Tag: ವ್ಯಾಕ್ಸಿನ್

  • ಜೀವ ತೆಗೆಯೋಕೆ ವ್ಯಾಕ್ಸಿನ್ ಮಾಡಿದ್ದಾರೆ, ಹಾಕಿಸಿಕೊಂಡ್ರೆ ಮಕ್ಕಳಾಗಲ್ಲ ಅಂದ್ರು, ಅವರೇ ಕದ್ದು ಹಾಕಿಸಿಕೊಂಡ್ರು: ಸಿಟಿ ರವಿ

    ಜೀವ ತೆಗೆಯೋಕೆ ವ್ಯಾಕ್ಸಿನ್ ಮಾಡಿದ್ದಾರೆ, ಹಾಕಿಸಿಕೊಂಡ್ರೆ ಮಕ್ಕಳಾಗಲ್ಲ ಅಂದ್ರು, ಅವರೇ ಕದ್ದು ಹಾಕಿಸಿಕೊಂಡ್ರು: ಸಿಟಿ ರವಿ

    – ಆಗ ಟಾರ್ಗೆಟ್ ರೀಚ್ ಆಗ್ಲಿಲ್ಲ, ಅಪಾರ ಪ್ರಮಾಣದ ವ್ಯಾಕ್ಸಿನ್ ವೇಸ್ಟ್ ಆಗಿದೆ
    – ಪಶ್ಚಿಮ ಬಂಗಾಳದಲ್ಲಿ ಹತ್ಯಾ ರಾಜಕೀಯ ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆ

    ಚಿಕ್ಕಮಗಳೂರು: ಬಿಜೆಪಿ ವ್ಯಾಕ್ಸಿನ್, ಜೀವ ತೆಗೆಯುವುದಕ್ಕೆ ಮಾಡಿದ್ದಾರೆ. ಈ ವ್ಯಾಕ್ಸಿನ್ ತಗೊಂಡ್ರೆ ಮಕ್ಕಳಾಗಲ್ಲ ಎಂದು ಅಪಪ್ರಚಾರ ಮಾಡಿದರು. ನಂತರ ಅವರೇ ಕದ್ದು ಹೋಗಿ ವ್ಯಾಕ್ಸಿನ್ ತಗೆದುಕೊಂಡರು. ಆದರೆ ಈಗ ಜನರು ಸಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವ್ಯಾಕ್ಸಿನ್ ಕುರಿತು ರಾಜಕೀಯ ಅಪಪ್ರಚಾರ ಮಾಡಿದರು. ಈ ಹಿಂದೆ ಟಾರ್ಗೆಟ್ ರೀಚ್ ಆಗುತ್ತಿರಲಿಲ್ಲ. ಈಗ ವ್ಯಾಕ್ಸಿನ್ ಗೆ ಬೇಡಿಕೆಯಿದೆ, ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಉಪಯೋಗಿಸಿಕೊಳ್ಳದೇ ವೇಸ್ಟ್ ಆಗಿದೆ. ಇದಕ್ಕೆಲ್ಲ ಕಾರಣ ರಾಜಕೀಯ ಮುಖಂಡರು ಅನುಮಾನ ಹುಟ್ಟುಹಾಕಿದ್ದು, ಈಗ ಲಸಿಕೆಗೆ ಎಲ್ಲೆಡೆ ಅಭಾವ ಸೃಷ್ಟಿಯಾಗಿದೆ. ಇದರ ಹೊಣೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಪಶ್ಚಿಮ ಬಂಗಾಳದಲ್ಲಿ 6 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಹತ್ಯಾ ರಾಜಕೀಯ ವಿರೋಧಿಸಿ ನಾಳೆ ಬಿಜೆಪಿಯಿಂದ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಸುಮಾರು 280ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪ.ಬಂಗಾಳದ ಹತ್ಯಾ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸವಿದೆ. ಹತ್ಯಾ ರಾಜಕಾರಣವನ್ನು ಮುಂದುವರಿಸುವ ಕೆಲಸ ಟಿಎಂಸಿ ಮಾಡುತ್ತಿದೆ. ಹೀಗಾಗಿ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

  • ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ, ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ: ಸಿದ್ದರಾಮಯ್ಯ

    ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ, ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ. ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ. ಎಂಪಿ ಬಂದು ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತಾರೆ. ನಾನು ಕೂಡ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತೇನೆ, ನನಗೂ ಅನುಮತಿ ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮಹಾಮಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಾವುದೇ ತಯಾರಿ ಮಾಡಿಕೊಂಡಿಲ್ಲ. ಒಂದು ಕೋಟಿಗೆ ಆರ್ಡರ್ ಮಾಡಿದ್ದೇವೆ ಎಂದು ಹೇಳ್ತಾರೆ. ಆರೂವರೆ ಕೋಟಿ ವ್ಯಾಕ್ಸಿನ್ ಬೇಕು. ಅದು ಕೂಡ ಈ ತಿಂಗಳ ಕೊನೆಯಲ್ಲಿ ವ್ಯಾಕ್ಸಿನ್ ಸಿಗುತ್ತದೆ. ಇದು ನನಗೆ ಇರುವ ಮಾಹಿತಿ ಎಂದರು.

    ಪೋಲಿಯೊ ಅಭಿಯಾನದ ರೀತಿಯಲ್ಲಿ ವ್ಯಾಕ್ಸಿನ್ ಅಭಿಯಾನ ಆಗಬೇಕು. ದೇಶದಾದ್ಯಂತ ಅಭಿಯಾನ ಆಗಬೇಕು. ಎರಡು ಡೋಸ್ ಪ್ರತಿಯೊಬ್ಬರಿಗೂ ಹಾಕಲೇಬೇಕು. ಯಾರಿಗೆ ಅಗತ್ಯವಿದೆ ಅವರಿಗೆಲ್ಲ ವ್ಯಾಕ್ಸಿನ್ ಹಾಕಬೇಕು. ಇದನ್ನು ಸರ್ಕಾರ ಮಾಡಲೇಬೇಕು. ವೈಫಲ್ಯ ಕಂಡಿರುವ ಸರ್ಕಾರಗಳಿವು ಪ್ರಧಾನಿ ಬೇಜವಬ್ದಾರಿ ಹೇಳಿಕೆ ಕೊಡ್ತಾರೆ. 162 ಯೂನಿಟ್ ಗಳಿಗೆ ಟೆಂಡರ್ ಕರೆದಿದ್ದಾರೆ. ಎಂಟು ತಿಂಗಳಲ್ಲಿ ಕೇವಲ ಮೂವತ್ತು ಯೂನಿಟ್ ಗಳ ಕೆಲಸ ಶುರು ಮಾಡಿವೆ. 162 ರಲ್ಲಿ ಕೇವಲ 30 ಯೂನಿಟ್ ಗಳು ಕೆಲಸ ಶುರು ಮಾಡಿವೆ. ಪಿಎಂ ಆರು ಕೋಟಿ ವ್ಯಾಕ್ಸಿನ್ ಬೇರೆ ದೇಶಕ್ಕೆ ಕಳಿಸಿದ್ದಾರೆ ಎಂದು ಆರೋಪಿಸಿದರು.

    ನಮ್ಮ ದೇಶದಲ್ಲಿ ವ್ಯಾಕ್ಸಿನ್ ಇಲ್ಲ. ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ. ಎಂಪಿ ಬಂದು ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತಾರೆ. ನಾನು ಕೂಡ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತೇನೆ ನನಗೂ ಅನುಮತಿ ಕೊಡಿ. ಯಾರು ಎಂಪಿಗೆ ಅನುಮತಿ ಕೊಟ್ಟಿದ್ದು..? ಸತ್ತವರ ಅಂಕಿ ಅಂಶಗಳು ಸಹ ಸುಳ್ಳು ಹೇಳ್ತಾರೆ. ಎಚ್ಚರ ತೆಗೆದುಕೊಳ್ಳಲಿ ಎಂದು ನಾವು ಹೇಳ್ತೇವೆ. ಸರ್ಕಾರ ಜೊತೆ ಫೈಟ್ ಮಾಡ್ತಿಲ್ಲ. ನಿನ್ನೆ ಹೆಲ್ತ್ ಮಿನಿಸ್ಟರ್ ಗೆ ಫೋನ್ ಮಾಡಿದ್ದೇನೆ. ಫೋನ್ ಗೆ ಸಿಗಲ್ಲ ಹೆಲ್ತ್ ಮಿನಿಸ್ಟರ್. ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗಿದೆ ಅಂದ್ರು.

  • ಒಂದು ಕೋಟಿ ವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ: ಬೊಮ್ಮಾಯಿ

    ಒಂದು ಕೋಟಿ ವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ: ಬೊಮ್ಮಾಯಿ

    ಚಿತ್ರದುರ್ಗ: ಒಂದು ಕೋಟಿ ವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ. ಬಂದತಕ್ಷಣ ಎಲ್ಲರಿಗೂ ಲಸಿಕೆ ವಿತರಣೆ ಮಾಡುತ್ತೇವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ.

    ಚಿತ್ರದುರ್ಗದ ಎಸ್ಪಿ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೊರೊನ 2 ನೇ ಅಲೆ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಜನರಿಗಾಗಿ 1ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಆದರೆ ಲಸಿಕೆ ಇನ್ನು ಬಾರದ ಹಿನ್ನಲೆಯಲ್ಲಿ ವಿಳಂಬವಾಗಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸುವ ಬಗ್ಗೆ ನಿಶ್ಚಿತ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದಾರೆ.

    45ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ವಿತರಣೆ ಎಂದಿನಂತೆ ಮುಂದುವರಿಯಲಿದೆ. ಹೊರರಾಜ್ಯಗಳಿಂದಲೂ ಹರಡುತ್ತಿರುವ ಕೊರೊನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯದ ಗಡಿಯಲ್ಲಿ ಸೂಕ್ತ ತಪಾಸಣೆ ಮಾಡಲು ಸೂಚಿಸಿದ್ದೇನೆ. ಹಾಗೆಯೇ ಜನತಾ  ಕರ್ಫ್ಯೂ ವೇಳೆ ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕಲು ಸಹ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

    ಹಾವೇರಿಯಲ್ಲಿ ಆಕ್ಸಿಜನ್ ಸ್ಟಾಕ್ ಯುನಿಟ್ ರಚನೆಗೆ ಕ್ರಮಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಸ್ಥಾಪನೆ ಚಿಂತನೆ ನಡೆದಿದೆ. ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿ ಅವರ ಆರೋಗ್ಯ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

  • ಕೋವಿಶೀಲ್ಡ್ ದರ ಇಳಿಕೆ ಮಾಡಿದ ಸೀರಂ ಇನ್‍ಸ್ಟಿಟ್ಯೂಟ್

    ಕೋವಿಶೀಲ್ಡ್ ದರ ಇಳಿಕೆ ಮಾಡಿದ ಸೀರಂ ಇನ್‍ಸ್ಟಿಟ್ಯೂಟ್

    ಪುಣೆ: ಕೇಂದ್ರ ಸರ್ಕಾರದ ಮನವಿಗೆ ಸ್ಪಂದಿಸಿದ ಸೀರಂ ಇನ್‍ಸ್ಟಿಟ್ಯೂಟ್ ಕೋವಿಶೀಲ್ಡ್ ದರವನ್ನು ಇಳಿಕೆ ಮಾಡಿದೆ. ರಾಜ್ಯಗಳಿಗೆ ಈ ಹಿಂದೆ ನಿಗದಿ ಮಾಡಿದ್ದ 400 ರೂಪಾಯಿ ದರವನ್ನು 300 ರೂ.ಗಳಿಗೆ ಇಳಿಕೆ ಮಾಡಲಾಗಿದೆ.

    ಕೋವಿಶೀಲ್ಡ್ ಲಸಿಕೆಗೆ ಈ ಹಿಂದೆ 400 ರೂಪಾಯಿ ನಿಗದಿಯಾಗಿತ್ತು. ಇದೀಗ 100 ರೂಪಾಯಿ ಕಡಿತ ಮಾಡಿ 300 ರೂಪಾಯಿ ದರ ನಿಗದಿ ಪಡಿಸಿದೆ. ಇದರೊಂದಿಗೆ ಕೋವ್ಯಾಕ್ಸಿನ್ ದರವೂ ಇಳಿಕೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ, ರಾಜ್ಯದಲ್ಲಿ ಸೋಂಕು ಹೆಚ್ಚಾದಂತೆ ವ್ಯಾಕ್ಸಿನ್‍ಗೆ ಬೇಡಿಕೆ ಹೆಚ್ಚಾಗಿದೆ. ಜನತೆ ವ್ಯಾಕ್ಸಿನ್ ಪಡೆಯಲು ಮುಗಿಬೀಳುತ್ತಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮೂಲಕ ತಿಳಿಸಿರುವ ಸೀರಂ ಇನ್‍ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ, ಲೋಕೋಪಾಕಾರಿಯಾಗಿ ಗುರುತಿಸಿ ಕೊಂಡಿರುವ ಸೀರಂ ಇನ್‍ಸ್ಟಿಟ್ಯೂಟ್ ಲಸಿಕೆಯ ದರವನ್ನು ರಾಜ್ಯಗಳಿಗೆ ಈ ಹಿಂದೆ ನಿಗದಿ ಮಾಡಿದ್ದ 400 ರೂಪಾಯಿ ದರವನ್ನು 300 ರೂ.ಗಳಿಗೆ ಇಳಿಕೆ ಮಾಡಿದೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ರಾಜ್ಯಗಳ ಹಣ ಉಳಿಕೆಯಾಲಿದೆ. ಹಾಗೆ ಹೆಚ್ಚು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹ ಸಿಗಲಿದೆ ಮತ್ತು ಹಲವು ಜನರ ಪ್ರಾಣ ಉಳಿಯಲಿದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಫಾರ್ಮಾ ಪ್ರಮುಖ ಅಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೋಲ್ಡ್ ಲಸಿಕೆಯನ್ನು ಅಭಿವೃದ್ದಿ ಪಡಿಸಿದ್ದು, ಈಗಾಗಲೇ ಸಾವಿರಾರು ಜನ ಲಸಿಕೆಯನ್ನು ಪಡೆದಿದ್ದಾರೆ. ಹಾಗೆ ಬೇರೆ ಬೇರೆ ದೇಶಗಳಿಗೆ ವ್ಯಾಕ್ಸಿನ್‍ನ್ನು ಕಳುಹಿಸಿ ಕೊಡಲಾಗಿದೆ.

    ಇದೀಗ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ವ್ಯಾಕ್ಸಿನ್ ಪಡೆಯಲು ಕೋವಿನ್ ಆ್ಯಪ್ ಮೂಲಕ ನೋಂದಣಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

  • 2 ಡೋಸ್ ವ್ಯಾಕ್ಸಿನ್ ಅಥವಾ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಪ್ರವೇಶ!

    2 ಡೋಸ್ ವ್ಯಾಕ್ಸಿನ್ ಅಥವಾ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಪ್ರವೇಶ!

    – ಕೇರಳದ ಕಾಸರಗೋಡು ಜಿಲ್ಲೆಯ ನಗರ ಪ್ರದೇಶಗಳ ಪ್ರವೇಶಕ್ಕೆ ಮಾರ್ಗಸೂಚಿ

    ಕಾಸರಗೋಡು: ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ಕಂಡು ಕೋವಿಡ್ ನಿಯಂತ್ರಣಕ್ಕೆ ಕಾಸರಗೋಡು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹೊಸ ನಿಯಮಾವಳಿಗಳು ಏ.24ರ ಶನಿವಾರದಿಂದ ಆರಂಭಗೊಳ್ಳಲಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿದ್ದಾರೆ.

    ನಿಯಮಗಳೇನು?: 14 ದಿನಗಳ ಅವಧಿಯಲ್ಲಿ ಕೋವಿಡ್ ತಪಾಸಣೆ ನಡೆಸಿ ಪಡೆದ ನೆಗೆಟಿವ್ ಸರ್ಟಿಫಿಕೆಟ್ ಅಥವಾ ಎರಡು ಡೋಸ್ ವಾಕ್ಸಿನೇಷನ್ ನಡೆಸಿರುವ ಸರ್ಟಿಫಿಕೆಟ್ ಇರುವವರು ಮಾತ್ರ ಜಿಲ್ಲೆಯ ಪ್ರಧಾನ ಕೇಂದ್ರಗಳಾದ ಕಾಸರಗೋಡು, ಉಪ್ಪಳ, ಕುಂಬಳೆ, ಕಾಞಂಗಾಡು, ನೀಲೇಶ್ವರ, ಚೆರುವತ್ತೂರು ಪೇಟೆಗಳನ್ನು ಪ್ರವೇಶಿಸಬಹುದಾಗಿದೆ ಎಂದು ಸಭೆ ತಿಳಿಸಿದೆ. ಈ ಆದೇಶ ಅನುಷ್ಠಾನವಿರುವ ಪೇಟೆಗಳ ರಸ್ತೆಗಳ ಎರಡೂ ಬದಿಗಳಲ್ಲಿ ಪೊಲೀಸರು ತಪಾಸಣೆ ನಡೆಸುವರು. ಕೋವಿಡ್ ತಪಾಸಣೆ ಮತ್ತು ವಾಕ್ಸಿನೇಷನ್ ಸೌಲಭ್ಯಗಳೂ ಈ ತಪಾಸಣೆ ಕೇಂದ್ರಗಳಲ್ಲಿ ಇರುವುವು. ಈ ಕಟ್ಟುನಿಟ್ಟಿನ ಪ್ರದೇಶಗಳಲ್ಲಿ ತಲಾ ಒಬ್ಬ ಕಾರ್ಯಕಾರಿ ಮೆಜಿಸ್ಟ್ರೇಟ್ ಅವರನ್ನು ನೇಮಿಸಲಾಗುವುದು.

    ಕಾಸರಗೋಡು ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರದ ಸಭೆಯಲ್ಲಿ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.

    ಇಂದಿನಿಂದಲೇ ಈ ಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ತಕ್ಷಣ ಜಾರಿಗೊಳಿಸಿದಲ್ಲಿ ಸಾರ್ವಜನಿಕರಿಗೆ ಸಂಭವಿಸಬಹುದಾದ ಸಂಕಷ್ಟ ಮನಗಂಡು ಮುಂದಿನ ಶನಿವಾರದಿಂದ ಈ ನಿಯಮ ಕಟ್ಟುನಿಟ್ಟು ಜಾರಿಗೊಳಿಸಲು ಇಂದು ನಡೆದ ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

  • ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್ ಲಸಿಕೆ ತಯಾರಿ- ಅಶ್ವತ್ಥನಾರಾಯಣ

    ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್ ಲಸಿಕೆ ತಯಾರಿ- ಅಶ್ವತ್ಥನಾರಾಯಣ

    – ಆವಿಷ್ಕಾರ, ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ
    – ಫ್ರಾನ್ಸ್ ನಡುವೆ ಮಹತ್ವದ ಒಪ್ಪಂದ
    – ಫ್ರೆಂಚ್ ವಿದೇಶಾಂಗ ಸಚಿವರ ಜೊತೆ ಡಿಸಿಎಂ ಮಾತುಕತೆ

    ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ನಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳಲು ಭಾರತವು ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನು ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಲಸಿಕೆಗಳನ್ನು ಉತ್ಪಾದನೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS) ಮತ್ತು ಇಂಡೋ- ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದದ ವೇಳೆ ಮಾತನಾಡಿದ ಅಶ್ವತ್ಥನಾರಾಯಣ ಅವರು, “ಸದ್ಯಕ್ಕೆ ಮಾಸಿಕ 7 ಕೋಟಿ ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಇದಕ್ಕೆ ಇನ್ನೂ 10 ಕೋಟಿ ಲಸಿಕೆ ಸೇರಲಿದೆ. ತದ ನಂತರ ಕರ್ನಾಟಕವೂ ಸೇರಿ ದೇಶಾದ್ಯಂತ ಲಸಿಕೆ ಅಭಿಯಾನ ಮತ್ತಷ್ಟು ವೇಗಗೊಳ್ಳಲಿದೆ. ಇದರ ಜತೆ ಮತ್ತಷ್ಟು ಹೊಸ ಲಸಿಕೆಗಳು ಕೂಡ ಬರಲಿವೆ. ಅವು ರಾಜ್ಯಕ್ಕೂ ಲಭ್ಯವಾಗಲಿವೆ” ಎಂದರು.

    ಕೋವಿಡ್ ಮತ್ತಿತರೆ ಜಾಗತಿಕ ಸವಾಲುಗಳ ನಡುವೆಯೂ ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಮೇಲ್ಮುಖವಾಗಿಯೇ ಇದೆ. ಅದಕ್ಕೂ ಮೊದಲು, ಅಂದರೆ, 2000ರಿಂದ 2019ರವರೆಗೆ ರಾಜ್ಯಕ್ಕೆ 49.7 ಶತಕೋಟಿ ಡಾಲರ್ ವಿದೇಶಿ ಹೂಡಿಕೆ ಹರಿದುಬಂದಿದೆ. ವಿದೇಶಿ ಹೂಡಿಕೆ ಒಳಹರಿವಿನಲ್ಲಿ ರಾಜ್ಯವು ಮಹಾರಾಷ್ಟ್ರ ಮತ್ತು ನವದೆಹಲಿಯ ನಂತರ ಮೂರನೇ ಅಗ್ರರಾಜ್ಯವಾಗಿದೆ. ಕೋವಿಡ್‍ಗೂ ಮೊದಲು ಕರ್ನಾಟಕ ಹೂಡಿಕೆ ಅತ್ಯುತ್ತಮ ತಾಣವಾಗಿತ್ತು. ಅದೇ ರೀತಿ ಕೋವಿಡ್ಡೋತ್ತರ ಕಾಲದಲ್ಲಿಯೂ ಹೂಡಿಕೆಗೆ ಪ್ರಶಸ್ತ್ಯ ನೆಲೆಯಾಗಿದೆ ಎಂದು ನುಡಿದರು.

    ಮಾಹಿತಿ ತಂತ್ರಜ್ಞಾನ (ಐಟಿ) ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಕರ್ನಾಟಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಐಟಿ ರಫ್ತಿಗೆ ಕರ್ನಾಟಕ ಅತಿದೊಡ್ಡ ಕೊಡುಗೆ ಶೇ.40ರಷ್ಟಿ ಇದೆ. ಇದು ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ಹೆಚ್ಚು ಹಾಗೂ ಅದರಲ್ಲಿ ಕರ್ನಾಟಕ ಮತ್ತಿತರೆ ರಾಜ್ಯಗಳ ನಡುವೆ ಭಾರೀ ಅಂತರವಿದೆ. ಕೈಗಾರಿಕೆ, ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ನಾಟಕವು ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಒಟ್ಟು ದೇಶಿಯ ಉತ್ಪನ್ನದಲ್ಲಿ (GSDP) 220 ಶತಕೋಟಿ ಡಾಲರ್ ಹೊಂದಿದೆ. ಮುಖ್ಯವಾಗಿ ಐಟಿ, ಬಿಟಿ, ಇಎಸ್‍ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ) ಮತ್ತು ಎವಿಜಿಸಿ (ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಮುಂತಾದ ಕ್ಷೇತ್ರಗಳಿಗಾಗಿ ಪ್ರತ್ಯೇಕ ನೀತಿಗಳನ್ನೂ ರೂಪಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ತಿಳಿಸಿದರು.

    ಈ ಒಪ್ಪಂದ ಬಹಳ ಮಹತ್ವದ್ದು:
    ಮೊದಲಿನಿಂದಲೂ ಭಾರತ ಮತ್ತು ಫ್ರಾನ್ಸ್ ಸಹಜ ಪಾಲುದಾರ ದೇಶಗಳಾಗಿವೆಯಲ್ಲದೆ ಸಾಂಸ್ಕೃತಿಕ, ಆರ್ಥಿಕ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳು ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಫ್ರಾನ್ಸ್ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS)ಮತ್ತು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಒಪ್ಪಂದದ ಮೂಲಕ ಭಾರತ ಮತ್ತು ಫ್ರಾನ್ಸ್ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಕರ್ನಾಟಕದ ಪಾತ್ರ ಮುನ್ನೆಲೆಗೆ ಬಂದಂತೆ ಆಗಿದೆ. ತಂತ್ರಜ್ಞಾನ, ಸ್ಟಾರ್ಟ್ ಆಪ್ ಇನ್ನಿತರೆ ಕ್ಷೇತ್ರಗಳಲ್ಲಿ ರಾಜ್ಯವು ಫ್ರಾನ್ಸ್ ಜತೆ ಮತ್ತಷ್ಟು ನಿಕಟವಾಗಿ ಕೆಲಸ ಮಾಡಲಿದೆ. ಒಪ್ಪಂದವು ಎರಡೂ ದೇಶಗಳ ನಡುವಿನ ನಾವೀನ್ಯತಾ ಸಹಯೋಗದ ಬೆಳವಣಿಗೆಗೆ ಪ್ರಮುಖ ಮೈಲಿಗಲ್ಲು. ಈ ಒಪ್ಪಂದವು ಎರಡೂ ದೇಶಗಳ ಉದ್ಯಮಶೀಲತೆ ಮತ್ತು ಆವಿಷ್ಕಾರದ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.

    ಒಪ್ಪಂದಕ್ಕೆ ಐಟಿ ಇಲಾಖೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಯಹೋನನ್ ಸ್ಯಾಮ್ಯುಯಲ್ ಅಂಕಿತ ಹಾಕಿದರು. ಒಪ್ಪಂದ ಏರ್ಪಡುವುದಕ್ಕೂ ಮುನ್ನ ಡಿಸಿಎಂ ಡಾ.ಅಶ್ವತ್ಥನಾರಾಯಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು ಫ್ರಾನ್ಸ್ ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೀನ್ ವಿಯಾಸ್ ಲೆ ಡ್ರಿಯಾನ್ ಹಾಗೂ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯಲ್ ಲೆನಿಯಾನ್, ಬೆಂಗಳೂರು ಫ್ರಾನ್ಸ್ ರಾಯಭಾರ ಕಚೇರಿಯ ಕಾನ್ಸುಲೇಟ್ ಜನರಲ್ ಮಾರ್ಜೋರಿ ವ್ಯಾನ್‍ಬೆಲಿಂಗ್ಹೆಮ್ ಜತೆ ಮಾತುಕತೆ ನಡೆಸಿದರು. ಕಾರ್ಯಕ್ರಮದಲ್ಲಿ ಐಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಚಂಪಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಚೀನಾ ವ್ಯಾಕ್ಸಿನ್ ಪಡೆದ ಇಮ್ರಾನ್ ಖಾನ್‍ಗೆ ಕೊರೊನಾ ಪಾಸಿಟಿವ್

    ಚೀನಾ ವ್ಯಾಕ್ಸಿನ್ ಪಡೆದ ಇಮ್ರಾನ್ ಖಾನ್‍ಗೆ ಕೊರೊನಾ ಪಾಸಿಟಿವ್

    ಇಸ್ಲಾಮಾಬಾದ್: ಚೀನಾ ಅಭಿವೃದ್ಧಿಪಡಿಸಿದ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ಗೆ ಕೊರೊನಾ ಪಾಸಿಟಿವ್ ಬಂದಿದೆ.

    ಶನಿವಾರ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಈ ಕುರಿತು ನ್ಯಾಷನಲ್ ಹೆಲ್ತ್ ಸರ್ವಿಸ್‍ನ ಇಮ್ರಾನ್ ಖಾನ್ ಸ್ಪೆಷಲ್ ಅಸಿಸ್ಟೆಂಟ್ ಫೈಸಲ್ ಸುಲ್ತಾನ್ ಖಚಿತಪಡಿಸಿದ್ದಾರೆ. ಇಮ್ರಾನ್ ಖಾನ್ ಮನೆಯಲ್ಲೇ ಸೆಲ್ಫ್ ಐಸೋಲೇಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಬರೆದಿರುವ ಅವರು, ಪಿಎಂ ಇಮ್ರಾನ್ ಖಾನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ಇಮ್ರಾನ್ ಖಾನ್ ಸಹ ಈ ಬಗ್ಗೆ ಖಚಿತಪಡಿಸಿದ್ದು, ಟ್ವೀಟ್ ಮಾಡಿದ್ದಾರೆ.

    ಗುರುವಾರ ಇಮ್ರಾನ್ ಖಾನ್ ಅವರು ಚೀನಾ ತಯಾರಿಸಿದ ಸಿನೋಫಾರ್ಮ್ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು. ಈ ಲಸಿಕೆಯನ್ನು ಪ್ರಸ್ತುತ ಪಾಕಿಸ್ತಾನಕ್ಕೆ ಮಾತ್ರ ಲಭ್ಯವಾಗುವಂತೆ ತಯಾರಿಸಲಾಗಿದೆ. ಅಲ್ಲದೆ ಎರಡು ಡೋಸ್ ಪಡೆದ ಬಳಿಕ ಈ ವ್ಯಾಕ್ಸಿನ್ ತನ್ನ ಪ್ರಭಾವ ಬೀರಲಿದೆ.

    ಈ ಬಗ್ಗೆ ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದ್ದು, ಅವರಿಗೆ ಸೋಂಕು ತಗುಲುವಾಗ ಇಮ್ರಾನ್ ಖಾನ್ ಅವರು ಪೂರ್ತಿ ಪ್ರಮಾಣದಲ್ಲಿ ವ್ಯಾಕ್ಸಿನ್ ತೆಗೆದುಕೊಂಡಿರಲಿಲ್ಲ. ಇಮ್ರಾನ್ ಖಾನ್ ಅವರು ಮೊದಲ ಡೋಸ್ ಮಾತ್ರ ಪಡೆದಿದ್ದಾರೆ. ಅದೂ ಸಹ ಕೇವಲ ಎರಡು ದಿನಗಳ ಹಿಂದೆ. ಇಷ್ಟು ಬೇಗ ಯಾವುದೇ ವ್ಯಾಕ್ಸಿನ್ ಪರಿಣಾಮ ಬೀರುವುದಿಲ್ಲ. ಎರಡನೇ ಡೋಸ್ ವ್ಯಾಕ್ಸಿನ್ ಪಡೆದ ಬಳಿಕ ಎರಡ್ಮೂರು ವಾರಗಳ ನಂತರ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

    ಇಮ್ರಾನ್ ಖಾನ್ ಅವರಿಗೆ ಸಣ್ಣ ಪ್ರಮಾಣದ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಸದ ಫೈಸಲ್ ಜಾವೇದ್ ತಿಳಿಸಿದ್ದಾರೆ.

  • ಕೊರೊನಾ ವ್ಯಾಕ್ಸಿನ್ ಸರ್ಟಿಫಿಕೇಟ್‍ನಿಂದ ಮೋದಿ ಫೋಟೋ ತೆಗೆಯಲು ಸೂಚನೆ

    ಕೊರೊನಾ ವ್ಯಾಕ್ಸಿನ್ ಸರ್ಟಿಫಿಕೇಟ್‍ನಿಂದ ಮೋದಿ ಫೋಟೋ ತೆಗೆಯಲು ಸೂಚನೆ

    ನವದೆಹಲಿ: ದೇಶದ ನಾಲ್ಕು ರಾಜ್ಯಗಳಿಗೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಸರ್ಟಿಫಿಕೇಟ್ ನಿಂದ ಪ್ರಧಾನಿ ಮೋದಿಯವರ ಫೋಟೋವನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗ ಕೇಂದ್ರಕ್ಕೆ ಸೂಚನೆ ನೀಡಿದೆ.

    ಪಂಚ ರಾಜ್ಯಗಳಾದ ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಮಾರ್ಚ್ 27ರಿಂದ ನಡೆಯಲಿದೆ. ಈಗಾಗಲೇ ಐದು ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಐದು ರಾಜ್ಯಗಳಲ್ಲಿ ಕೊರೊನಾ ವ್ಯಾಕ್ಸಿನ್ ಸರ್ಟಿಫಿಕೇಟ್ ನಿಂದ ಮೋದಿ ಭಾವಚಿತ್ರವನ್ನು ತೆಗೆದು ಹಾಕುವಂತೆ ಆಯೋಗ ಸೂಚಿಸಿದೆ.

    ಕೊರೊನಾ ವ್ಯಾಕ್ಸಿನ್ ಸರ್ಟಿಫಿಕೇಟ್‍ನಲ್ಲಿ ಮೋದಿ ಅವರ ಫೋಟೋ, ಹೆಸರು ಮತ್ತು ಸಂದೇಶವನ್ನು ನಮೂದಿಸುವ ಮೂಲಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಚುನಾವಣಾಧಿಕಾರಿಯಿಂದ ಈ ಕುರಿತು ವರದಿ ನೀಡುವಂತೆ ಸೂಚಿಸಿತ್ತು.

    ಇದೀಗ ಚುನಾವಣಾ ಆಯೋಗ ಕೇಂದ್ರ ಆರೋಗ್ಯ ಇಲಾಖೆಗೆ ಮೋದಿ ಫೋಟೋವನ್ನು ವ್ಯಾಕ್ಸಿನ್ ಸರ್ಟಿಫಿಕೇಟ್ ನಿಂದ ತೆಗೆಯುವಂತೆ ಸೂಚಿಸಿದೆ. ಹಾಗೂ ಇತರ ರಾಜ್ಯಗಳಲ್ಲಿ ವ್ಯಾಕ್ಸಿನ್ ಸರ್ಟಿಫಿಕೇಟ್ ನಲ್ಲಿ ಮೋದಿ ಫೋಟೋ ಬಳಕೆಗೆ ಅನುಮತಿ ನೀಡಿದೆ.

    ದೇಶದಾದ್ಯಂತ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಹಾಗೆಯೇ ಇತ್ತ ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಕೂಡ ರಂಗೇರುತ್ತಿದೆ.

  • ದೆಹಲಿಯ 52 ಜನರ ಮೇಲೆ ಕೊರೊನಾ ಲಸಿಕೆ ಅಡ್ಡ ಪರಿಣಾಮ

    ದೆಹಲಿಯ 52 ಜನರ ಮೇಲೆ ಕೊರೊನಾ ಲಸಿಕೆ ಅಡ್ಡ ಪರಿಣಾಮ

    ನವದೆಹಲಿ: ಶನಿವಾರ ಕೋವಿಡ್-19 ಲಸಿಕೆಯನ್ನು ದೇಶದಾದ್ಯಂತ ವಿತರಿಸಲಾಯಿತು. ಕೋವಿಡ್-19 ಲಸಿಕೆ ಸ್ವೀಕರಿಸಿದ ನಂತರ ದೆಹಲಿಯಲ್ಲಿ 52 ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ದೆಹಲಿ ಸರ್ಕಾರ ಘೋಷಿಸಿದೆ.

    ದೆಹಲಿ ಪೂರ್ವ, ದೆಹಲಿ ದಕ್ಷಿಣ ಮತ್ತು ದೆಹಲಿ ಉತ್ತರ-ಪಶ್ಚಿಮ 4ರಿಂದ 5 ಪ್ರಕರಣಗಳು ಗಂಭೀರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಶ್ಚಿಮ ದೆಹಲಿಯಲ್ಲಿ 5 , ದೆಹಲಿ ಕೇಂದ್ರದಲ್ಲಿ 2, ದೆಹಲಿ ದಕ್ಷಿಣದಲ್ಲಿ 11, ನವದೆಹಲಿಯಲ್ಲಿ 2,ಆಗ್ನೇಯ ದೆಹಲಿಯಲ್ಲಿ 11 ಮತ್ತು ದೆಹಲಿ ಪಶ್ಚಿಮದಲ್ಲಿ 6 ಪ್ರಕರಣಗಳು ದಾಖಲಾಗಿವೆ.

    8,117 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದ ವೈದ್ಯಕೀಯ ಇಲಾಖೆ ಒಟ್ಟಾರೆ 4,319 ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಯಿತು.

    ರಾಜಧಾನಿ ದೆಹಲಿಯ ಒಟ್ಟು 81 ಸ್ಥಳಗಳಲ್ಲಿ ಕೋವಿಡ್-19 ವ್ಯಾಕ್ಸಿನ್ ನೀಡಲು ದೆಹಲಿ ಸರ್ಕಾರ ಘೋಷಿಸಿತ್ತು. ಇದರಲ್ಲಿ ಎನ್‍ಡಿಎಂಸಿ ಚಾರಕ್ ಪಾಲಿಕ್ ಆಸ್ಪತ್ರೆಯ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೆ ಕೋವಿಡ್-19 ಲಸಿಕೆ ಅಡ್ಡಪರಿಣಾಮ ಬೀರಿದ್ದು, ಉಸಿರಾಟ ತೊಂದರೆಯಿಂದ ಒದ್ದಾಡಿದ್ದರು. ಹಾಗಾಗಿ ಅವರನ್ನು ತೀವ್ರ ನಿಗಾ ಕೊಠಡಿಯಲ್ಲಿ ಇರಿಸಲಾಯಿತು. 30 ನಿಮಿಷಗಳ ಬಳಿಕ ಸಹಜ ಸ್ಥಿತಿಗೆ ಬಂದ ಮೇಲೆ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು ಎಂದು ದೆಹಲಿ ಪುರಸಭಾ ಅಧಿಕಾರಿ ತಿಳಿಸಿದ್ದಾರೆ.

    ವರದಿಯಲ್ಲಿ ಮೋಟಿ ಬೇಗ್ ಬಳಿ ಇರುವ ಚರಕ್ ಪಾಲಿಖ್ ಆಸ್ಪತ್ರೆಯು ದೆಹಲಿಯ 7 ಜಿಲ್ಲಾ ಆಸ್ಪತ್ರೆಗಳು ಮತ್ತು ದೆಹಲಿ ಸಿಟಿಯ 81 ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಒಟ್ಟು ಚರಕ್ ಪಾಲಿಖ್ ಆಸ್ಪತ್ರೆಯಲ್ಲಿ 43 ಸಿಬ್ಬಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

    ಶನಿವಾರ ಬೆಳಗ್ಗೆ 10.30ಕ್ಕೆ ಐತಿಹಾಸಿಕ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಶನಿವಾರ ದೇಶಾದ್ಯಂತ ಒಟ್ಟು 1,91,181 ಆರೋಗ್ಯರಕ್ಷಣಾ ಸಿಬ್ಬಂದಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. ವ್ಯಾಕ್ಸಿನೇಷನ್ ನೀಡಿದ ನಂತರ ಇಲ್ಲಿಯವರೆಗೂ ಆಸ್ಪತ್ರೆಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

  • ಕಲಬುರಗಿಗೆ 12 ಸಾವಿರ ಕೋವಿಶೀಲ್ಡ್ ವ್ಯಾಕ್ಸಿನ್

    ಕಲಬುರಗಿಗೆ 12 ಸಾವಿರ ಕೋವಿಶೀಲ್ಡ್ ವ್ಯಾಕ್ಸಿನ್

    ಕಲಬುರಗಿ: ಬೆಂಗಳೂರಿನಿಂದ 12 ಸಾವಿರ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ನನ್ನು ಸೂಕ್ತ ಪೊಲೀಸ್ ಭದ್ರತೆಯಲ್ಲಿ ಕಲಬುರಗಿಗೆ ತರಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಅವರು ಸ್ವೀಕರಿಸಿ ದಾಸ್ತಾನು ಮಾಡಿದ್ದಾರೆ.

    ಜಿಲ್ಲಾ ಆಸ್ಪತ್ರೆ, 6 ತಾಲೂಕು ಅಸ್ಪತ್ರೆ ಹಾಗೂ ಗೊಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಅಂದರೆ ಒಟ್ಟು 800 ಮಂದಿಗೆ ಇದೇ 16 ರಂದು (ಶನಿವಾರ) ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ.

    ಬೆಂಗಳೂರಿನಿಂದ ಕಲಬುರಗಿಗೆ ಪೊಲೀಸ್ ಭದ್ರತೆಯಲ್ಲಿ ವ್ಯಾಕ್ಸಿನ್ ತರಲಾಗಿದ್ದು, ಯಾದಗಿರಿ ಜಿಲ್ಲಾ ಗಡಿಯಿಂದ ವ್ಯಾಕ್ಸಿನ್ ಹಾಗೂ ಸಿಬ್ಬಂದಿ ಇದ್ದ ವಾಹನಕ್ಕೆ ಕಲಬುರಗಿ ಪೊಲೀಸರ ಭದ್ರತೆ ಒದಗಿಸಿ ವ್ಯಾಕ್ಸಿನ್ ತರಲಾಗಿದೆ.

    ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 135 ಕೇಂದ್ರ (ಆರೋಗ್ಯ ಸಂಘ- ಸಂಸ್ಥೆ)ಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಜನವರಿ 16ರಂದು 8 ಕೇಂದ್ರಗಳಲ್ಲಿ ಹಾಗೂ ಜ.18ರಿಂದ ಇನ್ನುಳಿದ ಸಂಸ್ಥೆಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಲಾಗುತ್ತದೆ.