Tag: ವ್ಯಾಪಾರ

  • ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ – ಬಾಲಿವುಡ್ ನಟ, ನಟಿಯರ ಸ್ಪಂದನೆ

    ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ – ಬಾಲಿವುಡ್ ನಟ, ನಟಿಯರ ಸ್ಪಂದನೆ

    ಬೆಂಗಳೂರು: ದೆಹಲಿಯ ಬಾಬಾ ಕಾ ಡಾಭಾ ವೃದ್ಧರ ಸಂಕಷ್ಟದ ಕುರಿತು ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬೆಂಗಳೂರಿನ ಸಸಿ ಮಾರುವ ವೃದ್ಧನ ವಿಡಿಯೋ ಸಖತ್ ವೈರಲ್ ಆಗಿದ್ದು, ಸಹಾಯ ಮಾಡುವಂತೆ ಬಾಲಿವುಡ್ ಸ್ಟಾರ್‍ ಗಳು ಸಹ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಜೆಪಿ ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಸಸಿ ಮಾರುವ ರೇವಣಸಿದ್ದಪ್ಪ ಅವರಿಗೆ ಸಹಾಯ ಮಾಡುವಂತೆ ಟ್ವೀಟ್ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಬಾಲಿವುಡ್ ನಟರು ಪ್ರತಿಕ್ರಿಯಿಸಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

    ರೇವಣಸಿದ್ದಪ್ಪ ಅವರು ಸುಡುವ ಬಿಸಿಲಿನಲ್ಲಿ ಸಿಗ್ನಲ್ ಪಕ್ಕ ಕುಳಿತುಕೊಂಡು 10 ರಿಂದ 30 ರೂಪಾಯಿಗೆ ಸಸಿ ಮಾರುತ್ತಿದ್ದಾರೆ. ಈ ವೃದ್ಧನ ಬಗ್ಗೆ ಐ ಆಮ್ ಶುಭಮ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇವರಿಗೆ ಸಹಾಯ ಮಾಡಿ ಎಂದು ನಟರಾದ ಸೋನು ಸೂದ್, ಮಾಧವನ್, ಕಾಂಚನಾ ಗುಪ್ತ ಮತ್ತು ಪ್ರವೀಣ್ ಕಸ್ವನ್ ಗೆ ಟ್ಯಾಗ್ ಮಾಡಲಾಗಿದೆ. ಇದನ್ನು ಕಂಡ ಹಲವರು ರೀಟ್ವೀಟ್ ಮಾಡಿದ್ದು, ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ ನೋಡಿದ ಬಾಲಿವುಡ್ ನಟ ರಣದೀಪ್ ಹೂಡಾ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಹೂಡಾ, ಹೇ ಬೆಂಗಳೂರು ಸ್ವಲ್ಪ ಪ್ರೀತಿಯನ್ನು ತೋರಿಸುವುದನ್ನು ಮಾಡಿ, ಇವರು ವುಲಾರ್ ಫ್ಯಾಷನ್ ಫ್ಯಾಕ್ಟರಿ, ಜೆಪಿ ನಗರ, ಸಾರಕ್ಕಿ ಸಿಗ್ನಲ್, ಕನಕಪುರ ರಸ್ತೆ, ಬೆಂಗಳೂರು. ಈ ವಿಳಾಸದಲ್ಲಿ ಕುಳಿತಿರುತ್ತಾರೆ ಎಂದು ಮನವಿ ಮಾಡಿದ್ದಾರೆ.

    ಸುಡುವ ಬಿಸಿಲಿನಲ್ಲಿ ಕೊಡೆ ಹಿಡಿದು ವ್ಯಾಪಾರ ಮಾಡುವ ಈ ವೃದ್ಧನ ಕಥೆ ಪರಿಸ್ಥಿತಿ ಎಂತಹವರಿಗೂ ಮನಮಿಡಿಯುತ್ತದೆ. ರಸ್ತೆ ಪಕ್ಕ ಕೊಡೆ ಹಿಡಿದುಕಂಡು ಸಸಿಗಳನ್ನು ಮಾರುತ್ತಿದ್ದಾರೆ. ಆದರೆ ಗ್ರಾಹಕರು ಬಾರದ ಹಿನ್ನೆಲೆ ಬೇಸರಗೊಂಡಿದ್ದಾರೆ. ಸಸಿಗಳನ್ನು ಯಾರು ತೆಗೆದುಕೊಳ್ಳದ್ದಕ್ಕೆ ವೃದ್ಧನಿಗೆ ತುಂಬಾ ನೋವುಂಟಾಗಿದೆ. ಇದನ್ನು ಮನಗಂಡ ಸೈನಿಕರೊಬ್ಬರು ಟ್ವೀಟ್ ಮಾಡಿ, ಬಾಲಿವುಡ್ ನಟರಿಗೆ ಟ್ಯಾಗ್ ಮಾಡಿದ್ದಾರೆ. ವೃದ್ಧನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

  • ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    – ಮೂರು ದೇಶಗಳ ಚೈನ್ ಲಿಂಕ್ ಮೂಲಕ ವ್ಯಾಪಾರ
    – ವರ್ಷಾಂತ್ಯದೊಳಗೆ ಸಪ್ಲೈ ಚೈನ್ ಬಲಪಡಿಸಲು ಕ್ರಮ
    – ಚೀನಾ ವಸ್ತುಗಳಿಗೆ ಬ್ರೇಕ್ ಹಾಕಲು ಕ್ರಮ
    – ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ದೇಶಗಳ ಸಚಿವರ ಸಭೆ

    ನವದೆಹಲಿ: ಬಹುತೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ರೊಚ್ಚಿಗೆದ್ದಿದ್ದು, ಚೀನಾಗೆ ವ್ಯಾಪಾರ, ವಹಿವಾಟಿನ ಮೂಲಕವೇ ಟಕ್ಕರ್ ಕೊಡಲು ಮುಂದಾಗಿವೆ. ಈ ಹಿಂದೆ ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್‍ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದೇ ಹಾದಿಯನ್ನು ಅಮೆರಿಕ ಸಹ ತುಳಿದಿದೆ. ಆದರೆ ಇದೀಗ ಚೀನಾ ಸೊಕ್ಕು ಮುರಿಯಲು ಮತ್ತಷ್ಟು ದೇಶಗಳು ಪ್ಲಾನ್ ಮಾಡುತ್ತಿದ್ದು, ಭಾರತದೊಂದಿಗೆ ಕೈ ಜೋಡಿಸುತ್ತಿವೆ.

    ಇದರ ಭಾಗವಾಗಿ ಇದೀಗ ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳ ವಾಣಿಜ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಇಂಡೋ- ಪೆಸಿಫಿಕ್ ಸಪ್ಲೈ ಚೈನ್(ಪೂರೈಕೆ ಸರಪಳಿ) ಸ್ಥಿತಿಸ್ಥಾಪಕತ್ವ ಸಾಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ವ್ಯಾಪಾರ ವಲಯದಲ್ಲಿ ಚೀನಾ ತಾನೇ ಎಲ್ಲಾ ಎಂದು ಮೆರೆಯುತ್ತಿದೆ. ಈ ಅಹಂ ತೊಲಗಿಸಲು, ವ್ಯಾಪಾರದ ಮೇಲಿನ ಚೀನಾ ಪ್ರಾಬಲ್ಯವನ್ನು ಎದುರಿಸಲು ಮೂರು ದೇಶಗಳು ಒಟ್ಟಾಗುತ್ತಿವೆ. ಅಲ್ಲದೆ ಇನ್ನೂ ಹೆಚ್ಚಿನ ದೇಶಗಳು ಈ ಒಕ್ಕೂಟದಲ್ಲಿ ಸೇರುವ ಇಚ್ಛೆ ವ್ಯಕ್ತಪಡಿಸಿವೆ.

    ಈ ಮೂರು ದೇಶಗಳ ನಾಯಕರ ಜಂಟಿ ಹೇಳಿಕೆ ಪ್ರಕಾರ, ಈ ವರ್ಷದ ಕೊನೆಯ ವೇಳೆ ಸಪ್ಲೈ ಚೈನ್ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೆ ಬೇಕಾದ ವಿವರಗಳನ್ನು ಕಲೆ ಹಾಕುವಂತೆ ಆದೇಶಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಪಾನ್‍ನ ಹಿರೋಷಿ ಕಾಜಿಯಾಮಾ, ಭಾರತದ ಪಿಯೂಷ್ ಗೋಯಲ್, ಆಸ್ಟ್ರೇಲಿಯಾದ ಸೈಮನ್ ಬರ್ಮಿಂಗ್‍ಹ್ಯಾಮ್ ಭಾಗವಹಿಸಿದ್ದು, ಸಪ್ಲೈ ಚೈನ್ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಈ ಇಂಡೋ- ಪೆಸಿಫಿಕ್ ಭಾಗದ ಇತರ ದೇಶಗಳು ಈ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ತಿಳಿಸಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

    ಇಂಡೋ- ಪೆಸಿಫಿಕ್ ಭಾಗದಾದ್ಯಂತ ವ್ಯಾಪಾರ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಪ್ರಾಬಲ್ಯವನ್ನು ಎದುರಿಸಲು ಈ ಮೂರು ರಾಷ್ಟ್ರಗಳು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ. ಬ್ಲೂಮ್ಬರ್ಗ್ ಸಹ ಸಪ್ಲೈ ಚೈನ್ ಬಲಪಡಿಸಲು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಭಾರತ ಹಾಗೂ ಜಪಾನ್ ಜನರನ್ನು ಉಲ್ಲೇಖಿಸಿ ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಾಷ್ಟ್ರೀಯ ಭದ್ರತಾ ಸಮಾಲೋಚನೆಗಾಗಿ ಅಮೆರಿಕ ಜೊತೆಗೆ ಜಪಾನ್, ಆಸ್ಟ್ರೇಲಿಯಾ ಹಾಗೂ ಭಾರತ ಗುಂಪು ರಚಿಸಿಕೊಂಡಿದ್ದು, ಈ ಮೂಲಕ ಚತುರ್ಭುಜ ಭದ್ರತಾ ಸಂವಾದ ಅಥವಾ ಕ್ವಾಡ್‍ನ ಸದಸ್ಯ ರಾಷ್ಟ್ರಗಳಾಗಿವೆ. ಇದೀಗ ವ್ಯಾಪರಕ್ಕೂ ಇದೇ ರೀತಿಯ ಸಮಾಲೋಚನೆ ನಡೆಸಲಾಗುತ್ತಿದೆ.

  • ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಬೆಂಗಳೂರು: ಕೊರೊನಾದ ಮಧ್ಯೆ ಜನರು ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ ಆತಂಕವನ್ನ ಮರೆತಿದ್ದಾರೆ ಎನ್ನುವಂತಿದೆ. ಬೆಳ್ಳಂಬೆಳ್ಳಗ್ಗೆ ಜನರು ಮಾರ್ಕೆಟ್‍ನಲ್ಲಿ ಹಬ್ಬದ ವಸ್ತುಗಳನ್ನ ಖರೀದಿ ಮಾಡಲು ಗುಂಪು ಗೂಡಿದ್ದಾರೆ.

    ಇವತ್ತು ಗೌರಿ ಹಬ್ಬ, ನಾಳೆ ಗಣೇಶ ಚತುರ್ಥಿ. ಆದರೆ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಕೊರೊನಾ ಕವಿದಿದೆ. ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಹಾಕಿಕೊಳ್ಳದೆ ಅಗತ್ಯ ವಸ್ತುಗಳನ್ನ ಖರೀದಿ ಮಾಡುವುದರಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ  ಜನ ಕೊರೊನಾ ಆತಂಕವನ್ನು ಮರೆತು ಅಜಾಗೃತರಾಗಿ ವ್ಯಾಪಾರ ಮಾಡುತ್ತಿದ್ದಾರೆ.

    ಹಬ್ಬಕ್ಕೆ ಹೂ, ಹಣ್ಣು, ಬಾಳೆ ಕಂದಿನ, ಮಾರಾಟ ಬೆಂಗಳೂರಿನಲ್ಲಿ ಜೋರಾಗಿ ಆಗುತ್ತಿದೆ. ಕೊರೊನಾದ ನಡುವೆ ಗಣೇಶ ಹಬ್ಬವನ್ನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ಹೂವಿನ ವ್ಯಾಪಾರಿಗಳು ತಾತ್ಕಾಲಿಕವಾಗಿ ಕೆ.ಆರ್ ರೋಡ್‍ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ.

    ಇತ್ತ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೌಸಿಂಗ್ ಬೋಡಿನಲ್ಲಿ ಸಂತೆ ಮಾರುಕಟ್ಟೆಗೆ ಹಬ್ಬದ ಅಗತ್ಯ ವಸ್ತುಗಳ ಖರೀದಿ ಮಾಡಲು ಅಪಾರ ಜನರು ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ ಮಾಸ್ಕ್ ಧರಿಸದೆ ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

  • ಮತ್ತೊಂದು ಹೊಡೆತ – ಚೀನಾದಿಂದ ಟಿವಿ ಆಮದಿಗೆ ನಿರ್ಬಂಧ

    ಮತ್ತೊಂದು ಹೊಡೆತ – ಚೀನಾದಿಂದ ಟಿವಿ ಆಮದಿಗೆ ನಿರ್ಬಂಧ

    ನವದೆಹಲಿ: ಗಲ್ವಾನ್‌ ಘರ್ಷಣೆಯ ಬಳಿಕ ಅಪ್ಲಿಕೇಶನ್‌ಗಳು ನಿಷೇಧಿಸಿ ಹೊಡೆತ ನೀಡಲು ಆರಂಭಿಸಿದ ಭಾರತ ಈಗ ಚೀನಾದಿಂದ ಟಿವಿ ಆಮದು ಮಾಡುವುದಕ್ಕೆ ನಿರ್ಬಂಧ ಹೇರಿದೆ.

    ವಿದೇಶ ವ್ಯಾಪಾರದ ಮಹಾನಿರ್ದೇಶನಾಲಯ(ಡಿಜಿಎಫ್‌ಟಿ) ಗುರುವಾರ ಈ ಆದೇಶ ಹೊರಡಿಸಿ ಟಿವಿ ಸೆಟ್‌ಗಳ ಆಮದನ್ನು ʼಮುಕ್ತʼ ವಿಭಾಗದಿಂದ ʼನಿರ್ಬಂಧಿತʼ ವಿಭಾಗಕ್ಕೆ ಸೇರಿಸಿದೆ.

    ಈ ಆದೇಶದ ಪ್ರಕಾರ ಇನ್ನು ಮುಂದೆ 36 ಸೆಂ.ಮೀ ಒಳಗಿನ ಸ್ಕ್ರೀನ್‌ನಿಂದ ಆರಂಭಿಸಿ 105 ಸೆಂ.ಮೀಗಿಂತ ದೊಡ್ಡ ಅಳತೆಯಿ ಟಿವಿ ಸೆಟ್‌ಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಇದರ ಜೊತೆ 63 ಸೆಂ.ಮೀ ವರೆಗಿನ ಎಲ್‌ಸಿಡಿ ಟಿವಿ ಸೆಟ್‌ಗಳನ್ನು ಆಮದು ಮಾಡುವಂತಿಲ್ಲ.

    ಇನ್ನು ಮುಂದೆ ಟಿವಿಯನ್ನು ನಿರ್ಬಂಧಿತ ವಿಭಾಗದಲ್ಲಿದ್ದು, ಟೀವಿಯನ್ನು ಆಮದು ಮಾಡಬೇಕಾದರೆ ಡೀಲರ್‌ಗಳು ಡಿಜಿಎಫ್‌ಟಿಯಿಂದ ಲೈಸೆನ್ಸ್‌ ಪಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತದಲ್ಲಿ ಅತಿ ದೊಡ್ಡ ಟಿವಿ ಮಾರುಕಟ್ಟೆಯಿದ್ದು ಈ ಪೈಕಿ ಶೇ.36ರಷ್ಟು ಚೀನಾದಿಂದ ಆಮದು ಆಗುತ್ತಿದೆ. ಚೀನಾ ಅಲ್ಲದೇ ವಿಯೆಟ್ನಾಂ, ಮಲೇಷ್ಯಾ, ಹಾಂಕಾಂಗ್‌, ಕೊರಿಯಾ, ಇಂಡೋನೇಷ್ಯಾ, ಥಾಯ್ಲೆಂಡ್‌ ಮತ್ತು ಜರ್ಮನಿಯಿಂದ ಕಲರ್‌ ಟೀವಿಗಳನ್ನು ಆಮದು ಮಾಡಿಕೊಳ್ಳುತ್ತಿದೆ.

    ಸರ್ಕಾರದ ಈ ನಡಗೆ ಗೋಡ್ರೆಜ್‌ ಕಂಪನಿಯ ಬಿಸಿನೆಸ್‌ ಹೆಡ್‌ ಮತ್ತು ಉಪಾಧ್ಯಕ್ಷ ಕಮಲ್‌ ನಂದಿ ಪ್ರತಿಕ್ರಿಯಿಸಿ, ಸರ್ಕಾರ ದಿಟ್ಟ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆಮದಿನ ಮೇಲೆ ನಿರ್ಬಂಧ ಹೇರಿದ್ದರಿಂದ ಭಾರತೀಯ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಹುತೇಕ ದೊಡ್ಡ ಬ್ರಾಂಡ್‌ಗಳು ಭಾರತದಲ್ಲೇ ಉತ್ಪಾದನಾ ಘಟಕವನ್ನು ಹೊಂದಿದೆ. ಈ ನಿರ್ಧಾರದಿಂದ ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

    ಮಾರ್ಚ್‌ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 781 ದಶಲಕ್ಷ ಡಾಲರ್‌ ಮೌಲ್ಯದ ಟಿವಿ ಸೆಟ್‌ಗಳನ್ನು ಆಮದು ಮಾಡಿದೆ. ಈ ಪೈಕಿ ವಿಯೆಟ್ನಾಂನಿಂದ 428 ದಶಲಕ್ಷ ಡಾಲರ್‌, ಚೀನಾದಿಂದ 292 ದಶಲಕ್ಷ ಡಾಲರ್‌ ಮೌಲ್ಯದ ಟೀವಿಗಳನ್ನು ಆಮದು ಮಾಡಿಕೊಂಡಿದೆ.

    ಭಾರತದ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ 2014ರಲ್ಲಿ 29 ಶತಕೋಟಿ ಡಾಲರ್‌ ಆಗಿದ್ದರೆ 2019ರಲ್ಲಿ ಇದು 70 ಶತಕೋಟಿ ಡಾಲರ್‌ಗೆ ಬೆಳವಣಿಗೆಯಾಗಿದೆ.

    ಟಿವಿಗಳಲ್ಲಿ ಬಳಕೆಯಾಗುತ್ತಿರುವ ವಿಶೇಷ ಭಾಗಗಳಾದ ಓಪನ್‌ ಸೆಲ್‌, ಫಿಲ್ಮ್‌ ಚಿಪ್‌, ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ ಅಸೆಂಬ್ಲಿ(ಪಿಸಿಬಿಎ) ಈಗಲೂ ವಿನಾಯಿತಿ ನೀಡಲಾಗಿದೆ.

    ಏಷ್ಯಾ ರಾಷ್ಟ್ರಗಳ ಜೊತೆಗಿನ ವ್ಯಾಪಾರ ಸಂಬಂಧ ಯುಪಿಎ ಸರ್ಕಾರ 2009ರಲ್ಲಿ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪೈನ್ಸ್‌, ಸಿಂಗಾಪೂರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ದೇಶಗಳಿಂದ ಆಮದು ಆಗುವ ವಸ್ತುಗಳ ಮೇಲೆ ವಿನಾಯಿತಿ ನೀಡಲಾಗಿತ್ತು.

  • ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

    ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

    -ಇತ್ತ ಕುರಿ ವ್ಯಾಪಾರ ಬಲು ಜೋರು

    ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ.

    ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ ಹಿನ್ನೆಲೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿಲ್ಲ ಅಂತ ಅಸಮಧಾನ ತೋಡಿಕೊಂಡಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬದ ವ್ಯಾಪಾರ ಒಂದು ಕಡೆಯಾದ್ರೆ ಇನ್ನೊಂದೆಡೆ ಬಕ್ರಿದ್ ಹಿನ್ನೆಲೆ ಕುರಿಗಳ ವ್ಯಾಪಾರವೂ ಜೋರಾಗಿದೆ. ರಾಯಚೂರು ನಗರಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಕುರಿಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಆತಂಕದ ನಡುವೆ ಬಕ್ರಿದ್ ಹಬ್ಬದ ಖರೀದಿ ಜೋರಾಗಿ ನಡೆದಿದೆ.

    ಆಗಸ್ಟ್ 1 ರಂದು ಬಕ್ರಿದ್ ಹಬ್ಬಕ್ಕೆ ಕುರ್ಬಾನಿ ನೀಡಲು ಮುಸ್ಲಿಂ ಬಾಂಧವರು ಕುರಿಗಳ ಖರೀದಿ ಮಾಡುತ್ತಿದ್ದಾರೆ. 12 ಸಾವಿರದಿಂದ 60 ಸಾವಿರ ರೂ. ವರೆಗೆ ಒಂದು ಕುರಿ ಮಾರಾಟ ನಡೆದಿದೆ. ಕೊರೊನಾ ವ್ಯಾಪಾಕವಾಗುತ್ತಿದ್ದರೂ, ಎಚ್ಚೆತ್ತುಕೊಳ್ಳದ ಜನತೆ ಹಬ್ಬದ ಸಂಭ್ರಮದ ಗುಂಗಿನಲ್ಲಿದ್ದಾರೆ.

     

  • ಲಾಕ್‍ಡೌನ್ ಎಫೆಕ್ಟ್- ತರಕಾರಿ, ಮಾಸ್ಕ್ ಮಾರಲು ನಿಂತ ಉಪನ್ಯಾಸಕರು

    ಲಾಕ್‍ಡೌನ್ ಎಫೆಕ್ಟ್- ತರಕಾರಿ, ಮಾಸ್ಕ್ ಮಾರಲು ನಿಂತ ಉಪನ್ಯಾಸಕರು

    ದಾವಣಗೆರೆ: ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದ್ದು, ಸೋಂಕು ತಗುಲಿದವರು ಚಿಕಿತ್ಸೆಗಾಗಿ ಪರದಾಡಿದರೆ, ಉಳಿದವರು ಲಾಕ್‍ಡೌನ್‍ನಿಂದಾಗಿ ಪರದಾಡು ಸ್ಥಿತಿ ಬಂದೊದಗಿದಿದೆ. ಲಾಕ್‍ಡೌನ್‍ನಿಂದಾಗಿ ಬಹುತೇಕ ಯುವಕರು ಕೆಲಸ ಕಳೆದುಕೊಂಡಿದ್ದು, ಇದರಿಂದಾಗಿ ಎಲ್ಲ ವಲಯಗಳಿಗೂ ಹೊಡೆತ ಬಿದ್ದಿದೆ. ಹಲವು ಯುವಕರು ಪರ್ಯಾಯವಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದು, ಇನ್ನೂ ಹಲವರು ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇನ್ನೂ ನೋವಿನ ಸಂಗತಿ ಎಂದರೆ ಅತಿಥಿ ಉಪನ್ಯಾಸಕರ ಸ್ಥಿತಿ ಹೇಳತೀರದಾಗಿದೆ.

    ಲಾಕ್‍ಡೌನ್‍ನಿಂದಾಗಿ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಹಾಗೂ ಖಾಸಗಿ  ಕಾಲೇಜುಗಳ ಉಪನ್ಯಾಸಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮೊದಲೇ 10-12 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದ ಉಪನ್ಯಾಸಕರಿಗೆ ಇದೀಗ ಲಾಕ್‍ಡೌನ್‍ನಿಂದಾಗಿ ಅದೂ ಇಲ್ಲವಾಗಿದೆ. ಹೀಗಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದು, ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದಾರೆ. ತರಕಾರಿ, ಮಾಸ್ಕ್, ಎಗ್ ರೈಸ್ ಮಾರುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಉಪನ್ಯಾಸಕರು ತೊಡಗಿದ್ದಾರೆ.

    ದಾವಣಗೆರೆಯಲ್ಲಿ ಕೆಲ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಅಥಿತಿ ಉಪನ್ಯಾಸಕರು ಕುಟುಂಬದ ನಿರ್ವಹಣೆಗಾಗಿ ಮಾಸ್ಕ್, ತರಕಾರಿ ಹಾಗೂ ಎಗ್ ರೈಸ್ ಮಾರಾಟ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ವಿದ್ಯಾ ನಗರದ ಮುಖ್ಯ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದ ಕಾಲೇಜು ತೆರೆಯದ ಹಿನ್ನೆಲೆ ಇವರ ಕುಟುಂಬ ಬೀದಿಗೆ ಬಿದ್ದಿದೆ. ಎಂಎ, ಎಂಕಾಂ, ಎಂಬಿಎ ಪದವೀಧರರಾಗಿರುವ ಉಪನ್ಯಾಸಕರಿಗೆ ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ.

    ಕುಟುಂಬದ ನಿರ್ವಹಣೆಗಾಗಿ ಪಡಬಾರದ ಕಷ್ಟಪಡುವಂತಾಗಿದ್ದು, ಹೇಗೋ ತರಕಾರಿ, ಮಾಸ್ಕ್ ಮಾರಿ ಜೀವನ ಸಾಗಿಸುತ್ತಿದ್ದಾರೆ. ಸಹಾಯಧನ ನೀಡುವಂತೆ ಉಪನ್ಯಾಸಕರು-ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಕೆಲಸವಿಲ್ಲದೆ ಈ ಹಿಂದೆ ಎಂಎಸ್‍ಸಿ, ಬಿ.ಕಾಂ. ಬಿಎ ಸೇರಿದಂತೆ ಹೆಚ್ಚು ಕಲಿತ ಯುವಕರು ಸಹ ನರೇಗಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ರಸ್ತೆ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡಿದ್ದರು. ಇದೀಗ ಉಪನ್ಯಾಸಕರಿಗೂ ಸಂಕಷ್ಟ ಎದುರಾಗಿದೆ.

    ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರ ಶಾಲಾ, ಕಾಲೇಜುಗಳನ್ನು ತೆರೆಯಲು ಅನುಮತಿ ಸೂಚಿಸಿಲ್ಲ. ಇದೆಲ್ಲದರ ಭಯದ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಾಡಿ ಮುಗಿಸಲಾಗಿದೆ. ಆದರೆ ಶಾಲೆ, ಕಾಲೇಜು ಪ್ರಾರಂಭದ ಕುರಿತು ನಿರ್ಧಾರ ಕೈಗೊಂಡಿಲ್ಲ. ಕೊರೊನಾ ಕಡಿಮೆಯಾಗಲು ಇನ್ನು ಹೆಚ್ಚು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಶಾಲೆಗಳು ತೆರೆಯುವುದಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗೆ ಏನು ಮಾಡುವುದು ಎಂದು ಚಿಂತಿಸಿ, ಶಿಕ್ಷಕರು ತರಕಾರಿ, ಮಾಸ್ಕ್ ಹಾಗೂ ಎಗ್ ರೈಸ್ ಮಾರಟ ಮಾಡುವ ಕೆಲಸಕ್ಕೆ ನಿಂತಿದ್ದಾರೆ.

  • ರಸ್ತೆಯಲ್ಲಿ ಅಸ್ವಸ್ಥೆ ನರಳಾಟ- ತಿಂಡಿ ಕೊಟ್ಟು, ಆಸ್ಪತ್ರೆಗೆ ಕಳುಹಿಸಿದ ಪೊಲೀಸರು

    ರಸ್ತೆಯಲ್ಲಿ ಅಸ್ವಸ್ಥೆ ನರಳಾಟ- ತಿಂಡಿ ಕೊಟ್ಟು, ಆಸ್ಪತ್ರೆಗೆ ಕಳುಹಿಸಿದ ಪೊಲೀಸರು

    – ಮಟನ್ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರು

    ರಾಯಚೂರು: ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೂ ನೋಡುವವರು ಇಲ್ಲದೇ ರಸ್ತೆ ಬದಿಯಲ್ಲೇ ಮಾನಸಿಕ ಅಸ್ವಸ್ಥೆ ಗಾಯದ ನೋವಿನಿಂದ ನರಳಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಕಾಲಿಗೆ ಗಾಯ ಮಾಡಿಕೊಂಡ ಅಸ್ವಸ್ಥೆ ನೋವಿನಿಂದ ಚೀರಾಡುತ್ತಿದ್ದಳು. ಇದನ್ನ ಗಮನಿಸಿ ಪೊಲೀಸರು ಸದ್ಯ ಅಸ್ವಸ್ಥ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದರ ಬಜಾರ್ ಠಾಣೆ ಪಿಎಸ್‍ಐ ಮಂಜುನಾಥ್ ನರಳಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಪೊಲೀಸ್ ಠಾಣೆಯ ಪಕ್ಕದಲ್ಲೇ ಓಡಾಡುತ್ತಿದ್ದ ಮಹಿಳೆ ಇಂದು ಠಾಣೆಯ ಮುಂದಿನ ರಸ್ತೆಯಲ್ಲಿ ನರಳಾಡುತ್ತಾ ಬಿದ್ದಿದ್ದಳು. ಪೊಲೀಸರೇ ತಿಂಡಿಯನ್ನ ಕೊಟ್ಟು ಕಾಲಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಇನ್ನೂ ಲಾಕ್‍ಡೌನ್ ಮಧ್ಯೆಯೂ ರಾಯಚೂರಿನ ಮಟನ್ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರಾಗಿ ನಡೆದಿದೆ. ಜನ ಸಾಮಾಜಿಕ ಅಂತರ, ಮಾಸ್ಕ್ ಮರೆತು ವ್ಯಾಪಾರ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇರುವುದರಿಂದ ಮಾಂಸದಂಗಡಿಗಳನ್ನ ತೆರೆಯಲಾಗಿದೆ. ಆದರೆ ಜನ ಜವಾಬ್ದಾರಿ ಮರೆತು ವ್ಯಾಪಾರಕ್ಕೆ ಮುಂದಾಗಿದ್ದಾರೆ.

    ಕನಿಷ್ಠ ಮಾಸ್ಕನ್ನೂ ಧರಿಸದೇ ಮೀನು, ಮಾಂಸ ಖರೀದಿ ಮಾಡುತ್ತಿದ್ದಾರೆ. ಉಳಿದಂತೆ ತರಕಾರಿ ಮಾರುಕಟ್ಟೆಯಲ್ಲೂ ಹೆಚ್ಚು ಜನ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದನ್ನ ಹೊರತುಪಡಿಸಿದಂತೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು, ಬಸ್, ಆಟೋ ಸಂಚಾರ ಸೇರಿ ಎಲ್ಲಾ ಬಂದ್ ಮಾಡಲಾಗಿದೆ.

  • ಡಿಜಿಟಲ್‌ ಸ್ಟ್ರೈಕ್ ಬಳಿಕ‌ ಮತ್ತೊಂದು ಭಾರೀ ಹೊಡೆತ ನೀಡಲು ಕೇಂದ್ರದ ಸಿದ್ಧತೆ

    ಡಿಜಿಟಲ್‌ ಸ್ಟ್ರೈಕ್ ಬಳಿಕ‌ ಮತ್ತೊಂದು ಭಾರೀ ಹೊಡೆತ ನೀಡಲು ಕೇಂದ್ರದ ಸಿದ್ಧತೆ

    ನವದೆಹಲಿ: 59 ಅಪ್ಲಿಕೇಶನ್‌ ನಿಷೇಧಿಸಿ ಡಿಜಿಟಲ್‌ ಸ್ಟ್ರೈಕ್‌ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ.

    ಎರಡು ದೇಶಗಳ ವ್ಯಾಪಾರ ವಿಚಾರದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಹೆಚ್ಚಾಗಿ ಚೀನಾದಿಂದ ಆಮದು ಜಾಸ್ತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗ ಭಾರತ ಚೀನಾದಿಂದ ಆಮದು ಆಗುವ ವಸ್ತುಗಳ ಮೇಲೆ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಏರಿಸಲು ಸಿದ್ಧತೆ ನಡೆಸುತ್ತಿದೆ.

    ಕೇಂದ್ರ ಸರ್ಕಾರ ಈಗಾಗಲೇ ಭಾರತದಲ್ಲಿ ತಯಾರಾಗುವ ವಸ್ತುಗಳು ಮತ್ತು ಚೀನಾದಲ್ಲಿ ತಯಾರಾಗುವ ವಸ್ತುಗಳ ಮಾಹಿತಿಯನ್ನು ಪಡೆಯುತ್ತಿದೆ. ಯಾವ ವಸ್ತುಗಳ ಮೇಲೆ ಸುಂಕ ಏರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ 2-3 ತಿಂಗಳ ಒಳಗಡೆ ಯಾವ ವಸ್ತುಗಳಿಗೆ ಎಷ್ಟು ಪ್ರಮಾಣದಲ್ಲಿ ಏರಿಸಬಹುದು ಎಂಬ ವಿಚಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಈಗಾಗಲೇ ಕೈಗಾರಿಕಾ ಒಕ್ಕೂಟಗಳಿಗೆ ಪತ್ರ ಬರೆದು ಅಭಿಪ್ರಾಯಗಳನ್ನು ಕೇಳಿದೆ. ಭಾರತದಲ್ಲೇ ತಯಾರಾಗುವ ವಸ್ತುಗಳು ಯಾವುದು? ಮೇಕ್‌ ಇನ್‌ ಇಂಡಿಯಾ ಅಡಿ  ಸಮಸ್ಯೆ ಆಗದಂತೆ ಉತ್ಪಾದಿಸಬಹುದು? ಚೀನಾದಿಂದ ಅಗತ್ಯವಾಗಿ ಆಮದು ಮಾಡಬೇಕಾದ ವಸ್ತುಗಳು ಯಾವುದು? ಇವುಗಳ ಬಗ್ಗೆ ಒಕ್ಕೂಟಗಳು ಪ್ರತಿಕ್ರಿಯೆ ನೀಡಿದೆ.

    ಒಕ್ಕೂಟಗಳು ಚೀನಾದಿಂದ ಆಮದಾಗುವ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಆಟಿಕೆ ಸಾಮಾಗ್ರಿಗಳು ಸೇರಿದಂತೆ ಹಲವು ಉತ್ಪನ್ನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಮೇಕ್‌ ಇನ್‌ ಇಂಡಿಯಾದ ಅಡಿ ತಯಾರಿಸಬಹುದಾದ ವಸ್ತುಗಳ ಬಗ್ಗೆ ತಿಳಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ.

    ಒಂದು ದೇಶದ ಆಮದು ಹೆಚ್ಚಾಗಿ ರಫ್ತು ಕಡಿಮೆಯಾದಾಗ ಉಂಟಾಗುವ ಸ್ಥಿತಿಯನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ. ಆದು ಇಳಿದರೆ ಸಹಜವಾಗಿ ವ್ಯಾಪಾರ ಕೊರತೆ ಇಳಿಕೆಯಾಗುತ್ತದೆ.

    2018-19ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾದ ಮಧ್ಯೆ 88 ಶತಕೋಟಿ ಡಾಲರ್‌ ವ್ಯವಹಾರ ನಡೆದಿದೆ ಭಾರತಕ್ಕೆ ಒಟ್ಟು 53.5 ಶತಕೋಟಿ ಡಾಲರ್‌ ವ್ಯಾಪಾರ ಕೊರತೆಯಿದೆ.

  • ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    ಕೊಡಗಿನಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು- ಸ್ವಯಂ ಬಂದ್‍ಗೆ ನಿರ್ಧಾರ

    – ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದಂತೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನ ಎರಡು ಗಂಟೆ ಬಳಿಕ ಸಂಪೂರ್ಣ ಬಂದ್‍ಗೆ ಮುಂದಾಗಿದೆ.

    ಕಳೆದ ಒಂದು ತಿಂಗಳಿಂದ ಕೊಡಗಿನಲ್ಲಿ ಸ್ವಲ್ಪ ನಿಯಂತ್ರಣದಲ್ಲಿದ್ದ ಕೊರೊನಾ ಮಹಾಮಾರಿ ಮೂರು ದಿನಗಳಲ್ಲಿ ಎರಡಕಿಯನ್ನು ದಾಟಿದೆ. ಇದೀಗ ಬರೋಬ್ಬರಿ 30 ಪ್ರಕರಣಗಳು ಜಿಲ್ಲೆಯಲ್ಲಿದ್ದು, ಆ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಜಿಲ್ಲಾಸ್ಪತ್ರೆ ಜನರಲ್ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಮತ್ತು ಖಾಸಗಿ ಕ್ಲಿನಿಕ್‍ಗಳ ಸಿಬ್ಬಂದಿಗೂ ಕೊರೊನಾ ಸೋಂಕು ಹರಡುತ್ತಿರುವುದು ಜನರನ್ನು ಮತ್ತಷ್ಟು ನಿದ್ದೆಗೆಡಿಸಿದೆ.

    ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದ ನೂರಾರು ಜನರು ಜಿಲ್ಲೆಯ ಹಲವೆಡೆ ಓಡಾಡಿದ್ದಾರೆ. ಹೀಗಾಗಿ ಇನ್ನೆಷ್ಟು ಜನರಿಗೆ ಈ ಮಹಾಮಾರಿ ವಕ್ಕರಿಸಿದೆಯೋ ಗೊತ್ತಿಲ್ಲ. ಮತ್ತೊಂದೆಡೆ ಜಿಲ್ಲೆಯ ಎರಡು ಸೋಂಕಿತರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ದರೂ ಮಹಾಮಾರಿ ಹೆಗಲೇರಿದ್ದು ಹೇಗೆ ಎಂಬುವುದು ಆಶ್ಚರ್ಯವಾಗಿದೆ. ವ್ಯಾಪಾರ ವಹಿವಾಟುಗಳು ಮುಂದುವರಿದರೆ ಇನ್ನಷ್ಟು ಸಮಸ್ಯೆ ಎದುರಾಗಬಹುದು ಎಂಬ ಉದ್ದೇಶದಿಂದ ಇಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮತ್ತು ಸುನಿಲ್ ಸುಬ್ರಹ್ಮಣಿ ನೇತೃತ್ವದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಮಿತಿ ಸಭೆ ನಡೆಸಿ, ಜಿಲ್ಲೆಯಲ್ಲಿ ಜುಲೈ 4ರ ವರೆಗೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರವೇ ವ್ಯಾಪಾರ ವಹಿವಾಟು ನಡೆಸಿ ಬಳಿಕ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.

    ಇತ್ತ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತ್ರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಬೇಕಾದರೆ ಸಂಪೂರ್ಣ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ. ಈಗಾಗಲೇ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

  • ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ

    ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ

    ಚಿಕ್ಕಮಗಳೂರು: ಕೊರೊನಾ ಲೆಕ್ಕಿಸದೆ ಜನ ಮೋಜು ಮಸ್ತಿ ಮಾಡಲು ಮುಂದಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ.

    ನೂರಾರು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳಿಂದ ಎಗ್ಗಿಲ್ಲದೆ ಪ್ರವಾಸಿಗರು ಕಾಫಿನಾಡಿನತ್ತ ಧಾವಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಭಯ ಶುರುವಾಗಿದೆ. ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಜೊತೆ, ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಚಾರ್ಮಾಡಿ, ಘಾಟಿಕಲ್, ದೇವರಮನೆ ಗುಡ್ಡ ಸೇರಿದಂತೆ ಜಿಲ್ಲೆಯ ವಿವಿಧ ತಾಣಗಳಿಗೆ ಪ್ರವಾಸಿಗರ ದಂಡು ಎಗ್ಗಿಲ್ಲದೆ ಬರುತ್ತಿದೆ. ಪ್ರವಾಸಿಗರನ್ನು ಕಂಡು ಕಾಫಿನಾಡಿನ ಜನ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 17 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 16 ಮುಂಬೈ ನಂಟು ಹೊಂದಿವೆ. ಟ್ರಾವೆಲ್ ಹಿಸ್ಟರಿ ಇಲ್ಲದ ಒಂದು ಪ್ರಕರಣ ಮಾತ್ರ ಇದೆ. ಇದೀಗ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜನ ಭಯಗೊಂಡಿದ್ದಾರೆ. ಈಗಾಗಲೇ ಕಳೆದ ಮೂರು ದಿನಗಳಿಂದ ಕೇವಲ ಮುಳ್ಳಯ್ಯನಗರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಬಂದಿರುವ ಪ್ರವಾಸಿಗರ ಸಂಖ್ಯೆಯೇ ಐದಾರು ಸಾವಿರ ಇದೆ. ಇದಲ್ಲದೆ ಧಾರ್ಮಿಕ ಕ್ಷೇತ್ರ ಹಾಗೂ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ಸಾವಿರಾರು ಪ್ರವಾಸಿಗರು ಬಂದಿದ್ದಾರೆ.

    ಕಳೆದ ಎರಡು ತಿಂಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿರುವವರು ಪ್ರವಾಸಿಗರು ಬರಲಿ, ವ್ಯಾಪಾರವಾದರೂ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿರ ಸಂಖ್ಯೆಯಿಂದ ಭಯ ಪಡುತ್ತಿದ್ದಾರೆ.