Tag: ಶಕೀಬ್ ಅಲ್ ಹಸನ್

  • ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

    ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

    ಢಾಕಾ: ಶಕೀಬ್ ಅಲ್ ಹಸನ್ (Shakib Al Hasan) ಆಲ್‌ರೌಂಡರ್‌ ಆಟ, ಕೊನೆಯಲ್ಲಿ ಮೆಹಿಡಿ ಹಸನ್ ಮಿರಾಜ್ (Mehidy Hasan Miraz) ಜವಾಬ್ದಾರಿ ಬ್ಯಾಟಿಂಗ್‌ ಪ್ರದರ್ಶನದಿಂದ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿತು.

    ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 50 ಓವರ್‌ ಪೂರ್ಣಗೊಳಿಸುವಲ್ಲಿ ವಿಫಲವಾಯಿತು. 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ ದೇಶ 46 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿ ಟೀಂ ಇಂಡಿಯಾ (Team India) ಎದುರು ರೋಚಕ ಜಯ ಸಾಧಿಸಿತು.

    ಟೀಂ ಇಂಡಿಯಾ (Team India) ಸವಾಲು ಸ್ವೀಕರಿಸಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಜ್ಮುಲ್ ಹೊಸೈನ್ ಶಾಂಟೊ, ದೀಪಕ್‌ ಚಹಾರ್‌ ಮಾರಕ ಬೌಲಿಂಗ್‌ ದಾಳಿಗೆ ತುತ್ತಾಗಿ ಒಂದೇ ಎಸೆತಕ್ಕೆ ಔಟಾದರು. ನಂತರ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ ನಾಯಕ ಲಿಟ್ಟನ್ ದಾಸ್ 63 ಎಸೆತಗಳಲ್ಲಿ 41 ರನ್‌ (1 ಸಿಕ್ಸರ್‌, 3 ಬೌಂಡರಿ) ಗಳಿಸಿ ತಂಡಕ್ಕೆ ಆಸರೆಯಾದರು. 3ನೇ ಕ್ರಮಾಂಕದಲ್ಲಿ ಬಂದ ಅನಾಮುಲ್ ಹಕ್ ಕೇವಲ 14 ರನ್‌ಗಳಿಸಿ ಪೆವಿಲಿಯನ್‌ ಸೇರಿದ್ರು.

    ಇನ್ನೂ ಬೌಲಿಂಗ್‌ನಲ್ಲಿ ಮಿಂಚಿದ್ದ ಶಕೀಬ್‌ ಬ್ಯಾಟಿಂಗ್‌ನಲ್ಲೂ ಸಮಾಧಾನಕರ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಕೀಬ್‌ 38 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 29 ರನ್‌ ಕಲೆಹಾಕಿದರು. ನಂತರ ಜೊತೆಯಾದ ಮುಷ್ಫಿಕೂರ್ ರಹೀಮ್ ಮತ್ತು ಮಹಮದುಲ್ಲಾ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಲು ಮುಂದಾಯಿತು. 80 ಎಸೆತಗಳನ್ನು ಎದುರಿಸಿದ ಈ ಜೋಡಿ 32 ರನ್‌ ಗಳಿಸಿ ಸ್ಥಿರವಾಗಿತ್ತು. ಈ ವೇಳೆ ಸಿರಾಜ್‌ ಹಾಗೂ ಶಾರ್ದೂಲ್‌ ಠಾಕೂರ್‌ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು. ಮುಷ್ಫಿಕೂರ್ ರಹೀಮ್ 45 ಎಸೆತಗಳಲ್ಲಿ 18 ರನ್‌ ಗಳಿಸಿದ್ರೆ, 35 ಎಸೆತ ಎದುರಿಸಿದ ಮಹಮದುಲ್ಲಾ ಕೇವಲ 14 ರನ್‌ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು.

    ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಮೆಹಿಡಿ ಹಸನ್ ಮಿರಾಜ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಿಧಾನಗತಿಯಲ್ಲೇ ಸಿಕ್ಸರ್‌, ಬೌಂಡರಿಗಳನ್ನು ಪೇರಿಸುತ್ತಾ ಭಾರತದ ಬೌಲರ್‌ಗಳ ಬೆವರಿಳಿಸಿದರು. 39 ಎಸೆತ ಎದುರಿಸಿದ ಮಿರಾಜ್‌ 38 ರನ್‌ (2 ಸಿಕ್ಸರ್‌, 4 ಬೌಂಡರಿ) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಸ್ತಫಿಜೂರ್ ರಹಮಾನ್ 10 ರನ್‌ ಗಳಿಸಿ ಕೊನೆಯ ವರೆಗೂ ಸಾಥ್‌ ನೀಡಿದರು. ಇಯಾಡೋಟ್ ಹೊಸೈನ್ ಮತ್ತು ಹಸನ್ ಮಹಮ್ಮದ್ ಶೂನ್ಯಕ್ಕೆ ನಿರ್ಗಮಿಸಿದರು. ಅಫಿಫ್ ಹೊಸೈನ್ 6 ರನ್‌ ಗಳಿಸಿದರು.

    ಟೀಂ ಇಂಡಿಯಾ ಪರ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌, ಕುಲ್‌ದೀಪ್‌ ಸೇನ್‌ ವಾಷಿಂಗ್ಟನ್‌ ಸುಂದರ್‌ ತಲಾ 2 ವಿಕೆಟ್‌ ಪಡೆದರು. ದೀಪಲ್‌ ಚಹಾರ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಕಿಂಗ್‌ ಕೊಹ್ಲಿ, ಧವನ್‌ ಕಳಪೆ ಬ್ಯಾಟಿಂಗ್‌:
    ಆರಂಭಿಕರಾಗಿ ಕಣಕ್ಕಿಳಿದ್ದ ರೋಹಿತ್‌ ಶರ್ಮಾ (Rohit Sharma) ಹಾಗೂ ಶಿಖರ್‌ ಧವನ್‌ ಅಲ್ಪಮೊತ್ತಕ್ಕ ಔಟಾದರು. ರೋಹಿತ್‌ 27 ರನ್‌ ಗಳಿಸಿದ್ರೆ, ಶಿಖರ್‌ ಧವನ್‌ ಕೇವಲ 7 ರನ್‌ಗಳಿಸಿದ್ರು. ಕಿಂಗ್‌ ಕೊಹ್ಲಿ (Virat Kohli) ಸಹ ನಿರೀಕ್ಷಿತ ಆಟವಾಡದೇ 9 ರನ್‌ಗಳಿಗೆ ಪೆವಿಲಿಯನ್‌ ಸೇರಿದ್ರು. ಮೊದಲ 10 ಓವರ್‌ಗಳಲ್ಲಿ 49 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜೊತೆಗೂಡಿದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ (KL Rahul) ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಆದರೆ 43 ರನ್ ಜೊತೆಯಾಟದ ನಂತರ 39 ಎಸೆತಗಳಲ್ಲಿ 24 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಔಟಾದರು. ಇದರಿಂದ ಟೀಂ ಇಂಡಿಯಾ ಮತ್ತೆ ಹಿನ್ನಡೆ ಅನುಭವಿಸಿತ್ತು.

    ರಾಹುಲ್‌ ಏಕಾಂಗಿ ಹೋರಾಟ:
    ಟೀಂ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಮಾತ್ರ ಏಕಾಂಗಿಯಾಗಿ ಹೋರಾಡಿದರು. 70 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 73 ರನ್ ಗಳಿಸಿದರು. ‌ಉಳಿದೆಲ್ಲ ಬ್ಯಾಟ್ಸ್‌ಮ್ಯಾನ್‌ಗಳು ಬಾಂಗ್ಲಾ ಬೌಲರ್‌ಗಳ ದಾಳಿಗೆ ಧೂಳಿಪಟವಾದ್ರು.

    ನಂತರ ಕ್ರೀಸ್‌ ಗಿಳಿದ ವಾಷಿಂಗ್ಟನ್ ಸುಂದರ್ ಅವರು ಕೆ.ಎಲ್ ರಾಹುಲ್ ಜೊಡಿ 60 ರನ್‌ಗಳ ಜೊತೆಯಾಟವಾಡಿ, ಭಾರತದ ಪಾಳಯದಲ್ಲಿ ನಗು ಮೂಡಿಸಿದ್ದರು. ಆದರೆ 42 ಎಸೆತಗಳಲ್ಲಿ 19 ರನ್‌ಗಳಿಸಿದ್ದ ವಾಷಿಂಗ್ಟನ್‌ ಸುಂದರ್‌ 43ನೇ ಎಸೆತದಲ್ಲಿ ಔಟಾದರು. ಶಾರ್ದೂಲ್‌ ಠಾಕೂರ್‌ 2 ರನ್‌, ಮೊಹಮ್ಮದ್‌ ಸಿರಾಜ್‌ 9 ರನ್‌ ಗಳಿಸಿದ್ರೆ, ಶಹಬಾಜ್‌ ಅಹ್ಮದ್‌, ದೀಪಕ್‌ ಚಹಾರ್‌ ಶೂನ್ಯಕ್ಕೆ ನಿರ್ಗಮಿಸಿದ್ರು. ಕುಲ್‌ದೀಪ್‌ ದೇನ್‌ 2 ರನ್‌ಗಳಿಸಿ ಅಜೇಯರಾಗುಳಿದರು.

    ರೋಹಿತ್‌ ಉತ್ತಮ ಬ್ಯಾಟಿಂಗ್‌ ಪಡೆ ಹೊಂದಿದ್ದರೂ ಬಾಂಗ್ಲಾದೇಶ ಯುವ ಬೌಲರ್‌ಗಳ ಬೌಲಿಂಗ್ ದಾಳಿ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ ಭಾರತ 200ರ ಗಡಿ ಮುಟ್ಟಲೂ ಅಸಾಧ್ಯವಾಯಿತು.

    ಬಾಂಗ್ಲಾದೇಶದ ಪರ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ 36 ರನ್‌ ನೀಡಿ 5 ವಿಕೆಟ್‌ ಕಬಳಿಸಿದರೆ, ಎಬಾಡೋಟ್ ಹೊಸೈನ್ 47 ರನ್‌ಗಳಿಗೆ 4 ವಿಕೆಟ್‌ ಪಡೆದು ಮಿಂಚಿದರು. 43 ರನ್‌ ನೀಡಿದ ಮೆಹಿಡಿ ಹಸನ್ ಮಿರಾಜ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಢಾಕಾ: ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಬಾಂಗ್ಲಾ ದೇಶದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಏಕೆ ಮಾರಾಟವಾಗದೇ ಉಳಿದುಕೊಂಡರು ಎಂಬುವುದನ್ನು ಶಕೀಬ್ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರು ಫೇಸ್‍ಬುಕ್ ಪೋಸ್ಟ್ ಮಾಡಿ ಬಹಿರಂಗಪಡಿಸಿದ್ದಾರೆ.

    ಇತ್ತೀಚೆಗೆ ಮುಕ್ತಾಯಗೊಂಡ (ಐಪಿಎಲ್) ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜಿನಲ್ಲಿ ಮಾರಾಟವಾಗದ 76 ಆಟಗಾರರಲ್ಲಿ ಬಾಂಗ್ಲಾದೇಶದ ಆಲ್ ರೌಂಡರ್ ಮತ್ತು ಮಾಜಿ ನಾಯಕ ಶಕೀಬ್ ಅಲ್ ಹಸನ್ ಕೂಡ ಒಬ್ಬರಾಗಿದ್ದಾರೆ. ಶಕೀಬ್ 2011ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್‍ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದರು.

    ಈ ಹಿಂದೆ ಶಕೀಬ್ ಅವರನ್ನು ಐಪಿಎಲ್‍ನಲ್ಲಿ ಒಂದೆರಡು ಫ್ರಾಂಚೈಸಿಗಳು ಸಂಪರ್ಕಿಸಿದ್ದವು. ಆದರೆ ದಕ್ಷಿಣ ಆಫ್ರಿಕಾದ ಸರಣಿಗಾಗಿ ರಾಷ್ಟ್ರೀಯ ತಂಡಕ್ಕೆ ಅವರು ಆಯ್ಕೆಯಾದ ಹಿನ್ನೆಲೆ, ಅವರು ಐಪಿಎಲ್‍ನ ಪೂರ್ಣ ಆವೃತ್ತಿಯಲ್ಲಿ ಉಳಿದುಕೊಳ್ಳಲಾಗದ ಕಾರಣ ಅವರನ್ನು ಖರೀದಿಸಲು ಯಾವುದೇ ತಂಡಗಳು ಮುಂದಾಗಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್‌ ಕ್ಯಾಚ್ ಕಂಡು ದಂಗಾದ ಫೀಲ್ಡರ್

    ಕೆಲವು ತಂಡಗಳು ಅವರನ್ನು ಸಂಪರ್ಕಿಸಿದವು. ಆದರೆ ಶ್ರೀಲಂಕಾದ ಸರಣಿಯಿಂದಾಗಿ ಅವರು ಐಪಿಎಲ್‍ನ ಪೂರ್ಣ ಆವೃತ್ತಿಯವರೆಗೆ ಲಭ್ಯರಿಲ್ಲ. ಅದೇ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಿಲ್ಲ. ಇದು ಅಂತ್ಯವಲ್ಲ ಮುಂದಿನ ವರ್ಷ ಮತ್ತೆ ಐಪಿಎಲ್ ಬರುತ್ತೇ ನಿರಾಶೆಗೊಳಗಾಗಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದರು.

    ಶಕೀಬ್ ಐಪಿಎಲ್‍ನ ಕೊನೆಯ ಎರಡು ಸೀಸನ್‍ಗಳಲ್ಲಿ 11 ಪಂದ್ಯಗಳಲ್ಲಿ ಕೇವಲ 56 ರನ್‍ಗಳನ್ನು ಗಳಿಸಿ ಕೇವಲ 6 ವಿಕೆಟ್‍ಗಳನ್ನು ಪಡೆದಿದ್ದಾರೆ. ಅವರು ಈ ಹಿಂದೆ ಐಪಿಎಲ್ 2020ರ ಸೀಸನ್ ಸಹ ಕಳೆದುಕೊಂಡಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಒಂದು ವೇಳೆ ಐಪಿಎಲ್ 2022ರ ಕಾರಣದಿಂದಾಗಿ ಶಕೀಬ್ ದಕ್ಷಿಣ ಆಫ್ರಿಕಾ ಸರಣಿಯನ್ನು ಕಳೆದುಕೊಂಡಿದ್ದರೆ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿತ್ತು. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಐಪಿಎಲ್‍ಗೆ ಆಯ್ಕೆಯಾಗಲು ಅವರು ಶ್ರೀಲಂಕಾ ಸರಣಿಯನ್ನು ಬಿಟ್ಟುಬಿಡಬೇಕಾಗಿತ್ತು ಎಂದು ತಿಳಿಸಿದರು.

    ಬಾಂಗ್ಲಾದೇಶ ಕ್ರಿಕೆಟ್ ತಂಡವು ಇದೇ ಮಾರ್ಚ್ ಅಂತ್ಯದಲ್ಲಿ ಮತ್ತು ಏಪ್ರಿಲ್ ಆರಂಭದಲ್ಲಿ, ಐಪಿಎಲ್ 2022ರ ಮಧ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

    ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಬಾಂಗ್ಲಾ ತಂಡವು 3 ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈ ಗೊಳ್ಳಲಾಗಿದೆ. ಏಕದಿನ ಸರಣಿಯು ಮಾರ್ಚ್ 23 ರಂದು ಪೂರ್ಣಗೊಳ್ಳುತ್ತದೆ. ಎರಡು ಟೆಸ್ಟ್ ಪಂದ್ಯಗಳು ಏಪ್ರಿಲ್ 12 ರವರೆಗೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆ ಬಾಂಗ್ಲಾ ಆಟಗಾರರು ಐಪಿಎಲ್‍ನ ಮೊದಲ 15 ದಿನಗಳವರೆಗೆ ಲಭ್ಯವಿರುವುದಿಲ್ಲ.

  • ಐಪಿಎಲ್ ವಿಚಾರವಾಗಿ 1 ವರ್ಷ ಬ್ಯಾನ್ ಆಗಿದ್ದ ಶಕೀಬ್ ಮತ್ತೆ ಕಮ್‍ಬ್ಯಾಕ್

    ಐಪಿಎಲ್ ವಿಚಾರವಾಗಿ 1 ವರ್ಷ ಬ್ಯಾನ್ ಆಗಿದ್ದ ಶಕೀಬ್ ಮತ್ತೆ ಕಮ್‍ಬ್ಯಾಕ್

    ಢಾಕ: ಐಪಿಎಲ್‍ನಲ್ಲಿ ಎಡವಟ್ಟು ಮಾಡಿಕೊಂಡು ಒಂದು ವರ್ಷದ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಬಾಂಗ್ಲಾ ದೇಶದ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್ ಅವರು ಮತ್ತೆ ಕ್ರಿಕೆಟ್ ಜೀವನಕ್ಕೆ ವಾಪಸ್ ಆಗಲು ಸಿದ್ಧವಾಗಿದ್ದಾರೆ.

    ಶಕೀಬ್ ಅಲ್ ಹಸನ್ ಅವರನ್ನು 2019ರ ಐಪಿಎಲ್ ಮುಗಿದ ಬಳಿಕ ಒಂದು ವರ್ಷ ನಿಷೇಧ ಮಾಡಲಾಗಿತ್ತು. ಶಕೀಬ್ ಅವರನ್ನು 2020ರ ಅಕ್ಟೋಬರ್ 28ರವೆಗೆ ಬ್ಯಾನ್ ಮಾಡಲಾಗಿತ್ತು. ಅಕ್ಟೋಬರಿನಲ್ಲೇ ಬ್ಯಾನ್ ಅವಧಿ ಮುಗಿದರೂ ಕೂಡ ಬಾಂಗ್ಲಾದೇಶದಲ್ಲಿ ಕೊರೊನಾ ಕಾರಣದಿಂದ ಯಾವುದೇ ಕ್ರಿಕೆಟ್ ಟೂರ್ನಿ ಆರಂಭವಾಗದ ಕಾರಣ ಶಕೀಬ್ ಕಮ್‍ಬ್ಯಾಕ್ ಮಾಡಿರಲಿಲ್ಲ.

    ಒಂದು ವರ್ಷ ಬ್ಯಾನ್ ಆದ ಕಾರಣ ಪಾಕಿಸ್ತಾನ ಟೂರ್ನಿಯನ್ನು ಶಕೀಬ್ ಮಿಸ್ ಮಾಡಿಕೊಂಡಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡುವ ನಿರೀಕ್ಷೆ ಇತ್ತು. ಆ ಸರಣಿಯೂ ಕೂಡ ಕೊರೊನಾ ಕಾರಣದಿಂದ ರದ್ದಾಗಿದೆ. ಈ ಕಾರಣದಿಂದ ಬಾಂಗ್ಲಾದಲ್ಲಿ ನಡೆಯಲಿರುವ ಬಂಗಬಂಧು ಟಿ-20 ದೇಶೀಯ ಟೂರ್ನಿಯಲ್ಲಿ ಆಡುವ ಮೂಲಕ ಶಕೀಬ್ ಕಮ್‍ಬ್ಯಾಕ್ ಮಾಡಲಿದ್ದಾರೆ. ಈ ಟೂರ್ನಿ ಶೇರ್-ಇ-ಬಾಂಗ್ಲಾ ಮೈದಾನದಲ್ಲಿ ನಡೆಯಲಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶದ ವಿಕೆಟ್ ಕೀಪರ್ ಮತ್ತು ಅನುಭವಿ ಆಟಗಾರ ಮುಶ್ಫಿಕುರ್ ರಹೀಂ, ಇಡೀ ವಿಶ್ವವೇ ಶಕೀಬ್ ಅವರ ಆಟ ನೋಡಲು ಕಾಯುತ್ತಿದೆ. ಅವರು ಮತ್ತೆ ವಾಪಸ್ ಆಗುತ್ತಿರುವುದು ಸಂತೋಷ ತಂದಿದೆ. ಶಕೀಬ್ ವಿಶ್ವದ ನಂಬರ್ ಓನ್ ಆಲ್‍ರೌಂಡರ್, ಹೀಗಾಗಿ ಆತನನ್ನು ಮತ್ತೆ ಮೈದಾನದಲ್ಲಿ ನೋಡಲು ಬಹಳ ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.

    2019ರ ಐಪಿಎಲ್‍ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಬುಕ್ಕಿಗಳು ತಮ್ಮನ್ನು ಸಂಪರ್ಕ ಮಾಡಿರುವ ವಿಚಾರವನ್ನು ಶಕೀಬ್ ಐಸಿಸಿ ಮತ್ತು ಬಿಸಿಸಿಐ ಗಮನಕ್ಕೆ ತಂದಿರಲಿಲ್ಲ. ಆದರೆ ತನಿಖೆ ವೇಳೆ ಶಕೀಬ್ ಅವರನ್ನು ಬುಕ್ಕಿಗಳು ಸಂಪರ್ಕಿಸಿರುವ ವಿಚಾರ ತಿಳಿದು ಬಂದಿತ್ತು. ಈ ಕಾರಣದಿಂದ ಶಕೀಬ್ ಅವರನ್ನು ಎರಡು ವರ್ಷ ಬ್ಯಾನ್ ಮಾಡಲಾಗಿತ್ತು. ಆ ನಂತರ ಬ್ಯಾನ್ ಅವಧಿಯನ್ನು ಕಡಿಮೆ ಮಾಡಿದ ಐಸಿಸಿ ಒಂದು ವರ್ಷ ನಿಷೇಧಿಸಿತ್ತು.

  • 18 ತಿಂಗಳ ಬ್ಯಾನ್ ಭೀತಿಯಲ್ಲಿ ಬಾಂಗ್ಲಾ ಕ್ರಿಕೆಟರ್ ಶಕೀಬ್- ಭಾರತ ಪ್ರವಾಸ ಅನುಮಾನ

    18 ತಿಂಗಳ ಬ್ಯಾನ್ ಭೀತಿಯಲ್ಲಿ ಬಾಂಗ್ಲಾ ಕ್ರಿಕೆಟರ್ ಶಕೀಬ್- ಭಾರತ ಪ್ರವಾಸ ಅನುಮಾನ

    ದುಬೈ: ಬಾಂಗ್ಲಾದೇಶದ ಕ್ರಿಕೆಟ್ ಟೀಮ್‍ನ ಅಗ್ರ ಆಲ್‍ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ 18 ತಿಂಗಳ ಬ್ಯಾನ್ ಭೀತಿ ಎದುರಾಗಿದ್ದು, ಭಾರತ ಪ್ರವಾಸಕ್ಕೆ ಲಭ್ಯವಾಗುವ ಅನುಮಾನ ಮೂಡಿದೆ.

    ಐಸಿಸಿಯ ಸೂಚನೆಯ ಮೇರೆಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಶಕೀಬ್ ಅಲ್ ಹಸನ್ ಅವರನ್ನು ಭಾರತ ಪ್ರವಾಸಕ್ಕಾಗಿ ಅಭ್ಯಾಸ ಶಿಬಿರದಿಂದ ತೆಗೆದುಹಾಕಿದೆ. ಬುಕ್ಕಿಂಗ್ ಆಫರ್ ಬಗ್ಗೆ ಐಸಿಸಿಗೆ ಯಾವುದೇ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶಕೀಬ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಶಕೀಬ್ ವಿರುದ್ಧ 18 ತಿಂಗಳ ನಿಷೇಧವನ್ನು ಸಹ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಭಾರತದ ಪ್ರವಾಸಕ್ಕೂ ಮುನ್ನ ಬಾಂಗ್ಲಾ ತಂಡದ ಟೆಸ್ಟ್ ಮತ್ತು ಟಿ-20 ನಾಯಕನ ವಿರುದ್ಧ ಕೈಗೊಂಡ ಈ ಕ್ರಮವು ಬಿಸಿಬಿಯ ತೊಂದರೆಗಳನ್ನು ಹೆಚ್ಚಿಸಿದೆ. ಈ ಪ್ರವಾಸದ ಸಮಯದಲ್ಲಿ ಬಾಂಗ್ಲಾದೇಶ ತಂಡವು ಭಾರತ ವಿರುದ್ಧ ಮೂರು ಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

    ಐಸಿಸಿಯ ಕೋರಿಕೆಯ ಮೇರೆಗೆ ಬಿಸಿಬಿ ಶಕೀಬ್‍ರನ್ನು ಅಭ್ಯಾಸದಿಂದ ತೆಗೆದುಹಾಕಿದೆ. ಈ ಕಾರಣದಿಂದಾಗಿ ಅವರು ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ. ಸೋಮವಾರ ಸಂಜೆ ನಡೆದ ಸಭೆಯಲ್ಲಿ ಶಕೀಬ್ ಭಾಗವಹಿಸಲಿಲ್ಲ. ಏತನ್ಮಧ್ಯೆ, ಐಸಿಸಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಶಕೀಬ್ ಅಂತರರಾಷ್ಟ್ರೀಯ ಪಂದ್ಯವೊಂದಕ್ಕೆ ಮುಂಚಿತವಾಗಿ ಬುಕ್ಕಿಯಿಂದ ಪ್ರಸ್ತಾಪವನ್ನು ಸ್ವೀಕರಿಸಿದ್ದರು. ಆದರೆ ಅದನ್ನು ಐಸಿಸಿಯ ಭ್ರಷ್ಟಾಚಾರ ಮತ್ತು ಭದ್ರತಾ ಘಟಕಕ್ಕೆ (ಎಸಿಎಸ್‍ಯು) ತಿಳಿಸಿಲ್ಲ. ಈ ಬಗ್ಗೆ ಶಕೀಬ್ ಇತ್ತೀಚೆಗೆ ಎಸಿಎಸ್‍ಯು ತನಿಖಾ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಜೊತೆಗೆ ಬಾಂಗ್ಲಾದೇಶ ತಂಡದ ಕ್ರಿಕೆಟಿಗರು 11 ಅಂಶಗಳ ಬೇಡಿಕೆಗಾಗಿ ಮುಷ್ಕರ ನಡೆಸಿದಾಗ, ಅವರನ್ನು ಶಕೀಬ್ ನೇತೃತ್ವ ವಹಿಸಿದ್ದರು.

    ಅಭ್ಯಾಸ ಪಂದ್ಯ ಮತ್ತು ಪೂರ್ವ ಪ್ರವಾಸ ಶಿಬಿರದಿಂದ ಹೊರಗುಳಿದ ಶಕೀಬ್ ಭಾರತ ಪ್ರವಾಸದಲ್ಲಿ ಲಭ್ಯತೆಯ ಬಗ್ಗೆ ಅನುಮಾನ ಶುರುವಾಗಿದೆ. ಬುಧವಾರ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮಿಸಲಿದೆ. ಆದರೆ ಶಕೀಬ್ ಅದರ ಭಾಗವಾಗುವುದಿಲ್ಲ. ಶಕೀಬ್ ಅನುಪಸ್ಥಿತಿಯಲ್ಲಿ ತಂಡದ ಮುಷ್ಫಿಕುರ್ ರಹೀಂ ಅವರಿಗೆ ಟೆಸ್ಟ್ ನಾಯಕತ್ವ ನೀಡಿದರೆ, ಟಿ-20 ಸರಣಿಗೆ ಮಮ್ಮುದುಲ್ಲಾ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

    ಭಾರತದ ಪ್ರವಾಸದ ಮುನ್ನವೇ ನಡೆದ ಘಟನೆಯಿಂದ ಬಿಸಿಬಿಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಾಂಗ್ಲಾದೇಶ ತಂಡದ ಭಾರತ ಪ್ರವಾಸವು ನವೆಂಬರ್ 3 ರಿಂದ ಮೂರು ಪಂದ್ಯಗಳ ಟಿ-20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ನಂತರ ಉಭಯ ತಂಡಗಳು ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ನವೆಂಬರ್ 14ರಿಂದ ಇಂದೋರ್‍ನಲ್ಲಿ ಆಡಲಿವೆ. ಎರಡನೇ ಟೆಸ್ಟ್ ನವೆಂಬರ್ 22ರಿಂದ ಕೋಲ್ಕತ್ತಾದಲ್ಲಿ ನಡೆಯಲಿದೆ.

  • ವಿಶ್ವಕಪ್ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಶಕೀಬ್

    ವಿಶ್ವಕಪ್ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಶಕೀಬ್

    ಬೆಂಗಳೂರು: ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್ ಹಸನ್ ದಾಖಲೆ ನಿರ್ಮಿಸಿದ್ದಾರೆ. ಒಂದೇ ಟೂರ್ನಿಯಲ್ಲಿ 10ಕ್ಕಿಂತ ಅಧಿಕ ವಿಕೆಟ್ ಮತ್ತು 500+ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    2007 ರಲ್ಲಿ ನ್ಯೂಜಿಲೆಂಡಿನ ಸ್ಕಾಟ್ ಸ್ಟೈರಿಸ್ 499 ರನ್ ಮತ್ತು 9 ವಿಕೆಟ್ ಪಡೆದುಕೊಂಡಿದ್ದರು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಶಕೀಬ್ ಭಾರತದ ವಿರುದ್ಧದ ಪಂದ್ಯದಲ್ಲಿ 66 ರನ್(74 ಎಸೆತ, 6 ಬೌಂಡರಿ) ಸಿಡಿಸಿ ಔಟಾಗಿದ್ದರು.

    ಬಾಂಗ್ಲಾ ಪರ ವಿಶ್ವಕಪ್‍ನಲ್ಲಿ 5 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಶಕೀಬ್ ಆಗಿದ್ದಾರೆ. ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ 29 ರನ್ ನೀಡಿ 5 ವಿಕೆಟ್ ಪಡೆದಿದ್ದರು. ವಿಂಡೀಸ್ ವಿರುದ್ಧ ಶತಕ ಸಿಡಿಸಿ ತಂಡಕ್ಕೆ ಶಕೀಬ್ ಜಯವನ್ನು ತಂದಿಟ್ಟಿದ್ದರು.

    ವಿಂಡೀಸ್ 8 ವಿಕೆಟ್‍ಗೆ 321 ರನ್ ಹೊಡೆದಿದ್ದರೆ ಬಾಂಗ್ಲಾ 41.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಶಕೀಬ್ ಈ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಅಜೇಯ 124 ರನ್(99 ಎಸೆತ, 16 ಬೌಂಡರಿ) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

    ಭಾರತದ ವಿರುದ್ಧ ಪಂದ್ಯದಲ್ಲಿ 10 ನೇ ಓವರಿನಲ್ಲಿ ಕ್ರೀಸಿಗೆ ಬಂದ ಶಕೀಬ್ 34ನೇ ಓವರ್ ವರೆಗೂ ಕ್ರೀಸ್‍ನಲ್ಲಿದ್ದರು. 33.5 ಓವರಿಗೆ ತಂಡದ ಮೊತ್ತ 179 ಆಗಿದ್ದಾಗ 6ನೇಯವರಾಗಿ ಶಕೀಬ್ 66 ರನ್(74 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು. ಶಕೀಬ್ ಕ್ರೀಸ್ ನಲ್ಲಿ ಇರುವವರೆಗೂ ಬಾಂಗ್ಲಾದ ಗೆಲುವಿನ ಆಸೆ ಜೀವಂತವಾಗಿತ್ತು. ಆದರೆ ಪಾಂಡ್ಯಾ ಎಸೆದ ಬಾಲನ್ನು ಹೊಡೆಯಲು ಹೋಗಿ ಎಕ್ಸ್‌ಟ್ರಾ ಕವರಿನಲ್ಲಿದ್ದ ದಿನೇಶ್ ಕಾರ್ತಿಕ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಡೆದರು. ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶಕೀಬ್ 10 ಓವರ್ ಎಸೆದು 41 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇದರಲ್ಲಿ 32 ಎಸೆತಗಳು ಡಾಟ್ ಬಾಲ್ ಆಗಿದ್ದು ವಿಶೇಷ.

    2006ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಶಕೀಬ್ ಇದೂವರೆಗೆ 205 ಏಕದಿನ ಪಂದ್ಯಗಳ 193 ಇನ್ನಿಂಗ್ಸ್ ನಲ್ಲಿ 6,259 ರನ್ ಗಳಿಸಿದ್ದಾರೆ. ಬೌಲಿಂಗ್‍ನಲ್ಲಿ 260 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ 2019: ಬಾಂಗ್ಲಾ ಆಟಗಾರ ಶಕೀಬ್ ವಿಶೇಷ ದಾಖಲೆ

     

    ರೋಹಿತ್ ವರ್ಸಸ್ ಶಕೀಬ್
    ಇಬ್ಬರು ಆಟಗಾರರು 7 ಪಂದ್ಯಗಳನ್ನು ಆಡಿದ್ದು 90.33 ಸರಾಸರಿಯಲ್ಲಿ ಶಕೀಬ್ 542 ರನ್ ಗಳಿಸಿದರೆ 90.66 ಸರಾಸರಿಯಲ್ಲಿ ರೋಹಿತ್ 544 ರನ್ ಸಿಡಿಸಿದ್ದಾರೆ. ಈ ವಿಶ್ವಕಪ್‍ನಲ್ಲಿ 34.9 ಸ್ಟ್ರೈಕ್ ರೇಟ್‍ನಲ್ಲಿ 11 ವಿಕೆಟ್ ಕಿತ್ತಿದ್ದಾರೆ. 7 ಪಂದ್ಯಗಳಲ್ಲಿ ಶಕೀಬ್ ಕ್ರಮವಾಗಿ 75, 64, 121, 124*, 41, 51, 66 ರನ್ ಗಳಿಸಿದ್ದಾರೆ.

  • ಸೋತ ಮೈದಾನದಲ್ಲೇ ಇಂದು ಗೆಲ್ಲುವ ಪ್ರಯತ್ನದಲ್ಲಿ ಕೊಹ್ಲಿ ಪಡೆ

    ಸೋತ ಮೈದಾನದಲ್ಲೇ ಇಂದು ಗೆಲ್ಲುವ ಪ್ರಯತ್ನದಲ್ಲಿ ಕೊಹ್ಲಿ ಪಡೆ

    ಲಂಡನ್: ಇಂದು ಬರ್ಮಿಗ್ಹ್ಯಾಮ್‍ನಲ್ಲಿ ನಡೆಯಲಿರುವ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಗೆಲುವು ಕೊಹ್ಲಿ ಪಡೆ ಗೆಲುವು ಸಾಧಿಸುವ ತವಕದಲ್ಲಿದೆ. ಭಾನುವಾರ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ 31ರನ್‍ಗಳ ಅಂತರದಲ್ಲಿ ಶರಣಾಗಿತ್ತು.

    ಭಾನುವಾರ ನಡೆದ ಪಂದ್ಯದಲ್ಲಿ 338 ರನ್ ಬೆನ್ನಟ್ಟಿದ ಭಾರತ ನಿಗದಿತ 50 ಓವರ್ ಗಳಲ್ಲಿ ಕೇವಲ 306 ರನ್ ಮಾತ್ರ ಗಳಿಸಿತು. ಈ ಮೂಲಕ ಈ ವಿಶ್ವಕಪ್‍ನಲ್ಲಿ ಸೋಲನ್ನೇ ಕಾಣದ ಭಾರತ 31 ರನ್‍ಗಳ ಅಂತರದಲ್ಲಿ ಸೋತಿತು. ರೋಹಿತ್ ಶರ್ಮಾ ಅವರ ಶತಕ ಮತ್ತು ಮೊಹಮ್ಮದ್ ಶಮಿ ಅವರ ಹೋರಾಟ ವ್ಯರ್ಥವಾಗಿತ್ತು. ಆದರೆ ಇಂದು ಇದೇ ಮೈದಾನದಲ್ಲಿ ಬಾಂಗ್ಲಾ ದೇಶದ ವಿರುದ್ಧ ಆಡಲಿರುವ ಭಾರತ ಗೆದ್ದು ಬೀಗುವ ವಿಶ್ವಾಸದಲ್ಲಿದೆ.

    ವಿಶ್ವಕಪ್‍ನಲ್ಲಿ ಉತ್ತಮ ಲಯದಲ್ಲಿರುವ ಭಾರತ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ವಿಶ್ವಕಪ್‍ನಲ್ಲಿ 3 ಶತಕ ಸಿಡಿಸಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಒಳ್ಳೆಯ ಲಯದಲ್ಲಿದ್ದು, ಇವರಿಗೆ ಕನ್ನಡಿಗ ಕೆ.ಎಲ್ ರಾಹುಲ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಇನ್ನೂ ನಾಯಕ ವಿರಾಟ್ ಕೊಹ್ಲಿ ಕೂಡ ಉತ್ತಮ ಲಯದಲ್ಲಿದ್ದು ಟೂರ್ನಿಯಲ್ಲಿ ಸತತ ಐದು ಅರ್ಧಶತಕ ಸಿಡಿಸಿ ಮಿಂಚುತ್ತಿದ್ದರೆ. ಇನ್ನೂ ಸ್ಪಿನ್ನರ್‍ ಗಳಾದ ಯುಜ್ವೇಂದ್ರ ಚಹಾಲ್ ಮತ್ತು ಕುಲ್‍ದೀಪ್ ಯಾದವ್ ಅವರು ಮೋಡಿ ಮಾಡುತ್ತಿದ್ದಾರೆ. ವೇಗಿಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮಹಮ್ಮದ್ ಶಮಿ ಅವರು ಬಿಗಿ ಬೌಲಿಂಗ್ ದಾಳಿ ಮಾಡುತ್ತಿದ್ದಾರೆ.

    ಬಾಂಗ್ಲಾದೇಶ ಕೊಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಒಳ್ಳೆಯ ಪ್ರತಿಭಾನ್ವಿತ ಆಟಗಾರರಿದ್ದು ಯಾವುದೇ ಕ್ಷಣದಲ್ಲೂ ಸಿಡಿದು ಬೀಳುವ ಕ್ಷಮತೆ ತಂಡಕ್ಕೆ ಇದೆ. ಆಲ್‍ರೌಂಡರ್ ಶಕೀಬ್ ಅಲ್ ಹಸನ್ ಟೂರ್ನಿಯಲ್ಲಿ 476 ರನ್ ಗಳಿಸಿ 10 ವಿಕೆಟ್ ಪಡೆದು ಮಿಂಚುತ್ತಿದ್ದಾರೆ. ಮತ್ತು ಆರಂಭಿಕ ತಮೀಮ್ ಇಕ್ಬಾಲ್, ಮುಷ್ಫಿಕರ್ ರಹೀಮ್, ಮಹಮದುಲ್ಲಾ ಮತ್ತು ಲಿಟನ್ ದಾಸ್ ಅವರು ಉತ್ತಮ ಲಯದಲ್ಲಿರುವುದರಿಂದ ಬಾಂಗ್ಲಾದೇಶವನ್ನು ಕಡೆಗಣಿಸುವಂತಿಲ್ಲ. ಆದರೆ ತಂಡದಲ್ಲಿ ಉತ್ತಮ ಹೊಂದಾಣಿಕೆ ಆಟದ ಕೊರತೆ ಇದ್ದು, ಶಕೀಬ್ ಅಲ್ ಹಸನ್ ಬಿಟ್ಟರೆ ಬೇರೆ ಆಟಗಾರರು ರನ್ ಹೊಡೆಯಲು ಕಷ್ಟಪಡುತ್ತಿದ್ದಾರೆ.

    ಭಾರತ ವಿಶ್ವಕಪ್‍ನಲ್ಲಿ 7 ಪಂದ್ಯಗಳನ್ನು ಆಡಿದ್ದು ಅದರಲ್ಲಿ 5 ರಲ್ಲಿ ಗೆದ್ದು ಒಂದರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿರುವ ಬಾಂಗ್ಲಾದೇಶ 3 ರಲ್ಲಿ ಗೆದ್ದು 3 ರಲ್ಲಿ ಸೋತು ಒಂದು ಪಂದ್ಯ ಮಳೆಯಿಂದ ರದ್ದು ಆಗಿರುವ ಕಾರಣ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

    ದೊಡ್ಡ ದೊಡ್ಡ ತಂಡಗಳನ್ನು ಬಗ್ಗು ಬಡಿದು ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಕೊಹ್ಲಿ ಪಡೆ ಹೆಚ್ಚಿನ ಆತ್ಮವಿಶ್ವಾಸದಿಂದ ಆಡುವಂತಿಲ್ಲ ಏಕೆಂದರೆ ಇದೇ ಬಾಂಗ್ಲಾದೇಶ ತಂಡ 2007ರ ವಿಶ್ವಕಪ್‍ನಲ್ಲಿ ಭಾರತವನ್ನು ಸೋಲಿಸಿತ್ತು. ಅಂಕಿಅಂಶಗಳನ್ನು ನೋಡುವುದಾದರೆ ಉಭಯ ತಂಡಗಳು ವಿಶ್ವಕಪ್‍ನಲ್ಲಿ ಕೇವಲ ಮೂರು ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

    ಪಿಚ್ ರೀಪೋರ್ಟ್
    ಇನ್ನೂ ಬರ್ಮಿಗ್ಹ್ಯಾಮ್‍ನ ಈ ಮೈದಾನ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬ್ಯಾಟ್ಸ್‍ಮನ್‍ಗಳ ಪಾಲಿನ ಸ್ವರ್ಗ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಒಟ್ಟು 643 ರನ್‍ಗಳು ದಾಖಲಾಗಿದ್ದವು. ಇಂದು ನಡೆಯುವ ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದ್ದು, ಟಾಸ್ ಗೆದ್ದವರು ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಇದೆ.

  • ಡ್ರೆಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದು ಬಾಂಗ್ಲಾ ನಾಯಕ ಶಕೀಬ್?

    ಡ್ರೆಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದು ಬಾಂಗ್ಲಾ ನಾಯಕ ಶಕೀಬ್?

    ಕೊಲಂಬೊ: ನಿದಾಸ್ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾ ನಡುವಿನ ಪಂದ್ಯದ ವೇಳೆ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಡ್ರೆಸ್ಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮವೊಂದು ವರದಿ ಮಾಡಿದೆ.

    ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಕ್ರಿಸ್ ಬ್ರಾಡ್ ಪಂದ್ಯ ನಂತರ ಉಂಟಾದ ಅನುಚಿತ ವರ್ತನೆ ಕುರಿತು ಮೈದಾನದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಘಟನೆಯನ್ನು ಕಣ್ಣರೇ ಕಂಡಿದ್ದ ಕ್ರೀಂಡಾಗಣದ ಸಿಬ್ಬಂದಿ ಹೇಳಿಕೆ ಪಡೆದು, ಸಿಸಿಟಿವಿ ದೃಶ್ಯಗಳನ್ನು ಪರೀಶಿಲನೆ ನಡೆಸಲಾಗಿತ್ತು. ಈ ವೇಳೆ ಬಾಂಗ್ಲಾ ನಾಯಕ ಶಕೀಬ್ ಬದಲವಂತವಾಗಿ ರೂಮ್ ನ ಬಾಗಿಲನ್ನು ತಳ್ಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪಂದ್ಯದ ವೇಳೆ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್‍ಗೆ ಐಸಿಸಿ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ಇಬ್ಬರು ಆಟಗಾರಿಗೂ ತಲಾ ಒಂದು ಡಿಮೆರಿಟ್ ಅಂಕ ನೀಡಿತ್ತು. ಇದನ್ನು ಓದಿ: ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

    ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಇದನ್ನು ಓದಿ:  ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್

  • ನಾಟೌಟ್ ಎಂದಿದ್ದಕ್ಕೆ ಅಂಪೈರ್ ವಿರುದ್ಧ ಶಕೀಬ್ ಆಕ್ರೋಶಗೊಂಡಿದ್ದನ್ನು ನೋಡಿ

    ನಾಟೌಟ್ ಎಂದಿದ್ದಕ್ಕೆ ಅಂಪೈರ್ ವಿರುದ್ಧ ಶಕೀಬ್ ಆಕ್ರೋಶಗೊಂಡಿದ್ದನ್ನು ನೋಡಿ

    ಢಾಕಾ: ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಬಾಂಗ್ಲಾ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್ ವಿರುದ್ಧ ಬಾಂಗ್ಲಾ ಕ್ರಿಕೆಟ್ ಮಂಡಳಿ(ಬಿಸಿಬಿ) ಶಿಸ್ತು ಕ್ರಮ ಕೈಗೊಂಡಿದೆ.

    ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್) ನಲ್ಲಿ ಢಾಕಾ ಡೈನಾಮಿಸ್ಟ್ ತಂಡವನ್ನು ಮುನ್ನಡೆಸುತ್ತಿರುವ ಶಕೀಬ್, ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡದ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ.

    ಎದುರಾಳಿ ತಂಡದ ಗೆಲುವು ಪಡೆಯಲು 68 ಬಾಲ್‍ಗಳಿಗೆ 74 ರನ್ ಗಳಿಸಬೇಕಿದ್ದ ಸಮಯದಲ್ಲಿ ಸ್ಟ್ರೈಕ್ ಎದುರಿಸುತ್ತಿದ್ದ ಇಮ್ರುಲ್ ಕಾಯೆಸ್ ಅವರಿಗೆ ಶಕೀಬ್ ಬೌಲ್ ಮಾಡಿದರು. ಆದರೆ ಶಹೀಬ್ ಎಸೆತವನ್ನು ಎದುರಿಸುವಲ್ಲಿ ವಿಫಲವಾದ ಬ್ಯಾಟ್ಸ್ ಮನ್ ಪ್ಯಾಡ್‍ಗೆ ಬಾಲ್ ತಾಗಿತು. ಈ ವೇಳೆ ಶಕೀಬ್ ಎಲ್‍ಬಿಡಬ್ಲೂ ಗೆ ಮನವಿ ಮಾಡಿದರು. ಶಕೀಬ್ ಮನವಿಯನ್ನು ತಿರಸ್ಕರಿಸಿದ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಇದರಿಂದ ತಾಳ್ಮೆ ಕಳೆದುಕೊಂಡ ಶಕೀಬ್ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು.

    ಘಟನೆ ಕುರಿತು ವಿಚಾರಣೆ ನಡೆಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಶಕೀಬ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪಂದ್ಯದ ಶೇ.50 ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದೆ. ಬಾಂಗ್ಲಾ ಕ್ರಿಕೆಟ್ ಮಂಡಳಿಯ 2.2.4 ನಿಯಮದ ಪ್ರಕಾರ ಆಟಗಾರರು ಅಸಭ್ಯ ಪದ ಬಳಸಿ ಇತರೇ ಆಟಗಾರರು ಅಥವಾ ಅಂಪೈರ್ ರನ್ನು ನಿಂಧಿಸಿವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಶಕೀಬ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದು, ಶಕೀಬ್ ಶಿಸ್ತು ದಾಖಲೆಯಲ್ಲಿ 3 ಅಂಕಗಳನ್ನು ನೀಡಲಾಗಿದೆ. ಕ್ರಿಕೆಟ್ ನಿಯಮಗಳ ಪ್ರಕಾರ 4 ಅಂಕಗಳಿಗಿಂತ ಹೆಚ್ಚು ಶಿಸ್ತು ಕ್ರಮ ಅಂಕಗಳನ್ನು ಪಡೆದ ಆಟಗಾರರನ್ನು ಒಂದು ಪಂದ್ಯದಿಂದ ನಿಷೇಧ ಮಾಡಲು ಅವಕಾಶವಿದೆ.

    ಇದನ್ನೂ ಓದಿ : ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಶಾಟ್ – ಕೀಪರ್ ನಿಲ್ಲೋ ಜಾಗದಲ್ಲಿ ಬ್ಯಾಟ್ಸ್ ಮನ್ : ವಿಡಿಯೋ

    ಪ್ರಸ್ತುತ ಬಾಂಗ್ಲಾದಲ್ಲಿ ನಡೆಯುತ್ತಿರುವ ಬಿಪಿಎಲ್ ಲೀಗ್ ನಲ್ಲಿ ಶಕೀಬ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದು, ಲೀಗ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅಲ್ಲದೆ ಲೀಗ್‍ನ ರಂಗಪೂರ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 5 ಪಡೆಯುವ ಮೂಲಕ ಟಿ20 ಮಾದರಿಯಲ್ಲಿ 3 ಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ದಾಖಲೆಯನ್ನು ಮಾಡಿದ್ದಾರೆ.

    https://www.facebook.com/1514669735314716/videos/vb.1514669735314716/1523611757753847/?type=2&theater