Tag: ವ್ಯಾಕ್ಸಿನ್ ಟೂರಿಸಂ

  • ರಷ್ಯಾ ಪ್ರವಾಸದೊಂದಿಗೆ ಲಸಿಕೆ – ಏನಿದು ವ್ಯಾಕ್ಸಿನ್ ಟೂರಿಸಂ? ಬೆಲೆ ಎಷ್ಟು?

    ರಷ್ಯಾ ಪ್ರವಾಸದೊಂದಿಗೆ ಲಸಿಕೆ – ಏನಿದು ವ್ಯಾಕ್ಸಿನ್ ಟೂರಿಸಂ? ಬೆಲೆ ಎಷ್ಟು?

    ನವದೆಹಲಿ: ಭಾರತದಲ್ಲಿ ಲಸಿಕೆ ಕೊರತೆ ಕಾಡುತ್ತಿರುವ ಬೆನ್ನಲ್ಲೇ ಹಲವು ಭಾರತೀಯರು ವಿದೇಶದಲ್ಲಿ ಲಸಿಕೆ ಹಾಕಿಸಿಕೊಂಡು ಬರಲು ಯೋಜನೆ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಭರ್ಜರಿ ಆಫರ್ ನೀಡಿದ್ದು, ಲಸಿಕೆ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.

    ದೆಹಲಿಯ ಟ್ರಾವೆಲ್ ಏಜೆನ್ಸಿಯೊಂದು ವ್ಯಾಕ್ಸಿನ್ ಟೂರಿಸಂ ಪ್ಯಾಕೇಜ್ ಘೊಷಿಸಿದೆ. ಇದರಲ್ಲಿ 24 ದಿನಗಳ ರಷ್ಯಾ ಪ್ರವಾಸ ಸೇರಿದಂತೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬಹುದಾಗಿದೆ. ಎರಡೂ ಡೋಸ್ ವ್ಯಾಕ್ಸಿನ್ ಪಡೆಯಲು 21 ದಿನಗಳ ಅಂತರವಿದ್ದು, ಈ ಸಮಯದಲ್ಲಿ ಪ್ರಯಾಣಿಕರು ರಷ್ಯಾ ಪ್ರವಾಸ ಮಾಡಬಹುದಾಗಿದೆ. 24 ದಿನಗಳ ಈ ಪ್ರವಾಸಕ್ಕೆ 1.29 ಲಕ್ಷ ರೂ. ದರವನ್ನು ನಿಗದಿ ಮಾಡಲಾಗಿದೆ.

    ಟ್ರಾವೆಲ್ ಏಜೆನ್ಸಿ ಅಧಿಕಾರಿಯ ಹೇಳಿಕೆಯನ್ನಾಧರಿಸಿ ಈ ಕುರಿತು ವರದಿ ಮಾಡಲಾಗಿದ್ದು, ಮಾಸ್ಕೋದಲ್ಲಿ ಲ್ಯಾಂಡ್ ಆದ ಮರುದಿನವೇ ಪ್ರಯಾಣಿಕರಿಗೆ ಸ್ಪುಟ್ನಿಕ್-ವಿ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತದೆ. ಬಳಿಕ 2ನೇ ಡೋಸ್ ಲಸಿಕೆ ಪಡೆಯಲು 21 ದಿನಗಳ ಅಂತರವಿದ್ದು, ಈ ವೇಳೆ ರಷ್ಯಾ ಪ್ರವಾಸ ಮಾಡಬಹುದು. 2ನೇ ಡೋಸ್ ಲಸಿಕೆ ಪಡೆದು, ಭಾರತಕ್ಕೆ ಮರಳಬಹುದಾಗಿದೆ.

    ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ. ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.