Tag: ಶಂಕಿತರು

  • ಕ್ವಾರಂಟೈನ್ ಮಾಡಿದ್ದಕ್ಕೆ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

    ಕ್ವಾರಂಟೈನ್ ಮಾಡಿದ್ದಕ್ಕೆ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

    ಕೋಲಾರ: ಕೊರೊನಾ ಮಹಾಮಾರಿ ಹರಡುವ ನಿಟ್ಟಿನಲ್ಲಿ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಕುಟುಂಬವೊಂದು ಪೆಟ್ರೋಲ್ ಬಾಟಲ್ ನೊಂದಿಗೆ ಗ್ರಾಮ ಪಂಚಾಯ್ತಿಯ ಒಳಗೆ ನುಗ್ಗಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸಂತೆಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಸಂತೇಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಕುಟುಂಬದವರನ್ನು ಕಳೆದ ಎರಡು ದಿನದ ಹಿಂದೆ ಹೋಂ ಕ್ವಾರಂಟೈನ್ ಮಾಡಲಾಗಿತ್ತು.

    ಬೆಂಗಳೂರಿನಿಂದ ಸಂಬಂಧಿಕರು ತಮ್ಮ ಮನೆಗೆ ಬಂದಿದ್ದರು. ಅದನ್ನೆ ಕೆಲವರು ದೊಡ್ಡ ಸುದ್ದಿಯೆಂದು ಆಶಾ ಕಾರ್ಯಕರ್ತರಿಗೆ ತಿಳಿಸಿ ಕ್ವಾರಂಟೈನ್ ಮಾಡಲು ಸೂಚಿಸಿದ್ದರು. ಜೊತೆಗೆ ಮಂಜುನಾಥ್ ಸೇರಿದಂತೆ ಕುಟುಂಬಸ್ಥರ ಭಾವಚಿತ್ರವನ್ನು ಕೊರೊನಾ ಶಂಕಿತರು ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅನಾವಶ್ಯಕವಾಗಿ ಕ್ವಾರಂಟೈನ್ ಮಾಡಿದ್ದಾರೆಂದು ಆರೋಪಿಸಿರುವ ಕುಟುಂಬದ ಸದಸ್ಯರು, ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

    ಇಷ್ಟು ಮಾತ್ರವಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ಹೈಡ್ರಾಮಾ ಸೃಷ್ಟಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಮಾಲೂರು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಮಂಜುನಾಥ್ ಕುಟುಂಬಸ್ಥರನ್ನು ಮನವೊಲಿಸಿದರು.

  • ಜಿಹಾದಿ ಗ್ಯಾಂಗ್ ಹೆಸರಲ್ಲಿ ಜಮೀನು ಖರೀದಿಗೆ ಮುಂದಾಗಿದ್ದ ಶಂಕಿತ ಉಗ್ರರು!

    ಜಿಹಾದಿ ಗ್ಯಾಂಗ್ ಹೆಸರಲ್ಲಿ ಜಮೀನು ಖರೀದಿಗೆ ಮುಂದಾಗಿದ್ದ ಶಂಕಿತ ಉಗ್ರರು!

    – ಇಬ್ಬರು ಶಂಕಿತ ಉಗ್ರರು ತಮಿಳುನಾಡು ಪೊಲೀಸರಿಗೆ ಹಸ್ತಾಂತರ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯರ ಬಂಧನ ಪ್ರಕರಣದಿಂದ ಒಂದೊಂದೆ ಸತ್ಯಾಂಶಗಳು ಹೊರ ಬರುವುದಕ್ಕೆ ಶುರುವಾಗಿವೆ. ಇಡೀ ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ದ ಜಿಹಾದಿ ಗ್ಯಾಂಗ್ ಸದಸ್ಯರಿಗೆ ಭರ್ಜರಿ ಟಾಸ್ಕ್ ನೀಡಲಾಗುತ್ತಿತ್ತು ಎನ್ನಲಾಗಿದೆ.

    ಜಿಹಾದಿಗಳು ವ್ಯವಸ್ಥಿತ ಜಾಲ ಹೆಣೆಯಲು ಪಕ್ಕಾ ಪ್ಲ್ಯಾನ್ ಮಾಡಿದ್ದರು. ಮತ್ತೊಂದು ಆಘಾತಕಾರಿ ವಿಚಾರವೆಂದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಟ್ರೈನಿಂಗ್ ಕ್ಯಾಂಪ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಜಿಹಾದಿ ಗ್ಯಾಂಗ್ ಸದಸ್ಯರಿಗೆ ಅಲ್ಲಿಯೇ ಶಸ್ತ್ರಾಸ್ತ್ರ ತರಬೇತಿಗೆ ಪ್ಲ್ಯಾನ್ ರೂಪಿಸಲಾಗಿತ್ತು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಹೊರ ಬಿದ್ದಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಸದ್ದುಗುಂಟೆಪಾಳ್ಯದಲ್ಲಿದ್ದ ಶಂಕಿತ ಉಗ್ರ ಮೆಹಬೂಬ್ ಪಾಷಾ ಸ್ಥಾಪಿಸಿದ್ದ ಟ್ರಸ್ಟ್ ಹೆಸರಿನಲ್ಲಿ ಜಮೀನು ಖರೀದಿಗೆ ಯತ್ನ ನಡೆದಿತ್ತು. ರಾಜ್ಯದ ಐಸಿಎ ಸಂಘಟನೆ ಮುಖ್ಯಸ್ಥ ಮೆಹಬೂಬ್ ಪಾಷಾ ಮೂಲಕ ಮನ್ಸೂರ್ ಖಾನ್‍ಗೆ ಜಮೀನು ಖರೀದಿಸುವ ಟಾಸ್ಕ್ ನೀಡಲಾಗಿತ್ತು. ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನು ಗುಂಡ್ಲುಪೇಟೆಯಲ್ಲಿ ವಶಕ್ಕೆ ಪಡೆದಿದ್ದರು. ಅಲ್ಲದೆ ದೆಹಲಿಯಲ್ಲಿ ಬಂಧಿತನಾಗಿದ್ದ ಖಾಜಾ ಮೊಯಿದ್ದೀನ್ ಜಿಹಾದಿ ಸದಸ್ಯರ ಮುಖ್ಯಸ್ಥನ ಸೂಚನೆಯಂತೆ ಎಲ್ಲವೂ ನಡೆಯುತ್ತಿತ್ತು. ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮನೆಯಲ್ಲಿ ಪಿಸ್ತೂಲ್, ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಶಂಕಿತ ಉಗ್ರರು:
    ಉಡುಪಿಯಲ್ಲಿ ಮಂಗಳವಾರ ಸೆರೆಸಿಕ್ಕ ಇಬ್ಬರು ಶಂಕಿತ ಉಗ್ರರಾದ ಅಬ್ದುಲ್ ಶಮೀಮ್ ಮತ್ತು ತೌಫಿಕ್‍ನನ್ನು ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ವಿಲ್ಸನ್ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳ ಬಂಧನಕ್ಕಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಪೊಲೀಸರು ತೀವ್ರ ಶೋಧ ನಡೆಸಿದ್ದರು.

    ಉಗ್ರರ ಚಟುವಟಿಕೆ ಶಂಕೆ ಹಿನ್ನೆಲೆ ತಮಿಳುನಾಡು ಕೇರಳ ಗಡಿಯ ಕಲಿಯಿಕ್ಕಾವಿಲ ಚೆಕ್‍ಪೋಸ್ಟ್ ನಲ್ಲಿ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿತ್ತು. ಇದೇ ಮಾರ್ಗವಾಗಿ ಜನವರಿ 8ರ ರಾತ್ರಿ ಮಹೀಂದ್ರ ಸ್ಕಾರ್ಪಿಯೋದಲ್ಲಿ ಬಂದಿದ್ದ ಇಬ್ಬರು ಶಂಕಿತ ಉಗ್ರರು ವಿಲ್ಸನ್ ಅವರನ್ನು ಹತ್ಯೆಗೈದು ಪರಾರಿ ಆಗಿದ್ದರು. ಸದ್ಯ ಈ ಪ್ರಕರಣದ ತನಿಖೆ ನಡೆಸುತ್ತಿರುವ ತಮಿಳುನಾಡು ಕ್ಯೂ ಬ್ರಾಂಚ್ ಪೊಲೀಸರು, ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

  • ಚಾಮರಾಜನಗರದಲ್ಲಿ ಶಂಕಿತ ಉಗ್ರ, ಮೌಲ್ವಿ ಬಂಧನವಾಗಿದ್ದು ಹೇಗೆ?

    ಚಾಮರಾಜನಗರದಲ್ಲಿ ಶಂಕಿತ ಉಗ್ರ, ಮೌಲ್ವಿ ಬಂಧನವಾಗಿದ್ದು ಹೇಗೆ?

    ಚಾಮರಾಜನಗರ: ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಕೊಲೆಗೈಯಲ್ಲು ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕರನ್ನು ಗುಂಡ್ಲುಪೇಟೆ ಪಟ್ಟಣದಲ್ಲಿ ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ, ಆಂತರಿಕ ಭದ್ರತಾ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಸೆರೆ ಹಿಡಿದಿದೆ.

    ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯ ಮಸೀದಿಯೊಂದರ ಮೌಲ್ವಿ ಸದಕತ್ ಉಲ್ಲಾ (35) ಹಾಗೂ ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಎಂಬವನನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

    10 ದಿನಗಳಿಂದ ಆಶ್ರಯ:
    ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾಗೆ ಪಟ್ಟಣದ ಮದರಾಸದ ಮೌಲ್ವಿ ಸದಕಲ್ ಉಲ್ಲಾ ಆಶ್ರಯ ನೀಡಿದ್ದ. ಈ ತಂಡವು ಮುಂದಿನ ದಿನಗಳಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಶಾಂತಿ ಕದಡಲು ಕಾರ್ಯತಂತ್ರ ರೂಪಿಸಿತ್ತು ಎಂಬ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.

    ಸುಳಿವು ಸಿಕ್ಕಿದ್ದು ಹೇಗೆ?
    ತಮಿಳುನಾಡಿನಲ್ಲಿ ಹಿಂದು ಸಂಘಟನೆಯ ಪಾಂಡಿ ಸುರೇಶ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ತಂಡದ ಸದಸ್ಯರು ನೀಡಿದ ಸುಳಿವಿನಿಂದಾಗಿ ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಪಟ್ಟಣದಲ್ಲಿ ಉಳಿದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

    ಮೆಹಬೂಬ್ ಪಾಷಾ ಕಳೆದ ಹಲವು ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುತ್ತಾಡಿದ್ದ. ಅದರಂತೆ ಕೋಲಾರದಲ್ಲಿ ಈತನ ಮೊಬೈಲ್ ಸಂಖ್ಯೆಯನ್ನು ಪೊಲೀಸರು ಟ್ರೇಸ್ ಮಾಡಿದ್ದರು. 10 ದಿನಗಳಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ ಉಳಿದುಕೊಂಡು ಸಂಚು ರೂಪಿಸಲು ತೊಡಗಿದ್ದ ಎಂದು ತಿಳಿದು ಬಂದಿದೆ.

    ಹಿಂದೂ ಸಂಘಟನೆಗಳ ಮುಖಂಡರೇ ಟಾರ್ಗೆಟ್:
    ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಹಿಂದೂ ಸಂಘಟನೆಗಳ ಮುಖಂಡರನ್ನು ಕೊಲೆ ಮಾಡುವ ನಿಟ್ಟಿನಲ್ಲಿ ಮೆಹಬೂಬ್ ಪಾಷಾ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಶಂಕಿತ ಉಗ್ರನ ಯಾರನ್ನು ಟಾರ್ಗೆಟ್ ಮಾಡಿದ್ದ ಎಂಬ ಸತ್ಯ ತನಿಖೆಯಿಂದ ಹೊರ ಬರಬೇಕಾಗಿದೆ.

    ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಗುಂಡ್ಲುಪೇಟೆ ಹೊರವಲಯದಲ್ಲಿರುವ ಒಂಟಿ ಮನೆಗಳಿಗೆ ಇಂದಿಗೂ ಸ್ಥಳೀಯರಿಗೆ ಪ್ರವೇಶವಿಲ್ಲ. ನಕ್ಸಲ್ ಚಟುವಟಿಕೆಗಳು ಗರಿಗೆದರಿದಾಗ ಮಾತ್ರ ಇಲ್ಲಿ ಪೊಲೀಸರ ಗಸ್ತು ನಡೆಯುತ್ತದೆ. ಇದರ ಹೊರತಾಗಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಉಗ್ರರು ಮತ್ತು ನಕ್ಸಲರ ಬೀಡಾಗಿ ಬದಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಮಂಗಳೂರಿನಲ್ಲಿ 9 ಮಂದಿ ಶಂಕಿತರು ಅರೆಸ್ಟ್

    ಮಂಗಳೂರಿನಲ್ಲಿ 9 ಮಂದಿ ಶಂಕಿತರು ಅರೆಸ್ಟ್

    ಮಂಗಳೂರು: ಹೈ ಅಲರ್ಟ್ ಘೋಷಣೆಯಾದ ಬೆನ್ನಲ್ಲೇ ಮಂಗಳೂರಿನ ಕದ್ರಿ ಲಾಡ್ಜ್ ಒಂದರಲ್ಲಿ ತಂಗಿದ್ದ ಒಂಬತ್ತು ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರು ಕೇರಳ, ಮಡಿಕೇರಿ ಮತ್ತು ಮಂಗಳೂರು ಮೂಲದವರಾಗಿದ್ದು, ಟಿಯುವಿ 300 ಮಹೀಂದ್ರಾ ಕಾರಿನಲ್ಲಿ ಪಂಪ್ ವೆಲ್ ಲಾಡ್ಜ್ ಗೆ ಬಂದಿದ್ದರು. ಅಷ್ಟೇ ಅಲ್ಲದೆ ತಾವು ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯೂರೋ ಅಧಿಕಾರಿಗಳು ಅಂತ ಹೇಳಿಕೊಂಡಿದ್ದರು. ಒಂಬತ್ತು ಜನರ ಪೈಕಿ 5 ಜನರು ಗನ್ ಹಿಡಿದಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಸಿ ಕ್ಯಾಮೆರಾ ಚೆಕ್ ಮಾಡಿ- ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ

    ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಪಂಪ್ ವೆಲ್ ಲಾಡ್ಜ್ ದೌಡಾಯಿಸಿದ ಪೊಲೀಸರು ಶಂಕಿತ 9 ಜನರನ್ನು ಬಂಧಿಸಿದ್ದು, ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ವಿಧಿ ರದ್ದು ಮಾಡಿರುವ ಹಿನ್ನೆಲೆ ಉಗ್ರರು ದಕ್ಷಿಣ ಭಾರತದಲ್ಲಿ ದಾಳಿ ನಡೆಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ 9 ಜನ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

    ಅನುಮಾನಾಸ್ಪದ ವ್ಯಕ್ತಿ, ವಸ್ತು, ವಾಹನ ಕಂಡು ಬಂದಲ್ಲಿ ವಶಕ್ಕೆ ಪಡೆದು ಪರಿಶೀಲನೆ ನಡೆಸಬೇಕು. ಕರಾವಳಿಯಲ್ಲಿ ಬಿಗಿ ಬಂದೋಬಸ್ತ್ ಇರಬೇಕು. ಪಿಜಿ, ಹಾಸ್ಟೆಲ್, ಅಪಾಟ್ರ್ಮೆಂಟ್, ಮಸೀದಿ, ದೇವಸ್ಥಾನಗಳ ಬಳಿ ಪೊಲೀಸರು ತಪಾಸಣೆ ನಡೆಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರು, ಸಿಬ್ಬಂದಿಗೆ ಆದೇಶ ನೀಡಿದ್ದಾರೆ.

  • ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಮೊದಲ ವ್ಯಕ್ತಿ ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಮೊದಲ ವ್ಯಕ್ತಿ ಪತ್ತೆ

    ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಇಬ್ಬರೂ ಉಗ್ರರರಲ್ಲ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಿಯಾಜ್ ಅಹಮದ್ ತಾವಾಗಿಯೇ ಬಂದು ಹೇಳಿಕೆ ನೀಡಿದ್ದಾರೆ. ಅನುಮಾನ ಮೂಡಿಸಿದ ಮತ್ತೊಬ್ಬ ವ್ಯಕ್ತಿ ಶಾಜಿದ್ ಖಾನ್ ಪತ್ತೆಯಾಗಿದ್ದಾರೆ. ಅವರು ರಾಜಸ್ಥಾನದ ಮೂಲದ ವ್ಯಕ್ತಿ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಮೆಟ್ರೋ ಸ್ಟೇಷನ್‍ಗೆ ಬಂದಿದ್ದ ವ್ಯಕ್ತಿ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿತ್ತು. ಆದರೆ ಆತ ಅಲ್ಲಿಂದ ಹೊರ ನಡೆದಿದ್ದ. ಈ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಶಂಕಿತ ವ್ಯಕ್ತಿಯ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಿದ್ದೇವು. ರಿಯಾಜ್ ಅಹಮದ್ ಉಪ್ಪಾರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಶೋಧ ಮಾಡಲಾಗಿತ್ತು. ಆ ವ್ಯಕ್ತಿ ಕೂಡ ಈಗ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಶಾಜಿದ್ ಖಾನ್, ಮಸೀದಿಯ ಬಳಿ ದಾನ ಪಡೆಯುವ ವ್ಯಕ್ತಿ ಆಗಿದ್ದಾರೆ. ಮೆಟ್ರೋ ಸ್ಟೇಷನ್ ಬಳಿ ಹೋದಾಗ ಅವರ ಜೇಬಿನಲ್ಲಿ ಇದ್ದ ಕಾಯಿನ್‍ಗಳಿಂದ ಶಬ್ಧ ಆಗಿತ್ತು. ಹೀಗಾಗಿ ಅವರನ್ನು ತಡೆ ಹಿಡಿಯಲಾಗಿತ್ತು. ಭದ್ರತಾ ಸಿಬ್ಬಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಇಬ್ಬರಿಗೂ ಸರಿಯಾದ ಭಾಷೆ ಬಾರದೇ ಇದ್ದ ಕಾರಣ ಈ ಗೊಂದಲ ನಿರ್ಮಾಣವಾಗಿದೆ ಎಂದರು.

    ಶಾಜಿದ್ ಖಾನ್ ಪತ್ನಿ ಮಕ್ಕಳನ್ನು ಕರೆದುಕೊಂಡು ಬಂದು ಮಸೀದಿ ಬಳಿ ದಾನ ಪಡೆಯುತ್ತಿದ್ದಾರೆ. ಅವರು ಮೊದಲ ಬಾರಿ (ಸೋಮವಾರ) ಮೆಟ್ರೋ ಹತ್ತಲು ಬಂದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಪ್ರಶ್ನೆ ಮಾಡಿದ್ದರಿಂದ ಗಾಬರಿಯಾಗಿ ಹೊರ ಹೋಗಿದ್ದರು ಎನ್ನುವುದು ತನಿಖೆಯ ಬಳಿಕ ತಿಳಿದು ಬಂದಿದೆ ಎಂದು ತಿಳಿಸಿದರು.

    ಈ ಬುಧವಾರ ರಿಯಾಜ್ ಅಹ್ಮದ್ (70) ಅವರು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರವನ್ನು ನೀಡಿದ್ದರು. ನಾನು ಮೆಜೆಸ್ಟಿಕ್‍ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುತ್ತಿದ್ದು, ನಾಯಂಡಹಳ್ಳಿಯಲ್ಲಿ ವಾಸವಾಗಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದರು.

    ನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ. ಗಡ್ಡದಾರಿಗಳೆಲ್ಲಾ ಉಗ್ರರಾ? ಗಡ್ಡ ಬಿಡುವುದೇ ತಪ್ಪೇ ಎಂದು ಅವರು ಅಳಲು ತೋಡಿಕೊಂಡಿದ್ದರು.

    ಆಗಿದ್ದೇನು?:
    ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಕಪ್ಪು ಬಣ್ಣದ ಸೂಟ್ ಧರಿಸಿದ್ದ ಬಂದಿದ್ದ ವ್ಯಕ್ತಿ (ಶಾಜಿದ್ ಖಾನ್) ಮೆಟಲ್ ಡಿಟೆಕ್ಟರ್ ಬಳಿಗೆ ಹೋಗಿದ್ದಾಗ ಸದ್ದಾಗಿತ್ತು. ಆದರೆ ಸೆಕ್ಯೂರಿಟಿ ಕೈಗೆ ಸಿಗದೇ ಹೊರ ನಡೆದಿದ್ದರು. ಶಾಜಿದ್ ಖಾನ್ ಹೊರ ಹೋದ ಕೆಲ ನಿಮಿಷದಲ್ಲಿ ರಿಯಾಜ್ ಅಹ್ಮದ್ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಎಲ್ಲರಿಗಿಂತ ಜಾಸ್ತಿ ಸಮಯ ಪರಿಶೀಲನೆ ನಡೆಸಿದ್ದರು. ಇದಕ್ಕೆ ಸಿಟ್ಟಾಗಿ ಅವರು ತಿರುಗಿ ತಿರುಗಿ ಮುಂದೆ ಹೋಗಿದ್ದರು. ಕಾಕತಾಳೀಯ ಎಂಬಂತೆ ಇಬ್ಬರ ವರ್ತನೆ ಅನುಮಾನ ಮೂಡಿಸಿದ ಹಾಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರ ವಿಡಿಯೋ ಮಾಧ್ಯಮಗಳಲ್ಲಿ ರಿಲೀಸ್ ಆಗಿತ್ತು. ಪೊಲೀಸರು ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ. ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.