Tag: ವ್ಯಾಪಾರಿಗಳು

  • ಪ್ರವಾಸಿಗರೇ ಇಲ್ಲದ ದಕ್ಷಿಣ ಕಾಶ್ಮೀರದ ಕೊಡಗು

    ಪ್ರವಾಸಿಗರೇ ಇಲ್ಲದ ದಕ್ಷಿಣ ಕಾಶ್ಮೀರದ ಕೊಡಗು

    ಮಡಿಕೇರಿ: ಜೂನ್, ಜುಲೈ ತಿಂಗಳು ಅಂದರೆ ಕರ್ನಾಟಕದ ಕಾಶ್ಮೀರ ತುಂಬಿ ತುಳುಕುತಿತ್ತು. ಆದರೆ ಕೊರೊನಾ ಮಹಾಮಾರಿಯ ಭಯ ವೀಕ್ ಎಂಡ್ ನಲ್ಲೂ ಮಂಜಿನನಗರಿಯಲ್ಲಿ ಎಲ್ಲವೂ ಖಾಲಿ ಖಾಲಿ ಎನ್ನುವಂತೆ ಮಾಡಿದೆ.

    ಲಾಕ್‍ಡೌನ್ ಸಡಿಲಿಕೆ ಮಾಡಿದ್ರೆ ಸಾಕು ಎನ್ನುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೆ ಪರದಾಡುತ್ತಿದ್ದಾರೆ. ಅಪಾರ ಸಂಪತ್ತಿನಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯೆಂದೇ ಖ್ಯಾತಿ. ಇಲ್ಲಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿರುವುದೇ ಪ್ರವಾಸೋದ್ಯಮ. ಇದನ್ನು ನಂಬಿಕೊಂಡೇ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆದ ಬಳಿಕ ಎಲ್ಲವೂ ಸ್ಥಗಿತವಾಗಿ ಹೋಗಿತ್ತು.

    ಈಗ ಲಾಕ್‍ಡೌನ್ ಬಹುತೇಕ ಸಡಿಲಿಕೆ ಆಗಿದ್ದರೂ, ಮಂಜಿನ ನಗರಿ ಮಾತ್ರ ಖಾಲಿ ಖಾಲಿ ಹೊಡೆಯುತ್ತಿದೆ. ಜೂನ್, ಜುಲೈ ತಿಂಗಳೆಂದರೆ ಕೊಡಗು ಜಿಲ್ಲೆ ಪ್ರವಾಸಿಗರಿಂದ ತುಂಬಿ ತುಳುಕುತಿತ್ತು. ಅದರಲ್ಲೂ ವೀಕ್‍ಎಂಡ್ ಬಂತೆಂದರೆ ಹೋಮ್ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್‍ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆದರೆ ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿಲ್ಲ. ರೆಸಾರ್ಟ್, ಹೋಮ್ ಸ್ಟೇ ಮತ್ತು ಹೊಟೇಲ್ ಗಳ ಮಾಲೀಕರು ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರವಾಸಿಗರಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರವಾಸಿಗರು ಕೊಡಗಿನತ್ತ ಮುಖ ಮಾಡುವುದಿರಲಿ ಕನಿಷ್ಠ ಪಕ್ಷ ಹೊಮ್ ಸ್ಟೇ, ರೆಸಾರ್ಟ್‍ಗಳಿಗೆ ಕರೆ ಮಾಡಿ ವಿಚಾರಣೆ ಕೂಡ ಮಾಡುತ್ತಿಲ್ಲ ಎನ್ನುವುದು ಕೊಡಗಿನ ಹೋಮ್ ಸ್ಟೇ, ರೆಸಾರ್ಟ್‍ಗಳ ಮಾಲೀಕರನ್ನು ಆತಂಕಕ್ಕೆ ದೂಡಿದೆ.

    ಪ್ರವಾಸೋದ್ಯಮದಿಂದ ಕೇವಲ ಹೋಮ್ ಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳು ಅಷ್ಟೇ ಅಲ್ಲ ಸ್ಪೈಸಿಸ್ ಅಂಗಡಿಗಳು, ಕೊಡಗಿನ ವೈನ್ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಆದರೆ ಪ್ರವಾಸಿಗರಿಲ್ಲದೇ ಇರುವುದರಿಂದ ಇದೀಗ ಈ ಸ್ಪೈಸೀಸ್ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಅಷ್ಟೇ ಅಲ್ಲ ಮಂಜಿನ ನಗರಿ ಮಡಿಕೇರಿಯಲ್ಲೇ ವಾರದ ಕೊನೆ ದಿನಗಳಲ್ಲೂ ಜನರು, ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಲಾಕ್‍ಡೌನ್ ಸಡಿಲವಾದರೆ ಸಾಕು ಪ್ರವಾಸಿಗರು ಕೊಡಗಿನತ್ತ ಮುಖ ಮಾಡುತ್ತಾರೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡಿದ್ದ ಕೊಡಗಿನ ವ್ಯಾಪಾರಸ್ಥರಿಗೆ ತೀವ್ರ ನಿರಾಸೆ ಮೂಡಿಸಿದೆ.

    ಮತ್ತೊಂದೆಡೆ ಇಂದಿಗೂ ಕೊಡಗಿನ ಹಲವು ಪ್ರವಾಸಿತಾಣಗಳು ಬಂದ್ ಆಗಿದ್ದು, ನೋಡುಗರಿಗೆ ಮುಕ್ತವಾಗಿಲ್ಲ. ಹೀಗಾಗಿ ಪ್ರವಾಸೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಕಂಗಾಲಾಗುವಂತೆ ಮಾಡಿದೆ ಎನ್ನುವುದು ವ್ಯಾಪಾರಸ್ಥರ ಅಳಲು.

  • ಮಾರುಕಟ್ಟೆಯಲ್ಲಿ ಜನವೋ ಜನ- ನಿಯಮ ಗಾಳಿಗೆ ತೂರಿದ ಗ್ರಾಹಕರು, ವ್ಯಾಪಾರಿಗಳು

    ಮಾರುಕಟ್ಟೆಯಲ್ಲಿ ಜನವೋ ಜನ- ನಿಯಮ ಗಾಳಿಗೆ ತೂರಿದ ಗ್ರಾಹಕರು, ವ್ಯಾಪಾರಿಗಳು

    ಉಡುಪಿ: ನಗರದ ಆದಿ ಉಡುಪಿ ತರಕಾರಿ ಮಾರುಕಟ್ಟೆಯಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ. ಮೂರು ಗಂಟೆಗಳ ಕಾಲ ಜನ ಮುಗಿಬಿದ್ದು ತರಕಾರಿ ಖರೀದಿ ಮಾಡಿದ್ದಾರೆ.

    ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ಜನ ಒಂದೆಡೆ ಸೇರಬಾರದು ಎಂದು ಸರ್ಕಾರ ನಿಯಮಗಳನ್ನು ರೂಪಿಸಿದೆ. ಮಾರುಕಟ್ಟೆಯನ್ನು ತೆರೆಯಲೇ ಬಾರದು ಎಂದು ಉಡುಪಿ ಜಿಲ್ಲಾಡಳಿತ ಖಡಕ್ ಆದೇಶವನ್ನು ಕೊಟ್ಟಿತ್ತು. ಆದರೂ ಜಿಲ್ಲಾಡಳಿತ ಆದೇಶಕ್ಕೆ ಉಡುಪಿ ಜನ ಮತ್ತು ವ್ಯಾಪಾರಿಗಳು ಕ್ಯಾರೇ ಎನ್ನಲ್ಲಿಲ್ಲ. ಬೆಳಗ್ಗೆ ಸುಮಾರು 8 ರಿಂದ 11 ಗಂಟೆಯ ತನಕ ಜನ ಮುಗಿಬಿದ್ದು ತರಕಾರಿಗಳನ್ನು ಖರೀದಿ ಮಾಡಿದರು.

    ಬುಧವಾರ ಸಂತೆಯಲ್ಲಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದ ವ್ಯಾಪಾರಿಗಳು ಅಲ್ಲಿಂದ ತರಕಾರಿಗಳನ್ನು ತಂದು ಉಡುಪಿಯಲ್ಲಿ ಹೋಲ್ಸೇಲ್ ದರಕ್ಕೆ ಮಾರುತ್ತಾರೆ. ಹಾಗಾಗಿ ಕಡಿಮೆ ದರದ ತರಕಾರಿಯನ್ನು ಖರೀದಿಸಲು ಹೊರಟ ಜನ ಸಾಮಾಜಿಕ ಅಂತರವನ್ನು ಕಾಪಾಡಲಿಲ್ಲ. ಪೊಲೀಸರು ಆರಂಭದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟರೂ ನಂತರ ಜನ ಇದನ್ನು ದುರುಪಯೋಗ ಪಡಿಸಲು ಮುಂದಾಗಿದ್ದರು. ಈ ಹಂತದಲ್ಲಿ ಪೊಲೀಸರು ಲಾಠಿ ಬೀಸಿ ವ್ಯಾಪಾರಿಗಳನ್ನು ಮತ್ತು ಗ್ರಾಹಕರನ್ನು ಚದುರಿಸಿದರು.

  • ಒಂದು ಕೆಜಿ ಮಟನ್‍ಗೆ ಎರಡು ಭದ್ರಕೋಟೆ ಭೇದಿಸಬೇಕು

    ಒಂದು ಕೆಜಿ ಮಟನ್‍ಗೆ ಎರಡು ಭದ್ರಕೋಟೆ ಭೇದಿಸಬೇಕು

    ಹಾಸನ: ಕೊರೊನಾ ಎಫೆಕ್ಟ್‌ನಿಂದಾಗಿ ಮಟನ್ ಮಾರಲು ಅವಕಾಶ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲಿ ಹಾಸನದಲ್ಲಿ ಬಹುತೇಕ ಮಟನ್ ಅಂಗಡಿ ಮಾಲೀಕರು ಇಂದು ವ್ಯಾಪರಕ್ಕೆ ಇಳಿಯಲು ಹಿಂದೇಟು ಹಾಕಿದರು. ಇದರಿಂದಾಗಿ ಜನ ಕಿ.ಮೀ.ಗಟ್ಟಲೆ ಕ್ಯೂ ನಿಂತು ಮಟನ್ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹಾಸನ ಜಿಲ್ಲಾಡಳಿತ ಇಂದು ಮಧ್ಯಾಹ್ನದವರೆಗೆ ಮಟನ್ ಮಾರಲು ಅವಕಾಶ ನೀಡುವುದಾಗಿ ಬುಧವಾರವೇ ತಿಳಿಸಿತ್ತು. ಆದರೆ ಮಟನ್ ಮಾರ್ಕೆಟ್‍ನಲ್ಲಿ ಕೇವಲ ಮೂರು ಅಂಗಡಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ಏಕಾಏಕಿ ಮಟನ್‍ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮಟನ್ ಖರೀದಿಗಾಗಿ ಜನರು ಈಗ ಎರಡು ಕೋಟೆಯನ್ನು ಭೇದಿಸಿ ಯಶಸ್ವಿಯಾಗಬೇಕಿದೆ.

    ಮೊದಲು ಮಟನ್ ಮಾರ್ಕೆಟ್ ಒಳಗೆ ಹೋಗಲು ಗ್ರಾಹಕರು ಕ್ಯೂ ನಿಲ್ಲಬೇಕು. ಈ ಕ್ಯೂ ಸುಮಾರು ಒಂದು ಕಿ.ಮೀ.ನಷ್ಟು ದೂರ ವ್ಯಾಪಿಸಿದೆ. ಕ್ಯೂ ಭೇದಿಸಿ ಬಂದವರು ನಂತರ ಮಟನ್ ಅಂಗಡಿ ಮುಂದೆ ಮತ್ತೊಂದು ಕ್ಯೂನಲ್ಲಿ ನಿಂತು ಮಟನ್ ಖರೀದಿಸಬೇಕು. ಮಟನ್ ಮಾರ್ಕೆಟ್ ಒಳಗೆ ಏಕಾಏಕಿ ನೂಕುನುಗ್ಗಲು ನಿಯಂತ್ರಿಸಲು ನಗರಸಭೆ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟೆಲ್ಲ ಕಷ್ಟದ ನಡುವೆ ಮಟನ್ ಸಿಗಲು ಹಾಸನದಲ್ಲಿ ಕನಿಷ್ಠ ಒಂದು ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಪ್ರಯತ್ನಿಸಿದರೂ ಮಟನ್ ಸಿಗುವ ಭರವಸೆ ಕೂಡ ಇಲ್ಲದಂತಾಗಿದ್ದು ಜನ ಕೊರೊನಾ ವೈರಸ್‍ಗೆ ಹಿಡಿಶಾಪ ಹಾಕುತ್ತಿದ್ದಾರೆ.

  • ಹೆಚ್ಚಾಯ್ತು ಮೀನು, ಕುರಿ ಮಾಂಸಕ್ಕೆ ಡಿಮ್ಯಾಂಡ್ – ಭಾರೀ ಏರಿತು ಮಟನ್ ಬೆಲೆ

    ಹೆಚ್ಚಾಯ್ತು ಮೀನು, ಕುರಿ ಮಾಂಸಕ್ಕೆ ಡಿಮ್ಯಾಂಡ್ – ಭಾರೀ ಏರಿತು ಮಟನ್ ಬೆಲೆ

    ಮೈಸೂರು: ಹಕ್ಕಿ ಜ್ವರದ ಎಫೆಕ್ಟ್ ನಿಂದ ಮೈಸೂರು ನಗರದಾದ್ಯಂತ ಕೋಳಿಗಳ ಮಾರಾಟ ಬಂದ್ ಆಗಿದೆ. ಹೀಗಾಗಿ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.

    ಹಕ್ಕಿ ಜ್ವರದ ಹಿನ್ನೆಲೆ ಚಿಕನ್ ಮಾರಾಟ ಸ್ಥಗಿತಗೊಂಡಿರು ಪರಿಣಾಮ ಮೀನು, ಕುರಿ, ಮೇಕೆ ಮಾಂಸದ ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಅತ್ತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇತ್ತ ಕುರಿ, ಮೇಕೆ ಮಾಂಸದ ಬೆಲೆಯಲ್ಲಿ ಏರಿಕೆಯಾಗಿದ್ದು, ಮಂಗಳವಾರ ಒಂದು ಕೆ.ಜಿಗೆ 550 ರೂಪಾಯಿ ಇದ್ದ ದರ ಇಂದು 600 ರೂಪಾಯಿಗೆ ಏರಿಕೆಯಾಗಿದೆ. ಮೀನಿನ ದರ ಮಾತ್ರ ಯಥಾಸ್ಥಿತಿಯಲ್ಲಿ ಇದೆ. ಕೋಳಿ ಮಾರಾಟ ನಿಷೇಧ ಹೀಗೆ ಮುಂದುವರಿದರೆ ಮಟನ್ ಬೆಲೆ ಕೆಜಿಗೆ 800 ರೂಪಾಯಿ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

    ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಇತ್ತೀಚೆಗೆ ಸತ್ತಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್‍ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್‍ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.

    ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಸಾಕು ಪಕ್ಷಿಗಳ ಸರ್ವೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ 6,436 ಪಕ್ಷಿಗಳನ್ನು ಕೊಲ್ಲಲು ರ್ನಿಧರಿಸಿದೆ. ಜೊತೆಗೆ ಹಕ್ಕಿಜ್ವರ ಪತ್ತೆಯಾದ ಮೈಸೂರಿನ ಕುಂಬಾರಕೊಪ್ಪಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಈವರೆಗೆ ಒಟ್ಟು 6,436 ಪಕ್ಷಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೀಗಾಗಿ ಕುಂಬಾರಕೊಪ್ಪಲಿನ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.

    ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಟ್ಟು 17,820 ಮನೆಗಳಿವೆ. ಅದರಲ್ಲಿ 144 ಮನೆಗಳಲ್ಲಿ ಪಕ್ಷಿಗಳಿವೆ. ಈ ಪೈಕಿ ನೈಸರ್ಗಿಕ ಪಕ್ಷಿಗಳು 1,252, ಔದ್ಯಮಿಕ ಪಕ್ಷಿಗಳು 5,100 ಹಾಗೂ ಸಾಕು ಪಕ್ಷಿಗಳು 254 ಎಂದು ಗುರುತಿಸಲಾಗಿದೆ. ಇದರಲ್ಲಿ ಕ್ವೈಲ್ಸ್ 12 ಹಾಗೂ ಟರ್ಕಿ 18 ಸೇರಿ ಒಟ್ಟು 6,436 ಪಕ್ಷಿಗಳಿದ್ದು, ಎಲ್ಲವನ್ನೂ ನಾಶಪಡಿಸಲು ನಿರ್ಧರಿಸಲಾಗಿದೆ.

  • ಚಿಕನ್, ಮಟನ್ ಆಯ್ತು ಈಗ ತರಕಾರಿಗೂ ಕೊರೊನಾ ಭೀತಿ

    ಚಿಕನ್, ಮಟನ್ ಆಯ್ತು ಈಗ ತರಕಾರಿಗೂ ಕೊರೊನಾ ಭೀತಿ

    ಬೆಂಗಳೂರು: ಸತತ ಒಂದು ವಾರದಿಂದ ತರಕಾರಿ ಬೆಲೆ ಪಾತಾಳಕ್ಕೆ ಇಳಿಯುತ್ತಿದೆ. ತರಕಾರಿ ಕಡಿಮೆ ಆದರೆ ಜನ ಖರೀದಿ ಮಾಡುವುದು ಹೆಚ್ಚಾಗುತ್ತೆ. ಆದರೆ ಕೊರೊನಾ ವೈರಸ್ ಭೀತಿ ಗ್ರಾಹಕರನ್ನು ಆವರಿಸಿದೆ. ಚಿಕನ್ ಅಂದರೆ ದೂರ ಹೋಗುತ್ತಿದ್ದ ಜನ ಈಗ ತರಕಾರಿ ಅಂದರೆ ಭಯಪಡುತ್ತಿದ್ದಾರೆ.

    ಈ ಹಿಂದೆ ಟೊಮ್ಯಾಟೋ ದರ 22 ರೂ. ಇತ್ತು. ಆದರೆ ಈಗ 15 ರೂ. ಆಗಿದೆ. ಬೀಟ್‍ರೂಟ್ ಹಿಂದಿನ ದರ 20 ರೂ. ಆಗಿತ್ತು. ಆದರೆ ಈಗ 18 ರೂ. ಆಗಿದೆ. 30 ರೂ. ಇದ್ದ ಮೂಲಂಗಿ ಇದೀಗ 22 ರೂ. ಆಗಿದೆ. ಸೀಮೆ ಬದನೆಕಾಯಿ ದರ 30 ರೂ. ಇತ್ತು. ಆದರೆ ಈಗ 21 ರೂ. ಆಗಿದೆ. ಹಾಗೆಯೇ ಕ್ಯಾಪ್ಸಿಕಂ 30 ರೂ. ಇತ್ತು. ಆದರೆ ಈಗ 22 ರೂ. ಆಗಿದೆ. 30 ರೂ. ಇದ್ದ ಗೆಡ್ಡೆಕೋಸು ಈಗ 21 ರೂ. ಆಗಿದೆ. ಈರುಳ್ಳಿ 40 ರೂ. ಇತ್ತು. ಆದರೆ ಈಗ 21 ರೂ. ಆಗಿದೆ. ಕ್ಯಾರೇಟ್ ದರ 55 ರೂ. ಆಗಿತ್ತು. ಇದೀಗ 44 ರೂ. ಆಗಿದೆ. 40 ರೂ. ಇದ್ದ ಬೀನ್ಸ್ ಇದೀಗ 30 ರೂ. ಆಗಿದೆ. ಹಾಗೆಯೇ ಮೆಣಸಿನಕಾಯಿ 50 ರೂ. ಇತ್ತು. ಆದರೆ ಈಗ 44 ರೂ. ಆಗಿದೆ.

    ಎಲ್ಲಾ ಮಾರ್ಕೆಟ್‍ಗಳು ಹಾಗೂ ಹಾಪ್‍ಕಾಮ್ಸ್ ಗಳಲ್ಲೂ ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿತ್ತು. ಬೆಲೆ ಕಡಿಮೆಯಾಗಿದ್ರೂ ಜನ ಖರೀದಿ ಮಾಡುತ್ತಿಲ್ಲ. ಎಲ್ಲಿ ತರಕಾರಿಯಿಂದ ಕೊರೊನಾ ಬಂದುಬಿಡುತ್ತೋ ಎಂದು ಅಂಗಡಿ ಬಳಿ ಬರುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಎಲ್ಲಾ ಕೊರೊನಾ ಎಫೆಕ್ಟ್ ಅನ್ನಿಸುತ್ತೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕೆಜಿಗೆ ನೂರು ರೂ. ಬೆಲೆಯಲ್ಲಿದ್ದ ತರಕಾರಿಗಳು ಈಗ 100 ರೂ.ಗೆ 6 ಕೆಜಿಯಷ್ಟು ಸಿಕ್ರು ಜನ ಖರೀದಿ ಮಾಡುತ್ತಿಲ್ಲ.

  • ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯದು ಯಾವಾಗಲೂ ಬ್ಯುಸಿ ಶೆಡ್ಯೂಲ್. ಹೀಗಾಗಿ ಸ್ಟ್ರೀಟ್ ಫುಡ್‍ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರ ಹಾರ್ಟ್ ಫೇವರೆಟ್ ಈ ಸ್ಟ್ರೀಟ್ ಫುಡ್‍ಗಳ ಆರ್ಭಟ ನಗರದ ಗಲ್ಲಿಗಲ್ಲಿಯಲ್ಲೂ ಜೋರಾಗಿದೆ. ಅಗ್ಗದ ದರ, ಟೇಸ್ಟಿ ಸ್ಟ್ರೀಟ್ ಫುಡ್‍ಗಳು ಇದೀಗ ಕಿಲ್ಲರ್ ಫುಡ್ ಆಗಿ ಕೆಲವೆಡೆ ಬದಲಾಗುತ್ತಿದೆ. ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಈ ಡರ್ಟಿ ಸ್ಟ್ರೀಟ್ ಫುಡ್ ಸೀಕ್ರೆಟ್ ಬಟಾಬಯಲು ಮಾಡಿದೆ.

    ಸಂಜೆ ಹೊತ್ತಲ್ಲಿ ಸ್ಟ್ರೀಟ್‍ನಲ್ಲಿ ನಿಂತ್ಕೊಂಡು ಗೋಬಿ ಮಂಚೂರಿನೋ, ಸ್ಪೈಸಿ ತಿಂಡಿ ಮೆಲ್ಲೋಣ ಎಂದು ಹೋಗುವವರು ಹೆಚ್ಚು. ಇತ್ತ ಗರಿ ಗರಿ ದೋಸೆ, ಇಡ್ಲಿ, ಬೊಂಡಾ ಇದಕ್ಕೆಲ್ಲಾ ಕಾಂಬಿನೇಷನ್ ಆಗಿ ಚಿಕನ್, ಮಟನ್ ಇದ್ದರೆ ಸಂಜೆ ಹೋದವರು ಅದನ್ನೆಲ್ಲಾ ತಿಂದು ಬರುವಷ್ಟರಲ್ಲಿ ಕತ್ತಲಾಗಿರುತ್ತೆ. ಆ ರೇಂಜ್‍ಗೆ ಸ್ಟ್ರೀಟ್ ಫುಡ್ ನಮ್ಮನ್ನು ಆಕರ್ಷಿಸುತ್ತೆ. ಈ ತಿಂಡಿಗಳು ಅಗ್ಗದ ದರದಲ್ಲೂ ಸಿಗುತ್ತೆ. ಜೊತೆಗೆ ಟೇಸ್ಟ್ ಕೂಡ ಸಖತ್ ಆಗಿರುತ್ತೆ ಎಂದು ಜನ ಸ್ಟ್ರೀಟ್ ಫುಡ್‍ಗಳ ಸೆಂಟರ್ ಮುಂದೆ ಕ್ಯೂ ನಿಲ್ತಾರೆ. ಆದರೆ ಈ ಸ್ಟ್ರೀಟ್‍ಫುಡ್ ಜನರ ಪಾಲಿಗೆ ಕಿಲ್ಲರ್ ಫುಡ್ ಆಗಿದೆ. ಇದೆಲ್ಲಾ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಗರದ ಜೆಸಿ ರಸ್ತೆ, ಲಾಲ್‍ಬಾಗ್- ನ್ಯಾಷನಲ್ ಕಾಲೇಜು ಸಮೀಪದ ವಿವಿ ಪುರಂ ಫುಡ್ ಸ್ಟ್ರೀಟ್ ಇಡೀ ಬೆಂಗಳೂರಲ್ಲಿ ತುಂಬಾನೇ ಫೇಮಸ್. ಬೆಳಗ್ಗೆ, ಮಧ್ಯಾಹ್ನ ತಡರಾತ್ರಿಯಾದರೂ ಇಲ್ಲಿ ಫುಡ್ ಸಿಗುತ್ತೆ. ಸಂಜೆಯಂತೂ ಇಲ್ಲಿ ಕಾಲಿಡೋಕು ಜಾಗ ಇರಲ್ಲ. ಆದರೆ ಈ ಏರಿಯಾದಲ್ಲಿ ಸಿಗುವ ಕೆಲ ಹೋಟೆಲ್‍ನ ಡರ್ಟಿ ಸೀನ್ ನೋಡಿದರೆ ವಾಕರಿಕೆ ಬರತ್ತೆ.

    ದೋಸೆ ಹೊಯ್ಯುವ ಹೆಂಚು ತೊಳೆದು ಎಷ್ಟು ಕಾಲವಾಗಿದ್ಯೋ ಏನೋ? ಇಡ್ಲಿ ಬೇಯಿಸುವ ಪಾತ್ರೆ ನೋಡಿದರೆ ಜನ್ಮದಲ್ಲಿ ಇಡ್ಲಿ ತಿನ್ನೋದೆ ಬೇಡ ಅನಿಸಿಬಿಡುತ್ತೆ. ಇಡ್ಲಿಗೆ ನೊಣ ಫ್ರೀ ಎನ್ನುವಂತೆ ಬೇಯಿಸಿಟ್ಟ ಇಡ್ಲಿ ಪಕ್ಕ ಕಸದ ಬುಟ್ಟಿಯ ಮುಂದೆ ನೊಣಗಳು ಹಾರಾಡುತ್ತಿರುತ್ತೆ. ಇಲ್ಲಿ ಸ್ವಚ್ಛತೆಗೆ ಮೂರುಕಾಸಿನ ಬೆಲೆ ಇಲ್ಲ. ಅಲ್ಲದೆ ನೀವು ತಿಂದ ಪಾತ್ರೆಗಳನ್ನ ಅವರು ತೊಳೆಯೋದು ನೋಡಿದ್ರೆ ಸುಸ್ತಾಗಿ ಹೋಗ್ತಿರಾ. ನೆಟ್ಟಗೆ ಲೋಟ ತಟ್ಟೆಯನ್ನು ತೊಳೆಯದೇ ಹಾಗೆಯೇ ತಿಂಡಿಗಳನ್ನು ಬಡಿಸಿ ಕೊಡ್ತಾರೆ.

    ಇತ್ತ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣದ ಫುಡ್ ಸ್ಟಾಲ್ ಕಥೆಯಂತೂ ಕೇಳೋದೇ ಬೇಡ. ರೋಡ್‍ನಲ್ಲೇ ಕಿಚನ್, ಡರ್ಟಿ ಫುಡ್‍ನ ದುನಿಯಾ ಇದು. ರಸ್ತೆಯಲ್ಲೆ ತಿಂಡಿ ಲಟ್ಟಿಸುತ್ತಾರೆ, ಬಾಣಲೆ ಇಟ್ಟು ಬೇಯಿಸ್ತಾರೆ. ಕಡೆಗೆ ಧೂಳು ಮುತ್ತಿದ್ದ ಮೇಲೆ ತಿಂಡಿಗಳನ್ನು ಮಾರುತ್ತಾರೆ. ತಿಂಡಿ ಮೇಲೆ ನೋಣವೆಲ್ಲ ಕೂರುತ್ತಿದೆ ಎಂದು ಪ್ರಶ್ನಿಸಿದರೆ ವ್ಯಾಪಾರಿಗಳು ಮಾತ್ರ ಏನೂ ಪ್ರತಿಕ್ರಿಯೆ ಕೊಡದೆ ಬಾಯಿ ಮುಚ್ಚಿ ಇರುತ್ತಾರೆ.

    ಹಾಗೆಯೇ ವಿಜಯನಗರ ಸ್ಟ್ರೀಟ್ ಫುಡ್ ಬಳಿ ಸಣ್ಣ ಚರಂಡಿ ಇದೆ. ಅಲ್ಲೇ ಇಡ್ಲಿ ಇಟ್ಟು, ಇಡ್ಲಿ ತೆಗೆಯುವುದಕ್ಕೆ ಬಳಸೋ ನೀರು ನೋಡಿದರೆ ಅಸಹ್ಯ ಎನಿಸುತ್ತೆ. ಕುಡಿಯುವ ನೀರಿನ ಜಾಗ ಹಾಗೂ ಕೈತೊಳೆಯೊ ಜಾಗಕ್ಕೆ ಏನೂ ವ್ಯತ್ಯಾಸವಿಲ್ಲ. ಹೀಗಿರುವ ಸ್ಥಳದಲ್ಲಿ ತಿಂಡಿ ತಿಂದರೆ ಕಾಯಿಲೆ ಗ್ಯಾರೆಂಟಿ.

    ನಾನ್‍ವೆಜ್ ತಿಂಡಿಗಳಿಗೆ ಫೇಮಸ್ ಆಗಿರುವ ಶಿವಾಜಿನಗರದಲ್ಲಿ ಸ್ವಚ್ಛತೆ ನೋಡಿದರೆ ದಂಗಾಗುತ್ತೀರ. ನೇತು ಹಾಕಿರೋ ಪ್ರಾಣಿಗಳ ದೇಹದಂತೆ ಇಲ್ಲಿ ಊಟದ ಸ್ವಚ್ಛತೆಯೂ ಜೋತು ಬಿದ್ದಿದೆ.

    ಈ ಸ್ಟ್ರೀಟ್ ಫುಡ್ ತಯಾರಕರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು. ಇಲ್ಲವಾದರೆ ಉಗುರಿನಲ್ಲಿರೋ ಫಂಗಸ್ ದೇಹ ಸೇರಿ ಕರುಳುಬೇನೆ ಶುರುವಾಗುತ್ತದೆ. ಜೊತೆಗೆ ಪದೇ ಪದೇ ಕಾಯಿಲೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಛತೆಯ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತೆ. ಹೀಗಾಗಿ ಕಡಿಮೆ ಬೆಲೆಗೆ, ಬಿಸಿ ಬಿಸಿ ಸಿಗುತ್ತೆ ಎಂದು ಸ್ಟ್ರೀಟ್ ಫುಡ್ ಮೊರೆ ಹೋಗೋ ಮುನ್ನ ಎಚ್ಚರದಿಂದಿರಿ. ಸ್ವಚ್ಛತೆ ಇಲ್ಲದ ಕಡೆ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ.

  • ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಬಳ್ಳಾರಿ: ಸರ್ಕಾರದ ಆದೇಶದ ಮೇರೆಗೆ 7ನೇ ಆರ್ಥಿಕ ಗಣತಿ ಡಿ. 24ರಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಣತಿಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

    ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಗಣತಿಯಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಂಕೀರ್ಣಗಳಲ್ಲಿ ನಡೆಯುತ್ತಿರುವ ವ್ಯಾಪಾರ, ಉದ್ಯಮದ ಬಗ್ಗೆ ಮಾಹಿತಿಯನ್ನು ಗಣತಿದಾರರು ಕೇಳಲಿದ್ದಾರೆ ಎಂದು ತಿಳಿಸಿದರು. ಸದರಿ ಗಣತಿದಾರರಿಗೆ ಎಲ್ಲಾ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಮನೆಗಳಲ್ಲಿ ನಡೆಯುವ ಹೈನುಗಾರಿಕೆ, ಹೊಲಿಗೆ, ಅಂಗಡಿ ಇತರೆ ಸಣ್ಣಪುಟ್ಟ ವ್ಯಾಪಾರ ಗಣತಿಯೊಂದಿಗೆ ವಾಣಿಜ್ಯ ಕಟ್ಟಡಗಳಲ್ಲಿನ ಉದ್ಯಮಗಳ ಬಗ್ಗೆ ಮಾಹಿತಿ ಕಲೆಹಾಕಲಿದ್ದು, ಸದರಿ ಮಾಹಿತಿ ಆಧರಿಸಿ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ನಿರ್ಧಿಷ್ಟ ಉದ್ಯಮಗಳಿಗೆ ನೀಡಬೇಕಾದ ಸೌಲಭ್ಯ, ಸಹಕಾರಗಳ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದರು.

    ಸಾರ್ವಜನಿಕರು ಉದ್ಯಮಗಳ ಮಾಹಿತಿಯನ್ನು ನಿಖರವಾಗಿ ನೀಡಬೇಕು. ಸದರಿ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುವುದು ಹಾಗೂ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು. ಹೀಗಾಗಿ ಯಾರು ಆತಂಕ ಪಡದೆ ಸರಿಯಾದ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ

    ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ

    ಮಂಗಳೂರು: ಈರುಳ್ಳಿ ದರ ಏರಿಕೆಯಿಂದಾಗಿ ಜನ ಈಗಾಗಲೇ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಈರುಳ್ಳಿ ಖರೀದಿಸುವಾಗ ಗ್ರಾಹಕರು ಕಣ್ಣೀರು ಸುರಿಸಬೇಕಾಗ ಅನಿವಾರ್ಯತೆ ಎದುರಾಗಿದೆ.

    ಈರುಳ್ಳಿ ದರ ಇಳಿಯೋದಿಲ್ವಾ ಎಂದು ಕರಾವಳಿ ಜನ ಟೆನ್ಷನ್ ಆಗಿದ್ದಾರೆ. ಮಂಗಳೂರಿನಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ಕೇಜಿಗೆ 120 ಇದ್ದ ಈರುಳ್ಳಿ ದರ ಇದೀಗ 140ರಿಂದ 150 ರೂ.ಗೆ ಬಂದು ನಿಂತಿದೆ. ಈ ದರ ಇನ್ನೂ ಎರಡು ತಿಂಗಳ ಕಾಲ ಮುಂದುವರಿಯುತ್ತದೆ ಎನ್ನುವುದೇ ಕರಾವಳಿಗರಿಗೆ ತಲೆ ನೋವಾಗಿದೆ. ಇದನ್ನೂ ಓದಿ: ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ಸಗಟು ವ್ಯಾಪಾರಿಗಳಿಗೆ ಈರುಳ್ಳಿ ಸಾಕಷ್ಟು ಪೂರೈಕೆಯಾಗದೆ ದರ ಹೆಚ್ಚಿದ್ದರೂ ಗ್ರಾಹಕರಿಗೆ ಬೇಕಾದಷ್ಟು ಈರುಳ್ಳಿ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನ್‍ವೆಜ್ ಪ್ರಿಯರಾದ ಕರಾವಳಿ ಮಂದಿಗೆ ನಿತ್ಯದ ಬಳಕೆಗೆ ಈರುಳ್ಳಿ ಅನಿವಾರ್ಯ ಆಗಿದ್ದು, ಪೂರೈಕೆ ಕಡಿಮೆಯಾದರೂ ಬಳಕೆ ಮಾಡದೇ ಬಿಡಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದ್ದರಿಂದ ಈರುಳ್ಳಿ ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಕಳೆದ ವಾರದ ಹಿಂದೆ ಒಂದು ಕೆಜಿ ಈರುಳ್ಳಿಗೆ 100 ರೂಪಾಯಿ ಇತ್ತು. ಬಳಿಕ ಮೂರು ದಿನಗಳ ಹಿಂದೆ ಈರುಳ್ಳಿ ದರ, 120 ರೂ. ಆಗಿದ್ದು ಈಗ 140ಕ್ಕೆ ಏರಿಕೆಯಾಗಿದೆ. ಇದೇ ರೀತಿ ದಿನದಿಂದ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಇರಲಿದೆ ಎಂದು ಮಂಗಳೂರಿನ ಈರುಳ್ಳಿ ವ್ಯಾಪಾರಸ್ಥ ಸುರೇಶ್ ಹೇಳಿದ್ದಾರೆ.

    ಮಂಗಳೂರಿಗೆ ಮಹಾರಾಷ್ಟ್ರದ ಪೂನಾ, ಬೆಂಗಳೂರು, ಹಾಸನದಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಇದನ್ನೇ ಅವಲಂಬಿಸಿ ವ್ಯಾಪಾರ ಮಾಡಬೇಕಾಗಿದೆ. ಇದೀಗ ಪೂರೈಕೆ ಕಡಿಮೆಯಾಗಿದ್ದರಿಂದ ವ್ಯಾಪಾರಸ್ಥರು ಈರುಳ್ಳಿ ಬೆಲೆ ಕಡಿಮೆ ಮಾಡುತ್ತಿಲ್ಲ.

    https://www.youtube.com/watch?v=bcPxJ_UqTCg

  • ಗೋರಿಪಾಳ್ಯದಲ್ಲಿ ಸ್ವಯಂ ಪ್ರೇರಿತವಾಗಿ ವ್ಯಾಪಾರಿಗಳಿಂದ ಅಂಗಡಿಗಳು ಬಂದ್

    ಗೋರಿಪಾಳ್ಯದಲ್ಲಿ ಸ್ವಯಂ ಪ್ರೇರಿತವಾಗಿ ವ್ಯಾಪಾರಿಗಳಿಂದ ಅಂಗಡಿಗಳು ಬಂದ್

    ಬೆಂಗಳೂರು: ಅಯೋಧ್ಯೆ ತೀರ್ಪು ಇಂದು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಗೋರಿಪಾಳ್ಯದಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

    ಈ ಸಮಯಕ್ಕೆ ಗೋರಿಪಾಳ್ಯದಲ್ಲಿ ಎಂದಿನಂತೆ ಅಂಗಡಿಗಳು ಓಪನ್ ಮಾಡಲಾಗುತ್ತೆ. ಆದರೆ ಇಂದು ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಚಾಮರಾಮಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆ ವಿರಳವಾಗಿದೆ.

    ಗೋರಿಪಾಳ್ಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಹುತೇಕ ಅಂಗಡಿ ಮುಗ್ಗಟ್ಟುಗಳು ಇನ್ನೂ ಓಪನ್ ಆಗಿಲ್ಲ. ಮತ್ತೆ ಕೆಲವು ಮಂದಿ ಹತ್ತು ಗಂಟೆಯ ನಂತರ ಪರಿಸ್ಥಿತಿ ನೋಡಿಕೊಂಡು ಅಂಗಡಿ ತೆರೆಯಲು ನಿರ್ಧರಿಸಿದ್ದಾರೆ.

    ವ್ಯಾಪಾರಿಗಳು ಮಾರ್ಕೆಟ್ ಏರಿಯಾಗಳಲ್ಲಿ ಎಂದಿನಂತೆ ಅಂಗಡಿ ಓಪನ್ ಮಾಡಿದ್ದಾರೆ.

  • 10 ಲಕ್ಷ ರೂ. ಬೆಲೆಬಾಳುವ 281 ಪಿಒಪಿ ಗಣೇಶನ ಮೂರ್ತಿ ಜಪ್ತಿ

    10 ಲಕ್ಷ ರೂ. ಬೆಲೆಬಾಳುವ 281 ಪಿಒಪಿ ಗಣೇಶನ ಮೂರ್ತಿ ಜಪ್ತಿ

    ಬೆಂಗಳೂರು: ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪಿಒಪಿ ಗಣೇಶ ಮಾರಾಟ ಮಳಿಗೆಗಳ ಮೇಲೆ ಇಂದು ದಾಳಿ ಮಾಡಿದ್ದಾರೆ.

    ಇಂದು ದಕ್ಷಿಣ ವಲಯದ ಆರೋಗ್ಯಾಧಿಕಾರಿಗಳಿಂದ ಪಿಒಪಿ ಗಣೇಶ ಮೂರ್ತಿಗಳ ಮುಟ್ಟುಗೋಲು ಕಾರ್ಯಾಚರಣೆ ಮಾಡಿದರು. ನಗರದ ಮಿನರ್ವ ಸರ್ಕಲ್ ನಲ್ಲಿರೋ ಮಳಿಗೆಗಳು ಮತ್ತು ಲಾಲ್ ಬಾಗ್ ಪಶ್ಚಿಮ ದ್ವಾರದ ಆರ್ ವಿ ರಸ್ತೆಯ ಮಾವಳ್ಳಿ ಸುತ್ತ ಮುತ್ತ ಪಿಒಪಿ ಮೂರ್ತಿಗಳ ತಯಾರಿಕ ಮತ್ತು ಮಾರಾಟ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದರು.

    ಈ ವೇಳೆ 10 ಲಕ್ಷ ರೂ. ಬೆಲೆಬಾಳುವ 281 ಗಣೇಶನ ಮೂರ್ತಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ ಪ್ಯಾಸ್ಟರ್ ಪ್ಯಾರಿಸ್ ಗಣೇಶ ಪರಿಸರಕ್ಕೆ ಹಾನಿ ಹೀಗಾಗಿ 2016 ರಲ್ಲೇ ಗಣೇಶ ಮೂರ್ತಿ ಮಾರಾಟಕ್ಕೆ ನಿಷೇಧ ಹೇರಿರೊ ವಿಚಾರವನ್ನು ಮನವರಿಕೆ ಮಾಡಿದರು.

    ಆದರೆ ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯಲು ಒಪ್ಪಲಿಲ್ಲ. ಪರಿಣಾಮ ಸ್ಥಳದಲ್ಲಿ ಅಧಿಕಾರಿ ಮತ್ತು ವ್ಯಾಪಾರಿಗಳ ನಡುವೆ ಗಂಟೆಗಟ್ಟಲೆ ವಾಗ್ವಾದ ನಡೆಯಿತು. ಕಡೆಯದಾಗಿ ಪಾಲಿಕೆ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಗಣೇಶ ಮೂರ್ತಿ ಸೀಜ್ ಗೆ ಮುಂದಾಗಿದ್ದು, ಹಂತ ಹಂತವಾಗಿ ಗಣೇಶ ಮೂರ್ತಿಗಳನ್ನ ವಶಕ್ಕೆ ಪಡೆಯುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.