Tag: ವ್ಯಾಕ್ಸಿನ್

  • ಡೆಂಗ್ಯು ಜ್ವರದ ಬಗ್ಗೆ ಎಚ್ಚರಿಕೆ ವಹಿಸಿ : ಡಾ. ಶ್ರೀದೇವಿ

    ಡೆಂಗ್ಯು ಜ್ವರದ ಬಗ್ಗೆ ಎಚ್ಚರಿಕೆ ವಹಿಸಿ : ಡಾ. ಶ್ರೀದೇವಿ

    ಶಿವಮೊಗ್ಗ: ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ವಹಿಸಿ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀದೇವಿ ಹೇಳಿದ್ದಾರೆ.

    ಜಿಲ್ಲೆಯ ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಮತ್ತು ಕೊರೊನಾ ಕಾರ್ಯಪಡೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೊರೊನಾ ಎರಡನೇ ಅಲೆಗೆ ಗ್ರಾಮೀಣ ಭಾಗದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೂರನೇ ಅಲೆಗೆ ಮುನ್ನೆಚ್ಚರಿಕೆ ವಹಿಸಿದರೆ ಅಪಾಯವನ್ನು ತಡೆಗಟ್ಟಬಹುದು ಎಂದಿದ್ದಾರೆ.

    ಅನಗತ್ಯ ಓಡಾಟ ಕಡಿಮೆ ಮಾಡಿ, ಸೋಂಕಿತರಿಗೆ ಧೈರ್ಯ ತುಂಬಬೇಕು. ನೆರೆಹೊರೆಯವರು ಸಹ ಕಾಳಜಿ ವಹಿಸಿ ಕೊರೊನಾ ಸೋಂಕಿತರಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದ್ದಾರೆ. ಕೊರೊನಾ ಹತೋಟಿಗೆ ತರಲು ಎಲ್ಲರೂ ಸಹಕಾರ ನೀಡಬೇಕು. ಪ್ರತಿ ಗ್ರಾಮದಲ್ಲೂ ಸಾಮೂಹಿಕವಾಗಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಜೊತೆಗೆ ವ್ಯಾಕ್ಸಿನ್ ಕೂಡಾ ಹಾಕಲಾಗುತ್ತಿದ್ದು, ವ್ಯಾಕ್ಸಿನ್ ಪಡೆಯದವರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ತಿಳಿಸಿದ್ದಾರೆ.

    ಸಭೆಯಲ್ಲಿ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಬ್ಬಂದಿಗೆ ವಿಪತ್ತು ನಿರ್ವಹಣೆ ಹಾಗೂ ಕೊರೊನಾ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಹಿರೇಬಿಲಗುಂಜಿ ಗ್ರಾ.ಪಂ. ಅಧ್ಯಕ್ಷೆ ವೀಣಾ ಜಗದೀಶ್, ಉಪಾಧ್ಯಕ್ಷ ಸೋಮಶೇಖರ ಕುಣಿಕೇರಿ, ಗ್ರಾಮ ಲೆಕ್ಕಿಗ ಪಕಿರೇಶ್, ಕಾರ್ಯದರ್ಶಿ ರಿತೇಶ್ ಮತ್ತಿತರರು ಭಾಗವಹಿಸಿದ್ದರು.ಇದನ್ನೂ ಓದಿ:ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್

  • ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್

    ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್

    ಯಾದಗಿರಿ: ಕೊರೊನಾ ಲಸಿಕೆ ಜಾಗೃತಿಯನ್ನೂ ಮೂಡಿಸಲು ಬಂದಿರುವ ಅಧಿಕಾರಿಗಳಿಗೆ ಗ್ರಾಮದ ಮಹಿಳೆಯರಯ ತರಾಟೆಗೆ ತೆಗೆದುಕೊಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಗ್ರಾಮಸ್ಥರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಸಹಾಯಕ ಆಯುಕ್ತ ಪ್ರಕಾಶ್ ಹನಗಂಡಿ, ತಹಶಿಲ್ದಾರರ ಚನ್ನಮಲ್ಲಪ್ಪ ಮತ್ತು ಅವರ ತಂಡ ಜಾಗೃತಿ ಮೂಡಿಸಲು ಹಳ್ಳಿಗೆ ತೆರಳಿದ್ದರು. ಕೊರೊನಾ ಲಸಿಕೆ ಪಡೆಯಬೇಕೆಂದು ಬುದ್ದಿ ಮಾತು ಹೇಳಿದ್ದಾರೆ. ಆದರೆ ಗ್ರಾಮದ ಮಹಿಳೆಯರು ಮಾತ್ರ ಅಧಿಕಾರಿಗಳಿಗೆ ಅವಾಜ್ ಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೊದಲು ಶಾಲೆ ಆರಂಭ ಬೇಡ: ಪ್ರತಾಪ್ ಸಿಂಹ

    ಮತ್ತೊಂದು ಕಡೆ ಅಧಿಕಾರಿಗಳು ಮನೆಮುಂದೆ ಬಂದ ತಕ್ಷಣ ಬೀಗ ಹಾಕಿ ಗ್ರಾಮಸ್ಥರು ಬೇರೆಕಡೆಗೆ ಪರಾರಿಯಾಗುತ್ತಿದ್ದಾರೆ. ನಾವು ಲಸಿಕೆ ಹಾಕಿಸಿಕೊಳ್ಳಲ್ಲ, ಸತ್ತರೇ ಇಲ್ಲೇ ಸಾಯುತ್ತೆವೆ ಆದರೆ ಲಸಿಕೆ ಹಾಕಿಸಿಕೊಳ್ಳಲ್ಲ ಎನ್ನುತ್ತಿದ್ದಾರೆ. ಕರೆಂಟ್, ರೇಷನ್ ಕಾರ್ಡ್ ಕಟ್ ಮಾಡಿದರೂ ಪರವಾಗಿಲ್ಲ, ನಾವು ಸರ್ಕಾರ ನಂಬಿ ಬದುಕುತ್ತಿಲ್ಲ, ನಾವು ಸ್ವಂತ ದುಡಿದು ಬದುಕುತ್ತೆವೆ ಎಂದು ಅಧಿಕಾರಿಗಳ ಮುಂದೆ ಗ್ರಾಮೀಣ ಮಹಿಳೆಯರು ರಂಪಾಟ ನಡೆಸಿದ್ದಾರೆ.

  • ವ್ಯಾಕ್ಸಿನ್ ಪಡೆಯದೇ ಪ್ರವಾಸಿಗಳಿಗಿಲ್ಲ ಗೋವಾಗೆ ಎಂಟ್ರಿ

    ವ್ಯಾಕ್ಸಿನ್ ಪಡೆಯದೇ ಪ್ರವಾಸಿಗಳಿಗಿಲ್ಲ ಗೋವಾಗೆ ಎಂಟ್ರಿ

    ಪಣಜಿ: ರಾಜ್ಯದಲ್ಲಿರುವ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 30ರೊಳಗೆ ಶೇ.100ರಷ್ಟು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ನನ್ನು ರಾಜ್ಯವ್ಯಾಪಿ ನೀಡುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್‍ನನ್ನು ರಾಜ್ಯದಲ್ಲಿ ಪೂರ್ಣಗೊಳಿಸುವವರೆಗೆ ಪ್ರವಾಸೋದ್ಯಮವನ್ನು ಆರಂಭಿಸುವ ಯಾವುದೇ ಯೋಜನೆ ಇಲ್ಲ. ಜುಲೈ 30ರೊಳಗೆ ಅದನ್ನು ಪೂರ್ಣಗೊಳಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

    ಪ್ರವಾಸೋದ್ಯಮ ನಿರ್ದೇಶಕರಿಗೆ ಪ್ರಮೋದ್ ಸಾವಂತ್‍ರವರು ಗೋವಾ ಪ್ರವೇಶಕ್ಕಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ಸೂಚಿಸಿದರು. ಪ್ರವಾಸಿಗರಿಗೆ ಸಂಪರ್ಕ ತಡೆ ಹಾಗೂ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಮಾರ್ಚ್ 2022ರವರೆಗೆ ಮುಂದೂಡಬೇಕೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಎಲ್‌ಎಕ್ಸ್‌ನಲ್ಲಿ ಕಾರು ಖರೀದಿ ದೋಖಾ – ಅತ್ತ ಕಾರು ಇಲ್ಲ, ಹಣವೂ ಇಲ್ಲ

  • ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

    ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

    ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ. ಇದೊಂದು ಕೌತುಕ.. ವಿಸ್ಮಯ.. ಮೈಯ್ಯಲ್ಲಿ ಅಯಸ್ಕಾಂತೀಯ ಶಕ್ತಿಯಿದೆ. ಹೀಗಂತ ಒಂದು ವೀಡಿಯೋ ಉಡುಪಿಯಲ್ಲಿ ಶೇರ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ವ್ಯಕ್ತಿ ರಾಮದಾಸ್ ಶೆಟ್ ಎಂದು ಗುರುತಿಸಲಾಗಿದ್ದು, ಉಡುಪಿಯ ತೆಂಕಪೇಟೆ ಪೂರ್ಣಪ್ರಜ್ಞ ಕಾಲೇಜು ಸಮೀಪದವರಾಗಿದ್ದಾರೆ. ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ವೀಡಿಯೋಗಳನ್ನು ನೋಡಿ, ಮನೆಯಲ್ಲೇ ಇದ್ದ ರಾಮದಾಸ್ ತನ್ನನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ವೇಳೆ ಕೆಲವೊಂದು ವಸ್ತುಗಳು ಅವರ ದೇಹಕ್ಕೆ ಅಂಟಿಕೊಂಡಿದ್ದು, ಅವರಿಗೆ ಆಶ್ಚರ್ಯವಾಗಿದೆ.

    ಕೊರೊನಾ ವಿರುದ್ಧ ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಹೀಗಾಗಿದೆ ಎಂದು ವೀಡಿಯೋ ವೈರಲಾಗಿದೆ. ವ್ಯಾಕ್ಸಿನ್ ಪಡೆಯೋ ಮೊದಲು ಈ ರೀತಿ ರಾಮದಾಸ್ ಯಾವುದೇ ಪ್ರಯತ್ನ ನಡೆಸಿಲ್ವಂತೆ. ಹಾಗಾಗಿ ವ್ಯಾಕ್ಸಿನ್‍ಗೂ ಈ ಬೆಳವಣಿಗೆಗೂ ಸಂಬಂಧ ಇಲ್ಲ ಎಂದೂ ಹೇಳಲಾಗುತ್ತಿದೆ. ದೆಹಲಿ ಮತ್ತು ಪಂಜಾಬ್‍ನಲ್ಲಿ ನಡೆದ ಇಂತಹ ಘಟನೆಯ ಬಗ್ಗೆ ಈಗಾಗಲೇ ತಜ್ಞರು, ಅಭಿಪ್ರಾಯ ವ್ಯಕ್ತಪಡಿಸಿದ್ದು ವ್ಯಾಕ್ಸಿನ್ ಪಡೆಯುವುದರಿಂದ ಈ ರೀತಿ ಆಗುವುದಿಲ್ಲ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದರು. ಕೆಲವು ವ್ಯಕ್ತಿಗಳ ಮೈಗುಣಕ್ಕೆ ಹೀಗಾಗುತ್ತದೆ. ಈ ಬಗ್ಗೆ ಸಂಶೋಧನೆ ಆಗಬೇಕು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಇದನ್ನೂ ಓದಿ: ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

  • ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

    ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

    ಮಡಿಕೇರಿ: ಕೋವಿಡ್ ನಡುವೆ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ.

    ಕೊಡಗು ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಹಾಗೂ ಭೂ ಕುಸಿತದ ಭೀತಿ ಇದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಈ ಬಾರಿಯೂ ಪ್ರವಾಹ ಉದ್ಭವಿಸುವುದಿಲ್ಲ ಎನ್ನುವ ಯಾವ ಖಾತರಿಯೂ ಇಲ್ಲ. ಇದರ ನಡುವೆ ಕೋವಿಡ್ ಸೋಂಕಿನ ಭೀತಿ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಜನರಿಗೆ ಆತಂಕ ಶುರುವಾಗಿದೆ.

    ಮಳೆ ಹೆಚ್ಚಾಯಿತೆಂದರೆ ಕೊಡಗಿನ ಭಾಗಮಂಡಲದಿಂದ ಆರಂಭವಾಗಿ ಇತ್ತ ಕಣಿವೆ ಗ್ರಾಮದವರೆಗೂ ಕಾವೇರಿ ನದಿ ದಂಡೆಯಿಂದ 80ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರ ಗುಂಡಿ ಬರಡಿ ಸೇರಿದಂತೆ ಹಲವು ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತವೆ. ಇದನ್ನು ಓದಿ: ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    ಈ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಾಕಷ್ಟು ಕುಟುಂಬಗಳಿಗೆ ಇಂದಿಗೂ ಬದಲಿ ವಸತಿ ವ್ಯವಸ್ಥೆ ಆಗಿಲ್ಲ. ಹೀಗಾಗಿ ನದಿ ದಂಡೆಯಲ್ಲಿಯೇ ಮತ್ತೆ ಶೆಡ್‍ಗಳನ್ನು ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಈ ಬಾರಿಯೂ ಪ್ರವಾಹ ಎದುರಾಗಿದ್ದೇ ಆದಲ್ಲಿ ಇಂತಹ ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಕಳೆದ ಮೂರು ವರ್ಷದಂತೆ ಈ ಬಾರಿಯೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕಾಗಿರುವುದು ಅಗತ್ಯ. ಹೀಗಾಗಿಯೇ ಜಿಲ್ಲಾಧಿಕಾರಿಯವರು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದಾರೆ.

    ಜಿಲ್ಲಾಡಳಿತ ಈ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದರೆ ಕೋವಿಡ್ ಸೋಂಕು ತೀವ್ರವಾಗಿ ಹರಡುವುದು ಖಚಿತ. ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ. ಕುಂಬಾರಗುಂಡಿ, ನೆಲ್ಯಹುದಿಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಇಂದಿಗೂ ಸಾಕಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಿತಿ ಹೀಗಿರುವಾಗ ಪ್ರವಾಹ ಎದುರಾಗುತ್ತಿದ್ದಂತೆ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಿದ್ದೆ ಆದಲ್ಲಿ ಕೋವಿಡ್ ಸೋಂಕು ಕಾಳಜಿ ಕೇಂದ್ರಗಳಿಗೆ ಬರುವ ಎಲ್ಲರಿಗೂ ಹರಡುವುದು ಸತ್ಯ. ಇದನ್ನು ಓದಿ: ತರಕಾರಿ ವಾಹನದಲ್ಲಿ ಮದ್ಯ ಸಾಗಾಟ – 500 ಲೀಟರ್ ಎಣ್ಣೆ ವಶಕ್ಕೆ ಪಡೆದ ಪೊಲೀಸರು

    ಈ ಪ್ರವಾಹ ಎದುರಾಗುವ ಎಲ್ಲಾ ಗ್ರಾಮಗಳ್ಲಲಿರುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡುವಂತೆ ಜನ ಆಗ್ರಹಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಾದರೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದಂತೆ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದೆವು. ಆದರೆ ಈ ಬಾರಿ ಕೋವಿಡ್ ಸೋಂಕು ಇರುವುದರಿಂದ ಸಂಬಂಧಿಕ ಮನೆಗಳಿಗೂ ಹೋಗುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿದೆ. ಹೀಗಾಗಿ ತಕ್ಷಣವೇ ಜನರಿಗೆ ವ್ಯಾಕ್ಸಿನ್ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

  • ನೀವು ಶತ್ರು ಇರುವೆಡೆ ನುಗ್ಗುತ್ತಿಲ್ಲ, ಕೊರೊನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿ- ಕೇಂದ್ರಕ್ಕೆ ಬಾಂಬೆ ಹೈ ಕೋರ್ಟ್ ಸೂಚನೆ

    ನೀವು ಶತ್ರು ಇರುವೆಡೆ ನುಗ್ಗುತ್ತಿಲ್ಲ, ಕೊರೊನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿ- ಕೇಂದ್ರಕ್ಕೆ ಬಾಂಬೆ ಹೈ ಕೋರ್ಟ್ ಸೂಚನೆ

    – ಕೊರೊನಾ ಹೊರಗೆ ಬರಲೆಂದು ಗಡಿಯಲ್ಲಿ ಕಾಯುವುದಲ್ಲ, ಶತ್ರು ಇರುವೆಡೆ ನುಗ್ಗಿ ಹೊಡೆಯಬೇಕು

    ಮುಂಬೈ: ಕೊರೊನಾ ವೀರುದ್ಧ ಯುದ್ಧೋಪಾದಿಯಲ್ಲಿ ಹೋರಾಡಬೇಕಿದೆ ಎಂಬುದನ್ನು ಕೋರ್ಟ್ ತಿಳಿಸಿದ್ದು, ಗಡಿಯಲ್ಲಿ ನಿಂತು ಶತ್ರುವಿಗಾಗಿ ಕಾಯಬಾರದು. ಬದಲಿಗೆ ಶತ್ರು ಇರುವ ಪ್ರದೇಶಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂದು ಬಾಂಬೆ ಹೈ ಕೋರ್ಟ್ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.

    ಮುಖ್ಯನ್ಯಾಯಾಧೀಶರಾದ ದೀಪಂಕರ್ ದತ್ತ ಹಾಗೂ ಜಿ.ಎಸ್.ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದೀಗ ಸಮಾಜದ ಅತೀ ದೊಡ್ಡ ವೈರಿ ಕೊರೊನಾ ವೈರಸ್, ಹೀಗಾಗಿ ಕೊರೊನಾ ವೈರಸ್ ಹೊರಗಡೆ ಬರಲಿ ಎಂದು ಬಾರ್ಡರ್‍ನಲ್ಲಿ ನಿಂತು ಕಾಯುವುದಕ್ಕಿಂತ ಇದರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಿದೆ ಎಂದು ಹೇಳಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

    ಕೊರೊನಾ ವೈರಸ್ ನಮ್ಮ ಅತಿ ದೊಡ್ಡ ಶತ್ರು, ನಾವು ಅದನ್ನು ಹೊಡೆದುರುಳಿಸಬೇಕಾಗಿದೆ. ಶತ್ರು ಕೆಲವು ಪ್ರದೇಶಗಳಲ್ಲಿ ಹಾಗೂ ಹೊರ ಬರಲು ಸಾಧ್ಯವಾಗದ ಕೆಲವು ಜನರಲ್ಲಿ ವಾಸಿಸುತ್ತಿದ್ದಾನೆ. ಸರ್ಕಾರದ ದಾಳಿ ಸರ್ಜಿಕಲ್ ಸ್ಟ್ರೈಕ್ ರೀತಿ ಇರಬೇಕು. ಆದರೆ ನೀವು ಗಡಿಯಲ್ಲಿ ನಿಂತು ವೈರಸ್ ನಿಮ್ಮ ಬಳಿ ಬರಲೆಂದು ಕಾಯುತ್ತಿದ್ದೀರಿ. ನೀವು ಶತ್ರುವಿನ ಪ್ರದೇಶದೊಳಗೆ ನುಗ್ಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದತ್ತ ಹೇಳಿದ್ದಾರೆ.

    ಸಾರ್ವಜನಿಕರ ಒಳಿತಿಗಾಗಿ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಆದರೆ ವಿಳಂಬವಾಗಿರುವುದು ಹಲವು ಜೀವಗಳನ್ನು ಬಲಿ ಪಡೆದಿದೆ ಎಂದು ಕೋರ್ಟ್ ತಿಳಿಸಿದೆ.

    ಮಂಗಳವಾರ ಕೇಂದ್ರ ಸರ್ಕಾರ ಈ ಕುರಿತು ಕೋರ್ಟ್ ಗೆ ಹೇಳಿಕೆ ನೀಡಿದ್ದು, ಪ್ರಸ್ತುತ ಡೋರ್-ಟು-ಡೋರ್ ಲಸಿಕಾಕರಣ ಸಾಧ್ಯವಿಲ್ಲ. ಆದರೆ ಮನೆಯ ಹತ್ತಿರ ಲಸಿಕಾ ಕೇಂದ್ರಗಳನ್ನು ತೆರೆಯಬಹುದು ಎಂದು ಉತ್ತರಿಸಿದೆ. ಹೀಗೆ ಹೇಳುತ್ತಿದ್ದಂತೆ ಬುಧವಾರ ಹೈ ಕೋರ್ಟ್ ದೇಶದಲ್ಲಿನ ಹಲವು ರಾಜ್ಯಗಳು ಹಾಗೂ ನಗರ ಪಾಲಿಕೆಗಳು ಡೋರ್-ಟು-ಡೋರ್ ಲಸಿಕೆಗೆ ಕ್ರಮ ಕೈಗೊಂಡಿರುವ ಕುರಿತು ಉದಾಹರಣೆ ನೀಡಿದ್ದು, ಕೇರಳ, ಜಮ್ಮು ಕಾಶ್ಮೀರ, ಬಿಹಾರ ಹಾಗೂ ಓಡಿಶಾ. ಅಲ್ಲದೆ ಮಹಾರಾಷ್ಟ್ರದ ವಸಾಯಿ-ವಿವರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೋರ್-ಟು-ಡೋರ್ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

    ದೇಶದ ಇತರ ರಾಜ್ಯಗಳಲ್ಲಿ ಇದನ್ನು ಏಕೆ ಪ್ರೋತ್ಸಾಹಿಸಬಾರದು? ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ರೆಕ್ಕೆಗಳಿಗೆ ಕ್ಲಿಪ್ ಹಾಕಲು ಸಾಧ್ಯವಿಲ್ಲ. ಆದರೂ ಹಲವು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿವೆ ಎಂದು ಹೇಳಿದೆ.

  • ಕಾಫಿನಾಡಲ್ಲಿ ವ್ಯಾಕ್ಸಿನ್ ಹೆಸರಲ್ಲಿ ಭಾರೀ ಕಳ್ಳಾಟ -ಅಧಿಕಾರಿಗಳ ಮನೆಯವ್ರಿಗೆ ಸುಲಭವಾಗಿ ಸಿಗುತ್ತೆ ಲಸಿಕೆ..!

    ಕಾಫಿನಾಡಲ್ಲಿ ವ್ಯಾಕ್ಸಿನ್ ಹೆಸರಲ್ಲಿ ಭಾರೀ ಕಳ್ಳಾಟ -ಅಧಿಕಾರಿಗಳ ಮನೆಯವ್ರಿಗೆ ಸುಲಭವಾಗಿ ಸಿಗುತ್ತೆ ಲಸಿಕೆ..!

    ಚಿಕ್ಕಮಗಳೂರು: ವ್ಯಾಕ್ಸಿನ್‍ಗಾಗಿ ಜನ ಮುಗಿಬೀಳೋದನ್ನು ನಾವೆಲ್ಲಾ ಕಂಡಿದ್ದೇವೆ. ಆದರೆ ಕಾಫಿನಾಡಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಯಾರದ್ದೋ ಹೆಸರಿನಲ್ಲಿ ಮತ್ಯಾರೋ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ಈ ರೀತಿಯ ಅಸಲಿ-ನಕಲಿ ಆಟಕ್ಕೆ ಅಧಿಕಾರಿಗಳೇ ಬೆಂಗಾವಲಾಗಿದ್ದಾರೆ.

    ಕೊರೊನಾ ವ್ಯಾಕ್ಸಿನ್ ಕೆಲ ದಿನಗಳಿಂದ ಕೆಲವರಿಗೆ ದಂಧೆಯೇ ಆಗೋಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಜೂನ್ 2 ರಂದು ಇಲ್ಲಿನ ಸಿಬ್ಬಂದಿಗೆ ಕೊರೊನಾ ವಾರಿಯರ್ ಅಂತ ವ್ಯಾಕ್ಸಿನ್ ಹಾಕಲು ಮುಂದಾಗಿದ್ದರು. ಅಂದು ಕೆ.ಎನ್.ಸೋಮಶೇಖರ್ ಎಂಬ ವ್ಯಕ್ತಿ ಡಿದರ್ಜೆ ನೌಕರನೆಂದು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಆತನಿಗೂ ಇಲಾಖೆಗೂ ಯಾವುದೇ ಸಂಬಂಧ ಇಲ್ಲದಿದ್ರೂ ಮೂಡಿಗೆರೆ ಆರ್.ಎಫ್.ಓ. ಅವರು ನಮ್ಮ ಸಿಬ್ಬಂದಿ ಎಂದು ಇಲಾಖೆಯಿಂದ ಅಧಿಕೃತ ಲೆಟರ್ ಕಳಿಸಿರೋದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಆಕ್ರೋಶ ಹೊರಹಾಕಿರೋ ಸ್ಥಳೀಯರು, ನಾವು ದಿನಗಟ್ಟಲೇ ಕಾಯ್ತೀವಿ. ಅಧಿಕಾರಿಗಳಿಗೆ ಬೇಕಾದವರಿಗೆ, ಮನೆಯವರಿಗೆ ನಕಲಿ ದಾಖಲೆ ಕೊಟ್ಟು ವ್ಯಾಕ್ಸಿನ್ ಹಾಕಿಸೋದು ಎಷ್ಟು ಸರಿ ಎಂದು ಸ್ಥಳಿಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ಸಿಬ್ಬಂದಿ ವ್ಯಾಕ್ಸಿನ್‍ಗೆ ಹೋದ ಪಟ್ಟಿಯಲ್ಲಿ ಸೋಮಶೇಖರ್ ಹೆಸರಿದೆ. ಈ ವಿಷಯ ಈಗ ತಹಶೀಲ್ದಾರ್ ಕಚೇರಿ ತಲುಪಿದೆ. ಸ್ಥಳಿಯರ ದೂರಿನ ಅನ್ವಯ ತಹಶೀಲ್ದಾರ್ ಕೂಡ ಕಾರಣ ಕೇಳಿ ಆರ್.ಎಫ್.ಓಗೆ ನೋಟಿಸ್ ನೀಡಿದ್ದು, ಆರ್.ಎಫ್.ಓ. ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ರೂಲ್ಸ್ ಬ್ರೇಕ್ – ಕೋವಿಡ್‍ನಿಂದ ಸತ್ತ ವ್ಯಕ್ತಿಯ ಮೃತದೇಹ ಮೆರವಣಿಗೆ

    ಒಟ್ಟಾರೆ ಸೋಮಶೇಖರ್ ಎಂಬ ವ್ಯಕ್ತಿ ಅರಣ್ಯ ಇಲಾಖೆ ಅಧಿಕಾರಿಯ ಪತಿ ಎಂದು ಹೇಳಲಾಗ್ತಿದೆ. ಅಧಿಕಾರಿಯ ಕುಟುಂಬಸ್ಥರಿಗೆ ವ್ಯಾಕ್ಸಿನ್ ಹಾಕಿಸಲು ಇಲಾಖೆಯ ಸಿಬ್ಬಂದಿಯೇ ಮಾಡಿದ ಡ್ರಾಮಾ ವಿರುದ್ಧ ಮೂಡಿಗೆರೆ ಜನ ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ಎಸ್ಪಿ ಹಾಗೂ ಡಿಸಿಗೂ ದೂರು ನೀಡುತ್ತೇವೆ. ಈ ಅಸಲಿ-ನಕಲಿ ಆಟದ ಕುರಿತು ಸಮಗ್ರ ತನಿಖೆಯಾಗಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.

  • ವ್ಯಾಕ್ಸಿನ್ ಕೇಳಿದ್ದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ: ವೆಂಕಟೇಶ್

    ವ್ಯಾಕ್ಸಿನ್ ಕೇಳಿದ್ದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ: ವೆಂಕಟೇಶ್

    ಬೆಂಗಳೂರು: ವ್ಯಾಕ್ಸಿನ್ ಕೇಳುವುದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೆಚ್.ಎಮ್ ವೆಂಕಟೇಶ್ ಕಿಡಿಕಾರಿದ್ದಾರೆ.

    ಮೇ ತಿಂಗಳಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯಾಕ್ಸಿನ್ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಬಗ್ಗೆ ಹಾಗೂ ಆ ಹಣ ಸ್ಥಳೀಯ ಶಾಸಕರಿಗೆ ಹೋಗುತ್ತಿದೆ ಎಂಬ ಆಡಿಯೋವೊಂದು ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಸಾಮಾಜಿಕ ಕಾರ್ಯಕರ್ತ ಹೆಚ್.ಎಮ್ ವೆಂಕಟೇಶ್‍ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದಲೇ ನೋಟೀಸ್ ಮೇಲೆ ನೋಟೀಸ್ ಜಾರಿ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿ ಮಾತಾಡಿರುವ ವೆಂಕಟೇಶ್, ವ್ಯಾಕ್ಸಿನ್ ಕೇಳುವುದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಓದಿ: ಶಿಲ್ಪಾ ನಾಗ್‍ರಂತಹ ದಕ್ಷ ಅಧಿಕಾರಿಗಳ ಸೇವೆ ಅಗತ್ಯ, ಸಿಎಂ ಗಮನಕ್ಕೆ ತರುತ್ತೇನೆ: ರಾಮ್‍ದಾಸ್

    ವೀಡಿಯೋದಲ್ಲಿ ಮೇ 28 ರಂದು ಅನುಗ್ರಹ ಆಸ್ಪತ್ರೆಗೆ ಪೊಲೀಸ್ ಮಾಡಿ ವ್ಯಾಕ್ಸಿನ್ ಬೇಕು ಅಂತ ಕೇಳಿದ್ದೆ. ವ್ಯಾಕ್ಸಿನ್ ಒಂದಕ್ಕೆ 900 ರೂ. ಕೊಡಲು ಕಷ್ಟ ಆಗುತ್ತೆ ಅಂದಾಗ, ಆಸ್ಪತ್ರೆ ಸಿಬ್ಬಂದಿಯೇ 700 ರೂ. ಸ್ಥಳೀಯ ಶಾಸಕರಿಗೆ ಹೋಗುತ್ತದೆ. 200 ರೂ. ಮಾತ್ರ ಆಸ್ಪತ್ರೆಗೆ ಸಿಗುತ್ತದೆ ಎಂದಿದ್ದರು. ಹೀಗೆ ವ್ಯಾಕ್ಸಿನ್ ಬಿಬಿಎಂಪಿ ಕಚೇರಿಯಿಂದ ಶಾಸಕರ ಕಚೇರಿಗೆ ಬರುತ್ತದೆ ಎಂದು ಅವರೇ ಹೇಳಿದ್ದು, ಯಾವ ರೀತಿ ಮಾರಾಟ ಆಗ್ತಿದೆ ಎಂಬ ಬಗ್ಗೆ ವಿವರಿಸಿದ್ದರು.

    ತಾನು ಯಾರ ಮೇಲೆಯೂ ಆರೋಪ ಮಾಡಿಲ್ಲ. ದುರುದ್ದೇಶದಿಂದ ಯಾರನ್ನೂ ಸಿಕ್ಕಿಸಿಹಾಕಲು ಮಾಡಿದ ಕೆಲಸವೂ ಅಲ್ಲ. ಆದರೆ ಹೆಚ್ಚು ದುಡ್ಡು ಕೇಳುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆದ ನಂತರ, ಸ್ಥಳೀಯ ಶಾಸಕರು ನನ್ನ ಮೇಲೆ ಗರಂ ಆದರು, ಏಕವಚನದಲ್ಲಿ ಬೈದಾಡಿದರು. ಇದರಿಂದ ರಕ್ಷಣೆ ಕೊಡಿ ಎಂದು ಮೇ 29 ರಂದೇ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಜೊತೆಗೆ ವ್ಯಾಕ್ಸಿನ್ ಮಾರಾಟದ ಬಗ್ಗೆ ತನಿಖೆ ನಡೆಸುವಂತೆ ಗಿರಿನಗರ, ಬಸವನಗುಡಿ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದೆ. ಇದನ್ನು ಓದಿ: ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಬಿ.ಸಿ ಪಾಟೀಲ್

    ಆದರೆ ಮಾರನೇ ದಿನ ಗಿರಿನಗರ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರು ಮನೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡದ್ದಾರೆ. ಯಾವುದೇ ರೀತಿ ತಪ್ಪು ಮಾಡದಿದ್ದರೂ ವಿಚಾರಣೆಗೆ ಬರಬೇಕೆಂದು ನನಗ್ಯಾಕೆ ನೋಟೀಸ್ ಕೊಟ್ಟಿದ್ದೀರಾ ಎಂದು ಕೇಳಿದಾಗ ಬೇರೆಯವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎಂದಿದ್ದಾರೆ.

    ಕೋವಿಡ್ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದಾಗ, ಪೊಲೀಸ್ ಮೂಲಕವೂ ನಿರಂತರವಾಗಿ ವಿಚಾರಣೆಗೆ ಬನ್ನಿ ಎಂದು ಒತ್ತಡ ಹಾಕುತ್ತಿದ್ದಾರೆ. ಎರಡು ನೋಟೀಸ್‍ಗಳಿಗೂ ವಿವರವಾದ ಮಾಹಿತಿ, ಉತ್ತರವನ್ನು ಇ-ಮೈಲ್‍ಗೆ ಕಳಿಸಲಾಗಿದೆ. ಇಷ್ಟಾದರೂ ಮತ್ತೆ ಫೋನ್ ಮಾಡಿ ಸ್ಟೇಷನ್‍ಗೆ ಬರುವಂತೆ ಹೇಳಿದ್ದಾರೆ. ಜೊತೆಗೆ ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ, ಕೊಟ್ಟಿಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಏನೋ ಷಡ್ಯಂತ್ರ ಮಾಡಿ ಸಿಕ್ಕಿಹಾಕಿಸುವ ಕೆಲಸ ನಡೆಯುತ್ತಿದೆ. ಗಿರಿನಗರ ಪೊಲೀಸ್ ಠಾಣೆಯವರು ಖಾಸಗಿ ವಾಹನದಲ್ಲಿ ಬಂದು ಮತ್ತೆ ನೋಟೀಸ್ ಜಾರಿ ಮಾಡಿದ್ದಾರೆ. ಈಗಾಗಲೇ ಉತ್ತರ ಕೊಟ್ಟಿರುವುದರಿಂದ ಮತ್ತೆ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದರೂ, ಗಿರಿನಗರ ಹಾಗೂ ಕುಮಾರಸ್ವಾಮಿ ಪೊಲೀಸ್ ಠಾಣೆಯಿಂದ ತುಂಬಾ ಕಿರುಕುಳ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

    ಆರೋಪಕ್ಕೆ ಒಳಗಾದವರ ಮೇಲೆ ತನಿಖೆ ನಡೆಯುತ್ತಿಲ್ಲ. ಆದರೆ ವ್ಯಾಕ್ಸಿನ್ ಕೇಳಿದ್ದಕ್ಕೆ ನನಗೆ ನೋಟೀಸ್ ಕೊಡುತ್ತಿದ್ದಾರೆ. ಆಸ್ಪತ್ರೆ ಕಂಪ್ಲೈಂಟ್ ಅನ್ನೂ ನನ್ನಿಂದ ಮುಚ್ಚಿಡಲಾಗಿದೆ. ಹೀಗಾಗಿ ವ್ಯಾಕ್ಸಿನೇಷನ್ ಕೇಳಿದ್ದೇ ತಪ್ಪಾ. ಈ ಷಡ್ಯಂತ್ರವನ್ನು ಎಲ್ಲರೂ ಗಮನಿಸಬೇಕಿದೆ. ನಾನೂ ಕಾನೂನು ಹೋರಾಟ ಮುಂದುವರಿಸುತ್ತೇನೆ. ಬಡವರು, ನಿರ್ಗತಿಕರ ಪರವಾಗಿ ನಿಂತು ಎಲ್ಲರೂ ವ್ಯಾಕ್ಸಿನ್ ಮಾರಾಟದ ವಿರುದ್ಧವಾಗಿ ಹೋರಾಡಬೇಕಿದೆ. ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ, ನ್ಯಾಯಾಂಗ ತನಿಖೆಗೆ ಒತ್ತಾಯಿಸಬೇಕಿದೆ ಎಂದು ಹೇಳಿದರು.

  • ಮಾಧ್ಯಮ, ಕೇಬಲ್ ಸಿಬ್ಬಂದಿಗೆ ವ್ಯಾಕ್ಸಿನ್ ಅಭಿಯಾನಕ್ಕೆ ಡಿಸಿಎಂ ಚಾಲನೆ

    ಮಾಧ್ಯಮ, ಕೇಬಲ್ ಸಿಬ್ಬಂದಿಗೆ ವ್ಯಾಕ್ಸಿನ್ ಅಭಿಯಾನಕ್ಕೆ ಡಿಸಿಎಂ ಚಾಲನೆ

    ಬೆಂಗಳೂರು: ಎಲ್ಲ ಬಗೆಯ ಮಾಧ್ಯಮಗಳ ಪ್ರತಿನಿಧಿಗಳು, ಪತ್ರಿಕೆಗಳ ವಿತರಕರು, ಕೇಬಲ್ ಆಪರೇಟರ್ ಗಳು ಸೇರಿ ವಿವಿಧ ವರ್ಗಗಳ ಮುಂಚೂಣಿ ಕಾರ್ಯಕರ್ತರು-ಆದ್ಯತಾ ಗುಂಪಿನ ಜನರಿಗೆ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಚಾಲನೆ ನೀಡಿದರು.

    ನಗರದ ಮಲ್ಲೇಶ್ವರ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಈ ಲಸಿಕೆ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಈಗಾಗಲೇ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಅದರಲ್ಲೂ ಮುಖ್ಯವಾಗಿ ಟೆಲಿಕಾಂ, ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಸಿಬ್ಬಂದಿಯ ಜೊತೆಗೆ ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಿಬ್ಬಂದಿಗೆ ಕೇಂದ್ರದ ಮಾರ್ಗಸೂಚಿಯಂತೆ ಈ ಲಸಿಕೆ ಕೊಡಲಾಗುತ್ತಿದೆ ಎಂದರು.

    ಇವರೆಲ್ಲರೂ ಜನರ ಸಂಪರ್ಕದಲ್ಲಿ ಹೆಚ್ಚು ಇರುತ್ತಾರೆ. ಹೀಗಾಗಿ ಇವರಿಗೆ ಸೋಂಕಿನ ಅಪಾಯ ಹೆಚ್ಚು. ಆದ್ದರಿಂದ ಆದ್ಯತೆಯ ಮೇಲೆ ಇವರೆಲ್ಲರಿಗೂ ಲಸಿಕೆ ಕೊಡಲಾಗುತ್ತಿದೆ. ರಾಜ್ಯಾದ್ಯಂತ ಈ ಗುಂಪಿಗೆ ಲಸಿಕಾ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು.  ಇದನ್ನು ಓದಿ: ರಾಯಚೂರಿನಲ್ಲಿ 20 ಕೆ.ಎಲ್ ಆಮ್ಲಜನಕ ಪ್ಲಾಂಟ್ ಆರಂಭ: ಡಿಸಿಎಂ ಚಾಲನೆ

    ಈ ವೇಳೆ ಶಾಸಕ ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಾಂದ ತಗಡೂರು, ಕೇಬಲ್ ಆಪರೇಟರ್ಸ್ ಸಂಘದ ರಾಮ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

  • ಆದ್ಯತಾ ಗುಂಪಿನವರಿಗೆ ಲಸಿಕೆ – ಮೇ 31 ಕೊನೆಯ ದಿನ

    ಆದ್ಯತಾ ಗುಂಪಿನವರಿಗೆ ಲಸಿಕೆ – ಮೇ 31 ಕೊನೆಯ ದಿನ

    ಚಿಕ್ಕಬಳ್ಳಾಪುರ: ಆದ್ಯತಾ ಗುಂಪಿನವರಿಗೆ ಲಸಿಕಾಕರಣ ನಡೆಸಲು ಮೇ 31 ಕೊನೆ ದಿನಾಂಕ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್ ಕಬಾಡೆ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 18 ರಿಂದ 44 ವರ್ಷದೊಳಗಿನ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ರಾಜ್ಯ ಸರ್ಕಾರ ಗುರುತಿಸಿ ಕೋವಿಡ್-19 ಲಸಿಕಾಕರಣವನ್ನು ನಡೆಸಲು ಸೂಚಿಸಿತ್ತು. ಅದರಂತೆ 18 ರಿಂದ 44 ವರ್ಷದ ಕೆಳಕಂಡ ಆದ್ಯತಾ ಗುಂಪಿನವರಿಗೆ ಕೋವಿಡ್ ಲಸಿಕಾಕರಣವನ್ನು ಮೇ 22 ರಿಂದ ಪ್ರಾರಂಭಿಸಲಾಗಿತ್ತು. ಸದ್ಯ ಮೇ 31ಕ್ಕೆ ಈ ಅಭಿಯಾನ ಅಂತ್ಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೇಳಿದ್ದಾರೆ.

    ಯಾರಿಗೆಲ್ಲ ಲಸಿಕೆ?
    ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು. ಆರೋಗ್ಯ ಕಾರ್ಯರ್ಕರ ನಿಕಟ ಕುಟುಂಬಸ್ಥರು, ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿಗಳು, ಬೀದಿ ಬದಿಯ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಛೇರಿಗಳ ಹೌಸ್ಕೀ ಪಿಂಗ್ ಸಿಬ್ಬಂದಿಗಳು, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು/ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೊಲ್ ಬಂಕ್, ಕರ್ಮಚಾರಿ ಒಳಗೊಂಡಂತೆ) ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿಗಳು, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರುವ ಫಲಾನುಭವಿಗಳು(ಉದಾಹರಣೆ: ವೃದ್ದಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎ.ಪಿ.ಎಂ.ಸಿ) ಕೆಲಸಗಾರರು. ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಸಿಬ್ಬಂದಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಮತ್ತು ಬಿ ಇಎಲ್ ಸಿಬ್ಬಂದಿ ಮೇಲ್ಕಂಡ ಎಲ್ಲಾ ಆದ್ಯತಾ ಗುಂಪಿನ ಚಿಕ್ಕಬಳ್ಳಾಪುರ ಜಿಲ್ಲೆಯ ಫಲಾನುಭವಿಗಳು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಸಿಕಾ ಕೇಂದ್ರಗಳಲ್ಲಿ ಮೇ 31ರ ಒಳಗಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸದರಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.