Tag: ವ್ಯಾಕ್ಸಿನ್ ಬಸ್

  • ಕೋವಿಡ್ ಲಸಿಕೆ ಬಸ್‍ಗಳಿಗೆ ಚಾಲನೆ- ಗ್ರಾಮಗಳಿಗೆ ತೆರಳಿ ವ್ಯಾಕ್ಸಿನ್

    ಕೋವಿಡ್ ಲಸಿಕೆ ಬಸ್‍ಗಳಿಗೆ ಚಾಲನೆ- ಗ್ರಾಮಗಳಿಗೆ ತೆರಳಿ ವ್ಯಾಕ್ಸಿನ್

    ಕಲಬುರಗಿ: ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗೆ ಬಂದು ಕೋವಿಡ್ ಲಸಿಕೆ ಪಡೆಯಲು ಹಳ್ಳಿ ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮನೆ ಬಾಗಿಲಿಗೆ ಹೋಗಿ ಕೋವಿಡ್ ಲಸಿಕೆ ನೀಡಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ವಿನ್ಯಾಸದೊಂದಿಗೆ ಸಿದ್ಧಪಡಿಸಲಾದ 2 ಕೋವಿಡ್ ಲಸಿಕೆ ಬಸ್‍ಗಳಿಗೆ ಬುಧವಾರ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್ ಚಾಲನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಲಸಿಕೆ ಬಸ್‍ಗಳಿಗೆ ಚಾಲನೆ ನೀಡಿ, ಬಸ್ ವೀಕ್ಷಿಸಿದ ಬಳಿಕ ಮಾತನಾಡಿದ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಕೋರಿಕೆ ಮೇರೆಗೆ ಈ ವಿಶೇಷ ವಿನ್ಯಾಸದ ಬಸ್‍ಗಳನ್ನು ಸಿದ್ಧಪಡಿಸಿದ್ದು, ಇದು ರಾಜ್ಯದಲ್ಲಿಯೇ ಪ್ರಥಮವಾಗಿದೆ ಎಂದರು.

    ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡ ಪರಿಣಾಮ ಹಳ್ಳಿ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಇಂತಹವರಿಗೆ ಈ ಕೋವಿಡ್ ಲಸಿಕೆ ಸಂಚಾರಿ ಬಸ್ ತುಂಬಾ ಉಪಯೋಗವಾಗಲಿದೆ. ಸಾರ್ವಜನಿಕರ ಮನೆಯ ಬಾಗಿಲಿಗೆ ಲಸಿಕೆ ಕೊಂಡೊಯ್ಯಲಾಗುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

    ಕೋವಿಡ್ ಸಂಚಾರಿ ವಾಹನ ಒಟ್ಟು ಮೂರು ವಿಭಾಗಗಳನ್ನು ಒಳಗೊಂಡಿದೆ. ಮೊದಲನೇ ವಿಭಾಗ ನೋಂದಣಿ ಪ್ರಕ್ರಿಯೆ, ಎರಡನೇ ವಿಭಾಗ ಲಸಿಕಾ ವಿಭಾಗ ಮತ್ತು ಮೂರನೇ ವಿಭಾಗ ಲಸಿಕೆ ಪಡೆದ ನಂತರ ವಿಶ್ರಾಂತಿ ಮತ್ತು ನಿಗಾ ಘಟಕ ಇರಲಿದೆ ಎಂದರು.

    ಕೋವಿಡ್ ಲಸಿಕೆ ಸಂಚಾರಿ ವಾಹನ ಒಂದು ತಾಲೂಕಿನಲ್ಲಿ ಮೂರು ದಿನಗಳ ಕಾಲ ಸಂಚರಿಸಿಲಿದೆ. ಲಸಿಕೆ ಬಸ್ ಸಂಚರಿಸುವ ಕುರಿತು ಆಯಾ ತಾಲೂಕಿನ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಸ್ಥಳೀಯ ಆಶಾ ಕಾರ್ಯಕರ್ತೆಯರು ಜನಸಾಮಾನ್ಯರಲ್ಲಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಪ್ರಸ್ತುತ 2 ಬಸ್‍ಗಳನ್ನು ಸಿದ್ಧಪಡಿಸಿದ್ದು, ಇದರ ಯಶ್ವಸಿ ಆಧಾರದ ಮೇರೆಗೆ ಜಿಲ್ಲಾಡಳಿತ ಬಯಸಿದಲ್ಲಿ ಇನ್ನೂ ಹೆಚ್ಚಿನ ಬಸ್‍ಗಳನ್ನು ಇದೇ ರೀತಿ ಮಾರ್ಪಡಿಸಲಾಗುವುದು ಎಂದರು.

    ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ಲಸಿಕೆಯ ಭಯ ಮತ್ತು ಲಸಿಕಾ ಕೇಂದ್ರಗಳು ಗ್ರಾಮದಿಂದ ದೂರವಿರುವ ಕಾರಣ ಅನೇಕ ಗ್ರಾಮೀಣ ಭಾಗಗಳಲ್ಲಿ ಹಾಗೂ ತಾಂಡಾಗಳಲ್ಲಿ ಜನರು ಲಸಿಕೆ ಪಡೆದಿರುವುದಿಲ್ಲ. ಇದೀಗ ಬಿತ್ತನೆ ಕಾರ್ಯಗಳು ಭರದಿಂದ ನಡೆಯುತ್ತಿರುವುದು ಸಹ ಲಸಿಕೆ ಹಿಂದೇಟಿಗೆ ಕಾರಣವಾಗಿರಬಹುದು. ಗ್ರಾಮ ಮತ್ತು ತಾಂಡಾಗಳಲ್ಲಿ ಈ ಕೋವಿಡ್ ಸಂಚಾರಿ ವಾಹನ ಸಂಚರಿಸಲಿದ್ದು, ಸಾರ್ವಜನಿಕರು ಯಾವುದೇ ಭಯಕ್ಕೆ ಒಳಗಾಗದೆ ಲಸಿಕೆ ಪಡೆದುಕೊಳ್ಳಬೇಕು. ಆರಂಭದಲ್ಲಿ ಸೇಡಂ ಹಾಗೂ ಚಿಂಚೋಳಿ ತಾಲೂಕಿನಲ್ಲಿ 3 ದಿನಗಳ ಕಾಲ ಈ ಲಸಿಕೆ ಬಸ್ ಸಂಚರಿಸಲಿದೆ ಎಂದರು.

    ಈ ಸಂದರ್ಭದಲ್ಲಿ ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್, ಮುಖ್ಯ ಸಂಚಾರಿ ವ್ಯವಸ್ಥಾಪಕ ಡಿ.ಕೊಟ್ರಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ್ ಕುಮಾರ್, ವಿಭಾಗೀಯ ತಾಂತ್ರಿಕ ಶಿಲ್ಪಿ ನಾಗರಾಜ್ ವಾರದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.