Tag: ವ್ಯಾಪಾರಸ್ಥರು

  • ವ್ಯಾಪಾರ ಆಗಿಲ್ಲ ಸ್ವಾಮಿ ಆಮೇಲೆ ಹಣ ಕೊಡ್ತೀನಿ- ಕಾಡಿಬೇಡಿದ್ರೂ ವೃದ್ಧನ ತಕ್ಕಡಿಯನ್ನೇ ಹೊತ್ತೊಯ್ದ ಕಿರಾತಕರು

    ವ್ಯಾಪಾರ ಆಗಿಲ್ಲ ಸ್ವಾಮಿ ಆಮೇಲೆ ಹಣ ಕೊಡ್ತೀನಿ- ಕಾಡಿಬೇಡಿದ್ರೂ ವೃದ್ಧನ ತಕ್ಕಡಿಯನ್ನೇ ಹೊತ್ತೊಯ್ದ ಕಿರಾತಕರು

    ದಾವಣಗೆರೆ: ಜಕಾತಿ ಹಣ ನೀಡದಿದ್ದಕ್ಕೆ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ ವೃದ್ಧನ ತಕ್ಕಡಿ ತೆಗೆದುಕೊಂಡು ಹೋಗಿ ಯುವಕರು ದರ್ಪ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಕೆ.ಆರ್ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಹಾಗೂ ರೈತರು ತಮ್ಮ ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಮಾರಾಟ ಮಾಡಲು ಬಂದಿರುತ್ತಾರೆ. ಅಂತವರ ಬಳಿ ಪಾಲಿಕೆ ವತಿಯಿಂದ ನೆಲದ ಶುಲ್ಕವನ್ನು ಪಡೆಯಲು ಟೆಂಡರ್ ಪಡೆದಿರುತ್ತಾರೆ. ಆದರೆ ಕೆಲ ಟೆಂಡರ್ ದಾರರು ವ್ಯಾಪಾರಸ್ಥರ ಹಾಗೂ ರೈತರ ಮೇಲೆ ರೌಡಿಸಂ ಮಾಡುತ್ತಿದ್ದಾರೆ.

    ಯುವಕರ ಗುಂಪೊಂದು ವ್ಯಾಪಾರ ಮಾಡುತ್ತಿದ್ದ ವೃದ್ಧನೊಬ್ಬನ ಮೇಲೆ ದರ್ಪ ತೋರಿದೆ. ಅಲ್ಲದೆ ವ್ಯಾಪಾರ ಇನ್ನು ಆಗಿಲ್ಲ ಆಮೇಲೆ ಜಕಾತಿ ಹಣ ನೀಡುತ್ತೇವೆ ಎಂದು ಪರಿಪರಿಯಾಗಿ ಕೇಳಿಕೊಂಡರು ತಕ್ಕಡಿಯನ್ನು ತೆಗೆದುಕೊಂಡು ದರ್ಪ ಮೆರೆದಿದ್ದಾರೆ. ನಂತರ ವೃದ್ಧ ನಿಸ್ಸಾಹಯಕತನದಿಂದ ಹಣವನ್ನು ನೀಡಿ ಕಳುಹಿಸಿದ್ದಾರೆ.

    ಜಕಾತಿ ಶುಲ್ಕವನ್ನು ವ್ಯಾಪಾರವಾದ ನಂತರ ಪಡೆಯಬೇಕು. ಅದನ್ನು ಬಿಟ್ಟು ವ್ಯಾಪಾರಕ್ಕಿಂತ ಮೊದಲೇ ಹಣ ವಸೂಲಿ ಮಾಡಲು ಯುವಕರ ಗುಂಪು ದರ್ಪ ಮೆರೆದಿದೆ. ಯುವಕರು ರೌಡಿಸಂ ಮಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಕೊಪ್ಪಳ, ಬಳ್ಳಾರಿಯಲ್ಲಿ ಮಳೆಯಬ್ಬರ – ಗುರುವಾರದವರೆಗೂ ಮುಂಗಾರು ಮಳೆ ಸಾಧ್ಯತೆ

    ಕೊಪ್ಪಳ, ಬಳ್ಳಾರಿಯಲ್ಲಿ ಮಳೆಯಬ್ಬರ – ಗುರುವಾರದವರೆಗೂ ಮುಂಗಾರು ಮಳೆ ಸಾಧ್ಯತೆ

    ಬೆಂಗಳೂರು: ಇಂದು ರಾಜ್ಯಾದ್ಯಂತ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ನಡುವೆ ಕೆಲ ಜಿಲ್ಲೆಗಳಲ್ಲಿ ದಸರಾ ಹಬ್ಬಕ್ಕೆ ವರುಣರಾಯ ಅಡ್ಡಪಡಿಸಿದ್ದಾನೆ.

    ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿದಾಡುತ್ತಿದೆ. ಇನ್ನು ಗಂಗಾವತಿ ಗುಡ್ಡಮ್ಮ ಕ್ಯಾಂಪ್‍ನಲ್ಲಿ ರೈತರು ಮಾರಾಟ ಮಾಡಲು ಹೂ, ಬಾಳೆ ಕಂಬ, ಕಬ್ಬು ತಂದಿದ್ದರು. ಆದರೆ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಇದನ್ನೆಲ್ಲಾ ಮಾರಾಟ ಮಾಡಲು ತೊಂದರೆಯಾಗುತ್ತಿದೆ.

    ಜಿಟಿಜಿಟಿ ಮಳೆಯಲ್ಲಿಯೇ ನಿಂತು ವ್ಯಾಪಾರಸ್ಥರು ಹೂ, ಹಣ್ಣು ವ್ಯಾಪಾರ ಮಾರಾಟ ಮಾಡುತ್ತಿದ್ದರೂ ಜನರು ಮಾತ್ರ ಮಾರ್ಕೆಟ್‍ಗೆ ಬರುತ್ತಿಲ್ಲ. ಜನರು ಮಾರ್ಕೆಟ್‍ಗೆ ಬರದ ಕಾರಣ ಹಾಕಿದ ಬಂಡವಾಳವಾದ್ರೂ ಬರುತ್ತೋ ಇಲ್ಲವೋ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಜಿನಿಗುಡುತ್ತಿದ್ದ ಮಾರ್ಕೆಟ್ ಈಗ ಜಿಟಿಜಿಟಿ ಮಳೆಯಿಂದ ಬಿಕೋ ಎನ್ನುತಿದೆ.

    ಇತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಹೊಸಪೇಟೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೊಸಪೇಟೆ ನಗರದಲ್ಲಿ ಕಳೆದ ಮೂರು ಗಂಟೆಯಿಂದ ಎಡೆ ಬಿಡದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರ ಜೀವನ ಅಸ್ತವ್ಯಸ್ತವಾಗಿದೆ. ನಗರದ ಜಂಬುನಾಥಹಳ್ಳಿ ಸುಡುಗಾಡು ಸಿದ್ದರ ಕಾಲೋನಿಯಲ್ಲಿ ಮನೆಗಳು, ಗುಡಿಸಲುಗಳು ಜಲಾವೃತವಾಗಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ.

    ಹುಬ್ಬಳ್ಳಿ ಹಾಗೂ ಹಾವೇರಿ ಜಿಲ್ಲೆಯ ಗಡಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಣ್ಣಿ ಹಳ್ಳದ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ಬೆಣ್ಣಿಹಳ್ಳದ ನೀರು ಏರಿದ್ದರಿಂದ ಯಮನೂರ, ತಡಹಾಳ, ಗುಡಿಸಾಗರ, ನವಲಗುಂದ ಭಾಗದ ರೈತರ ಜಮೀನಿಗೆ ನೀರು ನುಗ್ಗಿದೆ. ಭಾನುವಾರದಿಂದ ಹುಬ್ಬಳ್ಳಿ ಹಾಗೂ ಹಾವೇರಿ ಗಡಿ ಭಾಗದಲ್ಲಿ ಮಳೆ ಸುರಿಯುತ್ತಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದ್ವಾರಗಾನಹಳ್ಳಿಯಲ್ಲಿ ಮಳೆಗೆ ಮನೆಯ ಗೋಡೆ ನೆನೆದು ಬೆಳಗ್ಗಿನ ಜಾವ ನಸುಕಿನಲ್ಲಿ ಮನೆ ಕುಸಿದ ಪರಿಣಾಮ ವೃದ್ಧೆ ಮೃತಪಟ್ಟಿದ್ದಾರೆ. ಗ್ರಾಮದ 75 ವರ್ಷದ ಪುಟ್ಟ ನರಸಮ್ಮ ಮೃತ ವೃದ್ಧೆ. ಹಳೆಯ ಮನೆಯಲ್ಲಿ ಮಲಗಿದ್ದ ವೃದ್ಧೆಯ ಮೈಮೇಲೆ ಗೋಡೆ ಕುಸಿದು ತಲೆ ಹಾಗೂ ಕೈ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಪುಟ್ಟನರಸಮ್ಮ ಮೃತಪಟ್ಟಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಡರಾತ್ರಿ ಸುರಿದ ಧಾರಕಾರ ಮಳೆಗೆ ಜಕ್ಕಲಮಡುಗು ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

  • ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಬೆಂಗಳೂರು: ಕೆ.ಆರ್ ಮಾರ್ಕೆಟ್‍ನಲ್ಲಿ ಬಡ ವ್ಯಾಪರಸ್ಥರ ಮೇಲೆ ಪಾಲಿಕೆಯ ಅಧಿಕಾರಿಗಳು ಘರ್ಜಿಸುತ್ತಿದ್ದಾರೆ. ಹಾಡಹಗಲೇ ರೋಲ್ ಕಾಲ್ ದಂಧೆಗಿಳಿದು, ಕಾಸು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನ ಮಾಮೂಲು ಜಗತ್ತಿನ ಕರಾಳ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬಟಾಬಯಲು ಮಾಡುತ್ತಿದೆ.

    ಕೆ.ಆರ್ ಮಾರ್ಕೆಟ್‍ನಲ್ಲಿ ನಡೆಯುವ ಮಾಮೂಲು ವಸೂಲಿ ದಂಧೆಗೆ ವ್ಯಾಪಾರಸ್ಥರು ಹೈರಣಾಗಿದ್ದಾರೆ. ಗಸ್ತು ತಿರುಗುವ ಪೊಲೀಸರು, ಕಸ ಎತ್ತುವ ಬಿಬಿಎಂಪಿಯ ಸಿಬ್ಬಂದಿ, ಅವರ ಮೇಲ್ವಿಚಾರಕರು, ಪುಡಿ ರೌಡಿಗಳು, ಹೀಗೆ ಇಲ್ಲಿ ಎಲ್ಲರೂ ಮಾಮೂಲಿ ವೀರರಾಗಿ ಘರ್ಜಿಸುತ್ತಿದ್ದಾರೆ.

    ತುತ್ತಿನ ಚೀಲ ತುಂಬಿಸಿಕೊಳ್ಳಲು ಅದೆಷ್ಟೋ ವ್ಯಾಪಾರಸ್ಥರು ಕೆ.ಆರ್ ಮಾರ್ಕೆಟ್‍ಗೆ ಬರುತ್ತಾರೆ. ಆದರೆ ಪಾಲಿಕೆಯ ಅಧಿಕಾರಿಗಳು, ಪೊಲೀಸರು ರಾಜಾರೋಷವಾಗಿ ಪ್ರತಿಯೊಬ್ಬ ವ್ಯಾಪಾರಸ್ಥರಿಂದ ದಿನಕ್ಕೆ 10, 20, 50 ರೂ.ಯಂತೆ ಬೆಳಗ್ಗೆಯಿಂದ ಸಂಜೆ ತನಕ 30ಕ್ಕೂ ಹೆಚ್ಚು ಜನರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲ್ಲ ಎಂದರೆ ಅವರ ಮೇಲೆ ಅಟ್ಯಾಕ್ ಮಾಡಿ ಅಂಗಡಿಯನ್ನು ಎತ್ತಿಸುತ್ತಾರೆ. ಅದಕ್ಕಾಗಿಯೇ ಈ ಬಗ್ಗೆ ಧ್ವನಿಯೆತ್ತಲು ವ್ಯಾಪಾರಸ್ಥರು ಹೆದರುತ್ತಾರೆ.

    ಪ್ರತಿನಿತ್ಯ ಈ ಅಧಿಕಾರಿ, ಪುಡಿ ರೌಡಿಗಳಿಂದ ರೋಸಿ ಹೋಗಿದ್ದ ಕೆಲ ವ್ಯಾಪಾರಸ್ಥರು ಪಬ್ಲಿಕ್ ಟಿವಿಯೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ದಸರಾ ಹಬ್ಬಕ್ಕೆ ಬಾಳೆ ದಿಂಡನ್ನು ಖರೀದಿಸಲು ಬಂದಿದ್ದ ಬಿಬಿಎಂಪಿ ಅಧಿಕಾರಿಯೊಬ್ಬ ಪುಟ್ಟ ವ್ಯಾಪಾರಿ ಬಾಲಕನ ಮೇಲೆ ದರ್ಪ ತೋರಿಸಿದ್ದಾನೆ. ಪುಗ್ಸಟ್ಟೆಯಾಗಿ ಬಾಳೆ ದಿಂಡನ್ನು ಕೇಳಿದ್ದಾನೆ. ಕೊಡಲ್ಲ ಎಂದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ದರ್ಪ ಮೆರೆದಿದ್ದಾನೆ.

    ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತಾರಲ್ಲ. ಹಾಗಾಯ್ತು ಈ ಬಿಬಿಎಂಪಿ ಅಧಿಕಾರಿಯ ದರ್ಪ, ದೌಲತ್ತು. ಊರಿಗೆಲ್ಲಾ ಬುದ್ಧಿ ಹೇಳುವ ಬಿಬಿಎಂಪಿ, ತನ್ನ ಸಿಬ್ಬಂದಿಯೇ ಹಗಲು ದರೋಡೆಗೆ ಇಳಿದಿರುವುದು ಇದು ಬಿಬಿಎಂಪಿಗೆ ನಾಚಿಕೆಗೇಡಿನ ಸಂಗತಿಯೇ ಸರಿ. ಪ್ರತಿನಿತ್ಯ ಅಂದಾಜು ಲೆಕ್ಕದಲ್ಲಿ ಎಷ್ಟು ಹಣವನ್ನು ವಸೂಲಿ ಮಾಡುತ್ತಾರೆ ಎನ್ನುವುದನ್ನು ನೋಡುವುದಾದರೆ,

    (ಒಂದು ದಿನಕ್ಕೆ ವಸೂಲಿಯಾಗುವ ಹಣ) ಅಂದಾಜು ಲೆಕ್ಕದಲ್ಲಿ
    1 ಸಾವಿರ ವ್ಯಾಪಾರಿಗಳಿಂದ ವಸೂಲಿ
    ಒಂದು ದಿನಕ್ಕೆ 30 ರೂ. 30 ಜನರಿಂದ ವಸೂಲಿ ಮಾಡಿದರೂ ಒಂದು ದಿನಕ್ಕೆ 90 ಸಾವಿರ ರೂ.

    ಇದು ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಸೂಲಿಯಾಗುವ ಹಣ. ದೊಡ್ಡ ದೊಡ್ಡ ಅಂಗಡಿಗಳಲ್ಲಿ 50, 60 ರೂ.ಯಂತೆ ವಸೂಲಿ ಮಾಡುತ್ತಾರೆ. ಇವೆಲ್ಲವನ್ನು ಲೆಕ್ಕಚಾರ ಮಾಡಿದರೆ, ದಿನಕ್ಕೆ ಏನಿಲ್ಲಾ ಅಂದರೂ 2 ಲಕ್ಷ ರೂ. ದಾಟುತ್ತೆ. ತಿಂಗಳಿಗೆ ಮೈ ಬಗ್ಗಿಸದೆ, ಬೆವರು ಸುರಿಸದೇ ಪುಕ್ಕಟ್ಟೆಯಾಗಿ ಅಕ್ರಮವಾಗಿ ಸಂಪಾದಿಸುವ ಹಣವಿದು. ಹಾಡಹಗಲೇ ಈ ವಸೂಲಿ ದಂಧೆ ನಡೆಯುತ್ತಿದ್ದರೂ ನಮ್ಮ ಬೆಂಗಳೂರು ಪೊಲೀಸ್ ಕಮೀಷನರ್ ಕಣ್ಣಿಗೆ ಬಿದ್ದಿಲ್ವಾ ಎಂದು ಬಡ ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.

  • ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

    ಪ್ರಚಾರದ ಖರ್ಚಿಗೆ ಸುಮಲತಾರಿಗೆ ಹಣ ನೀಡಿ ಹಾರೈಸಿದ ಮಹಿಳಾ ವ್ಯಾಪಾರಸ್ಥರು!

    -ಅಂಬಿ ಇಷ್ಟದ ಮಿಠಾಯಿ ಸವಿದ ಪಕ್ಷೇತರ ಅಭ್ಯರ್ಥಿ

    ಮಂಡ್ಯ: ಇಂದು ಬೆಳ್ಳಂಬೆಳಗ್ಗೆ ಮಂಡ್ಯದ ಮಾರುಕಟ್ಟೆಯಲ್ಲಿ ಸುಮಲತಾ ಅಂಬರೀಶ್ ಪ್ರಚಾರ ಆರಂಭ ಮಾಡಿದ್ದು, ಅಲ್ಲಿ ಕೆಲ ಮಹಿಳಾ ವ್ಯಾಪಾರಸ್ಥರು ಹಾಗೂ ಅಂಬಿ ಅಭಿಮಾನಿಗಳು ಪ್ರೀತಿಯಿಂದ ಪ್ರಚಾರದ ಖರ್ಚಿಗೆ ಹಣ ನೀಡಿದಷ್ಟೇ ಅಲ್ಲದೆ ಸೌತೆಕಾಯಿ, ಕಿತ್ತಳೆ ಹಣ್ಣು, ಮಿಠಾಯಿ ನೀಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ಲೋಕಸಮರಕ್ಕೆ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯ ಮಾರುಕಟ್ಟೆಯಲ್ಲಿ ಪ್ರಚಾರಕ್ಕೆ ತೆರೆಳಿದ್ದ ವೇಳೆ ಅಂಬರೀಶ್ ಅಭಿಮಾನಿಗಳು, ಸುಮಲತಾರನ್ನು ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲದೆ ಕೆಲ ಮಹಿಳಾ ವ್ಯಾಪಾರಿಗಳು ಸುಮಲತಾರಿಗೆ ಪ್ರಚಾರದ ಖರ್ಚಿಗೆ ಕೊಂಚ ಹಣವನ್ನು ಕೂಡ ನೀಡಿದ್ದಾರೆ. ಹಾಗೆಯೇ ವ್ಯಾಪಾರ ಮಾಡುತ್ತಿದ್ದ ನಾವು ಸಂತೋಷದಿಂದ ಹಣ ಕೊಟ್ಟಿದ್ದೇವೆ. ಅವರು ಗೆಲ್ಲಲಿ ಎಂದು ಹಣ ಕೊಟ್ಟಿದ್ದೇವೆ. ನಮಗೆ ಏನು ಮಾಡಬೇಕೋ ಅದನ್ನು ಅವರು ಗೆದ್ದ ನಂತರ ಮಾಡಲಿ. ನಮ್ಮಂಥ ಬಡವರನ್ನು ಕಾಪಾಡಲಿ ಎಂದು ಕಿರುಕಾಣಿಕೆ ನೀಡಿದ ವೃದ್ಧೆಯೊಬ್ಬರು ಹೇಳಿದರು.

    ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ಚಿಕ್ಕ ಮಂಡ್ಯ ರಸ್ತೆಯಲ್ಲಿ ಇರುವ ಮಿಠಾಯಿ ಅಂಗಡಿ ಹೋಗಿ ಮಿಠಾಯಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಆದ್ದರಿಂದ ಪ್ರಚಾರದ ವೇಳೆ ಮಿಠಾಯಿ ಅಂಗಡಿ ಮಾಲೀಕ ಚಂದ್ರು, ಅಂಬಿ ಅವರ ಇಷ್ಟದ ಮಿಠಾಯಿಯನ್ನು ಸುಮಲತಾರಿಗೆ ನೀಡಿ ಖುಷಿಪಟ್ಟಿದ್ದಾರೆ.

    ಅಂಬರೀಶ್ ಅವರು ಮಾರುಕಟ್ಟೆಗೆ ಬಂದಾಗ ತಾವೇ ಖುದ್ದಾಗಿ ಚಂದ್ರು ಅವರ ಮಿಠಾಯಿ ಅಂಗಡಿಗೆ ಹೋಗಿ ಬೆಲ್ಲದ ಮಿಠಾಯಿ ಖರೀದಿಸಿ ತಿನ್ನುತ್ತಿದ್ದರು. ಅಲ್ಲದೆ ಅಂಬರೀಶ್‍ರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವವರು ಕೂಡ ಚಂದ್ರು ಅಂಗಡಿಯಿಂದ ಬೆಲ್ಲದ ಮಿಠಾಯಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಹೀಗಾಗಿ ಸುಮಲತಾ ಅವರು ಮಾರ್ಕೆಟ್‍ಗೆ ಬಂದ ವಿಷಯ ತಿಳಿದ ಚಂದ್ರು, ಅಭಿಮಾನದಿಂದ ಅವರಿಗೆ ಮಿಠಾಯಿ ತಂದುಕೊಟ್ಟರು. ಬಳಿಕ ಅಭಿಮಾನಿ ಪ್ರೀತಿಗೆ ಸೋತ ಸುಮಲತಾ, ಅಂಬರೀಶ್ ನೆನಪಿಗಾಗಿ ಮಾರುಕಟ್ಟೆಗೆ ಬಂದಾಗ ನಿಮ್ಮ ಅಂಗಡಿಗೆ ನಾನೇ ಬಂದು ಮಿಠಾಯಿ ತಿನ್ನುತ್ತೇನೆ ಎಂದು ಸಂತೋಷದಿಂದ ಹೇಳಿಕೊಂಡರು.

  • ಕೈ ಕಾರ್ಯಕರ್ತನ ಮೇಲೆ ಹಲ್ಲೆ- ಶಿವಾಜಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

    ಕೈ ಕಾರ್ಯಕರ್ತನ ಮೇಲೆ ಹಲ್ಲೆ- ಶಿವಾಜಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

    ಬೆಂಗಳೂರು: ಕಾರ್ಯಕರ್ತನ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶಿವಾಜಿನಗರದಲ್ಲಿ ನಡೆದಿದೆ.

    ಚರ್ಚ್ ರಸ್ತೆಯಲ್ಲಿ ಸಂಚಾರ ಪೊಲೀಸರು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಕಾರ್ಯ ಮಾಡುತ್ತಿದ್ದರು. ಈ ವೇಳೆ  ಆ ಏರಿಯಾದ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಆಗಮಿಸಿ ವ್ಯಾಪಾರಸ್ಥರ ಪರವಾಗಿ ಮಾತನಾಡಿದ್ದಾರೆ.

    ಈ ಸಂದರ್ಭದಲ್ಲಿ ಪರಸ್ಪರ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾದಿಕ್ ಎಂಬಾತನ ಮೇಲೆ ಪೊಲೀಸರು ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಬಳಿಕ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಶಿವಾಜಿನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ಸಂಚಾರ ಪೊಲೀಸರು ಗಾಯಗೊಂಡಿದ್ದು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ. ಸದ್ಯಕ್ಕೆ ಪೊಲೀಸ್ ಠಾಣೆಯ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=IpETJy-IqIA