Tag: ವ್ಯಾಕ್ಸಿನ್

  • ಲಸಿಕೆ ಪಡೆಯಲು ಭಯಪಟ್ಟು ನದಿಗೆ ಹಾರಿದ ಗ್ರಾಮಸ್ಥರು

    ಲಸಿಕೆ ಪಡೆಯಲು ಭಯಪಟ್ಟು ನದಿಗೆ ಹಾರಿದ ಗ್ರಾಮಸ್ಥರು

    ಲಕ್ನೋ: ಕೊರೊನಾ ಲಸಿಕೆ ಕುರಿತಾಗಿ ತಪ್ಪು ಕಲ್ಪನೆ, ಭಯ ಹೊಂದಿರುವ ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು, ಆರೋಗ್ಯ ಸಿಬ್ಬಂದಿಯ ಕೈಗೆ ಸಿಗದಂತೆ ತಮ್ಮ ಮನೆಗಳಿಂದ ಓಡಿಹೋಗಿ ನದಿಗೆ ಹಾರಿರುವುದು ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯ ಸಿಸೌಡಾ ಗ್ರಾಮದಲ್ಲಿ ನಡೆದಿದೆ.

     

    ಸಾರ್ವಜನಿಕರಿಗೆ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಅಧಿಕಾರಿಗಳನ್ನು ಕಂಡ ಕೆಲವುಗ್ರಾಮಸ್ಥರು ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿ ತಮ್ಮ ಮನೆಗಳಿಂದ ನದಿಯ ಕಡೆಗೆ ಓಡಿಹೋಗಿದ್ದಾರೆ. ಬಳಿಕ ಇವರನ್ನು ಆರೋಗ್ಯ ಅಧಿಕಾರಿಗಳು ಹಿಂಬಾಲಿಸಿದ್ದಾರೆ. 200ಕ್ಕೂ ಹೆಚ್ಚು ಜನರು ಆರೋಗ್ಯ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಳ್ಳಲು ನದಿ ಕಡೆಗೆ ಓಡಿದ್ದಾರೆ. ಸಿಬ್ಬಂದಿ ಹಿಂಬಾಲಿಸಿ ಬಂದಿದ್ರಿಂದ ಅವರಲ್ಲಿ ಕೆಲವು ನೀರಿಗೆ ಹಾರಿದ್ದಾರೆ.

    ಆರೋಗ್ಯಾಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡರು ಸಹ ಗ್ರಾಮಸ್ಥರು ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನದಿಯಿಂದ ಹೊರಬನ್ನಿ ಎಂದು ಮನವಿ ಮಾಡಿದ್ದಾರೆ. ಇನ್ನು ಬಲವಂತ ಮಾಡಿ ಮುಂದೆ ಹೋದರೆ ಜನರು ನೀರಿನಲ್ಲಿ ಮುಳಗಬಹುದು ಎಂದು ಭಯದಿಂದ ಅಧಿಕಾರಿಗಳು ವಾಪಾಸ್ಸಾಗಿದ್ದಾರೆ. ಒಟ್ಟು 1500 ನಿವಾಸಿಗಳಿರುವ ಈ ಗ್ರಾಮದಲ್ಲಿ ಈವರೆಗೆ ಅಧಿಕಾರಿಗಳು ಕೇವಲ 14 ಮಂದಿಗೆ ಲಸಿಕೆ ಹಾಕಲು ಸಾಧ್ಯವಾಗಿಲ್ಲ.

     

    ಜನರಲ್ಲಿ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ. ಈ ಕುರಿತಾಗಿ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದು ಬಾರಾಬಂಕಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • 24 ಗಂಟೆಗಳಲ್ಲಿ ವಿದೇಶದಿಂದ ಲಸಿಕೆ ಖರೀದಿಸಿ, ವಿತರಿಸಿ- ಕೇಂದ್ರಕ್ಕೆ ಕೇಜ್ರಿವಾಲ್ ಸಲಹೆ

    24 ಗಂಟೆಗಳಲ್ಲಿ ವಿದೇಶದಿಂದ ಲಸಿಕೆ ಖರೀದಿಸಿ, ವಿತರಿಸಿ- ಕೇಂದ್ರಕ್ಕೆ ಕೇಜ್ರಿವಾಲ್ ಸಲಹೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದು, 24 ಗಂಟೆಗಳಲ್ಲಿ ವಿದೇಶಗಳಿಂದ ಲಸಿಕೆ ತರಿಸಿ ಹಂಚಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ರಾಷ್ಟ್ರಗಳು ಅಗತ್ಯಕ್ಕೂ ಅಧಿಕ ಲಸಿಕೆಯನ್ನು ಸಂಗ್ರಹಿಸಿಟ್ಟುಕೊಂಡಿವೆ. ಅಂತಹ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿ ಲಸಿಕೆ ತರಿಸಿಕೊಳ್ಳಲಿ ಎಂದು ತಿಳಿಸಿದರು.

    ಲಸಿಕೆ ದಾಸ್ತಾನು ಖಾಲಿಯಾಗುವ ಹಿನ್ನೆಲೆ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿಗೆ 2.5 ಕೋಟಿ ಡೋಸ್ ವ್ಯಾಕ್ಸಿನ್ ಅಗತ್ಯವಿದೆ. ಆದರೆ ಮೇ ತಿಂಗಳಲ್ಲಿ ಕೇವಲ 16 ಲಕ್ಷ ಡೋಸ್ ವ್ಯಾಕ್ಸಿನ್ ಮಾತ್ರ ಲಭಿಸಿದೆ. ಜೂನ್‍ನಲ್ಲಿ ಕೇವಲ 8 ಲಕ್ಷ ಡೋಸ್ ಮಾತ್ರ ಸಿಗಬಹುದು ಎಂದು ಅಂದಾಜಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ದೆಹಲಿಯ ಒಟ್ಟಾರೆ ಜನಸಂಖ್ಯೆಯನ್ನು ಪರಿಗಣಿಸಿದರೆ, ರಾಷ್ಟ್ರ ರಾಜಧಾನಿಗೆ ಪ್ರತಿ ತಿಂಗಳು 80 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ. ಕೋವಿಡ್-19 ಲಸಿಕೆಗೆ ಹೆಚ್ಚುತ್ತಿರುವ ಬೇಡಿಕೆ ತಗ್ಗಿಸಲು ಕೇಂದ್ರ ಸರ್ಕಾರ ಕ್ರಮ ಕೂಗೊಳ್ಳಬೇಕು. ಅಲ್ಲದೆ ಕೋವ್ಯಾಕ್ಸಿನ್ ಫಾರ್ಮುಲಾವನ್ನು ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಭಾರತ್ ಬಯೋಟೆಕ್ ಕಂಪನಿ ಒಪ್ಪಿಕೊಂಡಿದ್ದು, ಲಸಿಕೆ ತಯಾರಿಸಲು ಕೇಂದ್ರ ಸರ್ಕಾರ ಎಲ್ಲ ಫಾರ್ಮಾ ಕಂಪನಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಕೆಲ ದೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಲಸಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಈ ವ್ಯಾಕ್ಸಿನ್‍ನ್ನು ಭಾರತಕ್ಕೆ ಕೊಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಳ್ಳಬೇಕು. ಅಲ್ಲದೆ ವಿದೇಶಗಳಲ್ಲಿನ ಲಸಿಕೆಯನ್ನು ಕೇವಲ 24 ಗಂಟೆಗಳಲ್ಲಿ ಕೊಂಡುಕೊಂಡು ದೇಶದಲ್ಲಿನ ಜನರಿಗೆ ವಿತರರಿಸಲಿ. ದೇಶದಲ್ಲಿ ಲಸಿಕೆ ಉತ್ಪಾದನೆಗೆ ವಿದೇಶಿ ಕಂಪನಿಗಳಿಗೂ ಅವಕಾಶ ನೀಡಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  • ವ್ಯಾಕ್ಸಿನ್ ತೆಗೆದುಕೊಳ್ಳದಂತೆ ಚರ್ಚ್‍ಗಳಲ್ಲಿ ಅಪಪ್ರಚಾರ- ಶೋಭಾ ಆರೋಪ

    ವ್ಯಾಕ್ಸಿನ್ ತೆಗೆದುಕೊಳ್ಳದಂತೆ ಚರ್ಚ್‍ಗಳಲ್ಲಿ ಅಪಪ್ರಚಾರ- ಶೋಭಾ ಆರೋಪ

    – ವಿಶ್ವದೆದುರು ಭಾರತ ಕುಗ್ಗಿಸುವಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ

    ಚಿಕ್ಕಮಗಳೂರು: ಚರ್ಚ್‍ಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬಾರದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಡಿಗೆರೆ, ಆಲ್ದೂರು ಸೇರಿದಂತೆ ಕೆಲ ಭಾಗದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಚರ್ಚ್‍ಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಚರ್ಚ್‍ಗಳಲ್ಲಿ ಹೇಳುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾರು, ಏಕೆ ಈ ರೀತಿ ಹೇಳುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದರು.

    ಬೇರೆಯವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ಆದರೆ ಅವರೇ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ. ಕ್ಯಾಥೋಲಿಕ್ ಚರ್ಚ್ ಹೇಳಿದ್ದು ಅಂತಲ್ಲ, ಬೇರೆ ಚರ್ಚ್‍ಗಳಲ್ಲಿ ಸಹ ಇರಬಹುದು. ಪ್ರೊಟೆಸ್ಟೆಂಟ್, ಸೆಂಥಕೋಸ್ಟ್ ಸೇರಿದಂತೆ ಇತ್ತೀಚೆಗೆ ಬಂದ ಚರ್ಚ್‍ಗಳಲ್ಲಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ಮೊದಲು ಕಾಂಗ್ರೆಸ್ಸಿನವರು ಕೂಡ ಇದೇ ರೀತಿ ಮಾಡಿ ಜನರ ದಿಕ್ಕು ತಪ್ಪಿಸಿದ್ದರು. ಬಳಿಕ ಕಾಂಗ್ರೆಸ್ ಮುಖಂಡರೇ ಹೋಗಿ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್‍ನ ಟೂಲ್ ಕಿಟ್ ದೇಶಕ್ಕೆ ಅವಮಾನ. ಕೊರೊನಾವನ್ನು ಇಡೀ ಜಗತ್ತೇ ಚೀನಾ ವೈರಸ್ ಎಂದು ಹೇಳುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇದು ಇಂಡಿಯಾ ವೈರಸ್, ಮೋದಿ ವೈರಸ್ ಎಂದು ದೇಶವನ್ನೇ ಅವಮಾನಿಸುತ್ತಿದೆ. ಈ ಮೂಲಕ ವಿಶ್ವದೆದುರು ದೇಶವನ್ನು ಕುಗ್ಗಿಸಿ, ಅಪರಾಧಿ ಜಾಗದಲ್ಲಿ ನಿಲ್ಲಿಸುವ ಷಡ್ಯಂತ್ರ ಕಾಂಗ್ರೆಸ್ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದು ಕಾಂಗ್ರೆಸ್‍ನ ವೋಟ್ ಬ್ಯಾಂಕ್ ರಾಜಕಾರಣ. ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಎಲ್ಲರೂ ರಾಜಕಾರಣ ಮಾಡೋಣ. ಆದರೆ ಈಗ ದೇಶದಲ್ಲಿ ಯುದ್ಧದ ಸಂದರ್ಭವಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಸರಿಯಲ್ಲ. ಚೀನಾ ನಮ್ಮ ವೈರಿ ದೇಶ, ಕಾಂಗ್ರೆಸ್‍ನವರು ಚೀನಾ ಮೀರಿಸುವ ರೀತಿ ಮಾತನಾಡುತ್ತಿದ್ದಾರೆ. ದೇಶ, ವ್ಯಾಕ್ಸಿನ್, ಮೋದಿ ವೈರಸ್, ಇಂಡಿಯಾ ವೈರಸ್ ಎಂದು ಹೇಳುವವರ ವಿರುದ್ಧ ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಚಿವ ಅಂಗಾರ, ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ವಿಧಾನ ಪರಿಷತ್ ಉಪಸಭಾಪತಿ ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಎಂ.ಪಿ.ಕುಮಾರಸ್ವಾಮಿ ಉಪಸ್ಥಿತಿರಿದ್ದರು.

  • ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ನವದೆಹಲಿ: ವ್ಯಾಕ್ಸಿನ್ ಪಡೆಯುವ ಕುರಿತು ಜಾಗೃತಿಯ ಕಾಲರ್ ಟ್ಯೂನ್ ಬಗ್ಗೆ ದೆಹಲಿ ಹೈ ಕೋರ್ಟ್ ಕಿಡಿ ಕಾರಿದ್ದು, ಸಾಕಷ್ಟು ವ್ಯಾಕ್ಸಿನ್ ಇಲ್ಲ, ಹೀಗಿರುವಾಗ ಜನ ಹೇಗೆ ಲಸಿಕೆ ಪಡೆಯಬೇಕು? ಕಿರಿಕಿರಿಯುಂಟು ಮಾಡುವ ಈ ಕಾಲರ್ ಟ್ಯೂನ್‍ನ್ನು ಇನ್ನೂ ಎಷ್ಟು ದಿನ ಕೇಳಬೇಕು ಎಂದು ದೆಹಲಿ ಹೈ ಕೋರ್ಟ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

    ಪ್ರತಿ ಬಾರಿ ಕರೆ ಮಾಡಿದಾಗ ನೀವು ಕಿರಿಕಿರಿ ಉಂಟುಮಾಡುವ ಕಾಲರ್ ಟ್ಯೂನ್ ಪ್ಲೇ ಮಾಡುತ್ತಿದ್ದೀರಿ. ಇನ್ನೂ ಎಷ್ಟು ದಿನ ಇದನ್ನು ಕೇಳಬೇಕೋ ತಿಳಿಯುತ್ತಿಲ್ಲ. ನಿಮ್ಮ ಬಳಿ ಸಾಕಷ್ಟು ಲಸಿಕೆ ಲಭ್ಯತೆ ಇದೆಯೇ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈ ಕೋರ್ಟ್ ಪ್ರಶ್ನಿಸಿದೆ. ನೀವು ಜನರಿಗೆ ಲಸಿಕೆ ನೀಡುತ್ತಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡುತ್ತಿದ್ದೀರಿ. ಯಾರಿಗೂ ಲಸಿಕೆ ಇಲ್ಲದಿದ್ದಾಗ, ಯಾರು ಲಸಿಕೆ ಹಾಕಿಸಿಕೊಳ್ಳಬೇಕು? ಈ ಸಂದೇಶದ ಅರ್ಥವೇನು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರಿದ್ದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

    ಇಂತಹ ವಿಚಾರಗಳಲ್ಲಿ ಸರ್ಕಾರ ಆವಿಷ್ಕಾರಕವಾಗಿರಬೇಕು. ಕೇವಲ ಒಂದನ್ನು ತಯಾರಿಸಿ ಯಾವಾಗಲೂ ಅದನ್ನೇ ಹಾಕುವ ಬದಲು, ಇಂತಹ ಹೆಚ್ಚಿನ ಸಂದೇಶಗಳನ್ನು ಸಿದ್ಧಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಸ್ಥಿತಿಗೆ ಸ್ಪಂದಿಸಬೇಕು. ಹೀಗಾಗಿ ವಿವಿಧ ರೀತಿಯ ಹೆಚ್ಚು ಸಂದೇಶಗಳನ್ನು ತಯಾರಿಸಿ, ಪ್ರತಿ ಬಾರಿ ಬೇರೆ ಬೇರೆ ಕಾಲರ್ ಟ್ಯೂನ್ ಕೇಳಿದಾಗ ಅವರಿಗೆ ಸಹಾಯವಾಗಬಹುದು ಎಂದು ನ್ಯಾಯಾಲಯ ಸೂಚಿಸಿದೆ.

    ಟಿವಿ ನಿರೂಪಕರು ಹಾಗೂ ನಿರ್ಮಾಪಕರ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ, ಈ ಮೂಲಕ ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅರಿವು ಮೂಡಿಸಿ. ನಾವು ಸಮಯವನ್ನು ಕಳೆಯುತ್ತಿದ್ದೇವೆ. ಕೊರೊನಾ ನಿರ್ವಹಣೆ ಮಾಹಿತಿಯನ್ನು ಟಿವಿ, ಮುದ್ರಣ ಮಾಧ್ಯಮ ಹಾಗೂ ಕಾಲರ್ ಟ್ಯೂನ್‍ಗಳ ಮೂಲಕ ಪ್ರಸಾರ ಮಾಡಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಮೇ.18ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.

  • ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ಕೋಲಾರ: ವ್ಯಾಕ್ಸಿನ್ ಹಾಕಿಸಿಕೊಳ್ಳುವ ಕ್ರೇಜ್ ಹಾಗೂ ಕೊರೊನಾ ಹೆದರಿಕೆ ಶುರುವಾಗಿದೆ. ಹಾಗಾಗಿ ವ್ಯಾಕ್ಸಿನ್‍ಗೆ ಬೇಡಿಕೆ ಸೃಷ್ಟಿಯಾಗಿರುವ ಕಾರಣ ರಾಜ್ಯದಲ್ಲಿ ಅವ್ಯವಸ್ಥೆ ಆಗಿದೆ ಎಂದು ಕೋಲಾರದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡಿದ್ದಾರೆ.

    ಕೋಲಾರದ ಜಿಲ್ಲಾ ಎಸ್‍ಎನ್‍ಆರ್ ಆಸ್ಪತ್ರೆಗೆ ಭೇಟಿ ನೀಡಿ ಬೆಡ್, ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಕುರಿತು ಸಿಎಂ ಕೂಡ ಹೇಳಿದ್ದಾರೆ. ರಾಜ್ಯದಲ್ಲಿ ಜನರು ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯಕ್ಕೆ ಬೇಕಾದ ವ್ಯಾಕ್ಸಿನ್ ನಮಗೆ ಸಿಗುತ್ತೆ ಎಂದಿದ್ದಾರೆ.

    ಕೋವಿಶೀಲ್ಡ್ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ಆದರೆ ಕೊವ್ಯಾಕ್ಸಿನ್ ಸಿಗುತ್ತಿಲ್ಲ. ರಾಜ್ಯದಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳಲೇ ಬೇಕು ಎಂದು ರಾಜ್ಯದಲ್ಲಿರುವ ವ್ಯಾಕ್ಸಿನ್ ಅವ್ಯವಸ್ಥೆ ಒಪ್ಪಿಕೊಂಡಿದ್ದಾರೆ. ಕೋವ್ಯಾಕ್ಸಿನ್ ಉತ್ಪಾದನೆ ಕಡಿಮೆಯಾಗಿದ್ದು, ನಮಗಿಂತ ಬೇರೆ ರಾಜ್ಯದಲ್ಲಿ ಹೆಚ್ಚು ಆರ್ಡರ್ ಮಾಡಿದ್ದಾರೆ. ಹಾಗಾಗಿ ಇರುವುದರಲ್ಲಿ ಅಡ್ಜಸ್ಟ್ ಮಾಡಿ ಕೊಡುತ್ತಿದ್ದಾರೆ ಎಂದರು.

    ಸೋಂಕಿನ ಪ್ರಮಾಣ ಹೆಚ್ಚಾದಂತೆ ಜನರಲ್ಲಿ ಅರಿವು ಹೆಚ್ಚಾಗಿದೆ. ಶೇ.30 ರಷ್ಟು ಸೋಂಕಿತ ಜನರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸೋಂಕು ಹರಡಲು ಮತ್ತಷ್ಟು ಕಾರಣವಾಗಿದೆ. ಲಾಕ್‍ಡೌನ್ ಅನಿವಾರ್ಯತೆಯನ್ನು ಜನರೇ ನಿರ್ಮಾಣ ಮಾಡುತ್ತಿದ್ದಾರೆ.

    ರಾಜ್ಯದಲ್ಲಿ ಕೇಸ್‍ಗಳು ಹೆಚ್ಚಾದರೆ ತಪ್ಪೇನಿಲ್ಲ, ಯಾಕೆಂದರೆ ನಮ್ಮಲ್ಲಿ ಟೆಸ್ಟಿಂಗ್‍ಗಳು ಹೆಚ್ಚಾಗುತ್ತಿದೆ. ಎರಡನೇ ಅಲೆಯಲ್ಲಿ ಏನಾಗುತ್ತದೆ ಅಂತ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಸಾಹಯಕತೆಯನ್ನ ಹೇಳಿಕೊಂಡಿದ್ದಾರೆ. ಬೆಳಿಗ್ಗೆ ಒಂದು ರೀತಿ ಇದ್ದರೆ ಸಂಜೆಗೆ ಮತ್ತೊಂದು ಥರ ದೇಹದಲ್ಲಿ ಬದಲಾಗುತ್ತದೆ. ರೋಗ ಲಕ್ಷಣ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಕೂಡಲೇ ಕಳುಹಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ, ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದರು.

  • ಲಸಿಕೆ ಪಡೆಯೋ ಹಿರಿಯರಿಗೆ ಉಚಿತ ಕಾರಿನಲ್ಲಿ ಪಿಕ್ ಆ್ಯಂಡ್ ಡ್ರಾಪ್ ವ್ಯವಸ್ಥೆ..!

    ಲಸಿಕೆ ಪಡೆಯೋ ಹಿರಿಯರಿಗೆ ಉಚಿತ ಕಾರಿನಲ್ಲಿ ಪಿಕ್ ಆ್ಯಂಡ್ ಡ್ರಾಪ್ ವ್ಯವಸ್ಥೆ..!

    ಮೈಸೂರು: ಜಿಲ್ಲೆಯಲ್ಲಿ ಲಾಕ್‍ಡೌನ್ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಸೇಫ್ ವೀಲ್ ಟ್ರಾವೆಲ್ಸ್ ಸಂಸ್ಥೆ ಮುಂದಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದೆ.

    ಮೈಸೂರು ನಗರ ವ್ಯಾಪ್ತಿಯ ಜನರಿಗೆ ಕಾರ್ ವ್ಯವಸ್ಥೆ ಮಾಡಿದ್ದು, 15 ಕಾರುಗಳನ್ನು ಇದಕ್ಕಾಗಿ ಮೀಸಲಿಟ್ಟಿದೆ. ಲಸಿಕೆ ಪಡೆಯಲು ತೆರಳುವ ಹಿರಿಯ ನಾಗರೀಕರನ್ನು ಅವರ ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಅವರು ವ್ಯಾಕ್ಸಿನ್ ಪಡೆದ ನಂತರ ವಾಪಸ್ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

    ಒಂದು ಕಾರಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ. ಇಂದಿನಿಂದ ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಈ ಸೇವೆ ಲಭ್ಯವಿದ್ದು, ದೂರವಾಣಿ ಸಂಖ್ಯೆ 0821 4001100 ಕರೆ ಮಾಡಿ ಒಂದು ದಿನ ಮುಂಚಿತವಾಗಿ ಬುಕ್ ಮಾಡಬೇಕು. ಮರುದಿನ ನಿಮ್ಮ ಮನೆ ಬಾಗಿಲಿಗೆ ಕಾರು ಬಂದು ವ್ಯಾಕ್ಸಿನ್ ಹಾಕಿಸಿ ಮನೆಗೆ ವಾಪಸ್ ಮಾಡಲಿದೆ.

  • 2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ

    2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ

    ಡಿಸಿಎಂ ನೇತೃತ್ವದ ಉನ್ನತ ಸಭೆಯಲ್ಲಿ ತೀರ್ಮಾನ

    – ಅಗತ್ಯ ಔಷಧಿ, RAT ಕಿಟ್‌, RTPCR ಕಿಟ್‌ ಖರೀದಿಗೆ ಸಮ್ಮತಿ

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ವ್ಯಾಕ್ಸಿನ್ ಬೇಡಿಕೆಯನ್ನು ಪೂರೈಸಲು ಎರಡು ಕೋಟಿ ಕೋವಿಡ್ ಲಸಿಕೆಯನ್ನು ಜಾಗತಿಕ ಟೆಂಡರ್ ಮೂಲಕ ಖರೀದಿ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    3 ಕೋಟಿ ವ್ಯಾಕ್ಸಿನ್ ಖರೀದಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್, 2 ಕೋಟಿ ಕೋವಿಶೀಲ್ಡ್ ಲಸಿಕೆ ಸೇರಿದೆ. 18 ವರ್ಷದಿಂದ ಮೇಲ್ಪಟ್ಟು ಜನರಿಗೆ ಲಸಿಕೆ ಕೊಡಲು ಆರಂಭಿಸಿದ ನಂತರ  ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಖರೀದಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ಡಿಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಆಖ್ತರ್, ಔಷಧಿ ಖರೀದಿ ಉಸ್ತುವಾರಿ ಅಂಜುಂ ಪರ್ವೇಜ್, ರಾಜ್ಯ ಔಷಧ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಕುಮಾರಿ, ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಸಭೆಯಲ್ಲಿ ಭಾಗಿಯಾಗಿದ್ದರು.

    ಸಭೆಯ ನಂತರ ಮಾಹಿತಿ ನೀಡಿದ ಡಿಸಿಎಂ, ಈವರೆಗೂ ಕೇಂದ್ರ ಸರಕಾರ ಹಂಚಿಕೆ ಮಾಡುತ್ತಿದ್ದ ಲಸಿಕೆಯನ್ನು ಬಿಟ್ಟರೆ ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಕರೆದು ಖಾಸಗಿ ಕಂಪನಿಗಳಿಂದ ಖರೀದಿ ಮಾಡಿರಲಿಲ್ಲ. ಇವತ್ತೇ ಟೆಂಡರ್ ಕರೆಯಲು ಸೂಚಿಸಲಾಗಿದ್ದು, ಯಾವ ಕಂಪನಿ ಬೇಕಾದರೂ ಟೆಂಡರ್‍ನಲ್ಲಿ ಭಾಗವಹಿಸಬಹುದು. ಏಳು ದಿನದ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಟೆಂಡರ್ ಪಡೆಯುವ ಕಂಪನಿಯು ಲಸಿಕೆಯನ್ನು ಪೂರೈಕೆ ಆರಂಭಿಸಬೇಕು ಎಂದರು.

    1 ಲಕ್ಷ ಪಲ್ಸ್ ಆಕ್ಸಿ ಮೀಟರ್ ಖರೀದಿ:

    ಸೋಂಕಿತರಿಗೆ ಅಗತ್ಯವಾದ ಪಲ್ಸಾಕ್ಸಿ ಮೀಟರ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಒಂದು ಲಕ್ಷ ಪಲ್ಸಾಕ್ಸಿ ಮೀಟರ್‍ಗಳನ್ನು ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅವುಗಳನ್ನು ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗುವುದು. ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಸೋಂಕಿತರು ಗುಣಮುಖರಾದ ನಂತರ ವಾಪಸ್ ಪಡೆಯುವುದು ಆಯಾ ಡಿಎಚ್‍ಒ & ಟಿಎಚ್‍ಒ ಹೊಣೆ. ಈ ಮೂಲಕ ಪಲ್ಸಾಕ್ಸಿ ಮೀಟರ್ ಬ್ಯಾಂಕ್ ಮಾಡುವ ಉದ್ದೇಶ ಇದೆ ಎಂದು ಡಿಸಿಎಂ ಹೇಳಿದರು.

    ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾದ ಐವರ್‍ಮೆಕ್ಟಿನ್ ಮಾತ್ರೆಯನ್ನು 10 ಲಕ್ಷ ಖರೀದಿ ಮಾಡಲಾಗಿದ್ದು, ಇದೇ 14ಕ್ಕೆ ಪೂರೈಕೆ ಶುರುವಾಗುತ್ತದೆ. ಅಲ್ಲದೆ, ಇನ್ನೂ 25 ಲಕ್ಷ ಮಾತ್ರೆ ಖರೀದಿಸುವಂತೆ ಸೂಚಿಸಿದ್ದೇನೆ. ಇದು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯ ಇರಬೇಕು. ಜತೆಗೆ, 35 ಲಕ್ಷ ಜಿಂಕ್ ಟ್ಯಾಬ್ಲೆಟ್ ಹಾಗೂ ಒಂದು ಕೋಟಿ ಕಾಲ್ಸಿಚಿನ್ ಮಾತ್ರೆಗಳನ್ನೂ ಕೂಡಲೇ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ಔಷಧಿಗಳು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು, ಆಸ್ಪತ್ರೆ ಹಾಗೂ ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಈಗ 10.50 ಲಕ್ಷ ರಾಟ್ ಕಿಟ್ ಇವೆ, ಇನ್ನೂ ವಾರಕ್ಕೆ ಆಗುತ್ತವೆ. ಈಗ ದಿನಕ್ಕೆ 50 ಸಾವಿರದಂತೆ ಪೂರೈಕೆ ಆಗುತ್ತಿವೆ. ಜತೆಗೆ, 37 ಲಕ್ಷ ಆರ್‍ಟಿಪಿಸಿಆರ್ ಕಿಟ್‍ಗಳನ್ನೂ ಖರೀದಿ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

    ರೆಮಿಡಿಸಿವರ್ ಸರಬರಾಜು ಮಾಡದ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ:

    ಇದೇ ವೇಳೆ ಮುಖ್ಯ ಕಾರ್ಯದರ್ಶಿಗಳ ಜತೆ ಮಾತನಾಡಿದ ಡಿಸಿಎಂ ಅವರು, ನೊಟೀಸ್ ಕೊಟ್ಟರೂ ಸಕಾಲಕ್ಕೆ ರೆಮಿಡಿಸಿವರ್ ಪೂರೈಕೆ ಮಾಡದ ಕಂಪನಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರನ್ನು ದಾಖಲು ಮಾಡಿಕೊಳ್ಳುವ ಮುನ್ನ ಭೌತಿಕ ಪರೀಕ್ಷೆ ನಡೆಸಿಯೇ ದಾಖಲು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಂಭೀರ ಸೋಂಕಿತರಿಗೆ ಹಾಸಿಗೆಗಳು ಸಿಗುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಲಸಿಕೆಗಾಗಿ ಹಳ್ಳಿಗಳಿಗೆ ಹೋಗುವುದು ಬೇಡ:

    ನಗರದ ಜನರು ಲಸಿಕೆ ಪಡೆಯಲು ಗ್ರಾಮೀಣ ಪ್ರದೇಶಕ್ಕೆ ಹೋಗುವುದು ಬೇಡ. ಅವರು ನಗರದಲ್ಲೇ ಲಸಿಕೆ ಪಡೆಯಲಿ. ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ ಎಂದ ಡಿಸಿಎಂ, ಈ ಬಗ್ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಮಾಹಿತಿ ನೀಡಿದರು.

  • ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆ ಪಡೆಯಲು ಬಿಸಿಸಿಐ ಸೂಚನೆ

    ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆ ಪಡೆಯಲು ಬಿಸಿಸಿಐ ಸೂಚನೆ

    ಮುಂಬೈ: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದ 24 ಆಟಗಾರರು ಮತ್ತು ಇತರ ಸಿಬ್ಬಂದಿ ಕೋವಿಶೀಲ್ಡ್ ಲಸಿಕೆ ಪಡೆಯುವಂತೆ ಬಿಸಿಸಿಐ ಸೂಚನೆ ನೀಡಿದೆ.

    14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮೊದಲು ಕೆಲ ಫ್ರಾಂಚೈಸ್‍ಗಳು ಆಟಗಾರರು ಕೊರೊನಾ ಲಸಿಕೆ ಪಡೆಯಬಹುದೆ ಎಂದು ಬಿಸಿಸಿಐನೊಂದಿಗೆ ಕೇಳಿತ್ತು. ಆ ಸಂದರ್ಭ ಬಿಸಿಸಿಐ ಲಸಿಕೆ ಪಡೆಯದಂತೆ ನಿರ್ಬಂಧ ವಿಧಿಸಿತ್ತು. ಬಳಿಕ ಇದೀಗ ಕೊರೊನಾದಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದೆ. ಹಾಗಾಗಿ ಆಟಗಾರರೆಲ್ಲರೂ ಕೂಡ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದೀಗ ಬಿಸಿಸಿಐ ಎಲ್ಲಾ ಆಟಗಾರರು ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

    ಅದರಲ್ಲೂ ಕೂಡ ಮುಖ್ಯವಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆಯನ್ನೇ ಪಡೆಯಬೇಕು ಎಂದು ಸೂಚನೆ ಹೊರಡಿಸಿದೆ. ಈ ಕುರಿತು ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಸ್ಥಗಿತಗೊಂಡ ಬಳಿಕ ಎಲ್ಲಾ ಆಟಗಾರರು ಅವರವರ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಇದೀಗ ದೇಶದಲ್ಲಿ 18 ರಿಂದ 44ರ ವಯೋಮಾನದವರಿಗೆ ಲಸಿಕೆ ಹಾಕಲಾಗುತ್ತಿದೆ. ಹಾಗಾಗಿ ಕ್ರಿಕೆಟಿಗರೆಲ್ಲರೂ ಲಸಿಕೆ ಪಡೆದುಕೊಳ್ಳಲಿ. ಅದರಲ್ಲೂ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಿರುವ 24 ಆಟಗಾರರು ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಬೇಕು ಏಕೆಂದರೆ ಪ್ರಥಮ ಹಂತದ ಲಸಿಕೆಯನ್ನು ಪಡೆದ 28 ದಿನಗಳ ಬಳಿಕ ಎರಡನೇ ಹಂತದ ಲಸಿಕೆ ಪಡೆಯಬೇಕು. ಇದೀಗ ಲಸಿಕೆ ಪಡೆದ 24 ಆಟಗಾರರು ಜೂನ್‍ನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರುತ್ತಾರೆ ಈ ವೇಳೆ ಇಂಗ್ಲೆಂಡ್‍ನಲ್ಲಿ ಕೋವಿಶೀಲ್ಡ್ ಲಸಿಕೆ ಸುಲಭವಾಗಿ ಸಿಗುತ್ತದೆ. ಹಾಗಾಗಿ ಕೋವಿಶೀಲ್ಡ್ ಪಡೆಯುವಂತೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ.

    ಕೋವಿಶೀಲ್ಡ್ ಲಿಸಿಕೆಯನ್ನು ಇಂಗ್ಲೆಂಡ್‍ನ ಆಕ್ಸ್ ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವುದರಿಂದಾಗಿ ಇಂಗ್ಲೆಂಡ್‍ನಲ್ಲಿ ಈ ಲಸಿಕೆ ಸುಲಭವಾಗಿ ಸಿಗುತ್ತದೆ. ಹಾಗಾಗಿ ಈ ಲಸಿಕೆಯನ್ನು ಪಡೆಯಲು ಆಟಗಾರರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

    ಟೀಂ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಅಜಿಂಕ್ಯಾ ರಹಾನೆ ಮತ್ತು ಇಶಾಂತ್ ಶರ್ಮಾ ಈಗಾಗಲೇ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಜೂನ್ 18ರಿಂದ ಇಂಗ್ಲೆಂಡ್‍ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯ ಆರಂಭವಾಗಲಿದೆ. ಆ ಬಳಿಕ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

  • ಕೋವಿಡ್ ವ್ಯಾಕ್ಸಿನ್ ಪಡೆಯೋಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರಿಗರ ವಲಸೆ

    ಕೋವಿಡ್ ವ್ಯಾಕ್ಸಿನ್ ಪಡೆಯೋಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರಿಗರ ವಲಸೆ

    ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಅಭಾವದ ಹಿನ್ನೆಲೆ ಹತ್ತಿರದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೂರಾರು ಮಂದಿ ಬೆಂಗಳೂರಿಗರು ಕೋವಿಡ್ ವ್ಯಾಕ್ಸಿನೇಷನ್ ಪಡೆಯೋಕೆ ವಲಸೆ ಬರುತ್ತಿರುವುದರ ಬಗ್ಗೆ ವರದಿಯಾಗಿದೆ.


    ರಾಜ್ಯದಲ್ಲಿ 18 ವರ್ಷದಿಂದ 45 ವರ್ಷದೊಳಗಿನವರೆಗೆ ವ್ಯಾಕ್ಸಿನೇಷನ್ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಆದರೆ ವ್ಯಾಕ್ಸಿನೇಷನ್ ಪಡೆದುಕೊಳ್ಳುವವರು ಮೊದಲು ಕೋವಿನ್ ಆ್ಯಪ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡಿರಬೇಕು. ಅವರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗುತ್ತದೆ. ಸ್ವಯಂಪ್ರೇರಿತರಾಗಿ ಲಸಿಕಾಕರಣ ಕೇಂದ್ರಕ್ಕೆ ಬಂದವರಿಗೆ ವ್ಯಾಕ್ಸಿನೇಷನ್ ಕೊಡಲ್ಲ. ಇದೇ ಬೆಂಗಳೂರಿಗರಿಗೆ ಅನುಕೂಲಕರವಾಗುತ್ತಿದ್ದು, ಬೆಂಗಳೂರಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯ ಅಲಭ್ಯತೆ ಹಿನ್ನೆಲೆ ಅಕ್ಕಪಕ್ಕದ ಹತ್ತಿರದ ಜಿಲ್ಲೆಗಳಿಗೆ ಬೆಂಗಳೂರಿಗರು ಲಗ್ಗೆ ಇಡುತ್ತಿದ್ದಾರೆ.

    ಕೋವಿನ್ ಆ್ಯಪ್‍ನಲ್ಲಿ ಎಲ್ಲಿ ಲಸಿಕೆ ಲಭ್ಯತೆ ಇರುತ್ತದೆಯೋ ಅಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಳ್ಳಬಹುದು. ಹೀಗಾಗಿ ಬೆಂಗಳೂರಿಗರು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹಾಗಾಗಿ ಬೆಳಗ್ಗಿನಿಂದಲೂ ನೂರಾರು ಮಂದಿ ಆಗಮಿಸಿ ಲಸಿಕೆ ಪಡೆದುಕೊಂಡು ಹೋಗುತ್ತಿದ್ದಾರೆ.

    ಬೆಂಗಳೂರಿಗರಿಗೆ ಲಸಿಕೆ ಸ್ಥಳೀಯರ ಆಕ್ರೋಶ
    ಇತ್ತ ಬೆಂಗಳೂರಿಗರೇ ಬಂದು ಲಸಿಕೆ ಪಡೆದುಕೊಂಡು ಹೋದರೆ ನಮಗೆ ಲಸಿಕೆ ಸಿಗಲ್ಲ. ನೀವು ಯಾಕೆ ಇಲ್ಲಿ ಬರ್ತೀರಾ ಎಂದು ಸ್ಥಳೀಯ ಜನ ಬೆಂಗಳೂರಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಧಿಕಾರಿಗಳ ಗಳನ್ನು ತರಾಟೆಗೆ ತೆಗೆದುಕೊಂಡು ಬೆಂಗಳೂರಿಂದ ಬಂದವರು ಇಲ್ಲಿ ವ್ಯಾಕ್ಸಿನೇಷನ್ ಯಾಕೆ ಪಡೀತಾರೆ. ಬಂದವರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ವ್ಯಾಕ್ಸಿನ್ ಪಡೆಯೋಕೆ ನಾ ಮುಂದು ತಾ ಮುಂದು ಅಂತ ಮುಗಿಬೀಳ್ತಿದ್ದಾರೆ.

    ಇನ್ನೂ ಬೆಂಗಳೂರಿನಿಂದ ವ್ಯಾಕ್ಸಿನ್ ಪಡೆಯಲು ಬರುವವರು ಬೆಂಗಳೂರಿಂದ ಬಂದು ಮತ್ತೆ ಇಲ್ಲಿ ಕೊರೊನಾ ಸ್ಪ್ರೆಡ್ ಮಾಡಿದರೆ ಯಾರು ಹೊಣೆ? ಅವರಿಗೆ ಕೋವಿಡ್ ಟೆಸ್ಟ್ ಮಾಡದೆ ಜಿಲ್ಲೆಗೆ ಪ್ರವೇಶ ಕೊಡುತ್ತಿದ್ದೀರಿ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಮತ್ತೊಂದೆಡೆ ಲಾಕ್ ಡೌನ್ ಅಂತರ್ ಜಿಲ್ಲಾ ಒಡಾಟಕ್ಕೆ ನಿರ್ಬಂಧ ಇದ್ರೂ ಬೆಂಗಳೂರಿಗರು ತಮ್ಮ ಸ್ವಂತ ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರ್ತೀರೋದು ಹೇಗೆ ಅನ್ನೋ ಪ್ರಶ್ನೆ ಎತ್ತಿದ್ದಾರೆ.

  • ವೈದ್ಯರಿಂದಲೇ ಹಣಕ್ಕಾಗಿ ರೆಮ್‍ಡಿಸಿವಿರ್, ವ್ಯಾಕ್ಸಿನ್ ಮಾರಾಟ: ಅಪ್ಪಚ್ಚು ರಂಜನ್

    ವೈದ್ಯರಿಂದಲೇ ಹಣಕ್ಕಾಗಿ ರೆಮ್‍ಡಿಸಿವಿರ್, ವ್ಯಾಕ್ಸಿನ್ ಮಾರಾಟ: ಅಪ್ಪಚ್ಚು ರಂಜನ್

    ಮಡಿಕೇರಿ: ಕೊರೊನಾ ಮಾಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಅತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಕೊಡಲು ಮುಂದಾಗಿದೆ. ಅದರೆ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಹಣಕ್ಕಾಗಿ ವ್ಯಾಕ್ಸಿನನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಸ್ಪತ್ರೆಯೊಂದರಲ್ಲಿ ಹಣಕ್ಕೆ ವ್ಯಾಕ್ಸಿನ್ ಮಾರಲಾಗುತ್ತಿದೆ ಎಂದು ಅಪ್ಪಚ್ಚು ರಂಜನ್ ಅವರು ಉಸ್ತುವಾರಿ ಸಚಿವರ ಸಭೆಯಲ್ಲಿ ಗಂಭೀರ ಅರೋಪ ಮಾಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಹೋಬಳಿ ಮಟ್ಟದ ಅಸ್ಪತ್ರೆಯೊಂದರಲ್ಲಿ ಅಲ್ಲಿನ ವೈದ್ಯರಿಂದಲ್ಲೇ ರೆಮ್‍ಡಿಸಿವಿರ್ ಮತ್ತು ವ್ಯಾಕ್ಸಿನ್ ಮಾರಾಟ ಆಗುತ್ತಿದೆ ಎಂಬ ಅರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಿನ್ನೆ ದಿನ ತಾಲೂಕಿನ 5 ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯರು ವ್ಯಾಕ್ಸಿನ್ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಕ್ಕೊಡನೆ ಆಸ್ಪತ್ರೆಯ ವೈದ್ಯರನ್ನು ಕರೆದು ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ಅರೋಗ್ಯಧಿಕಾರಿ ಹಾಗೂ ಎಸ್.ಪಿ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾವು ಕೂಡ ಇನ್ನೂ ಮುಂದೆ ಸ್ವಲ್ಪ ಜನರನ್ನು ಬಿಟ್ಟು ಫಾಲೋ ಅಪ್ ಮಾಡುತ್ತೇವೆ. ಜಿಲ್ಲೆಯ ಅರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆ ಮಾಡುತ್ತೇವೆ. ಈ ರೀತಿ ಮಾಡುವವರು ಸಿಕ್ಕಿಬಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ ಎಂದು ಅಪ್ಪಚ್ಚು ರಂಜನ್ ಅಕ್ರೋಶ ವ್ಯಕ್ತಪಡಿಸಿದರು.