Tag: ವ್ಯಾಪಾರಿ

  • ಬೆಂಗ್ಳೂರಿನ ಈ ಏರಿಯಾದ ಜನ ನೆಮ್ಮದಿಯಾಗಿ ನಿದ್ದೆ ಮಾಡುವಂಗಿಲ್ಲ- ಯಾಕೆ ಅಂತಿರಾ ಈ ಸುದ್ದಿ ಓದಿ

    ಬೆಂಗ್ಳೂರಿನ ಈ ಏರಿಯಾದ ಜನ ನೆಮ್ಮದಿಯಾಗಿ ನಿದ್ದೆ ಮಾಡುವಂಗಿಲ್ಲ- ಯಾಕೆ ಅಂತಿರಾ ಈ ಸುದ್ದಿ ಓದಿ

    ಬೆಂಗಳೂರು: ಈ ಏರಿಯಾದಲ್ಲಿ ಅಂಗಡಿ ವ್ಯಾಪಾರಿಗಳು ನೆಮ್ಮದಿಯಾಗಿ ನಿದ್ದೆ ಮಾಡಂಗಿಲ್ಲ. ವ್ಯಾಪಾರ ಮಾಡಿದ್ದ ದುಡ್ಡನ್ನು ತಿಜೋರಿಯಲ್ಲಿ ಇಟ್ಟು ಹೋದರೆ ಬೆಳಗ್ಗೆ ಬಂದು ನೋಡಿದರೆ ಇರುತ್ತೋ ಇಲ್ಲವೋ ಎನ್ನುವ ಚಿಂತೆ. ಅದು ಚೆನ್ನಾಗಿ ನಿದ್ದೆಯಲ್ಲಿರುವ ಸಮಯ. ಈ ಸಮಯವೇ ಖದೀಮರಿಗೆ ಅಮೃತ ಘಳಿಗೆ

    ಹೌದು. ಕಳೆದ ಎರಡು ತಿಂಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಒಂದರ ಮೇಲೆ ಒಂದು ಅಂಗಡಿ ಮಳಿಗೆಗಳಲ್ಲಿ ಕಳ್ಳತನ ಪ್ರಕರಣಗಳು ನಡೀತಾನೆ ಇದೆ. ವ್ಯಾಪಾರಿಗಳು ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಮೊನ್ನೆಯೂ ಇದೇ ರೀತಿ ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಅಂಗಡಿ ಮಳಿಗೆಯ ಮೇಲಿನ ಮನೆಯವರು ಕೂಗಿಕೊಂಡಾಗ ಓಡಿ ಹೋಗಿದ್ದಾರೆ. ಈ ರೀತಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ ಅಂತ ಸ್ಥಳೀಯರು ಕಿಡಿಕಾರಿದ್ದಾರೆ.

    ಅಮ್ಮಾಸ್ ಪೇಸ್ಟ್ರಿ ಬೇಕರಿಯಲ್ಲಿ ಒಳಗೆ ಮಲಗಿದ್ದಾರೆ ಅನ್ನೋದನ್ನು ಅರಿಯದ ಮೂವರು ಮಾಸ್ಕ್ ಧರಿಸಿದ್ದ ಖದೀಮರು ಮೆಲ್ಲಗೆ ಶಟರ್ ಎತ್ತಿದ್ದಾರೆ. ಒಳಗೆ ಸಿಬ್ಬಂದಿ ಇರೋದನ್ನು ನೋಡಿ ಎದ್ನೋ ಬಿದ್ನೋ ಎಂದು ಓಡಿದ್ದಾರೆ.

    10 ರೂ. ಸಿಕ್ತು: ರಾಜಾಜಿನಗರದ ಶ್ರೀ ಗಜಾನನ ಫ್ರೂಟ್ ಜ್ಯೂಸ್ ಸೆಂಟರ್ ನಲ್ಲಿ ಒಬ್ಬನೇ ಖದೀಮ, ಶಟರ್ ಮುರಿಯೋಕೆ ಸಾಧನ ರೆಡಿ ಮಾಡಿಕೊಂಡು ಬೀಗ ಹಾಗೂ ಶಟರ್ ಮುರಿದು ಒಳ ಹೋಗುತ್ತಾನೆ. ಆದರೆ ಅಲ್ಲಿದ್ದದ್ದು 10 ರೂಪಾಯಿ ಮಾತ್ರ. ನಂತರ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸ್ ಹೋಗಿದ್ದಾನೆ.

    ಇದೇ ಏರಿಯಾದ ಜೈ ಮಾರುತಿ ಸ್ಟೇಷನರಿಯಲ್ಲಿ ಮೊನ್ನೆಯಷ್ಟೇ ಇದೇ ಖದೀಮ ಬೀಗ ಮುರಿತಾನೆ. ಬೀಗ ಮುರಿಯೋ ಶಬ್ಧ ಮೇಲಿನ ಮನೆಯವರಿಗೆ ಕೇಳಿಸಿದೆ. ಹೊರಗೆ ಬಂದು ಕೂಗಿದಾಗ, ಕಳ್ಳ ಎಸ್ಕೇಪ್ ಆಗಿದ್ದಾನೆ.

    ತಿಂಗಳ ಹಿಂದೆ ರಾಜಾಜಿನಗರದ ಮಾತೃಶ್ರೀ ಮೆಡಿಕಲ್ಸ್ ಶಟರ್ ಮುರಿದು 35 ಸಾವಿರ ದುಡ್ಡು ಎತ್ಕೊಂಡು ಪರಾರಿಯಾಗಿದ್ದಾರೆ ಖದೀಮರು. ಪದೇ ಪದೇ ಈ ಘಟನೆಗಳು ನಡೆಯುತ್ತಿರೋದರಿಂದ ವ್ಯಾಪಾರಿಗಳು ಬೆದರಿದ್ದಾರೆ. ಪೊಲೀಸರು ಹೆಚ್ಚು ಬೀಟ್ ಮಾಡಬೇಕು ಇಂತಹ ಖದೀಮರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

    ಇಷ್ಟೆಲ್ಲಾ ಘಟನೆಗಳು ಆಗಿರೋದು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ. ಸಿಸಿಟಿವಿಯಲ್ಲಿ ಎರಡು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಮುಖ ಚಹರೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೂ ಪೊಲೀಸರು ಕಳ್ಳನನ್ನು ಹಿಡಿಯೋ ಕೆಲಸ ಮಾಡುತ್ತಿಲ್ಲ ಅಂತ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

  • ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ!

    ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ!

    ಕಾರವಾರ: ನಗರದ ವ್ಯಾಪಾರಿಯೊಬ್ಬರು ಅಂಗಡಿ ತೆರವು ಮಾಡುವ ವಿಚಾರವಾಗಿ ಮನಃನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ ರಾಮಚಂದ್ರ ನಾಗಪ್ಪ ನಾಯ್ಕ್ ಎಂದು ಗುರುತಿಸಲಾಗಿದೆ. ರಾಮಚಂದ್ರ ನಾಯ್ಕ್ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಪುರಸಭೆ ವ್ಯಾಪ್ತಿಯ ಕಟ್ಟಡದಲ್ಲಿ ಅಂಗಡಿಯನ್ನು ಹೊಂದಿದ್ದರು. ಈ ಅಂಗಡಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಂದ ಆಡಳಿತ ಮಂಡಳಿಗೆ ಆದೇಶವನ್ನು ನೀಡಲಾಗಿತ್ತು.

    ಈ ಆದೇಶದಂತೆ ಅಂಗಡಿಯನ್ನು ತೆರವುಗೊಳಿಸಲು ಮುಂದಾಗಿದ್ದ ವೇಳೆ ರಾಮಚಂದ್ರ ನಾಯ್ಕ್ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಸುಟ್ಟು ಗಾಯಗೊಂಡಿರುವ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ. ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿ, ಹಾಡಹಗಲೇ ಚೂರಿಯಿಂದ ಇರಿದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಗಣಪತಿ ಗಲ್ಲಿಯಲ್ಲಿ ನಡೆದಿದೆ.

    ಇಂತಿಯಾಜ್ ಪಠಾಣ್, ಅಯಾಜ್ ಪಠಾಣ್, ಸಮೀರ್ ಪಠಾಣ್ ಸೇರಿ 10 ಜನರಿಂದ ಹಲ್ಲೆ ನಡೆದಿದೆ. ಸಲೀಂ, ಶಾಬಾಜ್ ಹಾಗೂ ತೈಬಾಜ್ ಘಟನೆಯಲ್ಲಿ ತೀವ್ರ ಗಾಯಗೊಂಡವರು.

    ಹಣ್ಣಿನ ದರ ನಿಗದಿ ಮತ್ತು ಸ್ಥಳದ ವಿಚಾರವಾಗಿ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ. ಪರಿಣಾಮ ವ್ಯಾಪಾರಿಗಳು ನಡುರಸ್ತೆಯಲ್ಲಿಯೇ ಪರಸ್ಪರ ಚೂರಿಯಿಂದ ಹೊಡೆದಾಡಿಕೊಂಡು ಮೂವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿಸಿಪಿ ಅಮರನಾಥ ರಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • 30 ಸಾವಿರ ರೂ. ಮೌಲ್ಯದ ಚಿನ್ನ, 3 ಸಾವಿರ ರೂ. ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ

    30 ಸಾವಿರ ರೂ. ಮೌಲ್ಯದ ಚಿನ್ನ, 3 ಸಾವಿರ ರೂ. ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ

    ಕಾರವಾರ: ವ್ಯಕ್ತಿಯೊಬ್ಬರು ದಾರಿಯಲ್ಲಿ ಬಿದ್ದಿದ್ದ ಮೂವತ್ತು ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಮೂರು ಸಾವಿರ ರೂ. ಹಣವನ್ನ ಕಳೆದುಕೊಂಡವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ನಗರದ ಕೋನೆವಾಡಾದ ಬೆಲ್ಟ್ ವ್ಯಾಪಾರಿ ಅಯುಬ್ ಮೊಹ್ಮದ್ ಶೇಖ್ ಎನ್ನುವವರೇ ಕಳೆದುಕೊಂಡವರಿಗೆ ವಸ್ತುಗಳನ್ನ ಮರಳಿಸಿದ ವ್ಯಕ್ತಿ. 45 ಗ್ರಾಂನ ಮಾಂಗಲ್ಯ, 20 ಗ್ರಾಂನ ಚಿನ್ನದ ಸರ, ಕರಿಮಣಿ ಸರ ಹಾಗೂ ಮೂರು ಸಾವಿರ ರೂಪಾಯಿಗಳಿದ್ದ ಪರ್ಸ್ ಹಿಂದಿರುಗಿಸಿ ಅಯುಬ್ ಪ್ರಾಮಾಣಿಕತೆ ಮೆರೆದಿದ್ದಾರೆ.

    ಎರಡು ದಿನಗಳ ಹಿಂದೆ ಸದಾಶಿವಗಡ ಮೂಲದ ಉದಯ ನಾಯ್ಕ ಎನ್ನುವವರು ಬಂಗಾರದ ಸರವಿದ್ದ ಪರ್ಸ್ ಕಳೆದುಕೊಂಡಿದ್ರು. ಈ ವಿಷಯ ತಿಳಿದು ಅಯುಬ್ ತಾವೇ ಸ್ವತಃ ಪೊಲೀಸರ ಸಮಕ್ಷಮದಲ್ಲಿ ಕಳೆದುಕೊಂಡವರಿಗೆ ಪರ್ಸ್ ಮರಳಿ ನೀಡಿದ್ದಾರೆ.