Tag: ವ್ಯಾಪಾರ

  • ಕರ್ಫ್ಯೂ ಹಿನ್ನೆಲೆ ಮುಗಿಬಿದ್ದು ವ್ಯಾಪಾರ – ಬಿಸಿಲಿಗೂ ಹೆದರದ ಜನ

    ಕರ್ಫ್ಯೂ ಹಿನ್ನೆಲೆ ಮುಗಿಬಿದ್ದು ವ್ಯಾಪಾರ – ಬಿಸಿಲಿಗೂ ಹೆದರದ ಜನ

    ರಾಯಚೂರು: ರಂಜಾನ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ವ್ಯಾಪಾರ ಜೋರಾಗಿದ್ದು, ಸುಡು ಬಿಸಿಲಿನಲ್ಲೂ ಜನ ಮುಗಿಬಿದ್ದು ವಸ್ತುಗಳನ್ನ ಕೊಳ್ಳುತ್ತಿದ್ದಾರೆ.

    ಇಂದು ಸಂಜೆ 7 ರಿಂದಲೇ ಕರ್ಫ್ಯೂ ಇರುವುದರಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿವೆ. ಹೀಗಾಗಿ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ವ್ಯಾಪಾರ ಸಾಧ್ಯವಿಲ್ಲ. ಸೋಮವಾರ ರಂಜಾನ್ ಇರುವುದರಿಂದ ಇಂದು ವ್ಯಾಪಾರ ವಹಿವಾಟು ಜೋರಾಗಿದೆ.

    ನಗರದ ಬಟ್ಟೆ ಬಜಾರ್, ಸೂಪರ್ ಮಾರ್ಕೆಟ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನ ಮುಗಿಬಿದ್ದು ವ್ಯಾಪಾರ ನಡೆಸಿದ್ದಾರೆ. ಆದರೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನ ಮರೆತು ಜನರು ವ್ಯಾಪಾರ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿಯಿಲ್ಲದೆ ಗುಂಪು ಗುಂಪಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ರಸ್ತೆಗಳಲ್ಲಿ ಜನ, ವಾಹನಗಳೇ ತುಂಬಿವೆ. ಆಹಾರ ಪದಾರ್ಥ, ಹಣ್ಣು, ಚಪ್ಪಲಿ, ಬಟ್ಟೆಗಳನ್ನ ಜನ ಯಾವುದೇ ಭಯಭೀತಿಯಿಲ್ಲದೆ ಕೊಳ್ಳುತ್ತಿದ್ದಾರೆ.

  • ಮೈಸೂರಿನಲ್ಲಿ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ- ಷರತ್ತುಗಳು ಅನ್ವಯ

    ಮೈಸೂರಿನಲ್ಲಿ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ- ಷರತ್ತುಗಳು ಅನ್ವಯ

    ಮೈಸೂರು: ನಗರದಲ್ಲಿ ನಾಳೆಯಿಂದ (ಗುರುವಾರ) ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಹೊರಡಿಸಿದೆ.

    14 ದಿನದಿಂದ ಕೊರೊನಾ ಪ್ರಕರಣಗಳು ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ ಪಾಲಿಕೆ ಗುರುತಿಸಿದ್ದ 91 ರಸ್ತೆಗಳ ಮೇಲಿನ ನಿರ್ಬಂಧ ತೆರವು ಮಾಡಲಾಗಿದೆ. ನಗರದ 91 ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾತ್ರ ಅವಕಾಶ ನೀಡಲಾಗಿತ್ತು. ಗುರುವಾರದಿಂದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆದೇಶಿಸಿದ್ದಾರೆ.

    ಷರತ್ತುಗಳು ಅನ್ವಯ: ಪಾಲಿಕೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದೆ. ಸಲೂನ್, ಸ್ಪಾ, ಸಿನಿಮಾ ಮಂದಿರ, ಮಾಲ್, ಧಾರ್ಮಿಕ ಕೇಂದ್ರಕ್ಕೆ ಅವಕಾಶ ಇಲ್ಲ. ಸರ್ಕಾರಿ ಸಾರಿಗೆ, ಆಟೋ, ಟ್ಯಾಕ್ಸಿ ಗಳ ಸಂಚಾರಕ್ಕೂ ಅವಕಾಶ ಇಲ್ಲ. ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೇಂದ್ರ ಸರ್ಕಾರದ ಎಲ್ಲಾ ಲಾಕ್‍ಡೌನ್ ನಿರ್ಬಂಧಗಳು ಈಗಲೂ ಅನ್ವಯವಾಗಲಿದೆ. ಮೈಸೂರು ಮಹಾನಗರ ಪಾಲಿಕೆ ಕೇವಲ ವಾಣಿಜ್ಯ ರಸ್ತೆಗಳ ಮೇಲಿನ ನಿರ್ಬಂಧ ತೆರವು ಮಾಡಿದೆ.

    ಮೇ 3ರಿಂದ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ನೀಡಿದ್ದರೂ, ಮೈಸೂರಿನ ಜನತೆಗೆ ಯಾವುದೇ ವಿನಾಯ್ತಿ ನೀಡಿರಲಿಲ್ಲ. ಈ ಕುರಿತು ಮೇ 3ರಂದು ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು. ಇದೀಗ ಮೇ 3ರ ಆದೇಶವನ್ನು ವಾಪಸ್ ಪಡೆಯಲಾಗಿದೆ.

    ಜಿಲ್ಲೆಯಲ್ಲಿ ಒಟ್ಟು 90 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ 86 ಜನರು ಗುಣಮುಖರಾಗಿ ಮನೆ ತಲುಪಿದ್ದಾರೆ. ಇಂದು ಸಂಜೆ ರೋಗಿ 395 ಮತ್ತು 204 ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ.

  • ರಾಯಚೂರಿನಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟು ಆರಂಭ – ಮಾಸ್ಕ್ ಧರಿಸದಿದ್ರೆ ದಂಡ

    ರಾಯಚೂರಿನಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟು ಆರಂಭ – ಮಾಸ್ಕ್ ಧರಿಸದಿದ್ರೆ ದಂಡ

    – ಹೇರ್ ಕಟಿಂಗ್, ಪಾರ್ಲರ್ ಶಾಪ್ ಓಪನ್ ಇಲ್ಲ

    ರಾಯಚೂರು: ಗ್ರೀನ್ ಝೋನ್‍ನಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟುಗಳು ಆರಂಭವಾಗಲಿವೆ. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಬಹುದು ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

    ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಇರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗಿದ್ದು, ಬುಧವಾರದಿಂದ ಜಿಲ್ಲೆಯಾದ್ಯಂತ ವ್ಯಾಪಾರ- ವಹಿವಾಟು ಶುರುವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಕಂಪನಿ, ಕೈಗಾರಿಕೆಗಳನ್ನ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕಂಪನಿ ಆರಂಭಿಸಲು ಸೂಚಿಸಲಾಗಿದೆ. ಜೊತೆಗೆ ಬೇರೆ ಕಡೆಗಳಿಂದ ಸಿಬ್ಬಂದಿ ಬರಬಾರದು ಅಂತ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡು ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    ಹೋಟೆಲ್ ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೇರ್ ಕಟಿಂಗ್ ಶಾಪ್‍ಗಳು, ಪಾರ್ಲರ್ ಶಾಪ್‍ಗಳು ತೆರೆಯುವಂತಿಲ್ಲ. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಇತರೆ ಅತ್ಯವಶ್ಯಕ ವಸ್ತುಗಳ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಮನೆಯಿಂದ ಅವಶ್ಯಕತೆ ಇದ್ದವರು ಮಾತ್ರ ಹೊರಬರಬೇಕು. ಮಾಸ್ಕ್ ಧರಿಸಿಕೊಂಡೇ ಹೊರಬರಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್ ಹಾಕಲಾಗುವುದು ಎಂದು ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.

  • ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಈರುಳ್ಳಿ ವ್ಯಾಪಾರಿ ಸೇರಿ ಕುಟುಂಬಸ್ಥರಿಗೆ ಕೊರೊನಾ- ಗ್ರಾಹಕರಲ್ಲಿ ಆತಂಕ

    ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ.

    ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ ಆತಂಕ ತೀವ್ರಗೊಂಡಿದ್ದು, ಸೋಂಕಿತ ಸಂಖ್ಯೆ 128 ಸೇರಿದಂತೆ ತಂದೆ, ತಾಯಿ ಹಾಗೂ ಸಹೋದರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೇಷಂಟ್ ನಂ. 128 ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಸಹ ಧಾರ್ಮಿಕ ಪ್ರಚಾರ ನಡೆಸಿ, ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮಕ್ಕೆ ಆಗಮಿದ್ದಾರೆ.

    ಗ್ರಾಮಕ್ಕೆ ಮರಳಿದ ನಂತರ ಈರುಳ್ಳಿ ವ್ಯಾಪರದಲ್ಲಿ ತೊಡಗಿದ್ದು, ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ತಂದೆ ಹಾಗೂ ಮಕ್ಕಳಿಬ್ಬರು ಈರುಳ್ಳಿ ವ್ಯಾಪರ ಮಾಡುತ್ತಾರೆ. ಈ ಮೂರು ಗ್ರಾಮಗಳಲ್ಲಿ ನಡೆಯುವ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನ ಭಾಗಿಯಾಗುತ್ತಾರೆ. ಸದ್ಯ ಸೋಂಕಿತ ಕುಟುಂಬ ಬಳಿ ಯಾರೆಲ್ಲ ಈರುಳ್ಳಿ ಖರೀಸಿದ್ದಾರೆ, ಅವರೆಲ್ಲ ಆಂತಕದಲ್ಲಿದ್ದಾರೆ. ನಮಗೂ ಎಲ್ಲಿ ಸೋಂಕು ತಗುಲಿದೆಯೋ ಎಂಬ ದುಗುಡದಲ್ಲಿದ್ದಾರೆ.

  • ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

    ಖರೀದಿಸಿದ ದರದಲ್ಲೇ RSSನಿಂದ ತರಕಾರಿ ಮಾರಾಟ

    – ಮನೆಬಾಗಿಲಿಗೆ ತರಕಾರಿ ಹಂಚಿಕೆ

    ಚಿಕ್ಕಮಗಳೂರು: ಜಿಲ್ಲೆಯ ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ವತಿಯಿಂದ ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ಇಡೀ ಚಿಕ್ಕಮಗಳೂರು ನಗರಕ್ಕೆ  ತರಕಾರಿ ಹಂಚುತ್ತಿದ್ದು, ಯಾವುದೇ ಲಾಭ ಪಡೆಯದೆ ಎಪಿಎಂಸಿ ಹಾಗೂ ರೈತರ ಬಳಿ ಖರೀದಿಸಿದ ದರಕ್ಕೆ ಮನೆ ಬಾಗಿಲಿಗೆ ತಲುಪಿಸುತ್ತಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಪೊಲೀಸರ ಭಯ, ಮತ್ತೊಂದೆಡೆ ಕೊರೊನಾದ ಆತಂಕ. ಇನ್ನೊಂದೆಡೆ ಇದನ್ನೇ ಲಾಭವಾಗಿಸಿಕೊಂಡ ಕೆಲ ವ್ಯಾಪಾರಿಗಳು ಬೇಕಾಬಿಟ್ಟಿಯಾಗಿ ದರ ಹೆಚ್ಚಿಸಿ ತರಕಾರಿ ಮಾರುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಅಂತರವನ್ನು ಸಹ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಜನಸಾಮಾನ್ಯರು ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

    ಇದನ್ನು ತಪ್ಪಿಸಲು ಆರ್‌ಎಸ್‌ಎಸ್ ಸಂಚಾಲಿತ ಸೇವಾಭಾರತಿ ತಂಡ ಜನರಿಗೆ ಸಹಾಯ ಮಾಡುತ್ತಿದ್ದು, ಕೊಂಡ ರೇಟಿಗೆ ಮನೆ ಬಾಗಿಲಿಗೆ ತರಕಾರಿ ತಲುಪಿಸುತ್ತಿದೆ. ಕೆಲ ತರಕಾರಿಗಳನ್ನು ಹೊಲಗದ್ದೆಗಳಿಗೆ ಹೋಗಿ ರೈತರಿಂದ ಖರೀದಿಸುತ್ತಾರೆ. ಮತ್ತೆ ಕೆಲವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ಪ್ರತಿ ದಿನ 12 ಲಗೇಜ್ ಆಟೋಗಳಲ್ಲಿ ತರಕಾರಿ ಪೂರೈಸುತ್ತಿದ್ದು, ದಿನಕ್ಕೆ ಎರಡ್ಮೂರು ರೌಂಡ್ ಹೊಡೆದು ತರಕಾರಿ ಮಾರುತ್ತಿದ್ದಾರೆ.

    ರೈತರಿಂದ ತಂದ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಂಡ ತರಕಾರಿಯನ್ನ ಸೇವಾಭಾರತಿ ಕಾರ್ಯಕರ್ತರು ಅದೇ ರೇಟಿಗೆ ಜನರಗೆ ಮಾರುತ್ತಿದ್ದಾರೆ. ಸಂತೋಷ್ ಕೊಟ್ಯಾನ್, ಮಲ್ಲಿಕಾರ್ಜುನ್, ಶಾಮ, ರಮೇಶ್ ಗವನಹಳ್ಳಿ ನೇತೃತ್ವದ ಈ ಸೇವಾಭಾರತಿ ತಂಡದಲ್ಲಿ ಸುಮಾರು 70 ಜನ ಯುವಕರು ಕೆಲಸ ಮಾಡುತ್ತಿದ್ದು, ಚಿಕ್ಕಮಗಳೂರು ನಗರದ ಜನರಿಗೆ ಸಹಕಾರಿಗಳಾಗಿದ್ದಾರೆ. ವ್ಯಾಪಾರಿಗಳು 10-20 ರೂಪಾಯಿಗೆ ತಂದು 40-50-60 ರೂಪಾಯಿಗೆ ಮಾರುತ್ತಿದ್ದ ತರಕಾರಿಯನ್ನ ಈ ತಂಡ 10 ರೂಪಾಯಿಗೆ ತಂದು 10 ರೂಪಾಯಿಗೆ ಮಾರುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲವಾಗಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  • ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಉಡುಪಿ: ಕೊರೊನಾ ವೈರಸ್‍ನಿಂದ ದೇಶಕ್ಕೆ ಬೀಗ ಹಾಕಲಾಗಿದೆ. ಬ್ಯಾಂಕ್‍ಗಳ EMI ಪಾವತಿಸಲು ಆರ್‌ಬಿಐ ವಿನಾಯಿತಿ ಕೊಟ್ಟಿದೆ. ಈ ನಡುವೆ ಸಂಪೂರ್ಣ ಲಾಕ್‍ಡೌನ್ ಆಗಿರುವ ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರೊಬ್ಬರು ತನ್ನ ಅಂಗಡಿಗಳಿಗೆ ಬಾಡಿಗೆ ವಿನಾಯಿತಿ ಮಾಡಿದ್ದಾರೆ.

    ಕುಂದಾಪುರ ಉಳ್ತೂರು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಎಲ್ಲಾ ಅಂಗಡಿಗಳಿಗೆ ರಿಯಾಯಿತಿ ನೀಡುವುದಾಗಿ ಮಾಲೀಕ ರಮೇಶ್ ಅಡಿಗ ಘೋಷಣೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿರುವ ಈ ಕಾಂಪ್ಲೆಕ್ಸ್‌ನ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಅಡಿಗ, ಬಾಡಿಗೆದಾರರು ವ್ಯಾಪಾರ ಮಾಡದೆ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಅವರಿಂದ ಬಾಡಿಗೆ ತೆಗೆದುಕೊಳ್ಳಲು ಮನಸ್ಸಾಗುತ್ತಿಲ್ಲ. ಒಂದು ತಿಂಗಳ ಬಾಡಿಗೆ ಪಡೆಯದಿದ್ದರೆ ನಮಗೆ ಲಾಭ ಆಗದೇ ಇರಬಹುದು. ಆದರೆ ನಷ್ಟ ಆಗುವುದಿಲ್ಲ. ನಮ್ಮಲ್ಲಿರುವ ಎಲ್ಲ ಬಾಡಿಗೆದಾರರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿಯೇ ಜೀವನ ಮಾಡುತ್ತಿದ್ದಾರೆ ಎಂದರು.

    ಈಗಾಗಲೇ ಅವರು ಅವರ ಜೀವನೋಪಾಯಕ್ಕಾಗಿ ಸಾಲಗಳನ್ನು ಮಾಡಿದ್ದು, ಕಂತು ಕಟ್ಟಲು ಬಹಳ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವುದು ನನಗೆ ಯಾಕೋ ಸರಿ ಅನ್ನಿಸಲಿಲ್ಲ. ನನ್ನದು ಸಣ್ಣ ಕಾಂಪ್ಲೆಕ್ಸ್ ಹಳ್ಳಿ ಭಾಗದಲ್ಲಿದೆ. ಪೇಟೆಯಲ್ಲಿರುವ ಕಾಂಪ್ಲೆಕ್ಸ್‌ಗಳು ಕೂಡ ಇದೇ ನಿರ್ಧಾರವನ್ನು ಮಾಡಬೇಕು. ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಬೇಕು ಎಂದು ವಿನಂತಿ ಮಾಡಿಕೊಂಡರು.

  • ಅನ್ನದಾತರ ಅನ್ನ ಕಸಿದ ಕೊರೊನಾ- ಜೀವ ಉಳಿಸಿಕೊಳ್ಳಲು ಬೆಳೆ ಕಳೆದುಕೊಳ್ಳಲೇಬೇಕು!

    ಅನ್ನದಾತರ ಅನ್ನ ಕಸಿದ ಕೊರೊನಾ- ಜೀವ ಉಳಿಸಿಕೊಳ್ಳಲು ಬೆಳೆ ಕಳೆದುಕೊಳ್ಳಲೇಬೇಕು!

    – ಮೆಣಸಿನಕಾಯಿ, ಪಪ್ಪಾಯಿ ಬೆಳೆದ ರೈತರ ಲಕ್ಷಾಂತರ ರೂಪಾಯಿ ಬೆಳೆ ಹಾನಿ
    – ಕೃಷಿ ಕೆಲಸಕ್ಕೆ ಅನುಮತಿ ಕೊಟ್ರೆ ಸಾಲದಿಂದ ಉಳಿಯುತ್ತೇವೆ ಅಂತ ರೈತರ ಅಳಲು

    ರಾಯಚೂರು: ಕೊರೊನಾ ವೈರಸ್ ನ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ನಗರಪ್ರದೇಶ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಎಲ್ಲವೂ ಸಂಪೂರ್ಣ ಬಂದ್ ಆಗಿದೆ. ಕೃಷಿ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತವಾಗಿವೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮೆಣಸಿನಕಾಯಿ, ಪಪ್ಪಾಯಿ ಸೇರಿ ಇತರೆ ಬೆಳೆಗಳನ್ನ ಬೆಳದ ರೈತರಿಗೆ ಉತ್ತಮ ಫಸಲು ಕೈಗೆ ಬಂದಿದ್ದರು. ಅದನ್ನು ಕಿತ್ತು ಮಾರಾಟ ಮಾಡಲಾಗದ ಸ್ಥಿತಿಯಿರುವುದರಿಂದ ಪ್ರತಿಯೊಬ್ಬ ರೈತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾನೆ.

    ಪ್ರತಿ ಎಕರೆಗೆ 40 ರಿಂದ 50 ಸಾವಿರ ರೂಪಾಯಿವರೆಗೆ ಖರ್ಚುಮಾಡಿ ಬೆಳೆದಿರುವ ಮೆಣಸಿನಕಾಯಿ ಬೆಳೆಯನ್ನ ಒಂದೆಡೆ ಕೃಷಿ ಕಾರ್ಮಿಕರಿಲ್ಲದೆ ಗಿಡದಿಂದ ಬಿಡಿಸಲು ಆಗುತ್ತಿಲ್ಲ. ಇನ್ನೊಂದೆಡೆ ಈಗಾಗಲೇ ಮೆಣಸಿನಕಾಯಿ ಬಿಡಿಸಿದ ರೈತರಿಗೆ ಮಾರಾಟ ಮಾಡುವುದಿರಲಿ ಸಂಗ್ರಹಿಸಿಡಲು ಸೂಕ್ತವ್ಯವಸ್ಥೆಯಿಲ್ಲದೆ ಲಕ್ಷಾಂತರ ರೂಪಾಯಿ ನಷ್ಟದ ಹಾದಿಯಲ್ಲಿದ್ದಾರೆ. ಜಿಲ್ಲೆಯ ದೇವದುರ್ಗ, ಮಾನ್ವಿ ತಾಲೂಕಿನ ರೈತರ ಕೋಟ್ಯಂತರ ರೂಪಾಯಿ ಬೆಳೆ ಹಾಳಾಗುವ ಭೀತಿಯಲ್ಲಿದೆ.

    ಇನ್ನೂ ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ರೈತ ದೇವೇಂದ್ರಪ್ಪ 15 ಎಕರೆ ಹೊಲದಲ್ಲಿ ಬೆಳೆದ ಪಪ್ಪಾಯ ಬೆಳೆ ಹಾಳಾಗುತ್ತಿದೆ. ಈಗಾಗಲೇ ಎರಡು ಮೂರು ಟನ್ ಪಪ್ಪಾಯ ತಿಪ್ಪೆಪಾಲಾಗಿದೆ. ಕೊರೊನಾ ಭೀತಿಯಿಂದ ಮಾರುಕಟ್ಟೆ ಹಾಗೂ ಖರೀದಿದಾರರು ಇಲ್ಲದ ಕಾರಣ ಮಾರಾಟವಾಗದ ಪಪ್ಪಾಯಿ ಕೊಳೆತು ಹೋಗುತ್ತಿದೆ. ಸುಮಾರು 20 ಲಕ್ಷ ರೂಪಾಯಿ ಖರ್ಚುಮಾಡಿ ಬೆಳೆದಿದ್ದ ಬೆಳೆ ಸದ್ಯ ಸಮೃದ್ಧವಾಗಿ ಪಪ್ಪಾಯ ಹಣ್ಣುಗಳು ಬಂದಿದ್ದವು. ಆದ್ರೆ ಕೊರೊನಾ ವೈರಸ್ ಎಫೆಕ್ಟ್ ನಿಂದ ಎಲ್ಲವೂ ನಷ್ಟದ ಹಾದಿಯಲ್ಲಿದೆ.

    ಹೀಗಾಗಿ ರೈತರು ನಷ್ಟದಿಂದ ಸಾಲಕ್ಕೆ ಸಿಲುಕಿ ಬದುಕು ಕಳೆದುಕೊಳ್ಳುತ್ತೇವೆ ನಮಗೆ ರಕ್ಷಣೆ ಬೇಕು ಅಂತ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡು ಕೃಷಿ ಚಟುವಟಿಕೆ ಹಾಗೂ ಬೆಳೆಗಳನ್ನ ಸಂಗ್ರಹಾಗಾರಕ್ಕೆ ಸಾಗಿಸಲು ಅನುಮತಿಕೊಡಬೇಕು ಅಂತ ರೈತರು ಮನವಿ ಮಾಡುತ್ತಿದ್ದಾರೆ.

  • ಲಾಕ್‍ಡೌನ್ ಮಧ್ಯೆಯೂ ಎಗ್ಗಿಲ್ಲದೆ ಓಡಾಟ – ಜನರನ್ನ ಮನೆಗೆ ಕಳುಹಿಸಲು ಪೊಲೀಸರ ಹರಸಾಹಸ

    ಲಾಕ್‍ಡೌನ್ ಮಧ್ಯೆಯೂ ಎಗ್ಗಿಲ್ಲದೆ ಓಡಾಟ – ಜನರನ್ನ ಮನೆಗೆ ಕಳುಹಿಸಲು ಪೊಲೀಸರ ಹರಸಾಹಸ

    ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ಇಡೀ ರಾಜ್ಯವೇ ಲಾಕ್‍ಡೌನ್ ಆಗಿದ್ದರೂ ರಾಯಚೂರಿನಲ್ಲಿ ಮಾತ್ರ ಜನ ಯಾವುದಕ್ಕೂ ಕೇರ್ ಮಾಡುತ್ತಿಲ್ಲ.

    ನಗರದ ತರಕಾರಿ ಮಾರುಕಟ್ಟೆಯಲ್ಲಂತೂ ಎಂದಿನಂತೆ ಜನ ಜಂಗುಳಿ ನಡುವೆಯೇ ವ್ಯಾಪಾರ ನಡೆದಿದೆ. ಜನ ತಮಗೇನು ಸಂಬಂಧವೇ ಇಲ್ಲ ಅನ್ನೋ ಹಾಗೇ ಗುಂಪುಗುಂಪಾಗಿ ಓಡಾಡಿಕೊಂಡಿದ್ದಾರೆ. ಇಲ್ಲಿನ ಎಷ್ಟೋ ವ್ಯಾಪಾರಿಗಳಿಗೆ ಕೊರೊನಾ ವೈರಸ್ ಬಗ್ಗೆ ಗೊತ್ತಿಲ್ಲ. ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತಿದ್ದೇವೆ ಅಂತಿದ್ದಾರೆ. ಗ್ರಾಹಕರು ಸಹ ಯಾವುದೇ ಮುನ್ನೆಚ್ಚರಿಕೆ ಕ್ರಮಗಳೂ ಇಲ್ಲದೆ ಗುಂಪು ಗುಂಪಾಗಿ ಬಂದು ತರಕಾರಿ ಖರೀದಿಸುತ್ತಿದ್ದಾರೆ.

    ಜನರನ್ನ ಮನೆಯಲ್ಲೇ ಇರಿ ಅಂತ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ನಗರದ ಪ್ರಮುಖ ರಸ್ತೆ ವೃತ್ತಗಳಲ್ಲಿ ಜನ ಓಡಾಡುತ್ತಲೇ ಇದ್ದಾರೆ. ನಗರದ ಗಡಿಗಳಲ್ಲಿ ಬ್ಯಾರಿಕೇಡ್ ಮೂಲಕ ಗ್ರಾಮೀಣ ಭಾಗದಿಂದ ಬರುವ ಜನರನ್ನ ತಡೆಯಲಾಗುತ್ತಿದೆ. ಆದರೂ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಆಂಧ್ರಪ್ರದೇಶ, ತೆಲಂಗಾಣ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನ ತೆರೆದಿದ್ದು, ಅಂತರರಾಜ್ಯ ಸಾರಿಗೆಯನ್ನ ಸಂಪೂರ್ಣ ಬಂದ್ ಮಾಡಲಾಗಿದೆ.

  • ಕೊರೊನಾ ವೈರಸ್‍ನಿಂದ ಆರ್ಥಿಕವಾಗಿ ಬಿಗ್‍ಲಾಸ್ – ಯಾವ ಕ್ಷೇತ್ರಕ್ಕೆ ಎಷ್ಟು ನಷ್ಟ?

    ಕೊರೊನಾ ವೈರಸ್‍ನಿಂದ ಆರ್ಥಿಕವಾಗಿ ಬಿಗ್‍ಲಾಸ್ – ಯಾವ ಕ್ಷೇತ್ರಕ್ಕೆ ಎಷ್ಟು ನಷ್ಟ?

    ಬೆಂಗಳೂರು: ಕೊರೊನಾ ವೈರಸ್ ಬರಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿಲ್ಲ. ದೊಡ್ಡ ದೊಡ್ಡ ಉದ್ಯಮ, ವ್ಯಾಪಾರ-ವ್ಯವಹಾರಗಳಿಗೆ ಭಾರೀ ನಷ್ಟವಾಗಿದೆ. ಕೊರೊನಾ ರಣಕೇಕೆಗೆ ರೈತರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳೇ ಆರ್ಥಿಕವಾಗಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

    ವಿಶ್ವಾದ್ಯಂತ ಹಬ್ಬಿರುವ ಕೊರೊನಾದಿಂದ ಉಂಟಾಗಿರೋ ನಷ್ಟ ಅಂದಾಜಿಸಲೂ ಕೂಡ ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಚಿಲ್ಲರೆ ವ್ಯಾಪಾರ, ರಿಯಲ್ ಎಸ್ಟೇಟ್ ಉದ್ಯಮ, ಮನೋರಂಜನೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಭಾರೀ ಪರಿಣಾಮ ಬೀರಿದೆ.

    ಯಾವ ಯಾವ ಕ್ಷೇತ್ರದ ಮೇಲೆ ಹೇಗೆ ದುಷ್ಪರಿಣಾಮ:

    * ಪ್ರವಾಸೋದ್ಯಮ: ಕೊರೊನಾ ವೈರಸ್‍ನಿಂದ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಜನರ ಪ್ರದೇಶವನ್ನು ನಿಷೇಧಿಸಲಾಗಿದೆ. ಹೀಗಾಗಿ ಪ್ರವಾಸೋದ್ಯಮದಲ್ಲಿ ಅಂದಾಜು 11,400 ಕೋಟಿ ರೂ. ನಷ್ಟ ಉಂಟಾಗಲಿದೆ. ಅಲ್ಲದೆ ಪ್ರವಾಸೋದ್ಯಮದ 12 ಲಕ್ಷ ಉದ್ಯೋಗಿಗಳ ಕೆಲಸಕ್ಕೆ ಸಮಸ್ಯೆಯಾಗಿದೆ.

    * ರೆಸ್ಟೋರೆಂಟ್: ಹೋಟೆಲ್, ರೆಸ್ಟೋರೆಂಟ್‍ಗೆ ದೇಶ-ವಿದೇಶದಿಂದ ಜನರು ಬರುತ್ತಾರೆ ಎಂದು ಮುಂಜಾಗ್ರತಾ ಕ್ರಮವಾಗಿ ರೆಸ್ಟೋರೆಂಟ್ ಮುಚ್ಚಲಾಗಿದೆ. ಹೀಗಾಗಿ ಶೇ 15 ರಿಂದ 20ರಷ್ಟು ಉದ್ಯೋಗ ನಷ್ಟವಾಗಿದ್ದು, ಈ ಕ್ಷೇತ್ರದಲ್ಲಿ ಸುಮಾರು 73 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಎಂದು ಅಂದಾಜಿಸಲಾಗಿದೆ.

    * ವಿಮಾನಯಾನ: ಕೊರೊನಾ ವೈರಸ್ ಕಡಿಮೆಯಾಗುವವರೆಗೂ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ. ಆದ್ದರಿಂದ 150ಕ್ಕೂ ಹೆಚ್ಚು ವಿಮಾನಗಳು ಸ್ತಬ್ಧವಾಗಿದೆ. ಇದರಿಂದ ಸುಮಾರು 4200 ಕೋಟಿ ರೂ.ನಷ್ಟ ಉಂಟಾಗಿರುವ ಸಂಭವ ಇದೆ. ಅಲ್ಲದೇ ಉದ್ಯೋಗಿಗಳ ವೇತನದಲ್ಲಿ ಶೇ.20ರಷ್ಟು ಕಡಿತವಾಗಿದೆ ಎಂದು ಅಂದಾಜಿಸಲಾಗಿದೆ.

    * ಜವಳಿ: ಕೊರೊನಾ ಭಯದಿಂದ ಜನರು ಮನೆಯಿಂದ  ಹೊರಗಡೆ ಬರುತ್ತಿಲ್ಲ. ಹೀಗಾಗಿ ಜವಳಿ ಉದ್ಯಮ ನೆಲಕಚ್ಚಿದೆ. ಸುಮಾರು 11 ಲಕ್ಷ ನೌಕರರ ಕೆಲಸಕ್ಕೆ ಸಮಸ್ಯೆಯಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 46 ಲಕ್ಷ ಉದ್ಯೋಗದಲ್ಲಿದ್ದರು ಎಂದು ಅಂದಾಜಿಸಲಾಗಿದೆ.

    * ರಿಯಲ್ ಎಸ್ಟೇಟ್: ಶೇ. 35 ರಷ್ಟು ರಿಯಲ್ ಎಸ್ಟೇಟ್ ವ್ಯಾಪಾರ ಕುಸಿತವಾಗಿದ್ದು, ಶೇ. 20 ರಷ್ಟು ಉದ್ಯೋಗ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    * ಸಿನಿಮಾ: ಕೊರೊನಾದಿಂದ ಸಿನಿಮಾ, ಸೀರಿಯಲ್ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಫ್ರೀ ಲಾನ್ಸ್, ಮತ್ತು ಕಂಟ್ರಾಕ್ಟ್ ನೌಕರರಿಗೆ ಕೆಲಸವೇ ಇಲ್ಲದಂತಾಗಿದೆ. ಸಿನಿಮಾ ಶೂಟಿಂಗ್ ರದ್ದಾದ ಪರಿಣಾಮ ಕೋಟಿ ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

    * ಟ್ರಾವೆಲ್ಸ್, ಟ್ಯಾಕ್ಸಿ: ಜನರು ಕೊರೊನಾ ಭಯದಿಂದ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ. ಹೀಗಾಗಿ ಶೇ 40 ರಿಂದ 50 ರಷ್ಟು ನಷ್ಟ ಉಂಟಾಗಿರಬಹದು. ಇದರಿಂದ ಚಾಲಕರ ಸಂಭಾವನೆ ಕೂಡ ಕಡಿತವಾಗಿದೆ.

  • ರಾಯಚೂರು ತರಕಾರಿ ಮಾರುಕಟ್ಟೆಗೆ ತಟ್ಟಿಲ್ಲ ಕೊರೊನಾ ಭೀತಿ – ಜೋರಾಗಿ ನಡೆದಿದೆ ವ್ಯಾಪಾರ

    ರಾಯಚೂರು ತರಕಾರಿ ಮಾರುಕಟ್ಟೆಗೆ ತಟ್ಟಿಲ್ಲ ಕೊರೊನಾ ಭೀತಿ – ಜೋರಾಗಿ ನಡೆದಿದೆ ವ್ಯಾಪಾರ

    ರಾಯಚೂರು: ಜಿಲ್ಲೆಯಲ್ಲಿ ಎಲ್ಲಡೆ ಕೊರೊನಾ ಭೀತಿ ಹೆಚ್ಚಾಗಿದೆ. ಬಸ್, ರೈಲು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಚಿತ್ರಮಂದಿರ, ಶಾಪಿಂಗ್ ಮಾಲ್‍ಗಳು ಬಂದ್ ಆಗಿವೆ. ಆದರೆ ರಾಯಚೂರಿನ ತರಕಾರಿ ಮಾರುಕಟ್ಟೆಗೆ ಮಾತ್ರ ಯಾವುದೇ ಎಫೆಕ್ಟ್ ಆಗಿಲ್ಲ. ಎಂದಿನಂತೆ ಜನ ಉತ್ಸಾಹದಿಂದ ವ್ಯಾಪಾರ ವಹಿವಾಟು ನಡೆಸಿದ್ದಾರೆ.

    ವ್ಯಾಪಾರಿಗಳು ಸಹ ಹೆಚ್ಚಿನ ಪ್ರಮಾಣದ ತರಕಾರಿಯನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಹೊರಗಡೆಯಿಂದ ನಮಗೆ ಭೀತಿಯಿದೆ ಆದರೆ ರಾಯಚೂರಿನಲ್ಲಿ ಕೊರೊನಾ ಸೋಂಕು ಇಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಮಾಸ್ಕ್ ಸಿಗುತ್ತಿಲ್ಲವಾದ್ದರಿಂದ ಜನ ಮಾಸ್ಕ್ ಧರಿಸುವುದನ್ನು ಸಹ ಕಡಿಮೆಮಾಡಿದ್ದಾರೆ.

    ಜಿಲ್ಲೆಯಲ್ಲಿ ವಿದೇಶದಿಂದ ಮರಳಿದ ಒಟ್ಟು 25 ಜನರ ಮೇಲೆ ನಿಗಾ ಇಡಲಾಗಿದೆ. ಮೂವರನ್ನ ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್ ಗೆ ದಾಖಲಿಸಲಾಗಿದೆ. ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಎಲ್ಲಾ ಶಂಕಿತರ ಮಾದರಿಗಳನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.