Tag: ಶಂಕಿತ ವ್ಯಕ್ತಿ

  • ಜಪಾನ್ ಹಡಗಿನಲ್ಲಿದ್ದ ವ್ಯಕ್ತಿಗೆ ಕೊರೊನಾ ಶಂಕೆ- ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು

    ಜಪಾನ್ ಹಡಗಿನಲ್ಲಿದ್ದ ವ್ಯಕ್ತಿಗೆ ಕೊರೊನಾ ಶಂಕೆ- ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು

    ಉಡುಪಿ: ಮಹಾಮಾರಿ ಕೊರೊನಾ ವೈರಸ್ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆತಂಕ ಹುಟ್ಟಿಸಿದೆ. ಒಂದೇ ದಿನ ನಾಲ್ಕು ಶಂಕಿತ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಸಂಜೆ ಶಿರ್ವ ಮೂಲದ ವ್ಯಕ್ತಿ ದಾಖಲಾಗಿದ್ದಾರೆ.

    ಕಾಪು ತಾಲೂಕು ಶಿರ್ವ ಮೂಲದ 37 ವರ್ಷ ಪ್ರಾಯದ ಯುವಕ ಇತ್ತೀಚೆಗೆ ಕೊರೊನಾ ವೈರಸ್ ಕಾರಣಕ್ಕಾಗಿ ನಿರ್ಬಂಧಿತವಾಗಿದ್ದ ಜಪಾನಿ ಹಡಗಿನಲ್ಲಿ ನೌಕರಿಯಲ್ಲಿದ್ದರು. ವೈದ್ಯಕೀಯ ಪರೀಕ್ಷೆಯ ವೇಳೆ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗದ ಕಾರಣ ಬಿಡುಗಡೆಗೊಂಡು ದುಬೈಗೆ ತೆರಳಿ, ರಜೆಯಲ್ಲಿ ಊರಿಗೆ ವಾಪಸ್ ಆಗಿದ್ದರು.

    ಶಂಕಿತ ವ್ಯಕ್ತಿಯಲ್ಲಿ ಕೆಮ್ಮು, ಶೀತ, ಜ್ವರದ ತೊಂದರೆ ಕಾಣಿಸಿಕೊಂಡಿಲ್ಲ. ಉಸಿರಾಟದ ತೊಂದರೆಯೊಂದಿಗೆ ಭೇದಿ ಹಾಗೂ ವಿಪರೀತ ಹೊಟ್ಟೆನೋವು ಇರುವ ಕಾರಣ ಶುಕ್ರವಾರ ಸಂಜೆ ಜಿಲ್ಲಾಸ್ಪತ್ರೆಗೆ ಬಂದು ಇಲ್ಲಿನ ಪ್ರತ್ಯೇಕಿತ ವಾರ್ಡ್‍ಗೆ ದಾಖಲಾಗಿದ್ದಾರೆ. ಗಂಟಲಿನ ದ್ರವ ಹಾಗೂ ರಕ್ತದ ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸುಧೀರ್ ಚಂದ್ರಸೂಡ ಮಾಹಿತಿ ನೀಡಿದರು.

  • ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ಇವನೇನಾ?

    ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ಇವನೇನಾ?

    ಮಂಗಳೂರು: ಇಂದು ಬೆಳಗ್ಗೆ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಇರಿಸಲಾಗಿದ್ದ ಶಂಕಿತ ವ್ಯಕ್ತಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಟೋದಲ್ಲಿ ಬಂದ ಅಪರಿಚಿತ ಟಿಕೆಟ್ ಕೌಂಟರ್ ಬಳಿ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಮಂಗಳೂರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಕ್ಯಾಪ್ ಹಾಕಿರುವ ಒಬ್ಬ ಕೈಯಲ್ಲಿ ಬುಕ್ ಹಿಡಿದಿದ್ದಾನೆ. ಈ ವ್ಯಕ್ತಿ ನಿಲ್ದಾಣದಿಂದ ಹೊರಹೋಗುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಹಾಗೆಯೇ ಶಂಕಿತ ಬಂದಿದ್ದ ಎನ್ನಲಾದ ಆಟೋದ ಎರಡು ಫೋಟೋಗಳು ಸಹ ಪಬ್ಲಿಕ್ ಟಿವಿಗೆ ಲಭಿಸಿವೆ.

    ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕಚ್ಚೆಚ್ಚರ ವಹಿಸಲಾಗಿದೆ. ಶಂಕಿತ ಉಡುಪಿ ಮೂಲಕವೇ ಬೇರೆ ಕಡೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಸಂಬಂಧ ಉಡುಪಿ ಪ್ರಮುಖ ರಸ್ತೆ, ಕೃಷ್ಣ ಮಠ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ತೆಗೆದುಕೊಂಡು ಹೋಗಲಾಗಿದೆ. ಬಾಂಬ್ ನಿಷ್ಕ್ರಿಯಗೊಳ್ಳದ ಹಿನ್ನೆಲೆಯಲ್ಲಿ ರಿಮೋಟ್ ಕಂಟ್ರೋಲರ್ ಮೂಲಕ ಸ್ಫೋಟಿಸುವ ಸಾಧ್ಯತೆಗಳು ಹೆಚ್ಚಿವೆ.

    ಒಂದೆಡೆ ಕೆಂಜಾರು ಮೈದಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೆ, ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆಯೊಂದು ಬಂದಿದೆ. ಬೆದರಿಕೆ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಂಗಳೂರಿನಿಂದ ಹೈದರಾಬಾದ್ ಗೆ ಟೇಕಾಫ್ ಆಗುತ್ತಿದ್ದ ವಿಮಾನವನ್ನು ತಡೆದಿದ್ದಾರೆ. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ಪರಿಶೀಲನೆ ನಡೆಸಲಾಗಿದೆ.

  • ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟ- ಚೆಕ್ಕಿಂಗ್  ಕೌಂಟರ್‌ನಲ್ಲಿ  ಹೈ ಸೆಕ್ಯೂರಿಟಿ

    ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟ- ಚೆಕ್ಕಿಂಗ್ ಕೌಂಟರ್‌ನಲ್ಲಿ ಹೈ ಸೆಕ್ಯೂರಿಟಿ

    ಬೆಂಗಳೂರು: ಸೋಮವಾರ ರಾತ್ರಿ ಸಿಲಿಕಾನ್ ಸಿಟಿಯ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಹೈ ಸೆಕ್ಯೂರಿಟಿ ಚೆಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

    ಸೋಮವಾರ ರಾತ್ರಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿದೆ. ಈ ವೇಳೆ ಆತನ ತಪಾಸಣೆ ಮಾಡಲು ಸೆಕ್ಯೂರಿಟಿ ಮುಂದಾಗಿದ್ದಾರೆ. ಆಗ ಆ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ. ಆದ್ದರಿಂದ ಮೆಟ್ರೋ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಶಂಕಿತ ವ್ಯಕ್ತಿಯನ್ನು ಸೆರೆಹಿಡಿಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಮುಂಜಾಗೃತ ಕ್ರಮವಾಗಿ ಮೆಟ್ರೋ ನಿಲ್ದಾಣದಲ್ಲಿ ಹೈ ಸೆಕ್ಯೂರಿಟಿ ಹಾಗೂ ಪ್ರಯಾಣಿಕರ ಫುಲ್ ಚೆಕ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಜನರ ಬ್ಯಾಗ್‍ಗಳನ್ನು ನಿಲ್ದಾಣದ ಹೊರಗಡೆಯಿಂದಲೇ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಜೊತೆಗೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಪೊಲೀಸರಿಂದ ಹೈ ಸೆಕ್ಯೂರಿಟಿ ನೀಡಲಾಗುತ್ತದೆ.

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೇಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.