಪಿ, ಚಿಕ್ಕಮಗಳೂರಿನಿಂದ ಅಧಿಕಾರಿಗಳು ಹೆಚ್ಚುವರಿ ಪೊಲೀಸರನ್ನ ಕರೆಸಿಕೊಂಡಿಸಿದ್ದಾರೆ.

    ಇದನ್ನೂ ಓದಿ: ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

  • ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

    ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

    ಮಂಗಳೂರು: ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ಶರತ್ ಮಡಿವಾಳ (28) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ನಗರದ ಎ.ಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬಳಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿತ್ತು. ಬೆನ್ನು, ಕೆನ್ನೆ, ಕೊರಳು, ತಲೆಯ ಹಿಂಬದಿಯಲ್ಲಿ ತೀವ್ರ ಗಾಯಗೊಂಡಿದ್ದ ಶರತ್ ಅವರನ್ನು ಉಳಿಸಲು ವೈದ್ಯರು ಶತಾಯಗತಾಯ ಪ್ರಯತ್ನಿಸಿದ್ದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.

    ಇಂದು ಬೆಳಿಗ್ಗೆಯಷ್ಟೇ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಶರತ್ ಹಲ್ಲೆಗೈದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿ.ಸಿ. ರೋಡಿನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಸಂಜೆ ಸ್ವತಃ ಶರತ್ ಸಾವನ್ನಪ್ಪಿದ್ದಾರೆ.

    ಶರತ್ ಮಡಿವಾಳ ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ ತನಿಯಪ್ಪ ಎಂಬವರ ಮಗನಾಗಿದ್ದು 28 ವರ್ಷ ವಯಸ್ಸಾಗಿತ್ತು. ಬಿ.ಸಿ.ರೋಡಿನಲ್ಲಿ ಉದಯಲಾಂಡ್ರಿಯನ್ನು ನಡೆಸುತ್ತಿದ್ದ ಅವರು  ಕೆಲಸ ಮುಗಿಸಿ, ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ದಾಳಿ ನಡೆದಿತ್ತು.

    ಆರ್‍ಎಸ್‍ಎಸ್ ನಿರಂತರ ಚಟುವಟಿಕೆಯಲ್ಲಿ ಶರತ್  ಭಾಗಿಯಾಗುತ್ತಿದ್ದರು. ಹೀಗಾಗಿಯೇ ಶರತ್‍ರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

    ದಾಳಿಯ ನಂತರ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಶರತ್ ಅವರನ್ನು ಹಣ್ಣಿನ ವ್ಯಾಪಾರಿಯಾಗಿರುವ ಅಬ್ದುಲ್ ರವೂಫ್ ತಮ್ಮ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಅಲ್ಲಿನ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಿದ್ದರು.

    ಈ ಹಿಂದೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳು:
    1. ಬೆಂಗಳೂರಿನ ಶಿವಾಜಿನಗರಲ್ಲಿ ಆರ್. ರುದ್ರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. 2016 ಅಕ್ಟೋಬರ್ 16ರ ಭಾನುವಾರ ಆರ್‍ಎಸ್‍ಎಸ್ ಪಥಸಂಚಲ ಮುಗಿಸಿ ವಾಪಸ್ ಬರುವಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.

    2. ಮೈಸೂರಿನಲ್ಲಿ ಮಾರ್ಚ್ 13ರಂದು ರಾಜು ಎಂಬವರನ್ನು ಹತ್ಯೆ ಮಾಡಲಾಗಿತ್ತು. ನೇತಾಜಿ ಸರ್ಕಲ್‍ನಲ್ಲಿ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದು ಸಾಯಿಸಿದ್ರು.

    3. ಬೊಮ್ಮಸಂದ್ರ ಮುನ್ಸಿಪಾಲಿಟಿ ಮೆಂಬರ್ ಕಿತ್ತಗಾನಹಳ್ಳಿ ವಾಸು ಎಂಬುವರನ್ನು ಮಾರ್ಚ್ 14ರಂದು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿತ್ತು.