Tag: ವ್ಯರ್ಥ

  • ಕೆಸಿ ವ್ಯಾಲಿ ಪೈಪ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮುತ್ತಿರೋ ನೀರು

    ಕೆಸಿ ವ್ಯಾಲಿ ಪೈಪ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮುತ್ತಿರೋ ನೀರು

    – ಕಳೆದ ರಾತ್ರಿಯಿಂದ ನೀರು ಪೋಲು

    ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಲ್ಲಿ ನೀರು ಪೋಲಾಗುತ್ತಿದರೂ ಅಧಿಕಾರಿಗಳು ಗಮನಹರಿಸದೆ ಬೇಜವಾಬ್ದಾರಿತನ ತೋರಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಕೆ.ಸಿ.ವ್ಯಾಲಿ ನೀರು ಪೂರೈಕೆ ಮಾಡುವ ಪೈಪ್ ಒಡೆದು ಹೋಗಿದ್ದು, ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವ ದೃಶ್ಯಗಳು ಕೋಲಾರದಲ್ಲಿ ಕಂಡು ಬಂದಿದೆ. ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಬಳಿ ಕೆ.ಸಿ.ವ್ಯಾಲಿ ನೀರು ಪೂರೈಕೆಯ ಗೇಟ್ ಪೈಪ್ ಒಡೆದು ಹೋಗಿದ್ದು, ನೀರು ಪೋಲಾಗುತ್ತಿದೆ.

    ಕಳೆದ ರಾತ್ರಿ ಪೈಪ್ ಒಡೆದು ಹೋಗಿದ್ದು, ಆಕಾಶದೆತ್ತರಕ್ಕೆ ಸುಮಾರು 60 ಅಡಿ ಎತ್ತರಕ್ಕೆ ನೀರು ಚಿಮ್ಮುತ್ತಿದೆ. ಅಲ್ಲದೆ ಕಳೆದ ರಾತ್ರಿಯಿಂದಲೂ ನೀರು ಪೋಲಾಗುತ್ತಿದ್ದರೂ ಸಹ ದುರಸ್ಥಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

    ಕೋಲಾರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ಸಲುವಾಗಿ ಅನೇಕ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಈ ನೀರನ್ನ ರೈತರು ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಳೆದ ರಾತ್ರಿಯಿಂದ ನೀರು ಪೋಲಾಗುತ್ತಿದ್ದರೂ ದುರಸ್ಥಿ ಮಾಡದೆ ಬೇಜವಾಬ್ದಾರಿತನ ತೋರುತ್ತಿದ್ದಾರೆಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಜನರಿಗೆ ಕೊಡ್ತೀವಿ ಅಂತ ಹೇಳಿ ಚರಂಡಿಗೆ ಇಂದಿರಾ ಕ್ಯಾಂಟೀನ್ ಊಟ

    ಜನರಿಗೆ ಕೊಡ್ತೀವಿ ಅಂತ ಹೇಳಿ ಚರಂಡಿಗೆ ಇಂದಿರಾ ಕ್ಯಾಂಟೀನ್ ಊಟ

    – ಸರ್ಕಾರದಿಂದ ತೆರಿಗೆ ಹಣ ಪೀಕಲು ತಪ್ಪು ಲೆಕ್ಕ

    ಬೆಂಗಳೂರು: ಮೈತ್ರಿ ಸರ್ಕಾರದ ಮಹತ್ವಾಂಕಾಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಕೋಟಿ ಕೋಟಿ ರೂ. ಲೂಟಿಯಾಗುತ್ತಿದ್ದು, ಬಡವರ ಹೊಟ್ಟೆ ತುಂಬಿಸಬೇಕಾದ ಕೆಜಿ ಗಟ್ಟಲೆ ಆಹಾರ ವ್ಯರ್ಥವಾಗುತ್ತಿದೆ. ಆದರೆ ಇಂದಿರಾ ಕ್ಯಾಂಟೀನ್ ಉಳ್ಳವರ ಜೇಬು ತುಂಬಿಸುತ್ತಿದೆ.

    ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಮುಂದುವರಿಯುವ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ಟೆಂಡರ್ ಅವಧಿ ಮುಗಿದಿದ್ದರೂ ಗುತ್ತಿಗೆದಾರರು ಮಾತ್ರ ಆಹಾರ ಪೂರೈಕೆ ಮುಂದುವರಿಸಿದ್ದಾರೆ. ನಿತ್ಯ ಲಕ್ಷಾಂತರ ಜನ ಇಂದಿರಾ ಕ್ಯಾಂಟೀನ್ ನಂಬಿದ್ದಾರೆ ಎಂದು ಲೆಕ್ಕ ಹೇಳಲಾಗುತ್ತಿದ್ದು, ಈ ಮಾಹಿತಿ ಎಷ್ಟು ಸತ್ಯ ಎಂಬ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕೆಲ ಸತ್ಯಾಂಶಗಳು ಬೆಳಕಿಗೆ ಬಂದಿದೆ.

    ಇಂದಿರಾ ಕ್ಯಾಂಟೀನ್ ನಂಬಿ ಲಕ್ಷಾಂತರ ಜನ ಊಟ ಮಾಡುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಬಡವರಿಗೆ ಊಟ ಸಿಗುತ್ತಿದೆ. ಹಾಗೆಯೇ ಕ್ಯಾಂಟೀನ್ ಹೆಸರು ಕೋಟಿ ಕೋಟಿ ಲೂಟಿ ಮಾಡುವವರೂ ಇದ್ದಾರೆ. ಬಡವರ ಅನ್ನ ಇಂದಿರಾ ಕ್ಯಾಂಟೀನ್ ಎಷ್ಟು ಸತ್ಯವೋ, ಇಂದಿರಾ ಕ್ಯಾಂಟೀನ್ ಉಳ್ಳವರ ಜೇಬು ತುಂಬಿಸುತ್ತಿದೆ ಎಂಬುವುದು ಅಷ್ಟೇ ಸತ್ಯ.

    ನಗರದ ಮೆಜೆಸ್ಟಿಕ್, ಮಾರುಕಟ್ಟೆ, ಚಿಕ್ಕಪೇಟೆ, ಶ್ರೀರಾಮಪುರ ಹೀಗೆ ಜನನಿಬಿಡ ಪ್ರದೇಶಗಳಲ್ಲಿರುವ ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುತ್ತಿದೆ. ಮತ್ತೊಂದೆಡೆ ಸದಾಶಿವನಗರ, ವಿಜಯನಗರ, ಮಲ್ಲೇಶ್ವರಂ, ಜಯನಗರ, ಜೆಪಿನಗರ ಹೀಗೆ ಮನೆಗಳೇ ಹೆಚ್ಚಿರುವ ಜಾಗದಲ್ಲಿ ಗುತ್ತಿಗೆದಾರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

    ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಹೀಗೆ ಮೂರು ಹೊತ್ತು ಕೆಜಿ ಗಟ್ಟಲೆ ಆಹಾರ ಇಂದಿರಾ ಕ್ಯಾಂಟೀನ್‍ನಲ್ಲಿ ಉಳಿಯುತ್ತಿದೆ. ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕನಿಷ್ಟವೆಂದರೆ 100 ಜನ ಫಲಾನುಭವಿಗಳು ನಿತ್ಯ ಇರುತ್ತಾರೆ, ಹೀಗೆ ಸರ್ಕಾರಕ್ಕೆ ಕ್ಯಾಂಟೀನ್ ಗುತ್ತಿಗೆ ಪಡೆದಿರುವ ಶೆಫ್‍ಟಾಕ್, ರಿವಾರ್ಡ್ ಲೆಕ್ಕ ನೀಡುತ್ತಿದೆ. ಆದರೆ ತಿನ್ನುವವರು ಒಬ್ಬರಾದರೆ ಡಸ್ಟ್ ಬಿನ್‍ಗೆ ಚೆಲ್ಲುವ ಊಟದ ಲೆಕ್ಕ ಹತ್ತರಂತಿದೆ.

    ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನೋಡಿ ಜನ ಒಬ್ಬರ ಮೇಲೆ ಒಬ್ಬರು ಪೈಪೋಟಿಯಲ್ಲಿ ಊಟ ತೆಗೆದುಕೊಳ್ಳುತ್ತಾರೆ. ಇಲ್ಲಿ ಊಟ ಉಳಿಯುವ ಪ್ರಮಾಣ ಕಡಿಮೆ. ಆದರೆ ಸದಾಶಿವನಗರ ಇಂದಿರಾ ಕ್ಯಾಂಟೀನ್ ನಲ್ಲಿ ಜನರ ಸಂಖ್ಯೆ ಕಡಿಮೆ. ಇಲ್ಲಿ ಕೆಜಿಗಟ್ಟಲೆ ಊಟ ಉಳಿಯುತ್ತೆ. ಅದನ್ನು ಮತ್ತೆ ತಮ್ಮ ಅಡುಗೆ ಮನೆಗಳಿಗೆ ವಾಪಸ್ ಕಳುಹಿಸುತ್ತಾರೆ. ಆದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರದೇಶಗಳ ಕ್ಯಾಂಟೀನ್ ಬಳಿ ಊಟ ಸಿಗುವುದೇ ಕಷ್ಟಸಾಧ್ಯವಾಗಿದೆ.

    ನಗರದ ಎಸ್.ಬಿ.ರೋಡ್‍ನಲ್ಲಿರುವ ಅಡುಗೆ ಮನೆಯಲ್ಲಿರುವ ನೀಲಿ ಬಣ್ಣದ ಡ್ರಮ್‍ನಲ್ಲಿ ರಾಶಿ ರಾಶಿ ಅನ್ನ ಚರಂಡಿ ಸೇರುತ್ತಿದೆ. ಈ ದೃಶ್ಯಗಳು ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಿಬ್ಬಂದಿಗೆ ಸುಳಿವು ಸಿಕ್ಕೊಡನೆ ಅಡುಗೆ ಮನೆ ಬಾಗಿಲನ್ನು ಸಿಬ್ಬಂದಿ ಹಾಕಿಕೊಂಡರು. ಅಲ್ಲದೇ ತಮ್ಮ ಕಂಪನಿ ವಾಹನ ಬಿಟ್ಟು ಬೇರೆ ಖಾಸಗಿ ವಾಹನದಲ್ಲಿ ಊಟವನ್ನು ಸಾಗಿಸುತ್ತಿದ್ದು, ಮತ್ತಷ್ಟು ಅನುಮಾನಗಳಿಗೆ ಕಾರಣವಾಯಿತು.

    ಇಂದಿರಾ ಕ್ಯಾಂಟೀನ್ ಊಟದ ಲೆಕ್ಕ: ವರ್ಷಕ್ಕೆ ಇಂದಿರಾ ಕ್ಯಾಂಟೀನ್‍ಗಾಗಿ 135 ಕೋಟಿ ರೂ ವೆಚ್ಚ ಮಾಡಲಾಗುತ್ತಿದ್ದು, ಪ್ರತಿ ದಿನ ಒಬ್ಬ ಮನುಷ್ಯನ ಊಟಕ್ಕೆ 58 ರೂ. ವೆಚ್ಚವಾಗುತ್ತಿದೆ. ಗ್ರಾಹಕರಿಂದ 25 ರೂ. ಪಡೆದರೆ ಉಳಿ 33 ರೂ.ಗಳನ್ನು ಸರ್ಕಾರ ನೀಡುತ್ತಿದೆ. ಒಂದು ಕ್ಯಾಂಟೀನ್‍ನಲ್ಲಿ ಕನಿಷ್ಠ 1 ಸಾವಿರ ಊಟ ಮಾಡುತ್ತರಂತೆ. ಇದರ ಅನ್ವಯ ನಿತ್ಯ 191 ಕ್ಯಾಂಟೀನ್ ಗಳಲ್ಲಿ 1.91 ಲಕ್ಷ ಜನ ಊಟ ಮಾಡ್ತಾರಂತೆ.

    ನಂಬರ್ ಲೆಕ್ಕ ಇಲ್ಲದೇ ಗುಣಮಟ್ಟ ಹೆಚ್ಚಿಸಿದರೆ ಜನರಿಗೆ ರಿಯಾಯಿತಿ ದರದಲ್ಲಿ ಉತ್ತಮ ಊಟ ಲಭಿಸಲಿದೆ. ಅಷ್ಟೇ ಅಲ್ಲದೇ ಪ್ಲೇಟ್ ಲೆಕ್ಕ ಹೇಳಿ ಅನ್ನವನ್ನು ಮೋರಿ ಪಾಲು ಮಾಡುತ್ತಿದ್ದಾರೆ. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈಗಲಾದರೂ ಬಡಜನರ ಹೆಸರಿನಲ್ಲಿ ನಡೆಯುತ್ತಿರುವ ವೆಚ್ಚದ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ನಿಗಾ ವಹಿಸಿ ಸೋರಿಕೆ ತಡೆಯಬೇಕಿದೆ.

  • ವಾರಣಾಸಿಯಲ್ಲಿ ಮೋದಿ ರೋಡ್ ಶೋ – 1.5 ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್

    ವಾರಣಾಸಿಯಲ್ಲಿ ಮೋದಿ ರೋಡ್ ಶೋ – 1.5 ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್

    ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆದಿದ್ದ ಕಾಶಿ ರಸ್ತೆಯನ್ನು ಬರೋಬ್ಬರಿ ಒಂದೂವರೆ ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್ ಮಾಡಲಾಗಿದೆ.

    ದೇಗುಲ ನಗರಿಯ ಶೇ.30ರಷ್ಟು ಮಂದಿಗೆ ಕುಡಿಯಲು ನೀರಿಲ್ಲ. ಆದರೆ ಮೋದಿ ಬರುತ್ತಾರೆ ಎಂದು ಕುಡಿಯುವ ನೀರು ಬಿಟ್ಟು ಕಾಶಿ ರಸ್ತೆಯ ಸ್ವಚ್ಛತೆಯನ್ನು ಮಾಡಲಾಗಿದೆ. ವಾರಣಾಸಿ ಮುನ್ಸಿಪಲ್ ಕಾರ್ಪೋರೇಷನ್ 400 ಸಿಬ್ಬಂದಿಯಿಂದ ರೋಡ್ ಕ್ಲೀನ್ ಮಾಡಿಸಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

    ಪ್ರಧಾನಿ ಮೋದಿ ಕ್ಷೇತ್ರ ಕಾಶಿಯಲ್ಲಿ ಇದುವರೆಗೆ ಶೇ.70ರಷ್ಟು ಮನೆಗಳಿಗೆ ಮಾತ್ರ ಪೈಪ್‍ಲೈನ್ ಆಗಿದೆ. ಇನ್ನೂ ಶೇಕಡಾ 30ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಆದರೂ ಈ ರೀತಿ ಕುಡಿಯುವ ನೀರನ್ನು ರಸ್ತೆಯ ಸ್ವಚ್ಛತೆಗಾಗಿ ಬಳಸಿಕೊಂಡಿರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ.

    ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕುಡಿಯುವ ನೀರಿನಲ್ಲಿ ಕ್ಲೀನ್ ಮಾಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆಯ ಪಕ್ಕದಲ್ಲಿದ್ದ ಗೋಡೆಯನ್ನು ಸಹ ಕುಡಿಯುವ ನೀರಿನಿಂದ ಸ್ವಚ್ಛ ಮಾಡಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನವನ್ನು ವಾರಣಾಸಿಯಿಂದ ಪ್ರಾರಂಭಿಸಿದ್ದರು. ಹೀಗಾಗಿ ಪ್ರಧಾನಿ ಮೋದಿ ಬರುವ ದಾರಿ ಕಸದಿಂದ ಕೊಳಕಾಗಿದ್ದರೆ ಅದನ್ನು ನೋಡಿ ಮೋದಿ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ರೀತಿ ಕುಡಿಯುವ ನೀರನ್ನು ರಸ್ತೆ ಸ್ವಚ್ಛತೆಗಾಗಿ ವ್ಯರ್ಥ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.