Tag: ವ್ಯಾಗನ್ ಆರ್

  • ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಪಡೆದ ವ್ಯಾಗನ್ ಆರ್ – 2 ಸ್ಟಾರ್ ಪಡೆದ ಆಲ್ಟೊ K10

    ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಪಡೆದ ವ್ಯಾಗನ್ ಆರ್ – 2 ಸ್ಟಾರ್ ಪಡೆದ ಆಲ್ಟೊ K10

    ನವದೆಹಲಿ: ಭಾರತದಲ್ಲಿ ತಯಾರಿಸಿದ ಮಾರುತಿ ಸುಜುಕಿ ವ್ಯಾಗನ್ ಆರ್ (Wagon R) ಮತ್ತು ಆಲ್ಟೊ K10 (Alto K10) ಗ್ಲೋಬಲ್ ಎನ್‌ಸಿಎಪಿ(Global NCAP) ಕ್ರ್ಯಾಶ್ ಟೆಸ್ಟ್‌(Crash Test)ನಲ್ಲಿ ಕಳಪೆ ಸಾಧನೆ ತೋರಿ ಕಾರು ಸುರಕ್ಷತೆ ವಿಷಯದಲ್ಲಿ ಭಾರೀ ನಿರಾಸೆ ಮೂಡಿಸಿವೆ.

    ವ್ಯಾಗನ್ ಆರ್
    ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದ (Safercarsforindia) ಅಡಿಯಲ್ಲಿ ಗ್ಲೋಬಲ್ ಎನ್‌ಸಿಎಪಿ ವ್ಯಾಗನ್ ಆರ್ ಕಾರನ್ನು ಕ್ರ್ಯಾಶ್ ಟೆಸ್ಟ್ ಮಾಡಿದೆ. ಈ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಕೇವಲ ಒಂದು ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಗಾಗಿ ಸೊನ್ನೆ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಈ ಹಿಂದೆ ವ್ಯಾಗನ್ ಆರ್ ಕಾರನ್ನು 2019ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿತ್ತು. ಆಗ ಈ ಕಾರಿಗೆ 2 ಸ್ಟಾರ್ ರೇಟಿಂಗ್ ಸಿಕ್ಕಿತ್ತು. ಇದನ್ನೂ ಓದಿ: ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!

    ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ವ್ಯಾಗನ್ ಆರ್ 34ಕ್ಕೆ 19.69 ಅಂಕಗಳನ್ನಷ್ಟೇ ಪಡೆಯಲು ಸಫಲವಾಯಿತು. ಈ ಕಾರು ಚಾಲಕ ಮತ್ತು ಪ್ರಯಾಣಿಕರಿಗೆ ತಲೆ ಮತ್ತು ಕುತ್ತಿಗೆ ರಕ್ಷಣೆಯ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ ಚಾಲಕನ ಎದೆಯ ಭಾಗದ ಸುರಕ್ಷತೆಯು ತುಂಬಾ ದುರ್ಬಲವಾಗಿದೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

     

    ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ ವ್ಯಾಗನ್ ಆರ್ 49 ರಲ್ಲಿ ಕೇವಲ 3.40 ಅಂಕಗಳನ್ನು ಪಡೆದುಕೊಂಡಿದೆ. ಅಂದರೆ ಈ ವಿಭಾಗದಲ್ಲಿ ಕಾರು 0 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ (ISOFIX Child Seat Mount) ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ (Child Restraint System) ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ.

    ಆಲ್ಟೊ K10
    ಗ್ಲೋಬಲ್ ಎನ್‌ಸಿಎಪಿ ಆಲ್ಟೊ K10 ಕಾರನ್ನೂ ಕ್ರ್ಯಾಶ್ ಟೆಸ್ಟ್ ಮಾಡಿದೆ. ಆಲ್ಟೊ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವ್ಯಾಗನ್ ಆರ್ ಕಾರಿಗಿಂತ ಸ್ವಲ್ಪ ಉತ್ತಮ ಸಾಧನೆ ತೋರಿ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಆದರೆ ಮಕ್ಕಳ ಸುರಕ್ಷತೆಯಲ್ಲಿ ಶೂನ್ಯ ರೇಟಿಂಗ್ ಪಡೆದಿದೆ.

    ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಆಲ್ಟೊ K10 34ಕ್ಕೆ 21.67 ಅಂಕಗಳನ್ನು ಗಳಿಸಿದರೆ, ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ 49ಕ್ಕೆ 3.52 ಅಂಕಗಳನ್ನಷ್ಟೇ ಗಳಿಸಿದೆ. ಈ ಕಾರಿನಲ್ಲೂ ಕೂಡ ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಇಲ್ಲ. ಮಾರುತಿ ಸುಜುಕಿ ಕಂಪನಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ.

  • ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನವದೆಹಲಿ: ಈ ವರ್ಷದ ಆಗಸ್ಟ್ 3 ರಿಂದ ಸೆಪ್ಟೆಂಬರ್ 1 ರ ನಡುವೆ ತಯಾರಿಸಲಾದ ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ ಮತ್ತು ಇಗ್ನಿಸ್(Wagon R, Celerio, Ignis) ಕಾರುಗಳನ್ನು ಮಾರುತಿ ಸುಜುಕಿ(Maruti Suzuki) ಕಂಪನಿ ಹಿಂದಕ್ಕೆ ಪಡೆದಿದೆ.

    ಹಿಂಬದಿಯ ಬ್ರೇಕ್ ಅಸೆಂಬ್ಲಿ ಪಿನ್‌ನಲ್ಲಿ ದೋಷ ಇರುವ ಕಾರಣ 9,925 ಯುನಿಟ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಪ್ರಕಟಿಸಿದೆ. ಇದನ್ನೂ ಓದಿ: ಮಾರುತಿಗೆ ಬಂಪರ್‌ – ನಿವ್ವಳ ಲಾಭ 4 ಪಟ್ಟು ಏರಿಕೆ, ಇನ್ನೂ 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ

    ಹಿಂಭಾಗದ ಬ್ರೇಕ್(Rear Brake) ಅಸೆಂಬ್ಲಿ ಪಿನ್‌ನಲ್ಲಿ (‘Part’) ದೋಷ ಇದ್ದ ಕಾರಣ ವಿಚಿತ್ರವಾದ ಶಬ್ದವನ್ನು ಉಂಟುಮಾಡುತ್ತಿತ್ತು. ದೀರ್ಘ ಅವಧಿಯಲ್ಲಿ ಈ ದೋಷವು ಬ್ರೇಕ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ.

    ಗ್ರಾಹಕರ ಸುರಕ್ಷತೆಯನ್ನು ಪರಿಗಣಿಸಿ, ತಪಾಸಣೆಗಾಗಿ ವಾಹನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ದೋಷಯುಕ್ತ ಭಾಗವನ್ನು ಉಚಿತವಾಗಿ ಬದಲಾಯಿಸಲಾಗುವುದು. ಗ್ರಾಹಕರು ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಬ್ರೇಕ್‌ ಕಿಟ್‌ ಅನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಕಂಪನಿ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • 40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ ಸುಜುಕಿ

    40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ ಸುಜುಕಿ

    ನವದೆಹಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ 40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದೆ.

    2018ರ ನವೆಂಬರ್ 15 ರಿಂದ 2019ರ ಆಗಸ್ಟ್ 12 ರವರೆಗೆ ತಯಾರಿಸಲಾದ 1 ಲೀಟರ್ ಎಂಜಿನ್ ಸಾಮರ್ಥ್ಯದ ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದಿದೆ.

    ಸುರಕ್ಷಾ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾರುಗಳನ್ನು ಮರಳಿ ಪಡೆಯುತ್ತಿದ್ದೇವೆ. ಇಂಧನದ ಕೊಳವೆ ಮತ್ತು ಮೆಟಲ್ ಕ್ಲ್ಯಾಂಪ್ ನಲ್ಲಿ ದೋಷಗಳಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಆಗಸ್ಟ್ 24 ರಿಂದ ಮೇಲೆ ತಿಳಿಸಿದ ಅವಧಿಯಲ್ಲಿ ಕಾರು ಖರೀದಿಸಿದ್ದಲ್ಲಿ ಮಾರುತಿ ಸುಜುಕಿ ಡೀಲರ್ ಸಂಪರ್ಕಿಸಿ ದೋಷಗೊಂಡಿರುವ ಭಾಗವನ್ನು ಉಚಿತವಾಗಿ ಬದಲಾಯಿಸಿಕೊಳ್ಳಬಹುದು. ಸಂದೇಹವಿದ್ದಲ್ಲಿ ಗ್ರಾಹಕರು ಮಾರುತಿ ಸುಜುಕಿ ವೆಬ್‍ಸೈಟಿಗೆ ಭೇಟಿ ನೀಡಿ ಚಾಸಿ ನಂಬರ್ ನಮೂದಿಸಿ ಪರಿಶೀಲಿಸಿಕೊಳ್ಳಬಹುದು.

    2018ರಲ್ಲಿ ಮಾರುತಿ ಕಂಪನಿ ಹೊಸದಾಗಿ ಬಿಡುಗಡೆಯಾಗಿದ್ದ ಒಟ್ಟು 52,686 ಸ್ವಿಫ್ಟ್ ಮತ್ತು ಬಲೆನೊ ಕಾರುಗಳನ್ನು ಹಿಂದಕ್ಕೆ ಪಡೆದಿತ್ತು. ಬ್ರೇಕ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ಪ್ರಕಟಿಸಿತ್ತು.

    ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.36.3 ರಷ್ಟು ಇಳಿಕೆ ಕಂಡು ಬಂದಿತ್ತು. ಒಟ್ಟು 98,210 ಕಾರುಗಳು ಮಾತ್ರ ಮಾರಾಟವಾಗಿತ್ತು. ಕಳೆದ ಎರಡು ದಶಕಗಳಲ್ಲಿ ಅತಿ ಕಡಿಮೆ ಕಾರು ಮಾರಾಟವಾದ ತಿಂಗಳು ಎಂದು ಮಾರುತಿ ಹೇಳಿತ್ತು.

  • ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

    ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

    ನವದೆಹಲಿ: ಗುರುವಾರದಂದು ದೆಹಲಿ ಸಚಿವಾಲಯದ ಆವರಣದಿಂದ ಕಳ್ಳತನವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಪತ್ತೆಯಾಗಿದೆ.

    ಕಾರು ಗಜಿಯಾಬಾದ್ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಪ್ರದೇಶ ಪೊಲೀಸರು ಕಾರನ್ನು ಪತ್ತೆ ಮಾಡಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳನನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಮುಖ ಚಹರೆ ಕಾಣಿಸಿದ್ದು, ಆತನ ಫೋಟೋವನ್ನ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಹಂಚಿದ್ದಾರೆ.

    ಕಾರ್ ಕಳ್ಳತನವಾಗಿದ್ದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರದಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಪತ್ರ ಬರೆದಿದ್ದರು. ದೆಹಲಿ ಸಚಿವಾಲಯದ ಹೊರಗಡೆ ನನ್ನ ಕಾರು ಕಳ್ಳತನವಾಗಿದೆ. ನನ್ನ ಕಾರ್ ಕಳ್ಳತನವಾಗಿದೆ ಅನ್ನೋದು ಚಿಕ್ಕ ವಿಚಾರವೇ. ಆದ್ರೆ ದೆಹಲಿ ಸಚಿವಾಲಯದ ಹೊರಗಡೆ ಕಳ್ಳತನವಾಗಿದೆ ಅನ್ನೋದು ಕಾನೂನು ಸುವ್ಯವಸ್ಥೆ ತ್ವರಿತವಾಗಿ ಕ್ಷೀಣಿಸುತ್ತಿದೆ ಎಂಬುದನ್ನ ಸೂಚಿಸುತ್ತಿದೆ ಎಂದು ಕೇಜ್ರೀವಾಲ್ ಪತ್ರದಲ್ಲಿ ಹೇಳಿದ್ದರು.

    ಅಲ್ಲದೆ ದೆಹಲಿ ಪೊಲೀಸರನ್ನ ಕುರಿತು “ನಿಮ್ಮ ಗಮನ ಎಲ್ಲಿದೆ” ಎಂದು ಟ್ವೀಟ್ ಮಾಡಿದ್ದರು.

    ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ  ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆ ಮಾಡಿದ್ದರು. ಆರಂಭದಲ್ಲಿ ಆಪ್ ಪ್ರಚಾರ ಕಾರ್ಯದ ವೇಳೆ ಈ ಕಾರು ಮೂಲಕವೇ ಕೇಜ್ರಿವಾಲ್ ಪ್ರಚಾರಕ್ಕೆ ತೆರಳುತ್ತಿದ್ದರು.