Tag: ಶಕ್ತಿ ಯೋಜನೆ

  • ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!

    ಸುವರ್ಣಾವಕಾಶ ಕಳೆದುಕೊಳ್ಳಲು ಬಯಸದ ಡಿಕೆಶಿ!

    ಬೆಂಗಳೂರು: ಮುಂದೊಂದು ದಿನ ಈ ರಾಜ್ಯದ ಸಿಎಂ ಆಗಲೇ ಬೇಕು ಎಂಬ ಆಕಾಂಕ್ಷೆ ಹೊಂದಿರುವ ಈಗಿನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ತಮಗೆ ಬಂದೊದಗುವ ಯಾವುದೇ ಅವಕಾಶವನ್ನು ಕೈಚೆಲ್ಲಲು ಸಿದ್ಧರಿಲ್ಲ.

    ಹೌದು, ಸಂಕಷ್ಟ ಕಾಲದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯುವ ಸಂದರ್ಭ ಬಂದಾಗ, ಅದು ಸೂಕ್ತ ಕಾಲವಲ್ಲ ಎಂಬ ಹಿತೈಷಿಗಳ ಕಿವಿಮಾತನ್ನು ಲೆಕ್ಕಿಸದೇ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಡಿಕೆಶಿ ಒಪ್ಪಿಕೊಂಡಿದ್ದರು. ಇದೀಗ ಮುಂದಿನ ಸರದಿಯಲ್ಲಿ ಸಿಎಂ ಗಾದಿ ಖಚಿತ ಎಂಬ ಹೈಕಮಾಂಡ್ (Congress HighCommand) ಭರವಸೆಯಲ್ಲಿ ಡಿಸಿಎಂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮುಂದೊಂದು ದಿನ ಗುರಿ ತಲುಪುತ್ತೇನೆ ಎನ್ನುವ ಭರವಸೆಯಲ್ಲಿ ಇದ್ದಾರೆ.

    ಈಗ ವಿಷಯ ಏನಪ್ಪಾ ಅಂದ್ರೆ, ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಪೈಕಿ ಮೊದಲನೆಯದ್ದಕ್ಕೆ ನಾಳೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಕಾರ್ಯಕ್ರಮ ನಾಳೆ ನಡೆಯಲಿದೆ. ನಾಳಿನ ಮುಹೂರ್ತ ನಿಗದಿ ಮಾಡಿದ್ದೇ ಡಿ.ಕೆ ಶಿವಕುಮಾರ್ ಅಂತೆ. ಹೇಳಿ ಕೇಳಿ ಪರಮ ದೈವಭಕ್ತರಾದ ಅವರು, ಶುಭಮುಹೂರ್ತವನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ನಡುವೆ ಅವರು ಚುನಾವಣೆಗೂ ಮುನ್ನ ಹರಕೆ ಹೊತ್ತುಕೊಂಡಂತೆ ಉಜ್ಜೈನಿ (Ujjaini) ಸೇರಿದಂತೆ ಉತ್ತರಭಾರತದ ಕೆಲವು ದೇವಾಲಯ ದರ್ಶನಕ್ಕೆ ಶನಿವಾರ ಹೊರಟು ನಿಂತಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

     ಶುಕ್ರವಾರ ನಿಗದಿಯಾದ ಕಾರ್ಯಕ್ರಮದಂತೆ ಅವರು ಭಾನುವಾರ ಸಂಜೆಯ ಹೊತ್ತಿಗೆ ವಾಪಸ್ಸಾಗಬೇಕಿತ್ತು. ಆದರೆ ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ನೂತನ ಸರ್ಕಾರದ ಮಹತ್ವದ ಮೊದಲ ಗ್ಯಾರಂಟಿ ಕಾರ್ಯಕ್ರಮಕ್ಕೆ ಡಿಕೆಶಿ ಗೈರಾಗುತ್ತಿದ್ದಾರಲ್ಲ. ಪಕ್ಷ ಹಾಗೂ ಸರ್ಕಾರದ ಕಾರ್ಯಕ್ಕಿಂತ ದೇವಾಲಯ ದರ್ಶನವೇ ಮುಖ್ಯವಾಯಿತೇ ಎಂದು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah) ಬಿಡಬೇಕಲ್ಲ. ಏನಪ್ಪಾ ಮುಹೂರ್ತ ನಿಗದಿಪಡಿಸಿ ನೀವೇ ಇಲ್ಲಾಂದ್ರೆ ಹೇಗೇ ಅಂತ ಕೇಳಿದ್ರಂತೆ. ತಕ್ಷಣ ಡಿ.ಕೆ ಶಿವಕುಮಾರ್ ತಮ್ಮ ಮುಂದಿರುವ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ.

    ದೇವಾಲಯ ದರ್ಶನ ಕಾರ್ಯಕ್ರಮದಲ್ಲೇ ಸ್ವಲ್ಪ ಬದಲಾವಣೆ ಮಾಡಿ, ನಾಳೆ (ಭಾನುವಾರ) 11 ಗಂಟೆಗೆ ಬೆಂಗಳೂರಿಗೆ ಬರುವಂತೆ ಪ್ಲಾನ್ ಮಾಡಿದ್ದಾರೆ. ಸರ್ಕಾರ ಮೊದಲ ಗ್ಯಾರಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಅಂದರೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ತಮ್ಮ ಮುಂದೆ ಬರುವ ಯಾವುದೇ ಅವಕಾಶವನ್ನು ಕೈಚೆಲ್ಲುವ ತಪ್ಪನ್ನು ಮಾಡದಿರಲು ನಿರ್ಧರಿಸಿದಂತೆ ಕಾಣುತ್ತೆ. ಸದ್ಯ ಸಂಪುಟದಲ್ಲಿ ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿಯೇ ನುಗ್ಗುತ್ತಿರುವ ಡಿಕೆಶಿವಕುಮಾರ್, ಕೆಲವೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನೂ ಓವರ್ ಟೇಕ್ ಮಾಡುವುದನನ್ನು ಗಮನಿಸಬಹುದು.

  • ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಗಳು ಇಡಿ ದೇಶದ ಗಮನವನ್ನೇ ಸೆಳೆದಿದೆ. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel for Women) ಯೋಜನೆಯಾಗಿರುವ ಶಕ್ತಿ (Shakti Scheme) ಅತ್ಯಂತ ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಇದೇ ಭಾನುವಾರದಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಇದೀಗ ವಿಭಿನ್ನವಾಗಿ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ (Siddaramaiah) ಸ್ವತಃ ಬಸ್‌ನ ಕಂಡಕ್ಟರ್ (Bus Conductor) ಆಗಲಿದ್ದಾರೆ.

    ಜೂನ್ 11 ರಂದು ಶಕ್ತಿ ಯೋಜನೆಗೆ ವಿಶೇಷ ರೂಪದಲ್ಲಿ ಚಾಲನೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ತಾವೇ ಬಸ್ ಕಂಡಕ್ಟರ್ ಆಗಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ವಿತರಿಸಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಕೋಪದಲ್ಲಿ ಅಜ್ಜಿ ಕೊಂದು, ಕೊರಿಯನ್ ವೆಬ್ ಸೀರಿಸ್‌ನಂತೆ ಹೆಣ ಸುಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ

    ಮೆಜೆಸ್ಟಿಕ್‌ನಿಂದ ವಿಧಾನಸೌಧ ಮಾರ್ಗದ ಬಿಎಂಟಿಸಿ ಬಸ್‌ನಲ್ಲೇ ಸಿದ್ದರಾಮಯ್ಯ ಕಂಡಕ್ಟರ್ ಆಗಲಿದ್ದಾರೆ. ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ನಂತರ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಅಂದೇ ಜಿಲ್ಲೆಗಳಲ್ಲಿ ಸಚಿವರಿಂದ ಏಕಕಾಲದಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

  • ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    – ಅಧಿಕಾರಿಗಳು ಸರ್ಕಾರದ ಅನುಮತಿ ಕೇಳಿದರೂ ಬಾರದ ಪ್ರತಿಕ್ರಿಯೆ

    ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರವಾಗಿ ಸಂಪರ್ಕ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿ ಐಷಾರಾಮಿ ಎಸಿ ಬಸ್ ಸಂಚಾರಕ್ಕೆ ಚಿಗರಿ (Chigari) ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ನಿತ್ಯ ನೂರಾರು ಚಿಗರಿ ಬಸ್‌ಗಳು ಅವಳಿ ನಗರಗಳ ಮಧ್ಯೆ ಓಡಾಡುತ್ತವೆ. ಈ ಚಿಗರಿ ಬಸ್‌ಗಳು ಹವಾನಿಯಂತ್ರಿತವಾಗಿದ್ದು, ಮಹಿಳೆಯರ ಉಚಿತ ಬಸ್ (Bus) ಪ್ರಯಾಣ ಯೋಜನೆಗೆ ಈಗ ಇದೆ ಮುಳುವಾಗಿ ಪರಿಣಿಮಿಸಿದೆ. ಒಂದು ಕಡೆ ಜನರ ಒತ್ತಾಯ ಮತ್ತೊಂದು ಕಡೆ ಸರ್ಕಾರದ ಜಾಣ ನಡೆಯಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

    ಕಾಂಗ್ರೆಸ್ (Congress) ಸರ್ಕಾರ 5 ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಈಗ 5 ಯೋಜನೆ ಜಾರಿಗೆ ದಿನಕ್ಕೆ ಒಂದೊಂದು ಷರತ್ತು ಹಾಕುತ್ತಿರುವುದು ಜನರ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಈ ತಿಂಗಳ 11 ರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದಾಗಿದ್ದು, ಇದು ರಾಜ್ಯದ ಮಹಿಳೆಯರಿಗೆ ಕೊಂಚ ಸಮಾಧಾನಕರ ವಿಷಯ. ಆದರೆ ಈ ಖುಷಿ ಹುಬ್ಬಳ್ಳಿ ಧಾರವಾಡದ ಮಹಿಳೆಯರಿಗೆ ಕೊಟ್ಟು ಕಸಿದಂತಾಗಿದೆ. ಬಹು ಕೋಟಿ ವೆಚ್ಚದ ಮತ್ತು ಜನ ಬಹಳಷ್ಟು ನೆಚ್ಚಿಕೊಂಡಿರುವ ಬಿಆರ್‌ಟಿಎಸ್ (BRTS) ಸಾರಿಗೆಯಲ್ಲಿ ಉಚಿತ ಪ್ರಯಾಣ ಇನ್ನೂ ಕಗ್ಗಂಟಾಗಿದೆ.

    ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಇಲ್ಲ. ಆದರೆ ಚಿಗರಿ ಬಸ್ ವ್ಯವಸ್ಥೆ ರಾಜ್ಯದಲ್ಲಿ ಮೊದಲ ವಿಭಿನ್ನ ಸಿಟಿ ಬಸ್ ಸಂಚಾರವಾಗಿದೆ. ನಿತ್ಯ ಸಾವಿರಾರು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ಸಂಪರ್ಕ ಯೋಜನೆ ಉಚಿತ ಬಸ್ ಪ್ರಯಾಣ ಯೋಜನೆ ವ್ಯಾಪ್ತಿಗೆ ಬಾರದೆ ಇರುವುದು ಜಿಲ್ಲೆಯ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ. ನಿತ್ಯ ಸುಮಾರು 96 ಚಿಗರಿ ಬಸ್‌ಗಳಲ್ಲಿ 80 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹೀಗಾಗಿ ಚಿಗರಿ ಬಸ್‌ಗಳಲ್ಲಿ ಮಹಿಳೆಯರು ಫ್ರೀ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವುದು ಮಹಿಳೆಯರ ವಾದ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    ಇನ್ನೂ ಬಿಆರ್‌ಟಿಎಸ್ ವ್ಯಾಪ್ತಿಯ ಚಿಗರಿ ಬಸ್ ಸೇವೆಗೆ ಮೊದಲಿಂದಲೂ ಒಂದಲ್ಲಾ ಒಂದು ಸಮಸ್ಯೆಗಳಿದ್ದು, ವ್ಯವಸ್ಥೆ ಈಗ ನಷ್ಟದಲ್ಲಿ ನಡೆಯುತ್ತಿದೆ. ಮಾಹಿತಿ ಪ್ರಕಾರ ತಿಂಗಳಿಗೆ 2 ಕೋಟಿ ರೂ. ಯಷ್ಟು ನಷ್ಟದ ಹೊರೆ ಬಿಆಆರ್‌ಟಿಎಸ್ ಇಲಾಖೆ ಮೇಲೆ ಬೀಳುತ್ತಿದೆ. ಇಂತಹ ಸಂದರ್ಭದಲ್ಲಿ ಶಕ್ತಿ ಯೋಜನೆಯ ವ್ಯಾಪ್ತಿಗೆ ಚಿಗರಿ ಬಸ್ ಒಳಪಡಿಸಿದರೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬುವುದು ಅಧಿಕಾರಿಗಳ ವಾದವಾಗಿದೆ. ಹೀಗಿದ್ದರೂ ಸಹ ಜನರ ಒತ್ತಾಯದ ಮೇರೆಗೆ ಬಿಆರ್‌ಟಿಎಸ್ ಎಂಡಿ ಭರತ್ ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ತರಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಕೋರಿಕೊಂಡಿದ್ದಾರೆ. ಆದರೆ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಅಧಿಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • ಜೂನ್‌ 11ರಿಂದ ಎಕ್ಸ್‌ಪ್ರೆಸ್‌ ಬಸ್ಸಿನಲ್ಲೂ ಮಹಿಳೆಯರಿಗೆ ಫ್ರೀ.. ಫ್ರೀ.. ಫ್ರೀ.

    ಜೂನ್‌ 11ರಿಂದ ಎಕ್ಸ್‌ಪ್ರೆಸ್‌ ಬಸ್ಸಿನಲ್ಲೂ ಮಹಿಳೆಯರಿಗೆ ಫ್ರೀ.. ಫ್ರೀ.. ಫ್ರೀ.

    – ನನ್ನ ಹೆಂಡತಿಗೂ ಅನ್ವಯ ಆಗುತ್ತೆ ಎಂದ ಸಿಎಂ

    – BMTCಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ

    ಬೆಂಗಳೂರು: 5 ಗ್ಯಾರಂಟಿಗಳನ್ನ ಪ್ರಸ್ತುತ ಆರ್ಥಿಕ ವರ್ಷದಲ್ಲೇ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿದೆ.

    ಶುಕ್ರವಾರ ಕ್ಯಾಬಿನೆಟ್‌ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ ಹಾಗೂ ಶಕ್ತಿ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದೆ. ಅದರಲ್ಲೂ ತೀವ್ರ ಕುತೂಹಲ ಕೆರಳಿಸಿದ್ದ ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ) ಜೂನ್‌ 11 ರಿಂದ ಜಾರಿಗೆ ಬರಲಿದೆ.

    ಸಮಾಜದಲ್ಲಿ 50%ರಷ್ಟು ಮಹಿಳೆಯರಿದ್ದು, ಸ್ಥಾನಮಾನ ಪರಿಗಣಿಸದೇ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್‌ 11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್‌ಪ್ರೆಸ್, ರಾಜಹಂಸ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ (ಎಸಿ ಬಸ್,ಐಶಾರಾಮಿ ಬಸ್,ಎಸಿ ಸ್ಲೀಪರ್,ರಾಜಹಂಸ ಬಸ್ ಗೆ ಉಚಿತ ಪ್ರಯಾಣ ಅನ್ವಯ ಇಲ್ಲ) ಬಸ್‌ಗಳಲ್ಲಿ ಉಚಿತ ಪ್ರಯಾಣ (Free Bus For Women) ಇರಲಿದೆ. KSRTC ಬಸ್‌ನಲ್ಲಿ 50% ರಷ್ಟು ಆಸನ ಪುರುಷರಿಗೆ ಮೀಸಲಾಗಿರುತ್ತೆ. ಇಡೀ ಬಸ್‌ನಲ್ಲಿ ಪೂರ್ಣ ಮಹಿಳೆಯರೇ ಹೋಗುವಂತಿಲ್ಲ, ಜೊತೆಗೆ BMTCಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

    ಶಕ್ತಿ ಯೋಜನೆ ರಾಜ್ಯದೊಳಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರಿನಿಂದ ಬೆಳಗಾವಿಗೂ ಹೋಗಬಹುದು. ಆದ್ರೆ ಬೆಂಗಳೂರಿನಿಂದ ಹೈದರಾಬಾದ್‌ ಅಥವಾ ತಿರುಪತಿಗೆ ಹೋಗ್ತೀನಿ ಅಂದ್ರೆ ಅನ್ವಯವಾಗಲ್ಲ. ಇದರಿಂದ ಶೇ.94% ರಷ್ಟು ಪ್ರಯಾಣಿಕರನ್ನು ಒಳಗೊಳ್ಳಲಿದೆ ಎಂದು ತಿಳಿಸಿದ್ದಾರೆ.

  • ಉಮೇಶ್ ಕತ್ತಿಗೆ ಟಿವಿಗಳಲ್ಲಿ ಹೆಡ್‍ಲೈನ್ ಆಗೋದಕ್ಕೆ ಇಷ್ಟ – ದಿನೇಶ್ ಗುಂಡೂರಾವ್ ವ್ಯಂಗ್ಯ

    ಉಮೇಶ್ ಕತ್ತಿಗೆ ಟಿವಿಗಳಲ್ಲಿ ಹೆಡ್‍ಲೈನ್ ಆಗೋದಕ್ಕೆ ಇಷ್ಟ – ದಿನೇಶ್ ಗುಂಡೂರಾವ್ ವ್ಯಂಗ್ಯ

    – ರಮೇಶ್ ಜಾರಕಿಹೊಳಿ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ

    ಬೆಂಗಳೂರು: ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರಿಗೆ ಟಿವಿಗಳಲ್ಲಿ ಹೆಡ್‍ಲೈನ್ ಆಗುವುದಕ್ಕೆ ಇಷ್ಟ. ಹೀಗಾಗಿ 24 ಗಂಟೆಯಲ್ಲಿ ಸರ್ಕಾರ ಬೀಳುತ್ತದೆ ಅಂತ ಹೇಳಿಕೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಉಮೇಶ್ ಕತ್ತಿ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ದಿನೇಶ್ ಗುಂಡೂರಾವ್, ಶಾಸಕರು ಸುದ್ದಿಯಾಗುತ್ತಿರಲಿಲ್ಲ. ಹೀಗಾಗಿ ಸರ್ಕಾರ ಬೀಳುತ್ತದೆ ಅಂತಾ ಹೇಳಿಕೆ ಕೊಟ್ಟರೆ ಒಂದು ದಿನ ಸುದ್ದಿಯಾಗಬಹುದೆಂದು ಪ್ಲಾನ್ ಮಾಡಿದ್ದರು. ಶಾಸಕರು ಹೇಳಿಕೆ ಕೊಟ್ಟು 24 ಗಂಟೆ ಕಳೆದಿದ್ದು, ಮೈತ್ರಿ ಸರ್ಕಾರ ಸುಭದ್ರವಾಗಿದೆ. ಈಗ ಉಮೇಶ್ ಕತ್ತಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಕಿಡಿಕಾರಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೋಗಲ್ಲ. ಗೋಕಾಕ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೇವಲ ಆಪ್ತರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

    ಶಕ್ತಿ ಯೋಜನೆ:
    ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಎಐಸಿಸಿ ಜಾರಿಗೆ ತಂದ ಶಕ್ತಿ ಯೋಜನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈ ಯೋಜನೆ ಅಡಿ ಅನೇಕರು ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ 10.50 ಲಕ್ಷ ಜನರು ಸದಸ್ಯತ್ವಕ್ಕೆ ನೋಂದಣಿ ಪಡೆದಿದ್ದಾರೆ. ಶಕ್ತಿ ಯೋಜನೆಯಲ್ಲಿ ಯಾವುದೇ ಗೋಲ್‍ಮಾಲ್ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಪ್ರಚಾರ ಮಡಲಾಗಿದೆ. ಸದಸ್ಯರ ನೋಂದಣಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ರಾಜಸ್ತಾನ ಎರಡನೇ ಸ್ಥಾನದಲ್ಲಿದೆ. ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಬೆಂಗಳೂರಿನ ಯಶವಂತಪುರ ಕ್ಷೇತ್ರವೊಂದರಲ್ಲಿಯೇ 1.12 ಲಕ್ಷ ಜನರು ಶಕ್ತಿ ಯೋಜನೆ ಮೂಲಕ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಹುಲ್ ಗಾಂಧಿ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ವಿಫಲ

    ರಾಹುಲ್ ಗಾಂಧಿ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ವಿಫಲ

    – ಟಾರ್ಗೆಟ್ ರೀಚ್ ಆದಬಳಿಕ ಸಚಿವ ಸ್ಥಾನ ಕೇಳಿ- ರಾಹುಲ್ ಗಾಂಧಿ ಕಿಡಿ

    ಬೆಂಗಳೂರು: ರಾಜ್ಯದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ನಿಷ್ಕಾಳಜಿಯಿಂದಾಗಿ ರಾಹುಲ್ ಗಾಂಧಿ ಕನಸಿನ ಶಕ್ತಿ ಯೋಜನೆ ವಿಫಲವಾಗಿದೆ. ವಿಫಲವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಹಾಗೂ ಅಧಿಕಾರ ಪಡೆದು ಪಕ್ಷದ ಸಂಘಟನೆ ಮರೆತಿರುವ ರಾಜ್ಯ ನಾಯಕರ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫುಲ್ ಗರಂ ಆಗಿದ್ದಾರೆ.

    ಚಿಕ್ಕ ರಾಜ್ಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಲ್ಲಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷದ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡದ್ದಕ್ಕೆ ಎಐಸಿಸಿ ರಾಜ್ಯ ನಾಯಕರನ್ನು ತರಾಟೆಗೆ ತೆಗದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಏನಿದು ಶಕ್ತಿ ಯೋಜನೆ?:
    ಲೋಕಸಭಾ ಚುನಾವಣೆ ಹಿನ್ನೆಲೆ ವಾಟ್ಸಾಪ್ ಮೂಲಕ ಪಕ್ಷದ ಸದಸ್ಯತ್ವ ನೋಂದಣಿ ಯೋಜನೆಯನ್ನು ರಾಹುಲ್ ಗಾಂಧಿ ಪರಿಚಯಿಸಿದ್ದರು. ಈ ಮೂಲಕ ಹೆಚ್ಚು ಸದಸ್ಯರು, ಕಾರ್ಯಕರ್ತರನ್ನು ಪಕ್ಷಕ್ಕೆ ನೋಂದಣಿ ಮತ್ತು ಸೇರ್ಪಡೆ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿತ್ತು.

    ಈ ಕುರಿತು ಪ್ರಚಾರ ಮಾಡಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಶಾಸಕರು, ಸಚಿವರು ಹಾಗೂ ನಾಯಕರಿಗೆ ನೀಡಲಾಗಿತ್ತು. ಈ ನೋಂದಣಿ ಅಭಿಯಾನ 2018ರ ನವಂಬರ್ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ ಯೋಜನೆ ವಿಫಲವಾಗಿದ್ದಕ್ಕೆ ರಾಹುಲ್ ಗಾಂಧಿ ಅವರು ರಾಜ್ಯದ ನಾಯಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡು ಡಿಸೆಂಬರ್ 15ರವರೆಗೆ ಅಭಿಯಾನವನ್ನು ವಿಸ್ತರಿಸಿದ್ದಾರೆ ಎನ್ನಲಾಗಿದೆ.

    ಹೈಕಮಾಂಡ್‍ನ ಹೊಸ ವರಸೆ ಕಂಡು ಶಾಸಕರು, ಸಚಿವ ಸ್ಥಾನ ಆಕಾಂಕ್ಷಿಗಳು ಈಗ ಕಂಗಲಾಗಿದ್ದಾರೆ. ಎಲ್ಲವೂ ಮುಗಿಯಿತು ಎನ್ನುವಾಗ ಪಕ್ಷ ಸಂಘಟನೆಯ ಹೊಸ ಜವಬ್ದಾರಿ ಎದುರಾಗಿದೆ. ಸಚಿವ ಸ್ಥಾನ ಕೇಳಲು ಸದಸ್ಯತ್ವ ನೋಂದಣಿ ಅಭಿಯಾನದ ಫಲಿತಾಂಶ ತೋರಿಸಬೇಕಾದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕನಿಷ್ಟ 10 ಲಕ್ಷ ಜನರು ಸದಸ್ಯತ್ವ ಪಡೆಯಬೇಕು ಎಂದು ಎಐಸಿಸಿ ಖಡಕ್ ಆದೇಶ ನೀಡಿದೆ.

    ಯಾವ ರಾಜ್ಯದಲ್ಲಿ ಎಷ್ಟು ನೋಂದಣಿ?:
    ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಕೇವಲ 3 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ 7 ಲಕ್ಷ ಜನ, ಮಧ್ಯ ಪ್ರದೇಶದಲ್ಲಿ 6 ಲಕ್ಷ ಮಂದಿ, ಚಿಕ್ಕ ರಾಜ್ಯವಾಗಿರುವ ಛತ್ತೀಸಗಢದಲ್ಲಿ 4.5 ಲಕ್ಷ ಜನ ಸದಸ್ಯತ್ವ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv