Tag: ಶತಕ

  • ರಾಹುಲ್ ವಿಶಿಷ್ಟ ಶತಕ ಸಂಭ್ರಮಾಚರಣೆಯ ರೀಸನ್ ರೀವಿಲ್

    ರಾಹುಲ್ ವಿಶಿಷ್ಟ ಶತಕ ಸಂಭ್ರಮಾಚರಣೆಯ ರೀಸನ್ ರೀವಿಲ್

    ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸುವ ಮೂಲಕ ಮಿಂಚಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಶತಕ ಸಿಡಿಸಿದ ಕೂಡಲೇ ಕೈಗಳಿಂದ ಕಿವಿ ಮುಚ್ಚಿಕೊಂಡು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡಿದ್ದರು. ಇದೀಗ ಸ್ವತಃ ರಾಹುಲ್ ಅವರೇ ಈ ಸಂಭ್ರಮಾಚರಣೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ರಾಹುಲ್ ಏಕದಿನ ಸರಣಿಯಲ್ಲಿ ಮತ್ತೆ ಫಾರ್ಮ್‍ಗೆ ಮರಳಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 62 ರನ್(43 ಬಾಲ್) ಸಿಡಿಸಿ ಮಿಂಚಿದ್ದ ರಾಹುಲ್ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ತನ್ನ ಬ್ಯಾಟಿಂಗ್ ಬಗ್ಗೆ ಕಿಡಿಕಾರಿದವರಿಗೆ ಬ್ಯಾಟ್‍ನಿಂದಲೇ ಉತ್ತರ ನೀಡಿದ್ದಾರೆ.

    ಒಂದು ಹಂತದಲ್ಲಿ ಭಾರತ ತಂಡ 37 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಾಹುಲ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಜೊತೆಗೂಡಿ ಉತ್ತಮ ಜೊತೆಯಾಟವಾಡುವ ಮೂಲಕ ಭಾರತದ ಸ್ಕೋರ್ 300ರ ಗಡಿ ದಾಟುವಂತೆ ಮಾಡಿದ್ದರು. ರಾಹುಲ್ ಈ ಪಂದ್ಯದಲ್ಲಿ 108 ರನ್ (114 ಬಾಲ್, 7 ಬೌಂಡರಿ, 2 ಸಿಕ್ಸರ್) ಸಿಡಿಸಿ ತನ್ನ ಐದನೇ ಏಕದಿನ ಶತಕವನ್ನು ವಿಶೇಷವಾಗಿ ಸಂಭ್ರಮಿಸಿದರು.

    ರಾಹುಲ್ ಶತಕ ಸಿಡಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‍ನತ್ತ ಬ್ಯಾಟ್ ತೋರಿಸಿ ನಂತರ ಎರಡು ಕಣ್ಣುಗಳನ್ನು ಮುಚ್ಚಿ, ಕೈಗಳಿಂದ ಕಿವಿಗಳನ್ನು ಮುಚ್ಚಿ ಸುಮ್ಮನೆ ನಿಂತು ಸಂಭ್ರಮಾಚರಣೆ ಮಾಡಿದ್ದರು. ಈ ಕುರಿತು ಪಂದ್ಯದ ಬಳಿಕ ಉತ್ತರಿಸಿದ ರಾಹುಲ್, ನನ್ನ ಸಂಭ್ರಮಾಚರಣೆ ಯಾರಿಗೂ ಅಗೌರವ ತೋರುವ ಉದ್ದೇಶ ಹೊಂದಿಲ್ಲ. ನನ್ನ ಬಗ್ಗೆ ಮಾತನಾಡುವವರ ಬಗ್ಗೆ ನಾನು ಕಿವಿಕೊಡಲಾರೆ, ಯಾರು ನನ್ನನ್ನು ಕುಗ್ಗಿಸಲು ನೋಡುತ್ತಾರೋ ಅವರಿಗೆ ಉತ್ತರವಾಗಿ ಈರೀತಿ ಮಾಡಿದೆ ಎಂದರು.

    ಟಿ20 ಪಂದ್ಯಗಳಲ್ಲಿ ನಾನು ನೀಡಿದ ಪ್ರದರ್ಶನ ನನಗೆ ಬೇಸರ ತಂದಿತ್ತು. ನಾನು ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದೆ, ಆದರೆ ಇದನ್ನು ಸರಿಪಡಿಸಿಕೊಂಡು ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದೇನೆ ಎಂದರು. ರಾಹುಲ್ ಈ ಹಿಂದೆಯೂ ಶತಕ ಸಿಡಿಸಿದ ವೇಳೆ ಇದೆ ರೀತಿ ಸಂಭ್ರಮಾಚರಣೆ ಮಾಡಿದ್ದರು.

    ಟಿ20 ಸರಣಿಯ ವೈಫಲ್ಯದಿಂದ ಹೊರಬಂದಿರುವ ರಾಹುಲ್ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದು, ಇದೇ ಲಯದಲ್ಲಿ ಮುಂದುವರಿದರೆ ಮುಂದಿನ ಐಪಿಎಲ್‍ನಲ್ಲಿ ರಾಹುಲ್ ಬ್ಯಾಟ್‍ನಿಂದ ರನ್‍ಮಳೆ ಸುರಿಯುವುದರಲ್ಲಿ ಅನುಮಾನವಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಅಶ್ವಿನ್‌ ಶತಕದಾಟ – ಇಂಗ್ಲೆಂಡಿಗೆ 482 ರನ್‌ಗಳ ಗುರಿ

    ಅಶ್ವಿನ್‌ ಶತಕದಾಟ – ಇಂಗ್ಲೆಂಡಿಗೆ 482 ರನ್‌ಗಳ ಗುರಿ

    ಚೆನ್ನೈ: ಬೌಲಿಂಗ್‌ನಲ್ಲಿ 5 ವಿಕೆಟ್‌ ಪಡೆದು ಮಿಂಚಿದ್ದ ಸ್ಪಿನ್ನರ್‌ ಆರ್‌ ಅಶ್ವಿನ್‌ ಏಕದಿನ ಪಂದ್ಯದಂತೆ ಆಡಿ ಶತಕ ಸಿಡಿಸಿದ ಪರಿಣಾಮ ಭಾರತ ಇಂಗ್ಲೆಂಡ್‌ ತಂಡಕ್ಕೆ 482 ರನ್‌ಗಳ ಗುರಿಯನ್ನು ನೀಡಿದೆ.

    ನಿನ್ನೆ1 ವಿಕೆಟ್‌ ಕಳೆದುಕೊಂಡು 54 ರನ್‌ಗಳಿಸಿದ್ದ ಭಾರತ ಮೂರನೇ ದಿನದಾಟದಲ್ಲಿ 85.5 ಓವರ್‌ಗಳಲ್ಲಿ286 ರನ್‌ಗಳಿಗೆ ಆಲೌಟ್‌ ಆಯ್ತು. ಒಂದು ವೇಳೆ ಈ ಪಂದ್ಯವನ್ನು ಇಂಗ್ಲೆಂಡ್‌ ಗೆದ್ದರೆ ಚೇಸಿಂಗ್‌ನಲ್ಲಿ ವಿಶ್ವದಾಖಲೆ ಬರೆಯಲಿದೆ.

    106 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕೊಹ್ಲಿ ಮತ್ತು ಅಶ್ವಿನ್‌ 7ನೇ ವಿಕೆಟಿಗೆ 96 ರನ್‌ಗಳ ಜೊತೆಯಾಟವಾಡಿದರು.

    ತಂಡದ ಮೊತ್ತ 202 ಆಗಿದ್ದಾಗ ಕೊಹ್ಲಿ62 ರನ್‌(149 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಬೆನ್ನಲ್ಲೇ ಕುಲದೀಪ್‌ ಯಾದವ್‌ ಮತ್ತು ಇಶಾಂತ್‌ ಶರ್ಮಾ ಔಟಾದರು. ಆದರೆ 9ನೇ ವಿಕೆಟಿಗೆ ಅಶ್ವಿನ್‌ ಮತ್ತು ಸಿರಾಜ್‌ ಉತ್ತಮವಾಗಿ ಆಡಿ 55 ಎಸೆತಗಳಲ್ಲಿ 49 ರನ್‌ ಜೊತೆಯಾಟವಾಡಿದರು.

    ಏಕದಿನ ಶೈಲಿಯಲ್ಲೇ ಬ್ಯಾಟ್‌ ಬೀಸಿದ ಅಶ್ವಿನ್‌ 106 ರನ್‌(148, 14 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಮೊಹಮ್ಮದ್‌ ಸಿರಾಜ್‌ 16 ರನ್‌(21 ಎಸೆತ, 2 ಬೌಂಡರಿ) ಹೊಡೆದ ಅಜೇಯರಾಗಿ ಉಳಿದರು.

  • 2009 ರಿಂದ ಪ್ರತಿವರ್ಷ ಮಾಡ್ತಿದ್ದ ಸಾಧನೆ ಈ ವರ್ಷ ಕೊಹ್ಲಿಗೆ ಮಿಸ್

    2009 ರಿಂದ ಪ್ರತಿವರ್ಷ ಮಾಡ್ತಿದ್ದ ಸಾಧನೆ ಈ ವರ್ಷ ಕೊಹ್ಲಿಗೆ ಮಿಸ್

    – ಸಚಿನ್ ದಾಖಲೆ ಬ್ರೇಕ್ ಮಾಡಿದ ವಿರಾಟ್

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಂದೇ ಒಂದು ಶತಕ ಸಿಡಿಸದೇ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ.

    ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 2008ರಲ್ಲಿ ಭಾರತದ ಪರವಾಗಿ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ ಕೊಹ್ಲಿ, 2009ರಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ದರು. ಸದ್ಯ ಏಕದಿನ ಮಾದರಿಯಲ್ಲಿ 43 ಶತಕ ಸಿಡಿಸಿರುವ ಕೊಹ್ಲಿ, ರನ್ ಮಷಿನ್ ಎಂಬ ಹೆಸರು ಪಡೆದು ಮುನ್ನುಗ್ಗುತ್ತಿದ್ದಾರೆ.

    2009ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಮೊದಲ ಶತಕ ಸಿಡಿಸಿದ್ದರು. ಅಂದಿನಿಂದ ಬರೋಬ್ಬರಿ 11 ವರ್ಷ ಎಲ್ಲ ವರ್ಷದಲ್ಲೂ ಕೊಹ್ಲಿ ಸತತವಾಗಿ ಶತಕವನ್ನು ಸಿಡಿಸಿಕೊಂಡು ಬಂದಿದ್ದರು. ಆದರೆ ಕೊರೊನಾ ಕಾರಣದಿಂದ ಸ್ವಲ್ಪ ಸಮಯದ ಕಾಲ ಕ್ರಿಕೆಟ್ ಚಟುವಟಿಕೆ ನಿಂತು ಹೋಗಿತ್ತು. ನಂತರ ಐಪಿಎಲ್ ಆರಂಭವಾದರೂ ಕೊಹ್ಲಿ ಶತಕ ಸಿಡಿಸಲಿಲ್ಲ. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲೂ ಅವರು ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

    ಈ ಮೂಲಕ ತಾನು 11 ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಸಾಧನೆಯನ್ನು ಈ ವರ್ಷ ಅವರು ಕೈಚೆಲ್ಲಿದ್ದಾರೆ. ಈ ವರ್ಷ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 6 ಮತ್ತು ನ್ಯೂಜಿಲೆಂಡ್ ವಿರುದ್ಧ 4 ಪಂದ್ಯಗಳನ್ನು ಸೇರಿ ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 47.88 ಸರಾಸರಿಯಲ್ಲಿ ಒಟ್ಟು 431 ರನ್ ಗಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿದ ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

    ಸಚಿನ್ ದಾಖಲೆ ಬ್ರೇಕ್
    ವಿರಾಟ್ ಕೊಹ್ಲಿ ವೇಗವಾಗಿ 12 ಸಾವಿರ ಏಕದಿನ ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. ಸಚಿನ್ ಅವರು 12 ಸಾವಿರ ಏಕದಿನ ರನ್ ಹೊಡೆಯಲು ಬರೋಬ್ಬರಿ 300 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಕೊಹ್ಲಿ ಕೇವಲ 241 ಇನ್ನಿಂಗ್ಸ್ ನಲ್ಲಿ 12 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವೇಗವಾಗಿ 12 ಸಾವಿರ ರನ್ ಗಡಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ.

  • 37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್

    37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್

    -3 ತಿಂಗಳಿನಲ್ಲಿ 7ಕೆಜಿ ತೂಕ ಹೆಚ್ಚಿಸಿಕೊಂಡು ಸಂಪೂರ್ಣ ಫಿಟ್

    ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಮೂರು ತಿಂಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದರು. ಸದ್ಯ ಚೇತರಿಸಿಕೊಂಡು ದೇಶೀಯ ಕ್ರಿಕೆಟ್ ಆಡುತ್ತಿರುವ ಪಾಂಡ್ಯ ಕೇವಲ 37 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

    ದೇಶೀಯ ಡಿವೈ ಪಾಟಿಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ 39 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ ಗಳೊಂದಿಗೆ 105 ರನ್ ಸಿಡಿಸಿದ್ದಾರೆ. ಸಿಎಜಿ ತಂಡದ ವಂದಿತ್ ಜೀವರಾಜನಿ ಎಸೆದ ಇನ್ನಿಂಗ್ಸ್ ನ 15ನೇ ಓವರಿನಲ್ಲಿ ಹಾರ್ದಿಕ್ 3 ಸಿಕ್ಸರ್, 2 ಬೌಂಡರಿಗಳೊಂದಿಗೆ 26 ರನ್ ಗಳಿಸಿದ್ದು ಗಮನಾರ್ಹವಾಗಿತ್ತು. ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ಗಮನ ಸೆಳೆದ ಹಾರ್ದಿಕ್ ಪಾಂಡ್ಯ ಆ ಮೂಲಕ ತಾನು ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಸಿದ್ಧ ಎಂಬ ಸಂದೇಶವನ್ನು ರವಾಸಿದ್ದಾರೆ.

    ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಿಲಯನ್ಸ್ 1 ತಂಡದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಇತ್ತ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಬ್ಬ ಸ್ಟಾರ್ ಆಟಗಾರ ಧವನ್ ಮತ್ತೊಮ್ಮೆ ಬ್ಯಾಟಿಂಗ್‍ನಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹಾರ್ದಿಕ್ 25 ಎಸೆತಗಳಲ್ಲಿ 38 ರನ್ ಗಳಿಸಿದ್ದರು.  ಇದೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಭುವನೇಶ್ವರ್, ಶಿಖರ್ ಧವನ್ ಕೂಡ ಮೈದಾನಕ್ಕಿಳಿದಿದ್ದರು.

    ಟೀಂ ಇಂಡಿಯಾ ಪರ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ಆಡಿದ್ದ ಹಾರ್ದಿಕ್ ಪಾಂಡ್ಯ ಆ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿಶ್ರಾಂತಿ ಸಮಯದಲ್ಲಿ ಹಾರ್ದಿಕ್ ತಮ್ಮ ದೇಹದ ತೂಕ ಕಳೆದುಕೊಂಡಿದ್ದರು. ಆದರೆ ಮತ್ತೆ ತೂಕವನ್ನು ಹೆಚ್ಚಿಸಿಕೊಂಡಿರುವ ಹಾರ್ದಿಕ್, ತಮ್ಮ ಫಿಟ್ನೆಸ್ ಜರ್ನಿಯ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿ ಮಾಹಿತಿ ನೀಡಿದ್ದಾರೆ. ಮಾ.12 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲಿದ್ದು, ಈ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್ ಮಾಡುವ ಸಾಧ್ಯತೆ ಇದೆ. ಮಾ.12 ರಂದು ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದೆ.

  • ವಿಶ್ವಕಪ್ ಫೈನಲಿನಲ್ಲಿ ಶತಕ ವಂಚಿತನಾಗಲು ಧೋನಿಯೇ ಕಾರಣ: ಸತ್ಯ ಬಿಚ್ಚಿಟ್ಟ ಗಂಭೀರ್

    ವಿಶ್ವಕಪ್ ಫೈನಲಿನಲ್ಲಿ ಶತಕ ವಂಚಿತನಾಗಲು ಧೋನಿಯೇ ಕಾರಣ: ಸತ್ಯ ಬಿಚ್ಚಿಟ್ಟ ಗಂಭೀರ್

    ನವದೆಹಲಿ: ನಾನು 2011ರ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶತಕ ವಂಚಿತನಾಗಲು ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

    ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2011ರ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 28 ವರ್ಷದ ನಂತರ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಈ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಶತಕ ವಂಚಿತರಾಗಿದ್ದ ಗೌತಮ್ ಗಂಭೀರ್ ಅವರು, ನಾನು ಶತಕ ವಂಚಿತನಾಗಲು ಅಂದಿನ ನಾಯಕ ಎಂ.ಎಸ್ ಧೋನಿ ಅವರು ಕಾರಣ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗಂಭೀರ್ ಅವರು, ನಾನು ಎಲ್ಲೇ ಹೋದರೂ ಯುವಕರು ಆ ದಿನ ನೀವು ಯಾಕೆ ಶತಕ ಹೊಡೆದಿಲ್ಲ ಎಂದು ಪ್ರಶ್ನಿಸುತ್ತಾರೆ. ನನಗೂ ಯಾವಗಲೂ ಅನ್ನಿಸುತ್ತದೆ. ಆ ಶತಕ ಸಿಡಿಸಿದ್ದರೆ ನನ್ನ ಕ್ರಿಕೆಟ್ ಜೀವನ ಇನ್ನೂ ಚೆನ್ನಾಗಿ ಇರುತಿತ್ತು. ಆದರೆ ನನ್ನ ವೈಯಕ್ತಿಕ ಸ್ಕೋರ್ ಅನ್ನು ಹಚ್ಚಿಸಿಕೊಳ್ಳುವ ಬರದಲ್ಲೇ ನಾನು ಅವತ್ತು ಶತಕ ವಂಚಿತನಾದೆ ಎಂದು ಹೇಳಿದ್ದಾರೆ.

    ಆ ಪಂದ್ಯದ ವೇಳೆ ನನಗೆ ನಾನು 97 ರನ್ ಹೊಡೆದಿದ್ದೇನೆ ಎಂಬ ಅರಿವೇ ಇರಲಿಲ್ಲ. ಕೇವಲ ನನ್ನ ಗುರಿ ಶ್ರೀಲಂಕಾ ನೀಡಿದ 275 ರನ್‍ಗಳನ್ನು ಬೆನ್ನಟ್ಟವುದು ಆಗಿತ್ತು. ಆದರೆ ಆ ಓವರಿನ ಮಧ್ಯದಲ್ಲಿ ನನ್ನ ಬಳಿಗೆ ಬಂದ ಧೋನಿ ಅವರು, ನೀನು ಈಗ 97 ರನ್ ಹೊಡೆದಿದ್ದಿ. ಇನ್ನು ಮೂರು ರನ್ ಹೊಡೆದರೆ ಶತಕ ಆಗುತ್ತದೆ ಎಂದು ಹೇಳಿ ನನ್ನ ಗಮನಕ್ಕೆ ತಂದರು. ಆಗ ನನಗೆ ನನ್ನ ವೈಯಕ್ತಿಕ ಸ್ಕೋರ್ ಮೇಲೆ ಗಮನ ಹೆಚ್ಚಾಯ್ತು. ಆದ್ದರಿಂದ ನಾನು ಅಂದು ಔಟ್ ಆದೆ. ಧೋನಿ ಅವರು ಅದನ್ನು ನೆನಪಿಸದೆ ಇದ್ದರೆ ಅವತ್ತು ನಾನು ಶತಕ ಸಿಡಿಸುತ್ತಿದ್ದೆ ಎಂದು ನೆನಪಿಸಿಕೊಂಡರು.

    2011 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 275 ರನ್‍ಗಳ ಮೊತ್ತವನ್ನು ಬೆನ್ನಟ್ಟಲು ಹೋಗಿ ಅಲ್ಪ ಮೊತ್ತಕ್ಕೆ ಮೊದಲ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ್ದ ಭಾರತವನ್ನು ಗೌತಮ್ ಗಂಭೀರ್ ಅವರ ತಾಳ್ಮೆಯ ಆಟವಾಡಿ 3 ರನ್ ಗಳಿಂದ ಶತಕದಿಂದ ವಂಚಿತರಾದರು. ಲಂಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ್ದ ಗೌತಮ್ 97 ರನ್(122 ಎಸೆತ, 9 ಬೌಂಡರಿ) ಹೊಡೆದು ಔಟಾದರು. ಶತಕಕ್ಕೆ ಮೂರು ರನ್‍ಗಳ ಅವಶ್ಯಕತೆ ಇದ್ದಾಗ ಥಿಸರಾ ಪೆರೆರಾ ಅವರಿಗೆ ಬೌಲ್ಡ್ ಆಗಿದ್ದರು.

    2011 ಏಪ್ರಿಲ್ 2 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 275 ರನ್ ಗಳ ಗುರಿ ಹೊಂದಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಮಾಲಿಂಗ ಅವರ ಬೌಲಿಂಗ್ ಗೆ ಬೇಗ ಔಟಾದರು. ಈ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಾಗಿ 83 ರನ್ ಗಳ ಕೊಡುಗೆ ನೀಡಿದ್ದರು. ಆದರೆ 22ನೇ ಓವರ್ ಬಳಿಕ ಶ್ರೀಲಂಕಾ ತಂಡ ಮೇಲುಗೈ ಸಾಧಿಸುತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಔಟಾಗುತ್ತಿದಂತೆ ಧೋನಿ ಬ್ಯಾಟಿಂಗ್ ಇಳಿದಿದ್ದರು.

    ಈ ವೇಳೆ ಗಂಭೀರ್ ಜೊತೆ ಉತ್ತಮ ಶತಕದ ಜೊತೆಯಾಟವಾಡಿದ ಧೋನಿ 4 ವಿಕೆಟಿಗೆ 109 ರನ್ ಗಳ ಜೊತೆಯಾಟವಾಡಿದರು. ಈ ಬಳಿಕ ಜೊತೆಯಾದ ಯುವರಾಜ್ ಸಿಂಗ್ ಮತ್ತು ಧೋನಿ ಮುರಿಯದ 5ನೇ ವಿಕೆಟಿಗೆ 54 ರನ್ ಜೊತೆಯಾಟವಾಡಿ 48.2 ಓವರ್ ಗಳಲ್ಲಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಧೋನಿ 79 ಎಸೆತಗಳಲ್ಲಿ 91 ರನ್ (8 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಗೆ ಸಿಕ್ಸರ್ ಸಿಡಿಸಿ ಭಾರತಕ್ಕೆ ಕಪ್ ಗೆದ್ದುಕೊಟ್ಟಿದ್ದರು.

  • ಸಿಕ್ಸರ್ ಸಿಡಿಸಿ ದಾಖಲೆ – ಶತಕ ಹೊಡೆದು ವಿಶ್ವದಾಖಲೆಗೈದ ಹಿಟ್‍ಮ್ಯಾನ್

    ಸಿಕ್ಸರ್ ಸಿಡಿಸಿ ದಾಖಲೆ – ಶತಕ ಹೊಡೆದು ವಿಶ್ವದಾಖಲೆಗೈದ ಹಿಟ್‍ಮ್ಯಾನ್

    – ನವಜೋತ್ ಸಿಂಗ್ ಸಿಧು ಸಿಕ್ಸರ್ ದಾಖಲೆ ಉಡೀಸ್
    – 41 ವರ್ಷದ ನಂತರ ದಾಖಲಾಯ್ತು ಶತಕ

    ವಿಶಾಖಪಟ್ಟಣಂ: ಟೆಸ್ಟ್ ಕ್ರಿಕೆಟ್‍ನಲ್ಲಿ ಮೊದಲ ಬಾರಿಗೆ ತಂಡದ ಆರಂಭಿಕಾಗಿ ಕಣಕ್ಕೆ ಇಳಿದಿದ್ದ ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್‍ನ ಶತಕ ಸಿಡಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಸದ್ಯ 2ನೇ ಇನ್ನಿಂಗ್ಸ್‍ನಲ್ಲೂ ಅಮೋಘ ಬ್ಯಾಟಿಂಗ್ ಮುಂದುವರಿಸಿರುವ ರೋಹಿತ್ ಮತ್ತೊಂದು ಶತಕ ಸಿಡಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

    ಟೀಂ ಇಂಡಿಯಾ ಪರ 41 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕ ಆಟಗಾರ ಪಂದ್ಯವೊಂದರ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದಾರೆ. 1978-79 ರಲ್ಲಿ ಟೀಂ ಇಂಡಿಯಾ ಪರ ಸುನೀಲ್ ಗವಾಸ್ಕರ್ ಈ ಸಾಧನೆಯನ್ನು ಮಾಡಿದ್ದರು. ಅಲ್ಲದೇ ರೋಹಿತ್ ಆರಂಭಿಕರಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 32 ವರ್ಷದ ರೋಹಿತ್ 224 ಎಸೆತಗಳಲ್ಲಿ 176 ರನ್ ಗಳಿಸಿ ಔಟಾಗಿದ್ದರು. ಸದ್ಯ 2ನೇ ಇನ್ನಿಂಗ್ಸ್ ನಲ್ಲಿ 133 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಪಂದ್ಯವೊಂದರ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ 6ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು.

    ಸಿಕ್ಸರ್ ದಾಖಲೆ: ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದ ರೋಹಿತ್, 2ನೇ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಸಿಡಿಸಿದರು. ಆ ಮೂಲಕ 149 ಎಸೆತಗಳಲ್ಲಿ 85.23 ಸರಾಸರಿಯಲ್ಲಿ 127 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ನವಜೋತ್ ಸಿಂಗ್ ಸಿಧು ಅವರ ದಾಖಲೆಯನ್ನು ರೋಹಿತ್ ಮುರಿದರು. 1994ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಲಕ್ನೋ ಟೆಸ್ಟ್ ಪಂದ್ಯದಲ್ಲಿ ಸಿಧು 8 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಈ ಪಂದ್ಯದಲ್ಲಿ 13 ಸಿಕ್ಸರ್ ಸಿಡಿಸಿದ್ದಾರೆ.

    ಟೀಂ ಇಂಡಿಯಾ ಎಲ್ಲಾ ಮಾದರಿಗಳ ಕ್ರಿಕೆಟ್ ಪಂದ್ಯಗಳಲ್ಲಿ ರೋಹಿತ್ ಹೆಚ್ಚು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, 2013ರಲ್ಲಿ ಆಸೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 16 ಸಿಕ್ಸರ್ ಸಿಡಿಸಿದ್ದರು. ಅಲ್ಲದೇ 2017 ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರ್‍ನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ 10 ಸಿಕ್ಸರ್ ಸಿಡಿಸಿದ್ದರು.

  • ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

    ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಹಿಟ್‍ಮ್ಯಾನ್

    ಹೈದರಾಬಾದ್: ಬುಧವಾರ ಆರಂಭಗೊಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್‍ರ ದಾಖಲೆಗೆ ಸಮಾನರಾಗಿದ್ದಾರೆ.

    ಬುಧವಾರ ವೈಝಾಗ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಓಪನರ್ ಗಳಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್ ಆಗರವಾಲ್ ಉತ್ತಮ ಆಟವಾಡಿದರು. ಆರಂಭಿಕ ಜೊತೆಯಾಟದಲ್ಲಿ ಈ ಜೋಡಿ ಮೊದಲ ದಿನದ ಅಂತ್ಯಕ್ಕೆ 202 ರನ್‍ಗಳ ಜೊತೆಯಾಟವಾಡಿತು. ಈ ಇನ್ನಿಂಗ್ಸ್‍ನಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿಯಲ್ಲಿ ಡಾನ್ ಬ್ರಾಡ್ಮನ್‍ರಿಗೆ ಸಮಾನದ ದಾಖಲೆ ಮಾಡಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನ 50 ಕ್ಕೂ ಹೆಚ್ಚಿನ ಇನ್ನಿಂಗ್ಸ್ ಗಳಲ್ಲಿ ಡಾನ್ ಬ್ರಾಡ್ಮನ್ 98.22 ಸರಾಸರಿಯನ್ನು ಹೊಂದಿದ್ದರು. ಟೆಸ್ಟ್ ಕ್ರಿಕೆಟ್‍ನಲ್ಲಿ ಕಳೆದ 15 ಇನ್ನಿಂಗ್ಸ್ ನಲ್ಲಿ ರೋಹಿತ್ 4 ಶತಕ ಮತ್ತು 5 ಅರ್ಧಶತಕದೊಂದಿದೆ ಒಟ್ಟು 884 ರನ್ ಗಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 10 ಕ್ಕೂ ಹೆಚ್ಚು ಇನ್ನಿಂಗ್ಸ್ ಗಳಲ್ಲಿ 98.22 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, ರೋಹಿತ್ ಶರ್ಮಾ ಬ್ರಾಡ್ಮನ್ ಅವರ ದಾಖಲೆಗೆ ಸಮಾನರಾಗಿದ್ದಾರೆ.

    ಇದರ ಜೊತೆಗೆ ರೋಹಿತ್ ಶರ್ಮಾ ಇನ್ನೊಂದು ದಾಖಲೆ ಬರೆದಿದ್ದು, ಶಿಖರ್ ಧವನ್, ಕೆ.ಎಲ್ ರಾಹುಲ್ ಮತ್ತು ಪೃಥ್ವಿ ಶಾ ಅವರ ರೀತಿಯಲ್ಲಿ ಓಪನರ್ ಆಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಮೂರು ಮಾದರಿಯ ಪಂದ್ಯಗಳಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

    ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗುಪ್ಟಿಲ್, ತಿಲಕರತ್ನ ದಿಲ್ಶನ್, ಅಹ್ಮದ್ ಶೆಹಜಾದ್, ಶೇನ್ ವ್ಯಾಟ್ಸನ್, ಮತ್ತು ತಮೀಮ್ ಇಕ್ಬಾಲ್ ಅವರ ನಂತರ ರೋಹಿತ್ ಶರ್ಮಾ ಓಪನರ್ ಆಗಿ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದ ಏಳನೇ ಬ್ಯಾಟ್ಸ್ ಮನ್ ಆಗಿದ್ದಾರೆ.

    ವೈಝಾಗ್ ಟೆಸ್ಟ್ ನ ಮೊದಲ ದಿನದಲ್ಲಿ ಸೌತ್ ಅಫ್ರಿಕಾ ಬೌಲರ್ ಗಳ ಬೆವರಿಳಿಸಿದ ಭಾರತದ ಆರಂಭಿಕ ಜೋಡಿ ಔಟ್ ಆಗದೆ ದ್ವಿಶತಕದ ಜೊತೆಯಾಟವಾಡಿದರು. ಇದರಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ 174 ಎಸೆತದಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ನೊಂದಿಗೆ 115 ರನ್ ಗಳಿಸಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಆಗರವಾಲ್ 183 ಎಸೆತದದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 84 ರನ್ ಸಿಡಿಸಿ ಔಟಾಗದೆ ಉಳಿದಿದ್ದಾರೆ.

  • ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ದಾಖಲೆ ಬರೆದ ಕನ್ನಡಿಗ

    ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ದಾಖಲೆ ಬರೆದ ಕನ್ನಡಿಗ

    ಬೆಂಗಳೂರು: ಕರ್ನಾಟಕದ ಆಟಗಾರ ಕೆ ಗೌತಮ್ ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ಟಿ-20 ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    30 ವರ್ಷದ ಕೃಷ್ಣಪ್ಪ ಗೌತಮ್ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ 15 ಪಂದ್ಯದಲ್ಲಿ ಉತ್ತಮ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದಾರೆ.

    ಪ್ರಸಕ್ತ ಸಾಲಿನ ಕೆಪಿಎಲ್‍ನಲ್ಲಿ ಬಳ್ಳಾರಿ ಟಸ್ಕರ್ಸ್ ಪರವಾಗಿ ಆಡುತ್ತಿರುವ ಗೌತಮ್ ಶುಕ್ರವಾರ ನಡೆದ ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 29 ಎಸೆತದಲ್ಲಿ ಶತಕ ಬಾರಿಸುವುದರ ಮೂಲಕ ಕೆಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದರು. ಒಟ್ಟು 56 ಎಸೆತೆಗಳಲ್ಲಿ 7 ಬೌಂಡರಿ ಮತ್ತು 13 ಭರ್ಜರಿ ಸಿಕ್ಸರ್ ಸಮೇತ 134 ರನ್ ಹೊಡೆದು ಅಜೇಯರಾಗಿ ಉಳಿದು, ಕೆಪಿಎಲ್‍ನಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್ ಸ್ಕೋರ್ ಮಾಡಿದವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

    ಇನ್ನೊಂದು ದಾಖಲೆ ಬರೆದಿರುವ ಗೌತಮ್ ಅವರು ಟಿ-20 ಪಂದ್ಯವೊಂದರಲ್ಲಿ ಒಟ್ಟು ನಾಲ್ಕು ಓವರ್ ಬೌಲ್ ಮಾಡಿ ಅದರಲ್ಲಿ ಭರ್ಜರಿ 8 ವಿಕೆಟ್ ಕಿತ್ತು ಕೇವಲ 15 ರನ್ ನೀಡಿ ಟಿ-20 ಇತಿಹಾಸದಲ್ಲಿ ಯಾವ ಬೌಲರ್ ಮಾಡದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಬಳ್ಳಾರಿಗೆ 70 ರನ್‍ಗಳ ಭರ್ಜರಿ ಜಯವನ್ನು ತಂದು ಕೊಟ್ಟಿದ್ದಾರೆ.

    ಕೆಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್ ಬಾರಿಸಿದ ಗೌತಮ್ ಬೌಂಡರಿ ಮತ್ತು ಒಟ್ಟು 106 ರನ್ ಹೊಡೆದು ದಾಖಲೆ ನಿರ್ಮಿಸಿದ್ದಾರೆ. ಗೌತಮ್ ಅವರ ಈ ಪ್ರದರ್ಶನ ಅಧಿಕೃತವಾಗಿ ಉಳಿಯದೇ ಇದ್ದರು. ಭಾರತ ಎ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಆಡುತ್ತಿರುವ ಗೌತಮ್ ಈ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಕನ್ನಡಿಗನ ಈ ಸಾಧನೆಯನ್ನು ಕೆಲ ಅಂತಾರಾಷ್ಟೀಯ ಕ್ರಿಕೆಟಿಗರು ಕೂಡ ಮೆಚ್ಚಿಕೊಂಡಿದ್ದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜೋನ್ಸ್, ಗೌತಮ್ ಅವರ ಆಟದ ಕುರಿತು ಟ್ವೀಟ್ ಮಾಡಿದ್ದು, ಕೆ ಗೌತಮ್ ಅವರ 134 ರನ್ ಮತ್ತು 8 ವಿಕೆಟ್ ಪಡೆದಿರುವುದು ಟಿ-20 ಇತಿಹಾಸದಲ್ಲೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎಂದಿದ್ದಾರೆ.

    ಇದರ ಜೊತೆಗೆ ಮಾಜಿ ಭಾರತದ ಆಟಗಾರ ಆಕಾಶ್ ಚೋಪ್ರಾ ಅವರು ಟ್ವೀಟ್ ಮಾಡಿದ್ದು, ಟಿ-20 ಯಲ್ಲಿ 134 ರನ್ ಹೊಡೆಯುವುದು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ಅದೇ ಪಂದ್ಯದಲ್ಲಿ 8 ವಿಕೆಟ್ ಪಡೆಯುವುದು ಅಸಾಧಾರಣ. ಆದರೆ ಕೆ. ಗೌತಮ್ ಅವರು ಎರಡು ದಾಖಲೆಗಳನ್ನು ಒಂದೇ ಪಂದ್ಯದಲ್ಲಿ ಮಾಡಿದ್ದಾರೆ. ಇದೂ ಅವಾಸ್ತವ ಎಂದು ಬರೆದುಕೊಂಡಿದ್ದಾರೆ.

    ಕೆ. ಗೌತಮ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಾರೆ. ಗೌತಮ್ ಅವರ ಈ ಅಮೋಘವಾದ ಆಟವನ್ನು ಮೆಚ್ಚಿ ರಾಜಸ್ಥಾನ್ ರಾಯಲ್ಸ್ ತಂಡವು ಟ್ವೀಟ್ ಮಾಡಿದ್ದು, 56 ಎಸೆತದಲ್ಲಿ 134 ರನ್ ಜೊತೆಗೆ 8 ವಿಕೆಟ್ ಇದು ವಿಶ್ವ ದಾಖಲೆ. ಇದು ಕೃಷ್ಣಪ್ಪ ಪ್ರೀಮಿಯರ್ ಲೀಗ್ ಎಂದು ಬರೆದುಕೊಂಡಿದೆ.

  • ಶತಕದ ಜೊತೆಗೆ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

    ಶತಕದ ಜೊತೆಗೆ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

    ಜಮೈಕಾ: ಬುಧವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯವನ್ನು ಇಂಡಿಯಾ 6 ವಿಕೆಟ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 2 -0 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 99 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ ಭರ್ಜರಿ 114 ರನ್ ಸಿಡಿಸಿದ ಕೊಹ್ಲಿ ತನ್ನ ಏಕದಿನ ವೃತ್ತಿ ಜೀವನದ 43 ಶತಕ ಸಿಡಿಸಿದರು. ಇದರ ಜೊತೆಗೆ ಒಂದು ದಶಕದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ 20 ಸಾವಿರ ರನ್  ಹೊಡೆದ  ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

    ಕೊಹ್ಲಿ ಅವರನ್ನು ಬಿಟ್ಟರೆ ಒಂದು ದಶಕದಲ್ಲಿ ಹೆಚ್ಚು ರನ್ ಹೊಡೆದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 18,962 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್‍ರೌಂಡರ್ ಜ್ಯಾಕ್ ಕಾಲಿಸ್ 16,777 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಆಟಗಾರರಾದ ಮಹೇಲಾ ಜಯವರ್ಧನೆ (16,304 ರನ್), ಕುಮಾರ್ ಸಂಗಕ್ಕಾರ (15,999 ರನ್), ಸಚಿನ್ ತೆಂಡೂಲ್ಕರ್ (15,962 ರನ್), ರಾಹುಲ್ ದ್ರಾವಿಡ್ (15,853 ರನ್) ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ (15,185 ರನ್) ಬಾರಿಸಿ ನಂತರದ ಸ್ಥಾನದಲ್ಲಿ ಇದ್ದಾರೆ.

    ಇದರ ಜೊತೆಗೆ ಒಂದು ತಂಡದ ವಿರುದ್ಧ ಹೆಚ್ಚು ಶತಕ ಸಿಡಿಸಿರುವ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಜೊತೆ ಕೊಹ್ಲಿ ಸಮಬಲ ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಒಂದೇ ತಂಡದ ವಿರುದ್ಧ 9 ಶತಕ ಸಿಡಿಸಿದ್ದಾರೆ. ಆದರಂತೆ ಸಚಿನ್ ಕೂಡ ಆಸ್ಟ್ರೇಲಿಯಾ ತಂಡದ ವಿರುದ್ಧ 9 ಶತಕ ಸಿಡಿಸಿದ್ದರು. ಕೊಹ್ಲಿ ಈಗಾಗಲೇ ಏಕದಿನ ಪಂದ್ಯಗಳಲ್ಲಿ 43 ಶತಕ ಸಿಡಿಸಿದ್ದು, ಇನ್ನೊಂದು ಶತಕ ಸಿಡಿಸಿದರೆ ನಾಯಕನಾಗಿ ರಿಕಿ ಪಾಂಟಿಂಗ್ ಸಿಡಿಸಿದ ಅತೀ ಹೆಚ್ಚು ಶತಕಗಳ ದಾಖಲೆಯಲ್ಲಿ ಸಮಬಲ ಸಾಧಿಸಲಿದ್ದಾರೆ.

    ಕೊಹ್ಲಿ ಈ ಸಾಧನೆಯ ಜೊತೆಗೆ ವಿಂಡೀಸ್ ವಿರುದ್ಧವೇ ಮತ್ತೊಂದು ದಾಖಲೆ ಬರೆದಿದ್ದಾರೆ. ವಿಂಡೀಸ್ ವಿರುದ್ಧ ಅತಿ ಹೆಚ್ಚು ರನ್(1931*)ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

    ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಬಲದಿಂದ ಭಾರತ 6 ವಿಕೆಟ್ ಗಳ ಜಯ ಸಾಧಿಸಿತು. ಇದರ ಜೊತೆಗೆ 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ಮಳೆಯಿಂದಾಗಿ 35 ಓವರ್ ಗಳಿಗೆ ಕಡಿತಗೊಂಡಿದ್ದರಿಂದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಕ್ರಿಸ್ ಗೇಲ್ ಅವರ ಅರ್ಧಶತಕದ ನೆರೆವಿನಿಂದ 7 ವಿಕೆಟ್ ನಷ್ಟಕ್ಕೆ 240 ರನ್ ಸೇರಿಸಿತು.

    ಇದನ್ನು ಬೆನ್ನಟ್ಟಿದ ಭಾರತ ಅರಂಭಿಕ ಅಘಾತ ಅನುಭವಿಸಿತು. 10 ರನ್ ಗಳಿಸಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬೇಗನೇ ಔಟ್ ಆದರು. ಅವರ ಬೆನ್ನಲ್ಲೇ 36 ರನ್ ಗಳಿಸಿದ ಶಿಖರ್ ಧವನ್ ಔಟ್ ಆದರು. ವಿಕೆಟ್ ಕೀಪರ್ ರಿಷಬ್ ಪಂತ್ ಡಕ್ ಔಟ್ ಆದ ನಂತರ ಜೊತೆಯಾದ ಕೊಹ್ಲಿ ಮತ್ತು ಅಯ್ಯರ್ 120 ರನ್‍ಗಳ ಶತಕದ ಜೊತೆಯಾಟವಾಡಿದರು. ಇದರಲ್ಲಿ ಕೊಹ್ಲಿ 99 ಎಸೆತಗಳಲ್ಲಿ 14 ಬೌಂಡರಿ ಜೊತೆಗೆ 114 ರನ್ ಸಿಡಿಸಿದರೆ ಕೊಹ್ಲಿಗೆ ಉತ್ತಮ ಸಾಥ್ ಕೊಟ್ಟ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‍ ನೊಂದಿಗೆ 65 ರನ್ ಸಿಡಿಸಿ ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದರು.

  • ಕೊಹ್ಲಿ ಕಾಲೆಳೆಯಲು ಯತ್ನಿಸಿ ಟ್ರೋಲಾದ ಜಿಮ್ಮಿ ನೀಶಮ್

    ಕೊಹ್ಲಿ ಕಾಲೆಳೆಯಲು ಯತ್ನಿಸಿ ಟ್ರೋಲಾದ ಜಿಮ್ಮಿ ನೀಶಮ್

    ವೆಲ್ಲಿಂಗ್ಟನ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿಯುತ ಟ್ವೀಟ್‍ಗಳನ್ನು ಮಾಡುತ್ತಿರುವ ನ್ಯೂಜಿಲೆಂಡ್ ಕ್ರಿಕೆಟರ್ ಜಿಮ್ಮಿ ನೀಶಮ್ ಟೀಂ ಇಂಡಿಯಾ ನಾಯಕ ಕೊಹ್ಲಿರನ್ನ ಕಾಲೆಳೆಯಲು ಯತ್ನಿಸಿ ಟ್ರೋಲ್ ಆಗಿದ್ದಾರೆ.

    ಸದ್ಯ ನಡೆಯುತ್ತಿರುವ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ರೋರಿ ಬರ್ನ್ಸ್ ಟೆಸ್ಟ್ ಕ್ರಿಕೆಟ್ ಪಂದ್ಯದ 2ನೇ ದಿನದ ವೇಳೆ 125 ರನ್ ಸಿಡಿಸಿದ್ದರು. ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದ ನಿಶಾಮ್, ಪ್ರತಿಷ್ಟಿತ ಸರಣಿಯಲ್ಲಿ ಕೊಹ್ಲಿಗಿಂತ ರೋರಿ ಬರ್ನ್ಸ್ ಹೆಚ್ಚು ರನ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರತ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.

    ಈ ಹಿಂದೆ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಪಂದ್ಯದ ಟಿಕೆಟ್ ನೀಡುವಂತೆ ಭಾರತೀಯ ಅಭಿಮಾನಿಗಳನ್ನು ಮನವಿ ಮಾಡಿದ್ದ ನೀನು, ಇಂದು ಕೊಹ್ಲಿಯನ್ನ ರೋರಿ ಬರ್ನ್ಸ್ ಗೆ ಹೋಲಿಕೆ ಮಾಡುತ್ತಿದ್ದೀಯಾ. ಇದು ಒಳ್ಳೆಯದಲ್ಲ ಎಂದು ಅಭಿಮಾನಿಯೊಬ್ಬರು ನಿಶಾಮ್ ಟ್ವೀಟ್‍ಗೆ ಕಿಡಿಕಾರಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಆರಂಭಿಕ ಆಟಗಾರರೆಲ್ಲರೂ ಗಳಿಸಿರುವ ರನ್ ಮೊತ್ತಕ್ಕಿಂತ ಕೊಹ್ಲಿಯೇ ಹೆಚ್ಚು ರನ್ ಮಾಡಿದ್ದಾರೆ ಎಂಬುವುದನ್ನು ತಿಳಿದುಕೊಳ್ಳಿ ನೀಶಮ್ ಎಂದು ಮತ್ತೊಬ್ಬ ತಿರುಗೇಟು ನೀಡಿದ್ದಾರೆ. ಅಂದಹಾಗೇ ಆ್ಯಶಸ್ ಸರಣಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುವ ಸರಣಿ ಆಗಿದ್ದರೂ ಕೂಡ ನೀಶಮ್ ಕೊಹ್ಲಿರನ್ನ ಎಳೆದು ತಂದು ಟ್ರೋಲ್ ಆಗಿದ್ದಾರೆ. ಆದರೆ ಇದಾದ ಬಳಿಕ ಸ್ಪಷ್ಟನೆ ನೀಡಿ ತಾನು ಜೋಕ್ ಮಾಡಿದ್ದೇನೆ ಎಂದು ಹೇಳಿ ನೀಶಮ್ ಜಾರಿಕೊಂಡಿದ್ದಾರೆ.

    https://twitter.com/JimmyNeesh/status/1157499602825695233