Tag: ವ್ಯಾಕ್ಸಿನ್

  • ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ

    ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ

    – ನನ್ನ ಮಗ ದೇಶ ಸೇವೆಯಲ್ಲ, ವಿಶ್ವಸೇವೆ ಮಾಡ್ತಿದ್ದಾನೆ
    – ಎರಡು ತಿಂಗಳಿನಿಂದ ಕೊರೊನಾಗೆ ವಾಕ್ಸಿನ್ ಸಂಶೋಧನೆ

    ಮೈಸೂರು: ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಯುರೋಪಿಯನ್ ರಾಷ್ಟ್ರಗಳು ನೇಮಿಸಿದ ತಂಡದಲ್ಲಿ ಕನ್ನಡಿಗ ಡಾ. ಮಹದೇಶ್ ಪ್ರಸಾದ್ ಅವರಿಗೆ ಸ್ಥಾನ ಸಿಕ್ಕಿದ್ದು ತಾಯಿ ಸಂತಸಗೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹದೇಶ್ ಪ್ರಸಾದ್ ಅವರ ತಾಯಿ ರತ್ನಮ್ಮ, ನನ್ನ ಮಗ ಕೊರೊನಾಗೆ ಔಷಧ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿರುವುದು ನನಗೆ ಖುಷಿಯಿದೆ ಹಾಗೂ ತುಂಬಾ ಹೆಮ್ಮೆ ಇದೆ. ನಾವು ಮೂಲತಃ ಹಾಸನದ ಅರಕಲಗೂಡಿನವರಾಗಿದ್ದು, ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಹಂತದ ಶಿಕ್ಷಣವನ್ನು ಮುಗಿಸಿದ್ದಾನೆ. ಬಿಎಸ್‍ಸಿ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾನೆ. ಎಂಎಸ್‍ಸಿ ಹಾಗೂ ಪಿಎಚ್‍ಡಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದಾನೆ ಎಂದರು. ಇದನ್ನೂ ಓದಿ: ಕೊರೊನಾ ವೈರಸ್‍ಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಕನ್ನಡಿಗ

     

    ಮಹದೇಶ್ ಈಗ ಯೂರೋಪ್‍ನ ಬೆಲ್ಜಿಯಂ ದೇಶದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೊರೊನಾಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಹೇಳಿದ್ದನು. ಅಲ್ಲದೆ ಎರಡು ತಿಂಗಳಿನಿಂದ ನಾನು ಕೊರೊನಾ ವಾಕ್ಸಿನ್ ಸಂಶೋಧನೆ ಮಾಡುತ್ತಿದ್ದೇನೆ ಎಂದು ಹೇಳಿದ್ದನು. ಆಗ ನಾನು ತುಂಬಾ ಸಂತೋಷಗೊಂಡು, ಮುಂದುವರಿಸು ಎಂದು ಹೇಳಿದ್ದೆ. ಎರಡು ತಿಂಗಳ ಹಿಂದೆಯಷ್ಟೇ ಮಹದೇಶ್ ಭಾರತಕ್ಕೆ ಬಂದಿದ್ದನು. ಈ ವೇಳೆ ತಂಡದಲ್ಲಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದನು ಎಂದು ಮಹದೇಶ್ ತಾಯಿ ಹೇಳಿದರು.

    ನನ್ನ ಮಗ ಕೊರೊನಾಗೆ ಔಷಧಿ ಕಂಡು ಹಿಡಿಯುವ ತಂಡದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಆತಂಕ ಇಲ್ಲ. ಈಗಾಗಲೇ ಕೊರೊನಾ ವೈರಸ್ ಇಡೀ ವಿಶ್ವದಲ್ಲಿ 5 ಸಾವಿರ ಜನರನ್ನು ಬಲಿ ಪಡೆದುಕೊಂಡಿದೆ. ಅಂತಹದರಲ್ಲಿ ನನ್ನ ಮಗ ಔಷಧಿ ಕಂಡು ಹಿಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತೆ ಎಂಬ ಖುಷಿ ಹಾಗೂ ಹೆಮ್ಮೆ ನನಗಿದೆ. ನನ್ನ ಮಗ ಔಷಧಿ ಕಂಡು ಹಿಡಿದು ಕೋಟ್ಯಂತರ ಜನರಿಗೆ ಉಪಯೋಗ ಆಗಲಿ ಎಂಬುದು ನಮ್ಮ ಆಶಯ ಎಂದರು.

    ಮಹದೇಶ್ ಪಿಎಚ್‍ಡಿ ಮುಗಿದ ಮೇಲೆ ಜರ್ಮನಿಯಲ್ಲಿ ಹಲವು ವರ್ಷಗಳ ಕಾಲ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಆದಾದ ಬಳಿಕ ಯುಎಸ್‍ಎ, ಸ್ವೀಡನ್‍ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾನೆ. ಇದೀಗ ಬೆಲ್ಜಿಯಂನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ. ನನಗೆ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಾನೆ. ಈ ವೇಳೆ ವ್ಯಾಕ್ಸಿನ್ ಕಂಡು ಹಿಡಿಯಲು ತುಂಬಾ ಶ್ರಮಪಡುತ್ತಿದ್ದೇವೆ. ಔಷಧಿ ಕಂಡು ಹಿಡಿದೇ ಹಿಡಿಯುತ್ತೇವೆ ಎಂದು ಹೇಳುತ್ತಾನೆ ಎಂದು ತಿಳಿಸಿದರು.

    ನನ್ನ ಮಗ ಆರೋಗ್ಯವಾಗಿದ್ದು, ಆತನ ಪತ್ನಿ ಹಾಗೂ ಮಗು ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರು ಕೂಡ ಆರೋಗ್ಯವಾಗಿದ್ದು, ನನಗೆ ಯಾವುದೇ ಆತಂಕವಿಲ್ಲ. ನನ್ನ ಮಗ ದೇಶ ಸೇವೆಯಲ್ಲ, ಇಡೀ ವಿಶ್ವ ಸೇವೆ ಮಾಡುತ್ತಿದ್ದಾನೆ. ಇದರಿಂದ ನನಗೆ ತುಂಬಾ ಹೆಮ್ಮೆ ಇದೆ. ನಮಗೆ ಖಂಡಿತ ಯಾವುದೇ ಸ್ವಾರ್ಥ ಇಲ್ಲ. ನಮ್ಮ ಮಕ್ಕಳು ದೇಶ ಸೇವೆ ಮಾಡಬೇಕೆಂದು ಚಿಕ್ಕ ವಯಸ್ಸಿನಿಂದಲೂ ಅವರಿಗೆ ಹೇಳಿಕೊಟ್ಟಿದ್ದೆವು. ನನ್ನ ಮಕ್ಕಳು ವಿಜ್ಞಾನಿಗಳಾಗಬೇಕು ಎಂದು ನಾನು ಬಯಸಿದ್ದೆ. ಹಾಗೆಯೇ ನನ್ನ ಇಬ್ಬರು ಮಕ್ಕಳು ವಿಜ್ಞಾನಿಗಳಾಗಿದ್ದಾರೆ. ನನ್ನ ಕಿರಿಯ ಮಗ ಯೂರೋಪ್‍ನ ಫಿನ್‍ಲ್ಯಾಂಡ್‍ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ನಾನು ನನ್ನ ಮಗನಿಗೆ ಈ ಸಂಶೋಧನೆಯನ್ನು ಮುಂದುವರಿಸು ಎಂದು ಹೇಳುತ್ತೇನೆ. ಇಡೀ ವಿಶ್ವಕ್ಕೆ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ ಔಷಧಿ ಕಂಡು ಹಿಡಿದು ಅದನ್ನು ನಿರ್ಮೂಲನೆ ಮಾಡು ಎಂದು ನಾನು ನನ್ನ ಮಗನಿಗೆ ಹೇಳುತ್ತೇನೆ ಎಂದು ಮಹದೇಶ್ ಪ್ರಸಾದ್ ಅವರ ತಾಯಿ ಹೇಳಿದರು.

  • ಕೊರೊನಾ ವೈರಸ್‍ಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಕನ್ನಡಿಗ

    ಕೊರೊನಾ ವೈರಸ್‍ಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಕನ್ನಡಿಗ

    – ಸದ್ಯ ಬೆಲ್ಜಿಯಂನಲ್ಲಿರೋ ಮಹದೇಶ್ ಪ್ರಸಾದ್
    – ಹಾಸನ ಮೂಲದ ವಿಜ್ಞಾನಿಗೆ ಟೀಂನಲ್ಲಿ ಸ್ಥಾನ

    ಹಾಸನ: ಕೊರೊನಾ ವೈರಸ್‍ಗೆ ವ್ಯಾಕ್ಸಿನ್ ಕಂಡುಹಿಡಿಯುವ ತಂಡದಲ್ಲಿ ಹಾಸನ ಮೂಲದ ವ್ಯಕ್ತಿ ಸ್ಥಾನ ಪಡೆದಿದ್ದಾರೆ.

    ಜಿಲ್ಲೆಯ ಅರಕಲಗೂಡು ತಾಲೂಕಿನ ಮಹದೇಶ ಪ್ರಸಾದ್ ಎಂಬವರು ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಹದೇಶ್ ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದರು. ವಿದೇಶದಲ್ಲಿರುವ ವಿಜ್ಞಾನಿಗಳು ಹಿಂದಿರುಗಿ ಎಂಬ ಪ್ರಧಾನಿ ಮೋದಿ ಕರೆ ಮೆರೆಗೆ ಮಹದೇಶ್ ಭಾರತಕ್ಕೆ ಮರಳಿದ್ದರು. ಆದರೆ ಇದೀಗ ಮತ್ತೆ ಅವರು ಬೆಲ್ಜಿಯಂಗೆ ತೆರಳಿದ್ದಾರೆ.

    ಮಹದೇಶ್ ಸಂಶೋಧನೆಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೊನಾ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು, ವಿಶ್ವ ಸಂಸ್ಥೆ ಕೊರೊನಾ ಔಷಧಿ ಹತ್ತು ತಂಡ ರಚಿಸಿತ್ತು. ಈ ತಂಡದಲ್ಲಿ ಹೆಮ್ಮೆಯ ಕನ್ನಡಿಗ ಮಹದೇಶ ಪ್ರಸಾದ್ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಮಹದೇಶ್ ಪ್ರಸಾದ್ ಕುಟುಂಬಸ್ಥರು ಮೈಸೂರಿನಲ್ಲಿ ವಾಸವಾಗಿದ್ದಾರೆ.

    ಮೈಸೂರು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ಪಿಹೆಚ್‍ಡಿ ಸ್ನಾತಕ ಪದವಿಗಳಿಸಿದ ಮೊಟ್ಟ ಮೊದಲ ಕಿರಿಯ ಎಂಬ ಹೆಗ್ಗಳಿಕೆ ಡಾ. ಮಹದೇಶ್ ಪ್ರಸಾದ್ ಅವರಿಗಿದೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆಗಾಗಿ ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಮಹದೇಶ್ ಪಾತ್ರರಾಗಿದ್ದಾರೆ.

    ಮಹದೇಶ್ 2019ರಲ್ಲಿ ಬೆಲ್ಜಿಯಂ ದೇಶದಲ್ಲಿ ವಿಸಿಟಿಂಗ್ ವೈರಾಲಜಿ ಫೆಲೋಶಿಪ್ ಅವಾರ್ಡ್, 2016ರಲ್ಲಿ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ರೀಸರ್ಚ್ ಬೋರ್ಡ್‍ನಿಂದ ಯಂಗ್ ಸೈಂಟಿಸ್ಟ್ ಅವಾರ್ಡ್, 2012ರಲ್ಲಿ ಸ್ವೀಡನ್ ದೇಶದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅವಾರ್ಡ್, 2010ರಲ್ಲಿ ಯುಎಸ್‍ಎ ದೇಶದಿಂದ ಎನ್‍ಐಹೆಚ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅವಾರ್ಡ್, 2009ರಲ್ಲಿ ಜರ್ಮನಿಯಲ್ಲಿ DAAD ಫೆಲೋಶಿಪ್ ಅವಾರ್ಡ್ ಪಡೆದಿದ್ದಾರೆ.

    ಜೊತೆಗೆ ಬಯೋಕೆಮಿಸ್ಟ್ರಿ, ವೈರಾಲಜಿ, ಸ್ಟೆಮ್ ಸೆಲ್ ಬಯಾಲಜಿ, ಟ್ಯೂಮರ್ ವೈರಾಲಜಿ, ಕ್ಯಾನ್ಸರ್ ಜೆನೆಟಿಕ್ಸ್, ಸಿಸ್ಟಂ ವ್ಯಾಕ್ಸಿನಾಲಜಿ ಸೇರಿದಂತೆ ಹಲವು ವಿಷಯಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ 16 ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೆ ಸರ್ಟಿಫೈಡ್ ಲ್ಯಾಬ್ ಅನಿಮಲ್ ಎಕ್ಸ್‍ಪರ್ಟ್ ಎಂದು ಯೂರೋಪಿಯನ್ ಕೌನ್ಸಿಲ್ ಮನ್ನಣೆ ನೀಡಿದೆ.