Tag: ಶಬರಿಮಲೆ ದೇಗುಲ

  • 2 ಗ್ರಾಂ 900 ಮಿಲಿ ಚಿನ್ನದಲ್ಲಿ ಅರಳಿದ ಶಬರಿಮಲೆ ದೇವಾಲಯ

    2 ಗ್ರಾಂ 900 ಮಿಲಿ ಚಿನ್ನದಲ್ಲಿ ಅರಳಿದ ಶಬರಿಮಲೆ ದೇವಾಲಯ

    ಶಿವಮೊಗ್ಗ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿಲ್ಲೆಯ ಯುವಕನೋರ್ವ 2 ಗ್ರಾಂ 900 ಮಿಲಿ ಬಂಗಾರದಲ್ಲಿ ಶಬರಿಮಲೆ ಅಯ್ಯಪ್ಪನ ದೇವಾಲಯ ನಿರ್ಮಾಣ ಮಾಡಿದ್ದು, ಈ ಯುವಕನ ಕಲೆಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿ ನಿವಾಸಿ ಸಚ್ಚಿನ್ ವರ್ಣೆಕರ್, ಅಯ್ಯಪ್ಪ ಸ್ವಾಮಿಯ ಭಕ್ತನಾಗಿದ್ದು, ಅತಿ ಕಡಿಮೆ ಬಂಗಾರದಲ್ಲಿ ದೇಗುಲವನ್ನು ಬಹಳ ಸುಂದರವಾಗಿ ತಯಾರು ಮಾಡಿದ್ದಾರೆ.ಬಂಗಾರ ಹಾಗೂ ಮರವನ್ನು ಬಳಸಿ ಅಯ್ಯಪ್ಪನ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಸಂಕ್ರಾಂತಿಯ ಹತ್ತು ದಿನದ ಮುಂಚೆ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿತ್ತು. ಸಚ್ಚಿನ್ ವರ್ಣೆಕರ್ ಪ್ರತಿದಿನ ಎರಡು ಗಂಟೆಗೆ ಇದಕ್ಕಾಗಿ ಮೀಸಲಿಟ್ಟು ತಯಾರು ಮಾಡಿದ್ದಾರೆ.

    ಶಬರಿಮಲೆಯ ಮಾದರಿಯಂತೆಯೇ 18 ಮೆಟ್ಟಿಲು, ನಂತ್ರ ದೇವಾಲಯ, ಮುಂಭಾಗದ ನಾಲ್ಕು ಮೆಟ್ಟಿಲು, ಮುಂಭಾಗದ ಎರಡು ಗಂಟೆ ಎಲ್ಲವೂ 2 ಗ್ರಾಂ. 900 ಮಿಲಿ ಬಂಗಾರದಲ್ಲಿ ನಿರ್ಮಾಣ ಮಾಡುವ ಮೂಲಕ ತಮಗಿರುವ ಕಲೆಯ ಕೈಚಳಕವನ್ನು ತೋರಿಸಿದ್ದಾರೆ.

    ಶಬರಿಮಲೆಯ ಅಯ್ಯಪ್ಪನ ದೇವಾಲಯವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ಮಾಣ ಮಾಡಲಾಗಿದ್ದು, ಅಯ್ಯಪ್ಪನ ದೇವಾಲಯದ ಮಾದರಿಯನ್ನು ಕಂಡು ಸಚ್ಚಿನ್ ಗೆ ಎಲ್ಲಾರು ಶಹಬಾಷ್ ಹೇಳಿದ್ದಾರೆ. ಸಚ್ಚಿನ್ ಹಿಂದೆ ಬಂಗಾರದಲ್ಲಿ ಶ್ರೀರಾಮ ಮಂದಿರದ ಮಾದರಿಯನ್ನು ನಿರ್ಮಾಣ ಮಾಡಿದ್ದರು. ಇದು ಇಂಟರ್ ನ್ಯಾಶನಲ್ ಬುಕ್ ಆಫ್ ರೇಕಾರ್ಡ್ ನಲ್ಲಿ ದಾಖಲಾಗಿದೆ. ಅದೇ ರೀತಿ ಬಂಗಾರದ ಶಿವಲಿಂಗ ನಿರ್ಮಾಣವು ಇಂಡಿಯನ್ ಬುಕ್ ಆಫ್ ರೇಕಾರ್ಡ್ ನಲ್ಲಿ ದಾಖಲಾಗಿದೆ.

    ಸಚ್ಚಿನ್ ವರ್ಣೇಕರ್ ಮೂಲತಃ ಅಕ್ಕಸಾಲಿಗರಾಗಿದ್ದು, ಕಲೆ ಇವರಿಗೆ ಕರಗತವಾಗಿ ಬಂದಿದೆ. ಇದನ್ನೇ ಬಳಸಿ ಕೊಂಡು ಸೂಕ್ಷ್ಮ ಕಲೆಯ ಮೂಲಕ ಎಲ್ಲವು ಬೆರಗಾಗುವಂತಹ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಇವರ ಕುಟುಂಬ ವರ್ಗ ಸಾಥ್ ನೀಡಿದನ್ನು ಸಚ್ಚಿನ್ ನೆನಪು ಮಾಡಿ ಕೊಳ್ಳುತ್ತಾರೆ.

    ಸಚ್ಚಿನ್ ವರ್ಣೇಕರ್ ಶಬರಿಮಲೆಯ ಅಯ್ಯಪ್ಪನ ದೇವಾಲಯ ಮಾದರಿಯನ್ನು ನೋಡಿ ಆತನ ಸ್ನೇಹಿತರು ಬೆನ್ನು ತಟ್ಟಿದ್ದಾರೆ. ಒಟ್ಟಿನಲ್ಲಿ ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಸಚ್ಚಿನ್ ಸೂಕ್ಷ್ಮ ಕಲೆಯ ಸಣ್ಣ ಗಾತ್ರದ ಕಲಾಕೃತಿಗಳನ್ನು ಅದ್ಭುತವಾಗಿ ನಿರ್ಮಾಣ ಮಾಡುತ್ತಿರುವುದಕ್ಕೆ ನಾಗರೀಕರು ಭೇಷ್ ಎಂದಿದ್ದಾರೆ.