Tag: ಶಂಕರ್ ಬಿದರಿ

  • ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಎಂಗೇಜ್ ಮೆಂಟ್: ಶಂಕರ್ ಬಿದರಿ ಸಾಕ್ಷಿ

    ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಎಂಗೇಜ್ ಮೆಂಟ್: ಶಂಕರ್ ಬಿದರಿ ಸಾಕ್ಷಿ

    ಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ, ನಿರೂಪಕಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇವರ ಎಂಗೇಜ್ ಮೆಂಟ್ ಗೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಸಾಕ್ಷಿಯಾಗಿದ್ದು, ಹರಿದಾಡುತ್ತಿರುವ ಫೋಟೋದಲ್ಲಿ ಶಂಕರ್ ಬಿದರಿ ಸೇರಿದಂತೆ ಹಲವರು ಇದ್ದಾರೆ.

    ಬಿಗ್ ಬಾಸ್ ಮನೆಯಿಂದ ವೈಷ್ಣವಿ ಹೊರ ಬರುತ್ತಿದ್ದಂತೆಯೇ ಅವರ ಮದುವೆ ವಿಚಾರ ಕೂಡ ಮುನ್ನೆಲೆಗೆ ಬಂದಿತ್ತು. ಸ್ವತಃ ಅವರು ಕೂಡ ಆಫರ್ಸ್ ಬರುತ್ತಿವೆ ಎಂದು ಹೇಳಿಕೊಂಡಿದ್ದರು. ಇದೀಗ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹುಡುಗ ಯಾರು? ಯಾವ ಕ್ಷೇತ್ರದವರು? ನಿಶ್ಚಿತಾರ್ಥ ನಡೆದದ್ದು ಎಲ್ಲಿ ಎನ್ನುವ ವಿಚಾರ ಮಾತ್ರ ಗುಟ್ಟಾಗಿದೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

    ಇತ್ತೀಚೆಗಷ್ಟೇ ವೈಷ್ಣವಿ ಹೊಸ ಮನೆಯನ್ನು ಖರೀದಿಸಿ, ಗೃಹ ಪ್ರವೇಶ ಕೂಡ ಮಾಡಿದ್ದರು. ಬಿಗ್ ಬಾಸ್ ಮನೆಯ ಸದಸ್ಯರು ಸೇರಿದಂತೆ ಅವರ ಆಪ್ತರನ್ನು ಹೊಸ ಮನೆಗೆ ಆಹ್ವಾನಿಸಿದ್ದರು. ಹೊಸ ಮನೆ ಖರೀದಿಸಿದ ಬೆನ್ನಲ್ಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಈವರೆಗೂ ಈ ಕುರಿತು ವೈಷ್ಣವಿ ಎಲ್ಲಿಯೂ ಬರೆದುಕೊಂಡಿಲ್ಲ. ಆದರೆ, ಫೋಟೋ ಮಾತ್ರ ಜಾಲತಾಣದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಹರಾಮಿ ದುಡ್ಡು ಸಿಗದಂತೆ ಕಾನೂನು ಮಾಡಬೇಕು: ಡ್ರಗ್ಸ್ ಮಾಫಿಯಾ ವಿರುದ್ಧ ಬಿದರಿ ಬೇಸರ

    ಹರಾಮಿ ದುಡ್ಡು ಸಿಗದಂತೆ ಕಾನೂನು ಮಾಡಬೇಕು: ಡ್ರಗ್ಸ್ ಮಾಫಿಯಾ ವಿರುದ್ಧ ಬಿದರಿ ಬೇಸರ

    ನೆಲಮಂಗಲ: ಚಿತ್ರರಂಗದ ಕೆಲ ನಟಿಯರು ಡ್ರಗ್ ವಿಚಾರದಲ್ಲಿ ಭಾಗಿಯಾಗಿರುವುದಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಇಂದು ಖಾಸಗಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಹರಾಮಿ ದುಡ್ಡು ಸಿಗುವವರು ಈ ರೀತಿಯ ಉದ್ಯೋಗ ಮಾಡುತ್ತಾರೆ. ಹೀಗಾಗಿ ಈ ಹರಾಮಿ ದುಡ್ಡು ಸಿಗದಂತೆ ಕಾನೂನು ಬಿಗಿಗೊಳಿಸಬೇಕು. ಪ್ರಮಾಣಿಕವಾಗಿ ದುಡಿಯುವವರಿಗೆ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ನ್ಯಾಯವನ್ನು ಕಾಪಾಡಬೇಕಿದೆ ಎಂದರು.

    ತಪ್ಪು, ಅನ್ಯಾಯ, ಲಂಚ ಸುಲಿಗೆ ಮಾಡುವವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯ ವ್ಯವಸ್ಥೆ ತರಬೇಕು. ಮೊದಲು ಕೂಡ ನಮ್ಮ ದೇಶದಲ್ಲಿ ಡ್ರಗ್ಸ್ ದಂಧೆ ಇತ್ತು ಆದರೆ ಈಗ ಹೆಚ್ಚಾಗಿದೆ. ಜನರಿಗೆ ಕಾನೂನಿನ ಮೇಲೆ ಭಯ ಇಲ್ಲದಾಗಿದೆ. ಆದ್ದರಿಂದ ಇವೆಲ್ಲಾ ಹಾಗುತ್ತಿದೆ. ನಮ್ಮ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಇದನ್ನೆಲ್ಲಾ ಮಟ್ಟಹಾಕುತ್ತಾರೆ ಎಂದು ತಿಳಿಸಿದರು.

    ರಾಜಕೀಯ, ಸಿನಿಮಾ, ನಾಟಕ ಮಾಡುವವರಿಗೆ ಪ್ರೋತ್ಸಾಹ ಮಾಡುವುದು ಕಲಿಯುಗದ ಧರ್ಮ. ನಿಜವಾದ ಹೀರೋಗಳು ನಮ್ಮ ದೇಶ ಕಾಯುವ ಸೈನಿಕರು ಹಾಗೂ ಹೊಲದ ಕೆಲಸ ಮಾಡುವ ರೈತರು ಮತ್ತು ಪೊಲೀಸರು. ನಾಟಕದಲ್ಲಿ ಡೈರೆಕ್ಟರ್ ಹೇಳಿದಂತೆ ನಟನೆ ಮಾಡುವವರು ಹೀರೋಗಳಲ್ಲ. ಅವರಿಗೆ ಒಮ್ಮೆ ಸ್ನಾನ ಮಾಡಿಸಿ ನೋಡಿ ಎಲ್ಲ ಅರ್ಥವಾಗುತ್ತೆ ಎಂದು ಡ್ರಗ್ಸ್ ದಂಧೆ ಬಗ್ಗೆ ಮಾರ್ಮಿಕವಾಗಿ ಶಂಕರ್ ಬಿದಿರಿ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ನೆಲಮಂಗಲದ ಜನರಿಗೆ ಉಚಿತವಾಗಿ ನಿತ್ಯಾ ಸಂಸ್ಥೆಯ ಮಾಲೀಕ ಕುಮಾರ್ ನೇತೃತ್ವದಲ್ಲಿ ಮಾಸ್ಕ್ ಗಳನ್ನು ವಿತರಿಸಿದರು.

  • ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಅಕ್ರಮ – ಬಿದರಿ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಜಾಣ ಮೌನ

    ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಅಕ್ರಮ – ಬಿದರಿ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಜಾಣ ಮೌನ

    ಬೆಂಗಳೂರು: ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳ ಬ್ಲಾಕಿಂಗ್‍ನಲ್ಲಿ ನಡೆದಿದೆಯೆನ್ನಲಾದ ಸಾವಿರಾರು ಕೋಟಿ ರೂ. ಅವ್ಯವಹಾರದ ಆರೋಪ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಜಾಣ ಮೌನ ವಹಿಸಿದೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಯವರು ಇದೇ ತಿಂಗಳ 13 ರಂದು ತಮ್ಮ ಫೇಸ್‍ಬುಕ್‍ನ ವಾಲ್ ನಲ್ಲಿ ಸೀಟ್ ಬ್ಲಾಕಿಂಗ್ ಅಕ್ರಮ ಕುರಿತು ಗಂಭೀರ ಆರೋಪ ಮಾಡಿದ್ದರು. ಆದರೆ 12 ದಿನಗಳಾದರೂ ಶಂಕರ್ ಬಿದರಿಯವರ ಆರೋಪವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಗಂಭೀರವಾಗಿ ತೆಗೆದುಕೊಂಡಿಲ್ಲ.

    ಈ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್, ಶಂಕರ್ ಬಿದರಿಯವರು ನನಗೆ ಇನ್ನೂ ದೂರು ಕೊಟ್ಟಿಲ್ಲ. ಅವರು ಮಾಡಿದ ಆರೋಪ ಸಂಬಂಧ ದಾಖಲೆಗಳನ್ನು ಇನ್ನೂ ನನಗೆ ತಂದು ಕೊಟ್ಟಿಲ್ಲ. ಬಿದರಿಯವರು ದಾಖಲೆ ತಂದು ಕೊಟ್ಟರೆ ಅದರ ಸಂಬಂಧ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

    ಸಾಮಾಜಿಕ ಜಾಲತಾಣದಲ್ಲಿ ಯಾರು ಬೇಕಾದರೂ ಸುಲಭವಾಗಿ ಆರೋಪ ಮಾಡಬಹುದು. ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದ ಶಂಕರ್ ಬಿದರಿಯವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡುವ ಬದಲು ನನ್ನ ಬಳಿ ದೂರು ಕೊಡಬಹುದಿತ್ತು. ಬಿದರಿಯವರು ದೂರು ಕೊಟ್ಟ ಬಳಿಕ ಪರಿಶೀಲನೆ ಮಾಡುತ್ತೇನೆ. ಬಿದರಿಯವರು ನನಗೆ ದೂರು ಕೊಟ್ಟಿದ್ರೆ ಸುಲಭವಿತ್ತು. ಅವರು ದೂರು ಕೊಟ್ಟ ಬಳಿಕ ಅದರಲ್ಲಿ ನಿಜಾಂಶವಿದ್ದರೆ ತನಿಖೆಗೆ ಒಳಪಡಿಸುತ್ತೇನೆ ಎಂದು ಹೇಳಿದರು.

    ಸಚಿವರ ಮಾತಲ್ಲಿ ಫೇಸ್ ಬುಕ್ ನ ಮೂಲಕ ಶಂಕರ್ ಬಿದರಿಯವರು ಆರೋಪಿಸಿದ್ದಕ್ಕೆ ಅಸಮಧಾನದ ಎಳೆ ಇತ್ತು. ಹಾಗಿದ್ದರೆ ಸೀಟ್ ಬ್ಲಾಕಿಂಗ್ ಅಕ್ರಮ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಧೋರಣೆ ತಾಳಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಬಿದರಿಯವರು ಈ ಆರೋಪ ಮಾಡಿ 12 ದಿನಗಳಾದರೂ ವೈದ್ಯಕೀಯ ಶಿಕ್ಷಣ ಇಲಾಖೆ ಸುಮ್ಮನಿದೆ. ಆರೋಪ ಗಮನಕ್ಕೆ ಬಂದರೂ ಕನಿಷ್ಠ ಪ್ರಾಥಮಿಕ ಹಂತದ ಪರಿಶೀಲನೆಯನ್ನೂ ಮಾಡದ ವೈದ್ಯಕೀಯ ಶಿಕ್ಷಣ ಇಲಾಖೆ ಧೋರಣೆಗೆ ಖಂಡನೆ ವ್ಯಕ್ತವಾಗುತ್ತಿದೆ.

    ಶಂಕರ್ ಬಿದರಿಯವರ ಆರೋಪ ಏನು?:
    ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಸಂಬಂಧ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಫೇಸ್‍ಬುಕ್ ಪೇಜ್‍ನಲ್ಲಿ ಅವ್ಯವಹಾರದ ಬಗ್ಗೆ ಪೋಸ್ಟ್ ಹಾಕಿದ್ದರು. ಖಾಸಗಿ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ಹಣ ಅವ್ಯವಹಾರವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪತ್ರ ಬರೆದಿದೆ. ಇಷ್ಟು ದೊಡ್ಡ ಅವ್ಯವಹಾರ ಆಗಿದ್ರೂ ಸರ್ಕಾರ, ಐಟಿ ಇಲಾಖೆ ಏನ್ ಮಾಡ್ತಿದೆ? ಪ್ರಕರಣದ ಬಗ್ಗೆ ಮೌನ ವಹಿಸಿ ಖಾಸಗಿ ಲಾಬಿಗೆ ಮಣಿದ್ರಾ? ಎಂದು ಫೇಸ್ ಬುಕ್ ನಲ್ಲಿ ಶಂಕರ್ ಬಿದರಿ ಪ್ರಶ್ನೆ ಮಾಡಿದ್ದರು.

  • 1,100 ಕೋಟಿ ಮೆಡಿಕಲ್ ಸೀಟು ಅವ್ಯವಹಾರ?- ಶಂಕರ್ ಬಿದರಿ ಹೊಸ ಬಾಂಬ್

    1,100 ಕೋಟಿ ಮೆಡಿಕಲ್ ಸೀಟು ಅವ್ಯವಹಾರ?- ಶಂಕರ್ ಬಿದರಿ ಹೊಸ ಬಾಂಬ್

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸೀಟ್ ಬ್ಲಾಕಿಂಗ್ ಹಗರಣ ತಲೆ ಎತ್ತಿದಂತೆ ಕಾಣುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 1100 ಕೋಟಿ ಮೆಡಿಕಲ್ ಸೀಟು ಹಗರಣ ಆಗಿದೆ ಅಂತ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಭಾರೀ ಆರೋಪವೊಂದು ಮಾಡಿದ್ದಾರೆ. ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಅಕ್ರಮ ನಡೆದಿದೆ ಅಂತ ಪೋಸ್ಟ್ ಹಾಕಿಕೊಂಡಿದ್ದು, ಇದೀಗ ದೊಡ್ಡ ಸಂಚಲನ ಉಂಟು ಮಾಡಿದೆ.

    ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ದಂಧೆ ಹೊಸದೇನು ಅಲ್ಲ. ಇದಕ್ಕೆ ಕಡಿವಾಣ ಹಾಕೋಕೆ ಸರ್ಕಾರ ಕ್ರಮ ತಗೋತೀನಿ ಅಂತ ಭಾಷಣ ಮಾಡುತ್ತೆ ಅಷ್ಟೇ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿದ್ರೆ ಮಾಡುತ್ತದೆ. ಈಗ ಇಂತಹ ಮೆಡಿಕಲ್ ಸೀಟು ಹಗರಣದ ಬಗ್ಗೆ ನಿವೃತ್ತ ಡಿಜಿ-ಐಜಿ ಶಂಕರ್ ಬಿದರಿ ಅವರು ಆರೋಪ ಮಾಡಿದ್ದಾರೆ. ವಿಚಿತ್ರ ಅಂದ್ರೆ ಖುದ್ದು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಗಳಿಗೆ ಅಕ್ರಮದ ಕುರಿತು ತನಿಖೆ ಮಾಡಿ ಅಂತ ಶಂಕರ್ ಬಿದರಿ ಪತ್ರ ಬರೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಪತ್ರ ಬರೆದಿದ್ದರೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

    ಹಗರಣ ಮೊತ್ತವನ್ನ ಸ್ವತಃ ಶಂಕರ್ ಬಿದರಿ ಬಿಚ್ಚಿಟ್ಟಿದ್ದಾರೆ. ಬರೋಬ್ಬರಿ 1,100 ಕೋಟಿ ಹಗರಣ ನಡೆದಿದ್ದರೂ, ಅನೇಕ ಖಾಸಗಿ ಕಾಲೇಜುಗಳು ಈ ಹಗರಣದಲ್ಲಿ ಇವೆ ಅಂತ ಆರೋಪ ಮಾಡಿದ್ದಾರೆ. ಅಷ್ಟೆ ಅಲ್ಲ ಪತ್ರ ಬರೆದರೂ ಸಹ ಸರ್ಕಾರ ಮತ್ತು ಐಟಿ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿದ್ರೆ ಮಾಡುತ್ತಿದೆಯಾ ವಾಗ್ದಾಳಿ ನಡೆಸಿದ್ದಾರೆ. ಖಾಸಗಿ ಕಾಲೇಜುಗಳ ಲಾಬಿಗೆ ಸರ್ಕಾರ ಮಣಿದಿದೆಯಾ ಅಂತ ಪ್ರಶ್ನೆ ಮಾಡಿದ್ದಾರೆ.

    ನಿವೃತ್ತ ಪೊಲೀಸ್ ಮಹಾ ನಿರ್ದೇಶಕರೊಬ್ಬರೇ ಇಂತಹ ದೊಡ್ಡ ಆರೋಪ ಮಾಡಿರೋದು ದೊಡ್ಡ ಸಂಚಲನ ಮೂಡಿಸಿದೆ. ಬರೋಬ್ಬರಿ 1100 ಕೋಟಿ ಅಕ್ರಮದ ಬಗ್ಗೆ ಸರ್ಕಾರ ಹಾಗೂ ರಾಜೀವ್ ಗಾಂಧಿ ಇಲಾಖೆ ಕ್ರಮ ತೆಗೆದುಕೊಳ್ಳದೇ ಇರೋದು ಅನುಮಾನಕ್ಕೂ ಕಾರಣವಾಗ್ತಿದೆ. ಹೊಸದಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಗೆ ಬಂದಿರೋ ಸಚಿವ ಡಾ. ಸುಧಾಕರ್ ಆದರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

     

  • ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿಗೆ ಮಾತೃ ವಿಯೋಗ

    ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿಗೆ ಮಾತೃ ವಿಯೋಗ

    ಬಾಗಲಕೋಟೆ: ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರ ತಾಯಿ ನಿಧನರಾಗಿದ್ದಾರೆ. ಶ್ರೀಮತಿ ಗುರಬಾಯಿ ಮಹಾದೇವಪ್ಪ ಬಿದರಿ(83) ಬನಹಟ್ಟಿ ಮನೆಯಲ್ಲಿ ನಿಧನರಾಗಿದ್ದಾರೆ.

    ಇಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ತಮ್ಮ ಕುಟುಂಬದವರನ್ನು ಅಗಲಿದ್ದಾರೆ. ಗುರಬಾಯಿ ಮಹಾದೇವಪ್ಪ ಬಿದರಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 6 ಜನ ಗಂಡು ಮಕ್ಕಳು ಹಾಗೂ 3 ಜನ ಹೆಣ್ಣು ಮಕ್ಕಳಿದ್ದಾರೆ. ಈ ಎಲ್ಲ ಮಕ್ಕಳಲ್ಲಿ ಶಂಕರ್ ಬಿದರಿ ಅವರು ಹಿರಿಯರಾಗಿದ್ದರು.

    ಈಗಾಗಲೇ ತನ್ನ ತಂದೆ ಅವರನ್ನು ಕಳೆದುಕೊಂಡ ಶಂಕರ್ ಬಿದರಿ ಅವರು ಈಗ ತಮ್ಮ ತಾಯಿಯನ್ನು ಕೂಡ ಕಳೆದುಕೊಂಡಿದ್ದಾರೆ. ಇಂದು ಸಂಜೆ 5 ಗಂಟೆಗೆ ಯಲ್ಲಟ್ಟಿ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    ಮೈಸೂರು: ಮುಂದಿನ ಚುನಾವಣೆಯಲ್ಲಿ ಮಗನಿಗಾಗಿ ಕ್ಷೇತ್ರ ಬದಲಾಯಿಸುವ ನಿರ್ಧಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಅವರನ್ನು ಸೋಲಿಸಲು ಜೆಡಿಎಸ್ – ಬಿಜೆಪಿ ಪರಸ್ಪರ ಜೊತೆಯಾಗುತ್ತಿವೆ. ಇನ್ನೊಂದು ಕಡೆ ಸಿಎಂ ಪುತ್ರ ಡಾ. ಯತೀಂದ್ರ ಸ್ಪರ್ಧಿಸಲಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಸ್ಪರ್ಧಿಸುವ ಸಾಧ್ಯತೆ ಇದೆ.

    ಸಿಎಂ ಪುತ್ರನ ವಿರುದ್ಧ ಲಿಂಗಾಯಿತ ಸಮುದಾಯದ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಜ್ಜಾಗಿದೆ. ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರು ಆಗಿರುವ ಶಂಕರ್ ಬಿದರಿ ಹಗೂ ಈಗಾಗಲೇ ಸಿಎಂ ವಿರುದ್ಧ ಸ್ಪರ್ಧಿಸಿ ಸೋತಿರುವ ಕಾ.ಪು. ಸಿದ್ದಲಿಂಗ ಸ್ವಾಮಿ ಸಹ ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

    ವರುಣಾ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಮತಗಳು ನಿರ್ಣಾಯಕ ಮಟ್ಟದಲ್ಲಿವೆ. ಈ ಹಿನ್ನೆಯಲ್ಲಿ ಲಿಂಗಾಯತ ನಾಯಕರು ಹಾಗೂ ವೃತ್ತಿಯಲ್ಲಿ ಇದ್ದಾಗ ಖ್ಯಾತಿ ಗಳಿಸಿರುವ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಸೋತಿರುವ ಕಾ.ಪು. ಸಿದ್ದಲಿಂಗಸ್ವಾಮಿ ಅವರಿಗೆ ಸ್ಥಳೀಯ ಬಿಜೆಪಿ ವಲಯದಲ್ಲೇ ದೊಡ್ಡ ವಿರೋಧವಿದೆ. ಅಲ್ಲದೆ ಸ್ಥಳೀಯ ಜನರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಂಕರ ಬಿದರಿ ಸ್ಪರ್ಧೆ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದೆ ಎಂದು ಹೇಳಲಾಗ್ತಿದೆ.

  • ಎಂ.ಬಿ.ಪಾಟೀಲ್ ಮೂಲಕವೇ ಕಾಂಗ್ರೆಸ್ ಸೇರ್ತಾರಾ ಬಿದರಿ?

    ಎಂ.ಬಿ.ಪಾಟೀಲ್ ಮೂಲಕವೇ ಕಾಂಗ್ರೆಸ್ ಸೇರ್ತಾರಾ ಬಿದರಿ?

    ಬೆಂಗಳೂರು: ತುಮಕೂರು ಸಿದ್ದಗಂಗಾ ಶ್ರೀಗಳ ಭೇಟಿ ವೇಳೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಜೊತೆ ಕಾಣಿಸಿಕೊಂಡಿದ್ದಕ್ಕೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮೇಲೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಅಷ್ಟೇ ಅಲ್ಲದೇ ಎಂಬಿ ಪಾಟೀಲ್ ಮೂಲಕವೇ ಮತ್ತೆ ಕಾಂಗ್ರೆಸ್ ಸೇರುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಎಂ.ಬಿ ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳು ಬೆಂಬಲ ನೀಡಿದ್ದಾರೆ ಎಂದು ಹೇಳಿ ಸುದ್ದಿಗೋಷ್ಠಿ ನಡೆಸಿದ್ದರು. ಈ ಹೇಳಿಕೆ ನಂತರ ಸಿದ್ದಗಂಗಾ ಶ್ರೀಗಳು ಪ್ರತ್ಯೇಕ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆ ಮಾಡಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದರು.

    ಈ ಹೇಳಿಕೆಯಿಂದಾಗಿ ಎಂಬಿ ಪಾಟೀಲ್ ಮತ್ತು ಕಾಂಗ್ರೆಸ್ ಪಕ್ಷ ಮುಜುಗರಕ್ಕೆ ಈಡಾಗಿತ್ತು. ಈ ಮುಜುಗರವನ್ನು ತಪ್ಪಿಸುವ ಸಲುವಾಗಿ ಗುರುವಾರ ಎಂಬಿ ಪಾಟೀಲ್ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ್ದರು.

    ಭೇಟಿ ಕಾರ್ಯಕ್ರಮದ ವೇಳೆ ಶಂಕರ್ ಬಿದರಿ ಸಹ ಎಂಬಿ ಪಾಟೀಲ್ ಜೊತೆ ತೆರಳಿದ್ದರು. ಎಂಬಿ ಪಾಟೀಲ್ ಜೊತೆ ತೆರಳಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಗರಂ ಆಗಿ ತರಾಟಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್ ನಾಯಕರಿಗೆ ಇಲ್ಲದ ಆಸಕ್ತಿ ನಿಮಗೆ ಯಾಕೆ? ಮಧ್ಯಸ್ಥಿಕೆಗೆ ವಹಿಸಲು ನೀವು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿ ಇಬ್ಬರು ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಶಂಕರ್ ಬಿದರಿ ನಂತರ ಸಮಾಜವಾದಿ ಪಕ್ಷವನ್ನು ಸೇರಿದ್ದರು. ಬಳಿಕ 2014ರಲ್ಲಿ ಬಿದರಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಎಂಬಿ ಪಾಟೀಲ್ ಜೊತೆಗೆ ಗುರುತಿಸಿಕೊಂಡ ಕಾರಣ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    https://youtu.be/iU1qcrqs3b4